ಮೋದಿ ಸರಕಾರ ಸಾಚಾವೇ?
ಮೋದಿ ಸರಕಾರ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ತೊಲಗಿಸುವ ನಿಟ್ಟಿನಲ್ಲಿ ಹೊಸ ಮಾನದಂಡಗಳ ಸ್ಥಾಪನೆಗೆ ಮುಂದಾಗದಿರುವುದು ಅದರ ಭ್ರಷ್ಟಾಚಾರ ವಿರೋಧಿ ಹೋರಾಟದ ಪೊಳ್ಳುತನವನ್ನು ಬಟಾಬಯಲಾಗಿಸಿದೆ. ಯುಪಿಎ ಸರಕಾರದ ಭ್ರಷ್ಟಾಚಾರವನ್ನೇ ಚುನಾವಣೆಯ ಮುಖ್ಯ ವಿಷಯವನ್ನಾಗಿಸಿ, ತಾನು ಎಳ್ಳಷ್ಟೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲವೆಂದು ಹೇಳಿಕೊಂಡ ಮೋದಿಗೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶವಾಗಿತ್ತು. ಆದರೆ ಅಂತಹ ಒಂದು ಉತ್ತರದಾಯಿ ವ್ಯವಸ್ಥೆಯನ್ನು ರೂಪಿಸುವಲ್ಲಿ ಪೂರ್ತಿ ವಿಫಲವಾಗಿರುವುದು ಏನನ್ನು ಸೂಚಿಸುತ್ತದೆ?
ಕಳೆದ ಸುಮಾರು ಮೂರೂವರೆ ವರ್ಷಗಳಿಂದ ಮೋದಿ ಸರಕಾರದ ಆಡಳಿತ ವೈಖರಿಯನ್ನು ಕಂಡಿರುವ ದೇಶದ ಜನ ಇಂದು ಅದರ ಭ್ರಷ್ಟಾಚಾರ ವಿರೋಧಿ ಹೋರಾಟವೆಲ್ಲ ಬರೀ ಬುರುಡೆ, ಕೇವಲ ಘೋಷಣೆಗಳಿಗೆ ಸೀಮಿತ ಎನ್ನುವ ಕಹಿ ಸತ್ಯವನ್ನು ಅರಿತಿದ್ದಾರೆ. ಹಲ್ಲುಗಿಂಜುವ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿಯೂ ಭಕ್ತವರ್ಗದ ಸಾಮಾಜಿಕ ಮಾಧ್ಯಮಗಳಲ್ಲಿಯೂ ನಡೆಯುವ ಎಣೆಯಿಲ್ಲದ ಅಪಪ್ರಚಾರಗಳ ಹೊರತಾಗಿಯೂ ಜನರಿಗೆ ಚಕ್ರವರ್ತಿಯ ನಗ್ನತೆಯ ದರ್ಶನ ಆಗಿದೆ. ಬರೀ ಭಾಷಣ, ಘೋಷಣೆಗಳಿಗಷ್ಟೇ ಸೀಮಿತವಾದ ಮೋದಿ ಸರಕಾರದ ಬೂಟಾಟಿಕೆಗೆ ಮತ್ತೊಂದು ಒಳ್ಳೆಯ ಉದಾಹರಣೆ ಈಗ ನಮ್ಮ ಮುಂದಿದೆ. ಅದು ಭಾರತದ ಮುಂದಿನ ಪ್ರಧಾನ ಲೆಕ್ಕಪರಿಶೋಧಕರ (ಸಿಎಜಿ) ನೇಮಕಕ್ಕೆ ಸಂಬಂಧಿಸಿದೆ. ಇತ್ತೀಚೆಗೆ ಗೃಹ ಕಾರ್ಯದರ್ಶಿ ಹುದ್ದೆಯಲ್ಲಿದ್ದು ನಿವೃತ್ತರಾ ಗಲಿರುವ ರಾಜೀವ್ ಮೆಹ್ರಿಶಿ ಎಂಬವರನ್ನು ಮುಂದಿನ ಸಿಎಜಿ ಆಗಿ ನೇಮಿಸಲಾಗಿದೆ. ಹಿಂದೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ರಾಜೀವ್ ಸದ್ಯದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ನಾವು ಜ್ಞಾಪಿಸಿಕೊಳ್ಳಬೇಕಾಗಿ ರುವುದು ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್‌ರ ಮಾತು ಗಳನ್ನು. ಅಂಬೇಡ್ಕರ್ ಪ್ರಕಾರ ಸಂವಿಧಾನದ ಅಡಿಯಲ್ಲಿ ಅತ್ಯಧಿಕ ಪ್ರಾಮುಖ್ಯತೆ ಇರುವ ಅಧಿಕಾರಿ ಎಂದರೆ ಸಿಎಜಿ. ಸಿಎಜಿ ಪ್ರಾಮುಖ್ಯತೆ ನ್ಯಾಯಾಧೀಶರಿಗಿಂತಲೂ ಹೆಚ್ಚು. ಹಾಗಾದರೆ ಸಿಎಜಿಯ ಕಾರ್ಯ ವ್ಯಾಪ್ತಿಗಳೇನು? ಕಾರ್ಯಾಂಗದ ವೆಚ್ಚಗಳು ಸಂಸತ್ತಿನಿಂದ ಅಂಗೀಕರಿಸಲ್ಪಟ್ಟ ಬಜೆಟ್ ಅನುದಾನಗಳಿಗೆ ಅನುಗುಣವಾಗಿ ಇವೆಯೇ, ತೆರಿಗೆ ಮತ್ತಿತರ ಮಾರ್ಗಗಳ ಮೂಲಕ ಆದಾಯ ಹೆಚ್ಚಳಕ್ಕೆ ಸಂಸತ್ತು ನೀಡಿರುವ ಮಂಜೂರಾತಿಯ ನಿಯಮಗಳನ್ನು ಪರಿಪಾಲಿಸಲಾಗಿದೆಯೇ, ವಿಧಿತ ಆರ್ಥಿಕ ನಿಬಂಧನೆಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೇ ಎಂಬ ವಿಷಯಗಳು ಸಿಎಜಿ ಪರಿಶೀಲನೆಯ ವ್ಯಾಪ್ತಿಗೆ ಬರುತ್ತವೆ. ಸಂವಿಧಾನದ ವಿಧಿ 148ರಡಿ ರಾಷ್ಟ್ರಪತಿ ಗಳಿಂದ ನೇಮಕವಾಗುವ ಸಿಎಜಿಯ ಸೇವಾ ನಿಯಮಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಸಮಾನವಾಗಿವೆ.
ಸ್ವಾತಂತ್ರ್ಯಾನಂತರದ ಮೊದಲ ಕೆಲವು ವರ್ಷಗಳ ಕಾಲ ವೃತ್ತಿಪರ ಆಡಿಟರ್‌ಗಳನ್ನೇ ಪ್ರಧಾನ ಲೆಕ್ಕಪರಿಶೋಧಕ ರಾಗಿ ನೇಮಿಸಲಾಗುತ್ತಿತ್ತು. ಆದರೆ 1978ರ ನಂತರ ಆ ಪದ್ಧತಿಗೆ ವಿದಾಯ ಹೇಳಲಾಗಿದೆ. ಕೇವಲ ಐಎಎಸ್ ಅಧಿಕಾರಿಗಳನ್ನೇ ಸಿಎಜಿ ಆಗಿ ನೇಮಿಸುವ ಪದ್ಧತಿ ಯೊಂದನ್ನು ಪ್ರಾರಂಭಿಸಲಾಗಿದೆ. ಆದರೆ ತಮ್ಮದು ವಿಭಿನ್ನ ಪಕ್ಷ ಎಂದು ಟಾಂಟಾಂ ಮಾಡುವ ಬಿಜೆಪಿಯ ಎನ್‌ಡಿಎ ಸರಕಾರವೂ ಇಂದು ಯುಪಿಎ ಸರಕಾರ ಅನುಸರಿಸುತ್ತಿದ್ದ ಅದೇ ಹಳೆ ವಿಧಿವಿಧಾನಗಳನ್ನೇ ಮುಂದುವರಿಸಿರುವುದೊಂದು ದೊಡ್ಡ ವಿಪರ್ಯಾಸ! ಮೋದಿ ಸರಕಾರ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ತೊಲಗಿಸುವ ನಿಟ್ಟಿನಲ್ಲಿ ಹೊಸ ಮಾನದಂಡ ಗಳ ಸ್ಥಾಪನೆಗೆ ಮುಂದಾಗದಿರುವುದು ಅದರ ಭ್ರಷ್ಟಾಚಾರ ವಿರೋಧಿ ಹೋರಾಟದ ಪೊಳ್ಳುತನವನ್ನು ಬಟಾಬಯಲಾ ಗಿಸಿದೆ. ಯುಪಿಎ ಸರಕಾರದ ಭ್ರಷ್ಟಾಚಾರವನ್ನೇ ಚುನಾವ ಣೆಯ ಮುಖ್ಯ ವಿಷಯವನ್ನಾಗಿಸಿ ತಾನು ಎಳ್ಳಷ್ಟೂ ಭ್ರಷ್ಟಾಚಾರವನ್ನು ಸಹಿಸುವುದಿ ಲ್ಲವೆಂದು ಹೇಳಿಕೊಂಡ ಮೋದಿಗೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶವಾಗಿತ್ತು. ಆದರೆ ಅಂತಹ ಒಂದು ಉತ್ತರದಾಯಿ ವ್ಯವಸ್ಥೆಯನ್ನು ರೂಪಿಸುವಲ್ಲಿ ಪೂರ್ತಿ ವಿಫಲವಾಗಿರುವುದು ಏನನ್ನು ಸೂಚಿಸುತ್ತದೆ?
ಹೀಗೆ ಮಾಜಿ ಕಾರ್ಯದರ್ಶಿ ಓರ್ವರನ್ನು ನೂತನ ಪ್ರಧಾನ ಲೆಕ್ಕಪರಿಶೋಧಕರಾಗಿ ನೇಮಿಸಿರುವುದನ್ನು ಸರಕಾರೇತರ ಸಂಸ್ಥೆ ಕಾಮನ್ ಕಾಸ್ ಕಟುವಾಗಿ ಟೀಕಿಸಿದೆ. ಸಾರ್ವಜನಿಕ ಒಳಿತಿಗೆ ಸಂಬಂಧಪಟ್ಟ ವಿಷಯಗಳನ್ನೆತ್ತಿ ಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಕಾಮನ್ ಕಾಸ್, ಕಲ್ಲಿದ್ದಲು ಗಣಿಗಳು ಮತ್ತು 2 ಜಿ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ನೈಸರ್ಗಿಕ ಸಂಪನ್ಮೂಲ ಹಂಚಿಕೆಯ ವಿಧಾನವನ್ನು ಬದಲಾಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಅದರ ಪ್ರಕಾರ ನಮ್ಮ ಉದ್ದೇಶ ಅತ್ಯಂತ ಸೂಕ್ತ ವ್ಯಕ್ತಿಯನ್ನು ಆರಿಸುವುದೆಂದಿದ್ದರೆ ಅಭ್ಯರ್ಥಿಗಳ ಆಯ್ಕೆಗೆ ಇನ್ನಷ್ಟು ವಿಶಾಲವಾದ ಕ್ಷೇತ್ರವನ್ನು ಹೊಂದಿರುವುದು ಅವಶ್ಯವಾಗುತ್ತದೆ. ಬೇರೊಂದು ವಿಧದಲ್ಲಿ ಹೇಳುವುದಾದರೆ ಬಲೆಯನ್ನು ಇನ್ನಷ್ಟು ವಿಸ್ತಾರವಾಗಿ ಹರಡಬೇಕಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಸಿಎಜಿ ನೇಮಕಾತಿಯನ್ನು ಅಪಾರದರ್ಶಕವಾಗಿ, ಇಚ್ಛಾನುಸಾರಿಯಾಗಿ ಮಾಡುತ್ತಾ ಬರಲಾಗಿದೆ. ಆಯ್ಕೆಯ ಮಾನದಂಡಗಳನ್ನು ಗುಟ್ಟಾಗಿ ಇರಿಸಲಾಗಿದೆ. ಕೇವಲ ಕೇಂದ್ರ ಸರಕಾರದ ಕಾರ್ಯದರ್ಶಿಗಳಷ್ಟೇ ಹುದ್ದೆಗೆ ಅರ್ಹರೆಂಬ ಅಲಿಖಿತ ನಿಯಮವೊಂದನ್ನು ಪಾಲಿಸಲಾ ಗುತ್ತಿದೆ. ಹೀಗೆ ನೇಮಕವಾದವರಲ್ಲಿ ಕೆಲವರು ನಿಜಕ್ಕೂ ಉತ್ತಮ ವಾಗಿ ಕಾರ್ಯನಿರ್ವಹಿಸಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾರ ದರ್ಶಕತೆ ಇರಲಿಲ್ಲವಷ್ಟೇ ಅಲ್ಲ ಅದು ನಿಷ್ಪಕ್ಷಪಾತೀಯವೂ ಆಗಿರಲಿಲ್ಲ. ಮೂಲತಃ ಮಾಜಿ ಬ್ಯೂರೋಕ್ರಾಟ್‌ಗಳನ್ನು ನೇಮಿಸುವ ಈ ನೀತಿಯೇ ಸರಿಯಲ್ಲ; ಏಕೆಂದರೆ ಅದರಿಂದ ಸಮಸ್ಯೆಗಳು ಉದ್ಭವಿಸಬಹುದು. ಭವಿಷ್ಯದಲ್ಲಿ ಅದು ಹಿತಾಸಕ್ತಿಗಳ ಸಂಘರ್ಷಕ್ಕೆ ಎಡೆಮಾಡುವ ಸಾಧ್ಯತೆಗಳೂ ಇವೆ. ಉದಾಹರಣೆಗೆ ಮುಂದೊಂದು ದಿನ ಆತ ತನ್ನ ಹಳೇ ನಿರ್ಧಾರಗಳನ್ನೇ ಆಡಿಟ್ ಮಾಡಬೇಕಾದ ಪ್ರಸಂಗ ಬರಬಹುದು. ಆಗ ಅದು ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗಬಹುದು.
ಸಿಎಜಿ ನಿರ್ಭೀತವಾಗಿ ಅಥವಾ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಬೇಕೆಂದಾದರೆ ಅವರು ಸಂಶಯಾತೀತ ರಾಗಿರುವುದರೊಂದಿಗೆ ಸಾರ್ವಜನಿಕರ ವಿಶ್ವಾಸವನ್ನೂ ಹೊಂದಿರಬೇಕು ಎನ್ನುವುದು ಸ್ಪಷ್ಟ. 2011ರಲ್ಲಿ ಪಿ.ಜೆ. ಥಾಮಸ್‌ರನ್ನು ಕೇಂದ್ರ ವಿಚಕ್ಷಣಾ ಆಯುಕ್ತರಾಗಿ (ಸಿವಿಸಿ) ನೇಮಿಸಿದುದನ್ನು ಪ್ರಶ್ನಿಸಿ ಹೂಡಲಾದ ದಾವೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಸುಪ್ರಸಿದ್ಧವಾಗಿದೆ. ಸದರಿ ತೀರ್ಪಿನಲ್ಲಿ ಸಾಂಸ್ಥಿಕ ಋಜುತ್ವದ ಪರಿಕಲ್ಪನೆಯನ್ನು ನಿರೂಪಿಸಲಾಗಿದ್ದು ಅದು ಕೇವಲ ವಿಚಕ್ಷಣಾ ಆಯುಕ್ತರಿಗಷ್ಟೇ ಸೀಮಿತವಾಗಿರದೆ ಇತರರಿಗೂ ಅನ್ವಯವಾಗುತ್ತದೆ: • ಆಯ್ಕೆ ಪ್ರಕ್ರಿಯೆ ಮುಕ್ತ ಹಾಗೂ ಪಾರದರ್ಶಕ ಆಗಿರಬೇಕು
•ಸಂಬಂಧಪಟ್ಟ ಎಲ್ಲಾ ವಾಸ್ತವಾಂಶಗಳನ್ನು ಹಾಗೂ ಮಗ್ಗುಲುಗಳನ್ನು ಪರಿಗಣಿಸಬೇಕು
• ನೇಮಕಗೊಂಡವರು ನಿರ್ದಿಷ್ಟ ಋಜುತ್ವ ಹೊಂದಿರು ವುದು ಅತ್ಯಗತ್ಯ.
ಸಿವಿಸಿಗೆ ಅನ್ವಯವಾಗುವ ಸಾಂಸ್ಥಿಕ ಋಜುತ್ವದ ಈ ನಿಯಮಗಳನ್ನು ಸಿಎಜಿಗೂ ಅನ್ವಯಿಸಬಹುದಾಗಿದೆ. ಏಕೆಂದರೆ ಸಿಎಜಿಯ ಅಧಿಕಾರ ವ್ಯಾಪ್ತಿ ಸಿವಿಸಿಗಿಂತಲೂ ಹೆಚ್ಚಿನದು. ಇದನ್ನೆಲ್ಲ ಹಿಂದೆ ಪ್ರಧಾನಿ, ವಿತ್ತಮಂತ್ರಿ ಲೋಕಸಭಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ಗಮನಕ್ಕೂ ತರಲಾಗಿತ್ತು. ಈ ಬಾರಿ ನಿವೃತ್ತ ಲೆಕ್ಕಾಧಿಕಾರಿಗಳ ವೇದಿಕೆಯ ಪದಾಧಿಕಾರಿಗಳು ಹೊಸ ಸಿಎಜಿ ನೇಮಕಾತಿಗೆ ಮೊದಲೇ ವಿತ್ತಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ವಸ್ತುನಿಷ್ಠತೆಗೆ ಒತ್ತು ನೀಡುವಂತೆ ತಿಳಿಸಿದ್ದರು. ಇವರ ಬೇಡಿಕೆಗಳೂ ಕಾಮನ್ ಕಾಸ್ ಬೇಡಿಕೆಗಳೂ ಹೆಚ್ಚುಕಡಿಮೆ ಒಂದೇ ತೆರನಾಗಿದ್ದವು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಮೋದಿ ಸರಕಾರ ಹಿಂದಿನ ಯುಪಿಎ ಸರಕಾರದ ಹಾಗೇ ವರ್ತಿಸಿದೆ!
ಈಗ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು, ಕೇಂದ್ರ ವಿಚಕ್ಷಣಾ ಆಯುಕ್ತರು ಮತ್ತು ಕೇಂದ್ರ ಮಾಹಿತಿ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ತೆಗೆದು ಕೊಂಡರೆ ಅಲ್ಲಿ ಮಧ್ಯಂತರ ವ್ಯವಸ್ಥೆಗೆ ಅವಕಾಶ ಇರುವುದನ್ನು ಗಮನಿಸಬಹುದು. ಇಲ್ಲೂ ಹಾಗೆ ಮಾಡಿ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವೊಂದು ಸುಧಾರಣೆಗಳನ್ನು ಮಾಡಬಹು ದಿತ್ತು. ಹೀಗೆ ಅದರಲ್ಲಿ ವಸ್ತುನಿಷ್ಠತೆ, ವಿಶಾಲ ನೆಲೆ ಮತ್ತು ಪಾರದರ್ಶಕತೆಗಳನ್ನು ಅಳವಡಿಸಿಕೊಂಡ ಬಳಿಕವೇ ಶಾಶ್ವತ ನೇಮಕಾತಿಯನ್ನು ಮಾಡಬಹುದಿತ್ತು. ಆದರೆ ಮೋದಿ ಸರಕಾರಕ್ಕೆ ಆ ಇಚ್ಛಾಶಕ್ತಿ ಇಲ್ಲದಿರುವುದು ಸ್ಪಷ್ಟವಿದೆ.
ಲೆಕ್ಕ ಪರಿಶೋಧನೆಯನ್ನು ಸಂಸತ್ತಿನ ಪರವಾಗಿ ಮಾಡಲಾಗು ವುದರಿಂದ ಅದು ಕಾರ್ಯಾಂಗದಿಂದ ಸ್ವತಂತ್ರವಾಗಿರಬೇಕಾಗುತ್ತದೆ. ಹೆಚ್ಚಿನ ಪ್ರಜಾತಾಂತ್ರಿಕ ರಾಷ್ಟ್ರಗಳಲ್ಲಿ ಸಿಎಜಿಯಂಥವರ ನೇಮಕಾತಿಗೆ ಮುನ್ನ ಸಂಸತ್ತು/ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಲಹೆ ಪಡೆಯುವ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಸಿಎಜಿ ನೇಮಕಾತಿಯಲ್ಲಿ ಕಾರ್ಯಾಂಗಕ್ಕೆ ಸಂಪೂರ್ಣ ಅಧಿಕಾರ ಎನ್ನುವುದು ಜಗತ್ತಿನಲ್ಲೆಲ್ಲೂ ಇಲ್ಲ. ಆದುದರಿಂದ ಭಾರತದಲ್ಲೂ ಸಿಎಜಿ ಆಯ್ಕೆಯಲ್ಲಿ ಸಂಸತ್ತೇ ಪ್ರಧಾನ ಪಾತ್ರ ವಹಿಸುವುದು ಅವಶ್ಯವಾಗಿದೆ. ಅದಕ್ಕೋಸ್ಕರ ಪ್ರಧಾನಿ, ಲೋಕಸಭಾಧ್ಯಕ್ಷರು, ವಿತ್ತಸಚಿವ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರನ್ನೊ ಳಗೊಂಡ ಸಂಸತ್ತಿನ ಸಮಿತಿಯೊಂದನ್ನು ರಚಿಸಬೇಕೆಂದು ಕಾಮನ್ ಕಾಸ್ ಒತ್ತಾಯಿಸಿದೆ.
ಅವರು 70 ವರ್ಷಗಳ ಕಾಲ ಭ್ರಷ್ಟಾಚಾರ ಮಾಡಿ ದೇಶ ವನ್ನು ಕೊಳ್ಳೆಹೊಡೆದರು; ತಮ್ಮದು ವಿಭಿನ್ನ ಪಕ್ಷ, ತಮ್ಮದು ಭ್ರಷ್ಟಾಚಾರ ಸಹಿಸದ ಸ್ವಚ್ಛ ಸರಕಾರ ಎಂದು ಗಂಟಲ ಪಸೆ ಆರುವ ತನಕ ಬೊಬ್ಬಿರಿದವರು ಈಗ ಮಾಡುತ್ತಿರುವು ದೇನು? ಈ ಹಿಂದೆ ರಾಮ್ ನಾಯಕ್, ಮುರಳಿ ಮನೋಹರ್ ಜೋಶಿಯಂಥ ತಮ್ಮದೇ ನಾಯಕರು ಸಿಎಜಿ ನೇಮಕಾತಿ ಪಾರದರ್ಶಕವಾಗಿರಬೇಕು, ನಿಷ್ಪಕ್ಷಪಾತೀಯವಾಗಿ ರಬೇಕೆಂದು ಹೇಳಿರುವುದನ್ನು ಇಷ್ಟು ಬೇಗ ಮರೆತುಬಿಟ್ಟರೇ?
ರಾಜೀವ್ ಮೆಹ್ರಿಶಿ
**********
(ಆಧಾರ: 13.9.2017ರ ವಯರ್.ಕಾಮ್‌ನಲ್ಲಿ ಗೌರವ್ ವಿವೇಕ್ ಭಟ್ನಾಗರ್ ಲೇಖನ)