ಶಿಸ್ತಿನ ಸುಖ: ಹಂಗನ್ನು ತೊರೆದರೆ ಹೊಣೆಗಾರಿಕೆ ಹೆಚ್ಚುತ್ತದೆ
ಮನೆ ಎಂಬ ನಿತ್ಯ ಶಾಲೆ
ಎನ್‌ಐಒಎಸ್‌ಗೆ ಸೇರುವುದು ಆನ್‌ಲೈನ್ ಮೂಲಕ. ತಮಗೆ ಬೇಕಾದ ವಿಷಯಗಳನ್ನು ಆಯ್ದುಕೊಂಡು ಅದಕ್ಕೆ ಬೇಕಾದ ಪಠ್ಯಗಳನ್ನು ಆನ್‌ಲೈನ್ ಮೂಲಕವೇ ಪಡೆಯಬಹುದಾಗಿದೆ. ಕೆಲವು ಶಿಕ್ಷಣ ಕೇಂದ್ರಗಳಲ್ಲಿ ವಿದ್ಯಾರ್ಥಿಯು ಬಯಸಿದ್ದಲ್ಲಿ ಪರೀಕ್ಷೆಯನ್ನೂ ಕೂಡ ಪಡೆಯಬಹು ದಾಗಿರುತ್ತದೆ. ಇದು ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು, ತಾನು ಓದಿದ ವಿಷಯಗಳನ್ನು ತಾನೇ ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದೇನೆ ಎಂದು ಪರೀಕ್ಷಿಸಿಕೊಳ್ಳಲು ಈ ಪರೀಕ್ಷೆ. ಇದಕ್ಕೆಲ್ಲದ್ದ್ದಕ್ಕಿಂತ ಮುಖ್ಯವಾಗಿ ಸಾಮಾನ್ಯ ಮಕ್ಕಳು ಎನ್‌ಐಒಎಸ್‌ಗೆ ಸೇರಬೇಕೆಂದರೆ ಕೆಲವು ವಿಷಯಗಳನ್ನು ಗಮನಿಸಲೇ ಬೇಕು. ಮುಖ್ಯವಾಗಿ ಸ್ವಯಂಶಿಸ್ತು ಅಳವಡಿಸಿಕೊಂಡರೆ ಈ ಶಿಕ್ಷಣ ಪದ್ಧತಿ ಯಶಸ್ವಿಯಾಗುತ್ತದೆ. ಕಲಿಕೆಯ ವಿಷಯದಲ್ಲಿ ಶಿಕ್ಷಣ ಸಂಸ್ಥೆಯಮತ್ತು ಶಿಕ್ಷಕರ ಹಂಗನ್ನು ತೊರೆದರೆ ತಮ್ಮ ವೈಫಲ್ಯಕ್ಕೆ ಯಾರನ್ನೂ ದೂರುವಂತಿರುವುದಿಲ್ಲ. ಜೊತೆಗೆ ತಮ್ಮ ಸಾಫಲ್ಯದ ಸಂಪೂರ್ಣ ಹೊಣೆಗಾ ರಿಕೆಯನ್ನು ತಾವೇ ಹೊರಬೇಕಾಗುತ್ತದೆ. ಇಲ್ಲಿ ಈ ಹೊಣೆಗಾರಿಕೆಯನ್ನು ಮಕ್ಕಳು ಮತ್ತು ಪೋಷಕರು ಇಬ್ಬರೂ ಹೊರಬೇಕಾಗುತ್ತದೆ. ಪೋಷಕರು ಮತ್ತು ಮಕ್ಕಳು ಇಬ್ಬರೂ ಒಂದು ಒಡಂಬಡಿಕೆಗೆ ಬರಬೇಕಾಗುತ್ತದೆ.
ಸ್ವಯಂ ಶಿಕ್ಷಣ ಪಡೆಯುವಲ್ಲಿನ ಸಾಮಾನ್ಯ ತೊಡಕುಗಳು:
1.ಕೆಲಸಗಳನ್ನು ಮುಂದೂಡುವಿಕೆಯ ಚಾಳಿ ಇರುವವರು ಕಲಿಕೆಯ ವಿಷಯದಲ್ಲಿಯೂ ಕೂಡ ಆಮೇಲೆ ಓದೋಣ, ನಾಳೆ ಓದೋಣ, ಓದಿದರೆ ಆಯಿತು ಎಂಬ ಲಘು ಧೋರಣೆಯಿಂದ ಅಧ್ಯಯನವನ್ನು ಮುಂದೂಡುವುದರಿಂದ ಕಲಿಕೆಯಿಂದ ವಂಚಿತರಾಗುವ ಸಾಧ್ಯತೆಗಳಿವೆ. ಸಮಯ ವ್ಯರ್ಥವಾಗುತ್ತದೆ.
2.ಬೆಳಗ್ಗೆ ಏಳುವಲ್ಲಿ ಮತ್ತು ಶಾಲೆಗೆ ಹೋಗುವಲ್ಲಿ ಯಾವ ಸಮಯದ ಒತ್ತಡವೂ ಇಲ್ಲದ ಕಾರಣ ನಿರ್ದಿಷ್ಟವಾಗಿ ಏಳುವ, ಕೆಲಸ ಮಾಡುವ, ಓದುವ ಅಭ್ಯಾಸಗಳಿಂದ ತಪ್ಪಿಸಿಕೊಳ್ಳುತ್ತಾರೆ.
3.ಸೋಮಾರಿತನ ಅಥವಾ ಜಡತನವು ಎಚ್ಚರಿಕೆಯಿಂದ ನಿವಾರಿಸಿಕೊಳ್ಳದಿದ್ದರೆ ಹೆಚ್ಚಾಗುತ್ತದೆ.
4.ಸೂಕ್ತವಾದ ಮಾರ್ಗದರ್ಶನವಿಲ್ಲದೇ ಹೋದ ಪಕ್ಷದಲ್ಲಿ ಭಾಷೆ ಮತ್ತು ಇತರ ವಿಷಯಗಳನ್ನು ತಪ್ಪಾಗಿ ಗ್ರಹಿಸಬಹುದು. ಕೆಲವೊಮ್ಮೆ ಸಾಂದರ್ಭಿಕ ಉದಾಹರಣೆಗಳು ಮತ್ತು ವಿವರಣೆಗಳು ಇಲ್ಲದೇ ಯಾಂತ್ರಿಕ ಕಲಿಕೆಯಷ್ಟೇ ಆಗಿಬಿಡಬಹುದು.
5.ಬರೆಯುವ ಅಭ್ಯಾಸ ಕುಂಠಿತವಾಗಬಹುದು.
6.ಮನೆಯಲ್ಲಿ ಹೆಚ್ಚು ಸಮಯವಿರುವಂತಾದರೆ ಮಕ್ಕಳು ರಜೆಯಲ್ಲಿ ದಿನಗಳನ್ನು ಕಳೆಯುವಂತೆಯೇ ಕಳೆಯುವ ಒಲವು ತೋರುತ್ತಾರೆ. ಇದರಿಂದ ಮನೆಗೆಲಸ ಮಾಡುವ ತಾಯಿಗೆ ಕಿರಿಕಿರಿಯಾಗುವುದು ಮತ್ತು ತಮ್ಮ ಕೆಲಸಗಳಲ್ಲಿ ಸಹಾಯ ಮಾಡಲು ನಿರೀಕ್ಷಿಸಬಹುದು.
7.ಶಾಲೆಗೆ ಹೋಗುವಂತಿದ್ದರೆ ಚೆನ್ನ ಎಂದು ಪೋಷಕರಿಗೆ ಅನ್ನಿಸುವ ರೀತಿಯಲ್ಲಿ ಮಕ್ಕಳು ಮುಕ್ತವಾಗಿ ವರ್ತಿಸಬಹುದು. ಆಟಗಳ ಕಡೆಗೆ ಅಥವಾ ಓದು ಬಿಟ್ಟು ಇನ್ನುಳಿದ ಚಟುವಟಿಕೆಗಳ ಕಡೆಗೆ ಹೆಚ್ಚು ಗಮನ ಕೊಡುವುದರಿಂದ ಪೋಷಕರ ಮತ್ತು ಮಕ್ಕಳ ನಡುವಿನ ಸಂಘರ್ಷಕ್ಕೆ ಕಾರಣವಾಗಬಹುದು.
8.ಮಕ್ಕಳು ಶಾಲೆಗೆ ಹೋಗುವಾಗ ಅವರ ಕೆಲಸಗಳನ್ನು ಮಾಡಿಕೊಡುವ ತಾಯಿ ಅಥವಾ ಮನೆಯ ಇತರ ಸದಸ್ಯರು ಮಗುವು ಮನೆಯಲ್ಲೇ ಉಳಿದಾಗ ಅಥವಾ ಶಾಲೆಗೆ ಹೋಗದಿರುವಾಗ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲಿ ಎಂದು ಬಯಸುವುದು ಸಹಜ. ಇದಕ್ಕೆ ಮಕ್ಕಳು ಸ್ಪಂದಿಸದಿದ್ದರೆ ಪೋಷಕರು ರೇಗುವುದೂ ಕೂಡ ಸಹಜ.
9.ಸಮಯದ ಒತ್ತಡ ಇಲ್ಲದಿರುವ ಕಾರಣ, ತಮ್ಮ ಕೆಲಸಗಳನ್ನೂ ಸಮಯದ ಪರಿಮಿತಿ, ಗಡಿಗೆ ಹೊಂದಿಸಿಕೊಳ್ಳದೇ ಸ್ವೇಚ್ಛೆಯಿಂದ ಇರುವ ಕಾರಣ ನಿರ್ದಿಷ್ಟ ಅವಧಿಗೆ ಕೆಲಸ ಮುಗಿಸುವ ಅಭ್ಯಾಸ ಇಲ್ಲದೇ ಹೋಗುವುದು. ಬೇಕಾಬಿಟ್ಟಿಯಾಗಿ ವರ್ತನೆಗಳೂ ಕೂಡ ತಲೆದೋರಬಹುದು.
10.ಟಿವಿ ನೋಡುವುದು, ವೀಡಿಯೊ ಗೇಮ್ ಆಡುವುದು ಇತ್ಯಾದಿ ಗಳು ಅತಿರೇಕದ ಅಭ್ಯಾಸವೇನಾದರೂ ಆಗಿದ್ದರೆ ಅದು ಈಗ ಮತ್ತಷ್ಟು ಉಲ್ಬಣಗೊಳ್ಳಬಹುದು.
11.ಮನೆಯಲ್ಲಿರುವ ಹಿರಿಯರು ತಮ್ಮ ಟಿವಿ ವೀಕ್ಷಣೆ ಮತ್ತು ಇತರ ಲಘು ವರ್ತನೆಗಳ ಮಾದರಿಗಳನ್ನು ಮಕ್ಕಳು ರೂಢಿಸಿಕೊಳ್ಳಬಹುದು.
ತನ್ನನ್ನು ತಾನು ಶಿಸ್ತಿಗೆ ಒಳಪಡಿಸಿಕೊಳ್ಳದಿದ್ದರೆ ಸ್ವಯಂ ಶಿಕ್ಷಣ ಹೇಗೆ ಸಾಧ್ಯ?:
ತೆರೆದ ಶಾಲೆಯಲ್ಲಿ ಕಲಿಯುವವರಿಗೆ ಬಹಳ ಮುಖ್ಯವಾಗಿರುವುದು ತಮ್ಮನ್ನು ತಾವೇ ಶಿಸ್ತಿಗೆ ಒಳಪಡಿಸಿಕೊಳ್ಳುವುದು. ಮಕ್ಕಳು ಅದನ್ನು ಶಿಸ್ತು ಎಂದರೆ ಒಪ್ಪದಿದ್ದರೂ ದಿನ ನಿತ್ಯದ ರೂಢಿ ಎಂಬಂತೆ ಮಕ್ಕಳ ಚಟುವಟಿಕೆಗಳನ್ನು ಕ್ರಮಗೊಳಿಸುವ ಜವಾಬ್ದಾರಿ ಪೋಷಕರದು. ಈ ಕ್ರಮಗೊಳಿಸಿಕೊಳ್ಳುವಿಕೆ ಅಥವಾ ರೂಢಿಸಿಕೊಳ್ಳುವುದನ್ನೇ ಶಿಸ್ತು ಎಂದು ಕರೆಯಬಹುದು. ತೆರೆದ ಶಾಲೆಗೆ ತೆರೆದುಕೊಂಡಿರುವ ಮಕ್ಕಳು ಮತ್ತು ಪೋಷಕರು ಏನು ಮಾಡಬೇಕೆಂಬುದನ್ನು ಸ್ಪಲ್ಪ ಗಮನಿಸೋಣ.
1.ಎಚ್ಚರಿಕೆಯಿಂದ ಆಯ್ದುಕೊಂಡಿರುವಂತಹ ವಿಷಯಗಳನ್ನು ಅಧ್ಯಾಯ ಗಳಿಗೆ ಅನುಸಾರವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅವು ಗಳನ್ನು ಲ್ಯಾಪ್‌ಟಾಪ್, ಕಂಪ್ಯೂಟರ್ ಅಥವಾ ಮೊಬೈಲ್‌ಗಳಲ್ಲಿ ಓದುವ ಬದಲು ಪ್ರಿಂಟ್ ಹಾಕಿಸಿಕೊಳ್ಳಬೇಕು. ಪಠ್ಯದ ವಿಷಯ ಏನಿ ರುತ್ತದೆಯೋ ಅದರಂತೆ ಅದಕ್ಕೆ ಸಂಬಂಧಪಟ್ಟಂತಹ ಅಭ್ಯಾಸದ ಚಟು ವಟಿಕೆಗಳೂ ಇರುತ್ತವೆ. ಅವುಗಳನ್ನು ಪೂರೈಸುತ್ತಾ ಹೋಗಬೇಕು.
2.ದಿನಕ್ಕೆ ಒಂದರಂತೆ ಅಥವಾ ಎರಡರಂತೆ ತಪ್ಪದೇ ವಿಷಯಗಳನ್ನು ಅಧ್ಯ ಯನ ಮಾಡುವಂತಹ ರೂಢಿಯನ್ನು ಮಾಡಿಕೊಳ್ಳಬೇಕು. ಅದು ಬೆಳಗ್ಗೆ ಯೋ, ಸಂಜೆಯೋ, ರಾತ್ರಿಯೋ; ಸಮಯ ಯಾವುದಾ ದರೂ ಒಟ್ಟಾರೆ ಅಧ್ಯಯನ ಸಣ್ಣದಾಗಿಯಾದರೂ ತಪ್ಪದಂತೆ ನೋಡಿಕೊಳ್ಳಬೇಕು.
3.ಪದಕೋಶ ಅಥವಾ ನಿಘಂಟುಗಳನ್ನು ಬಳಸುವುದನ್ನು ಮಕ್ಕಳಿಗೆ ಕಲಿಸಲೇಬೇಕು. ತಮಗೆ ಅರ್ಥವಾಗದೇ ಹೋಗುವ ಪದಗಳನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ನಿಘಂಟುವಿನ ಸಹಾಯದಿಂದ ಅಥವಾ ಆನ್‌ಲೈನ್ ವೆಬ್ ಡಿಕ್ಷನರಿಯಲ್ಲಿಯೋ ನೋಡಿ ಅರ್ಥ ತಿಳಿದು ಕೊಳ್ಳಬೇಕು. ತೀರಾ ಅಪರೂಪದ ಪದವಾದ ಪಕ್ಷದಲ್ಲಿ ಆನ್‌ಲೈನ್‌ನಲ್ಲಿ ಅವುಗಳನ್ನು ಉಚ್ಚರಿಸುವುದನ್ನೂ ಕೂಡಾ ಕಲಿತುಕೊಳ್ಳಬಹುದು.
4.ತಮ್ಮದೇ ಆದಂತಹ ಪುಟ್ಟ ಸ್ಟಡಿಬ್ಯಾಗ್‌ನಲ್ಲಿ ಮಕ್ಕಳು ಬೇಕಾದ ಕಲಿಕೆಯ ಪರಿಕರಗಳನ್ನು ಹೊಂದಿರಲಿ. ಅದು ಪ್ರಿಂಟ್ ತೆಗೆದುಕೊಂಡಿ ರುವ ಅವರ ಪಠ್ಯದ ಪ್ರತಿಯಾಗಿರಬಹುದು, ಅಥವಾ ಅದಕ್ಕೆ ಪೂರಕವಾಗಿರುವಂತಹ ಪುಸ್ತಕವಾಗಿರಬಹುದು. ಜೊತೆಗೆ ಬರೆಯುವ ಪುಸ್ತಕ ಮತ್ತು ಅದಕ್ಕೆ ಬೇಕಾದ ಪೆನ್ನು, ಪೆನ್ಸಿಲ್ ರೀತಿಯ ಸಲಕರಣೆಗಳಾಗಿರಬಹುದು.
5.ಬರೆಯುವ ಅಭ್ಯಾಸವನ್ನು ಮುಂದುವರಿಸಬೇಕು. ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಬರೆಯುವ ಪುಸ್ತಕಗಳನ್ನು ಇಟ್ಟುಕೊಂಡು ಅವರು ಕಲಿತದ್ದನ್ನು ತಮ್ಮ ಆಸಕ್ತಿಗೆ ತಕ್ಕಂತೆ ಬರೆಯುತ್ತಾ, ಬರೆಯುವ ರೂಢಿಯನ್ನು ಜೀವಂತವಾಗಿರಿಸಿರಬೇಕು.
6.ಎಂತೂ ಶಾಲೆಯ ಮುಷ್ಟಿಯಿಂದ ತಪ್ಪಿಸಿಕೊಂಡಿರುವ ಕಾರಣದಿಂದ ಓದಿನ ಜೊತೆಗೆ ಪ್ರಧಾನವಾಗಿಯೇ ಯಾವುದಾದರೆ, ಕಲೆ, ಸಾಹಿತ್ಯ, ಕ್ರೀಡೆ ಇತ್ಯಾದಿಗಳನ್ನು ಗಂಭೀರವಾಗಿ ಅಭ್ಯಾಸ ಮಾಡುವುದು ಒಳ್ಳೆಯದು.
7.ಶಾಲೆಯಲ್ಲಿ ಗೆಳೆಯರೊಂದಿಗೆ ಆಟಗಳು, ಸಾಮೂಹಿಕ ವ್ಯಾಯಾಮ ಇತ್ಯಾದಿಗಳನ್ನು ತಪ್ಪಿಸಿಕೊಳ್ಳುವ ಕಾರಣ ಬೆಳಗಿನ ಅಥವಾ ಸಂಜೆಯ ಹೊತ್ತು ವ್ಯಾಯಾಮ, ಯೋಗ, ಕ್ರೀಡೆ ಇತ್ಯಾದಿಗಳನ್ನು ರೂಢಿಸಿಕೊಳ್ಳ ಬೇಕು.
8.ಮಕ್ಕಳು ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದಕ್ಕೆ ಪ್ರೋತ್ಸಾಹಿ ಸುವುದಲ್ಲದೇ ಅವರು ಮನೆಯಲ್ಲಿ ಹಿರಿಯರೊಂದಿಗೆ ಮನೆಗೆಲಸ ಗಳಲ್ಲಿ ತಮ್ಮ ನೆರವನ್ನು ನೀಡುವವರಾಗಬೇಕು. ಒಂದು ವೇಳೆ ನೃತ್ಯ, ಅಭಿನಯ, ಕ್ರೀಡೆಯಂತಹ ನಿರತ ಅಭ್ಯಾಸಕ್ಕೆ ಹೋಗುವಂತಹ ಮಕ್ಕಳಾದರೂ ತಮ್ಮ ವಸ್ತುಗಳನ್ನು, ಮಲಗುವ, ಕೂರುವ ಮತ್ತು ಅಧ್ಯಯನ ಮಾಡುವ ಸ್ಥಳವನ್ನು ಸಮರ್ಪಕವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳುವುದನ್ನು ಅಭ್ಯಾಸ ಮಾಡಬೇಕು.
9.ಕರಕುಶಲತೆಯನ್ನು, ಚಿತ್ರಕಲೆ ಅಥವಾ ಪ್ರಕೃತಿ ವೀಕ್ಷಣೆಯಂತಹ, ಶಿಖರಾರೋಹಣ, ಗಿರಿಚಾರಣದಂತಹ ಆಸಕ್ತಿಗಳಿಗೆ ಬಹಳ ಸಮರ್ಪ ಕವಾದಂತಹ ಶಿಕ್ಷಣದ ಪದ್ಧತಿ ಇದು. ಹಾಗಾಗಿ ಅವುಗಳನ್ನು ಉಪಯೋಗಿಸಿಕೊಳ್ಳುವುದು ಮಕ್ಕಳ ಮತ್ತು ಪೋಷಕರ ಕರ್ತವ್ಯ. ಹಾಗೆಯೇ ಪ್ರಕೃತಿ ಮಾತ್ರವಲ್ಲದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಸಕ್ತಿಗಳನ್ನು ಮತ್ತು ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಕಾರ್ಯಕ್ರಮಗಳು, ಸಭೆೆಗಳು; ಇತ್ಯಾದಿಗಳಿಗೆ ಮಕ್ಕಳನ್ನು ಕರೆದು ಕೊಂಡು ಹೋಗಬೇಕು. ಬರೀ ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿಗಳಿಗೆ ಕರೆದುಕೊಂಡು ಹೋದರೂ ಅದು ಅವರ ಸಂಭ್ರಮ ಸಡಗರಗಳನ್ನು ಹೆಚ್ಚಿಸಬಹುದೇ ಹೊರತು, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಚಯಗಳೇನೂ ಪರಿಣಾಮಕಾರಿಯಾಗಿ, ವಿವಿಧ ಆಯಾಮಗಳಲ್ಲಿ ದೊರಕುವುದಿಲ್ಲ. ಆದ್ದರಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಭೆೆ ಮತ್ತು ಕಾರ್ಯಕ್ರಮಗಳಿಗೆ ಮಕ್ಕಳನ್ನುಕರೆದುಕೊಂಡು ಹೋಗಬೇಕು.
10.ಸಾಕುಪ್ರಾಣಿಗಳಿದ್ದರೆ ಅವುಗಳನ್ನು ನೋಡಿಕೊಳ್ಳುವ ಮೂಲಕ ಪೋಷಣೆ ಮಾಡುವ ಕಲೆಗಾರಿಕೆಯನ್ನು ಹೇಳಿಕೊಡಬೇಕು.
11.ಮಕ್ಕಳನ್ನು ಶಿಸ್ತುಬದ್ಧಗೊಳಿಸುವುದಕ್ಕಿಂತಲೂ ಪೋಷಕರು ತಮ್ಮ ಹಲವು ರೂಢಿಗಳನ್ನು, ವರ್ತನೆಗಳನ್ನು ಬದಲಾಯಿಸಿಕೊಳ್ಳಲು ಯತ್ನಿಸಬೇಕು. ಈಗ ಮಕ್ಕಳು ಸದಾ ನಮ್ಮನ್ನು ನೋಡುತ್ತಿರುತ್ತವೆ.
12.ಮಕ್ಕಳು ತಮ್ಮ ಓರಗೆಯವರೊಂದಿಗೆ ಒಡನಾಟ ಮತ್ತು ಆಟಪಾಟ ಗಳನ್ನು ಕಳೆದುಕೊಳ್ಳದಿರುವಂತೆ ಕ್ರೀಡಾ ಸಂಘವನ್ನೋ, ನೃತ್ಯಶಾಲೆಯ ನ್ನೋ, ಕಲಾತರಗತಿಗಳನ್ನೋ, ಸಂಗೀತ ಪಾಠಕ್ಕೋ ಸೇರುವಂತೆ ಪ್ರೋತ್ಸಾ ಹಿಸಬೇಕು. ಅಲ್ಲಿ ದೊರಕುವ ತಮ್ಮ ವಯಸ್ಸಿನ ಮಕ್ಕಳೊಂದಿಗೆ ಬೆರೆಯುವ ಅವಕಾಶ ಅವರಿಗೆ ಸಿಗುವುದು.
13.ಮಕ್ಕಳು ಈಗ ತಾವೇ ಕಲಿಕೆಯ ಹೊಣೆಯನ್ನು ಹೊತ್ತ್ತುಕೊಂಡಿರುವು ದರಿಂದ ಅದನ್ನು ಸರಳವಾಗಿ ನಿಭಾಯಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಸೃಷ್ಟಿಸಬೇಕು. ಉದಾಹರಣೆಗೆ ಮನೆಯಲ್ಲಿ ಅವರದ್ದೇ ಆದಂತಹ ಓದಿನ ಜಾಗ. ಅವರ ಪಠ್ಯದ ಪ್ರತಿಗಳನ್ನು ಇಟ್ಟು ಕೊಳ್ಳಲು ಒಂದು ಜಾಗ. ಎಲ್ಲೇ ಓದಿದ ಮೇಲೆ ಆ ಪಠ್ಯದ ಪ್ರತಿಯನ್ನು ಅಲ್ಲಿಯೇ ತಂದಿಡುವಂತಹ ಅಭ್ಯಾಸ. ಸ್ಟೇಷನರಿ ವಸ್ತುಗಳನ್ನು ಕೂಡ ವ್ಯವಸ್ಥಿತವಾಗಿ ಅಲ್ಲಿಯೇ ಇಡುವುದು. ಅರ್ಥವಾಗದ ಅಥವಾ ವಿಶೇಷ ಎನಿಸುವಂತಹ ಪದಗಳನ್ನು ಅಥವಾ ವಿಷಯಗಳನ್ನು ನೋಟ್ ಮಾಡಿ ಅದನ್ನು ಕಾಣುವಂತೆ ಹಾಕುವುದು. ಬಂದವರು ಅಥವಾ ಇತರರು ಯಾರೇ ಅದನ್ನು ನೋಡಿದರೆ ಅದರ ಬಗ್ಗೆ ತಿಳಿಸಲುಸಾಧ್ಯವಾಗುವಂತಹ ತಂತ್ರಗಳನ್ನು ಬಳಸಿಕೊಳ್ಳುವುದು.
14.ಒಟ್ಟಾರೆ ತೆರೆದ ಶಾಲೆ ಶಿಕ್ಷಣ ಸಂಸ್ಥೆಗಳಿಂದ ಮತ್ತು ಶಿಕ್ಷಕರಿಂದ ಮುಕ್ತ ವಾದರೂ ಕೂಡ ಶಿಕ್ಷಣಕ್ಕೆ ಅಗತ್ಯವಿರುವ ಶಿಸ್ತುಗಳಿಂದ ಮುಕ್ತವಾಗಿ ಸ್ವೇಚ್ಛೆಯಾಗದಿರುವಂತೆ ನೋಡಿಕೊಳ್ಳುವುದು ಅತೀ ಮುಖ್ಯ. ತೆರೆದ ಶಾಲೆಯಲ್ಲಿ ಓದುವ ಮಕ್ಕಳು ಶಿಸ್ತಿನ ಸುಖವನ್ನು ಕಂಡುಕೊಂಡಿದ್ದೇ ಆದರೆ ನಿಜಕ್ಕೂ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಯಲ್ಲಿ ಕಲಿ ಯುವ ವಿದ್ಯಾರ್ಥಿಗಳಿಗಿಂತ ಪ್ರಭಾವಶಾಲಿಗಳಾಗಿರುವಂತ ಸ್ವಾವಲಂಬಿ ಗಳೂ, ಸ್ವತಂತ್ರ ಚಿಂತಕರೂ ಹಾಗೂ ಹೊಣೆಯರಿತ ಶ್ರಮಜೀವಿಗಳೂ ಆಗುತ್ತಾರೆ. ತಮ್ಮ ಶ್ರಮ ಮತ್ತು ಸಮಯವನ್ನು ತಮ್ಮ ಗುರಿಯಲ್ಲಿ ಸಂಪೂರ್ಣವಾಗಿ ಕೇಂದ್ರೀಕರಿಸಬಹುದು. ಆದರೆ ಅವರಿಗೆ ಸ್ವಯಂ ಶಿಸ್ತಿನ ಸುಖ ಮಾತ್ರ ರೂಢಿಯಾಗಲೇಬೇಕು. ಸ್ವಯಂಶಿಸ್ತಿಗೆ ಇನ್ನೊಂದು ಹೆಸರೇ ಬದ್ಧತೆ.
15.ಮಕ್ಕಳು ಏನನ್ನು ಓದುತ್ತಿದ್ದಾರೆ? ಓದುತ್ತಿರುವುದು ಅವರಿಗೆ ಅರ್ಥವಾ ಗುತ್ತಿದೆಯೇ? ಕಲಿಕೆಯಲ್ಲಿ ಏನಾದರೂ ಸಮಸ್ಯೆಯನ್ನು ಎದುರಿಸುತ್ತಿ ದ್ದಾರೆಯೇ? ಅವರಿಗೆ ವಿಶೇಷ ಮಾರ್ಗದರ್ಶನ ಅಥವಾ ತರಬೇತಿಯ ಅಗತ್ಯವಿದೆಯೇ ಎಂಬುದನ್ನು ಪೋಷಕರು ಗಮನಿಸಿಕೊಳ್ಳಬೇಕು. ಒಂದು ವೇಳೆ ತಾವೇ ನೆರವಾಗುವುದಿದ್ದರೆ ಸರಿ, ಇಲ್ಲವಾದರೆ ಇತರರ ನೆರವನ್ನು ತೆಗೆದುಕೊಳ್ಳಲು ಹಿಂಜರಿಯಬಾರದು. ಅಂತಿಮವಾಗಿ ಶಾಲೆಯನ್ನು ತೊರೆದರೂ ಶಿಕ್ಷಣವನ್ನು ಮಕ್ಕಳಿಗೆ ದೊರಕಿಸಿಕೊಡುವ ಯತ್ನ ವಿಫಲವಾಗದಿರುವಂತೆ ನೋಡಿಕೊಳ್ಳಬೇಕು.