ನೂರು ದಿಕ್ಕುಗಳಿಂದ ಸುಳಿದು ಬಂದ 'ಗಾಳಿ ಹರಕೆಯ ಹಾಡು'

Update: 2017-10-04 18:42 GMT

‘ಗಾಳಿ ಹರಕೆಯ ಹಾಡು’ ಕುವೆಂಪು ಭಾಷಾ ಪ್ರಾಧಿಕಾರ ಪ್ರಕಟಿಸಿರುವ 2015 ಸಂದರ್ಭದ ಅನುವಾದಿತ ಕವಿತೆಗಳು. ಅಬ್ಬಾಸ್ ಮೇಲಿನಮನಿ ಅವರ ಸಂಪಾದಕತ್ವದಲ್ಲಿ ಈ ಕೃತಿ ಹೊರ ಬಂದಿದೆ. ಅನುವಾದವೆಂದರೆ ಶಬ್ದದಿಂದ ಶಬ್ದಕ್ಕೆ ದಾಟಿಸುವ ಒಂದು ಶುಷ್ಕ ಕೆಲಸವಲ್ಲ. ಮೂಲದ ಲಯ ಮತ್ತು ಅರ್ಥಗಳ ಸಮರ್ಥ ಅಭಿವ್ಯಕ್ತಿಯ ವಿಧಾನವಾಗಿದೆ ಎಂಬ ಎಚ್ಚರಿಕೆಯಲ್ಲಿ ಇಲ್ಲಿರುವ ಎಲ್ಲ ಕವಿತೆಗಳು ಅನುವಾದಗೊಂಡಿವೆ. ವಿವಿಧ ಭಾಷೆಗಳಿಂದ ಕನ್ನಡಕ್ಕಿಳಿದಿರುವ ಸುಮಾರು 86 ಕವಿತೆಗಳು ಇಲ್ಲಿವೆ. ನಿದಾ ಫಾಜಲಿ, ಪ್ರದೀಪ, ಸಾಹಿರ್ ಲುಧಿಯಾನ್ವಿ, ಮುತಾ ಬರೂಕಾ, ಪಾಲ್ ಕ್ಯಾವನಾ, ಪೀಟರ್ ಪೋರ್ಟರ್, ವಿಲ್ಫ್ರೆಡ್ ಓವನ್, ನೀಲೇಶ್ ರಘುವಂಶಿ, ಸುಧಾ ಆರೋಡಾ, ಕುಂವರ್ ನಾರಾಯಣ್, ಸುಮಿತ್ರ ನಂದನ ಪಂತ, ತಸ್ಲೀಮಾ ನಸ್ರೀನ್, ಕೆ. ಶಿವಾರೆಡ್ಡಿ.....ಬೇರೆ ಬೇರೆ ನೆಲೆಗಳಲ್ಲಿ ನಿಂತು ಬರೆದ ಹಲವು ಕವಿಗಳು ಒಂದುಗೂಡಿದ್ದಾರೆ. ಭಾರತದ ವಿವಿಧ ಭಾಷೆಗಳಲ್ಲಿ ಬರೆದು ಹೆಸರುವಾಸಿಯಾದವರು ಮಾತ್ರವಲ್ಲ, ಭಾರತೀಯೇತರ ಕವಿಗಳೂ ಇಲ್ಲಿದ್ದಾರೆ. ಏಶ್ಯಾ, ಯುರೋಪ್‌ನ ಖ್ಯಾತ ಕವಿಗಳ ಹೆಸರುಗಳೂ ಇಲ್ಲಿವೆ. ಇಲ್ಲಿ ಅನುವಾದ ಎನ್ನುವುದು ಒಂದು ಪ್ರಯೋಗವೂ ಆಗಿರು ವುದರಿಂದ, ಎಲ್ಲವೂ ಯಶಸ್ವಿಯಾಗಿವೆ ಎನ್ನುವ ಹಾಗಿಲ್ಲ. ಆದರೆ, ಕವಿತೆಗಳ ಆತ್ಮಕ್ಕೆ ಧಕ್ಕೆ ತರದ ಹಾಗೆ ಅದನ್ನು ಕನ್ನಡಕ್ಕಿಳಿಸುವಲ್ಲಿ ಅನುವಾದಕರು ಯಶಸ್ವಿಯಾಗಿದ್ದಾರೆ.

ಹೆಚ್ಚಿನ ಕವಿತೆಗಳು ಬದುಕಿನ ವಾಸ್ತವಕ್ಕೆ ಮುಖಾಮುಖಿ ಯಾಗಿವೆ. ಪಾಲ್ ಕ್ಯಾವನಾರ ‘ನೆರೆಯವರು’, ಪೀಟರ್ ಪೋರ್ಟರ್‌ರ ‘ದಯವಿಟ್ಟು ಗಮನಿಸಿ’, ‘ವಿಲ್ಫ್ರೆಡ್ ಓವನ್‌ರ ವಿಲಕ್ಷಣ ಭೇಟಿ’ ಕವಿತೆಗಳನ್ನು ಗಮನಿಸಿದಾಗ, ನಮ್ಮ ಮುಂದಿನ ಪೀಳಿಗೆ ಈ ಭೂಮಿಯಲ್ಲಿ ಉಸಿರಾಡಲು ಸಾಧ್ಯವಾಗಬಹುದೇ ಎಂಬ ಆತಂಕ ನಮ್ಮನ್ನು ಕಾಡುತ್ತದೆ. ಮನುಷ್ಯನ ಆಳದಲ್ಲಿರುವ ಕ್ರೌರ್ಯವನ್ನು ತೆರೆದಿಡುವ ಕವಿತೆಗಳು ಇವು. ನಿದಾ ಫಾಜಲಿ ಅವರ ‘ಬಿಸಿಲಲ್ಲಿ ಹೊರಡು’, ತಿಲಕ್‌ರ ‘ಅಮೃತ ಸುರಿದ ರಾತ್ರಿ’, ಅದ್ದೇಪಲ್ಲಿಯವರ ‘ಕಾಮವನ್ನು ಮಲಗಿಸಲಾರೆ’, ತನಹಾ ತಿಮ್ಮಾಪುರಿ ಅವರ ‘ಋತುಗಳು’, ಮಹಮೂದ್ ಅಬು ಹಶ್‌ಹಶ್ ಅವರ ‘ಗಾಳಿ’, ಗೈತಿರೋಲಿನ್‌ನ ‘ಕಪ್ಪು ಹುಡುಗನ ಪ್ರಾರ್ಥನೆ’, ಇಸ್ಮಾಯೀಲ್ ಚೂನರ್ ಅವರ ‘ಅಮ್ಮನಿಗೆ ಪತ್ರ’ ಮೊದಲಾದ ಕವಿತೆಗಳು ತಳಮಳಗಳ ನಡುವೆಯೂ ಜೀವಪ್ರೀತಿಯನ್ನು ಉಕ್ಕಿಸುತ್ತವೆ. 200 ಪುಟಗಳ ಈ ಕೃತಿಯಮುಖಬೆಲೆ 100 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News