ವಿಷಯ ವೈವಿಧ್ಯಗಳ ‘ಹಿಮವರ್ಷ’
‘‘ಆಡು ಮುಟ್ಟದ ಸೊಪ್ಪಿಲ್ಲ, ಜೋಕಟ್ಟೆ ಬರೆಯದ ವಸ್ತುಗಳಿಲ್ಲ’’ ಎನ್ನುವ ಗಾದೆ ಶ್ರೀನಿವಾಸ ಜೋಕಟ್ಟೆಯವರ ಬರಹಗಳಿಗೆ ಚೆನ್ನಾಗಿ ಒಪ್ಪುತ್ತದೆ. ಜೋಕಟ್ಟೆಯೆಂದರೆ ಬರಹಗಳ ಅಣೆಕಟ್ಟೆ ಒಡೆದಂತೆ. ಇದು ಅವರ ಬರಹಗಳ ಮಿತಿಯೂ ಹೌದು. ಕಂಡದ್ದನ್ನು ತಕ್ಷಣ ಬರೆದು ಬಿಡುವ ಅವರ ಆಸಕ್ತಿ, ಕೆಲವೊಮ್ಮೆ ವಿಷಯದಾಳಕ್ಕೆ ಇಳಿಯಲು ವಿಫಲವಾಗುತ್ತದೆ. ಅಂದರೆ ವಿಷಯದ ಮೇಲ್ಮೈಯಿಂದ ಸರಾಗವಾಗಿ ಅವರು ಮುಂದು ಹೋಗುತ್ತಾರೆ. ಬರಹದ ಅವಸರ ಕೆಲವೊಮ್ಮೆ ಆ ವಸ್ತುಗಳನ್ನು ಪೂರ್ಣವಾಗಿ ಕಟ್ಟಿಕೊಡಲು ವಿಫಲವಾಗಬಹುದು. ಪತ್ರಕರ್ತರು ಸದಾ ಅವಸರದ ಕುದುರೆಯೇರಿ ಕುಳಿತಿರುವುದರಿಂದ ಅವರ ಹೆಚ್ಚಿನ ಲೇಖನಗಳು ತಕ್ಷಣದ ಅಗತ್ಯವಾಗಿರುತ್ತವೆ. ಜೋಕಟ್ಟೆಯವರ ಹಿಮವರ್ಷದಲ್ಲಿರುವ 34 ಲೇಖನಗಳು ವೈವಿಧ್ಯ ವಿಷಯಗಳನ್ನು ಒಳಗೊಂಡಿವೆ. ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತವೆ. ಜನಪ್ರಿಯ ಮಾದರಿಯ ಬರಹಗಳು ಇದಾಗಿರುವುದರಿಂದ, ಸಂಕೀರ್ಣತೆಯಿಲ್ಲ. ಸರಳತೆ ಅವರ ನಿರೂಪಣೆಯ ಹೆಗ್ಗಳಿಕೆ. ಈ ಕೃತಿಯಲ್ಲಿ ಬೇರೆ ಬೇರೆ ಕ್ಷೇತ್ರಗಳನ್ನು ಜೋಕಟ್ಟೆ ಮುಟ್ಟಿ ನೋಡಿದ್ದಾರೆ. ಪ್ರವಾಸ ಕಥನವಿದೆ. ಡ್ಯಾನ್ಸ್ ಬಾರ್‌ನ ಪಿಂಕಿ, ಬಬ್ಲಿಯರ ಅಂತರಂಗವಿದೆ. ಮುಂಬಯಿಯಲ್ಲಿ ಕನ್ನಡ ಅಕ್ಷರ ಸೇವೆ ಮಾಡುವ ನವೀನ್ ಪ್ರಿಂಟರ್ಸ್ ಕುರಿತ ವಿವರಗಳಿವೆ. ಕನ್ನಡ-ಮರಾಠಿ ಸಂಬಂಧಗಳ ಚರ್ಚೆಯಿದೆ. ಮುಂಬೈ ಕನ್ನಡದ ಹಿರಿಮೆಯ ಬಗ್ಗೆ ಬರೆಯುತ್ತಾರೆ. ಬಾಲಿವುಡ್, ಬ್ಲೂಫಿಲಂ, ಬಗ್ಗೆಯೂ ಬರೆಯುವ ಇವರು ಮಗದೊಂದೆಡೆ ನೇಪಾಳ-ಕರ್ನಾಟಕದ ನಡುವಿನ ಸಂಬಂಧಗಳನ್ನೂ ಕಟ್ಟಿಕೊಡುತ್ತಾರೆ. ಹಾಗೆಯೇ ಕೆಲವು ವೈಚಾರಿಕ ಬರಹಗಳೂ ಇಲ್ಲಿವೆ. ಸಾಂಸ್ಕೃತಿಕ ವಿಷಯಗಳನ್ನೂ ಅವರು ಆರಿಸಿಕೊಂಡಿದ್ದಾರೆ. ಇಲ್ಲಿರುವ ಎಲ್ಲ ಬರಹಗಳು ಬೇರೆ ಬೇರೆ ಕಾರಣಗಳಿಗಾಗಿ ನಮ್ಮಲ್ಲಿ ಓದುವ ಉತ್ಸಾಹವನ್ನು ಮೂಡಿಸುತ್ತವೆೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದಿತ್ಯ ಪಬ್ಲಿಕೇಶನ್ಸ್ ಬೆಳಗಾವಿ ಇವರು ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 145 ರೂಪಾಯಿ. ಪುಟಗಳು 144. ಆಸಕ್ತರು 098693 94694 ದೂರವಾಣಿಯನ್ನು ಸಂಪರ್ಕಿಸಬಹುದು.