ಬುದ್ಧನ ಕುರಿತು ಇನ್ನಷ್ಟು...
ಇತ್ತೀಚಿನ ದಿನಗಳಲ್ಲಿ ಬರಹಗಾರರಿಗೆ ಬುದ್ಧ ಪದೇ ಪದೇ ವಸ್ತುವಾಗುತ್ತಾನೆ. ವರ್ತಮಾನದ ದುರಂತಗಳನ್ನು ಬಿಡಿಸಿಡುವ ಸಂದರ್ಭದಲ್ಲಿ ಬುದ್ಧ ನಮಗೆ ಕೈಮರವಾಗುತ್ತಾನೆ. ಇದೇ ಸಂದರ್ಭದಲ್ಲಿ ಜಾಗೃತ ದಲಿತ ಸಮುದಾಯವಂತೂ ಬುದ್ಧನಲ್ಲೇ ನಮ್ಮ ಬಿಡುಗಡೆ ಇದೆ ಎಂದು ನಂಬಿದೆ. ಈ ಹಿನ್ನೆಲೆಯಲ್ಲಿ ಬುದ್ಧ ಚಿಂತನೆ ಬೇರೆ ಬೇರೆ ರೂಪಗಳಲ್ಲಿ ಜನರ ನಡುವೆ ಸಂವಾದಿಸುತ್ತಿದೆ. ಇದೇ ಹೊತ್ತಿನಲ್ಲಿ ಬುದ್ಧನನ್ನು ಅವನ ತತ್ವವನ್ನು ಸರಳವಾಗಿ ಶ್ರೀಸಾಮಾನ್ಯನಿಗೆ ಹೇಗೆ ತಲುಪಿಸಬಹುದು ಎನ್ನುವುದು ಕೂಡ ಲೇಖಕರ ಪಾಲಿನ ಒಂದು ಸವಾಲೇ ಆಗಿದೆ. ಅಕ್ಷರದಿಂದ ತುಂಬಾ ದೂರದಲ್ಲಿರುವ, ಶೋಷಿತ ಜನಸಮುದಾಯಕ್ಕೆ ಬುದ್ಧನ ಜಟಿಲ ಚಿಂತನೆಯನ್ನು ಸರಳ ರೂಪಕ್ಕಿಳಿಸುವುದು ಇಂದಿನ ಅಗತ್ಯ. ಆದುದರಿಂದ ಲೇಖಕರು ಸರಳ ಬುದ್ಧನನ್ನು ಜನ ಸಾಮಾನ್ಯರ ನಡುವೆ ಕಟ್ಟಿಕೊಡುವುದಕ್ಕೆ ಪ್ರಯತ್ನಿಸುತ್ತಲೇ ಇದ್ದಾರೆ.
ಪ್ರೊ. ಎಚ್. ಲಿಂಗಪ್ಪನವರು ಬುದ್ಧನನ್ನು, ಅವನು ಬೋಧಿಸಿದ ಧಮ್ಮ ಮಾರ್ಗವನ್ನು ಅಂತರಂಗದಿಂದ ಧ್ಯಾನಿಸಿದವರು. ‘ಓಘ ತರುಣ ಬುದ್ಧ’ ಈ ಕಾರಣದಿಂದ ಕುತೂಹಲಕರವಾಗಿದೆ. ಬುದ್ಧನ ಬಾಲ್ಯದ ವಿವರಗಳಲ್ಲಿ ನಮ್ಮ ಅರಿವಿಗೆ ಬಾರದ ಅನೇಕ ಗಹನ ಸಂಗತಿಗಳನ್ನೂ ಇಲ್ಲಿ ಮಂಡಿಸಿದ್ದಾರೆ. ಗೌತಮನ ಸಾಧನೆಯ ಹಾದಿ, ತಿಳಿವಿನ ಮಾರ್ಗದಲ್ಲಿ ಅವನಿಗಾದ ಅನುಭವ ಸಾಮಾನ್ಯನಂತೆಯೇ ಇದ್ದ ಸಿದ್ಧಾರ್ಥ ಹೊಸ ಆಲೋಚನೆಗಳನ್ನು ರೂಢಿಸಿಕೊಳ್ಳುತ್ತಾ ಎಡವುತ್ತಾ, ಬೀಳುತ್ತಾ, ಏಳುತ್ತಾ ನಡೆದು ಕಂಡುಕೊಂಡ ಧ್ಯಾನ, ವಿಪಸ್ಯನ, ಆ ಮೂಲಕ ಪಡೆದ ಜ್ಞಾನೋದಯದ ವಿನ್ಯಾಸವನ್ನು, ಅವನ ತರ್ಕವಿಧಾನ, ಸಂಸ್ಕಾರ ಕ್ರಮ, ಆರ್ಯಸತ್ಯ, ಶೀಲ ಮುಂತಾದವುಗಳ ತಾಂತ್ರಿಕ ವಿವರಗಳನ್ನು ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಇಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಆರಂಭದ ಅಧ್ಯಾಯಗಳಲ್ಲಿ ಗೌತಮನ ಬದುಕಿನ ಓಘ, ಅವನ ಅಲೆದಾಟಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಬುದ್ಧ ಜ್ಞಾನೋದಯದೆಡೆಗೆ ಸಾಗಿದ ಹಾದಿಯನ್ನು ಅರಿಯಲು ಇದು ಬಹಳ ಅಗತ್ಯವಾಗಿದೆ. ಬುದ್ಧ ತನ್ನ ಅರಿವಿಗೆ ತಂದುಕೊಂಡ ವಿವಿಧ ಸತ್ಯಗಳು, ಮಾರ್ಗಗಳ ಪರಿಚಯವನ್ನು ವಿವರವಾಗಿ ನಾಲ್ಕನೆಯ ಅಧ್ಯಾಯದಲ್ಲಿ ಮಾಡಲಾಗಿದೆ. ಬುದ್ಧನ ಕಾಲದ ಸ್ತ್ರೀ ಮತ್ತು ದಲಿತ ಭಿಕ್ಕುಗಳ ಕುರಿತ ಕುತೂಹಲಕಾರಿ ಮಾಹಿತಿ ಆರನೆ ಅಧ್ಯಾಯದಲ್ಲಿದೆ. ಆತನ ಅನುಯಾಯಿಗಳ ಜೊತೆಗಿರುವ ಸಂಬಂಧದ ಜೊತೆ ಜೊತೆಗೇ ಬುದ್ಧ ಚಿಂತನೆಯನ್ನು ಏಳನೆ ಅಧ್ಯಾಯದಲ್ಲಿ ಮಾಡುತ್ತಾರೆ. ಕೊನೆಯ ಅಧ್ಯಾಯದಲ್ಲಿ ಆತನ ಮಹಾಪರಿನಿಬ್ಬಾಣದ ಕುರಿತ ವಿವರಗಳಿವೆ. ರಶ್ಮಿ ಪ್ರಕಾಶನ ಚಿತ್ರದುರ್ಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 136. ಮುಖಬೆಲೆ 100 ರೂಪಾಯಿ. ಆಸಕ್ತರು99459 98099 ದೂರವಾಣಿಯನ್ನು ಸಂಪರ್ಕಿಸಬಹುದು..