ಸಂಗವೇ ಏಕಾತ್ಮ

Update: 2017-10-16 18:44 GMT

ಒಂದೇ ವಸ್ತು ತನ್ನ ಲೀಲೆಯಿಂದ

ಪರಮಾತ್ಮ ಜೀವಾತ್ಮನಾಯಿತ್ತು.
ಆ ಪರಮಾತ್ಮನೆ ಲಿಂಗ, ಜೀವಾತ್ಮನೇ ಅಂಗ, ಸಂಗವೇ ಏಕಾತ್ಮ.
ತತ್ ಪದವೆ ಪರಮಾತ್ಮ, ತ್ವಂ ಪದವೇ ಜೀವಾತ್ಮ

ಅಸಿ ಪದವೇ ತಾದಾತ್ಮ್ಯವಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

- ಉರಿಲಿಂಗಪೆದ್ದಿ

 
ಉರಿಲಿಂಗಪೆದ್ದಿಗಳ ಈ ವಚನ ಶರಣರ ತತ್ತ್ವಜ್ಞಾನದ ಪ್ರತೀಕವಾಗಿದೆ. ಅದ್ವೈತವನ್ನು ಲೋಕಮುಖಿಯಾಗಿ ನೋಡುವ ಈ ವಚನ ಬಸವಾದ್ವೈತವನ್ನು ಪ್ರತಿಪಾದಿಸುತ್ತದೆ. ಉರಿಲಿಂಗಪೆದ್ದಿಗಳು ಪರಮಾತ್ಮ ಮತ್ತು ಜೀವಾತ್ಮರ ಸಂಗಮದಿಂದ ಏಕಾತ್ಮ ಸೃಷ್ಟಿಯಾಗುವುದನ್ನು ಅನುಭಾವಿಸಿದ್ದಾರೆ. ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಮತ್ತು ಜೀವಾತ್ಮವಾಯಿತು. ಇವೆರಡೂ ಮತ್ತೆ ಒಂದಾದಾಗ ಆ ವಸ್ತು ಏಕಾತ್ಮವಾಯಿತು. ಈ ಏಕಾತ್ಮದಲ್ಲಿ ಪರಮಾತ್ಮ ಮತ್ತು ಲೋಕದ ಜೀವಾತ್ಮರೆಲ್ಲ ಸೇರಿದ್ದಾರೆ. ಈ ತತ್ತ್ವವನ್ನು ಅರಿತವರು ಲೋಕವೇ ತಾವಾಗುತ್ತಾರೆ. ಈ ಬ್ರಹ್ಮಾಂಡ ಹೇಗೆ ಹುಟ್ಟಿತು ಎಂದರೆ ಶೂನ್ಯ ದಿಂದ ಹುಟ್ಟಿತು ಎಂದೇ ವಿಜ್ಞಾನಿಗಳು ಹೇಳುತ್ತಾರೆ. ಶರಣರ ತತ್ತ್ವ ಕೂಡ ಶೂನ್ಯತತ್ತ್ವವೇ ಆಗಿದೆ. ಆ ಶೂನ್ಯ ಎಲ್ಲವನ್ನೂ ಒಳಗೊಂಡಿದೆ. ಪರಮಾತ್ಮನೇ ಶೂನ್ಯದೇವ. ಈ ಶೂನ್ಯದೇವ ತತ್ ಆಗಿ ಪರಮಾತ್ಮನಾಗಿರುತ್ತಾನೆ. ತ್ವಂ ಆದಾಗ ಆ ಪರಮಾತ್ಮನ ಒಂದು ಅಂಶ ವ್ಯಷ್ಟಿ ಆಗುತ್ತದೆ. ಅಂದರೆ ವ್ಯಷ್ಟಿಯಾಗಿರುವ ಜೀವಾತ್ಮವು ಪರಮಾತ್ಮನ ಭಾಗವೇ ಆಗಿರುತ್ತದೆ. ಅದೇ ಶೂನ್ಯದೇವನಾದ ಪರಮಾತ್ಮ ತನ್ನ ಅಂಶವಾದ ವ್ಯಷ್ಟಿಯ ಜೊತೆ ಸೇರಿ ಏಕಾತ್ಮವಾಗಿ ಸಮಷ್ಟಿಯಾಗುತ್ತಾನೆ. ಅಂದರೆ ಪರಮಾತ್ಮನ ಕಣ್ಣಿಗೆ ಕಾಣದ ಶೂನ್ಯರೂಪ ಮತ್ತು ಕಣ್ಣಿಗೆ ಕಾಣುವ ವಿಶ್ವರೂಪದ ಜೊತೆ ಜೀವಾತ್ಮನಾದ ವ್ಯಷ್ಟಿಯು ಸೇರಿದಾಗ ತಾದಾತ್ಮ್ಯವಾಗುತ್ತದೆ. ಆಗ ಶೂನ್ಯ, ವಿಶ್ವ ಮತ್ತು ಜೀವಗಳು ಒಂದಾಗುವುದರ ಮೂಲಕ ಸಮಷ್ಟಿಯ ಪ್ರಜ್ಞೆ ಮೂಡುತ್ತದೆ. ಸಮಷ್ಟಿಯನ್ನು ಶೂನ್ಯದೇವನೊಂದಿಗೆ ಅಂದರೆ ಜಗನ್ನಿಯಾಮಕವಾದ ಶಕ್ತಿಯೊಂದಿಗೆ ನೋಡುವುದು ಚೈತನ್ಯಾತ್ಮಕ ಭೌತಿಕವಾದವಾಗುತ್ತದೆ. ಜಗನ್ನಿಯಾಮಕ ಶಕ್ತಿಯನ್ನು ಬಿಟ್ಟು ನೋಡುವುದು ಗತಿತಾರ್ಕಿಕ ಭೌತಿಕವಾದವಾಗುತ್ತದೆ. ಈ ಜಗನ್ನಿಯಾಮಕ ಶಕ್ತಿಗೆ ಯಾವುದೇ ರೂಪವಿಲ್ಲ. ಅದಕ್ಕೆ ಯಾವ ಹೆಸರೂ ಇಲ್ಲ. ಅದನ್ನು ತಲುಪುವಂತಿಲ್ಲ. ಅದನ್ನು ಯಾವುದರ ಜೊತೆಯೂ ಹೋಲಿಸುವಂತಿಲ್ಲ. ಅದನ್ನು ನೋಡಲಿಕ್ಕಾಗದು. ಮುಟ್ಟಲಿಕ್ಕಾಗದು. ಅದರ ಆಳ, ಎತ್ತರ ಮತ್ತು ವಿಸ್ತಾರ ಗಳನ್ನು ಕಲ್ಪಿಸಲಿಕ್ಕೂ ಆಗದು. ಈ ಶೂನ್ಯವು ಅನಂತವಾಗಿದೆ. ಆ ಅನಂತವನ್ನೂ ಕಲ್ಪಿಸಲಿಕ್ಕಾಗದು. ಇಂಥ ‘ಹೇಳಬಾರದ ಘನಕ್ಕೆ’ ದೇವರು ಎಂದು ಕರೆಯುತ್ತಾರೆ. ಆ ದೇವರಿಗೆ ವಿವಿಧ ಹೆಸರುಗಳನ್ನು ಇಡುತ್ತಾರೆ. ಅದಕ್ಕೆ ಅನೇಕ ಧರ್ಮಗಳು ವಿವಿಧ ಮೂರ್ತಸ್ವರೂಪವನ್ನು ಕೊಟ್ಟಿವೆ. ಕೆಲ ಧರ್ಮಗಳು ನಿರಾಕಾರ ಸ್ವರೂಪದಲ್ಲೇ ಹೆಸರಿಟ್ಟು ಕರೆದಿವೆ. ಆದರೆ ಉರಿಲಿಂಗ ಪೆದ್ದಿಗಳು ಆ ಹೇಳಬಾರದ ಘನಕ್ಕೆ ‘ಒಂದೇ ವಸ್ತು’ ಎಂದು ಕರೆದಿದ್ದಾರೆ. ಅದಕ್ಕೆ ವಸ್ತು ಎಂದು ಕರೆದದ್ದು ಮಹತ್ವಪೂರ್ಣವಾಗಿದೆ. ಆ ವಸ್ತು ಚಲನಶೀಲವಾಗಿದೆ. ವಸ್ತುವಿನ ಈ ಚಲನಶೀಲತೆಯನ್ನು ಅರಿತುಕೊಂಡ 19ನೆ ಶತಮಾನದ ನಿರೀಶ್ವರವಾದಿ ಮಹಾಜ್ಞಾನಿ ಕಾರ್ಲ್ ಮಾರ್ಕ್ಸ್ ‘ಮ್ಯಾಟರ್ ಇನ್ ಮೋಷನ್’ ಎಂದು ತಿಳಿಸಿದ. ಹೀಗೆ ‘ವಸ್ತು ಚಲನಶೀಲವಾಗಿದೆ’ ಎಂದು ಸಾರಿದ. ‘ಪ್ರತಿಕ್ಷಣವೂ ಈ ಜಗತ್ತು ಬದಲಾಗುವುದು’ ಎಂದು ಅಜ್ಞೇಯವಾದಿ ಭಗವಾನ ಬುದ್ಧ 2,600 ವರ್ಷಗಳ ಹಿಂದೆಯೆ ಹೇಳಿದ್ದ. ಮಾರ್ಕ್ಸ್ ಹೇಳಿದ ‘ವಸ್ತುವಿನ ಚಲನಶೀಲತೆ’ ಮತ್ತು ಬುದ್ಧ ಹೇಳಿದ ‘ವಸ್ತುವಿನ ಬದಲಾಗುವಿಕೆ’ಗೆ ಉರಿಲಿಂಗಪೆದ್ದಿ ‘ವಸ್ತುವಿನ ಲೀಲೆ’ ಎಂದು ಕರೆದಿದ್ದಾರೆ. ವಸ್ತುವಿನಲ್ಲಿ ಚೈತನ್ಯವಿರುವ ಕಾರಣ ಅದು ಚೈತನ್ಯಮಯವಾಗಿದೆ. ವಸ್ತುವಿನ ಚಲನಶೀಲತೆಯೇ ಚೈತನ್ಯ. ವಸ್ತು ಎಂಬುದು ‘ಚೈತನ್ಯಾತ್ಮಕ ಭೌತಿಕ ಸ್ಥಿತಿ’ಯನ್ನು ಹೊಂದಿದೆ. ಹೀಗೆ ಜಗತ್ತನ್ನು ಅರಿಯುವ ಕ್ರಮವೇ ಶರಣರ ‘ಚೈತನ್ಯಾತ್ಮಕ ಭೌತಿಕವಾದ’ವಾಗಿದೆ. ಇದುವೇ ಬಸವಾದ್ವೈತ. ವಸ್ತು ಮತ್ತು ಚೈತನ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸುವಂಥದ್ದು. ಆ ಮೂಲಕ ದೇವರು, ಸಕಲಜೀವಾತ್ಮರು ಮತ್ತು ವಸ್ತುಜಗತ್ತು ಅಭೇದ್ಯವಾಗಿವೆ ಎಂಬುದನ್ನು ಸಾರುವ ತತ್ತ್ವವೇ ಬಸವಾದ್ವೈತ ತತ್ತ್ವ. ಈ ತತ್ತ್ವವನ್ನೇ ಉರಿಲಿಂಗಪೆದ್ದಿಗಳು ಪ್ರತಿಪಾದಿಸಿದ್ದಾರೆ.

 ಸಮಷ್ಟಿರೂಪದ ವಿಶ್ವವು ಶೂನ್ಯದಿಂದ ಸೃಷ್ಟಿಯಾಗಿದೆ. ಹೀಗೆ ಶೂನ್ಯದಿಂದ ಸೃಷ್ಟಿಯಾದ ವಿಶ್ವದಿಂದ ಸಕಲ ಜೀವಾತ್ಮರ ಸೃಷ್ಟಿಯಾಗಿದೆ. ಆದ್ದರಿಂದ ಚರಾಚರವೆಲ್ಲ ಜೀವಜಾಲದಲ್ಲೇ ಇದೆ. ದೇವ, ವಿಶ್ವ ಮತ್ತು ಮಾನವ ಸಹಿತವಾಗಿ ಇಂಥ ಸಮಷ್ಟಿಯನ್ನು ಅರ್ಥೈಸುವ ಕ್ರಮವನ್ನು ಉರಿಲಿಂಗಪೆದ್ದಿಗಳು ಅರುಹಿದ್ದಾರೆ. ಬುದ್ಧನಿಗಿಂತಲೂ ಅರ್ಧಶತಮಾನ ಹಿರಿಯನಾದ ಮತ್ತು ಕೆಲಕಾಲ ವರ್ಧಮಾನ ಮಹಾವೀರನ ಜೊತೆಗಾರನಾಗಿದ್ದ ಮಂಕಲಿ ಗೋಶಾಲ ಎಂಬ ಹಿರಿಯ ಜ್ಞಾನಿ, ‘ಶೂನ್ಯವೇ ವಿಶ್ವದ ಮೂಲವೆಂದು ಸಾರುವ ಶೂನ್ಯಧ್ಯಾನ ಪರಂಪರೆ’ಯನ್ನು ಎತ್ತಿಹಿಡಿದ ಇತಿಹಾಸವಿದೆ.
ಉರಿಲಿಂಗಪೆದ್ದಿ ‘ವಸ್ತು’ ಎಂದು ಕರೆದ ಈ ಶೂನ್ಯವೇ ತನ್ನ ಲೀಲೆಯಿಂದ ಪರಮಾತ್ಮ ಮತ್ತು ಜೀವಾತ್ಮವಾಯಿತು. ಲಿಂಗವೇ ಪರಮಾತ್ಮ ಮತ್ತು ಅಂಗವೇ ಜೀವಾತ್ಮ. ಸಂಗವೆಂದರೆ ಲಿಂಗಾಂಗಸಾಮರಸ್ಯ. ಈ ರೀತಿಯ ಲಿಂಗಾಂಗಸಾಮರಸ್ಯದಿಂದ ಜಗತ್ತಿನ ಜನರೆಲ್ಲ ತಾದಾತ್ಮ್ಯದ ಪರಮಾನಂದವನ್ನು ಪಡೆಯುತ್ತಾರೆ. ಸಕಲ ಜೀವಾತ್ಮರು ತಮ್ಮ ಆತ್ಮದ ಭಾಗವೆಂದೇ ತಿಳಿದು ಸರ್ವರಿಗೂ ಲೇಸನ್ನೇ ಬಯಸುತ್ತಾರೆ.

ತತ್ತ್ವಮಸಿ (ತತ್ ತ್ವಂ ಅಸಿ - ಅದು ನೀನಾಗಿರುವಿ) ಎಂಬುದನ್ನು ಕೂಡ ಉರಿಲಿಂಗಪೆದ್ದಿಗಳು ಅರ್ಥೈಸಿದ ಕ್ರಮ ಅನುಪಮವಾಗಿದೆ. ‘ಅದು’ ಪರಮಾತ್ಮ, ‘ನೀನು’ ಜೀವಾತ್ಮ ಇದನ್ನು ತಿಳಿದು ಪರಮಾತ್ಮನೊಡನೆ ಒಂದಾಗಿ ಬದುಕುವುದೇ ತಾದಾತ್ಮ್ಯ. ಪರಮಾತ್ಮನೊಡನೆ ಒಂದಾಗಿ ಬದುಕುವುದೆಂದರೆ ಆತನ ಭಾಗವಾದ ಚರಾಚರದೊಂದಿಗೂ ಒಂದಾಗಿ ಬದುಕುವುದು. ಇಂಥ ತಾದಾತ್ಮ್ಯದಿಂದ ಪರವಸ್ತುವಿನ ಲೀಲೆಯ ಅರಿವಾಗುವುದು. ಆಗ ನಮ್ಮ ಕಾಯ ಪ್ರಸಾದಕಾಯವಾಗುವುದು. ಮನಸ್ಸು ಇಡೀ ವಿಶ್ವವನ್ನೇ ವ್ಯಾಪಿಸುವುದು. ಹೃದಯದಲ್ಲಿ ಆನಂದಸಾಗರದ ನಿರ್ಮಾಣವಾಗುವುದು. ಪರರ ದುಃಖ ನಮ್ಮ ದುಃಖವಾಗುವುದು. ಮಹಾರಾಷ್ಟ್ರದ ನಾಂದೇಡ-ಲಾತೂರ ಬಳಿಯ ಕಂಧಾರ ಗ್ರಾಮದಲ್ಲಿ ನೆಲೆಸಿ, ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಪೆದ್ದಯ್ಯ, ತೆಲುಗು ಮೂಲದ ದಲಿತ ಜನಾಂಗಕ್ಕೆ ಸೇರಿದವರು. ಕಂಧಾರ ಮಠಾಧೀಶ ಉರಿಲಿಂಗದೇವರ ಪ್ರಭಾವದಿಂದಾಗಿ ಕಳ್ಳತನ ಬಿಟ್ಟು ಅವರ ಪರಮಶಿಷ್ಯನಾಗಿ ಲಿಂಗದೀಕ್ಷೆ ಪಡೆದು ಉರಿಲಿಂಗಪೆದ್ದಿಯಾದರು. 12ನೆ ಶತಮಾನದ ವಚನಕಾರರಲ್ಲಿ ಒಬ್ಬರಾಗಿ ಜನಮನ ಸೂರೆಗೊಂಡರು. ಉರಿಲಿಂಗದೇವರು ಕಂಧಾರದ ಮಠಕ್ಕೆ ಉರಿಲಿಂಗಪೆದ್ದಿಯನ್ನೇ ಉತ್ತರಾಧಿಕಾರಿಯಾಗಿ ನೇಮಿಸಿದ್ದು ದೇಶದ ಇತಿಹಾಸದಲ್ಲಿ ಮಹತ್ವಪೂರ್ಣ ಘಟನೆಯಾಗಿದೆ.
***

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಪತನದ ಕಳವಳ