ವಿಷಯ ವೈವಿಧ್ಯವುಳ್ಳ ಕಥನ ರೂಪದ ಬರಹಗಳು ‘ಇವನಾರವ...’
ಯೋಗೇಶ್ ಮಾಸ್ಟರ್ ಸದ್ಯದ ದಿನಗಳಲ್ಲಿ ತಮ್ಮ ವಿಭಿನ್ನ, ವಿಶಿಷ್ಟ ಹಾಗೂ ಮಾನವೀಯ ವಿಚಾರಧಾರೆಗಳ ಬರಹಗಳ ಮೂಲಕ ಸುದ್ದಿಯಲ್ಲಿರುವ ಲೇಖಕರು. ಅವರ ಮಥಿಸಿದ ವಿಚಾರಗಳ ಕಥಿಸಿದ ಲೇಖನಗಳ ಸಂಗ್ರಹವೇ ‘ಇವನಾರವ’. ಈ ಕೃತಿಯ ತಲೆಬರಹವೇ ವಚನವೊಂದರ ಸಾಲಾಗಿದೆ. ಸದ್ಯ ಒಬ್ಬರು ಮತ್ತೊಬ್ಬರಿಗೆ ಅನ್ಯರಾಗುತ್ತಿರುವ ದಿನಗಳಲ್ಲಿ ಇವನಾರವ ಕೃತಿ, ಒಳಗೊಳ್ಳುವಿಕೆಯ, ಕೂಡಿಕೊಳ್ಳುವ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಅಂತಹದೊಂದು ಮಾನವೀಯ ತುಡಿತವೇ ಇಲ್ಲಿರುವ ಎಲ್ಲ ಬರಹಗಳನ್ನು ಬರೆಸಿದೆ. ಇಲ್ಲಿ ಬೇರೆ ಬೇರೆ ವಿಷಯ ವೈವಿಧ್ಯಗಳನ್ನೊಳಗೊಂಡ 47 ಲೇಖನಗಳಿವೆ. ಹಲವು ಲಲಿತ ಪ್ರಬಂಧಗಳನ್ನು ಹೋಲುತ್ತವೆ. ವಿವಾದದ ಸ್ಫೋಟಕಗಳನ್ನು ಎದೆಯೊಳಗೆ ಹೊತ್ತುಕೊಂಡ ಕೆಲವು ಬರಹಗಳೂ ಇವೆ.
‘‘ನೀವು ಕರೆ ಮಾಡುತ್ತಿರುವ ಚಂದಾದಾರರು...’’ ಎನ್ನುವ ಯಾಂತ್ರಿಕ ಹೇಳಿಕೆಯನ್ನು ಇಟ್ಟುಕೊಂಡು ಯೋಗೇಶ್ ಅವರು ಬದುಕಿನ ವಿವಿಧ ಮಗ್ಗುಲನ್ನು ಶೋಧಿಸುವ ಸುಂದರ ಬರಹವನ್ನು ಬರೆಯುತ್ತಾರೆ. ನಮ್ಮ ನಮ್ಮ ವ್ಯಾಪ್ತಿಯ ಗುಣಗಳನ್ನು ಕಟ್ಟಿಕೊಳ್ಳಬೇಕಾದವರು ನಾವೇ. ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇರುವವರೆಲ್ಲರೂ ನಾವು ನೋಡಿದಂತೆಯೇ ಕಾಣುತ್ತಾರೆ ಎನ್ನುವುದರೊಂದಿಗೆ ಮನುಷ್ಯನೊಂದಿಗೆ ಸಾಧ್ಯವಾಗುವ ಸಂವಹನದ ಬಗ್ಗೆ ಮಾತನಾಡುತ್ತಾರೆ. ‘ತಾಯಿ ಚಾಮುಂಡಿ...’ ಒಂದು ವ್ಯಂಗ್ಯ ಧಾಟಿಯ ಬರಹ. ಇಲ್ಲಿ ತಾಯಿ ಚಾಮುಂಡಿಯ ಜೊತೆಗೆ ಮಾತುಕತೆ ನಡೆಸುವ ನೆಪದಲ್ಲಿ ವರ್ತಮಾನವನ್ನು ಅವರು ವಿಡಂಬಿಸುತ್ತಾರೆ. ಇಂತಹ ವ್ಯಂಗ್ಯಧಾಟಿಯ ಬರಹಗಳೂ ಹಲವಿವೆ. ‘ಚಿಕ್ಕಮ್ಮನ ಮದುವೆ’ಯಂತಹ ನವೋದಯ ಶೈಲಿಯ ಬರಹಗಳೂ ಇವೆ. ವೈಚಾರಿಕತೆಯನ್ನು ಮೈಗೂಡಿಸಿಕೊಂಡ ನೇರ ಲೇಖನಗಳೂ ಇಲ್ಲಿ ನಮ್ಮನ್ನು ಸೆಳೆಯುತ್ತವೆ. ‘ಇವನಾರವ’ ಕೃತಿಗೆ ಈ ಮೂಲಕ ಬೇರೆ ಬೇರೆ ಆಯಾಮಗಳನ್ನು ನಾವು ಕೊಡಬಹುದು. ಕಥನ ಶೈಲಿಯ ಇಲ್ಲಿರುವ ಬರಹಗಳು ಆ ಕಾರಣಕ್ಕಾಗಿಯೇ ವಿಭಿನ್ನವೆನಿಸುತ್ತವೆ. ‘ಇವ ನಮ್ಮವ’ ಎಂಬ ಆತ್ಮೀಯತೆಯನ್ನು ಓದುಗನಲ್ಲಿ ಮೂಡಿಸುತ್ತವೆೆ.
328 ಪುಟಗಳ ಬೃಹತ್ ಕೃತಿ ಇದು. ಮುಖಬೆಲೆ 250 ರೂಪಾಯಿ. ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಈ ಪುಸ್ತಕವನ್ನು ಹೊರತಂದಿದೆ. ಆಸಕ್ತರು 08880660347 ದೂರವಾಣಿಯನ್ನು ಸಂಪರ್ಕಿಸಬಹುದು.