ಕನ್ನಡ ದೇಸಿ ಸಮ್ಮಿಲನದ ನುಡಿಗಳು
‘ಕನ್ನಡ ದೇಸಿ ಸಮ್ಮಿಲನದ ನುಡಿಗಳು’ ಪ್ರೊ. ಬಿ. ಎ. ವಿವೇಕ ರೈ ಅವರ ಭಾಷಣಗಳ ಬರಹದ ರೂಪ. ಸುಮಾರು ಇಪ್ಪತ್ತೈದು ವರ್ಷಗಳ ಹರಹಿನ ಅವರ ಭಾಷಣಗಳ ಸಂಗ್ರಹ ಇಲ್ಲಿವೆ. ಜಾನಪದ ಮತ್ತು ದೇಸಿ ಸಮ್ಮೇಳನಗಳ ಅಧ್ಯಕ್ಷ ಭಾಷಣಗಳಿಂದ ತೊಡಗಿ ಜಾನಪದ ಸಂಬಂಧಿಯಾದ ಇತರ ಹಲವು ಉಪನ್ಯಾಸಗಳು ಇಲ್ಲಿ ಒಟ್ಟು ಸೇರಿವೆ. ಇದರ ಜೊತೆಗೆ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯಲ್ಲಿ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ನಡೆಸಿದ ಮೂರು ನುಡಿ ಹಬ್ಬಗಳ ಸ್ವಾತ ಭಾಷಣಗಳು, ಕನ್ನಡ ವಿಶ್ವವಿದ್ಯಾನಿಲಯದೊಳಗಿನ ಅವರ ಕೆಲಸಗಳನ್ನು ಮತ್ತು ಚಿಂತೆಗಳನ್ನು ದಾಖಲು ಮಾಡುತ್ತವೆ. ಇವುಗಳ ಜೊತೆಗೆ ಕನ್ನಡ ವಿವಿಶ್ವವಿದ್ಯಾನಿಲಯದ ಹಸ್ತಪ್ರತಿ ಸಮ್ಮೇಳನ, ದೇಸೀ ಸಮ್ಮೇಳನ ಮತ್ತು ಇತರ ವಿಚಾರಸಂಕಿರಣಗಳ ಮಾತುಗಳು ಬರಹ ರೂಪ ಪಡೆದಿವೆ. ತುಂಬ ಹಳೆಯ ಆದರೆ ನೆನಪಿನ ದೃಷ್ಟಿಯಿಂದ ಬಹಳ ಮಹತ್ವದ ಮಂಗಳೂರು ವಿವಿ 1988ರ ವಿಚಾರ ಸಂಕಿರಣದ ಮಾತುಗಳನ್ನೂ ಇಲ್ಲಿ ಜೋಡಿಸಲಾಗಿದೆ.
ವಿವೇಕ ರೈ ಕನ್ನಡದ ಹಿರಿಯ ವಿದ್ವಾಂಸ. ಈ ನಾಡಿನ ಇತಿಹಾಸ ಮತ್ತು ವರ್ತಮಾನಗಳನ್ನು ವಿಮರ್ಶಾ ಕಣ್ಣುಗಳಿಂದ ನೋಡುತ್ತಾ, ಮಾತನಾಡುತ್ತಾ ಬಂದವರು. ಅಕಾಡಮಿ ಶಿಸ್ತಿನಿಂದ ಕನ್ನಡ ಚರಿತ್ರೆಯನ್ನು ಅಧ್ಯಯನ ಮಾಡಿದವರು. ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದವರು. ಕನ್ನಡ ಮತ್ತು ತುಳು ಜಾನಪದಗಳನ್ನು ವಿಶೇಷ ಆದ್ಯತೆಯಿಂದ ಬಗೆದವರು. ಮತ್ತು ಕನ್ನಡ - ತುಳು ಭಾಷೆಯ ನಡುವಿನ ಕೊಂಡಿಯಾಗಿ ಕೆಲಸ ಮಾಡಿದವರು. ಆದುದರಿಂದಲೇ, 80 ರ ದಶಕದಿಂದ ಅವರು ವಿವಿಧ ಸಮಾರಂಭಗಳಲ್ಲಿ ಆಡಿದ ಮಾತುಗಳು ದಾಖಲಾಗುವುದು ಅತ್ಯಗತ್ಯ. ಮುಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಶಿಕ್ಷಕರಿಗೆ ಈ ಪುಸ್ತಕ ಮಾರ್ಗದರ್ಶಿ. ಜಾನಪದ ಸಮ್ಮೇಳನ, ದೇಸಿ ಸಮ್ಮೇಳನ ಮತ್ತು ಕನ್ನಡ ವಿಶ್ವವಿದ್ಯಾನಿಲಯ ಸಮ್ಮೇಳನಗಳು ಒಂದುಗೂಡಿರುವುದರಿಂದ ಈ ಕೃತಿಗೆ ‘ಕನ್ನಡ-ದೇಸಿ ಸಮ್ಮಿಲನದ ನುಡಿಗಳು’ ಎಂದು ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ.
ಆಕೃತಿ ಆಶಯ ಪಬ್ಲಿಕೇಶನ್ ಮಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 175. ಮುಖಬೆಲೆ 180 ರೂ.