ದೇಹದ ಯೂರಿಕ್ ಆಮ್ಲದ ಮಟ್ಟವನ್ನು ಹೀಗೆ ತಗ್ಗಿಸಬಹುದು

Update: 2017-10-27 18:47 GMT

ಯೂರಿಕ್ ಆ್ಯಸಿಡ್ ಬಗ್ಗೆ ನಾವೆಲ್ಲ ಸಾಕಷ್ಟು ಕೇಳಿದ್ದೇವೆ. ಆದರೆ ಹಾಗೆಂದರೆ ನಿಜಕ್ಕೂ ಏನು ಎನ್ನುವುದು ಗೊತ್ತಿರುವವರು ಕಡಿಮೆ. ನಮ್ಮ ಶರೀರದಲ್ಲಿಯ ಜೀವಕೋಶ ಗಳ ಸಹಜ ವಿಭಜನೆಯಿಂದ ಮತ್ತು ನಾವು ಸೇವಿಸುವ ಆಹಾರದಿಂದ ಯೂರಿಕ್ ಆಮ್ಲವು ಉತ್ಪತ್ತಿಯಾಗುತ್ತದೆ. ಹೆಚ್ಚಿನ ಯೂರಿಕ್ ಆಮ್ಲವು ಮೂತ್ರಪಿಂಡಗಳಿಂದ ಸೋಸಲ್ಪ ಡುತ್ತದೆ ಮತ್ತು ಮೂತ್ರದ ಮೂಲಕ ಶರೀರದಿಂದ ಹೊರಕ್ಕೆ ತಳ್ಳಲ್ಪಡುತ್ತದೆ. ಮಲದ ಮೂಲಕವೂ ಸಣ್ಣ ಪ್ರಮಾಣದಲ್ಲಿ ಯೂರಿಕ್ ಆಮ್ಲ ಶರೀರದಿಂದ ಹೊರಕ್ಕೆ ಹೋಗುತ್ತದೆ.

ಆದರೆ ಅಧಿಕ ಪ್ರಮಾಣದಲ್ಲಿ ಯೂರಿಕ್ ಆಮ್ಲದ ಉತ್ಪಾದನೆಯಾದರೆ ಮತ್ತು ಸಹಜ ರೀತಿಯಲ್ಲಿ ಅದನ್ನು ದೇಹದಿಂದ ಹೊರಕ್ಕೆ ಹಾಕುವಲ್ಲಿ ಮೂತ್ರಪಿಂಡಗಳಿಗೆ ಸಾಧ್ಯವಾಗದಿದ್ದರೆ ರಕ್ತದಲ್ಲಿ ಈ ಆಮ್ಲದ ಮಟ್ಟವು ಹೆಚ್ಚುತ್ತದೆ. ಪರಿಣಾಮವಾಗಿ ಸಂದುಗಳಲ್ಲಿ ಘನ ಹರಳುಗಳು ರೂಪುಗೊಳ್ಳುತ್ತವೆ ಮತ್ತು ಸಂಧಿವಾತ ನೋವಿಗೆ ಕಾರಣವಾಗುತ್ತದೆ. ಅಧಿಕ ಪ್ರಮಾಣದ ಯೂರಿಕ್ ಆಮ್ಲವು ಮೂತ್ರಪಿಂಡ ಕಲ್ಲುಗಳು ಅಥವಾ ಮೂತ್ರಪಿಂಡ ವೈಫಲ್ಯಕ್ಕೂ ಕಾರಣವಾಗುತ್ತದೆ. ರಕ್ತದಲ್ಲಿ ಯೂರಿಕ್ ಆಮ್ಲವು ಅಧಿಕ ಮಟ್ಟದಲ್ಲಿರುವ ರೋಗಿಗಳು ಸೂಕ್ತ ಆಹಾರವನ್ನು ಸೇವಿಸುವ ಮೂಲಕ ಅದನ್ನು ತಗ್ಗಿಸಬಹುದಾಗಿದೆ. ಅಂತಹವರು ಮದ್ಯಪಾನ, ಸಕ್ಕರೆಯನ್ನು ಒಳಗೊಂಡಿರುವ ಆಹಾರಗಳು, ಪ್ಯುರಿನ್ ಸಮೃದ್ಧವಾಗಿರುವ ಮಾಂಸ, ಮೊಟ್ಟೆ, ಮೀನು ಮತ್ತು ಬೇಳೆಗಳ ಸೇವನೆಯನ್ನು ಕಡಿಮೆ ಗೊಳಿಸುವುದು ಒಳ್ಳೆಯದು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.

ಯೂರಿಕ್ ಆಮ್ಲದ ಮಟ್ಟವನ್ನು ತಗ್ಗಿಸಲು ಮತ್ತು ಸಂಧಿವಾತ ಹಾಗೂ ಮೂತ್ರಪಿಂಡ ಕಲ್ಲುಗಳನ್ನು ತಡೆಯಲು ಕೆಲವು ಅದ್ಭುತ ಆಹಾರಗಳಿಲ್ಲಿವೆ.

ನೀರು

ನೀರು ನಮ್ಮ ಬದುಕಿನಲ್ಲಿ ಸಂಜೀವಿನಿಯಾಗಿದೆ. ಹೆಚ್ಚುವರಿ ಯೂರಿಕ್ ಆಮ್ಲ ಸೇರಿದಂತೆ ನಮ್ಮ ಶರೀರದಲ್ಲಿನ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುವಲ್ಲಿ ಅದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಯೂರಿಕ್ ಆಮ್ಲದ ಕಾಟದಿಂದ ಶಾಶ್ವತವಾಗಿ ಪಾರಾಗಲು ಪ್ರತಿದಿನ ಕನಿಷ್ಠ 10-12 ಗ್ಲಾಸ್ ನೀರನ್ನು ಸೇವಿಸಬೇಕು. ಇದು ಅತ್ಯಂತ ಸುಲಭ ಮತ್ತು ಖರ್ಚಿಲ್ಲದ ಚಿಕಿತ್ಸೆಯಾಗಿದೆ.

ಹಸಿರು ಸೊಪ್ಪು

ಹಸಿರು ಸೊಪ್ಪುಗಳು ವಿಟಾಮಿನ್ ಸಿ ಅನ್ನು ಹೇರಳವಾಗಿ ಹೊಂದಿರುತ್ತವೆ. ಇವು ಶರೀರದ ಆಮ್ಲೀಯತೆಯನ್ನು ತಗ್ಗಿಸಲು ನೆರವಾಗುವ ಜೊತೆಗೆ ಯೂರಿಕ್ ಆಮ್ಲ ಸಂಗ್ರಹಗೊಳ್ಳಲು ಬಿಡುವುದಿಲ್ಲ. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಸಿರು ಸೊಪ್ಪು ತಿನ್ನುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ತ್ವರಿತವಾಗಿ ತಗ್ಗಿಸಬಹುದು.

ಅಗಸೆ ಎಣ್ಣೆ

ಅಗಸೆ ಮತ್ತು ಅಗಸೆ ಎಣ್ಣೆ ಒಮೆಗಾ 3 ಎಂಬ ಅಗತ್ಯ ಕೊಬ್ಬನ್ನು ಒಳಗೊಂಡಿರುತ್ತವೆ. ಇದು ಸಂದುಗಳು ಬಾತುಕೊಳ್ಳುವುದನ್ನು ಮತ್ತು ಉರಿಯೂತವನ್ನು ಶಮನಗೊಳಿಸುತ್ತವೆ.

ಹಣ್ಣುಗಳು

ದ್ರಾಕ್ಷಿ, ಅನಾನಸ್ ಮತ್ತು ಚೆರ್ರಿಯಂತಹ ಹಣ್ಣುಗಳು ಆ್ಯಂಥೊಸಿಯನ್ ಎಂಬ ಉರಿಯೂತ ನಿವಾರಕ ರಾಸಾಯನಿಕವನ್ನೊಳಗೊಂಡಿದ್ದು, ಇದು ಯೂರಿಕ್ ಆಮ್ಲದ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಯೂರಿಕ್ ಆಮ್ಲವು ಹರಳುಗಟ್ಟುವುದನ್ನು ಮತ್ತು ಸಂದುಗಳಲ್ಲಿ ಶೇಖರಗೊಳ್ಳುವುದನ್ನು ತಡೆಯಲೂ ಇದು ನೆರವಾಗುತ್ತದೆ.

ಲಿಂಬೆ ನೀರು

ಲಿಂಬೆ ಸಮೃದ್ಧ ವಿಟಮಿನ್ ಸಿ ಅನ್ನು ಹೊಂದಿದೆ. ಲಿಂಬೆಯಲ್ಲಿರುವ ಸಿಟ್ರಿಕ್ ಆ್ಯಸಿಡ್ ಯೂರಿಕ್ ಆಮ್ಲವನ್ನು ಕರಗಿಸುತ್ತದೆ. ಅರ್ಧ ಲಿಂಬೆ ಹಣ್ಣಿನ ರಸವನ್ನು ಒಂದು ಗ್ಲಾಸ್ ನೀರಿಗೆ ಹಿಂಡಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಯೂರಿಕ್ ಆಮ್ಲದ ಮಟ್ಟವು ಸಹಜ ಸ್ಥಿತಿಗಿಳಿಯುತ್ತದೆ.

ಆ್ಯಪಲ್ ಸಿಡರ್ ವಿನೆಗರ್

ಹೆಚ್ಚಿನ ಜನರು ದೇಹದ ತೂಕವನ್ನು ಇಳಿಸಿಕೊಳ್ಳುವ ಉತ್ತಮ ಉಪಾಯವಾಗಿ ಆ್ಯಪಲ್ ಸಿಡರ್ ವಿನೆಗರ್ ಅನ್ನು ಸೇವಿಸುತ್ತಾರೆ. ಆದರೆ ಅದು ಶರೀರದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ತಗ್ಗಿಸಬಲ್ಲ ಅದ್ಭುತ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಆ್ಯಪಲ್ ಸಿಡರ್ ವಿನೆಗರ್ ಶರೀರದಲ್ಲಿನ ಯೂರಿಕ್ ಆಮ್ಲವನ್ನು ವಿಭಜಿಸುತ್ತದೆ ಮತ್ತು ಅನಗತ್ಯ ಯೂರಿಕ್ ಆಮ್ಲವನ್ನು ಶರೀರದಿಂದ ಹೊರಕ್ಕೆ ಹಾಕುತ್ತದೆ. ಆ್ಯಪಲ್ ಸಿಡರ್ ವಿನೆಗರ್‌ನ್ನು ನೇರವಾಗಿ ಸೇವಿಸಕೂಡದು ಎನ್ನುವುದು ನೆನಪಿರಲಿ. ಅದಕ್ಕೆ ಸಾಕಷ್ಟು ನೀರನ್ನು ಬೆರೆಸಿ ಕೊಂಡು ದಿನಕ್ಕೆರಡು ಅಥವಾ ಮೂರು ಬಾರಿ ಸೇವಿಸಿದರೆ ಅತ್ಯುತ್ತಮ ಪರಿಣಾಮವನ್ನು ಕಾಣಬಹುದು.

ತರಕಾರಿ

ಕ್ಯಾರೆಟ್, ಬೀಟ್‌ರೂಟ್ ಮತ್ತು ಸೌತೆಕಾಯಿ ರಸ ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತದೆ.

ಕಡಿಮೆ ಕೊಬ್ಬಿರುವ ಡೇರಿ ಉತ್ಪನ್ನಗಳು

ಶರೀರದಲ್ಲಿನ ಯೂರಿಕ್ ಆ್ಯಸಿಡ್ ಪ್ರಮಾಣವನ್ನು ತಗ್ಗಿಸಲು ಕಡಿಮೆ ಕೊಬ್ಬಿರುವ ಡೇರಿ ಉತ್ಪನ್ನಗಳ ಸೇವನೆ ಇನ್ನೊಂದು ಪರಿಣಾಮಕಾರಿ ವಿಧಾನವಾಗಿದೆ.

ನಾರಿನಂಶ ಸಮೃದ್ಧವಾಗಿರುವ ಆಹಾರ

ಅಧಿಕ ನಾರಿನಂಶ ಹೊಂದಿರುವ ಆಹಾರಗಳು ರಕ್ತದಲ್ಲಿಯ ಯೂರಿಕ್ ಆ್ಯಸಿಡ್ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತವೆ. ಅವು ರಕ್ತದಲ್ಲಿಯ ಯೂರಿಕ್ ಆಮ್ಲವನ್ನು ಹೀರಿಕೊಂಡು ಮೂತ್ರಪಿಂಡಗಳ ಮೂಲಕ ಅದನ್ನು ಹೊರಹಾಕುವಲ್ಲಿ ಪೂರಕ ಪಾತ್ರ ವಹಿಸುತ್ತವೆ. ಓಟ್ಸ್, ಕೋಸುಗಡ್ಡೆ, ಬಾರ್ಲಿ, ಸೌತೆ, ಅಜವಾನದ ಕಾಂಡ ಮತ್ತು ಗಜ್ಜರಿ ಗಳಂತಹ ನಾರುಭರಿತ ಆಹಾರ ಯೂರಿಕ್ ಆಮ್ಲದ ಪ್ರಮಾಣವನ್ನು ತಗ್ಗಿಸುತ್ತದೆ.

ಗ್ರೀನ್‌ಟೀ

ಪ್ರತೀ ದಿನ ಗ್ರೀನ್ ಸೇವನೆಯಿಂದ ಶರೀರದಲ್ಲಿಯ ಹೆಚ್ಚುವರಿ ಯೂರಿಕ್ ಆಮ್ಲವನ್ನು ನಿವಾರಿಸಹುದಾಗಿದೆ. ಇದರೊಂದಿಗೆ ಸಂಧಿವಾತದ ಅಪಾಯವನ್ನೂ ತಗ್ಗಿಸಬಹುದು.
 

Writer - -ಎನ್. ಕೆ.

contributor

Editor - -ಎನ್. ಕೆ.

contributor

Similar News

ಜಗದಗಲ
ಜಗ ದಗಲ