ಆಫ್ರಿಕನ್ ಸಾಹಿತ್ಯ ವಾಚಿಕೆ

Update: 2017-10-28 17:18 GMT

ಭಾರತೀಯರು ಆಧುನಿಕ ಸಂದರ್ಭದಲ್ಲಿ ಅತಿ ಹೆಚ್ಚು ಮುಖ ಮಾಡಿ ನೋಡಿರುವುದು ಅಮೆರಿಕ ಮತು ್ತಯುರೋಪಿನ ಕಡೆಗೆ. ಅದು ವಿಜ್ಞಾನ-ತಂತ್ರಜ್ಞಾನದ ವಿಚಾರಗಳಿರಬಹುದು. ರಾಜತಾಂತ್ರಿಕ ವಿಚಾರಗಳಿರಬಹುದು. ಸಾಹಿತ್ಯ ಚಿಂತನೆ, ವಿವಿಧ ಸಿದ್ದಾಂತಗಳು, ಭಾಷೆ, ಸಂಸ್ಕೃತಿ, ಅಭಿವೃದ್ಧಿ ಹೀಗೆ ಯಾವುದೇ ವಿಚಾರಗಳನ್ನು ಕಲಿಯಬೇಕಾದಾಗಲೂ ನಾವು ಎದುರು ನೋಡಿರುವುದು ಯೂರೋಪಿನ ಕಡೆಗೆ. ಅಂದರೆ ನಮ್ಮ ದೇಶವನ್ನು ನಿಯಂತ್ರಿಸುವ, ಉದಾರವಾದಿ ಆರ್ಥಿಕ ನೀತಿಗಳನ್ನು ವಿಶ್ವವ್ಯಾಪಾರ ಸಂಘಟನೆಯ ನೇತೃತ್ವದಲ್ಲಿ ಜಾರಿಗೊಳಿಸುತ್ತ ದೇಶವನ್ನು ದೋಚುವ ರಾಷ್ಟ್ರಗಳ ಕಡೆಗೆ ಮುಖ ಮಾಡಲಾಗಿದೆ. ಅದುಇಂದು ಮತ್ತಷ್ಟು ಹೆಚ್ಚಾಗಿದೆ. ಎಲ್ಲದಕ್ಕೂ ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ.

ಆದರೆ ನಮ್ಮದೇಶದ ಜನರಂತೆಯೇ ಅಮೆರಿಕ ಮತ್ತು ಯೂರೋಪಿನವರ ವಂಚನೆಗೆ ಲೂಟಿಗೆ ಬಲಿಯಾಗಿರುವ ಆಫ್ರಿಕಾ ಖಂಡದ ವಿವಿಧ ದೇಶಗಳ ಕಡೆ ಹೆಚ್ಚು ಮುಖ ಮಾಡಲೇ ಇಲ್ಲ. ಅಲ್ಲಿನ ಸಾಹಿತ್ಯ ಚಿಂತನೆಗಳಿಂದ ಕಲಿಯಲೂ ಇಲ್ಲ. ವಿಶೇಷವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಆಫ್ರಿಕಾ ಖಂಡದ ವಿವಿಧ ದೇಶಗಳು ನಡೆಸಿರುವ ವಸಾಹತುಶಾಹಿ ಮತ್ತು ನವ ವಸಾಹತುಶಾಹಿ ಹೋರಾಟ ಅದರ ಜೊತೆಗೆ ಹುಟ್ಟಿರುವ ಜನತೆಯ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಹರಿಸಲೇ ಇಲ್ಲ. ನಮ್ಮ ದೇಶದಲ್ಲಿ ಹುಟ್ಟಿರುವ ಜನತೆಯ ಸಾಹಿತ್ಯದಂತೆ ಆಫ್ರಿಕಾದಲ್ಲಿಯೂ ಅತ್ಯಂತ ಸಂವೇದನಾಶೀಲ ಸಾಹಿತ್ಯ ಮೂಡಿ ಬಂದಿದೆ. ಇದರಿಂದ ನಾವು, ನಮ್ಮ ದೇಶದ ಜನತೆ, ಯಾವುದೇ ಸಂವೇದನಾಶೀಲರು ಸಾಕಷ್ಟು ಕಲಿಯಲಿಕ್ಕಿದೆ.

ಆದರೆ ಅದನ್ನು ಕಲಿಯಲು ಬೇಕಾದ ದಾರಿಗಳೇ ತೆರೆದಿಲ್ಲದಿರುವುದು ದುರಂತ. ಕೆಲವು ಪ್ರಯತ್ನಗಳು ಇದುವರೆಗೂ ಪ್ರಾಸಂಗಿಕವಾಗಿ ನಡೆದಿದ್ದರೂ ಅದು ವ್ಯಾಪ್ತಿಯನ್ನು ನಿರಂತರತೆಯನ್ನು ಕಾಪಾಡಿಕೊಳ್ಳದ ಕಾರಣ ಆಫ್ರಿಕಾದ ಸಂವೇದನೆ ಚಿಂತನೆಗಳು ನಮ್ಮ ನಾಡಿನ ಜನರ ಮನಸ್ಸನ್ನು ಯುರೋಪ್ ಪ್ರಭಾವಿಸಿದಂತೆ ಇಂದಿಗೂ ಪ್ರಭಾವಿಸಿಲ್ಲ. ಇದು ಬಹುದೊಡ್ಡ ಕೊರತೆ. ಇಂತಹ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಆಫ್ರಿಕಾ ಸಾಹಿತ್ಯ ವಾಚಿಕೆಯೊಂದನ್ನು ಸಿದ್ಧಪಡಿಸಿ ಇತ್ತೀಚೆಗೆ ಪ್ರಕಟಪಡಿಸಿದೆ. ಇದನ್ನು ನಟರಾಜ್ ಹುಳಿಯಾರ್, ಎಸ್. ಗಂಗಾಧರಯ್ಯ ಮತ್ತು ಕೇಶವ ಮಳಗಿ ಅವರು ಸಂಪಾದಿಸಿದ್ದಾರೆ.

ಆಫ್ರಿಕಾಖಂಡದ ವಿವಿಧ ಲೇಖಕರ ಕತೆಗಳು, ಕವಿತೆಗಳು, ನಾಟಕಗಳು, ಕಾದಂಬರಿಗಳು ಹಾಗೂ ಜನಪದಕತೆಗಳ ಆಯ್ದ ಭಾಗಗಳನ್ನು ಬೇರೆ ಬೇರೆ ಲೇಖಕರಿಂದ ಅನುವಾದಿಸಿ ಸೂಕ್ತ ಪ್ರಸ್ತಾವನೆ ಬರೆದು ಹೊರತಂದಿದ್ದಾರೆ. ಇಡೀ ವಾಚಿಕೆ ಆಫ್ರಿಕನ್ ಸಾಹಿತ್ಯದ ಮುಖ್ಯ ಸಂಗತಿಗಳನ್ನು ಸಂವೇದನೆಗಳನ್ನು ಒಳಗೊಂಡಿದ್ದು ಆಫ್ರಿಕನ್ ಸಾಹಿತಿಗಳು ಯೋಚಿಸುತ್ತಿರುವ ಮತ್ತು ನಡೆಸುತ್ತಿರುವ ಹೋರಾಟದ ಪರಿಚಯ ಮಾಡಿಕೊಡುತ್ತದೆ. ಇದು ಕನ್ನಡದ ಯಾವುದೇ ವರ್ಗದ, ತಲೆಮಾರಿನ ಅಂತರಗಳಿಲ್ಲದೆ ಎಲ್ಲರಿಗೂ ಉಪಯುಕ್ತವಾಗಿರುವ ಕೃತಿ.

ಇಂತಹ ಕೃತಿಯೊಂದು ಈಗಲಾದರೂ ಓದುಗರ ಮುಂದೆ ಬಂದಿರುವುದು ಮಹತ್ವದ ಸಂಗತಿ. ಇದರ ಮಹತ್ವವನ್ನು ಎಲ್ಲ ಕನ್ನಡ ಓದುಗರು ಪಡೆದುಕೊಳ್ಳಬೇಕು. ಅದರಲ್ಲಿ ಕುರಿ ಕಾಯುವ ಹುಡುಗಿಯೊಬ್ಬಳ ಆತ್ಮಕತೆಯ ಭಾಗ, ಮಕ್ಕಳನ್ನು ಅಪಹರಿಸಿ ಅವರನ್ನು ಸಂತೆಗಳಲ್ಲಿ ಮಾರಾಟ ಮಾಡುವಂತ ಪ್ರಕರಣಗಳ ಆತ್ಮಕತೆಗಳ ವಿವರಗಳೂ ಇವೆ. ಇಂತಹ ಭಾಗಗಳು ನಿಜಕ್ಕೂ ಮನಕಲಕುತ್ತವೆ. ಪಾಪಿ ರಾಜಎನ್ನುವಂತಹ ಒಂದು ಜನಪದ ಕತೆಯಿದೆ. ಇದು ಹಣ ಆಸ್ತಿ ಸಂಪತ್ತುಗಳು ಮನುಷ್ಯನನ್ನು ಮನುಷ್ಯತ್ವದಿಂದ ದೂರ ಮಾಡಿ ಕೊಂದಿರುವುದನ್ನು ವಿವರಿಸುತ್ತದೆೆ. ಇಂತಹ ಹತ್ತು ಹಲವು ಮತ್ತು ವೈವಿಧ್ಯಮಯ ಸಂಗತಿಗಳನ್ನು ಒಳಗೊಂಡಂತಹ ಸಾಹಿತ್ಯದ ಪಠ್ಯಭಾಗಗಳು ಇಲ್ಲಿವೆ. ಇವುಗಳ ಓದು ನಿಜಕ್ಕೂ ಓದುಗರ ಅರಿವಿನ ಪರಿಧಿಯನ್ನು ನಿರ್ವಿವಾದವಾಗಿ ಬೆಳೆಸುತ್ತವೆ. ಇದಕ್ಕೆ ಕಾರಣವಾದ ಎಲ್ಲರಿಗೂ ಕನ್ನಡಿಗರು ಋಣಿಯಾಗಿರಬೇಕು.

ಪುಸ್ತಕ: ಆಫ್ರಿಕನ್ ಸಾಹಿತ್ಯ ವಾಚಿಕೆ

ಸಂಪಾದಕರು: ನಟರಾಜ್ ಹುಳಿಯಾರ್, ಎಸ್ ಗಂಗಾಧರಯ್ಯ ಮತ್ತು ಕೇಶವ ಮಳಗಿ

ಪ್ರಕಟನೆ: 2017

ಪ್ರಕಾಶಕರು: ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಮಲ್ಲತ್ತಹಳ್ಳಿ, ಬೆಂಗಳೂರು-56

ಬೆಲೆ: 300 ರೂ.

Writer - ರಂಗನಾಥ ಕಂಟನಕುಂಟೆ

contributor

Editor - ರಂಗನಾಥ ಕಂಟನಕುಂಟೆ

contributor

Similar News