ಹಿಂದುತ್ವ ರಾಷ್ಟ್ರ ಅಜೆಂಡಾ - ಕರ್ನಾಟಕದ ಅನನ್ಯತೆಗೆ ಆಪತ್ತು

Update: 2017-10-29 06:57 GMT

ದೇಶದ ಇತರೆಲ್ಲಾ ರಾಜಕೀಯ ಪಕ್ಷ, ಸಿದ್ಧಾಂತಗಳಿಗಿಂತಲೂ ಭಿನ್ನವಾದ ಐಡಿಯಾಲಜಿ ಹೊಂದಿರುವ ಸಂಘಪರಿವಾರ ನಡೆಸುವ ಸರಕಾರದಲ್ಲಿ ಕರ್ನಾಟಕದಂತಹ ತನ್ನದೇ ವಿಶಿಷ್ಟವಾದ ಭೂಪ್ರದೇಶ, ವಿಶಿಷ್ಟ ಚಾರಿತ್ರಿಕ ಹಿನ್ನೆಲೆ, ವಿಶಿಷ್ಟ ಸಂಸ್ಕೃತಿ, ಭಾಷೆಗಳನ್ನು ಹೊಂದಿರುವ ರಾಜ್ಯಗಳನ್ನು ಕ್ರಮೇಣವಾಗಿ ದುರ್ಬಲಗೊಳಿಸುವ ಬೆಳವಣಿಗೆಗಳು ಹೇಗೆ ನಡೆಯುತ್ತಿವೆ ಎಂಬುದರ ಬಗ್ಗೆ ಕನ್ನಡಿಗರೆಲ್ಲರೂ ಈ ಹೊತ್ತು ಜಾಗೃತರಾಗಬೇಕಾಗಿದೆ

‘‘ಕೆಲವೇ ಜನರ ಪ್ರಭುತ್ವ ಸಾಧನೆಗಾಗಿ ಭಾರತದಲ್ಲಿ ರೂಪಿಸಿಕೊಂಡಿರುವ ಹಿಂದಿ ಮತ್ತು ಇಂಗ್ಲಿಷ್ ಭಾಷಾ ಸಾಮ್ರಾಜ್ಯಶಾಹಿ, ಬೌದ್ಧಿಕ ಸಾಮ್ರಾಜ್ಯಶಾಹಿ, ಉತ್ಪಾದನಾ ಸಾಮ್ರಾಜ್ಯಶಾಹಿ, ಹಾಗೂ ಬೆಲೆ- ಲೂಟಿ ಸಾಮ್ರಾಜ್ಯಶಾಹಿಯನ್ನು ಮುರಿದು ಎಲ್ಲ ಜನರಿಗೂ ಭಾಷಿಕ ಸಮಾನತೆ, ಬೌದ್ಧಿಕ ಸಮಾನತೆ, ಉತ್ಪಾದನಾ ಸಮಾನತೆ, ಆಸ್ತಿ ಸಮಾನತೆ, ಶ್ರಮ ಮೌಲ್ಯ ಸಮಾನತೆ ಮತ್ತು ಬೆಲೆ ಸಮಾನತೆಯನ್ನು ದೊರಕಿಸಿ ಕೊಡಬೇಕಾಗಿರುವುದೇ ನಮಗುಳಿದಿರುವ ಮಾರ್ಗ’’

ಇವು ಇಂದಿಗೆ ಸರಿಯಾಗಿ ಮೂರು ದಶಕದ ಹಿಂದೆ ಕರ್ನಾಟಕದ ಕೇಂದ್ರವಾದ ಹುಬ್ಬಳ್ಳಿಯಲ್ಲಿ ಲಕ್ಷೋಪಲಕ್ಷ ಕನ್ನಡಿಗರು ದಂಡಿದಂಡಿಯಾಗಿ ನೆರೆದು ಪ್ರೊ ಎಂ.ಡಿ. ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ‘ಕನ್ನಡ ದೇಶ’ ಎಂಬ ಹೆಸರಿನ ಪ್ರಾದೇಶಿಕ ಪಕ್ಷದ ಪ್ರಣಾಳಿಕೆಯ ಸಾಲುಗಳು. ನಂತರದ ಮೂರು ದಶಕಗಳಲ್ಲಿ ಕಾವೇರಿ- ತುಂಗಭದ್ರೆಯಲ್ಲಿ ಸಾಕಷ್ಟು ನೀರು ಹರಿದಿದೆ. ಹಲವಾರು ರಾಜಕೀಯ ಸ್ಥಿತ್ಯಂತರಗಳು ನಡೆದಿವೆ. ಕಾಂಗ್ರೆಸ್, ಜನತಾದಳಗಳ ಸರಕಾರಗಳನ್ನು ನೋಡಿ, ಸಮ್ಮಿಶ್ರ ಸರಕಾರಗಳಿಗೂ ಅವಕಾಶ ನೀಡಿ, ಕೊನೆಗೆ ಬಿಜೆಪಿಯನ್ನೂ ಅನುಭವಿಸಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಸಹಿಸಿಕೊಳ್ಳುತ್ತಿದ್ದಾರೆ ಕನ್ನಡಿಗರು. ಅತ್ತ ಕೇಂದ್ರದಲ್ಲಿಯೂ ಕಾಂಗ್ರೆಸನ್ನು ಸೋಲಿಸಿ, ಜನತಾ ಸರಕಾರ ಅಧಿಕಾರಕ್ಕೆ ಬಂದು, ನಂತರ ಮತ್ತೆ ಕಿಚಡಿ ಸರಕಾರ ಬಂದು ಮತ್ತೆ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ನಡೆಸುತ್ತಿದೆ. ‘ಯಾವ ಅರಸ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ’ ಎಂಬುದು ನಾಡಿನ ಪ್ರಜೆಗಳ ಸ್ಥಿತಿ.

ಆದರೆ ಇದೀಗ ಹೆಚ್ಚು ಆತಂಕ ಪಡುವ ದಿನಮಾನಗಳು ಬಂದಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಮೇಲೆ ಪ್ರಜಾತಂತ್ರಕ್ಕೆ ಮಾರಕವಾದ ಸಿದ್ದಾಂತ ಹೊಂದಿರುವ ಕೇಂದ್ರ ಸರಕಾರವು ಸವಾರಿ ನಡೆಸಲು ಹವಣಿಸುತ್ತಿರುವ ಪ್ರಯತ್ನಗಳಿಂದಾಗಿ. ಭಾರತವು ಎಷ್ಟೇ ಒಕ್ಕೂಟ ವ್ಯವಸ್ಥೆ ಎಂದು ಹೇಳಿದರೂ ಸಹ ಇಲ್ಲಿ ಮೊದಲಿನಿಂದಲೂ ಢಾಳಾಗಿ ಗೋಚರವಾಗುವುದು ಒಕ್ಕೂಟ ವಿರೋಧಿ ಏಕಾತ್ಮಕ ಆಡಳಿತದ ಲಕ್ಷಣಗಳೇ. ಆದರೂ ಸ್ವಾತಂತ್ರ್ಯಾನಂತರದಲ್ಲಿ ನಾವು ರಚಿಸಿಕೊಂಡಿದ್ದ ಆಡಳಿತಾತ್ಮಕ ವ್ಯವಸ್ಥೆಗಳಿಂದಾಗಿ ನಮ್ಮಂತಹ ರಾಜ್ಯಗಳಿಗೆ ಒಂದಷ್ಟಾದರೂ ಪ್ರಜಾತಂತ್ರಿಕ ಅವಕಾಶಗಳು ಲಭ್ಯವಾಗಿದ್ದವು. ಆದರೀಗ ಏನಾಗುತ್ತಿದೆ? ಹಂತಹಂತವಾಗಿ ಅಂತಹ ವ್ಯವಸ್ಥೆಗಳನ್ನು ಬುಡಮೇಲು ಮಾಡಲಾಗುತ್ತಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇದು ವ್ಯವಸ್ಥಿತವಾಗಿ ನಡೆಯುತ್ತಿದೆ.

ರಾಜಕೀಯ- ಆರ್ಥಿಕ ನೀತಿಯಲ್ಲಿ ಪೆಟ್ಟು

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲು ಮಾಡಿದ ಕೆಲಸವೆಂದರೆ ಇದುವರೆಗೆ ದೇಶದ ಅಭಿವೃದ್ಧಿಯನ್ನು ರೂಪಿಸುತ್ತಾ ನಿರ್ದೇಶಿಸುತ್ತಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ ಅದರ ಜಾಗದಲ್ಲಿ ನೀತಿ ಆಯೋಗವನ್ನು ಅಸ್ತಿತ್ವಕ್ಕೆ ತಂದಿದ್ದು. ಯೋಜನಾ ಆಯೋಗದ ಅಭಿವೃದ್ಧಿ ಕೆಲಸಗಳು ಭಾರತ ಒಕ್ಕೂಟದಲ್ಲಿನ ಎಲ್ಲಾ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪುಗೊಳ್ಳುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಕೇವಲ ಮಾರುಕಟ್ಟೆ ಶಕ್ತಿಗಳ ಹಿತಾಸಕ್ತಿಗೆ ತಕ್ಕಂತೆ ದೇಶದ ಆರ್ಥಿಕ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ನೀತಿ ಆಯೋಗವನ್ನು ರಚಿಸಲಾಗಿದೆ. ನೀತಿ ಆಯೋಗದ ನೀತಿಯಲ್ಲಿ ರಾಜ್ಯಗಳ ಅಭಿವೃದ್ಧಿ ಪಕ್ಕಕ್ಕೆ ಸರಿದು ಪ್ರಬಲ ಮಾರುಕಟ್ಟೆ ಶಕ್ತಿಗಳ ಹಿತವೇ ಪ್ರಧಾನ ಆದ್ಯತೆಯಾಗಿಸಿ ಕೊಳ್ಳಲಾಗಿದೆ.

ಇನ್ನು ಭಾರತವನ್ನು ಒಂದು ಒಕ್ಕೂಟವೆಂದು ಪರಿಗಣಿಸಿ ದೇಶದ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಎಲ್ಲಾ ರಾಜ್ಯಗಳನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ 1952ರಲ್ಲಿ ನೆಹರೂ ಸರಕಾರ ಒಂದು ಕ್ಯಾಬಿನೆಟ್ ನಿರ್ಣಯದ ಮೂಲಕ ಹುಟ್ಟು ಹಾಕಿದ್ದ ಸಂಸ್ಥೆಯೇ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಅಥವಾ ನ್ಯಾಶನಲ್ ಡೆವೆಲಪ್‌ಮೆಂಟ್ ಕೌನ್ಸಿಲ್ (ಎನ್‌ಡಿಸಿ). ಯಾವುದೇ ಪ್ರಧಾನ ಮಂತ್ರಿ ರಾಷ್ಟ್ರಮಟ್ಟದ ನೀತಿ ನಿರೂಪಣೆ ಮಾಡುವಾಗ ಎನ್‌ಡಿಸಿ ಸಭೆ ಆಯೋಜಿಸಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಚರ್ಚಿಸಿ ತೀರ್ಮಾನಗಳನ್ನು ತೆಗೆದು ಕೊಳ್ಳುವುದು ವಾಡಿಕೆಯಾಗಿತ್ತು. ರಾಜ್ಯಗಳ ಮುಖ್ಯಮಂತ್ರಿ ಗಳನ್ನು ಕರೆದು ಆಯಾ ರಾಜ್ಯಗಳ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಕೇಂದ್ರದಿಂದ ಆಗಬೇಕಾದ ಪರಿಹಾರ ಒದಗಿಸುವ ನಿಟ್ಟಿನಲ್ಲಿಯೂ ಎನ್‌ಡಿಸಿ ಅತ್ಯುತ್ತಮ ವೇದಿಕೆಯಾಗಿತ್ತು. ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದ್ದರೆಂದಲ್ಲ. ಆದರೆ ಇಂತಹ ಒಂದು ವೇದಿಕೆ ಪ್ರಜಾತಂತ್ರದ ಅಡಿಗಲ್ಲಾದ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿತ್ತು. ಉದಾಹರಣೆಗೆ ಕನ್ನಡಿಗರೇ ಆದ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದ ಹತ್ತು ತಿಂಗಳ ಅವಧಿಯಲ್ಲಿ ನಾಲ್ಕು ಸಲ ಎನ್‌ಡಿಸಿ ಸಭೆ ಕರೆದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ನೋಡುವುದಾದರೆ ಕೊನೇ ಬಾರಿಗೆ ಎನ್‌ಡಿಸಿ ಸಭೆಯನ್ನು ನಡೆಸಿದ್ದು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 2012ರ ಡಿಸೆಂಬರ್ 27ರಂದು. ಅದು 57ನೆ ಎನ್‌ಡಿಸಿ ಸಭೆಯಾಗಿತ್ತು. 56ನೆ ಸಭೆ ನಡೆದಿದ್ದು 2011ರಲ್ಲಿ. ಈಗ ಕಳೆದ ಆರು ವರ್ಷಗಳಿಂದ ಈಚೆಗೆ ಎನ್‌ಡಿಸಿ ಸಭೆಯೇ ನಡೆದಿಲ್ಲ. ಅದಕ್ಕಿಂತಲೂ ವಿಷಾದದ ಸಂಗತಿ ಎಂದರೆ ನರೇಂದ್ರ ಮೋದಿ ಸರಕಾರ ಎನ್‌ಡಿಸಿಯನ್ನೇ ಬರ್ಖಾಸ್ತು ಮಾಡಿ ತಾನು ಹೇಳಿದ್ದನ್ನೇ ರಾಜ್ಯಗಳು ಮಾಡಬೇಕು ಎಂಬ ನೀತಿ ಆಯೋಗದ ನೀತಿಯನ್ನೇ ರಾಜ್ಯಗಳ ಮೇಲೆ ಹೇರುವ ಧೋರಣೆ ಈಗ ವ್ಯಕ್ತವಾಗುತ್ತಿದೆ. ಇಲ್ಲಿ ಕೇಂದ್ರ ಸರಕಾರವು ಯೋಜನಾ ಆಯೋಗ ರದ್ದು ಪಡಿಸಿದ್ದಾಗಲೀ, ಎನ್‌ಡಿಸಿಯನ್ನು ರದ್ದುಪಡಿಸಲು ಹೊರಟಿರುವುದಾಗಲೀ ಕರ್ನಾಟಕವನ್ನು ರಾಷ್ಟ್ರದ ಅಭಿವೃದ್ಧಿಯ ಪ್ರಕ್ರಿಯೆಯಿಂದ ದೂರ ತಳ್ಳಿ ತನ್ನದೇ ಅಭಿವೃದ್ಧಿ ಮಾದರಿಯನ್ನು ಹೇರಲು ಕೇಂದ್ರ ಸರಕಾರಕ್ಕೆ ಅನುವು ಮಾಡಿಕೊಡುತ್ತದಷ್ಟೇ.

ಕರ್ನಾಟಕದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮತ್ತೊಂದು ಪ್ರಮುಖ ನಡೆಯನ್ನು ಕೇಂದ್ರದ ಬಿಜೆಪಿ ಸರಕಾರ ಕೈಗೊಂಡಿದೆ. ಅದು ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರ ಅನುದಾನ ನೀಡಲು ಅವಕಾಶ ಮಾಡಿಕೊಟ್ಟಿದ್ದ ಎಐಬಿಪಿ ಯೋಜನೆಗೆ ತಂದ ತಿದ್ದುಪಡಿ. ಕರ್ನಾಟಕದಂತಹ ರಾಜ್ಯಗಳು ಕೇಂದ್ರಕ್ಕೆ ಪ್ರತಿವರ್ಷ ಸಹಸ್ರಾರು ಕೋಟಿ ಮೊತ್ತದ ತೆರಿಗೆ ಹಣವನ್ನು ಪೂರೈಸುತ್ತವೆ. ಈ ಹಣದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರವು ಹಣವನ್ನು ಒದಗಿಸಬೇಕಾದುದು ಕೇಂದ್ರದ ಬಾಧ್ಯತೆಯಾಗಿರುತ್ತದೆ. 1996-97ರಲ್ಲಿ ರಾಜ್ಯಗಳಿಗೆ ನೀರಾವರಿಯಂತಹ ದೊಡ್ಡ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ಆರಂಭಿಸಲಾಗಿದ್ದ ಯೋಜನೆಯೇ ವೇಗವರ್ಧಿತ ನೀರಾವರಿ ಲಾಭಗಳ ಯೋಜನೆ (Accelerated Irrigation Benefits Programme (AIBP). ಇದನ್ನು ಆರಂಭಿಸಿದ ಮೇಲೆಯೇ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಯೂ ಸೇರಿದಂತೆ ದೇಶದ ಅನೇಕ ರಾಜ್ಯಗಳು ತಮ್ಮ ರಾಜ್ಯಗಳ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಕೇಂದ್ರದಿಂದ ಪಡೆಯಲು ಸಾಧ್ಯವಾದದ್ದು. ಆದರೆ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕೇಂದ್ರ ನೀಡಬೇಕಾದ ಈ ಅನುದಾನದ ಮೊತ್ತವನ್ನು ತೀವ್ರವಾಗಿ ಕಡಿತಗೊಳಿಸಿಬಿಟ್ಟದೆ. ಈ ಮೊದಲು ಕೇಂದ್ರವು ಬೃಹತ್ ಯೋಜನೆಗಳ ವೆಚ್ಚದ ಶೇಕಡಾ 75ರಿಂದ ಶೇಕಡಾ 90ರವರೆಗಿನ ಮೊತ್ತವನ್ನು ನೀಡಬೇಕಿದ್ದರೆ ಈಗ ಕೇವಲ ಶೇಕಡಾ 50ರಷ್ಟು ಅನುದಾನಕ್ಕೆ ಕಡಿತಗೊಳಿಸಿದೆ. ಪರಿಣಾಮವಾಗಿ ರಾಜ್ಯಗಳ ಜಲ ಸಂರಕ್ಷಣಾ ಯೋಜನೆಗಳು, ಜಲ ನಿರ್ವಹಣೆ ಯೋಜನೆಗಳು ಮತ್ತು ನೀರಾವರಿ ಕಾಲುವೆ ಯೋಜನೆಗಳು ನನೆಗುದಿಗೆ ಬೀಳುವ ಸ್ಥಿತಿ ಎದುರಾಗಿದೆ.

ಇನ್ನು ಇತ್ತೀಚೆಗೆ ಜಾರಿಗೊಳಿಸಿರುವ ಜಿಎಸ್‌ಟಿ ಎಂಬ ತೆರಿಗೆ ವ್ಯವಸ್ಥೆಯಂತೂ ನೇರವಾಗಿ ಇಡೀ ದೇಶದ ಪರೋಕ್ಷ ತೆರಿಗೆದಾರರನ್ನು ರಾಜ್ಯಗಳ ಹಿಡಿತದಿಂದ ತಪ್ಪಿಸಿ, ತನ್ನ ತೆರಿಗೆ ನಿಯಂತ್ರಣಕ್ಕೆ ಒಳಪಡಿಸುವ ತೆರಿಗೆ ಕ್ರಮವಾಗಿದ್ದು ಇದನ್ನು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ಉಗ್ರವಾಗಿ ವಿರೋಧಿಸದೇ ತಾತ್ವಿಕವಾಗಿ ಒಪ್ಪಿಕೊಂಡಿದ್ದು ದೊಡ್ಡ ದುರಂತವೆಂದೇ ಹೇಳಬೇಕು.

ಕೇಂದ್ರ ಸರಕಾರದ ಆಡಳಿತದಲ್ಲಿ ಮೋದಿ ನೇತೃತ್ವದ ಸರಕಾರ ಮಾಡಿರುವ ಈ ಮೇಲಿನ ಮಾರ್ಪಾಡುಗಳು ಕರ್ನಾಟಕದಂತಹ ರಾಜ್ಯಗಳ ಅಭಿವೃದ್ಧಿಯ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುವುದು ನಿಶ್ಚಿತವಾಗಿದೆ ಮಾತ್ರವಲ್ಲ ಇಡೀ ಒಕ್ಕೂಟ ವ್ಯವಸ್ಥೆಯ ಬುಡಕ್ಕೇ ಕೊಡಲಿ ಏಟು ನೀಡಿದ ಕ್ರಮಗಳಾಗಿವೆ.

ಕನ್ನಡ ವಿರೋಧಿ ಕೇಂದ್ರ ಭಾಷಾ ನೀತಿ:

ಭಾಷೆ ಎಂದರೆ ಕೇವಲ ಒಂದು ಸಂವಹನ ವ್ಯವಸ್ಥೆಯಲ್ಲ. ಭಾಷೆಯು ಒಂದು ಮಾನಸಿಕ ಸಾಮರ್ಥ್ಯ ಎಂದು ನುಡಿತಜ್ಞರು ಹೇಳುತ್ತಾರೆ. ಭಾಷೆಯೊಂದಿಗೆ ಜನಾಂಗವೊಂದ ಅಸ್ಮಿತೆಯಿರುತ್ತದೆ. ಇದೇ ಕಾರಣಕ್ಕೆ ಬೆಲ್ಜಿಯಂನ ಭಾಷಾಶಾಸ್ತ್ರಜ್ಞೆ ಸ್ಕೂಟ್‌ನಬ್ ಕಾಂಗಾಸ್ ಅವರು ‘‘ಒಂದು ಜನಾಂಗವನ್ನು ನಾಶ ಮಾಡಬೇಕೆಂದರೆ ಆ ಜನಾಂಗದ ಭಾಷೆಯನ್ನು ನಾಶ ಮಾಡಿದರೆ ಸಾಕು’’ ಎಂಬ ಮಾತನ್ನು ಪ್ರಚುರಪಡಿಸಿರುವುದನ್ನು ನೋಡಬಹುದು. ಅದರಲ್ಲೂ ಸಾವಿರಾರು ಜಾತಿ ಜನಾಂಗಗಳು, ಸಂಸ್ಕೃತಿಗಳಿರುವ ಭಾರತದಂತಹ ಬಹುಸಂಸ್ಕೃತಿಯ, ಬಹುಭಾಷಿಕ ನಾಡಿನಲ್ಲಿ ಭಾಷೆಗಳ ಉಳಿವೇ ಆಯಾ ಸಂಸ್ಕೃತಿಗಳ ಉಳಿವೂ ಆಗಿರುತ್ತದೆ, ಆಯಾ ಜನಾಂಗಗಳ ಉಳಿವೂ ಆಗಿರುತ್ತದೆ. ಇಲ್ಲಿನ ಜಾತಿ ಜನಾಂಗಗಳ ನಡುವಿನ ತಾರತಮ್ಯವನ್ನು ಇಲ್ಲದಂತೆ ಮಾಡಿ ಸಾಂಸ್ಕೃತಿಕ ವೈವಿಧ್ಯವನ್ನು ಇರಗೊಳಿಸಿ ಪೋಷಿಸಿದಾಗ ಮಾತ್ರ ಭಾರತ ಮತ್ತಷ್ಟು ಬಲಿಷ್ಟಗೊಳ್ಳಲು ಸಾಧ್ಯ. ಆದರೆ ಇದಕ್ಕೆ ಸಂಪೂರ್ಣ ವ್ಯತಿರಿಕ್ತ ಸಿದ್ಧಾಂತ ಹೊಂದಿರುವ ಸಂಘಟನೆಯೆಂದರೆ ಸಂಘ ಪರಿವಾರ. ದೇಶವನ್ನು ಪುರೋಹಿತಶಾಹಿಯ ಅಣತಿಯಂತೆ ನಡೆಸಬೇಕೆಂದರೆ ಅದಕ್ಕಾಗಿ ಸಂಸ್ಕೃತ ಮತ್ತು ಹಿಂದಿ ಭಾಷೆಗಳ ಮೂಲಕವೇ ಸಾಧ್ಯ ಎಂಬುದು ಸಂಘ ಪರಿವಾರದ ನಂಬಿಕೆ. ಇದೇ ಕಾರಣದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಹಿಂದಿಯ ಹೇರಿಕೆಯ ಕ್ರಮಗಳು ವೇಗಗೊಂಡಿವೆ. ಕರ್ನಾಟಕದ ಇತ್ತೀಚಿನ ಕೆಲವು ಉದಾಹರಣೆಗಳನ್ನು ನೋಡಿದರೂ ಈ ಅಂಶ ಅರ್ಥವಾಗುತ್ತದೆ. ರಾಜ್ಯ ಸರಕಾರದ ಪ್ರಧಾನ ಅನುದಾನವಿರುವ, ಕೇಂದ್ರ ಸರಕಾರದ ಸಹಭಾಗಿತ್ವ ಇರುವ ಮೆಟ್ರೋ ರೈಲು ಯೋಜನೆಯ ಭಾಗವಾಗಿ ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಹಿಂದಿಯ ಏಕಸ್ವಾಮ್ಯತೆಯನ್ನು ರಾಜ್ಯ ಸರಕಾರವು ನಿರಾಕರಿಸುತ್ತಾ ಬಂದಿದೆ. ಈ ಸಂಬಂಧವಾಗಿ ಕಳೆದ ವರ್ಷವೂ ರಾಜ್ಯ ಸರಕಾರ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ರಾಜ್ಯ ಸರಕಾರದ ಭಾಗವೇ ಆಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವಂತೂ ಮೊದಲಿನಿಂದಲೂ ಮೆಟ್ರೋದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಾ ಬಂದಿತ್ತು. ಆದರೆ ರಾಜ್ಯ ಸರಕಾರದ ವಿರೋಧದ ನಡುವೆಯೂ ಕೇಂದ್ರ ಸರಕಾರ ನಮ್ಮ ಮೆಟ್ರೋದಲ್ಲಿ ಹಿಂದಿಯನ್ನು ತೂರಿಸುವ ಸಲುವಾಗಿ ನೇರವಾಗಿ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದು ಕೇಂದ್ರ ಸರಕಾರದ ಭಾಷಾ ನೀತಿಯನ್ನು ಪಾಲಿಸುವಂತೆ ನಿರ್ದೇಶನ ಮಾಡುವ ದಾರ್ಷ್ಟ್ಯವನ್ನು ತೋರಿತ್ತು. ಬಿಎಂಆರ್‌ಸಿಎಲ್ ರಾಜ್ಯ ಸರಕಾರದ ನಿರ್ದೇಶನವನ್ನು ಕಡೆಗಣಿಸಿ ಕೇಂದ್ರದ ಅಣತಿಯಂತೆ ನಡೆದುಕೊಂಡಿದ್ದು ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ನಾಡಿನ, ಪ್ರಜ್ಞಾವಂತ ಕನ್ನಡಿಗರನೇಕರು ಈ ಕುರಿತು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಯಿತಲ್ಲದೆ ಕನ್ನಡ ಕಾರ್ಯಕರ್ತರು ಕಾನೂನನ್ನೂ ಲೆಕ್ಕಿಸದೇ ಮೆಟ್ರೋದಲ್ಲಿನ ಹಿಂದಿ ಫಲಕಗಳಿಗೆ ಮಸಿ ಬಳಿದರು. ‘ಮೆಟ್ರೋ ಹಿಂದಿ ಬೇಡ’ ಎನ್ನುವ ಹಾಶ್‌ಟ್ಯಾಗ್‌ನಡಿ ನಡೆಸಿದ ಸಾಮಾಜಿಕ ಮಾಧ್ಯಮದ ಆಂದೋಲನ ಸಂಚಲನ ಸೃಷ್ಟಿಸಿ ರಾಷ್ಟ್ರಮಟ್ಟದಲ್ಲಿಯೂ ಚರ್ಚೆಯಾಯಿತು. ಅಂತಿಮವಾಗಿ ರಾಜ್ಯ ಸರಕಾರವೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಕೇಂದ್ರದ ಆಡಳಿತ ಪಕ್ಷವಾದ ಬಿಜೆಪಿಯ ಸಂಸದರ ನಿಲುವೇನಾಗಿತ್ತೆಂಬುದು ಮುಖ್ಯವಾಗುತ್ತದೆ. ವಿವಾದ ಆರಂಭಗೊಂಡ ಸಂದರ್ಭದಲ್ಲಿ ಬೆಂಗಳೂರಿನ ಮೂವರು ಎಂಪಿಗಳ ಪೈಕಿ ಅನಂತಕುಮಾರ್ ಮತ್ತು ಸದಾನಂದ ಗೌಡ ಅವರು ಮೂರನೆ ಭಾಷೆಯಾಗಿ ಹಿಂದಿ ಇರಲಿ ಬಿಡಿ ಎಂದೇ ಹೇಳಿದ್ದರು. ಬಿಜೆಪಿಯ ಮತ್ತೊಬ್ಬ ಮುಖಂಡ ಸಿ.ಟಿ. ರವಿ ಸಹ ಇದೇ ಥರದ ಹೇಳಿಕೆ ನೀಡಿದ್ದರು. ಅವರು ತಳೆದ ನಿಲುವಿನಿಂದಾಗಿ ತಮ್ಮ ಬೆಂಬಲಿಗರಿಂದಲೇ ತೀವ್ರ ಸ್ವರೂಪದ ವಿರೋಧವನ್ನು ಎದುರಿಸಬೇಕಾಯಿತು. ಈ ವಿಷಯ ಸಾರ್ವಜನಿಕವಾಗಿ ತಮಗೆ ಮುಖಭಂಗಕ್ಕೆ ಕಾರಣವಾಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ತಟಸ್ಥರಾದರು. ಇದು ಕರ್ನಾಟಕವನ್ನು ಬಿಜೆಪಿ ಯಾವ ನಿಟ್ಟಿನಲ್ಲಿ ಕೊಂಡೊಯ್ಯಲು ಬಯಸುತ್ತಿದೆ ಹಾಗೂ ಪ್ರಯತ್ನಿಸುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ.

ವಾಸ್ತವದಲ್ಲಿ ಹಿಂದಿ ಹೇರಿಕೆಯನ್ನು ಸುಗಮಗೊಳಿಸುವ ಇನ್ನೂ ಹಲವು ವಿಧಾನಗಳನ್ನು ಅಲ್ಪಸಂಖ್ಯಾತ ಹಿಂದಿ ಯಜಮಾನರು ಬಹಳ ಹಿಂದಿನಿಂದಲೂ ಕಂಡುಕೊಂಡಿದ್ದಾರೆ. ಸಾಕಷ್ಟು ಸರಕಾರೀ ಅನುದಾನದೊಂದಿಗೆ ಹಿಂದಿ ಪ್ರಚಾರ ಪರಿಷತ್ ಸಹ ದಶಕಗಳಿಂದ ಅಸ್ತಿತ್ವದಲ್ಲಿದೆ. ಕೇಂದ್ರ ಸರಕಾರದ ಬಹುತೇಕ ಇಲಾಖೆಗಳಲ್ಲಿ ದಿನಕ್ಕೊಂದು ಹಿಂದಿ ಪದ ಬರೆದು ಪ್ರಚುರಗೊಳಿಸಲಾಗತ್ತದೆ. ಹಿಂದಿ ದಿವಸ್ ಹಿಂದಿ ಸಪ್ತಾಹ ಹಿಂದಿ ಪಕ್ವಾಡಾ ಹೆಸರಿನ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇದು ಕೆವಲ ಮೆಟ್ರೋದಲ್ಲಿನ ಒಂದು ಸಮಸ್ಯೆಯಲ್ಲ ಕೇಂದ್ರ ಸ್ವಾಮ್ಯದ ರೈಲ್ವೆ, ಟೆಲಿಕಾಂ, ಸಾರ್ವಜನಿಕ ಉದ್ದಿಮೆಗಳು, ಕೇಂದ್ರ ಇಲಾಖೆಗಳು, ಬ್ಯಾಂಕುಗಳು, ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿಯೂ ಹಿಂದಿಯದೇ ಪ್ರಾಬಲ್ಯವಿರುವುದನ್ನು ಗಮನಿಸಬಹುದಾಗಿದೆ. ಕನ್ನಡದ ಜಾಗದಲ್ಲಿ ಹಿಂದಿಯನ್ನು ಹೇರಿಕೆ ಮಾಡುವುದರಲ್ಲಿ ಈ ಉತ್ತರ ಭಾರತದ ಉದ್ಯಮಿಗಳ ಒತ್ತಾಸೆ ಪ್ರಮುಖವಾದದ್ದು ಎಂಬುದನ್ನು ಮರೆಯುವಂತಿಲ್ಲ.

1950ರಲ್ಲಿ ಭಾರತವು ಪ್ರಜಾಸತ್ತೆಯ ಆಡಳಿತವನ್ನು ಸ್ವೀಕಾರ ಮಾಡಿದ ನಂತರದಲ್ಲಿ ಆಡಳಿತಾತ್ಮಕವಾಗಿ ಇಟ್ಟಿದ್ದ ಮತ್ತೊಂದು ಮಹತ್ತರವಾದ ಹೆಜ್ಜೆಯೆಂದರೆ 1956ರಲ್ಲಿ ಭಾಷಾವಾರು ಪ್ರಾಂತ ವಿಂಗಡಣೆ ಮಾಡಿದ್ದು.

ಇದು ದೇಶದ ಇತಿಹಾಸದಲ್ಲಿ ಸಾಂಸ್ಕೃತಿಕ ವಿಕೇಂದ್ರೀಕರಣದ ನಿಟ್ಟಿನಲ್ಲಿ ಇಟ್ಟ ಗಟ್ಟಿ ಹೆಜ್ಜೆಯಾಗಿತ್ತು. ಆದರೆ ಸಾಂಸ್ಕೃತಿಕ ಯಜಮಾನರಿಗೆ ಇದು ಎಳ್ಳಷ್ಟೂ ಇಷ್ಟವಿಲ್ಲ ಎಂಬುದನ್ನು ನಾವು ನೋಡಬಹುದು. ಆದರೆ ಕನ್ನಡವೆಂದರೆ, ಕನ್ನಡಿಗರೆಂದರೆ ಸುಲಭದ ತುತ್ತಲ್ಲ ಎಂಬುದನ್ನು 1980ರ ದಶಕದಲ್ಲಿ ಕನ್ನಡಿಗರು ತೋರಿಸಿದ್ದಾರೆ. ಅಂದು ಸಂಸ್ಕತದ ಪ್ರಥಮ ಸ್ಥಾನವನ್ನು ಗಟ್ಟಿಗೊಳಿಸುವ ಒಳಸಂಚಿನಿಂದಲೇ ನೇಮಿಸಲ್ಪಟ್ಟಿದ್ದ ಗೋಕಾಕ್ ಸಮಿತಿ ಎಚ್ಚೆತ್ತ ಕನ್ನಡ ಪ್ರಜ್ಞೆಯೆದುರು ತಲೆಬಾಗಿ ಕನ್ನಡಕ್ಕೆ ಪ್ರಾಶಸ್ತ್ಯ ಒದಗಿಸುವ ವರದಿಯನ್ನೇ ಕೊಟ್ಟಿದ್ದು ಪ್ರಜಾಸತ್ತೆಗೆ, ಕನ್ನಡ ಪ್ರಜ್ಞೆಗೆ ದೊರೆತ ವಿಜಯವಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಹಿಂದೆಂದೂ ನೋಡದ ರೀತಿಯಲ್ಲಿ ರಾಜಕೀಯ ವ್ಯಕ್ತಿಗಳನ್ನು ನಿರ್ದಯದಿಂದ ದೂರವಿಟ್ಟು ಕೇವಲ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಬುದ್ಧಿಜೀವಿಗಳು, ಕನ್ನಡಪರ ಚಳವಳಿಗಾರರು ನೇತೃತ್ವ ವಹಿಸಿಕೊಂಡ ಜನ-ಪರವಾದ ಒಂದು ಸಾಂಸ್ಕೃತಿಕ ಚಳವಳಿ ರೂಪುಗೊಂಡು ನಾಡಿಗೆ ನಾಡೇ ಸಂಚಲನಕ್ಕೊಳಗಾಗಿತ್ತು. ಪರಿಣಾಮವಾಗಿ ಒಂದು ಸರಕಾರವೇ ಅಧಿಕಾರ ಕಳೆದುಕೊಳ್ಳಬೇಕಾಯಿತು. ನಂತರ ಬಂದ ಜನತಾ ಸರಕಾರ ಕನ್ನಡಕ್ಕೆ ಅಗ್ರಸ್ಥಾನ ಎಂದು ಹೇಳದೇ ಗತ್ಯಂತರವಿರಲಿಲ್ಲ.

       

   ಜವಹರಲಾಲ್ ನೆಹರು               ಎಚ್.ಡಿ. ದೇವೇಗೌಡ

ಬಹುಶಃ ಇಂದು ರಾಜಕೀಯವಾಗಿ, ಆರ್ಥಿಕವಾಗಿ, ಭಾಷಿಕವಾಗಿ ಕೇಂದ್ರ ಸರಕಾರ ಮತ್ತು ಅದನ್ನು ಮುನ್ನಡೆಸುತ್ತಿರುವ ಹಿಂದುತ್ವ ಸಿದ್ದಾಂತ ಕನ್ನಡಿಗರನ್ನು, ಕನ್ನಡವನ್ನು, ಕರ್ನಾಟಕವನ್ನು ಕಟ್ಟಿ ಹಾಕಲು ಅಣಿಯಾಗುತ್ತಿರುವುದನ್ನು ನೋಡಿದರೆ ಇತಿಹಾಸ ಮರುಕಳಿಸಬೇಕೆನಿಸುತ್ತದೆ. ಆದರೆ ಅದಕ್ಕೆ ಮೊದಲು ಹಿಂದೆಂದಿಗಿಂತ ಹೆಚ್ಚಿನ ರೀತಿಯಲ್ಲಿ ಕನ್ನಡವೆಂಬುದು ರಾಜಕೀಯ ವಿಷಯವಾಗಬೇಕಾಗಿದೆ, ಕನ್ನಡಿಗರೇ ಒಂದು ವೋಟ್ ಬ್ಯಾಂಕ್ ಆಗಬೇಕಾಗಿದೆ. ಬಗೆಹರಿಸಿಕೊಳ್ಳಬೇಕಾದ ಕನ್ನಡದ, ಕನ್ನಡಿಗರ ಹಳೆಯ ಸಮಸ್ಯೆಗಳ ಜೊತೆಯಲ್ಲಿ ಇದೀಗ ಕನ್ನಡ ಪ್ರಜ್ಞೆಯ ಮೇಲೆ ಶುರುವಾಗಿರುವ ಹೊಸ ದಾಳಿಯನ್ನು ಎದುರಿಸಲು ಕನ್ನಡ ದೇಶ ಮತ್ತೆ ಸಜ್ಜುಗೊಳ್ಳಬೇಕಾಗಿದೆ. ಸಂಯುಕ್ತ ಭಾರತದಲ್ಲಿ ಸ್ವಾವಲಂಬಿ, ಸ್ವತಂತ್ರ ಕರ್ನಾಟಕದ ಕನಸು ನನಸಾಗಲೇಬೇಕಾಗಿದೆ.

Writer - ಹರ್ಷಕುಮಾರ್ ಕುಗ್ವೆ

contributor

Editor - ಹರ್ಷಕುಮಾರ್ ಕುಗ್ವೆ

contributor

Similar News