ಎರಡು ದಿನಗಳ ಬ್ಯಾಟರಿ ಲೈಫ್‌ನ ನೋಕಿಯಾ 2 ಭಾರತದಲ್ಲಿ ಬಿಡುಗಡೆ

Update: 2017-11-01 13:13 GMT

ಎಚ್‌ಎಂಡಿ ಗೋಬಲ್ ತನ್ನ ಮೊದಲ ಆರಂಭಿಕ ಹಂತದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ 2ರ ಬಿಡುಗಡೆಯನ್ನು ಪ್ರಕಟಿಸಿದೆ. 99 ಯುರೋ ಬೆಲೆ ನಿಗದಿಗೊಳಿಸಲಾಗಿರುವ ನೋಕಿಯಾ 2 ಸುದೀರ್ಘ ಬ್ಯಾಟರಿ ಲೈಫ್‌ನ್ನು ಬಯಸುವ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ.

ನೋಕಿಯಾ 2 ದೊಡ್ಡ 4,100 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, ಎರಡು ದಿನಗಳ ಕಾಲ ಆರಾಮವಾಗಿ ನಡೆಯುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಕ್ವಾಲಕಾಮ್ ಸ್ನಾಪ್‌ಡ್ರಾಗನ್ 212 ಪ್ರಾಸೆಸರ್‌ನೊಂದಿಗೆ 1ಜಿಬಿ ರ್ಯಾಮ್ ಮತ್ತು 8ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಗೊರಿಲ್ಲಾ ಗ್ಲಾಸ್ 3ರ ರಕ್ಷಣೆ, 1280x720 ರೆಸೊಲ್ಯೂಷನ್ ಇರುವ 5 ಇಂಚ್ ಐಪಿಎಸ್ ಡಿಸ್‌ಪ್ಲೇ ಇದೆ. ಸಿರೀಸ್ 6,000 ಅಲ್ಯುಮಿನಿಯಂ ಬಳಸಿ ನೋಕಿಯಾ 2ನ್ನು ತಯಾರಿಸಲಾಗಿದ್ದು, ಪಾಲಿಕಾರ್ಬೊನೇಟ್ ಹಿಂಬದಿಯನ್ನು ಹೊಂದಿದೆ.

VOLTE 4G, ಫೋಟೊಗ್ರಫಿ ಪ್ರೇಮಿಗಳಿಗಾಗಿ ನೋಕಿಯಾ 2 ಫೋನ್ 8ಎಂಪಿ ಹಿಂಬದಿ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 5ಎಂಪಿ ಮುಂಬದಿ ಕ್ಯಾಮೆರಾ ಹೊಂದಿದೆ. ವೈಫೈ, ಬ್ಲೂ ಟೂತ್ ಮತ್ತು ಜಿಪಿಎಸ್ ಸಂಪರ್ಕ ಸೌಲಭ್ಯವಿದೆ. ಇತರ ವೈಶಿಷ್ಟಗಳಲ್ಲಿ ಡ್ಯುಯೆಲ್ ಸಿಮ್ ಸ್ಲಾಟ್, ಎಕ್ಸ್ಸ್‌ಪಾಂಡೇಬಲ್ ಸ್ಟೋರೇಜ್ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಸೇರಿವೆ.

ಇತರ ನೋಕಿಯಾ ಸ್ಮಾರ್ಟ್‌ಫೋನ್‌ಗಳಂತೆ ನೋಕಿಯಾ 2 ಕೂಡ ಆಂಡ್ರಾಯ್ಡ್  7.1 ಆವೃತ್ತಿಯನ್ನು ಹೊಂದಿದ್ದು, ಶೀಘ್ರ ಆಂಡ್ರಾಯ್ಡ್ 8ಕ್ಕೆ ಅಪ್ ಡೇಟ್ ಮಾಡುವ ಭರವಸೆಯನ್ನು ಕಂಪನಿಯು ನೀಡಿದೆ.

ನೋಕಿಯಾ 2 ನವೆಂಬರ್ ಮಧ್ಯಭಾಗದಲ್ಲಿ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ. ಮಾರಾಟ ದಿನಾಂಕಕ್ಕಿಂತ ಸ್ವಲ್ಪ ಮೊದಲು ಭಾರತದಲ್ಲಿ ಬೆಲೆಯನ್ನು ಪ್ರಕಟಿಸುವುದಾಗಿ ಕಂಪನಿಯು ತಿಳಿಸಿದೆ. ಈ ಫೋನ್ ಸುಮಾರು 7,000 ರೂ.ಗಳಿಗೆ ದೊರೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News