ನಮ್ಮ ಮಗಳು ಗೌರಿ

Update: 2017-11-02 18:55 GMT

"ಗೌರಿಯ ಎದುರಿಗೆ ಕೂಡಾ ಬದುಕಿಗಾಗಿ ಹಲವಾರು ದಾರಿಗಳಿದ್ದವು. ಅವಳು ಇಂಗ್ಲಿಷ್ ಪತ್ರಿಕೋದ್ಯಮದಲ್ಲಿಯೇ ಮುಂದುವರಿದಿದ್ದರೆ ಇಷ್ಟೊತ್ತಿಗೆ ಯಾವುದಾದರೂ ರಾಷ್ಟ್ರಮಟ್ಟದ ಪತ್ರಿಕೆಯ ಸಂಪಾದಕಿಯಾಗಿರುತ್ತಿದ್ದಳು. ತಿಂಗಳ ಕೊನೆಯಲ್ಲಿ ಸಹೋದ್ಯೋಗಿಗಳಿಗೆ ಸಂಬಳ ಕೊಡಲು ತನ್ನ ಇನ್ಶೂರನ್ಸ್ ಪಾಲಿಸಿಯ ದುಡ್ಡನ್ನು ಬಳಸಿಕೊಂಡು ಬರಿದಾದ ಬ್ಯಾಂಕ್ ಖಾತೆ ಬಿಟ್ಟುಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಗೌರಿ ಅಪ್ಪನ ದಾರಿಯನ್ನು ಆಯ್ದುಕೊಂಡಳು. ಅದು ಭಿನ್ನ ದಾರಿ. ಇದರಿಂದಾಗಿ ನಮಗಿಂತ ಬೇಗ ಸಾವನ್ನು ಎದುರುಗೊಂಡಳು. ಇದನ್ನು ನೆನಪುಮಾಡಿಕೊಂಡೇ ಅಮ್ಮ ಇಂದಿರಾ ಅವರು ಕಣ್ಣೀರು ಹಾಕಿದ್ದು."

ನನ್ನ ಮಗಳು ಗೌರಿಯನ್ನು ಇಂಜನಿಯರ್ ಮಾಡಬೇಕೆಂಬ ಆಸೆ ನನಗಿತ್ತು. ಆಕೆ ಹಟಮಾಡಿ ಪತ್ರಿಕೋದ್ಯಮ ಕಲಿತಳು.ಆಕೆ ಪತ್ರಕರ್ತೆಯಾಗದೆ ಇದ್ದಿದ್ದರೆ ಮಗಳನ್ನು ಕಳೆದುಕೊಳ್ಳುತ್ತಿರಲಿಲ್ಲವೇನೋ.’’

ಗೌರಿ ಹತ್ಯೆ ವಿರೋಧಿ ಸಮಾವೇಶದಲ್ಲಿ ಗೌರಿಯ ತಾಯಿ ಇಂದಿರಾ ಲಂಕೇಶ್ ಉಮ್ಮಳಿಸಿ ಬರುತ್ತಿರುವ ದು:ಖದಿಂದ ಹೇಳಿದಾಗ ಅಲ್ಲಿ ಸೇರಿದ್ದವರೆಲ್ಲ ಒಂದು ಕ್ಷಣ ಕಣ್ಣೀರಾಗಿದ್ದರು. ಗೌರಿಯ ಕುಟುಂಬ ಮಾತ್ರವಲ್ಲ, ಎಂ.ಎಂ.ಕಲಬುರ್ಗಿ, ದಾಭೋಲ್ಕರ್, ಪಾನ್ಸರೆಯವರ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ದಿಟ್ಟತನದಿಂದ ಎದುರಿಸುತ್ತಾ ಹತ್ಯೆಕೋರರ ಪತ್ತೆಗೆ ಹೋರಾಟ ನಡೆಸುತ್ತಿವೆ. ತಮ್ಮ ಪ್ರೀತಿಪಾತ್ರರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಬದ್ಧತೆಯನ್ನು ವ್ಯಕ್ತಪಡಿಸುತ್ತಿವೆ.ಅವರಿಗೊಂದು ಸಲಾಮ್.

ಆದರೆ ಇಂದಿರಾ ಅವರಂತೆ ಇವರೆಲ್ಲರ ಮನಸ್ಸಲ್ಲಿ ಇಂತಹದ್ದೊಂದು ವಿಷಾದ-ಪಶ್ಚಾತಾಪದ ನಿಟ್ಟುಸಿರು ಬರದೇ ಇದ್ದೀತೇ? ದಾಭೋಲ್ಕರ್, ಪಾನ್ಸರೆ ಅವರು ಮೂಢನಂಬಿಕೆ ಆಚರಣೆ ವಿರುದ್ಧ ಹೋರಾಟ ನಡೆಸದೆ ಇದ್ದಲ್ಲಿ, ಕಲಬುರ್ಗಿ ಅವರು ತಾನು ಹುಡುಕುತ್ತಿರುವುದು ಅಪ್ರಿಯ ಸತ್ಯವೆಂದು ಅರಿವಾಗಿ ಸಂಶೋಧನೆಯನ್ನು ಮುಂದುವರಿಸದೆ ಇದ್ದಿದ್ದರೆ, ಕೋಮುವಾದ ಮತ್ತು ಫ್ಯಾಶಿಸಂ ವಿರುದ್ಧ ತನ್ನ ಪತ್ರಿಕೆಯನ್ನು ಅಸ್ತ್ರವಾಗಿ ಗೌರಿ ಬಳಸದೆ ಇದ್ದಿದ್ದರೆ ಖಂಡಿತ ಈ ನಾಲ್ಕು ಮಂದಿ ನಮ್ಮ ಮುಂದೆ ಜೀವಂತವಾಗಿ ಇರುತ್ತಿದ್ದರೇನೋ? ಈ ಹಿನ್ನೆಲೆಯಲ್ಲಿ ಇವರ ಕುಟುಂಬದ ಸದಸ್ಯರ ಮನಸ್ಸಲ್ಲಿ ಇದೆಲ್ಲ ಯಾಕೆ ಬೇಕಿತ್ತು? ಎಂಬ ಪ್ರಶ್ನೆಯೊಂದು ಹಾದು ಹೋದರೂ ಅದನ್ನು ತಪ್ಪು ಎಂದು ಹೇಳಲಾದೀತೇ?

ಇಂತಹದ್ದೊಂದು ಅಭಿಪ್ರಾಯ ಸಾವಿಗೀಡಾದ ಕುಟುಂಬದ ಸದಸ್ಯರ ಮನಸ್ಸಲ್ಲಷ್ಟೇ ಮೂಡಿದರೆ ಅದು ಸಹಜ. ಆದರೆ ಈ ಬೆಳವಣಿಗೆಯನ್ನು ದೂರದಿಂದ ತಮ್ಮ ಕುಟುಂಬದ ಬೆಚ್ಚನೆಯ ಭಾವಬಂಧದಲ್ಲಿದ್ದು ನೋಡುವವರ ಮನಸ್ಸಲ್ಲಿಯೂ ಇಂತಹದ್ದೊಂದು ಅಭಿಪ್ರಾಯ ಮೂಡಿಬಿಟ್ಟರೆ? ಮೂಡನಂಬಿಕೆ, ಕಂದಾಚಾರ, ಕೋಮುವಾದ, ಜಾತೀಯತೆ, ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಹೋರಾಡುವವರ ಮನಸ್ಸಲ್ಲಿ ಇಂತಹದ್ದೊಂದು ಅಳುಕು ಕಾಣಿಸಿಕೊಂಡರೆ? ನಮ್ಮ ಮಕ್ಕಳು ಸಾಹಿತ್ಯ, ಸಂಶೋಧನೆ, ಸಮಾಜಸೇವೆ, ಹೋರಾಟ ಇದರಿಂದ ದೂರವಿದ್ದಷ್ಟು ಸುರಕ್ಷಿತವಾಗಿರುತ್ತಾರೆ ಎಂದು ತಂದೆ-ತಾಯಿಗಳು ನಿರ್ಧಾರಕ್ಕೆ ಬಂದರೆ? ಮುಂದೇನು? ಗೌರಿ ಹತ್ಯೆಯ ರಾತ್ರಿ, ಬದುಕಿದ್ದಾಗ ಆಕೆಯ ಜತೆಗಿದ್ದವರ ಮನೆಗಳಿಂದ ಬಂದಿದ್ದ ಆತಂಕದ ಪೋನ್ ಕರೆಗಳು ಏನನ್ನು ಹೇಳುತ್ತಿವೆ?

ಪತ್ರಿಕೋದ್ಯಮ ಓದುತ್ತಿರುವ ಕೆಲವು ವಿದ್ಯಾರ್ಥಿಗಳು ಇದೇ ರೀತಿಯ ಆತಂಕವನ್ನು ನನ್ನೊಡನೆ ವ್ಯಕ್ತಪಡಿಸಿದಾಗ ತಕ್ಷಣ ಉತ್ತರಿಸಲಾಗದೆ ಮೂಕನಾಗಿದ್ದೆ. ನಡಿ ಮುಂದೆ ಎಂದು ಯುವ ಹೋರಾಟಗಾರರ ಬೆನ್ನು ತಟ್ಟುವಾಗ ಯಾಕೋ ಕೈಗಳು ನಡುಗುತ್ತಿದೆ. ನಿನ್ನ ಸ್ವಂತ ಮಕ್ಕಳಾಗಿದ್ದರೆ ಇದೇ ರೀತಿ ಬೆನ್ನು ತಟ್ಟುತ್ತಿದ್ದೀಯಾ? ಎಂದು ಯಾರೋ ಬೆನ್ನ ಹಿಂದೆ ಪ್ರಶ್ನಿಸಿ ಅಣಕಿಸಿದಂತಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಕರಿಯನೆಂಬ ಕಾರಣಕ್ಕಾಗಿ ಗಾಂಧೀಜಿಯನ್ನು ರೈಲು ಬೋಗಿಯಿಂದು ಹೊರಗೆಸೆದು ಸಾರ್ವಜನಿಕವಾಗಿ ಅವಮಾನಿಸಿದಾಗ, ಅವರು ಧೂಳು ಕೊಡವಿಕೊಂಡು ಎದ್ದು ಕೈತುಂಬಾ ಸಂಪಾದನೆ ಇರುವ ವಕೀಲಿ ವತ್ತಿಯಲ್ಲಿಯೇ ಮುಂದುವರಿದಿದ್ದರೆ ಖಂಡಿತ ಗೋಡ್ಸೆಯ ಕೈಯಲ್ಲಿ ಹತರಾಗುತ್ತಿರಲಿಲ್ಲ. ಅವಮಾನವನ್ನೇ ತಿಂದುಂಡು ಬೆಳೆದ ಅಂಬೇಡ್ಕರ್, ಸಾಲುಸಾಲು ಪದವಿ ಹೇರಿಕೊಂಡು ಬಂದ ನಂತರವೂ ಬಾಡಿಗೆಗಿದ್ದ ಹೊಟೇಲ್ ಮಾಲಕ ದಲಿತನೆಂಬ ಕಾರಣಕ್ಕೆ ಸಾಮಾನು ಸಮೇತ ಅವರನ್ನು ಬೀದಿಗೆಸೆದಾಗ ಈ ದರಿದ್ರ ದೇಶದ ಸಹವಾಸವೇ ಸಾಕು, ನನ್ನವರು ಇಲ್ಲಿಯೇ ನರಳಿ ಸಾಯಲಿ ಎಂದು ವಿದೇಶಕ್ಕೆ ಹೋಗಿ ವಕೀಲರಾಗಿಯೋ, ಪ್ರಾಧ್ಯಾಪಕರಾಗಿಯೋ ಕೆಲಸಕ್ಕೆ ಸೇರಿಕೊಂಡಿದ್ದರೆ ಹಾಯಾಗಿ ಇರಬಹುದಿತ್ತು.

ಇವರು ಮಾತ್ರವಲ್ಲ ಜಗತ್ತಿನಾದ್ಯಂತ ಸ್ವಾತಂತ್ರಕ್ಕಾಗಿ, ನ್ಯಾಯಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ಪ್ರಾಣ ಕಳೆದುಕೊಳ್ಳುತ್ತಿರುವ ಲಕ್ಷಾಂತರ ಸಾಮಾನ್ಯ ಹೋರಾಟಗಾರರೂ ಸುತ್ತಮುತ್ತಲಿನ ವಿದ್ಯಮಾನಗಳ ಕಡೆ ನೋಡದೆ ಕಣ್ಣುಮುಚ್ಚಿಕೊಂಡಿದ್ದರೆ ಬದುಕುಳಿಯುತ್ತಿದ್ದರೇನೋ?

 ಆದರೆ ಗಾಂಧೀಜಿ ವಕೀಲಿ ವತ್ತಿಗೆ ಮರಳಿದ್ದರೆ ಅಷ್ಟುಬೇಗ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಿ ದೊರೆಯುತ್ತಿತ್ತೇ? ಸ್ವಾತಂತ್ರ ಸಿಕ್ಕಿದ್ದರೂ ಅದು ಈಗಿನ ರೀತಿಯಲ್ಲಿ ಪ್ರಾಪ್ತಿಯಾಗುತ್ತಿತ್ತೇ? ಅಂಬೇಡ್ಕರ್ ದೇಶ ತೊರೆದು ಹೋಗಿದ್ದರೆ ಇಂದಿನ ಸ್ವಾತಂತ್ರವನ್ನಾದರೂ ನಾವು ಅನುಭವಿಸಲು ಸಾಧ್ಯ ಇರುವ ಸಂವಿಧಾನ ನಮಗೆ ಸಿಗುತ್ತಿತ್ತೇ? ಈ ರೀತಿಯ ಪ್ರಶ್ನೆಯನ್ನು ಬುದ್ಧ, ಬಸವನ ಕಾಲದಿಂದ ಪ್ರಾರಂಭಿಸಿ, ಗೌರಿ ಹತ್ಯೆಯ ನಂತರ ಇನ್ನಷ್ಟು ಕಟಿಬದ್ಧತೆಯಿಂದ ಅವರು ಸಾಗಿಬಂದಿದ್ದ ದಾರಿಯಲ್ಲಿಯೇ ಮುನ್ನಡೆಯುತ್ತೇವೆ ಎಂಬ ನಿರ್ಧಾರಕ್ಕೆ ಬಂದಿರುವ ಹೋರಾಟಗಾರರನ್ನೆಲ್ಲ ಕೇಳುತ್ತಾ ಹೋಗಬಹುದು.ಈ ಕಾರಣಕ್ಕಾಗಿ ಗೌರಿ, ಕಲಬುರ್ಗಿ, ದಾಭೋಲ್ಕರ್, ಪಾನ್ಸರೆಯವರ ಹತ್ಯೆ ನಮ್ಮನ್ನು ವಿಚಲಿತಗೊಳಿಸಿದೆ.

ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ 65 ಭಾಗ 35 ವರ್ಷದೊಳಗಿರುವ ಯುವಜನರಿದ್ದಾರೆ. ಅನಂತಮೂರ್ತಿ, ಕಲಬುರ್ಗಿ, ಗೌರಿಯವರ ಸಾವನ್ನು ಸಂಭ್ರಮಿಸಿದ ಬಹುತೇಕ ಮಂದಿ ಇದೇ ವಯೋಮಾನಕ್ಕೆ ಸೇರಿದ ಶಿಕ್ಷಿತರು. ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಮಾಜ ವಿಜ್ಞಾನದ ಬಗೆಗಿನ ಇವರ ಜ್ಞಾನ ಬಹಳ ಸೀಮಿತವಾದುದು. ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ ನಿರಾಧಾರವಾದ ಸಂದೇಶಗಳೇ ಇವರ ಮಾಹಿತಿ ಕಣಜದ ಮೂಲಗಳು.

ಯುವಜನರಲ್ಲಿ ಹೆಚ್ಚಿನವರು ಕೊನೆಯ ಬಾರಿ ಸಾಹಿತ್ಯ, ಸಂಸ್ಕೃತಿ, ಇತಿಹಾಸವನ್ನು ಓದಿದ್ದು ಹತ್ತನೆ ತರಗತಿಯಲ್ಲಿ. ಅದರ ನಂತರ ಏನಿದ್ದರೂ ಪಠ್ಯಪುಸ್ತಕಗಳ ಬದನೆಕಾಯಿ ಬಾಯಿ ಪಾಠ, ಸಿಇಟಿ, ಜೆಇಟಿಗಳ ತಯಾರಿಯಲ್ಲಿಯೇ ಮುಳುಗಿದವರು.ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಬ್ಯಾಂಕರ್ ಮಾಡಬೇಕೆಂಬ ಕನಸನ್ನು ಮಕ್ಕಳು ಹುಟ್ಟುವ ಮೊದಲೇ ನಿರ್ಧರಿಸಿಬಿಟ್ಟಿರುವ ತಂದೆತಾಯಿಗಳೂ ಸಾಹಿತ್ಯ, ಸಂಗೀತ, ಕಲೆ, ಕವನ, ಭಾಷಣ, ನಟನೆ ಎಂದಾಕ್ಷಣ ಸಿಡಿಮಿಡಿಗೊಳ್ಳುತ್ತಾರೆ ನನ್ನ ಮಗು ಚೆನ್ನಾಗಿ ಡಾನ್ಸ್ ಮಾಡುತ್ತದೆ, ಹಾಡು ಹಾಡುತ್ತದೆ, ಚಿತ್ರಬಿಡಿಸುತ್ತದೆ, ಕವನ ಬರೆಯುತ್ತಿದೆ, ಭಾಷಣ ಮಾಡುತ್ತದೆ ಎಂದು ಕಂಡಕಂಡವರ ಮುಂದೆ ಕೊಂಡಾ ಡುವ ಹೆತ್ತವರು ಆ ಮಕ್ಕಳು ಹತ್ತನೆ ತರಗತಿಗೆ ಕಾಲಿಟ್ಟೊಡನೆ ಸಾಹಿತ್ಯ, ಸಂಗೀತ, ಕಲೆ, ಕವನ, ಭಾಷಣ, ನಟನೆ ಎಂದಾಕ್ಷಣ ಸಿಡಿಮಿಡಿಗೊಳ್ಳತೊಡಗುತ್ತಾರೆ. ನೀನು ಅದನ್ನೆಲ್ಲ ಮಾಡಿ ದೇಶ ಉದ್ಧಾರ ಮಾಡಿದ್ದು ಸಾಕು ಮೊದಲು ಪಿಯುಸಿ, ಸಿಇಟಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ತಗೋ ಎಂದು ಕಾಲೇಜಿಗೆ ಕಟ್ಟುವ ಶುಲ್ಕ-ವಂತಿಗೆಗಾಗಿ ಹಣ ಜೋಡಿಸತೊಡಗುತ್ತಾರೆ.

ಇಂತಹ ತಂದೆತಾಯಿಗಳಿಗೆ ಮಕ್ಕಳ ಕನಸುಗಳನ್ನು ಮುರುಟಿ ಹಾಕಲು, ತಮ್ಮ ಬಯಕೆಗೆ ತಕ್ಕಂತೆ ಬೆಳೆಯುವಂತೆ ಮಾಡಲು ಗೌರಿ, ಕಲಬುರ್ಗಿ, ದಾಭೋಲ್ಕರ್, ಪಾನ್ಸರೆಯವರ ಹತ್ಯೆಯ ಪ್ರಕರಣಗಳು ಹೊಸ ಸಮರ್ಥನೆಗಳಾಗಿ ನೆರವಾಗಬಹುದು. ಬಹುಶಃ ಹತ್ಯಾಕೋರರ ಕತ್ಯದ ಹಿಂದಿನ ಉದ್ದೇಶವೂ ಇಂತಹದ್ದೊಂದು ಭೀತಿಯನ್ನು ಸಮಾಜದಲ್ಲಿ ಬಿತ್ತುವುದೇ ಆಗಿರಬಹುದು.ಇದು ಈ ಹತ್ಯಾ ಸಂಸ್ಕೃತಿಯ ದುಷ್ಪರಿಣಾಮದ ಮುಖಗಳು.

ನಮ್ಮ ದೇಶ, ಭಾಷೆ, ಸಾಹಿತ್ಯ ಪ್ರೇಮವೆಲ್ಲವೂ ಪಕ್ಕದ ಮನೆಯಲ್ಲಿರಬೇಕು ಎಂದು ಬಯಸುವವರು ನಾವು.ಗಡಿಯಲ್ಲಿ ಹೋರಾಡುತ್ತಿರುವ ಸೈನಿಕರ ಬಗ್ಗೆ ಅಭಿಮಾನದ ಮಳೆಗರೆಯುವವರಲ್ಲಿ ಎಷ್ಟು ಮಂದಿ ತಮ್ಮ ಮಕ್ಕಳು ಸೇನೆ ಸೇರಲು ಬಯಸಿದರೆ ಕಳಿಸಿಕೊಡುವವರಿದ್ದಾರೆ? ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಕೊಂಡಾಡುತ್ತೇವೆ, ಆದರೆ ಭ್ರಷ್ಟರ ಎದುರು ತುಟಿಪಿಟಿಕಿನ್ನದೆ ಕೇಳಿದಷ್ಟು ಕೊಟ್ಟು ಸುಮ್ಮನಾಗುತ್ತೇವೆ.ಕೋಮುವಾದಿಗಳನ್ನು ಖಂಡಿಸುತ್ತೇವೆ, ಅವರ ವಿರುದ್ಧ ಬೀದಿಗಿಳಿಯುವುದಿಲ್ಲ. ಅಪಘಾತಕ್ಕೀಡಾಗಿ ನರಳುತ್ತಿರುವವನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡುವುದಿಲ್ಲ, ಮೊಬೈಲ್‌ನಲ್ಲಿ ಆತನ ಫೋಟೊ ತೆಗೆಯುತ್ತೇವೆ. ನಮ್ಮ ಜವಾಬ್ದಾರಿಯನ್ನು ಪಕ್ಕದವರ ಹೆಗಲ ಮೇಲೆ ಹಾಕಿ ನಿರಾಳವಾಗಿರುತ್ತೇವೆ.

ಒಂದು ಜಾಗತ ಸಮಾಜದಲ್ಲಿ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ ಮತ್ತು ಅದರ ಮುಖ್ಯ ಕೊರಳಾಗಿರುವ ಮಾಧ್ಯಮ ಜನಪರವಾಗಿ ಕೆಲಸಮಾಡಲು ಸಾಧ್ಯ. ಹೌದು ಬಡತನ, ಜಾತಿ, ಲಿಂಗತಾರತಮ್ಯಗಳಂತಹ ಪ್ರಶ್ನೆಗಳು ಎದುರಾದಾಗ ನಮ್ಮ ಕಣ್ಣೆದುರಿನ ಸಮಾಜ ಇನ್ನೂ ಅಸೂಕ್ಷ್ಮವಾಗಿ ಉಳಿದುಬಿಟ್ಟಿದೆ ಎಂದು ಅನಿಸುತ್ತಿರುವುದು ನಿಜ. ಒಂದು ಕಾಲದಲ್ಲಿ ಇಂತಹ ಮನುಷ್ಯ ವಿರೋಧಿ ನಡವಳಿಕೆಯಲ್ಲಿ ತೊಡಗಿಸಿಕೊಂಡವರು ಹೆಚ್ಚು ಶ್ರೀಮಂತರಾಗಿರಲಿಲ್ಲ,ಬಹುಪಾಲು ಅಶಿಕ್ಷಿತರೂ ಆಗಿದ್ದರು.ಅವರಿಗೆ ಹೊರಜಗತ್ತಿನ ಸಂಪರ್ಕ ಹೆಚ್ಚಿರಲಿಲ್ಲ. ಬಹುಮುಖ್ಯವಾಗಿ ಸರಿ-ತಪ್ಪುಗಳ ಲೆಕ್ಕಾಚಾರಕ್ಕೆ ಅಜ್ಜ ನೆಟ್ಟ ಆಲದ ಮರಕ್ಕೆ ಜೋತುಬಿದ್ದವರಾಗಿದ್ದರು.

ಅಂಗೈಯಲ್ಲಿಯೇ ಇದೆಯೇನೋ ಎನಿಸುವಷ್ಟು ಜಗತ್ತು ಸಣ್ಣದಾಗಿದೆ, ಸಂಪರ್ಕದ ಜಾಲ ವಿಸ್ತಾರವಾಗಿದೆ, ಶಿಕ್ಷಿತರ ಸಂಖ್ಯೆ ಹೆಚ್ಚಿದೆ. ಬದಲಾದ ಕಾಲದಲ್ಲಿ ಶೋಷಕ ವರ್ಗದಲ್ಲಿ ಬಡವರು ಕಡಿಮೆ,ಅಶಿಕ್ಷಿತರು ಇಲ್ಲವೇ ಇಲ್ಲವೆನ್ನಷ್ಟು ಕಡಿಮೆ. ಅವರೆಲ್ಲ ಹೆಚ್ಚು ಸ್ಥಿತಿವಂತರು ಮತ್ತು ವಿದ್ಯಾವಂತರು. ಜ್ಞಾನದ ಬೆಳಕು ಅವರನ್ನು ಆತ್ಮಾವಲೋಕನಕ್ಕೆ ಹಚ್ಚಬೇಕಾಗಿತ್ತು, ಸರಿ-ತಪ್ಪುಗಳ ಹೊಯ್ದುಟದಲ್ಲಿ ಶಿಕ್ಷಣ ಅವರ ಕೈಹಿಡಿದು ಸರಿಯಾದ ಕಡೆ ಕೊಂಡೊಯ್ದು ನಿಲ್ಲಿಸಬೇಕಾಗಿತ್ತು,ಅವರ ಹೃದಯ ಇನ್ನಷ್ಟು ವಿಶಾಲವಾಗಬೇಕಾಗಿತ್ತು. ಮನಸ್ಸಿನೊಳಗಿನ ಕಹಿ ಮಾಯವಾಗಬೇಕಾಗಿತ್ತು. ಇವೆಲ್ಲವೂ ಅವರೊಳಗೆ ಪಶ್ಚಾತಾಪದ ಕಿಡಿ ಹಚ್ಚಬೇಕಿತ್ತು.ಅವರಲ್ಲೊಬ್ಬ ಬುದ್ದ, ಬಸವಣ್ಣ, ಗಾಂಧೀಜಿ, ಹುಟ್ಟಬೇಕಾಗಿತ್ತು. ಹೋಗ್ಲಿ ಬಿಡಿ ಕನಿಷ್ಠ ಕುದ್ಮಲ್ ರಂಗರಾವ್ ಅವರಂತಹವರಾದರೂ ಎದ್ದು ಬರಬೇಕಿತ್ತು.

ಗೌರಿಯ ಎದುರಿಗೆ ಕೂಡಾ ಬದುಕಿಗಾಗಿ ಹಲವಾರು ದಾರಿಗಳಿದ್ದವು. ಅವಳು ಇಂಗ್ಲಿಷ್ ಪತ್ರಿಕೋದ್ಯಮದಲ್ಲಿಯೇ ಮುಂದುವರಿದಿದ್ದರೆ ಇಷ್ಟೊತ್ತಿಗೆ ಯಾವುದಾದರೂ ರಾಷ್ಟ್ರಮಟ್ಟದ ಪತ್ರಿಕೆಯ ಸಂಪಾದಕಿಯಾಗಿರುತ್ತಿದ್ದಳು. ತಿಂಗಳ ಕೊನೆಯಲ್ಲಿ ಸಹೋದ್ಯೋಗಿಗಳಿಗೆ ಸಂಬಳ ಕೊಡಲು ತನ್ನ ಇನ್ಶೂರನ್ಸ್ ಪಾಲಿಸಿಯ ದುಡ್ಡನ್ನು ಬಳಸಿಕೊಂಡು ಬರಿದಾದ ಬ್ಯಾಂಕ್ ಖಾತೆ ಬಿಟ್ಟುಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಗೌರಿ ಅಪ್ಪನ ದಾರಿಯನ್ನು ಆಯ್ದುಕೊಂಡಳು. ಅದು ಭಿನ್ನ ದಾರಿ. ಇದರಿಂದಾಗಿ ನಮಗಿಂತ ಬೇಗ ಸಾವನ್ನು ಎದುರುಗೊಂಡಳು. ಇದನ್ನು ನೆನಪುಮಾಡಿಕೊಂಡೇ ಅಮ್ಮ ಇಂದಿರಾ ಅವರು ಕಣ್ಣೀರು ಹಾಕಿದ್ದು.

ಗೌರಿ ಸಾವಿಗೆ ಇಡೀ ಜಗತ್ತಿನಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಭಾವುಕರಾಗಿದ್ದ ಇಂದಿರಾ ಅವರು ಮಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ. ಜತೆಯಲ್ಲಿಯೇ ಇದೇ ಜನ ಗೌರಿಯ ಪತ್ರಿಕೆಯನ್ನು ಕೊಂಡು ಓದಿದ್ದರೆ ಬದುಕಿದ್ದಷ್ಟೂ ದಿನವಾದರೂ ನೆಮ್ಮದಿಯಿಂದ ಇರುತ್ತಿದ್ದಳೇನೋ ಎಂದು ಆಗಾಗ ನಿಟ್ಟುಸಿರು ಬಿಡುತ್ತಾರೆ.

ಆ ಅಮ್ಮನ ನಿಟ್ಟುಸಿರಿನ ಕನ್ನಡಿಯಲ್ಲೊಮ್ಮೆ ನಾವೆಲ್ಲ ನಮ್ಮ ಮುಖಗಳನ್ನು ನೋಡುವುದು ಬೇಡವೇ? ನಡೆದದ್ದು ಕೇವಲ ಗೌರಿ ಲಂಕೇಶ್ ಎಂಬ ಹೆಣ್ಣುಮಗಳ ಹತ್ಯೆ ಅಲ್ಲ.ಇದು ಜಾಣಜಾಣೆಯರ ಕಣ್ಣು ತೆರೆಸಲೆಂದೇ ಹುಟ್ಟಿಕೊಂಡ ಪಿ.ಲಂಕೇಶ್ ಹುಟ್ಟು ಹಾಕಿದ್ದ ಮಾಧ್ಯಮ ಚಳವಳಿಯ ಹತ್ಯೆಯ ಪ್ರಯತ್ನವೂ ಹೌದು.

ತಂದೆಯ ಸಾವಿನ ನಂತರ ಅವರ ಕುರ್ಚಿಯಲ್ಲಿ ಗೌರಿ ಕೂತಾಗ ದೇಶದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ ಮಾತ್ರವಲ್ಲ, ಮಾಧ್ಯಮ ಕ್ಷೇತ್ರ ಕೂಡಾ ಜಾಗತೀಕರಣದ ಬಿರುಗಾಳಿಗೆ ಸಿಕ್ಕಿ ಅದರ ವತ್ತಿಪರತೆಯ ಬೇರುಗಳೆಲ್ಲಾ ಸಡಿಲಗೊಂಡು ಅದು ಕೂಡಾ ಎಳೆದ ಕಡೆ ಸಾಗುವ ಕೋಲೆ ಬಸವನಾಗಿ ಹೋಗಿತ್ತು. ಇನ್ನೊಂದೆಡೆ ಟಿವಿ ಚಾನೆಲ್‌ಗಳು ಮತ್ತು ಆನ್‌ಲೈನ್ ಮಾಧ್ಯಮಗಳ ಪ್ರವೇಶದಿಂದಾಗಿ ಮುದ್ರಣ ಮಾಧ್ಯಮ ಜಗತ್ತಿನಾದ್ಯಂತ ಓದುಗರಿಲ್ಲದೆ ಕ್ಷೀಣಿಸತೊಡಗಿದ್ದವು. ಇದರ ಪರಿಣಾಮವನ್ನು ಲಂಕೇಶ್ ಕೂಡಾ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ಎದುರಿಸಿದ್ದರು.

ಜಾಗತೀಕರಣದ ನಂತರದ ದಿನಗಳಲ್ಲಿ ಮಾಧ್ಯಮ ವೃತ್ತಿ, ಮಾಧ್ಯಮ ಉದ್ಯಮವಾಗಿ ತೀವ್ರಗತಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ.ಇದರಿಂದಾಗಿ ಮಾಧ್ಯಮಗಳ ಬದ್ಧತೆ-ಆದ್ಯತೆಗಳು ಕೂಡಾ ಬದಲಾಗತೊಡಗಿವೆ.ಅನಾರೋಗ್ಯಕರ ದರಸಮರದಿಂದಾಗಿ ಪತ್ರಿಕೆಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟಮಾಡುವುದು ಮತ್ತು ಈ ನಷ್ಟವನ್ನು ಸರಿದೂಗಿಸಲು ಜಾಹೀರಾತುಗಳನ್ನು ಅವಲಂಬಿಸುವುದು ಮಾಧ್ಯಮ ಮಾಲಕರಿಗೆ ಅನಿವಾರ್ಯವೆನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಪತ್ರಿಕೆಯ ಓದುಗರಿಗಿಂತ, ಅದರಲ್ಲಿನ ಜಾಹೀರಾತು ನೋಡಿ ಉತ್ಪನ್ನಗಳನ್ನು ಖರೀದಿಸುವ ಸಾಮರ್ಥ್ಯವುಳ್ಳ ಗ್ರಾಹಕರೇ ಮುಖ್ಯವಾಗುತ್ತಿದ್ದಾರೆ.

 ಓದುಗರ ಒಲವಿನ ತುತ್ತು ಉಂಡು ಬೆಳೆಯಬೇಕಾಗಿದ್ದ ಪತ್ರಿಕೆಗೆ ಅವರೇ ನಿಜವಾದ ಅರ್ಥದಲ್ಲಿ ಒಡೆಯರಾಗಬೇಕು. ಆದರೆ ವಾಸ್ತವ ಹಾಗಿಲ್ಲ. ಪತ್ರಿಕೆ ಬದುಕುಳಿದಿರುವುದು ಓದುಗರಿಂದಲ್ಲ, ಜಾಹೀರಾತುದಾರರಿಂದ. ಪತ್ರಿಕೆಯೊಂದು ಸಾಮಾಜಿಕ ಬದ್ಧತೆಗಳನ್ನು ಒಪ್ಪಿಕೊಂಡು ಜನಪರವಾಗಿರಬೇಕೆಂದು ಬಯಸುವುದಾದರೆ ಅದನ್ನು ಜಾಹೀರಾತುದಾರರ ಋಣಭಾರದಲ್ಲಿ ಬೀಳಲು ಬಿಡಬಾರದು,ಅದು ಓದುಗನ ಋಣದಲ್ಲಿರಬೇಕು. ಅದು ಸಾಧ್ಯವಾಗಬೇಕಾದರೆ ಪತ್ರಿಕೆಯ ಕನಿಷ್ಠ ಉತ್ಪಾದನಾ ವೆಚ್ಚವನ್ನು ಭರಿಸಲು ಓದುಗರು ಸಿದ್ದರಿರಬೇಕು.

ಚಿಂತನೆ ಮಾಡಬೇಕಾದ ಓದುಗರೇ ಒಂದೆಡೆ ಕಡಿಮೆ ಬೆಲೆಗೆ ಓದಲು ಸಿಗುವ ಪತ್ರಿಕೆಗಾಗಿ ಖುಷಿಪಡುತ್ತಾ,ಇನ್ನೊಂದೆಡೆ ಪುಟಪುಟಗಳಲ್ಲಿ ತುಂಬಿರುವ ಜಾಹೀರಾತಿಗಾಗಿ ಪತ್ರಿಕಾ ಮಾಲಕರಿಗೆ ಶಪಿಸುತ್ತಾ ಗೊಂದಲಕ್ಕೆ ಬಿದ್ದಿದ್ದಾರೆ. ಮಾಧ್ಯಮ ಮಾಲಕರು ಮತ್ತು ಓದುಗನನ್ನು ಹೊರಬರಲಾಗದಂತಹ ಇಂತಹ ಚಕ್ರವ್ಯೆಹದಲ್ಲಿ ಸಿಕ್ಕಿಸಿ ಹಾಕಿದ ಉದ್ಯಮಪತಿಗಳು ಮತ್ತು ಅವರ ಬೆಂಗಾವಲಿಗೆ ನಿಂತಿರುವ ಪ್ರಭುತ್ವದ ಮಾಟಗಾರರು ಗೆದ್ದ ಖುಷಿಯಲ್ಲಿದ್ದಾರೆ.ಅವರು ಜಾಣತನದಿಂದ ರಚಿಸಿರುವ ಚಕ್ರವ್ಯೆಹದಲ್ಲಿ ತನಗರಿವಿಲ್ಲದಂತೆಯೇ ಸಿಕ್ಕಿಹಾಕಿಕೊಂಡಿರುವ ಮಾಧ್ಯಮಮಾಲಕರು ಮತ್ತು ಓದುಗರು ಹೊರಬರಲು ದಾರಿಕಾಣದೆ ಪರಸ್ಪರ ದೂಷಿಸುತ್ತಾ ನರಳಾಡುತ್ತಿದ್ದಾರೆ.

ಗೌರಿ ಕೂಡಾ ಈ ಚಕ್ರವ್ಯೆಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದಳು. ಜಾಹೀರಾತು ಪಡೆಯದೆ ಓದುಗರನ್ನು ಮಾತ್ರ ನಂಬಿ ಪತ್ರಿಕೆ ನಡೆಸುವುದು ಅಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ಅಪ್ಪ ನೆಟ್ಟ ಮರಕ್ಕೆ ಜೋತುಬಿದ್ದ ಗೌರಿ ಜಾಹೀರಾತು ಇಲ್ಲದೆಯೇ ಪತ್ರಿಕೆ ನಡೆಸಬೇಕೆಂದು ತೀರ್ಮಾನಿಸಿದಾಗಲೇ ಅರ್ಧ ಸೋತುಹೋಗಿದ್ದಳು. ಪ್ರತಿವಾರ 1 ರೂಪಾಯಿ ಕೊಟ್ಟು ಪತ್ರಿಕೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತಿತ್ತು. ನೋಟುಗಳ ಅಮಾನ್ಯೀಕರಣದ ನಂತರ ಪತ್ರಿಕೆಯ ಪ್ರಸಾರ ಸಂಖ್ಯೆ ಇನ್ನಷ್ಟು ಕುಸಿಯತೊಡಗಿತ್ತು.

ಮಾಧ್ಯಮ ಕ್ಷೇತ್ರದೊಳಗಿನ ಇಂತಹದ್ದೊಂದು ಬದಲಾವಣೆಯನ್ನು ಒಳಗಿನಿಂದಲೇ ವಿರೋಧಿಸಲಾಗದ ಅಸಹಾಯಕ ಸ್ಥಿತಿಯೇ ದೇಶ-ವಿದೇಶಗಳ ಬಹಳಷ್ಟು ಪತ್ರಕರ್ತರು  Journalist-Activist ಆಗಿ ಬದಲಾಗುವಂತೆ ಮಾಡಿದೆ. ಪತ್ರಕರ್ತರು  'Objective' ಆಗಿರಬೇಕೆಂದು ಮಾಧ್ಯಮದ ಮೊದಲ ಪಾಠ ಹೇಳುತ್ತದೆ. ಆದರೆ ಈ 'Objective'ಯನ್ನು° ಹುಡುಕುವ ಪ್ರಯತ್ನವೇ ಒಮ್ಮೆಮ್ಮೆ ಪತ್ರಕರ್ತರನ್ನು ಸತ್ಯದಿಂದ ದೂರ ಕೊಂಡೊಯ್ಯುತ್ತಿದೆ ಎಂಬ ವ್ಯಾಖ್ಯಾನವೂ ಇದೆ.  ('It is the very persuit of objectivity that can sometime keeps us away from truth'-Colombia university Journalism review).

ಸತ್ಯದ ಹುಡುಕಾಟದಲ್ಲಿದ್ದ ಗೌರಿ ಬಹಳಷ್ಟು ಸಲ Journalistಗಿಂತಲೂ Activist ತರಹ ಕಾಣಿಸುತ್ತಿದ್ದದ್ದು ನಿಜ.ಇದನ್ನು ಎಂದೂ ನಿರಾಕರಿಸದೆ ಇದ್ದ ಗೌರಿ ತನ್ನನ್ನು Activist journalist ಎಂದೇ ಕರೆದು ಕೊಳ್ಳುತ್ತಿದ್ದಳು.

ನನ್ನ ವತ್ತಿ ಗುರುಗಳಾದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರು ಪಕ್ಷಪಾತಿ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಿದ್ದರು.ಸತ್ಯ, ಧರ್ಮ,ನ್ಯಾಯದ ಪ್ರಶ್ನೆ ಎದುರಾದಾಗ ಪತ್ರಕರ್ತರು ಪಕ್ಷಪಾತಿಗಳಾಗಿ ಇರಬೇಕಾಗುತ್ತದೆ ಎನ್ನುವುದು ಅವರ ವಾದವಾಗಿತ್ತು.

ಗೌರಿ ಅಂತಹ ಪಕ್ಷಪಾತಿ ಪತ್ರಿಕೋದ್ಯಮದ ಪರವಾಗಿದ್ದರು.ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್, ಆರೆಸ್ಸೆಸ್, ಬಾಬಾಬುಡನ್ ಗಿರಿ ವಿವಾದ, ನಕ್ಸಲಿಸಂ ರಾಘವೇಶ್ವರ ಸ್ವಾಮೀಜಿ ಮೇಲಿನ ಅತ್ಯಾಚಾರದ ಆರೋಪ ಇಂತಹ ಹಲವಾರು ವಿಷಯಗಳ ಬಗ್ಗೆ ಗೌರಿ ತನಗೆ ಸರಿಕಂಡ ವಿಷಯಗಳ ಪರವಾಗಿ ಗಟ್ಟಿಯಾಗಿ ನಿಂತು ಪತ್ರಕರ್ತೆಯ ಕರ್ತವ್ಯ ನಿರ್ವಹಿಸಿದ್ದಳು. ಯುದ್ಧ ಮಾಡಬೇಕಾದವರು ಒಬ್ಬೊಬ್ಬರಾಗಿ ಶಸ್ತ್ರತ್ಯಾಗ ಮಾಡುತ್ತಿರುವ ಪರಿಸ್ಥಿತಿಯಲ್ಲಿ ಗೌರಿ ವ್ಯವಸ್ಥೆಯ ಚಕ್ರವ್ಯೆಹದೊಳಗೆ ನುಗ್ಗಲು ಹೊರಟು ದಿನದಿಂದ ದಿನಕ್ಕೆ ಏಕಾಂಗಿಯಾಗುತ್ತಾ ಹೋಗಿದ್ದು ನಿಜ.

ಮಾಧ್ಯಮ ಕ್ಷೇತ್ರವೇ ಅತ್ಯಂತ ವೇಗವಾಗಿ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗೌರಿ ಜನಪರವಾಗಿ ನಿಂತು ತನ್ನ ಪತ್ರಿಕೆಯ ಮೂಲಕವೇ ಸಾಮಾಜಿಕ-ರಾಜಕೀಯ ಹೋರಾಟವನ್ನು ನಡೆಸುತ್ತಿದ್ದರು. ಸಂಪ್ರದಾಯಸ್ಥ ಪತ್ರಕರ್ತರಿಗೆ ಗೌರಿ ವತ್ತಿಯಲ್ಲಿ ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು, ಮುಖ್ಯವಾಹಿನಿಯ ಪತ್ರಿಕೆಗಳ ಓದುಗರಿಗೆ ಗೌರಿಯ ಈ ನಿಲುವು ಅತಿರೇಕದ್ದು ಎಂದು ಅನಿಸಿರಲೂಬಹುದು ಆದರೆ ಆಕೆಯ ಉದ್ದೇಶದ ಹಿಂದಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ನೈತಿಕತೆಯನ್ನು ಎಷ್ಟು ಮಂದಿ ಪತ್ರಕರ್ತರು ಉಳಿಸಿಕೊಂಡಿದ್ದಾರೆ?

ಲಂಕೇಶ್ ಕೂಡಾ ಉಳಿದವರು ತುಳಿದ ದಾರಿಯನ್ನು ಬಿಟ್ಟು ಏಕಾಂಗಿಯಾಗಿಯೇ ಕನ್ನಡ ಪತ್ರಿಕಾವತ್ತಿಗೆ ಹೊಸಭಾಷೆ-ಶೈಲಿಯನ್ನು ಕೊಟ್ಟವರು ಮತ್ತು ಪತ್ರಿಕೋದ್ಯಮದ ಸೂತ್ರಗಳನ್ನು ಬದಲಾಯಿಸುವ ಪ್ರಯತ್ನ ಮಾಡಿದವರು.ಜಾಹೀರಾತಿನ ಬಲ ಇಲ್ಲದೆ ಓದುಗರನ್ನು ನಂಬಿ ಪತ್ರಿಕೆ ಮಾಡಲು ಹೊರಡುವುದು ಅವರ ಕಾಲದಲ್ಲಿಯೂ ಜಾಣ ನಿರ್ಧಾರವಾಗಿರಲಿಲ್ಲ. ಆದರೆ ಆ ಕಾಲದಲ್ಲಿ ರೈತ,ದಲ�

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News