ಬಾಲ್ಯದ ಸಾವಿರದ ನೆನಪುಗಳು
ಸ್ಕೂಲಿನಲ್ಲಿ ಲೀಸರ್ರಿಗೆ ಬಿಟ್ಟಾಗ ಕಕ್ಕಸ್ಸಿಗೆ ಯಾರದ್ದೋ ಹೊಲಕ್ಕೆ ಗೆಳೆಯರೆಲ್ಲಾ ಹೋಗಿದ್ದೆವು. ದಾರಿಯಲ್ಲಿ ಒಂದು ಓತಿಕ್ಯಾತ ತಲೆ ಆಡಿಸುತ್ತಾ ಕಲ್ಲೊಂದರ ಮೇಲೆ ಕೂತಿತ್ತು. ನಾನು ಒಂದು ಕಲ್ಲು ತೆಗೆದುಕೊಂಡು ಹೊಡೆದ ತಕ್ಷಣ ಅದು ಒದ್ದಾಡುತ್ತಾ ಕೆಳಗೆ ಬಿತ್ತು. ಮತ್ತೊಂದು ಕಲ್ಲೇಟಿಗೆ ಅದು ಸತ್ತು ಬಿದ್ದಿತ್ತು. ಟಾಯ್ಲೆಟ್ ಮುಗಿಸಿ ಏಳುವಾಗ ನಾಲ್ಕಾಣಿಯ ಮೂರು ಕಾಯಿನ್‌ಗಳು ಒಂದರ ಮುಂದೆ ಒಂದು ಬಿದ್ದಿದ್ದವು. ‘ಓತಿಕ್ಯಾತ ಹೊಡೆದರೆ ಕಾಸು ಸಿಗುತ್ತೆ’ ಅನ್ನುವ ನಮ್ಮ ನಂಬಿಕೆ ಬಲವಾಗಿತ್ತು. ಅಲ್ಲಿಂದ ಶುರುವಾಯಿತು ನಮ್ಮ ಬೇಟೆ.
ಯಾರಾದರೂ ತಾವು ಹುಟ್ಟಿ ಬೆಳೆದ ಊರಿನ- ಬಾಲ್ಯದ ಅನುಭವಗಳನ್ನು ಬರೆಯುತ್ತಲೋ, ಮಾತಾಡುತ್ತಲೋ ಮಧುರ ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆ ನನಗೆ ಸಿಟ್ಟು ಬರುತ್ತ್ತದೆ. ‘ನಾನು ಈಗಲೂ ಈಕರಿಸಿಕೊಳ್ಳುತ್ತೇನೆ ಕನಸಿನಲ್ಲೂ; ನೆನಪುಗಳು ಸಿಹಿ ಎಂದವರು ಬೆಚ್ಚಿ ತಾಯತ ಕಟ್ಟಿಸಿಕೊಳ್ಳುವ ಹಾಗೆ..’ ಇದು ನನ್ನ ಕವಿತೆಯೊಂದರ ಸಾಲು. ಜಾತಿಯ ಅಸಹ್ಯದಲ್ಲಿ ಮಿಂದು ಹೆಜ್ಜೆ ಹೆಜ್ಜೆಗೂ ಅಪಮಾನ, ನಿಂದೆಗಳನ್ನು ಅನುಭವಿಸುವ ಕೋಟ್ಯಂತರ ಮನಸ್ಸುಗಳು ಇವತ್ತು ನನ್ನ ಹಾಗೆ ವಿಸ್ಮತಿಯನ್ನು ಮೈಮೇಲೆಳೆದುಕೊಂಡು ಬದುಕುವ ಅನಿವಾರ್ಯತೆಗೆ ಪಕ್ಕಾಗಿರಬಹುದು. ಡಿ.ಆರ್.ನಾಗರಾಜ್ ಹೇಳಿದಹಾಗೆ ‘ದಲಿತರಿಗೆ ನೆನಪುಗಳೇ ಗತಿ’ ಅನ್ನುವ ಮಾತು ನಿಜವಾದ್ದರಿಂದ ಈ ಬರಹ ಅಂತಹ ನೆನಪುಗಳಿಗೇ ಒಂದು ಗತಿ ಕಾಣಿಸುವ ಪ್ರಯತ್ನ.
ಏಳನೆ ತರಗತಿಯಲ್ಲಿ ಓದುತ್ತಿದ್ದೆ. ಅಪ್ಪ ಶಾಲಾ ಮೇಷ್ಟ್ರುಗಳಿಗೆ ಕುರುಕ್ಷೇತ್ರ ನಾಟಕ ಕಲಿಸುತ್ತಿದ್ದುದರಿಂದ ಎಲ್ಲಾ ಶಿಕ್ಷಕರಿಗೂ ಡೈಲಾಗುಗಳನ್ನು ಬರೆದುಕೊಡುವ ಕೆಲಸ ನನ್ನ ತಲೆಯ ಮೇಲೇ ಬಿದ್ದಿತ್ತು. ಅರ್ಜುನ ಮತ್ತು ದುಶ್ಯಾಸನರ ಹಾಡುಗಳನ್ನು ನಾನು ಚೆನ್ನಾಗಿ ಹಾಡುತ್ತಿದ್ದುದರಿಂದ ಆಗಾಗ ಎಲ್ಲರ ಮುಂದೆ ಹಾಡಬೇಕಾಗಿತ್ತು. ಈ ಕಾರಣಕ್ಕೆ ಶಾಲೆಯಲ್ಲಿ ಒಂದಿಷ್ಟು ಮರ್ಯಾದೆ ಇತ್ತು. ನಮ್ಮೂರಿಗೆ ಎಲ್ಲಿಂದಲೋ ಬಂದಿದ್ದ ಫಾರೆಸ್ಟ್ ಆಫೀಸರ್ ಶೆಟ್ಟಿಯವರ ಮಗಳು ಅರುಣಾ ಕಾಯಿಲೆ ಬಂದು ಆರನೆ ತರಗತಿಯ ಪರೀಕ್ಷೆಯನ್ನು ಬರೆಯಲಾಗದ್ದರಿಂದ ನಾನು ಬರೆದುಕೊಟ್ಟಿದ್ದೆ. ಆ ಕಾರಣಕ್ಕೋ ಏನೋ ಅವಳಿಗೆ ನನ್ನ ಮೇಲೆ ವಿಶೇಷ ಕಾಳಜಿ. ಲಿಂಗಾಯತ ಹುಡುಗ, ಹುಡುಗಿಯರು ಜಾಸ್ತಿ ಇದ್ದುದರಿಂದ ಅವರ ಮನೆಗಳಲ್ಲಿನ ಜಾತಿ ತಾರತಮ್ಯಗಳು ಶಾಲೆಯಲ್ಲೂ ಆಗಾಗ ಕಾಣಿಸುತ್ತಿದ್ದವು. ಒಂದು ದಿನ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಶಾಲೆಯ ಪಕ್ಕದ ಬೀದಿಯಲ್ಲಿದ್ದ ಬೋರ್‌ವೆಲ್‌ನ ಹತ್ತಿರ ನೀರು ಕುಡಿಯಲು ಹೋಗಿದ್ದೆ. ಅಲ್ಲೇ ಪಕ್ಕದಲ್ಲಿ ಮನೆಯಿದ್ದ ಗೆಳೆಯ ಕುಮಾರನ ಅಮ್ಮ ಅಲ್ಲಿದ್ದ ಬಿಂದಿಗೆ ತೋರಿಸಿ ನೀರು ಕುಡಿದ ನಂತರ ಬಿಂದಿಗೆ ಇಡುವಂತೆ ಹೇಳಿದರು. ಅಷ್ಟರಲ್ಲಿ ಅರುಣಾ ಮತ್ತು ನಾಲ್ಕು ಹುಡುಗಿಯರು ನೀರು ಕುಡಿಯಲು ಬಂದರು. ಸಾಮಾನ್ಯವಾಗಿ ದಲಿತರು ನೀರು ಹಿಡಿದ ನಂತರ ಒಂದೆರಡು ನಿಮಿಷಗಳ ಕಾಲ ಬೋರ್‌ವೆಲ್‌ನ್ನು ಜೋರಾಗಿ ಒತ್ತಿ ಸುಮಾರು ನೀರು ಹರಿದು ಹೋದ ನಂತರ ಮೇಲ್ಜಾತಿಯವರು ಬಿಂದಿಗೆ ಇಡುವುದು ವಾಡಿಕೆ. ನಾನು ನೀರು ಕುಡಿದು ಬಿಂದಿಗೆಗೆ ನೀರು ಹಿಡಿಯುತ್ತಿದ್ದೆ. ಇವರು ಬಂದಿದ್ದರಿಂದ ಬೋರು ಒತ್ತುವುದು ಬಿಟ್ಟು ಪಕ್ಕಕ್ಕೆ ಬಂದು ನಿಂತೆ. ಆ ಹುಡುಗಿಯರು ಅಲ್ಲಿದ್ದ ಬಿಂದಿಗೆ ನೋಡಿ ಸುಮ್ಮನೆ ನಿಂತರು. ಇದನ್ನು ಅರ್ಥಮಾಡಿಕೊಂಡ ಅರುಣ ‘ಬನ್ರೇಲೇ.. ಎಲ್ಲರ ಮೈಯಲ್ಲೂ ಹರ್ಯೋದು ಕೆಂಪು ರಕ್ತನೇ... ನಮ್ಮ ಮೈಯಲ್ಲೇನು ಹಸಿರು ರಕ್ತ ಹರ್ಯತ್ತಾ..’ ಅಂದುಕೊಂದು ಬಿಂದಿಗೆ ಪಕ್ಕಕ್ಕೆ ಸರಿಸಿ ನೀರು ಕುಡಿದು, ಅವರಿಗೂ ಕುಡಿಯಲು ಅನುವು ಮಾಡಿಕೊಟ್ಟು, ಮತ್ತೆ ಬಿಂದಿಗೆ ಬೋರಿನ ಕೆಳಗಿಟ್ಟು ನನ್ನ ಕಡೆ ನೋಡುತ್ತಾ ಹೊರಟುಬಿಟ್ಟಳು.. ಇಂತಹದ್ದನ್ನು ಅದುವರೆಗೂ ಪಠ್ಯಪುಸ್ತಕದಲ್ಲಿ ಮಾತ್ರ ಓದಿದ್ದ ನನಗೆ ಅವಳ ಮಾತುಗಳನ್ನು ಮತ್ತೆ ಮತ್ತೆ ಕೇಳಿಸಿಕೊಳ್ಳಬೇಕೆನ್ನುವ ಹಂಬಲ ಹೆಚ್ಚಿತು.. ಏಳನೆ ತರಗತಿ ನಂತರ ಅರುಣ ಮತ್ತವರ ಕುಟುಂಬ ಯಾವ ಊರಲ್ಲಿದೆ ಅನ್ನುವ ಸುಳಿವೇ ಸಿಗಲಿಲ್ಲ..
ನಮ್ಮ ಊರಲ್ಲಿ ಡಿಸೆಂಬರ್ ತಿಂಗಳ ಕೊನೆಗೆ ನಡೆಯುವ ‘ಕೋಲುಬೇಟೆ’ ಸುತ್ತೇಳು ಹಳ್ಳಿಗಳಿಗೆ ಫೇಮಸ್ಸು. ಸಣ್ಣವರಿದ್ದಾಗ ಬೇಟೆಗೆ ಬಂದ ನೆಂಟರು ಕೊಟ್ಟ ನಾಲ್ಕಾಣಿ ಎಂಟಾಣಿ ಜೋಡಿಸಿಕೊಂಡು ಪಿಳ್ಳಂಗೋವಿ ಕೊಂಡುಕೊಳ್ಳುವುದು ನನ್ನ ವಾರ್ಷಿಕ ಕನಸು. ಆವತ್ತು ರೆಡಿಯಾಗಿ ನಾನೊಬ್ಬನೇ ಊರಮುಂದಕ್ಕೆ ಹೋದವನು ಜೇಬಲ್ಲಿದ್ದ ಒಂದು ರೂಪಾಯಿಯನ್ನು ಗೋಲಿ ಆಡಿ ಕಳೆದುಕೊಂಡು ಬಿಟ್ಟಿದ್ದೆ. ಏನೇನನ್ನೋ ಕೊಂಡುಕೊಳ್ಳುತ್ತಾ ಖುಷಿ ಪಡುತ್ತಿದ್ದವರನ್ನು ಪೇಚುಮೋರೆ ಹಾಕಿಕೊಂಡು ನೋಡುತ್ತಾ ಅಲೆಯುತ್ತಿದ್ದವನನ್ನು ಅಲ್ಲೊಂದು ಜಗಲಿ ಮೇಲೆ ಕೂತಿದ್ದ ಮೂರು ಲಿಂಗಾಯತ ಹುಡುಗಿಯರ ಗುಂಪು ಕರೆಯಿತು. ಎಲ್ಲರೂ ನನ್ನ ಕ್ಲಾಸ್‌ಮೇಟ್ಸ್. ಅವರಲ್ಲಿ ನಾವು ‘ಬಿಂದಿಗೆ’ ಎಂದು ಕರೆಯುತ್ತಿದ್ದ ಸೌಮ್ಯಾ ‘ಏನೋ ಬ್ಯಾಟೆ ಜೋರಾ..? ಏನೇನ್ ತಗಂಡೆ.. ? ಎಸ್ಟೈತೆ ಕಾಸು..?’ ಅಂದ್ಲು. ‘ಇಲ್ಲ.. ನಮ್ಮಪ್ಪ ಆಮೇಲೆ ಕೊಡ್ತೈತೆ’ ಅಂದು ಮುಗಿಸುವ ಹೊತ್ತಿಗೆ ಇಪ್ಪತ್ತು ಪೈಸೆಯ ಕಾಯಿನ್ನನ್ನು ನನ್ನ ಕೈಗಿಟ್ಟುಬಿಟ್ಟಳು. ‘ಬ್ಯಾಡ..’ ಅಂದೆ. ‘ಏ ನಾವೂ ನಿನ್ ಫ್ರೆಂಡ್ಸ್ ಅಲ್ವಾ.. ತಗಳೋ..’ ಅಂತ ಜೋರು ಮಾಡಿದ್ಲು.. ತಗಂಡು ಮನೆಗೆ ಹೋದವನಿಗೆ ಅದ್ಯಾಕೋ ವಿಚಿತ್ರ ತಳಮಳ ಶುರುವಾಯಿತು. ಸೀದ ಊರಮುಂದಕ್ಕೆ ಬಂದು ಸೌಮ್ಯಾ ಹತ್ತಿರ ಹೋಗಿ.. ‘ಅಮ್ಮಿ ತಗೋ.. ಬ್ಯಾರೇರತ್ರ ಕಾಸೀಸ್ಕಂಡ್ರೆ ನಮ್ಮಪ್ಪ ಹೊಡೀತೈತೆ..’ ಅಂದು ಜಗಲಿಯ ಮೇಲೆ ಕಾಯಿನ್ನು ಇಟ್ಟು ತಿರುಗಿ ನೋಡದೆ ಬಂದುಬಿಟ್ಟೆ.. ಅದೇನೋ ಒಂಥರಾ ಖುಷಿ, ಒಂಥರಾ ಸಾರ್ಥಕ ಭಾವ, ಒಂಥರಾ ಗೆಲುವಿನ ವರ್ಚಸ್ಸು.. ಇವತ್ತು ಆ ಘಟನೆಯನ್ನು ನೆನೆದರೆ ಆ ಕ್ಷಣ ಆ ಹುಡುಗಿಯರು ಅನುಭವಿಸಿದ ಮುಜುಗರ, ಅಪಮಾನ ಮನಸ್ಸನ್ನು ಹಿಂಡುತ್ತದೆ.
ಸ್ಕೂಲಿನಲ್ಲಿ ಲೀಸರ್ರಿಗೆ ಬಿಟ್ಟಾಗ ಕಕ್ಕಸ್ಸಿಗೆ ಯಾರದ್ದೋ ಹೊಲಕ್ಕೆ ಗೆಳೆಯರೆಲ್ಲಾ ಹೋಗಿದ್ದೆವು. ದಾರಿಯಲ್ಲಿ ಒಂದು ಓತಿಕ್ಯಾತ ತಲೆ ಆಡಿಸುತ್ತಾ ಕಲ್ಲೊಂದರ ಮೇಲೆ ಕೂತಿತ್ತು. ನಾನು ಒಂದು ಕಲ್ಲು ತೆಗೆದುಕೊಂಡು ಹೊಡೆದ ತಕ್ಷಣ ಅದು ಒದ್ದಾಡುತ್ತಾ ಕೆಳಗೆ ಬಿತ್ತು. ಮತ್ತೊಂದು ಕಲ್ಲೇಟಿಗೆ ಅದು ಸತ್ತು ಬಿದ್ದಿತ್ತು. ಟಾಯ್ಲೆಟ್ ಮುಗಿಸಿ ಏಳುವಾಗ ನಾಲ್ಕಾಣಿಯ ಮೂರು ಕಾಯಿನ್‌ಗಳು ಒಂದರ ಮುಂದೆ ಒಂದು ಬಿದ್ದಿದ್ದವು. ‘ಓತಿಕ್ಯಾತ ಹೊಡೆದರೆ ಕಾಸು ಸಿಗುತ್ತೆ’ ಅನ್ನುವ ನಮ್ಮ ನಂಬಿಕೆ ಬಲವಾಗಿತ್ತು. ಅಲ್ಲಿಂದ ಶುರುವಾಯಿತು ನಮ್ಮ ಬೇಟೆ. ಒಂದಿಬ್ಬರು ಹುಡುಗರ ಜೊತೆಗೂಡಿ ಕಂಡ ಕಂಡ ಓತಿಕ್ಯಾತ ಹೊಡೆಯುವುದು. ಎಲ್ಲೂ ಕಾಸು ಸಿಗದಿದ್ದರೆ ನಮ್ಮ ಹೊಲದಲ್ಲಿದ್ದ ಚೌಡಮ್ಮನ ಹೊಂಗೇ ಮರಕ್ಕೋ, ಮುನಿಯಪ್ಪನ ಗುಡಿಯ ಹತ್ತಿರದ ಕಾರೆ ಗಿಡಕ್ಕೋ ಯಾರೋ ಕಟ್ಟುತ್ತಿದ್ದ ಹರಕೆ ಕಾಸಂತೂ ಸಿಗುತ್ತಿತ್ತು. ಹೀಗೇ ಒಂದು ದಿನ ಏಳು ರುಪಾಯಿ, ಇನ್ನೊಂದು ದಿನ ಹನ್ನೆರಡು ರುಪಾಯಿ ಮತ್ತೊಂದು ದಿನ ಐವತ್ತೆರಡು ರುಪಾಯಿ ದಾರಿಯಲ್ಲಿ ಸಿಕ್ಕಿಬಿಟ್ಟಿತು.. ಆ ಐವತ್ತೆರಡು ರೂಪಾಯಿಯಂತೂ ನಾನು ನನ್ನ ಗೆಳೆಯನೊಬ್ಬ ಇಬ್ಬರೂ ಸೇರಿ ಖರ್ಚು ಮಾಡಲು ಆಗದೆ ಅಮ್ಮನಿಗೂ ಸ್ವಲ್ಪ ಕೊಟ್ಟು ನಾಲ್ಕು ದಿನ ತಿನ್ನೋವಷ್ಟು ತಿಂದು ಎಂಜಾಯ್ ಮಾಡಿದ್ದೆವು.
ಆಗ ನನ್ನ ಎರಡನೆ ಅಕ್ಕನಿಗೆ ವಿಚಿತ್ರ ಕಾಯಿಲೆ ಬಂದು ಊರಿಗೆ ಹತ್ತು ಕಿಲೋಮೀಟರ್ ದೂರದ ತ್ಯಾಮಗೊಂಡ್ಲುವಿನಲ್ಲಿ ಆಸ್ಪತ್ರೆಗೆ ಸೇರಿಸಿದ್ದೆವು. ಎರಡು ಮೂರು ದಿನ ಆಸ್ಪತ್ರೆಯಲ್ಲೇ ಇದ್ದು ಬೇಜಾರಾಗಿ ಊರಿಗೆ ಹೋಗಿ ಬರೋಣ ಅಂತ ಹೊರಟವನಿಗೆ ಅಮ್ಮ ಒಂದು ರೂಪಾಯಲ್ಲ; ಎಂಟಾಣಿಯೂ ಇಲ್ಲ ಅಂದುಬಿಟ್ಟಿತು. ಬಸ್ಸು ನಿಲ್ಲುವ ಜಾಗದಲ್ಲಿ ಇದ್ದ ಪೊಲೀಸು ಸ್ಟೇಷನ್‌ನ ಕಾಂಪೌಂಡಿನ ಜಗುಲಿಯ ಮೇಲೆ ಕುಳಿತು ಬಸ್ಸಲ್ಲಿ ಕಂಡಕ್ಟರ್ ಕಾಸು ಕೇಳಿದರೆ ಹೇಗೆ ತಪ್ಪಿಸಿಕೊಳ್ಳುವುದು..? ಒಂದು ವೇಳೆ ಸಿಕ್ಕಿಹಾಕಿಕೊಂಡುಬಿಟ್ಟರೆ ಏನೆಲ್ಲಾ ಬೈಗುಳಗಳನ್ನು ಎಲ್ಲರ ಮುಂದೆ ಕೇಳಬೇಕಾಗಿ ಬರುತ್ತದೆ ಅಂತ ಲೆಕ್ಕ ಹಾಕುತ್ತಿದ್ದೆ. ನಾಲ್ಕಾಣೆಯೂ ಇಲ್ಲದ ಆ ಸ್ಥಿತಿಗೆ ಕಣ್ಣಲ್ಲಿ ನೀರು ಬಂದು ಕೂತಲ್ಲಿಯೇ ಸಾವಿರಾರು ರೂಪಾಯಿಯ ಸೂಟ್‌ಕೇಸು ಸಿಕ್ಕಿ, ಕೇಳಿದವರಿಗೆಲ್ಲಾ ಎಷ್ಟೆಂದರೆ ಅಷ್ಟು ಹಣ ಕೊಟ್ಟು ಒಳ್ಳೆ ಬಟ್ಟೆ ಹಾಕಿಕೊಂಡು ದಿಲ್‌ದಾರ್ ಆಗಿ ಮೆರೆಯುವ ಕನಸೂ ಕಂಡು ವಾಪಸ್ಸು ಆಸ್ಪತ್ರೆಗೆ ಹೋಗಬೇಕಾದವನು ಬಸ್ಸುಗಳ ಚಕ್ರಗಳ ಧೂಳಿಗೆ ದಟ್ಟ ಮಣ್ಣು ಮುಚ್ಚಿಕೊಂಡಿದ್ದ ಕಾಂಪೌಂಡ್ ಪಕ್ಕದ ರಸ್ತೆ ಬದಿಯಲ್ಲಿ ಕಾಲು ಆಡಿಸುತ್ತಿರಬೇಕಾದರೆ ಪಳ ಪಳ ಹೊಳೆಯುವ ಒಂದು ರೂಪಾಯಿಯ ಕಾಯಿನ್ನು ಕಂಡು ಮೇಲೆ ಬಂತು.. ನನಗಂತೂ ಆವತ್ತು ಅದರಿಂದ ಸಿಕ್ಕ ಸಂತೋಷ ಇವತ್ತಿಗೂ ಯಾವುದರಿಂದಲೂ ಸಿಕ್ಕಿಲ್ಲ.
ಎಂಟನೆ ತರಗತಿಯಲ್ಲಿದ್ದೆ. ಅಷ್ಟೊತ್ತಿಗಾಗಲೇ ಎಲ್ಲ ಸರೀಕ ಹುಡುಗರಂತೆ ಒಳ್ಳೇ ಬಟ್ಟೆ, ಕಾಲಿಗೆ ಜೊತೆ ಚಪ್ಪಲಿ ಹಾಕುವ ಆಸೆಯ ಜೊತೆಗೆ ಹೊಸ ಆಸೆಯೊಂದು ಚಿಗುರೊಡೆಯಿತು. ಅದು, ಇದ್ದಿಲು ಮತ್ತು ಇಟ್ಟಿಗೆ ಚೂರುಗಳ ಬದಲಾಗಿ ಹಲ್ಲುಪುಡಿಯಲ್ಲಿ ಹಲ್ಲುಜ್ಜುವುದು. ಆ ಸಂದರ್ಭಕ್ಕೆ ಸರಿಯಾಗಿ ಗೆಳೆಯ ಸೀನ ಒಂದು ಆಫರ್ ಕೊಟ್ಟ. ಬೆಂಗಳೂರಿಂದ ಬಂದು ಊರಲ್ಲಿ ಹಾಲ್ಟ್ ಆಗುತ್ತಿದ್ದ ಲಕ್ಷ್ಮೀನಾರಾಯಣ ಬಸ್ಸನ್ನು ತೊಳೆದರೆ ಅವರು ಹದಿನೈದು ರೂಪಾಯಿ ಕೊಡುವುದರಿಂದ ಇಬ್ಬರೂ ಆ ಕೆಲಸ ಮಾಡಿ ತಲಾ ಏಳೂವರೆ ರೂಪಾಯಿಗಳನ್ನು ಹಂಚಿಕೊಳ್ಳುವುದು. ರಾತ್ರಿ ಒಂಬತ್ತರ ನಂತರ ಬರುವ ಬಸ್ಸು ತೊಳೆಯಲು ಅಪ್ಪ ಅಮ್ಮ ಕಳಿಸಲು ಒಪ್ಪದಿದ್ದರೂ ಹೇಗೋ ಮಾಡಿ ಕೆಲಸ ಗಿಟ್ಟಿಸಿಬಿಟ್ಟೆ. ಅದೊಂದು ಹೊಸ ಅನುಭವ. ಬಸ್ಸು ಬಂದ ನಂತರ ಡ್ರೈವರ್, ಕಂಡಕ್ಟರ್ ಮತ್ತು ಕ್ಲೀನರ್ ಅವರಿಗೆ ನಿಗದಿಯಾಗಿದ್ದ ಲಿಂಗಾಯತರ ಮನೆಯಿಂದ ಊಟ ತಂದು ಕೊಡುವುದು. ಅವರು ಉಂಡು ಮಲಗಿದ ಮೇಲೆ ಬಸ್ಸಿನ ಕಸ ಹೊಡೆದು, ಇಡೀ ಬಸ್ಸಿಗೆ ನೀರು ಎರಚಿ, ಕೈಯಲ್ಲೇ ಚೆನ್ನಾಗಿ ತೊಳೆದು, ಒಂದು ಒಣಬಟ್ಟೆಯಲ್ಲಿ ಮತ್ತೆ ಒರೆಸುವುದು. ಒಂದು, ಒಂದೂವರೆ ಗಂಟೆ ಕೆಲಸ. ಮೊದಲ ದಿನವಂತೂ ಮನೆಗೆ ಹೋಗದೆ ಬಸ್ಸಲ್ಲೇ ಮಲಗಿದವನು ಹಾಗೆ ಬಂದ ಏಳೂವರೆ ರೂಪಾಯಿಯಲ್ಲಿ ಬೆಳಗ್ಗೆ ಎದ್ದು ಮಾಡಿದ ಮೊದಲನೇ ಕೆಲಸ ‘ಗೋಪಾಲ್ ಹಲ್ಲುಪುಡಿ’ ಖರೀದಿಸಿದ್ದು.. ಅದು ನನ್ನ ಜೀವನದ ಅತ್ಯಂತ ಸಂತೋಷದ ಘಟನೆ. ಆ ನಂತರ ಅದೇ ಹಣದಲ್ಲೇ ಕೋಲ್ಗೇಟ್ ಹಲ್ಲುಪುಡಿ ಮತ್ತು ಒಂದು ಟೂತ್ ಬ್ರಷ್ ಕೊಂಡಿದ್ದೆ. ಶಾಲೆಗೆ ರಜೆ ಇದ್ದಾಗ ಅದೇ ಬಸ್ಸಲ್ಲಿ ಕ್ಲೀನರ್ ಕೆಲಸ ಮಾಡಿಕೊಂಡು ಕಲಾಸಿಪಾಳ್ಯಕ್ಕೆ ಹೋಗಿ, ರೈಟ್, ಹೋಲ್ಡಾನ್ ಹೇಳಿದ್ದು, ಚಲಿಸುತ್ತಿದ ಬಸ್ಸಿನಲ್ಲೇ ಡೋರಿನಿಂದ ಟಾಪಿಗೆ ಹತ್ತಿ ನಿಂತಾಗ ಲಗ್ಗೇಜು ಇಳಿಸಿ ಸಾಹಸ ಮೆರೆದಿದ್ದು.. ನನ್ನಂಥವನ ಬದುಕಿನಲ್ಲಿ ಬಹಳ ದೊಡ್ಡ ನೆನಪುಗಳು.
ಇನ್ನೊಂದು ಭಯಂಕರ ನೆನಪು ಇದೆ.. ಒಮ್ಮೆ ಯಾರೋ ಕೊಟ್ಟ ನಾಲ್ಕಾಣೆ ಕಾಯಿನ್ನು ಹೇಗೋ ಹೊಟ್ಟೆಯೊಳಗೆ ಹೋಗಿ, ಎರಡು ದಿನ ಆಗಿ, ಅದು ಕೊನೆಗೂ ನಿರೀಕ್ಷಿಸಿದ ಹಾಗೆ ಕಕ್ಕಸ್ಸಿನಲ್ಲಿ ಬಂದು ಅದನ್ನು ತೆಗೆದುಕೊಂಡು ತೊಳೆದು ಅಂಗಡಿಯಲ್ಲಿ ಮೈಸೂರು ಪಾಕು ತಿಂದಿದ್ದು.. ಇಂಥವು ಸಾವಿರ ಇವೆ. ಹೊಟ್ಟೆ ಹಸಿವಿಗೆ ಮನೆಯಲ್ಲಿದ್ದ ಡಿಪೋ ಅಕ್ಕಿ ಮತ್ತು ಸಕ್ಕರೆ ಬೆರೆಸಿಕೊಂಡು ಮೆಟ್ಟಿಲಿಲ್ಲದ ಶಾಲೆ ಬಿಲ್ಡಿಂಗ್ ಮೇಲೆ ಹತ್ತಿ ತಿನ್ನುತ್ತಾ ಪದ್ಯ ಉರಲು ಹೊಡೆದದ್ದು, ರಾತ್ರಿಹೊತ್ತು ಗುಂಪು ಕಟ್ಟಿಕೊಂಡು ಹಲಸೋ, ಮಾವೋ, ಜೋಳವೋ ಕದ್ದು, ಯಾರೋ ಅಟ್ಟಿಸಿಕೊಂಡು ಬಂದಾಗ ಮೊಲಗಳ ಹಾಗೆ ಬಚ್ಚಿಟ್ಟುಕೊಂಡಿದ್ದು, ಕಣ ಮಾಡುವಾಗ ಹುಲ್ಲಿನಲ್ಲೇ ಹೂತುಕೊಂಡು ರಾಗಿ, ಹುಲ್ಲು ಕದಿಯಲು ಬರುವ ಕಳ್ಳರನ್ನು ಹಿಡಿಯುವ ಪ್ಲಾನ್ ಹಾಕಿದ್ದು, ಬಾಬಯ್ಯನ ಜಲ್ದಿಯಲ್ಲಿ ಕೊಂಡಕ್ಕೆ ಹರಳು ಹಾಕಿ ಊರಿನ ಮೇಲ್ಜಾತಿಗರ ಜೊತೆಗೂಡಿ ಹಸ್ಸೇನ್ ಹುಸ್ಸೇನ್ ಕುಣಿದದ್ದು, ಯಾರದೋ ಸೈಕಲ್ಲು ಸಾಲ ಪಡೆದು ಎಲ್ಲೆಲ್ಲಿಗೋ ಹೋಗಿ, ಕಾಡು ಮೇಡು ಅಲೆದು, ಕೆರೆಯಲ್ಲಿ ಒದ್ದಾಡಿ ಮನೆಗೆ ಬಂದು ಅಪ್ಪನ ಕೈಲಿ ಒದೆ ತಿಂದಿದ್ದು, ಸಾರಾಯಿ ಮಾರಿ ಪಿಯುಸಿ ಓದುವ ಅನಿವಾರ್ಯತೆ ಬಂದಾಗ, ಕುಡಿದು ಬಿಸಾಕಿದ ಹತ್ತಾರು ಸಾರಾಯಿ ಪಾಕೆಟ್ಟುಗಳ ಒಟ್ಟುಮಾಡಿ, ಅವುಗಳಲ್ಲಿದ್ದ ತೊಟ್ಟು ತೊಟ್ಟು ಸಾರಾಯಿಯನ್ನೇ ಒಂದಕ್ಕೆ ಸುರಿದು ಅರ್ಧವೋ, ಒಂದೋ ಮಾಡಿ, ಜಾಸ್ತಿ ಕುಡಿದವರಿಗೆ ಗೊತ್ತಾಗದ ಹಾಗೆ ಕಟ್ ಮಾಡಿ ಲೋಟಕ್ಕೆ ಸುರಿದು ಮಾರಿ ಬಂದ ಹಣದಲ್ಲಿ ಶಾರದಾ ಪೂಜೆಗೆ ಊದುಬತ್ತಿಯೋ, ಗೆಳೆಯರೊಟ್ಟಿಗೆ ಆಲೂಗಡ್ಡೆ ಬಜ್ಜಿಯೋ ಕೊಂಡುಕೊಂಡು ಖುಷಿ ಪಟ್ಟಿದ್ದಿದೆ..
ನೆನಪಿನಾಳದಲ್ಲಿ ವಿಸ್ಮತಿಗೆ ಸಂದಿದ್ದ ಇಂಥವೇ ಸಾವಿರದ ನೆನಪುಗಳಲ್ಲಿ ಕೆಲವನ್ನಾದರೂ ಹೊರಗೆ ತೆಗೆದು ಇಂತಹ ಧುರಿತ ಕಾಲದಲ್ಲೂ ಒಂದಿಷ್ಟು ನಗು ತರಿಸಿದ ವಾರ್ತಾಭಾರತಿಗೆ ಧನ್ಯವಾದಗಳು.