ಸಿಂಪಲ್ ಆಗಿ ರಕ್ಷಿತ್ ಸಿನೆಮಾ ಲವ್ ಸ್ಟೋರಿ
ರಕ್ಷಿತ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಅವಿಭಾಜ್ಯ ಆಸ್ತಿ. ಸಿನೆಮಾಗಳನ್ನು ಪ್ರೀತಿಸಿ ಬಂದ ಉಡುಪಿಯ ಈ ಹುಡುಗನನ್ನು ಇಂದು ಸಿನೆಮಾರಂಗವೇ ಪ್ರೀತಿಸಿದೆ. ಲೈಫ್ ನೀಡಿದ ಚಿತ್ರರಂಗ ಪ್ರೀತಿ ಕೂಡ ನೀಡಿದೆ. ಇವೆಲ್ಲದರ ಬಗ್ಗೆ ಸ್ವತಃ ಅವರೇ ನಮ್ಮೆಂದಿಗೆ ಮನಸ್ಸು ಬಿಚ್ಚಿ ಹರಟಿದ್ದಾರೆ.
ಕರಾವಳಿ ಮತ್ತು ಮುಂಬೈಯ ಸಂಬಂಧ ಹಳೆಯದು. ಆದರೆ ನನಗೆ ಚೆನ್ನಾಗಿ ಅರ್ಥವಾಗುವ, ಆಪ್ತವಾಗುವ ಭಾಷೆ ಕನ್ನಡ. ಉಳಿದಂತೆ ಹಿಂದಿ ಚಿತ್ರರಂಗವನ್ನು ನಾನು ಕೂಡ ಇಷ್ಟಪಡುತ್ತೇನೆ. ಅಲ್ಲಿನ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ. ಒಂದಲ್ಲ ಒಂದು ದಿನ ವಿಭಿನ್ನ ಚಿತ್ರವೊಂದರ ಮೂಲಕ ಅಲ್ಲಿಯೂ ಗುರುತಿಸಿಕೊಳ್ಳಬೇಕೆಂಬ ಹಂಬಲ ಇರುವುದು ಸುಳ್ಳಲ್ಲ.
ಚಿತ್ರರಂಗ ಪ್ರವೇಶಿಸಲು ನಿಮಗೆ ಸ್ಫೂರ್ತಿ ಏನು?
►ಸಿನೆಮಾ ಎಂದರೆ ಚಿಕ್ಕಂದಿನಿಂದಲೂ ಆಸಕ್ತಿಯಿತ್ತು. ಮನೆಯಲ್ಲಿ ಸಿನೆಮಾ ಪತ್ರಿಕೆಗಳನ್ನು ತರಿಸುತ್ತಿದ್ದರು. ಅವುಗಳಲ್ಲಿ ಮುಂದೊಂದು ದಿನ ನನ್ನ ಫೋಟೊ ಬರಬೇಕು ಎಂಬ ಆಕಾಂಕ್ಷೆಯೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಎನ್ನಬಹುದು.
ಕನ್ನಡದಲ್ಲಿ ಇಷ್ಟವಾಗುವ ನಟ, ನಿರ್ದೇಶಕರ ಬಗ್ಗೆ ಹೇಳಿ?
►ನಿರ್ದೇಶಕರಾಗಿ ಶಂಕರನಾಗ್ ಮತ್ತು ಉಪೇಂದ್ರ ಹಾಗೂ ಕಲಾವಿದರಾಗಿ ಅನಂತನಾಗ್ ಮತ್ತು ಸುದೀಪ್ ನನಗೆ ಇಷ್ಟವಾಗುತ್ತಾರೆ.
ಕನ್ನಡ ಚಿತ್ರಗಳಲ್ಲಿ ನಿಮಗೆ ಮೆಚ್ಚುಗೆಯಾದ ಹಳೆಯ ಮತ್ತು ಹೊಸ ಸಿನೆಮಾಗಳು ಯಾವುವು?
►ಹಳೆಯ ಸಿನೆಮಾಗಳಲ್ಲಿ ‘ಬಬ್ರುವಾಹನ’ ನನಗೆ ತುಂಬ ಇಷ್ಟ. ಅದರ ಪೌರಾಣಿಕ ಘನತೆಗೆ ಸಮಾನಾದ ಚಿತ್ರ ನನಗೆ ಬೇರೆ ಕಾಣಿಸಲಿಲ್ಲ. ಶಂಕರನಾಗ್ ನಿರ್ದೇಶನದ ‘ಆ್ಯಕ್ಸಿಡೆಂಟ್’ ಸಿನೆಮಾ ಸೇರಿದಂತೆ, ಅವರ ನಿರ್ದೇಶನದ ಮಾಲ್ಗುಡಿ ಡೇಸ್ ಸೀರೀಸ್‌ನ ಪ್ರತಿಯೊಂದು ಎಪಿಸೋಡ್‌ಗಳು ಇಷ್ಟ. ಇತ್ತೀಚೆಗೆ ಖುಷಿ ನೀಡಿದ ಚಿತ್ರಗಳಲ್ಲಿ ‘ರಾಮಾ ರಾಮಾ ರೇ’ ಮತ್ತು ‘ಒಂದು ಮೊಟ್ಟೆಯ ಕತೆ’ ಕೂಡ ಸೇರುತ್ತದೆ.
ಚೊಚ್ಚಲ ನಿರ್ದೇಶನದಲ್ಲೇ ‘ಉಳಿದವರು ಕಂಡಂತೆ’ ಎಂಬಂಥ ಚಿತ್ರವನ್ನು ನಿದೇಶಿರ್ಸಲು ನಿಮಗೆ ಸಿಕ್ಕ ಸ್ಫೂರ್ತಿ ಏನು?
►ಚಿತ್ರದ ಸಂಭಾಷಣೆಗೆ ನಾನು ಹುಟ್ಟಿ ಬೆಳೆದ ಏರಿಯಾವೇ ಕಾರಣ. ಎಲ್ಲ ಚಿತ್ರೋದ್ಯಮಗಳಲ್ಲಿಯೂ ಅವರವರ ನಾಡಿನ ಎಲ್ಲ ರೀತಿಯ ಸಂಭಾಷಣಾ ವೈವಿಧ್ಯಗಳನ್ನು ಬಳಸುತ್ತಾರೆ. ನಮ್ಮ ಚಿತ್ರವೇಕೆ ಬೆಂಗಳೂರು ಕನ್ನಡಕ್ಕಷ್ಟೇ ಸೀಮಿತವಾಗಿದೆ? ನಾವು ಕೂಡ ನಮ್ಮ ಭಾಷೆಗಳನ್ನು ಉಪಯೋಗಿಸೋಣ ಎಂಬ ಪ್ರಯತ್ನವಿತ್ತು. ನಾನು ಯಾವುದೇ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿ ಅವರ ಶೈಲಿಯನ್ನು ರೂಢಿಸಿರದ ಕಾರಣ, ನಾನೇ ಕಂಡ ಜಗತ್ತಿನ ಶ್ರೇಷ್ಠ ಚಿತ್ರಗಳ ಮೇಕಿಂಗ್ ರೀತಿಗಳೇ ನನ್ನ ವಿಭಿನ್ನತೆಯ ಕಲ್ಪನೆಗೆ ಸ್ಫೂರ್ತಿಯಾಗಿತ್ತು.
ಆದರೆ ಚಿತ್ರದ ವಿಭಿನ್ನತೆಗೆ ತಕ್ಕಂಥ ಗೆಲುವು ಚಿತ್ರಕ್ಕೆ ಸಿಗಲಿಲ್ಲ ಎನ್ನುವುದರ ಬಗ್ಗೆ ಏನು ಹೇಳುತ್ತೀರಿ?
►ಚಿತ್ರ ಬಾಕ್ಸ್ ಆಫೀಸಲ್ಲಿ ಗೆಲುವು ಕಂಡಿಲ್ಲ ನಿಜ. ಆದರೆ ಅದನ್ನು ಜನತೆ ಒಂದು ಒಳ್ಳೆಯ, ವಿಭಿನ್ನ ಚಿತ್ರವಾಗಿ ನೆನಪಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ನಿಮ್ಮ ಪ್ರಶ್ನೆಯೇ ಉದಾಹರಣೆ. ಟಿವಿಯಲ್ಲಿ ಚಿತ್ರ ನೋಡಿದ ಸಾಕಷ್ಟು ಪ್ರೇಕ್ಷಕರು ಮೆಚ್ಚಿದ್ದಾರೆ. ಅದರ ಡಿವಿಡಿ ಕೊಂಡು ಚಿತ್ರಕ್ಕೆ ಪ್ರೋತ್ಸಾಹಿಸಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳು ಥಿಯೇಟರಲ್ಲೇ ಯಶಸ್ಸು ಕಾಣುತ್ತಿರುವ ಈ ಸಮಯದಲ್ಲಿ ಏನಾದರೂ ಆ ಚಿತ್ರ ಬಂದಿದ್ದರೆ ಬಹುಶಃ ದೊಡ್ಡ ಮಟ್ಟದಲ್ಲೇ ಗೆಲ್ಲುತ್ತಿತ್ತು.
ಬಿಡುಗಡೆಯಾಗಬೇಕಾದ ಕಾಲಘಟ್ಟಕ್ಕಿಂತ ಮೊದಲೇ ತೆರೆಗೆ ಬಂದ ಕಾರಣಕ್ಕೆ ಸೋಲು ಕಂಡ ಉತ್ತಮ ಚಿತ್ರಗಳ ಸಾಲಿನಲ್ಲಿ ಅದೂ ಸೇರುತ್ತದೆ ಎಂದುಕೊಂಡಿದ್ದೇನೆ.
ಆಕೆ ಸುಂದರಿ ನಿಜ. ಪಾತ್ರದ ಕ್ಯಾರೆಕ್ಟರ್ ಅಷ್ಟೇ ಅಲ್ಲ, ಅವಳ ರಿಯಲ್ ಲೈಫ್ ಕ್ಯಾರೆಕ್ಟರ್ ಕೂಡ ತುಂಬ ಇಷ್ಟವಾಯಿತು. ಕಿರಿಕ್ ಪಾರ್ಟಿ ಚಿತ್ರದ ಸೆಟ್‌ನಲ್ಲಿ ಪ್ರತಿಯೊಬ್ಬರನ್ನು ನಗಿಸಲು, ಖುಷಿಯಾಗಿರಿಸಲು ಪ್ರಯತ್ನ ಪಡುತ್ತಿದ್ದಳು. ಮದುವೆಯ ಬಳಿಕದ ಯೋಜನೆಗಿಂತ, ಮದುವೆಯೇ ಮುಂದಿನ ಎರಡು ವರ್ಷಗಳ ಒಳಗೆ ನಡೆಯುವಂಥ ದೀರ್ಘಕಾಲಿಕ ಯೋಜನೆ ಎನ್ನಲು ಬಯಸುತ್ತೇನೆ!
ಗಾಂಧಿ ನಗರದ ಮೇಲೆ ಕರಾವಳಿಯವರ ಹಿಡಿತ ಹೆಚ್ಚಿದೆ ಎನ್ನುವ ಆರೋಪದ ಬಗ್ಗೆ ನಿಮ್ಮ ಅನಿಸಿಕೆ ಏನು?
►ಕರಾವಳಿಯವರೂ ಕನ್ನಡಿಗರೇ. ಅಂತಿಮವಾಗಿ ಕನ್ನಡ ಚಿತ್ರೋದ್ಯಮದಲ್ಲಿ ಕನ್ನಡಿಗರ ಹಿಡಿತ ಇರುವುದು ಮುಖ್ಯ. ಯಾಕೆಂದರೆ ಈ ಹಿಂದೆ ಒಂದು ಕಾಲದಲ್ಲಿ ಕನ್ನಡ ಸಿನೆಮಾಗಳನ್ನು ನಿರ್ಮಿಸಿ ವಿತರಿಸುತ್ತಿದ್ದವರೆಲ್ಲ ಆಂಧ್ರ, ತಮಿಳುನಾಡಿನವರೇ ಆಗಿದ್ದರು. ಆಗ ಸಹಜವಾಗಿ ಚಿತ್ರದ ತಂತ್ರಜ್ಞರಲ್ಲೂ ಪರಭಾಷಿಗರಿಗೇ ಮಣೆ ಹಾಕಲಾಗುತ್ತಿತ್ತು. ಈಗ ಎಲ್ಲವೂ ಬದಲಾಗಿದೆ. ಕನ್ನಡಿಗರೇ ತಮಿಳು, ಹಿಂದಿ ಸ್ಟಾರ್ ಚಿತ್ರಗಳನ್ನು ನಿರ್ಮಿಸುವಷ್ಟು ಬೆಳೆದು ನಿಂತಿದ್ದಾರೆ.
ಹೊಸಬರ ಚಿತ್ರಗಳನ್ನು ನಿರ್ಮಿಸುವ ಧೈರ್ಯ ಬಂದಿರುವುದು ಹೇಗೆ?
►ಹೊಸಬರು ಪ್ರತಿಭಾವಂತರೂ ಆಗಿದ್ದಾಗ ಅವರ ಕೆಲಸದಲ್ಲಿ ಆ ಪ್ರತಿಭೆ ಕಾಣಿಸಿದಾಗ ಅಂಥವರ ಚಿತ್ರಗಳ ನಿರ್ಮಾಣಕ್ಕೆ ಭರವಸೆ ಮೂಡುತ್ತದೆ. ‘ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಚಿತ್ರವನ್ನೇ ಗಮನಿಸಿ. ಅದರ ನಿರ್ದೇಶಕ ಸಾದ್‌ಖಾನ್‌ನ ಟ್ಯಾಲೆಂಟ್ ನೋಡಿಯೇ ಭಾಗಿಯಾದೆ. ಭೀಮಸೇನ ನಳಮಹಾರಾಜ ಚಿತ್ರದ ಕಾರ್ತಿಕ್ ತಯಾರಿಸಿದ ಕಥೆಯೂ ಅದ್ಭುತ. ಚಾರ್ಲಿ ನಿರ್ದೇಶಕ ಕಿರಣ್‌ರಾಜ್ ನಮ್ಮೊಂದಿಗೆ ಕೆಲಸ ಮಾಡಿದವರು. ಕಥೆಯೊಂದು ಶುರುವಾಯಿತು ಡೈರೆಕ್ಟರ್ ಸೆನ್ನಾ ಹೆಗ್ಡೆಯವರು ಹಿಂದೆ ಒಂದು ಸಣ್ಣ ಬಜೆಟ್ ಚಿತ್ರದಲ್ಲಿ ತಮ್ಮ ಪ್ರತಿಭೆ ನಿರೂಪಿಸಿದವರು.
ನೀವು ನಿರ್ಮಾಣದಲ್ಲಿ ತಲೆ ಕೆಡಿಸಿಕೊಂಡಾಗ, ಅದು ನಿಮ್ಮ ನಿರ್ದೇಶನ ಮತ್ತು ನಟನೆಯ ಮೇಲೆ ಪರಿಣಾಮ ಬೀರುವುದಿಲ್ಲವೇ?
►ನಾನು ನಿರ್ಮಿಸುವ ಚಿತ್ರದ ಕಥೆ ಮತ್ತು ನಿರ್ದೇಶಕರ ಬಗ್ಗೆ ಮಾತ್ರ ಆಲೋಚಿಸುತ್ತೇನೆ. ನಮ್ಮ ನಿರ್ಮಾಣ ತಂಡದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿಕೊಂಡಿದ್ದಾರೆ. ನಮ್ಮ ತಂಡ ಸ್ಟ್ರಾಂಗ್ ಆಗಿದೆ. ಪ್ರೊಡಕ್ಷನ್ ಕಡೆಯಿಂದ ಎಲ್ಲ ಅವರೇ ನೋಡಿಕೊಳ್ಳುತ್ತಾರೆ. ನಾನು ಕ್ರಿಯೇಟಿವ್ ವಿಭಾಗದಲ್ಲಿ ಮಾತ್ರ ಭಾಗಿಯಾಗುತ್ತೇನೆ. ಅದರೊಂದಿಗೆ ಹೊಸ ಪ್ರತಿಭಾವಂತರು ಪ್ರಥಮ ಚಿತ್ರ ಮಾಡುವಾಗ ನಿರ್ಮಾಣ ವಿಭಾಗದ ಬಗ್ಗೆಯೂ ಕಾಳಜಿ ವಹಿಸಿ ಜವಾಬ್ದಾರಿುುತವಾಗಿ ಕೆಲಸ ಮಾಡುತ್ತಿರುತ್ತಾರೆ.
ಹುಲಿರಾಯ ಚಿತ್ರಕ್ಕೆ ನಿರೀಕ್ಷಿತ ಗೆಲುವು ದೊರಕಿಲ್ಲ ಎಂಬ ಬಗ್ಗೆ ಏನು ಹೇಳುತ್ತೀರಿ?
►ಹೌದು. ಚಿತ್ರ ಬಾಕ್ಸ್ ಆಫೀಸಿನಲ್ಲಿ ನಮ್ಮ ನಿರೀಕ್ಷೆಯ ಗೆಲುವು ದಾಖಲಿಸಲಿಲ್ಲ. ಆದರೆ ಸ್ಯಾಟ್‌ಲೈಟ್ ರೇಟ್ ಸೇರಿದಂತೆ ಇತರ ವಿಭಾಗಗಳಿಂದ ದೊರಕಿರುವ ಪ್ರತಿಕ್ರಿಯೆ ನಮ್ಮನ್ನು ಸೇಫ್ ಮಾಡಿದೆ. ಇಲ್ಲಿ ನಿಮಗೆ ತಿಳಿದಿರುವಂತೆ ನಾನು ದುಡ್ಡು ಮಾಡುವುದನ್ನಷ್ಟೇ ಗುರಿಯಾಗಿಸಿಕೊಂಡಿರುವ ನಿರ್ಮಾಪಕ ಅಲ್ಲ. ಹಾಗಾಗಿ ಒಂದು ಒಳ್ಳೆಯ ಸಿನೆಮಾಗೆ ಬೆಂಬಲವಾಗಿ ನಿಂತ ತೃಪ್ತಿ ಇದೆ. ಮುಂದೆಯೂ ಇರುತ್ತದೆ.
ಹೆಚ್ಚಿನ ಕರಾವಳಿಯ ಕಲಾವಿದರಿಗಿರುವ ಮುಂಬೈ ಸಿನೆಮಾ ರಂಗದ ಕನಸು ನಿಮಗೂ ಇದೆಯೇ?
►ಕರಾವಳಿ ಮತ್ತು ಮುಂಬೈಯ ಸಂಬಂಧ ಹಳೆಯದು. ಆದರೆ ನನಗೆ ಚೆನ್ನಾಗಿ ಅರ್ಥವಾಗುವ, ಆಪ್ತವಾಗುವ ಭಾಷೆ ಕನ್ನಡ. ಉಳಿದಂತೆ ಹಿಂದಿ ಚಿತ್ರರಂಗವನ್ನು ನಾನು ಕೂಡ ಇಷ್ಟಪಡುತ್ತೇನೆ. ಅಲ್ಲಿನ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ. ಒಂದಲ್ಲ ಒಂದು ದಿನ ವಿಭಿನ್ನ ಚಿತ್ರವೊಂದರ ಮೂಲಕ ಅಲ್ಲಿಯೂ ಗುರುತಿಸಿಕೊಳ್ಳಬೇಕೆಂಬ ಹಂಬಲ ಇರುವುದು ಸುಳ್ಳಲ್ಲ.
ಕಲಾವಿದನಾಗಿದ್ದುಕೊಂಡು ಸಮಕಾಲೀನ ಸಾಮಾಜಿಕ, ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವುದರ ಬಗ್ಗೆ ನಿಮ್ಮ ಅನಿಸಿಕೆ ಏನು?
►ಕಲಾವಿದನಾಗಿದ್ದುಕೊಂಡು ವರ್ತಮಾನದ ಸಮಕಾಲೀನ ರಾಜಕೀಯ, ಸಾಮಾಜಿಕ ವಿಚಾರಗಳಿಗೆ ಪ್ರತಿಕ್ರಿಯಿಸಬಾರದು ಎನ್ನುವುದು ತಪ್ಪು . ಕಲಾವಿದರಿಗೆ ಮಾತ್ರವಲ್ಲ ಪ್ರತಿಯೊಬ್ಬ ನಾಗರೀಕರಿಗೂ ಅಂತಹದ್ದೊಂದು ಪ್ರತಿಕ್ರಿಯಿಸುವ ಬದ್ಧತೆ ಇರಬೇಕು. ಆದರೆ ನಾನು ಸಾಮಾನ್ಯವಾಗಿ ಅಂಥ ವಿಚಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ನನಗೆ ಕ್ರೀಡೆಯ ಬಗ್ಗೆಯಾಗಲಿ, ರಾಜಕೀಯದ ಬಗ್ಗೆಯಾಗಲಿ ಸ್ವಲ್ಪವೂ ಅರಿವಿಲ್ಲ. ಸರಿಯಾಗಿ ತಿಳಿದುಕೊಳ್ಳದೇ ಹೇಳಿಕೆ ನೀಡುವುದು ತಪ್ಪು. ಹಾಗಾಗಿ ನಾನು ಆ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದುಕೊಂಡಿದ್ದೇನೆ.
ಕಲಾತ್ಮಕ ಸಿನೆಮಾಗಳು ಮತ್ತು ಅವುಗಳಿಂದ ಬರುವ ಪ್ರಶಸ್ತಿಗಳ ಕುರಿತು ನಿಮ್ಮ ಅನಿಸಿಕೆ ಏನು?
►ಸಿನೆಮಾ ಅಂದರೆ ಸಿನೆಮಾ ಅಷ್ಟೆ. ಕಮರ್ಷಿಯಲ್ ಚಿತ್ರಗಳು ಹೆಚ್ಚು ಜನರನ್ನು ತಲುಪುತ್ತವೆ. ಕಲಾತ್ಮಕ ಚಿತ್ರಗಳ ಮೂಲಕ ಒಳ್ಳೆಯ ಸಂದೇಶಗಳು ಜನರಿಗೆ ತಲುಪುತ್ತವೆ ಎಂದರೆ ಅದೂ ಒಳ್ಳೆಯದೇ. ಪ್ರಶಸ್ತಿಗಳು ಸಿಗುವುದು ಹೊಸ ಪ್ರಯೋಗಕ್ಕೆ ಉತ್ತೇಜನಕಾರಿಯಾಗುತ್ತವೆ.
ನಿಮ್ಮ ಹೊಸ ಚಿತ್ರಗಳ ಬಗ್ಗೆ ಹೇಳಿ?
►ಸದ್ಯಕ್ಕೆ ನಾನು ನಾಯಕನಾಗಿರುವ ಶ್ರೀಮನ್ನಾರಾಯಣ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಅದರಲ್ಲಿ ನನ್ನ ಗೆಟಪ್ ಸ್ವಲ್ಪ ವಿಭಿನ್ನವಾಗಿರುತ್ತದೆ. ಅದಕ್ಕಾಗಿ ಒಂದಷ್ಟು ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಅದು ಯಾವ ರೀತಿಯಿರುತ್ತದೆ ಎನ್ನುವುದು ಪರದೆಯ ಮೂಲಕವೇ ಬಯಲಾಗುವುದು ಉತ್ತಮ. ಒಂದು ತಿಂಗಳ ಬಳಿಕ ಚಿತ್ರೀಕರಣ ಆರಂಭ. ಅದರ ನಂತರ ಒಂದಷ್ಟು ಸಿನೆಮಾಗಳು ಲೈನ್‌ಅಪ್ ಆಗುತ್ತಿದೆ. ‘ಥಗ್ಸ್ ಆಫ್ ಮಾಲ್ಗುಡಿ’ ಕೂಡ ಪಟ್ಟಿಯಲ್ಲಿದೆ.
‘ಥಗ್ಸ್ ಆಫ್ ಮಾಲ್ಗುಡಿ’ ಚಿತ್ರವನ್ನು ಸುದೀಪ್ ಹೇಳಿದ ಸಮಯಕ್ಕೆ ಮಾಡಲಾಗಿಲ್ಲ ಎನ್ನುವುದು ನಿಜವೇ?
►ಹೌದು. ಚಿತ್ರವನ್ನು ಈ ಜೂನ್‌ಗೆ ತರುವ ಯೋಜನೆ ಹಾಕಿದ್ದೆವು. ಆದರೆ ನನ್ನ ಶ್ರೀಮನ್ನಾರಾಯಣ ಚಿತ್ರವು ತಡವಾದ ಕಾರಣ ಅದರ ಸ್ಕ್ರಿಪ್ಟ್ ಕೆಲಸ ಹಿಂದೆ ಬಿತ್ತು. ಕಥೆ ಕೇಳಿ ಮೆಚ್ಚಿ ಒಪ್ಪಿದ ಸುದೀಪ್ ಸರ್‌ಗೆ ಮತ್ತೆ ಉತ್ತಮ ಚಿತ್ರಕಥೆಯ ಮೂಲಕ ಇಂಪ್ರೆಸ್ ಮಾಡಬೇಕಾಗಿದೆ. ಒಟ್ಟಿನಲ್ಲಿ ಅವರು ಪಾತ್ರ ಮಾಡದಿದ್ದರೆ ಆ ಚಿತ್ರವೇ ನಡೆಯುವುದಿಲ್ಲ.
ನಿಮ್ಮ ಕುಟುಂಬದ ಬಗ್ಗೆ ಹೇಳಿ?
►ತಂದೆ ಶ್ರೀಧರ ಶೆಟ್ಟಿ ಕನ್‌ಸ್ಟ್ರಕ್ಷನ್ ವಿಭಾಗದಲ್ಲಿ ತೊಡಗಿಸಿಕೊಂಡವರು. ಅವರ ಹಾರ್ಡ್‌ವರ್ಕ್ ನೋಡಿ ಅದೇ ಸ್ಫೂರ್ತಿಯಲ್ಲಿ ಬೆಳೆದವನು ನಾನು. ಅಮ್ಮ ರಂಜನಾ ಶೆಟ್ಟಿ ಗೃಹಿಣಿ. ಅವರ ಪ್ರೀತಿ ಹೆಚ್ಚೇ ಇದೆ ನನ್ನ ಮೇಲೆ. ಅಣ್ಣ ರಂಜಿತ್ ಶೆಟ್ಟಿ ತಂದೆಯ ಬಿಸ್‌ನೆಸ್ ನೋಡಿಕೊಳ್ಳುತ್ತಿದ್ದಾನೆ. ಅಕ್ಕ ರಶ್ಮಿತ್ ಶೆಟ್ಟಿ ಯುಎಸ್‌ನಲ್ಲಿದ್ದಾಳೆ.
ನಿಮಗೆ ಇದುವರೆಗೆ ಮರೆಯಲಾಗದಂಥ ದೀಪಾವಳಿ ಯಾವುದು?
►ಬಾಲ್ಯದಲ್ಲಿನ ಪ್ರತಿಯೊಂದು ದೀಪಾವಳಿಯೂ ಮರೆಯಲಾಗದಂಥದ್ದು. ಊರಲ್ಲಿ ನಮ್ಮ ಮನೆಯ ಪೂಜೆಗಳನ್ನು ಮುಗಿಸಿಕೊಂಡು ಅಜ್ಜಿ ಮನೆಗೆ ಹೋಗುತ್ತಿದ್ದೆ. ಅಲ್ಲಿ ರಾತ್ರಿ ದೀಪ ತೋರಿಸಿಕೊಂಡು ತೀರ್ಥ ಪ್ರೋಕ್ಷಣೆಗೆ ಹೋಗುವ ಸಂಪ್ರದಾಯವಿತ್ತು. ತಂದೆ ದೀಪದೊಂದಿಗೆ ಮುಂದೆ ಹೋದರೆ ತೀರ್ಥ ಪ್ರೋಕ್ಷಿಸುವ ಜವಾಬ್ದಾರಿ ನನ್ನದಾಗಿರುತ್ತಿತ್ತು. ನಮ್ಮ ಕಡೆ ಆಯುಧ ಪೂಜೆಯನ್ನು ದೀಪಾವಳಿಯಲ್ಲೇ ಮಾಡುತ್ತಿದ್ದರು. ಆಯುಧ ಪೂಜೆಯಂದು ಪಟಾಕಿ ಹೊಡೆಯುತ್ತಿದ್ದೆವು. ಇತ್ತೀಚೆಗೆ ದೀಪಾವಳಿ ಬರೀ ದೀಪಗಳದ್ದೇ ಹಬ್ಬವಾಗಿದೆ.
ರಶ್ಮಿಕಾ ಜೊತೆಗೆ ಪ್ರೀತಿ ಮೂಡಲು ಒಂದು ಪ್ರಮುಖ ಕಾರಣವೇನು? ಮದುವೆಯ ಬಳಿಕದ ಯೋಜನೆಯೇನು?
►ಅಫ್‌ಕೋರ್ಸ್ ಆಕೆ ಸುಂದರಿ ನಿಜ. ಪಾತ್ರದ ಕ್ಯಾರೆಕ್ಟರ್ ಅಷ್ಟೇ ಅಲ್ಲ, ಅವಳ ರಿಯಲ್ ಲೈಫ್ ಕ್ಯಾರೆಕ್ಟರ್ ಕೂಡ ತುಂಬ ಇಷ್ಟವಾಯಿತು. ಕಿರಿಕ್ ಪಾರ್ಟಿ ಚಿತ್ರದ ಸೆಟ್‌ನಲ್ಲಿ ಪ್ರತಿಯೊಬ್ಬರನ್ನು ನಗಿಸಲು, ಖುಷಿಯಾಗಿರಿಸಲು ಪ್ರಯತ್ನ ಪಡುತ್ತಿದ್ದಳು. ಮದುವೆಯ ಬಳಿಕದ ಯೋಜನೆಗಿಂತ, ಮದುವೆಯೇ ಮುಂದಿನ ಎರಡು ವರ್ಷಗಳ ಒಳಗೆ ನಡೆಯುವಂಥ ದೀರ್ಘಕಾಲಿಕ ಯೋಜನೆ ಎನ್ನಲು ಬಯಸುತ್ತೇನೆ! ಸದ್ಯಕ್ಕೆ ಇಬ್ಬರ ಕೈಯಲ್ಲೂ ಒಪ್ಪಿಕೊಂಡಿರುವಂಥ ಒಂದಷ್ಟು ಚಿತ್ರಗಳಿವೆ. ಅದನ್ನು ಮುಗಿಸಿದ ಮೇಲೆ ಮದುವೆಯ ತಯಾರಿ ಶುರು. ಮದುವೆಯ ಬಳಿಕ ಕೂಡ ಅವಳಿಗೆ ಇಷ್ಟವಿದ್ದಲ್ಲಿ ನಟಿಸಬಹುದು. ಆಕೆಗೆ ಕಲಾವಿದೆಯಾಗಿ ಇಷ್ಟದ ಪಾತ್ರಗಳು ಸಿಕ್ಕಲ್ಲಿ ಖಂಡಿತವಾಗಿಯೂ ಮುಂದುವರಿಯಬಹುದು.