ಟಿಪ್ಪು ವಂಶಸ್ಥೆ ನೂರುನ್ನಿಸಾಳ ದುರಂತ ಕತೆ

Update: 2017-11-04 12:58 GMT

2ನೆ ವಿಶ್ವ ಮಹಾಯುದ್ಧದಲ್ಲಿ ಜರ್ಮನಿಯ ಫ್ಯಾಶಿಸ್ಟ್ ಸೇನೆಯ ವಿರುದ್ಧ ಹೋರಾಡಿದ ಸಾಹಸಿಗರಲ್ಲಿ ನೂರುನ್ನಿಸಾ ಸಹ ಒಬ್ಬರು. ಮೈಸೂರು ಹುಲಿ, ಕರ್ನಾಟಕದ ಹೆಮ್ಮೆಯ ಪುತ್ರ ಟಿಪ್ಪು ಸುಲ್ತಾನನ ಮರಿ ಮೊಮ್ಮಗಳಾಗಿದ್ದ ನೂರ್ ಇನಾಯತ್ ಖಾನ್ ಯಾನೆ ನೂರುನ್ನಿಸಾರ ಬದುಕು, ವಿಶ್ವ ಯುದ್ಧದಲ್ಲಿನ ಆಕೆಯ ಪಾತ್ರ ಹಾಗೂ ಹಿಟ್ಲರನ ಸೇನೆಗೆ ಸಿಲುಕಿ ದುರಂತ ಸಾವಿಗೀಡಾದ ಕಥಾನಕ ಇಲ್ಲಿದೆ.

ಒಬ್ಬರು ತಮ್ಮ ಸ್ವಾರ್ಥಕ್ಕಲ್ಲದೆ ಇತರರಿಗಾಗಿ ಮಾಡಬಹುದಾದ ಮಹೋನ್ನತ ತ್ಯಾಗ ಯಾವುದು?

ತಮ್ಮ ಪ್ರಾಣ ತೆರುವುದು.

ನಾವು ಸದಾ ಎಚ್ಚರದಿಂದಿರುವಂತೆ ಪ್ರಚೋದಿಸುವ ಈ ‘ಪ್ರಾಣ’ ಎಂಬುದನ್ನು, ಎಲ್ಲರೂ ಮುಂದೂಡಲು ಬಯಸುವಂತಹ ಈ ‘ಸಾವು’ ಎಂಬ ಸ್ಥಿತಿಯನ್ನು ಯಾವುದೋ ಒಂದು ಮಹೋನ್ನತ ಧ್ಯೇಯ ಹಾಗೂ ಕಾರಣಗಳಿಗಾಗಿ ನಿರ್ವ್ಯಾಮೋಹದಿಂದ ಚೆಲ್ಲಿಬಿಡುವುದು ಸುಲಭದ ಮಾತಲ್ಲ. ಅದೂ ಇಪ್ಪತ್ತೊಂಬತ್ತು ವಯಸ್ಸಿನ, ಸಂಗೀತ, ಸಾಹಿತ್ಯ ಎಲ್ಲಾ ಗೊತ್ತಿದ್ದ ಚೆಂದದ ಹುಡುಗಿ ನೂರ್ ಇನಾಯತ್ ಖಾನ್ ಯಾಕೆ ಅಂತಹ ನಿರ್ಧಾರ ಮಾಡಿದಳು ಎಂದು ಯೋಚಿಸುತ್ತಾ ಹೋದರೆ ಹಲವಾರು ಸಂಕಟದ, ದುರಂತದ ವಿಚಾರಗಳು ನಮ್ಮೆದುರು ಅನಾವರಣಗೊಳ್ಳುತ್ತವೆ.

ಈ ನೂರ್ ಟಿಪ್ಪು ಸುಲ್ತಾನನ ಮರಿ ಮೊಮ್ಮಗಳು!

ಬದುಕಲು ನೆಲೆ ಹುಡುಕುತ್ತಾ ಇಂಗ್ಲೆಂಡಿಗೆ ಹೋದ ಬಡವಿ ನೂರ್ ಎರಡನೆ ಮಹಾಯುದ್ಧ ಶುರುವಾದಾಗ ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರದ ರಕ್ಷಣೆಗಾಗಿ ನಾಝಿ ಜರ್ಮನಿಯ ವಿರುದ್ಧ ನಿಂತಳು. ಬ್ರಿಟಿಷ್ ಸೇನೆ ಸೇರಿ ಯುದ್ಧ ರಂಗಕ್ಕೆ ಕಾಲಿಟ್ಟಳು. ಇಂಗ್ಲೆಂಡ್ ಕೂಡ ಪ್ರಜಾಪ್ರಭುತ್ವ ವಿರೋಧಿಯೇ ಆಗಿದ್ದರೂ ಯುದ್ಧದಲ್ಲಿ ಜರ್ಮನಿಗೆ ಸೋಲಾಗಿ ಇಂಗ್ಲೆಂಡ್ ಮಿತ್ರಕೂಟಕ್ಕೆ ಗೆಲುವಾದರೆ ನಂತರ ಭಾರತಕ್ಕೆ ಸ್ವಾತಂತ್ರ ಸಿಗಲಿದೆ ಎಂಬ ಕಾರಣಕ್ಕಾಗಿಯೇ ನೂರ್ ಎರಡು ರಾಕ್ಷಸ ಶಕ್ತಿಗಳ ನಡುವಿನ ಕದನದಲ್ಲಿ ತನ್ನ ಪುಟ್ಟ ದೇಹವನ್ನು ಪಣಕ್ಕಿಟ್ಟು ಹತ್ಯೆಗೀಡಾದಳು. ಪ್ರತೀ ಮನುಷ್ಯನಿಗೂ ಸಿಗಬೇಕಾದ ಸ್ವಾತಂತ್ರದ ಹಂಬಲಕ್ಕಾಗಿ ನೀಡಲಾದ ಬಲಿದಾನ ಅದು. ಈ ಆಶಯದೆದುರು ತನ್ನ ಪ್ರಾಣ ಅಮೂಲ್ಯವೆನಿಸಲಿಲ್ಲ ನೂರ್‌ಗೆ. ದೇಶ-ಭಾಷೆಗಳ ಗಡಿಯೂ ಅಡ್ಡಬಂದಿರಲಿಲ್ಲ ಅವಳಿಗೆ.

ನೂರ್ ತರದ ಹಲವಾರು ವ್ಯಕ್ತಿಗಳು ನಮ್ಮ ಇತಿಹಾಸದಲ್ಲಿ ಆಗಿಹೋಗಿದ್ದಾರೆ. 1939ರ ಇದೇ ಎಪ್ರಿಲ್ ತಿಂಗಳು ಸ್ಪೇನ್ ಅಂತರ್ಯುದ್ಧ ಮುಗಿದ ಕಾಲ. ಸ್ಪೇನ್‌ನ ಪ್ರಜಾಸತ್ತಾತ್ಮಕ, ಜನಪರ ರಿಪಬ್ಲಿಕನ್ ಸರಕಾರವನ್ನು ಕಿತ್ತೊಗೆದು ಜನರಲ್ ಫ್ರಾಂಕೊ ನ್ಯಾಷನಲಿಸ್ಟ್ ಪಾರ್ಟಿ ಹೆಸರಿನಲ್ಲಿ ಅಧಿಕಾರ ಕಬಳಿಸಿ ಸರ್ವಾಧಿಕಾರಿಯಾಗಿದ್ದ. ಸ್ಪೇನ್‌ನ ಜನ ತಿರುಗಿಬಿದ್ದರು. ಫ್ರಾಂಕೋನ ಸೈನಿಕರೂ ಹಾಗೂ ಜನತೆಯ ನಡುವೆ ಘೋರ ಅಂತರ್ಯುದ್ಧ ನಡೆದಾಗ ಇಡೀ ಜಗತ್ತಿನ ಜನ ಸ್ಪೇನ್‌ನ ಪ್ರಜಾಪ್ರಭುತ್ವವಾದಿ ಜನತೆಯ ನೆರವಿಗೆ ನಿಂತಿದ್ದರು.

ಕ್ರಿಸ್ಟೋಫರ್ ಕಾಡ್‌ವೆಲ್ ಅವರಲ್ಲೊಬ್ಬ ತತ್ವಶಾಸ್ತ್ರ, ಕಾವ್ಯ, ಭೌತಶಾಸ್ತ್ರ ಏರೋನಾಟಿಕ್ಸ್ ಕುರಿತಾದ ಹಲವಾರು ಪುಸ್ತಕ ಬರೆದಿದ್ದ ಇಂಗ್ಲೆಂಡಿನ ಯುವಕ ಕಾಡ್‌ವೆಲ್ ಆ ಕಾಲದ ಅಸಾಮಾನ್ಯ ವಿದ್ವಾಂಸನಾಗಿದ್ದ. ಬಂಡವಾಳಶಾಹಿ ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆ ಧರ್ಮ, ನಿಸರ್ಗ, ಫಿಲಾಸಫಿ, ಸೌಂದರ್ಯದ ಕಲ್ಪನೆ ಎಲ್ಲವೂ ವಕ್ರೀಕರಣಗೊಳ್ಳುತ್ತಾ ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ತಡೆಯೊಡ್ಡುತ್ತವೆಂದು ನಿರೂಪಿಸಿದ್ದ. ಅವನ Studies in a dying culture (1938) Poems and the crisis in Physics (1939) Further studies in a dying culture (1949) ಪುಸ್ತಕಗಳು ಪಶ್ಚಿಮದ ಬೌದ್ಧಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿವೆ.

ಇಂತಹ ಅಸಾಮಾನ್ಯ ಬುದ್ಧಿಜೀವಿ, ಬರಹಗಾರ ಕಾಡ್‌ವೆಲ್ ಮನುಷ್ಯನ ಸ್ವಾತಂತ್ರ, ಘನತೆಯ ರಕ್ಷಣೆಗಾಗಿ ಅನ್ಯಾಯ, ಶೋಷಣೆ ಹಾಗೂ ದಮನದ ವಿರುದ್ಧ ಯುದ್ಧ ನಡೆಸಲು ಸ್ವಯಂ ಪ್ರೇರಣೆಯಿಂದ ಸ್ಪೇನ್‌ಗೆ ಹೋದ. ಅವರಂತೆಯೇ ನ್ಯಾಯದ ರಕ್ಷಣೆಗಾಗಿ ಹತ್ತಾರು ದೇಶಗಳಿಂದ ಸಾವಿರಾರು ಜನ ಬಂದು ಯುದ್ಧದಲ್ಲಿ ಭಾಗಿಯಾಗಿದ್ದರು. ಅಂಥವರೆಲ್ಲಾ ಸೇರಿಕೊಂಡು International Brigade ಅನ್ನೇ ರಚಿಸಿಕೊಂಡಿದ್ದರು. ಈ ಹಿಂಸಾತ್ಮಕ ಕ್ರೂರ ಯುದ್ಧದಲ್ಲಿ ಫ್ರಾಂಕೋನ ಫ್ಯಾಶಿಸ್ಟ್ ಸೇನೆಯ ಗುಂಡಿಗೆ 1937ರಲ್ಲಿ ಕಾಡ್‌ವೆಲ್ ಬಲಿಯಾದ.

ಆಗ ಕಾಡ್‌ವೆಲ್‌ಗೂ ಕೇವಲ ಇಪ್ಪತ್ತೊಂಬತ್ತು ವರ್ಷ. ಅದೇ ರೀತಿ ಅರ್ಜೆಂಟೀನಾದಲ್ಲಿ ಹುಟ್ಟಿ 1959ರ ಕ್ಯೂಬಾ ಕ್ರಾಂತಿಯಲ್ಲಿ ಭಾಗಿಯಾಗಿ ಕೊನೆಗೆ ಬೊಲಿವಿಯಾ ದೇಶದಲ್ಲಿ ಹೋರಾಟ ನಡೆಸಿ ಅಮೆರಿಕದಿಂದ ಹತ್ಯೆಗೀಡಾದ ಚೇ ಗವೇರಾ ಸಹ ಇದೇ ಆಶಯಗಳಿಗಾಗಿ ಪ್ರಾಣ ತೆತ್ತವನು. ಆಗ ಚೇಗೆ ಕೇವಲ ಮೂವತ್ತೊಂಬತ್ತು ವರ್ಷ.

ಎಲ್ಲೋ ನಡೆಯುವ ಯುದ್ಧ ನಮ್ಮನ್ನೇನು ಮಾಡೀತು, ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕೆಂಬ ಸಂದರ್ಭದಲ್ಲಿ ಇವತ್ತು ನಾವಿಲ್ಲ, ಅವತ್ತೂ ಇರಲಿಲ್ಲ. ನಮ್ಮ ರಾಷ್ಟ್ರಕವಿ ಕುವೆಂಪುರವರ ಆತ್ಮಕತೆ ‘ನೆನಪಿನ ದೋಣಿಯಲಿ’ ಓದಿದವರಿಗೆ ಹಿಟ್ಲರ್ ನನ್ನನ್ನು ತಬ್ಬಲಿ ಮಾಡಿದ ಎಂಬ ಕುವೆಂಪುರವರ ಮಾತು ನೆನಪಿರಬೇಕು.

ಮೊದಲ ಮಹಾಯುದ್ಧ ನಡೆಯುತ್ತಿದ್ದಾಗ ಜರ್ಮನ್ ಸಬ್ ಮರೀನ್ SMS Emchen ಬ್ರಿಟಿಷರ ವಸಾಹತಾಗಿದ್ದ ಭಾರತದ ಮೇಲೂ ದಾಳಿ ನಡೆಸಲು ಮದ್ರಾಸ್ ಬಂದರಿನಲ್ಲಿ ಕಾಣಿಸಿಕೊಂಡಿರುತ್ತದೆ. ಜನ ಭಯಭೀತರಾಗಿ ನಗರ ತ್ಯಜಿಸಿದ್ದರಿಂದ ಎಲ್ಲಾ ಅಸ್ತವ್ಯಸ್ತಗೊಳ್ಳುತ್ತದೆ. ಅದೇ ವೇಳೆ ಅಡಿಕೆ ಮಾರಲು ಮದ್ರಾಸ್‌ಗೆ ಬಂದಿದ್ದ ಕುವೆಂಪುರವರ ಪೋಷಕರಿಗೆ ಅಡಿಕೆ ಮಾರಲಾಗದೆ ಆ ಅರಾಜಕ ಪರಿಸ್ಥಿತಿಯಲ್ಲಿ ಅಪಾರ ನಷ್ಟವುಂಟಾಗುತ್ತದೆ. ಈ ನಷ್ಟ ಭರಿಸಲಾಗದೇ ಕುವೆಂಪು ಅವರ ತಂದೆ ತೀರ್ಥಹಳ್ಳಿಯಲ್ಲಿ ಕೆಲಕಾಲ ಹೊಟೇಲ್ ನಡೆಸಿ ಕೊನೆಗೆ ಅಕಾಲ ಮರಣಕ್ಕೀಡಾಗುತ್ತಾರೆ. ಯೂರೋಪಿನಲ್ಲಿ ಶುರುವಾದ ಮಹಾಯುದ್ಧ ಜಗತ್ತಿನ ಇನ್ನೊಂದು ಮೂಲೆಯಲ್ಲಿದ್ದ ತಣ್ಣನೆಯ ಮಲೆನಾಡಿನ ರೈತ ಕುಟುಂಬದ ನೆಮ್ಮದಿಯನ್ನು ಹೇಗೆ ನಾಶ ಮಾಡಿತೆಂಬುದನ್ನು ‘ಹಿಟ್ಲರ್ ನನ್ನನ್ನು ತಬ್ಬಲಿ ಮಾಡಿದ’ ಎನ್ನುವ ಮೂಲಕ ಕುವೆಂಪು ನಿರೂಪಿಸುತ್ತಾರೆ.

ನೂರ್‌ಗಳ ಬದುಕೂ ಸಹ ಇದೇ ರೀತಿ ಜಗತ್ತಿನ ಅಲ್ಲೋಲ ಕಲ್ಲೋಲಗಳ ಏಟಿಗೆ ಸಿಕ್ಕು ಛಿದ್ರವಾಯಿತು. ಈ ನೂರ್ ಹುಟ್ಟಿದ್ದು ಜನವರಿ 1, 1914 ರಂದು ರಷ್ಯಾದ ದೊರೆ ತ್ಸಾರ್‌ನ ಕ್ರೆಮ್ಲಿನ್ ಅರಮನೆಯಲ್ಲಿ. ಬೆಳೆದಿದ್ದು, ಓದಿದ್ದು ಫ್ರಾನ್ಸ್ ದೇಶದಲ್ಲಿ 2ನೆ ವಿಶ್ವ ಮಹಾಯುದ್ಧ ನಡೆಯುತ್ತಿದ್ದಾಗ ಗೂಢಚರ್ಯೆ ನಡೆಸಲು ಜೊತೆಗೂಡಿದ್ದು ಇಂಗ್ಲೆಂಡ್ ಸರಕಾರದೊಂದಿಗೆ, ಕೊನೆಗೆ ನಾಝಿಗಳಿಗೆ ಸೆರೆಸಿಕ್ಕು ಹತ್ಯೆಗೊಳಗಾದದ್ದು ಜರ್ಮನಿಯಲ್ಲಿ.

ಈಕೆಯ ಪೂರ್ತಿ ಹೆಸರು ನೂರುನ್ನಿಸಾ ಇನಾಯತ್ ಖಾನ್. ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮನಾದ ಮೈಸೂರು ಹುಲಿ ಟಿಪ್ಪು ಸುಲ್ತಾನನ ಮರಿ ಮೊಮ್ಮಗಳೀಕೆ! ನಮ್ಮ ಕನ್ನಡತಿ!!

ಕಳೆದ ತಿಂಗಳು ಲಂಡನ್‌ನಲ್ಲಿ ಈ ನೂರ್ ಇನಾಯತ್ ಖಾನ್‌ಳ ದುರಂತ ಜೀವನ ಕತೆಯನ್ನು ಹೇಳುವ ಪುಸ್ತಕ ‘ದಿ ಸ್ಪೈ ಪ್ರಿನ್ಸಸ್’ "The Spy Princess’ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದೆ. ಯುದ್ಧ ಕಾಲದ ಬ್ರಿಟಿಷ್, ಫ್ರೆಂಚ್ ಹಾಗೂ ಜರ್ಮನ್ ದಾಖಲೆಗಳನ್ನು ಅಧ್ಯಯನ ಮಾಡಿ ನೂರ್ ಬಗ್ಗೆ ಪುಸ್ತಕ ಬರೆದಿರುವವರು ಪತ್ರಕರ್ತೆ ಶ್ರಬಣಿ ಬಸು. ಈಕೆ ಕಲ್ಕತ್ತಾ ಮೂಲದ ‘ಸಂಡೆ’ ಪತ್ರಿಕೆಯ ಲಂಡನ್ ಬಾತ್ಮೀದಾರರಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೈದರಲಿ ಮತ್ತು ಟಿಪ್ಪು ಸುಲ್ತಾನ್ 1766-1769, 1780-1784, 1789-1792 ಹಾಗೂ 1799 ರಲ್ಲಿ ನಾಲ್ಕು ಬಾರಿ ಘೋರ ಯುದ್ಧ ನಡೆಸಿದ್ದರು.

ಕೇವಲ ತಮ್ಮ ರಾಜ್ಯಾಧಿಕಾರ ಉಳಿಸಿಕೊಳ್ಳಬೇಕೆಂಬ ಸೀಮಿತ ಉದ್ದೇಶದ ಬದಲಾಗಿ ಇಡೀ ಭಾರತದಿಂದಲೇ ಬ್ರಿಟಿಷರನ್ನು ಹೊಡೆದೋಡಿಸಬೇಕೆಂಬ ಗುರಿ ಅವರದಾಗಿತ್ತು. 1799ರ ನಾಲ್ಕನೆ ಮೈಸೂರು ಯುದ್ಧದಲ್ಲಿ ಟಿಪ್ಪು ಮರಣಹೊಂದಿದ ನಂತರ ಬ್ರಿಟಿಷರು ಟಿಪ್ಪುವಿನ ಸಣ್ಣ ಅರಮನೆ ನಾಶ ಮಾಡಿ ಅವನ ಖಾಸಗಿ ಲೈಬ್ರರಿಯಲ್ಲಿದ್ದ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು, ಮತ್ತಿತರ ಅಮೂಲ್ಯ ವಸ್ತುಗಳನ್ನು ಇಂಗ್ಲೆಂಡಿಗೆ ಸಾಗಿಸಿಬಿಟ್ಟರು. ಟಿಪ್ಪುವಿನ ಕುಟುಂಬದ ಸದಸ್ಯರೂ ಮುಂದಿನ ದಿನಗಳಲ್ಲಿ ನೆಲೆ ತಪ್ಪಿದವರಂತಾಗಿ ನಾನಾ ದಿಕ್ಕುಗಳಲ್ಲಿ ಚದುರಿ ಹೋದರು. ಟಿಪ್ಪುವಿನ ವಂಶಸ್ಥರ ಒಂದು ಗುಂಪು ಕೊಲ್ಕತ್ತಾ ರೈಲು ನಿಲ್ದಾಣದಲ್ಲಿ ನಿರ್ವಸಿತರಂತೆ ಬದುಕುತ್ತಿರುವ ಬಗ್ಗೆ ಈಗ್ಗೆ ಕೆಲ ವರ್ಷಗಳ ಹಿಂದೆ ಪತ್ರಿಕಾ ವರದಿಗಳೂ ಪ್ರಕಟಗೊಂಡಿದ್ದವು. ಹೀಗೆ ನಿರಾಶ್ರಿತರಾದವರ ಪೈಕಿ ಟಿಪ್ಪುವಿನ ಮರಿ ಮೊಮ್ಮಗಳೇ ಈ ನೂರ್ ಇನಾಯತ್ ಖಾನ್.

ಈಕೆಯ ತಂದೆ ಹಝ್ರತ್ ಇನಾಯತ್ ಖಾನ್ ಓರ್ವ ಸೂಫಿ ಯಾಗಿದ್ದು ಸಂಗೀತ ಶಿಕ್ಷಕರಾಗಿದ್ದರು. ಹಝ್ರತ್‌ರವರು ಬದುಕುವ ಮಾರ್ಗ ಹುಡುಕುತ್ತಾ ಕುಟುಂಬ ಸಮೇತ ರಷ್ಯಾ ದೇಶಕ್ಕೆ ಒಮ್ಮೆ ಹೋಗುತ್ತಾರೆ. ಅಲ್ಲಿನ ದೊರೆ ತ್ಸಾರ್‌ನನ್ನು ಕಂಡು ನೆರವು ಕೇಳುವ ಉದ್ದೇಶ ಅವರದ್ದಾಗಿತ್ತು. ಆದರೆ 1917ರ ರಷ್ಯನ್ ಸಮಾಜವಾದಿ ಕ್ರಾಂತಿಯ ಪ್ರಕ್ಷುಬ್ಧತೆ ಅದಾಗಲೇ ರಷ್ಯಾದಾದ್ಯಂತ ಹರಡುತ್ತಿತ್ತು. ತ್ಸಾರ್ ಚಕ್ರವರ್ತಿಗೆ ತನ್ನ ತಲೆ ಉಳಿಸಿಕೊಳ್ಳುವುದೇ ಕಷ್ಟಕರವಾಗುವಂತಹ ಸನ್ನಿವೇಶ ಇದ್ದುದರಿಂದ ಅವನು ಹಝ್ರತ್‌ರ ಬಗ್ಗೆ ಗಮನ ನೀಡಲಿಲ್ಲ. ಆಗ ಗರ್ಭಿಣಿಯಾಗಿದ್ದ ಹಝ್ರತ್‌ರ ಅಮೆರಿಕನ್ ಪತ್ನಿ ಕ್ರೆಮ್ಲಿನ್ ಅರಮನೆಯಲ್ಲೇ 1.1.1914 ರಲ್ಲಿ ನೂರ್‌ಗೆ ಜನ್ಮ ನೀಡಿದರು. ನಂತರ ಹಝ್ರತ್ ಕುಟುಂಬ ಪ್ಯಾರಿಸ್ ನಗರಕ್ಕೆ ವಲಸೆ ಹೋಯಿತು. ನೂರ್ ಚಿಕ್ಕ ಹುಡುಗಿಯಾಗಿದ್ದಾಗಲೇ 1927ರಲ್ಲಿ ತಂದೆ ಹಝ್ರತ್ ಇಂಡಿಯಾದಲ್ಲಿ ಮೃತಪಟ್ಟರು.

ಪ್ಯಾರಿಸ್ ನಗರದಲ್ಲಿ ಅತ್ಯಂತ ಬಡತನದಲ್ಲಿ ಜೀವನ ನಿಭಾಯಿಸಿದ ನೂರ್ ಉದ್ಯೋಗ ಪಡೆಯಲು ನರ್ಸಿಂಗ್ ತರಬೇತಿ ಪಡೆದಳಾದರೂ ನಂತರ ಅದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಳು. ಮಕ್ಕಳ ಮನಃಶಾಸ್ತ್ರದ ಅಧ್ಯಯನ ನಡೆಸಿದಳು. ಫ್ರೆಂಚ್ ಭಾಷೆಯಲ್ಲಿ ಮಕ್ಕಳ ಪತ್ರಿಕೆಯೊಂದನ್ನು ಪ್ರಕಟಿಸಬೇಕೆಂಬ ಯೋಚನೆಯೂ ಅವಳಿಗಿತ್ತು. ಸೂಫಿ ಸಂಗೀತದಲ್ಲಿ ಅಪಾರ ಆಸಕ್ತಿ, ಪರಿಣತಿಯಿದ್ದ ನೂರ್ ಸ್ವತಃ ಕವಿತೆ ಬರೆಯುತ್ತಿದ್ದಳು. 1939 ರಲ್ಲಿ ಮಕ್ಕಳಿಗಾಗಿ ಜಾತಕ ಕತೆ ಸ್ವರೂಪದ 20 ಕತೆಗಳನ್ನು ಬರೆದು ಪ್ರಕಟಿಸಿದಳು.

ಆಗಲೇ ಯೂರೋಪಿನಲ್ಲಿ ಎರಡನೆ ವಿಶ್ವ ಮಹಾಯುದ್ಧ ಸ್ಫೋಟಗೊಂಡಿತು. 1940ರಲ್ಲಿ ಹಿಟ್ಲರ್‌ನ ನಾಝಿ ಸೇನೆ ಫ್ರಾನ್ಸ್ ಅನ್ನು ಆಕ್ರಮಿಸಿತು. ಪ್ಯಾರಿಸ್ ನಗರದಲ್ಲಿ ನಾಝಿಗಳ ಆಡಳಿತ ಶುರುವಾಯಿತು. ಆಗಲೇ ತನ್ನ ತಮ್ಮ ವಿಲಾಯತ್ ಖಾನ್‌ನೊಂದಿಗೆ ಇಂಗ್ಲೆಂಡ್‌ಗೆ ವಲಸೆ ಹೋಗಲು ನಿರ್ಧರಿಸಿದಳು ನೂರ್. ಪ್ರಜಾಪ್ರಭುತ್ವ ಹಾಗೂ ಮನುಷ್ಯತ್ವದ ಘನತೆಯ ರಕ್ಷಣೆಗಾಗಿ ತಾನೂ ನಾಝಿಗಳ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದಳು ನೂರ್. ತನ್ನಿಚ್ಛೆಯಂತೆ ಬ್ರಿಟಿಷ್ ಮಿಲಿಟರಿ ಅಧಿಕಾರಿಗಳನ್ನು ಭೇಟಿಯಾದಳು. ಕೊನೆಗೆ ವೈರ್‌ಲೆಸ್ ಹಾಗೂ ರೇಡಿಯೊ ಮೂಲಕ ಬ್ರಿಟನ್‌ಗೆ ವರದಿ ನೀಡುವ ಗೂಢಚರ್ಯೆ ಜವಾಬ್ದಾರಿಯನ್ನು ನೂರ್‌ಗೆ ವಹಿಸಲಾಯಿತು.

‘‘ನೀವೇಕೆ ಈ ಘೋರ, ಪ್ರಾಣಾಪಾಯ ತರುವ ಯುದ್ಧದಲ್ಲಿ ಪಾಲ್ಗೊಳ್ಳಲು ಬಯಸುತ್ತೀರಿ’’ ಎಂದು ನೂರ್‌ಳ ಸಂದರ್ಶನ ಮಾಡಿದ ಬ್ರಿಟಿಷ್ ಮಿಲಿಟರಿ ಆಫೀಸರ್ ಪ್ರಶ್ನಿಸಿದಾಗ ನೂರ್, ‘‘ಈ ಯುದ್ಧದಲ್ಲಿ ಇಂಗ್ಲೆಂಡ್‌ಗೆ ಜಯವಾಗಿ, ಆ ಮೂಲಕ ನನ್ನ ತಾಯ್ನೆಡು ಭಾರತಕ್ಕೆ ಸ್ವಾತಂತ್ರ ಸಿಗಬೇಕು ಎಂಬುದು ನನ್ನ ಅಭಿಲಾಷೆ’’ ಎಂದು ತೀವ್ರ ಭಾವುಕತೆಯಿಂದ ಹೇಳಿದ್ದಳಂತೆ. ಅದೇ ವೇಳೆ ನೂರ್‌ಳ ತಮ್ಮ ವಿಲಾಯತ್ ಖಾನ್ ಬ್ರಿಟನ್‌ನ ರಾಯಲ್ ಏರ್ ಫೋರ್ಸ್ (ಆರ್‌ಎಎಫ್) ಸೇರಿದ್ದ. ಬ್ರಿಟಿಷ್ ಮಿಲಿಟರಿಯ WAAF 9 Women’s Auxilary AIR Force ವಿಭಾಗಕ್ಕೆ ಸೇರಿಕೊಂಡ ನೂರ್‌ಳಿಗೆ ಹ್ಯಾಂಪ್‌ಫಯತ್‌ನಲ್ಲಿ ಗೂಢಚರ್ಯೆ ತರಬೇತಿ ನೀಡಲಾಯಿತು. 1943ರ ಜೂನ್ 16 ರಂದು ನೂರ್‌ಗೆ ಜೀನ್ ಮಾರಿ ರೆಗ್‌ನಿವಾಲ್ ಎಂಬ ಫ್ರೆಂಚ್ ಹೆಸರು ನೀಡಿ ಮಕ್ಕಳ ಶಿಕ್ಷಕಿ ಎಂಬಂತೆ ಬಿಂಬಿಸಿ ರಹಸ್ಯವಾಗಿ ಪ್ಯಾರಿಸ್‌ಗೆ ಕಳುಹಿಸಲಾಯಿತು. ಆಗ ಅವಳ ರಹಸ್ಯ ಕೋಡ್ ನೇಮ್ ‘ಮಾಡೆಲೀನ್’ ಎಂದಾಗಿತ್ತು. ಹೀಗೆ ವಿಶ್ವದ ಮೊಟ್ಟಮೊದಲ ಮಹಿಳಾ ವೈರ್‌ಲೆಸ್ ಗೂಢಚಾರಿಣಿಯಾಗಿ ನೂರ್ ತನ್ನ ಚಟುವಟಿಕೆ ಆರಂಭಿಸಿದಳು. ಆದರೆ ಜರ್ಮನ್ನರ ಗುಪ್ತ ಪೊಲೀಸ್ ಗೆಸ್ತಪೊ ಸಹ ಚುರುಕಾಗಿತ್ತು. ರೇಡಿಯೋ ಸಂದೇಶಗಳು ಹರಿದಾಡುವಾಗ ಕೆಲವೊಮ್ಮೆ ಅವು ಜರ್ಮನ್ ರೇಡಿಯೋ ಸಂಪರ್ಕ ಕೇಂದ್ರಗಳ ಗಮನಕ್ಕೂ ಬರುತ್ತಿದ್ದವು. ಈ ಬಗ್ಗೆ ತನಿಖೆ ಶುರು ಮಾಡಿದ ಗೆಸ್ತಪೊ ಪೊಲೀಸರು ಶೀಘ್ರವೇ ನೂರ್‌ಳ ಟೀಮ್‌ನಲ್ಲಿದ್ದ ಕೆಲವರನ್ನು ಅರೆಸ್ಟ್ ಮಾಡಿದರು. ಸನ್ನಿವೇಶ ಅಪಾಯಕಾರಿ ಹಂತ ತಲುಪಿದಾಗ ನೂರ್ ಪ್ಯಾರಿಸ್‌ನಲ್ಲೇ ಉಳಿದು ತನ್ನ ಫ್ಯಾಶಿಸಂ ವಿರೋಧಿ ಚಟುವಟಿಕೆ ಮುಂದುವರಿಸಿದಳು. ತನ್ನ ಸುರಕ್ಷತೆ ದೃಷ್ಟಿಯಿಂದ ಅವಳು ಆಗಿಂದಾಗ್ಗೆ ಮನೆ ಹಾಗೂ ಗುರುತು ಬದಲಾಯಿಸಬೇಕಾಗುತ್ತಿತ್ತು. ಈ ಗಡಿಬಿಡಿಯಲ್ಲೇ ನೂರ್‌ಳ ಪರಿಚಿತ ವ್ಯಕ್ತಿಯೋರ್ವನ ತಂಗಿ ರೀನಿ ಗ್ಯಾರಿ ಎಂಬಾಕೆ ನೂರ್‌ಳ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಹೆದರಿ ಜರ್ಮನ್ ಪೊಲೀಸರಿಗೆ ಮಾಹಿತಿ ಕೊಟ್ಟುಬಿಟ್ಟಳು. ಗೆಸ್ತಪೊ ತಕ್ಷಣ ನೂರ್‌ಳನ್ನು ಬಂಧಿಸಿ ಜರ್ಮನಿಯ PROR ZHELM  ಜೈಲಿಗೆ ರವಾನಿಸಿತು. ಅಲ್ಲಿ 10 ತಿಂಗಳ ಕಾಲ ಏಕಾಂತ ಸೆರೆವಾಸ ಅನುಭವಿಸಿದ ನೂರ್‌ಳಿಗೆ ಜರ್ಮನ್ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತು. ಅವಳನ್ನು ಮೃತ್ಯು ದಂಡನೆಗೆ ಒಳಗಾದ ಬಂದಿಗಳಿಗಾಗಿಯೇ ಇದ್ದ(Nzcht and nebel Night anf Fos ಸೆರೆ ವಿಭಾಗದಲ್ಲಿ ಇಡಲಾಗಿತ್ತು.

ಸೆರೆಯಲ್ಲಿ ಜರ್ಮನ್ ಪೊಲೀಸರಿಂದ ಅತ್ಯಂತ ದಾರುಣವಾದ ರೀತಿಯಲ್ಲಿ ಹಿಂಸೆ, ದೈಹಿಕ ಅವಮಾನಗಳಿಗೆ ತುತ್ತಾದ ನೂರ್‌ಳನ್ನು 1944ರ ಸೆಪ್ಟಂಬರ್ 13ರಂದು ದಭಾವು ಸೆರೆಮನೆಯಲ್ಲಿ ಇನ್ನಿತರ ಮೂವರು ಬಂಧಿಗಳ ಜೊತೆ ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಲೆ ಮಾಡಲಾಯಿತು.

ಅತ್ಯಂತ ಸರಳ ವ್ಯಕ್ತಿತ್ವದ, ಚೆಲುವಾಗಿದ್ದ, ಸಂಗೀತ ಪ್ರೇಮಿ, ಬರಹಗಾರ್ತಿ, ಇದೆಲ್ಲಕ್ಕಿಂತ ಮಿಗಿಲಾಗಿ ಇಡೀ ಮನುಷ್ಯ ಜನಾಂಗದ ಕ್ರೂರ ಶತ್ರುಗಳಾಗಿದ್ದ ಜರ್ಮನಿಯ ನಾಝಿ ಫ್ಯಾಶಿಸಂ ವಿರುದ್ಧ ಹೋರಾಡಿದ್ದ ನೂರ್ ಬದುಕು ಹೀಗೆ ದುರಂತಮಯವಾಗಿ ಕೊನೆಗೊಂಡಿತ್ತು. ಟಿಪ್ಪು ಸುಲ್ತಾನ್ ಹೇಗೆ ಫ್ರೆಂಚ್ ಕ್ರಾಂತಿ, ಅಮೆರಿಕನ್ ಸ್ವಾತಂತ್ರ ಹೋರಾಟಗಳನ್ನು ಬೆಂಬಲಿಸಿದ್ದನೋ ಹಾಗೆ ಅವನ ವಂಶದ ಕುಡಿ ನೂರ್ ಸಹ ಅಂತಾರಾಷ್ಟ್ರೀಯ ನೆಲೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗಾಗಿ ಬಲಿಯಾದಳು.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News