ಸಿಬಿ ನರಸಿಂಹ ದೇವಾಲಯದಲ್ಲಿ ಟಿಪ್ಪು ಸುಲ್ತಾನನ ಪೇಂಟಿಂಗ್‌ಗಳು
ಹೈದರನ ಆತ್ಮಕತೆಯೆಂದೇ ಪರಿಗಣಿತವಾಗಿರುವ ‘ಹೈದರ್ ನಾಮ’ವನ್ನು ಹೈದರ್ ಹೇಳಿಕೊಂಡಂತೆ ಬರೆದುಕೊಂಡು ನಂತರ ಕೃತಿಯ ರೂಪದಲ್ಲಿ ನಿರೂಪಿಸಿದವನು ನಲ್ಲಪ್ಪ ಎಂಬ ನಂಬಿಕೆ ಇದೆ. ಹೈದರ್ ಹಾಗೂ ಟಿಪ್ಪು ಜೊತೆ ಅತ್ಯಂತ ಆಪ್ತ ನಂಟು-ಒಡನಾಟ ಹೊಂದಿದ್ದ ನಲ್ಲಪ್ಪ ಸಿಬಿಯಲ್ಲಿ ತಾನು ನಿರ್ಮಿಸಿದ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಈ ಮೊಗಲ್ ಶೈಲಿಯ ಮ್ಯೂರಲ್ ಪೈಂಟಿಂಗ್ಸ್ ಅನ್ನು ಅಳವಡಿಸುವಾಗ ತನ್ನ ನಂಬಿಕೆಯ ದೇವರುಗಳನ್ನಲ್ಲದೇ ತನ್ನ ಪ್ರಭುಗಳ ಬಗ್ಗೆ ತನಗಿದ್ದ ಆದರ ಹಾಗೂ ಗೌರವವನ್ನು ಬಿಂಬಿಸುವಂತೆ ಕೃಷ್ಣರಾಜ ಒಡೆಯರ್, ಟಿಪ್ಪು ಹಾಗೂ ಹೈದರಲಿಯವರ ದರ್ಬಾರಿನ ದೃಶ್ಯಗಳನ್ನು ಈ ದೇವಾಲಯದಲ್ಲಿ ಪೈಂಟಿಂಗ್‌ಗಳ ರೂಪದಲ್ಲಿ ಅಳವಡಿಸಿದ್ದಾನೆ.
ಕರ್ನಾಟಕದ ಸರ್ವ ಧರ್ಮ ಸಮನ್ವಯದ ಪರಂಪರೆಯ ಹಿರಿಮೆಯನ್ನು ಸಾರುವ ತಾಣವೊಂದು ಸಿಬಿ ಗ್ರಾಮದಲ್ಲಿದೆ.
(mural paintings) ತುಮಕೂರು-ಶಿರಾ ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಸಿಬಿಯಲ್ಲಿ ಈಗ್ಗೆ ಎರಡು ಶತಮಾನಕ್ಕೂ ಹಿಂದೆ ನಿರ್ಮಿಸಲಾಗಿರುವ ನರಸಿಂಹ ಸ್ವಾಮಿ ದೇವಾಲಯದ ಛಾವಣಿ ಹಾಗೂ ಗೋಡೆಗಳ ಮೇಲೆ ಮ್ಯೂರಲ್ ವರ್ಣ ಚಿತ್ರಗಳ ಸುಂದರ ರಚನೆಗಳಿವೆ.
ಹೈದರಲಿಯ ಆಡಳಿತದಲ್ಲಿ ಉನ್ನತ ಸ್ಥಾನ ಹೊಂದಿದ್ದ ನಲ್ಲಪ್ಪ ಎಂಬ ಬ್ರಾಹ್ಮಣ ವ್ಯಕ್ತಿಯೋರ್ವನ ಕುಟುಂಬದ ಉಸ್ತುವಾರಿಯಲ್ಲಿರುವ ಸಿಬಿ ನರಸಿಂಹ ದೇವಾಲಯವು ಕರ್ನಾಟಕದ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ.
ಈ ದೇವಾಲಯದ ಸುತ್ತಲೂ ಕೋಟೆಯ ಮಾದರಿಯ ಬಲವಾದ ಗೋಡೆಯನ್ನು ನಿರ್ಮಿಸಲಾಗಿದ್ದು ಮೂರು ಹಂತದ ಪ್ರವೇಶವನ್ನು ಹೊಂದಿದೆ. ದೇವಾಲಯದ ಪ್ರಾಕಾರ ಅಂಕಣವು ವಿಶಾಲವಾಗಿದ್ದು ರಾಮ, ಅಂಬೆಗಾಲು ಕೃಷ್ಣ, ಶ್ರೀರಂಗ ನರಸಿಂಹ, ಗಣೇಶ ಹಾಗೂ ಸಪ್ತಮಾತೃಕೆಯರ ವಿಗ್ರಹಗಳಿವೆ.
ಸಿಬಿ ನರಸಿಂಹ ದೇವಾಲಯದ ಬಹು ಮುಖ್ಯ ಆಕರ್ಷಣೆ ಎಂದರೆ ಅಲ್ಲಿನ ದೇವಾಲಯದ ಛಾವಣಿ ಹಾಗೂ ಗೋಡೆಗಳ ಮೇಲೆ ರಚಿಸಿರುವ ಮ್ಯೂರಲ್ ಪೇಂಟಿಂಗ್‌ಗಳು. ಮೊಗಲ್ ವಾಸ್ತುಶಿಲ್ಪ ಪರಂಪರೆಯ ಪ್ರಭಾವದಿಂದ ರಚನೆಯಾದಂತೆ ತೋರುವ ಸಿಬಿಯ ಮ್ಯೂರಲ್ ವರ್ಣಚಿತ್ರಗಳು ಅಂದಿನ ಮೈಸೂರು ರಾಜ್ಯದ ಅತ್ಯುತ್ತಮ ಕಲೆಯನ್ನು ಪ್ರತಿಫಲಿಸುವಂತಿದೆ.
ಈ ವರ್ಣಚಿತ್ರಗಳು ಮೂರು ಸಾಲಿನಲ್ಲಿದ್ದು ಮೇಲಿನ ಮೊದಲ ಸಾಲಿನಲ್ಲಿ ಕೃಷ್ಣ ನ ಬಾಲ ಲೀಲೆಗಳನ್ನು ಬಿಂಬಿಸುತ್ತಿವೆ. ಎರಡನೆಯ ಸಾಲಿನ ಚಿತ್ರಗಳು ಮೂರನೆಯ ಕೃಷ್ಣರಾಜ ಒಡೆಯರ್‌ರ ಆಸ್ಥಾನದ ಚಿತ್ರಣವನ್ನು ನೀಡುತ್ತವೆ. ಕೆಳಗಿನ ಮೂರನೆಯ ಸಾಲಿನಲ್ಲಿ ಮೈಸೂರಿನ ನವಾಬ ಹೈದರಲಿ ಹಾಗೂ ಟಿಪ್ಪು ಸುಲ್ತಾನರ ದರ್ಬಾರಿನ ಚಿತ್ರಗಳನ್ನು ವರ್ಣಮಯವಾಗಿ ಬಿಡಿಸಲಾಗಿದೆ.
ಸಿಬಿ ನರಸಿಂಹ ದೇವಾಲಯದಲ್ಲಿ ಪ್ರಾಕಾರ
ದೇವಾಲಯದ ಪ್ರವೇಶ ದ್ವಾರದ ಮೇಲಿನ ಛಾವಣಿಯಲ್ಲಿ ಕೃಷ್ಣ ಭಗವಾನ್ ಕೊಳಲು ನುಡಿಸುತ್ತಿದ್ದು ಅದೇ ಚಿತ್ರದ ಒಂದು ಭಾಗದಲ್ಲಿ ಟಿಪ್ಪು ಸುಲ್ತಾನನು ಹುಲಿಯೊಂದಿಗೆ ಸೆಣೆಸುತ್ತಿರುವ ಚಿತ್ರವನ್ನು ಬಿಡಿಸಲಾಗಿದೆ.
ಮೈಸೂರು ರಾಜ್ಯದಲ್ಲಿ ನೌಕರರಾಗಿದ್ದ ಕಚೇರಿ ಕೃಷ್ಣಪ್ಪ ಎಂಬವರಿಗೆ ಮೂವರು ಗಂಡು ಮಕ್ಕಳಿದ್ದು ಲಕ್ಷ್ಮೀನರಸಪ್ಪ, ಪುಟ್ಟಣ್ಣ ಹಾಗೂ ನಲ್ಲಪ್ಪ ಎಂಬವರು ಸರಕಾರದ ಪರವಾಗಿ ಕಂದಾಯ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರ ಪೈಕಿ ನಲ್ಲಪ್ಪನು ನವಾಬ್ ಹೈದರಲಿಯ ಆಪ್ತನಾಗಿದ್ದ.
ಹೈದರನ ಆತ್ಮಕತೆಯೆಂದೇ ಪರಿಗಣಿತವಾಗಿರುವ ‘ಹೈದರ್ ನಾಮ’ವನ್ನು ಹೈದರ್ ಹೇಳಿಕೊಂಡಂತೆ ಬರೆದುಕೊಂಡು ನಂತರ ಕೃತಿಯ ರೂಪದಲ್ಲಿ ನಿರೂಪಿಸಿದವನು ನಲ್ಲಪ್ಪ ಎಂಬ ನಂಬಿಕೆ ಇದೆ. ಹೈದರ್ ಹಾಗೂ ಟಿಪ್ಪು ಜೊತೆ ಅತ್ಯಂತ ಆಪ್ತ ನಂಟು-ಒಡನಾಟ ಹೊಂದಿದ್ದ ನಲ್ಲಪ್ಪ ಸಿಬಿಯಲ್ಲಿ ತಾನು ನಿರ್ಮಿಸಿದ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಈ ಮೊಗಲ್ ಶೈಲಿಯ ಮ್ಯೂರಲ್ ಪೈಂಟಿಂಗ್ಸ್ ಅನ್ನು ಅಳವಡಿಸುವಾಗ ತನ್ನ ನಂಬಿಕೆಯ ದೇವರುಗಳನ್ನಲ್ಲದೇ ತನ್ನ ಪ್ರಭುಗಳ ಬಗ್ಗೆ ತನಗಿದ್ದ ಆದರ ಹಾಗೂ ಗೌರವವನ್ನು ಬಿಂಬಿಸುವಂತೆ ಕೃಷ್ಣರಾಜ ಒಡೆಯರ್, ಟಿಪ್ಪು ಹಾಗೂ ಹೈದರಲಿಯವರ ದರ್ಬಾರಿನ ದೃಶ್ಯಗಳನ್ನು ಈ ದೇವಾಲಯದಲ್ಲಿ ಪೈಂಟಿಂಗ್‌ಗಳ ರೂಪದಲ್ಲಿ ಅಳವಡಿಸಿದ್ದಾನೆ.
ಕರ್ನಾಟಕದಲ್ಲಿ ಹಂಪಿ, ಬಾದಾಮಿ ಹಾಗೂ ಲೇಪಾಕ್ಷಿಗಳಲ್ಲೂ ಮ್ಯೂರಲ್ ಪೇಂಟಿಂಗ್ಸ್‌ಗಳನ್ನು ಮಾಡಲಾಗಿದ್ದು ಅಂದಿನ ಚಿತ್ರಕಲೆಯ ವೈವಿಧ್ಯತೆ ಹಾಗೂ ಕಲಾವಿದರ ನೈಪುಣ್ಯತೆಗೆ ಸಾಕ್ಷಿಯಾಗಿವೆ. ಬಹಳ ಮುಖ್ಯವಾಗಿ ಹಿಂದೂಗಳ ದೇವಾಲಯವೊಂದರ ಒಳಗೆ ಹೈದರ್ ಹಾಗೂ ಟಿಪ್ಪು ಸಹ ಸ್ಥಾನ ಪಡೆದಿರುವುದು ಈ ಕರ್ನಾಟಕದ ಸೌಹಾರ್ದ ಪರಂಪರೆಯ ಪ್ರತೀಕದಂತೆ ಭಾಸವಾಗುತ್ತದೆ.
ಸಿಬಿ ನರಸಿಂಹ ದೇವಾಲಯದಲ್ಲಿ ಟಿಪ್ಪು ಸುಲ್ತಾನನ ಮ್ಯೂರಲ್ ಪೇಂಟಿಂಗ್‌ಗಳು