ಕನಕದಾಸರ ಹರಿಭಕ್ತಸಾರ : ವೆಚಾರಿಕ ವಿವೇಚನೆ
ಭಾಗ-1
ದಾಸ ಸಾಹಿತ್ಯದ ಇತಿಹಾಸದಲ್ಲಿ ಅಖಂಡ ಪ್ರತಿಭೆಯ ಕವಿತಾಶಕ್ತಿ ಹೊಂದಿದ ಪ್ರಮುಖರು ಎಂದರೆ ಕನಕದಾಸರು. ದಾಸ ಸಾಹಿತ್ಯದ ಕೀರ್ತನೆಗಳ ಜೊತೆಗೆ ಕೀರ್ತನೇತರ ಹೃದಯಸ್ಪರ್ಶಿ ಸಾಹಿತ್ಯ ಸಂಪತ್ತನ್ನು ಸೃಷ್ಟಿಸಿ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ; ಅನುಪಮವಾದುದು. ಒಂದು ಕಾಲದಲ್ಲಿ ಊರೊಂದರ ಒಡೆಯನಾಗಿ, ನಾಯಕನಾಗಿ ಬಾಳಿ ಜನಮನ್ನಣೆ ಗಳಿಸಿದ ಕನಕದಾಸರು ದೈಹಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವೇ ಮಿಗಿಲೆಂದು ಭಾವಿಸಿ ದೈವದ ಹುಡುಕಾಟದಲ್ಲಿ ದಾಸರಾದದ್ದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಸುಮಾರು 1550 ರಲ್ಲಿದ್ದ ಕನಕದಾಸರ ಬಗ್ಗೆ ಹಲವಾರು ದಂತಕತೆಗಳು, ಪವಾಡ ಕತೆಗಳು ಜನಮಾನಸದಲ್ಲಿ ಹುಟ್ಟಿಕೊಂಡಿವೆ. ಆ ಎಲ್ಲ ಮೂಲಗಳ ಜೊತೆಗೆ ಅವರ ಸಾಹಿತ್ಯದಲ್ಲಿ ದೊರೆತ ಕೆಲವು ಅಂಶಗಳನ್ನು ಇಟ್ಟುಕೊಂಡು ಅವಿಭಜಿತ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದರು ಎಂಬುದನ್ನು ಸಂಶೋಧಕರು ಸಾದರಪಡಿಸಿದ್ದಾರೆ. ಕನಕದಾಸರ ಮೂಲ ಹೆಸರು ತಿಮ್ಮಪ್ಪ (ತಿಮ್ಮಪ್ಪಗೌಡ). ತಂದೆ, ಬೀರಗೌಡ (ಬೀರಪ್ಪ), ತಾಯಿ ಬಚ್ಚಮ್ಮ. ತಂದೆ ಬೀರಪ್ಪ ಊರಗೌಡನೂ ವಿಜಯನಗರ ಅರಸರ ಪಾಳೇಗಾರನೂ ಆಗಿದ್ದ ಎಂಬುದನ್ನು ಇತಿಹಾಸಕಾರರು ತಿಳಿಸುತ್ತಾರೆ. ಕನಕದಾಸರು ಬಾಲಕನಾಗಿರುವಾಗಲೇ ತಂದೆ-ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದರು ಎಂದು ಹೇಳಲಾಗುತ್ತದೆ.
ಕನಕದಾಸರು ಪುರಾಣ-ಶಾಸ್ತ್ರಗಳ ಜೊತೆಗೆ ಯುದ್ಧಕೌಶಲವನ್ನೂ ಕಲಿತಿದ್ದರು. ಅವರಿಗೆ ಮದುವೆಯಾಗಿ ಒಂದು ಗಂಡುಮಗುವೂ ಇತ್ತೆಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ. ಹೊಲ ಉಳುವಾಗ ಸಿಕ್ಕ ಏಳು ಕೊಪ್ಪರಿಗೆ ಚಿನ್ನವನ್ನು ಜನೋಪಯೋಗಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿದ ಕಾರಣ ತಿಮ್ಮಪ್ಪ ನಾಯಕ ಕನಕಪ್ಪ, ಕನಕನಾಯಕ ಎಂಬ ಹೆಸರಿಗೆ ಭಾಜನರಾದರು. ತಂದೆ-ತಾಯಿ, ಹೆಂಡತಿ-ಮಗ ಎಲ್ಲರೂ ತೀರಿಕೊಂಡ ನಂತರದಲ್ಲಿ ವೈರಾಗ್ಯದತ್ತ ವಾಲಿದ ಕನಕದಾಸರು ರಕ್ಕಸತಂಗಡಿ ಕಾಳಗದ ದುಷ್ಪರಿಣಾಮವನ್ನು ಕಣ್ಣಾರೆ ಕಂಡು ಸಂಪೂರ್ಣವಾಗಿ ವೈರಾಗ್ಯ ಹೊಂದಿದರು. ತಮ್ಮ ಕೀರ್ತನೆಗಳ ಮೂಲಕ ನಾಡನ್ನು ಸುತ್ತಿ ಜನಜಾಗೃತಿಯನ್ನು ಮಾಡುತ್ತ ಕಾಗಿನೆಲೆಯ ಕೇಶವ ದೇವಾಲಯದ ಸಮೀಪ ಬದುಕನ್ನು ಕಳೆದರು ಅಲ್ಲಿ ಕನಕದಾಸರ ಸಮಾಧಿ ಇದೆ. ಕನಕದಾಸರ ಮನೆತನದವರು ಇಂದಿಗೂ ಅಲ್ಲಿ ನೆಲೆಸಿದ್ದಾರೆ.
ಕನಕದಾಸರು, ದಾಸಶ್ರೇಷ್ಠರಾಗಿ ಕೀರ್ತನೆಗಳಲ್ಲದೇ ಮುಂಡಿಗೆಗಳನ್ನೂ ರಚಿಸಿದ್ದಾರೆ. ನಳ ಚರಿತ್ರೆ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಕೀರ್ತನೆಗಳ ಜೊತೆಗೆ ಕೀರ್ತನೇತರ ಸಾಹಿತ್ಯ ಕೃತಿಗಳಿಂದ ಗಮನ ಸೆಳೆಯುತ್ತಾರೆ. ಅವರ ಸಾಹಿತ್ಯಾಸಕ್ತಿ ಕೇವಲ ಬರೆಯಬೇಕು ಎಂಬುದಷ್ಟೇ ಆಗಿರಲಿಲ್ಲ ; ತಾವು ಬರೆದ ಸಾಹಿತ್ಯದಿಂದ ಜನ ಜಾಗೃತಿಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದರು. ಸಾಮಾಜಿಕ ಪ್ರಜ್ಞೆಯ ವಿಕಸನಕ್ಕೆ ಬೇಕಾದ ಮಾರ್ಗಗಳು ಅವರ ಸಾಹಿತ್ಯದಲ್ಲಿ ತುಂಬ ವೈಚಾರಿಕ ಪ್ರಬುದ್ಧತೆಯಿಂದ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಕೃತಿಯಲ್ಲಿಯೂ ಕನಕದಾಸರು ಕವಿತ್ವ-ಕಲ್ಪನೆಗಳ ಜೊತೆಗೆ ವಾಸ್ತವ ನಿಲುವುಗಳನ್ನು ಪ್ರಕಟಿಸಿರುವುದು ಕಂಡು ಬರುತ್ತದೆ. ಅವರ ಭಕ್ತಿಯಿಂದ ಭಜಿಸಿದ ‘ಹರಿಭಕ್ತಿಸಾರ’ ಕೂಡ ಆ ವೈಚಾರಿಕ ಮತ್ತು ವಾಸ್ತವದ ನೆಲೆಯಲ್ಲಿಯೇ ಮೂಡಿರುವುದು ಗಮನೀಯ.
ಹರಿಭಕ್ತಿಸಾರವು ಭಾಮಿನಿ ಷಟ್ಪದಿಯಲ್ಲಿದ್ದು 111 ಪದ್ಯಗಳನ್ನು ಒಳಗೊಂಡಿದೆ. ಇದನ್ನು ಶತಕ ಗ್ರಂಥ ಎಂದೂ ಕರೆಯಲಾಗಿದೆ. ಶತಕ ಸಾಹಿತ್ಯವನ್ನು ಮುಖ್ಯವಾಗಿ ಯಾವುದಾದರೂ ಒಂದು ತತ್ವವನ್ನೋ ನೀತಿಯನ್ನೋ ಹೇಳುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ನಿರ್ದಿಷ್ಟವಾದ ಕಥಾವಸ್ತು ಇಲ್ಲದಿದ್ದರೂ ಕವಿಯ ಮನೋಧರ್ಮದ ಸ್ವಾತಂತ್ರ್ಯ ಇರುತ್ತದೆ.
ಹರಿಭಕ್ತಿಸಾರದಲ್ಲಿ ಕನಕದಾಸರು ಭಕ್ತಿ, ಜ್ಞಾನ, ವೈರಾಗ್ಯ, ನೀತಿ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದ್ದು, ಪ್ರತೀ ಪದ್ಯವೂ ‘ರಕ್ಷಿಸು ನಮ್ಮನನವರತ’ ಎಂಬುದಾಗಿ ಕೊನೆಗೊಳ್ಳುತ್ತದೆ. ತಮಗೊದಗಿದ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ, ಹರಿಭಕ್ತಿಯ ಹಿರಿಮೆ-ಗರಿಮೆಗಳನ್ನು, ಆತ್ಮನ ಅನಿತ್ಯಾಭಾವ ಮತ್ತು ಅನನ್ಯವಾದ ಶರಣಾಗತಿಯನ್ನು ಇಲ್ಲಿಯ ಪದ್ಯಗಳಲ್ಲಿ ಒಳಗೊಂಡಿವೆ. ಸಾಮಾನ್ಯವಾದ ನಿಯಮದಂತೆ ಹರಿಯ ಸ್ತ್ರೋತ್ರ, ರಚನೆಯ ಉದ್ದೇಶ, ಹರಿಯ ಅವತಾರಗಳ ಕಲ್ಪನೆ, ಮನುಷ್ಯನ ನಿಸ್ಸಹಾಯಕತೆ ಮತ್ತು ಕೃತಿವಾಚಕರಿಗೆ, ಶ್ರವಣರಿಗೆ ಸಿಗುವ ಫಲಶೃತಿಗಳನ್ನು ಇಲ್ಲಿಯೂ ನಿರೂಪಿಸಲಾಗಿದೆ. ಹಾಗೆ ನಿರೂಪಿಸುತ್ತಲೇ ವ್ಯಂಗ್ಯ, ಅಣಕಗಳನ್ನೂ ಮಾಡುವ ಮೂಲಕ ವೈಚಾರಿಕ ದೃಷ್ಟಿಕೋನಕ್ಕೆ ಇಲ್ಲಿ ಎಡೆ ದೊರೆತಿದೆ.
ಹರಿಭಕ್ತಿಸಾರದ ಮೊದಲ ಹದಿನೇಳು ಪದ್ಯಗಳಲ್ಲಿ ಹರಿಯ ನೆಲೆ-ನಿಲುವುಗಳನ್ನು ಹೇಳಲಾಗಿದ್ದು, ಕೊನೆಯ ಪದ್ಯವೊಂದನ್ನು ಬಿಟ್ಟರೆ ಉಳಿದೆಲ್ಲವೂ ಸಂಸ್ಕೃತಭೂಯಿಷ್ಟವಾಗಿವೆ. ಇದು ಕನಕದಾಸರ ಸಂಸ್ಕೃತ ಪಾಂಡಿತ್ಯವನ್ನೂ ತೋರಿಸುತ್ತದೆ. ಆನಂತರದಲ್ಲಿ ಸುರಪುರದ ಉಲ್ಲೇಖ ಕೂಡ ಬರುತ್ತದೆ. ಇದರ ಆಧಾರದ ಮೇಲೆಯೇ ಈ ಕೃತಿ ಕನಕದಾಸರದ್ದು ಎಂದು ಸಾಬೀತಾಯಿತು. ಸುರಪುರವನ್ನು ಬಿಟ್ಟರೆ ಎಲ್ಲಿಯೂ ತಮ್ಮ ಹೆಸರನ್ನು, ವೈಯಕ್ತಿಕ ವಿಷಯಗಳನ್ನು ಕನಕದಾಸರು ಹೇಳಿಕೊಂಡಿಲ್ಲ. ಈ ಸುರಪುರವೇ ವರಪುರ, ಬೇಲೂರು ಎಂದುಕೊಂಡ ವಿದ್ವಾಂಸರು ಕನಕದಾಸರು ಬೇಲೂರಿನಲ್ಲಿಯೇ ಈ ಕೃತಿಯನ್ನು ರಚಿಸಿರಬೇಕು ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಬೇರೆ ಕಡೆ ಇದ್ದ ಕನಕದಾಸರು ಸುರಪುರ ಚೆನ್ನಿಗರಾಯನ ಪ್ರಭಾವದಿಂದ ಈ ಉಲ್ಲೇಖವನ್ನು ಮಾಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂಬ ಮತ್ತೊಂದು ವಾದವೂ ಇದೆ.
ದಶಾವತಾರಗಳನ್ನು ಹೇಳುತ್ತಲೇ ಕೃಷ್ಣಾವತಾರವನ್ನು ಹೇಳಿ, ಭಾರ್ಗವರಾಮ (ಪರಶುರಾಮ), ಹಲಧರರಾಮ (ಬಲರಾಮ) ಮತ್ತು ದಶರಥರಾಮನಾಗಿ ಹರಿಯ ಅವತಾರವಾಗಿದೆ ಎಂದು ಹೇಳಿರುವುದು ಸಮಂಜಸವೆನಿಸುವುದಿಲ್ಲ. ಇಲ್ಲಿ ಬರುವ ಹಲಧರರಾಮ ದಶಾವತಾರಗಳಲ್ಲಿ ಬರುವುದಿಲ್ಲ. ಹಾಗೆಯೇ ಕೃಷ್ಣಾವತಾರದಲ್ಲಿ ಕೃಷ್ಣ ಮಾಡಿದ ಕಾರ್ಯಗಳನ್ನು ತಿಳಿದುಕೊಳ್ಳದೇ ಆತನನ್ನು ಭಜಿಸಲರಿಯದ ವಿಷಯಸುಖಿಗಳ ಬಿಟ್ಟು ರಕ್ಷಿಸು ನಮ್ಮನನವರತ ಎಂದಿರುವುದು ಕೂಡ ಸರಿಯೆನಿಸುವುದಿಲ್ಲ. ಎಲ್ಲವನ್ನೂ ಕ್ಷಮಿಸುವನು ಹರಿ ಎಂದು ಒಂದು ಕಡೆ ತಿಳಿಸುವ ಕನಕದಾಸರು ಇಲ್ಲಿ ‘ಕೆಲವರನ್ನು ಬಿಟ್ಟು’ ಎಂದದ್ದು ದ್ವಂದ್ವ ನಿಲುವನ್ನು ಸೂಚಿಸುತ್ತದೆ.
18 ರಿಂದ 23ರವರೆಗಿನ ಪದ್ಯಗಳಲ್ಲಿ ಹರಿಭಕ್ತಿಸಾರವನ್ನು ರಚಿಸುವ ಉದ್ದೇಶಕ್ಕೆ ಹರಿಯೇ ಮಾರ್ಗದರ್ಶಕನಾಗಬೇಕು ಎಂಬ ಬೇಡಿಕೆಯಿದೆ. ‘ನೀನೆನಗೆ ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದಂ ನಿನ್ನ ನಾಮಾವಳಿ’ ಎಂಬ ಬೇಡಿಕೆಯೊಂದಿಗೆ ‘ವೇದಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರು ಹಿರಿಯರರಿಯದ ಮೂಢಮತಿ ತಾನು ಎಂಬುದಾಗಿ ಹೇಳಿಕೊಂಡಿದ್ದಾರೆ. ಆದರೆ ಮುಂದಿನ ಪದ್ಯದಲ್ಲಿ ‘ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮಂ ನೀನೆಂದುಸಿರುತಿವೆ ವೇದಗಳು’ ಎಂಬುದನ್ನು ದಾಖಲಿಸಿದ್ದಾರೆ ! ವೇದಗಳು ಗೊತ್ತಿಲ್ಲ ಎಂದು ಒಂದು ಕಡೆ ಹೇಳಿದ್ದರೆ, ವೇದಗಳು ಹೀಗೆ ಉಸಿರುತ್ತಿವೆಯಲ್ಲ ಎಂದು ಅಚ್ಚರಿ ಪಡುವುದು ಸಮಂಜಸವೆನಿಸಲಾರದು.
24 ರಿಂದ 46ನೆ ಪದ್ಯಗಳವರೆಗೆ ಪುರಾಣ ಕತೆಗಳಲ್ಲಿ ನಿರೂಪಿತವಾದ ಹರಿಯ ಮಹಿಮೆಯನ್ನು ಕೊಂಡಾಡಲಾಗಿದೆ. ಆದರೆ ಇಲ್ಲಿಂದ ಮುಂದೆ ಕನಕದಾಸರ ಲೇಖನಿ ಮೊನಚು ಪಡೆಯುತ್ತದೆ. ವಾಸ್ತವದ ವಿಚಾರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅವರು ನಿರೂಪಿಸಲು ಮುಂದಾಗಿದ್ದಾರೆ. ಈರೇಳು ಲೋಕದ ಹೆಬ್ಬೆಳೆಸು ಬೆಳೆವಂತೆ ಕಾರಣಿಕನಾದ ಮನ್ಮಥ ಮತ್ತು ಅದನ್ನು ಬರೆಯುತ್ತ ಹೋಗುವ ಕರಣಿಕ ಬ್ರಹ್ಮ ಹರಿಯ ಮಕ್ಕಳು, ಲಕ್ಷ್ಮೀ ಕುಲಸತಿಯಾದರೆ, ಶಾರದೆ ಸೊಸೆ. ಗಿರಿಜೆ ಸಹೋದರಿ, ಶಂಕರ ಮೈದುನ, ಸುರರೆಲ್ಲ ಕಿಂಕರರು, ಮಾಯೆಯೇ ದಾಸಿ-ಹೀಗೆ ಸಂಬಂಧಗಳ ಪರಿಚಯವನ್ನು ನೀಡುತ್ತಲೇ ‘ಉದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲ್ಲಿ ಭಾಗವತರಾದವರ ಸಲಹುವನಾಗಿ ಸಂಚರಿಸುವುದು’ ಎಂದು ತಿಳಿಸಿದ್ದು, ಹರಿಯು ತನ್ನ ಭಕ್ತರು ಅಥವಾ ತನ್ನನ್ನು ಸ್ತುತಿಸುವವರ ಹೊಟ್ಟೆ ಹೊರೆದುಕೊಳ್ಳಲು ಅಡ್ಡಾಡಿಕೊಂಡಿದ್ದಾನೆ ; ಹೊರತು ಆತನಿಗೆ ನಿರ್ದಿಷ್ಟವಾದ ಯಾವುದೇ ಕೆಲಸವಿಲ್ಲ ಎಂಬ ಧ್ವನಿ ಇರುವುದನ್ನು ಗಮನಿಸಬೇಕು.
‘ಹಗೆಯರಿಗೆ ವರವೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ’
ಎನ್ನುವಲ್ಲಿ ಶಿವ ಮತ್ತು ಬ್ರಹ್ಮ ಇಬ್ಬರೂ ವರಗಳನ್ನು ನೀಡಲು ಮಾತ್ರ ಶಕ್ತರು. ವಿನಃ ಕೊಟ್ಟ ವರವು ಕಂಟಕವಾದಲ್ಲಿ ಅದನ್ನು ನಿವಾರಿಸಲು ಅರಿಯರು. ಆ ಶಕ್ತಿ ಹರಿಗೆ ಮಾತ್ರ ಉಂಟು ಎಂಬ ವ್ಯಾಖ್ಯಾನವಿದೆ. ಇದು ಶೈವ ಮತ್ತು ಬ್ರಹ್ಮ ಸಂಸ್ಕತಿಯ ವಿರೋಧಿಯಾಗಿ ಬೆಳೆದ ಭಕ್ತಿಯುಗದ ವೈಷ್ಣವ ನಿಲುವನ್ನು ತೋರುತ್ತದೆ. ಹರಿಯನ್ನು ಇಲ್ಲಿ ಶಿವ-ಬ್ರಹ್ಮರಿಗಿಂತ ಮಿಗಿಲು ಎಂದು ಸಾರಲಾಗಿದೆ. ಧರ್ಮದ ಹೆಗ್ಗಳಿಕೆಯನ್ನು ಹೇಳಿಕೊಳ್ಳುವ ಪರಂಪರೆ ಕನಕದಾಸರನ್ನೂ ಬಿಡದಿರುವುದು ವಿಚಿತ್ರವೆನಿಸುತ್ತದೆ.
ಹರಿಯು ನಾನಾ ಅವತಾರಗಳಲ್ಲಿ ದುಷ್ಟ ಸಂಹಾರ ಮಾಡಿದ್ದನ್ನೂ ಶಿಷ್ಟ ರಕ್ಷಣೆ ಮಾಡಿದ್ದನ್ನೂ ನಿರೂಪಿಸುವ ಕನಕದಾಸರು ಮಹಾಭಾರತದಲ್ಲಿ ಕೃಷ್ಣನಾಗಿ ಮಾಡಿದ ಕುಟಿಲತನವನ್ನೂ ಹೇಳಿದ್ದಾರೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಕುಲನಾಶಕನಾಗಿ, ಕರ್ಣನ ಜನ್ಮವೃತ್ತಾಂತ ತಿಳಿದಿದ್ದರೂ ಮುಂದಿಟ್ಟುಕೊಂಡು ಕೊಲ್ಲಿಸಿ, ‘ಕೊಲ್ಲ ಬಗೆದವನಾಗಿ ನೀ ಹಗೆಯಲ್ಲಿ ಸಖ್ಯ ಬೆಳೆಸಲದು ಹಿತವಲ್ಲ’ ಎಂದು ವಿಡಂಬಿಸಿ ಕನಕದಾಸರು ಅಚ್ಚರಿ ಮೂಡಿಸುತ್ತಾರೆ.
‘ಮಗನ ಕೊಂದವನಾಳುವಂತಾ
ಸುಗಣೆಯರು ಹದಿನಾರು ಸಾವಿರ
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ
ಬಗೆ ಬಗೆಯ ರತಿಕಲೆಗಳಲಿ ಕೂ
ರುಗುರು ನಾಟಿಸಿ ಮೆರೆದು ನೀನೀ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ’
ನರಕಾಸುರನನ್ನು ಕೊಂದು ಆತನ ಹದಿನಾರು ಸಾವಿರು ಹೆಂಡತಿಯರಿಗೆ ವಿಟನಾಗಿ ಮೆರೆದ ಎಂದು ಇಲ್ಲಿ ಹೇಳಿರುವುದು ಭಕ್ತಿ ಸ್ತುತಿಯ ಪರಾಕಾಷ್ಠತೆ ಎಂದು ಕೆಲವರು ಹೇಳಬಹುದು. ಆದರೆ ವೈಚಾರಿಕ ಬದ್ಧತೆಯುಳ್ಳ ಕನಕದಾಸರು ಇಲ್ಲಿ ಹರಿಯನ್ನು ವ್ಯಂಗ್ಯ ಮಾಡಿರುವಂತೆ ತೋರುತ್ತದೆ.