ಕವಿತೆಗಳಾಗಿ ಹೊಮ್ಮಿದ ತಾಯಿ ಮನಸ್ಸುಗಳು...

Update: 2017-11-05 18:50 GMT

‘ಮಹಾತಾಯಿ’ ಕೃತಿ ಪ್ರೊ. ಎಚ್. ಲಿಂಗಪ್ಪ ಅವರ ಒಂದು ವಿಭಿನ್ನ ಪ್ರಯೋಗವಾಗಿದೆ. ಅನುಭವ ಕಥನವಾಗಿ ಮೂಡಿ ಬಂದಿರುವ ಇಲ್ಲಿರುವ ಸಾಲುಗಳು ಗದ್ಯ ಮತ್ತು ಕಾವ್ಯದ ನಡುವೆ ಸಮನ್ವಯ ಸಾಧಿಸಿದಂತಹವುಗಳು. ವೈಚಾರಿಕ ಮತ್ತು ಸಾಹಿತ್ಯಕ ಎರಡು ಉದ್ದೇಶಗಳನ್ನೂ ಹೊಂದಿರುವಂತಹದು. ದಲಿತ ಪ್ರಜ್ಞೆಯ ಒಡಲಿಂದ ಹೊಮ್ಮಿದ ಕಿರಣಗಳು ಇವು. ಮಹಾತಾಯಿ ಎನ್ನುವುದು ಒಂದು ದೀರ್ಘಕವಿತೆಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ಅವರು ಕಟ್ಟಿಕೊಟ್ಟಿರುವ ಎಲ್ಲ ಪಾತ್ರಗಳೂ ತಾಯ್ತನವನ್ನು ಹೊಂದಿದವುಗಳೇ. ನಿರ್ಲಕ್ಷಿತ ಸಮಾಜವನ್ನು ತನ್ನ ಮಡಿಲಲ್ಲಿ ತೆಗೆದುಕೊಂಡ ತಾಯಿ ಮನಸ್ಸುಗಳೇ ಆಗಿವೆ. ಆದುದರಿಂದ ‘ಮಹಾತಾಯಿ’ ಹೆಸರು ಇಲ್ಲಿರುವ ಎಲ್ಲ ದೀರ್ಘ ಕವಿತೆಗಳನ್ನು ಒಟ್ಟಾಗಿ ಕಟ್ಟಿಕೊಡುತ್ತದೆ. ಈ ವಿಶಿಷ್ಟ ಪ್ರಯೋಗದ ಕುರಿತಂತೆ ಲೇಖಕರು ಈ ರೀತಿ ಹೇಳಿಕೊಳ್ಳುತ್ತಾರೆ ‘‘...ಇದು ಪದ್ಯ, ಗದ್ಯ, ರಗಳೆ, ಚಂಪೂ, ಛಂದಸ್ಸು ಎಲ್ಲವನ್ನೂ ಮೀರಿ ನನ್ನ ಬಾಲ್ಯದಿಂದ ಹಿಡಿದು ಇವತ್ತಿನವರೆಗೆ, ಹಿತಾನುಭವವನ್ನು ನೀಡುವಂತಹ ವಸ್ತುಗಳು...’’ . ಇಲ್ಲಿ ಒಟ್ಟು ಎಂಟು ಜೀವನ ಕಥನಗಳಿವೆ. ಎಲ್ಲವೂ ತಳಸ್ತರದ ಜನರ ಬಿಡುಗಡೆಯ ಕನಸು ಕಂಡ ವ್ಯಕಿತ್ವಗಳು.
ಮೊದಲನೆಯದು ‘ಸಿದ್ಧಾರ್ಥ ಬುದ್ಧನಾದ’ ಕವಿತೆ. ಇದು ವರ್ತಮಾನದ ಜೊತೆಗೆ ಸಂವಾದಿಯಾಗಬಲ್ಲ ಚಾರಿತ್ರಿಕ ಕಥನ. ಈ ಕಥನ ಮುಂದೆ ಪರಿಚಯಿಸಲ್ಪಡುವ ವ್ಯಕ್ತಿತ್ವಗಳ ಜೊತೆಗೆ ಒಂದಲ್ಲ ಒಂದು ಕಾರಣಕ್ಕಾಗಿ ಬೆಸೆದುಕೊಳ್ಳುತ್ತದೆ. ವೈಶಾಖ ಶುಕ್ಲ ಪೂರ್ಣಿಮೆಯಂದು ಬುದ್ಧ ಸಿದ್ಧಾರ್ಥ ಹುಟ್ಟಿದ ದಿನದಿಂದ ಅವನು ಬುದ್ಧನಾಗಿ ಲೋಕದಿಂದ ವಿದಾಯಹೇಳುವವರೆಗಿನ ಕಥನವನ್ನು ಕಾವ್ಯದ ಮೂಲಕ ತೆರೆದಿಟ್ಟಿದ್ದಾರೆ. ಎರಡನೆಯದು, ಪ್ರೊ. ಬಿ. ಕೃಷ್ಣಪ್ಪ ಅವರ ಬದುಕು, ಹೋರಾಟಕ್ಕೆ ಸಂಬಂಧಿಸಿದ್ದು. ಅಸ್ಪಶ್ಯತೆಯ ವಿರುದ್ಧ ಹೋರಾಡಿದ ಕೃಷ್ಣಪ್ಪ ಅವರೊಳಗಿನ ಬುದ್ಧ ಚಿಂತನೆಯ ಅಂಶವನ್ನು ಆ ಕವಿತೆ ತೆರೆದಿಡುತ್ತದೆ. ಮೂರನೆಯದು, ಮಹಾತಾಯಿ. ಈಕೆ ಲೇಖಕರ ತಾಯಿಯೂ ಹೌದು. ತಳಸ್ತರದ ಶೋಷಿತರೆಲ್ಲರ ತಾಯಿಯೂ ಹೌದು. ಅವರು ಕಟ್ಟಿಕೊಡುವ ವ್ಯಕ್ತಿತ್ವ ಕಣಕಣಗಳಾಗಿ ಎಲ್ಲ ತಾಯಂದಿರಲ್ಲೂ ಹಂಚಿಹೋಗಿದೆ. ಭಾವುಕತೆಯೊಂದಿಗೆ ತೀರಾ ಕೊಚ್ಚಿ ಹೋಗದೆ ತನ್ನ ತಾಯಿಯನ್ನು ಗೌತಮಿ, ಮೀರಾಬಾಯಿಗೆ ಹೋಲಿಸುತ್ತಾ ಅವರನ್ನು ಸಾರ್ವತ್ರಿಕಗೊಳಿಸುತ್ತಾರೆ ಲೇಖಕರು. ದೇವರಾಜ ಅರಸು ರಾಜಕೀಯ ಕಥನವನ್ನೂ ಅವರು ಇನ್ನೊಂದು ದೀರ್ಘ ಪದ್ಯದಲ್ಲಿ ತೆರೆದಿಟ್ಟಿದ್ದಾರೆ. ಎಡ-ಬಲ ಭೇದವಿಲ್ಲದ ರಾಜಕೀಯವನ್ನು ನೆಚ್ಚಿಕೊಂಡು ಹೇಗೆ ಒಬ್ಬ ರಾಜಕಾರಣಿ ತುಳಿತಕ್ಕೊಳಗಾದವರ ಪರ ಆಡಳಿತ ನಡೆಸಬಹುದು ಎನ್ನುವುದನ್ನು ದೇವರಾಜ ಅರಸರ ಬದುಕಿನಿಂದ ಲೇಖಕರು ಕಂಡುಕೊಳ್ಳುತ್ತಾರೆ. ಹಾಗೆಯೇ ‘ನನ್ನಪ್ಪ’ ಕವಿತೆಯೂ ಹೃದಯಕ್ಕೆ ಮುಟ್ಟುವಂತಹದ್ದು. ಕವಿಗೆ ಆತ್ಮಾಭಿಮಾನದ ಬದುಕನ್ನು ಕೊಟ್ಟು ಇಲ್ಲವಾದ ಮನಸ್ಸುಗಳು ಬೇರೆ ಬೇರೆ ರೀತಿಯಲ್ಲಿ, ರೂಪಕಗಳಲ್ಲಿ ಕವಿತೆಗಳಾಗಿ ನಮ್ಮನ್ನು ತಟ್ಟುತ್ತವೆ, ಕಾಡುತ್ತವೆ

ರಶ್ಮಿ ಪ್ರಕಾಶನ ಚಿತ್ರದುರ್ಗ ಇವರು ಹೊರತಂದಿರುವ ಕೃತಿಯ ಮುಖಬೆಲೆ 80 ರೂ. ಆಸಕ್ತರು 99459 98099 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News