ಇಂಟರ್ನೆಟ್ ಸಂಪರ್ಕವಿಲ್ಲದ ಮೊಬೈಲ್ ಫೋನ್‌ಗಳಲ್ಲಿ ಬ್ಯಾಂಕ್ ಬ್ಯಾಲನ್ಸ್ ನೋಡುವುದು ಹೇಗೆ?

Update: 2017-11-13 11:39 GMT

ಖಾತೆಯಲ್ಲಿನ ಶಿಲ್ಕು ತಿಳಿದುಕೊಳ್ಳುವುದು, ಮಿನಿ ಸ್ಟೇಟ್‌ಮೆಂಟ್‌ಗಳನ್ನು ಪಡೆದುಕೊಳ್ಳುವದು ಮತ್ತು ಹಣ ವರ್ಗಾವಣೆಯಂತಹ ಎಲ್ಲ ಬ್ಯಾಂಕಿಂಗ್ ಸೌಲಭ್ಯಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದ ಮೊಬೈಲ್ ಫೋನ್‌ಗಳಲ್ಲಿಯೂ ಪಡೆದುಕೊಳ್ಳಬಹು ದಾಗಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಭಾರತದಲ್ಲಿ ಮೊಬೈಲ್ ಮತ್ತು ಅಂತರ್ಜಾಲ ಕ್ರಾಂತಿಯೇ ನಡೆಯುತ್ತಿದ್ದರೂ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್‌ಫೋನ್‌ಗಳಿಲ್ಲ ಮತ್ತು ಎಲ್ಲರೂ ಅಂತರ್ಜಾಲ ಸಂಪರ್ಕವನ್ನು ಹೊಂದಿಲ್ಲ. ಈ ಎರಡೂ ಸಂದರ್ಭಗಳಲ್ಲಿ ಮೊಬೈಲ್ ಫೋನ್ ಮೂಲಕ ಪ್ರಾಥಮಿಕ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸಬಹುದು.

ಅಂತರ್ಜಾಲ ಸಂಪರ್ಕವಿಲ್ಲದೆ ಮೊಬೈಲ್ ಫೋನ್ ಮೂಲಕ ಎರಡು ರೀತಿಗಳಲ್ಲಿ ಬ್ಯಾಂಕ್ ಖಾತೆಯಲ್ಲಿಯ ಶಿಲ್ಕನ್ನು ತಿಳಿದುಕೊಳ್ಳಬಹುದಾಗಿದೆ...ಒಂದು ಮಿಸ್ಡ್ ಕಾಲ್ ಸೌಲಭ್ಯದ ಮೂಲಕ ಮತ್ತು ಇನ್ನೊಂದು ಮೊಬೈಲ್‌ನಿಂದ *99# ಗೆ ಡಯಲ್ ಮಾಡುವ ಮೂಲಕ.

1)ಮಿಸ್ಡ್ ಕಾಲ್ ಸೌಲಭ್ಯ

ಸಂಪೂರ್ಣ ಉಚಿತವಾಗಿರುವ ಈ ಸೌಲಭ್ಯವನ್ನು ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆಯು ನಿಮ್ಮ ಬ್ಯಾಂಕಿನಲ್ಲಿ ನೋಂದಣಿಯಾಗಿರಬೇಕು. ಈ ಸೇವೆಯ ಮೂಲಕ ನಿಮ್ಮ ಖಾತೆಯಲ್ಲಿನ ಶಿಲ್ಕು ಹಣ ಮತ್ತು ಹಿಂದಿನ ಐದು ವಹಿವಾಟುಗಳ ಬಗ್ಗೆ ತಿಳಿದುಕೊಳ್ಳಬಹುದು.

ಪ್ರತಿಯೊಂದು ಬ್ಯಾಂಕ್ ತನ್ನದೇ ಆದ ಮಿಸ್ಡ್ ಕಾಲ್ ಬ್ಯಾಂಕಿಂಗ್ ಸಂಖ್ಯೆಯನ್ನು ಹೊಂದಿದೆ. ಈ ಸಂಖ್ಯೆಗೆ ನಿಮ್ಮ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದರೆ ಕೆಲವು ರಿಂಗ್‌ಗಳ ಬಳಿಕ ಸಂಪರ್ಕವು ತನ್ನಿಂದ ತಾನೇ ಕಡಿತಗೊಳ್ಳುತ್ತದೆ ಮತ್ತು ತಕ್ಷಣವೇ ನಿಮ್ಮ ಖಾತೆಯಲ್ಲಿನ ಶಿಲ್ಕು ಮತ್ತು ನಿಮ್ಮ ಹಿಂದಿನ ಐದು ವಹಿವಾಟುಗಳ ವಿವರಗಳಿರುವ ಎಸ್‌ಎಂಎಸ್‌ಗಳು ನಿಮ್ಮ ಫೋನ್‌ಗೆ ಬರುತ್ತವೆ.

2) *99#  ಸೌಲಭ್ಯ

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‌ಪಿಸಿಐ) ದೇಶಾದ್ಯಂತದ ಜಿಎಸ್‌ಎಂ ಮೊಬೈಲ್ ಚಂದಾದಾರರಿಗಾಗಿ ಈ ವಿಶಿಷ್ಟ ಸೇವೆಯನ್ನು ಆರಂಭಿಸಿದೆ.*99# ಕೋಡ್ ಎಲ್ಲ ಮೊಬೈಲ್ ದೂರವಾಣಿ ಕಂಪನಿಗಳಿಗೆ ಸಾಮಾನ್ಯ ವಾಗಿದೆ. ಈ ಸೇವೆಗಾಗಿ ಯಾವುದೇ ಹೆಚ್ಚುವರಿ ರೋಮಿಂಗ್ ಶುಲ್ಕವನ್ನು ವಿಧಿಸಲಾ ಗುವುದಿಲ್ಲ. ಸೇವೆಯನ್ನು ರಜೆಗಳು ಸೇರಿದಂತೆ ವಾರದ ಎಲ್ಲ ದಿನಗಳಲ್ಲಿ 24 ಗಂಟೆಗಳ ಕಾಲ ಪಡೆಯಬಹುದಾಗಿದ್ದು, ಇದಕ್ಕಾಗಿ ಮೊಬೈಲ್‌ನಲ್ಲಿ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ. ಈ ಸೌಲಭ್ಯವು 12 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಹಣಕಾಸು ಮತ್ತು ಹಣಕಾಸೇತರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಶಿಲ್ಕು ವಿಚಾರಣೆ, ಮಿನಿ ಸ್ಟೇಟ್‌ಮೆಂಟ್,ವಿವಿಧ ವಹಿವಾಟುಗಳಿಗಾಗಿ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ) ಸೃಷ್ಟಿ, ಮೊಬೈಲ್ ಪಿನ್ ಮತ್ತು ಮೊಬೈಲ್ ಮನಿ ಐಡೆಂಟಿಫೈಯರ್(ಎಂಎಂಐಡಿ)ಗಳ ಸೃಷ್ಟಿಯಂತಹ ಸೌಲಭ್ಯಗಳು ಹಣಕಾಸೇತರ ಸೇವೆಗಳಲ್ಲಿ ಸೇರಿವೆ

*99# ಸೌಲಭ್ಯದ ಮೂಲಕ ಎಂಎಂಐಡಿ ಅಥವಾ ಐಎಸ್‌ಎಫ್‌ಸಿ ಅಥವಾ ಆಧಾರ್ ಬಳಸಿ ಫಲಾನುಭವಿಗಳಿಗೆ ಹಣ ರವಾನೆಯಂತಹ ಹಣಕಾಸು ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

*99#ಸೌಲಭ್ಯದ ಮೂಲಕ ಖಾತೆಯಲ್ಲಿನ ಶಿಲ್ಕು ತಿಳಿಯುವ ವಿಧಾನ

ನಿಮ್ಮ ಮೊಬೈಲ್ ಫೋನ್‌ನಿಂದ *99# ಗೆ ಡಯಲ್ ಮಾಡಿದರೆ ವೆಲ್‌ಕಮ್ ಸ್ಕ್ರೀನ್ ಕಾಣಿಸಿಕೊಂಡು ನಿಮ್ಮ ಬ್ಯಾಂಕಿನ ಮೂರು ಅಕ್ಷರಗಳ ಸಂಕ್ಷಿಪ್ತ ಹೆಸರು ಅಥವಾ ಐಎಫ್‌ಎಸ್‌ಸಿಯ ಮೊದಲ ನಾಲ್ಕು ಅಕ್ಷರಗಳನ್ನು ಕೇಳುತ್ತದೆ. ಈ ವಿವರಗಳನ್ನು ದಾಖಲಿಸಿದ ಬಳಿಕ ಲಭ್ಯ ಸೇವೆಗಳ ವಿವಿಧ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.

ಶಿಲ್ಕು ವಿಚಾರಣೆಗಾಗಿ ಆಯ್ಕೆ 1ನ್ನು ಒತ್ತಿದಾಗ ನಿಮ್ಮ ಖಾತೆಯಲ್ಲಿನ ಶಿಲ್ಕು ಹಣದ ಮೊತ್ತ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ವಿವಿಧ ಪ್ರಾದೇಶಿಕ ಭಾಷೆಗಳ ಆಯ್ಕೆಗಾಗಿ*99#22#(ಹಿಂದಿ),*99#23#(ತಮಿಳು),*99#24#(ತೆಲುಗು),*99#25#(ಮಲಯಾಳಂ) ಮತ್ತು *99#26#(ಕನ್ನಡ) ಹೀಗೆ ಅಗತ್ಯ ಕೋಡ್‌ಗಳನ್ನು ಡಯಲ್ ಮಾಡಬೇಕಾಗುತ್ತದೆ.

ಈ ಸೌಲಭ್ಯವನ್ನು ಪಡೆಯುವ ಮುನ್ನ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬ್ಯಾಂಕಿನಲ್ಲಿ ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಜೊತೆಗೆ ನಿಮ್ಮ ಮೊಬೈಲ್ ನೆಟ್‌ವರ್ಕ್ ಏರಿಯಾ ಅಥವಾ ರೇಂಜ್‌ನಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News