ಮಕ್ಕಳಿಗಾಗಿ ಚಾಚಾ ನೆಹರೂ ಬರೆದ ಪತ್ರ
ಜವಾಹರ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳನ್ನು ಹೂವುಗಳಿಗೆ ಹೋಲಿಸುತ್ತಿದ್ದ ನೆಹರೂ, ಮಕ್ಕಳೆಂದರೆ ಹೊದೋಟದಲ್ಲಿರುವ ಸುಂದರ ಮೊಗ್ಗುಗಳು ಎನ್ನುತ್ತಿದ್ದರು. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರೂ ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ.
ಚಾಚಾ ನೆಹರೂ ಅವರು ಮಕ್ಕಳಿಗಾಗಿ ಬರೆದ ಒಂದು ಪತ್ರ ಇಲ್ಲಿದೆ.
ನಮ್ಮದು ಬೃಹತ್ ರಾಷ್ಟ್ರ, ನಾವೆಲ್ಲರೂ ದೇಶ ಸೇವೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಅಳಿಲು ಸೇವೆ ಮಾಡಿದರೂ ಸಾಕು, ಭಾರತ ಉಜ್ವಲವಾಗಿ ಬೆಳಗಲಿದೆ. ನನ್ನ ಪಕ್ಕದಲ್ಲೇ ಕುಳಿತು ನನ್ನೆಲ್ಲಾ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತಿದ್ದೀರೆಂದು ಭಾವಿಸಿ, ಪತ್ರದ ಮೂಲಕ ನನ್ನೆಲ್ಲಾ ಪ್ರೀತಿಯನ್ನು ಅರುಹುತ್ತಿದ್ದೇನೆ.
ಡಿಸೆಂಬರ್ 03, 1949
ಮುದ್ದು ಪುಟಾಣಿಗಳೆ,
ನನಗೆ ಮಕ್ಕಳೊಂದಿಗೆ ಒಡನಾಟ ಬಲು ಇಷ್ಟ. ಮಕ್ಕಳೊಂದಿಗೆ ಮಾತುಕತೆ, ನಗುನಗುತ್ತಾ ಸಮಯ ಕಳೆಯುವುದು, ಆಟವಾಡುವುದು ನನಗಿಷ್ಟ. ಮಕ್ಕಳ ಜೊತೆಗಿದ್ದರೆ ಒಂದು ಕ್ಷಣ ನಾನೊಬ್ಬ ಇಳಿವಯಸ್ಸಿನವ ಎಂಬುದನ್ನು ಮರೆತೇಬಿಡುತ್ತೇನೆ, ನನ್ನ ಬಾಲ್ಯದ ದಿನಗಳು ಎಂದೋ ಕಳೆದಿವೆ ಎನ್ನುವ ಪರಿವೆಯೂ ಇರುವುದಿಲ್ಲ. ಆದರೆ ಪ್ರೀತಿಯಿಂದ ನಿಮಗೆ ಪತ್ರ ಬರೆಯಲು ಪೆನ್ನು ಹಿಡಿದಾಗ ನನ್ನ ವಯಸ್ಸು, ನಿಮ್ಮ-ನನ್ನ ನಡುವಿನ ಅಂತರ ಹಾಗೂ ನಮ್ಮ ನಡುವಿನ ನಿಜ ವ್ಯತ್ಯಾಸ ಮರೆಯಲಾಗದು. ಕಿರಿಯರಿಗೆ ಉಪದೇಶ ಮತ್ತು ಸಲಹೆ ನೀಡುವುದೇ ಹಿರಿಯರ ಅಭ್ಯಾಸ. ನನಗಿನ್ನೂ ನೆನಪಿದೆ, ಪುಟ್ಟ ಹುಡುಗನಾಗಿದ್ದಾಗ ನನಗೂ ಇಂಥ ಉಪದೇಶಗಳೆಂದರೆ ಕಿರಿಕಿರಿ. ಈಗ ನನ್ನ ಮಾತುಗಳೂ ನಿಮಗೆ ಹಿಡಿಸದೆ ಇರಬಹುದು. ಇತರರ ಮಾತುಗಳನ್ನು ಆಲಿಸಿದಾಗಲೆಲ್ಲಾ ನಾನೊಬ್ಬ ಜ್ಞಾನಿ, ಬುದ್ಧಿವಂತ ಹಾಗೂ ಪ್ರಮುಖ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದೆ. ಆದರೆ ನನ್ನ ನಿಜ ವ್ಯಕ್ತಿತ್ವದ ಕಡೆ ದೃಷ್ಟಿ ಹರಿಸಿದಾಗೆಲ್ಲಾ ಆ ಬಗ್ಗೆ ಅನುಮಾನ ಮೂಡುತ್ತಿತ್ತು. ಅನೇಕ ಬಾರಿ ಜನರು ಎಷ್ಟೇ ಶ್ರೇಷ್ಠ ಜ್ಞಾನಿಗಳಾಗಿರಲಿ, ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಹಾಗಿದ್ದಲ್ಲಿ ನಾನೇನು ಬರೆಯಲಿ? ಸುತ್ತ ಮುತ್ತಲಿನ ಈ ಅಭೂತಪೂರ್ವ ಸೌಂದರ್ಯ ಎಲ್ಲವನ್ನೂ ಮರೆಯುವ ನಾವು ಅಥವಾ ನಮ್ಮ ಹಿರಿಯರು ನಮ್ಮದೇ ವಾದ-ವಿವಾದ ಮಂಡಿಸುತ್ತಾ ಕಾಲಹರಣ ಮಾಡಿ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಚೇರಿಯಲ್ಲಿ ಕುಳಿತು ಮಹತ್ಕಾರ್ಯ ಮಾಡುತ್ತಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ನನಗೆ ಗೊತ್ತು. ನೀವೆಲ್ಲಾ ತುಂಬಾ ಬುದ್ಧಿವಂತರು. ನಿಮ್ಮ ಕಣ್ಣು ಮತ್ತು ಕಿವಿಗಳು ಜಗತ್ತಿನ ಸೌಂದರ್ಯ ಮತ್ತು ಸುತ್ತಲಿನ ಬದುಕನ್ನು ಆಸ್ವಾದಿಸಲು ತೆರೆದೇ ಇರುತ್ತದೆ. ಒಂದು ಸುಂದರ ಹೂವನ್ನು ಅದರ ನಾಮಧೇಯದಿಂದ ಗುರುತಿಸುವಿರಾ ಅಥವಾ ಹಕ್ಕಿಯೊಂದು ಹಾಡುತ್ತಿದ್ದರೆ ಆ ಹಕ್ಕಿಯ ಹೆಸರು ಹೇಳಬಲ್ಲಿರಾ? ಅವುಗಳೊಂದಿಗೆ ಅದೆಷ್ಟು ಸರಳವಾಗಿ ಸ್ನೇಹ ಬೆಳೆಸುತ್ತೀರಿ ಅಥವಾ ಒಂದಿಷ್ಟು ಪ್ರೀತಿಯಿಂದ ಬಳಿ ಸರಿದರೆ ಸಾಕು ಪ್ರಕೃತಿಯ ಪ್ರತೀ ಜೀವ-ಜಂತುಗಳೂ ನಿಮ್ಮ ಒಡನಾಡಿಯಾಗಬಲ್ಲವು. ಆದರೆ ನಾವು ಹಿರಿಯರು ನಮ್ಮದೇ ಸೀಮಿತ ವಲಯದೊಳಗೆ ಬದುಕು ಸವೆಸುತ್ತೇವೆ. ಹಿರಿಯರು ತಮ್ಮ-ತಮ್ಮಿಳಗೆ ಧರ್ಮ, ಜಾತಿ, ವರ್ಣ, ಪಕ್ಷ, ರಾಷ್ಟ್ರ, ಪ್ರಾಂತ, ಭಾಷೆ, ಪದ್ಧತಿ ಮತ್ತು ಬಡವ-ಬಲ್ಲಿದರೆಂಬ ತಡೆಗೋಡೆಗಳನ್ನು ನಿರ್ಮಿಸಿರುತ್ತಾರೆ. ಸ್ವತಃ ತಾವೇ ನಿರ್ಮಿಸಿದ ಕಾರಾಗೃಹದಲ್ಲಿ ಬದುಕು ಸವೆಸುತ್ತಾರೆ. ಅದೃಷ್ಟವಶಾತ್ ಮುಗ್ಧ ಮಕ್ಕಳು ಈ ತಡೆಗೋಡೆಗಳ ಬಗ್ಗೆ ಹೆಚ್ಚೇನೂ ಅರಿಯಲಾರರು. ಅವರು ಜೊತೆಯಾಗಿ ಆಡುತ್ತಾರೆ, ಜೊತೆಯಾಗಿ ನಲಿಯುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಆದರೆ ಮಕ್ಕಳು ಬೆಳೆದು ಪ್ರೌಢಾವಸ್ಥೆಗೆ ತಲುಪಿದ ಮೇಲೆ ಈ ತಡೆಗೋಡೆಗಳ ಬಗ್ಗೆ ಕಲಿಯಲಾರಂಭಿಸುತ್ತಾರೆ.
ನನಗೊಂದು ನಂಬಿಕೆಯಿದೆ; ನೀವು ಬೆಳೆಯಲು ಇನ್ನೂ ತುಂಬಾ ವರ್ಷಗಳೇ ಬೇಕಾಗಬಹುದು ಎಂಬ ವಿಶ್ವಾಸವದು. ಪುಟಾಣಿಗಳೇ, ನಮ್ಮ-ನಿಮ್ಮ ನಡುವೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆಂಬುವುದು ನಿಮಗೂ ಗೊತ್ತಲ್ಲ? ಅವರೇ ರಾಷ್ಟ್ರಪಿತ ಮಹಾತ್ಮಾ ಗಾಂಧಿ. ಇವರನ್ನು ನಾವು ಪ್ರೀತಿಯಿಂದ ಬಾಪೂಜಿ ಎನ್ನುತ್ತೇವೆ. ಅವರೊಬ್ಬ ಮಹಾನ್ ಜ್ಞಾನಿ. ಆದರೆ ಅವರೆಂದೂ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿಲ್ಲ. ಬಲು ಸರಳ ಮತ್ತು ಮಕ್ಕಳಂಥ ಮುಗ್ಧ ಮನಸ್ಸು ಅವರದು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಬಾರಿ, ನಗುನಗುತ್ತಲೇ ‘‘ಜಗತ್ತನ್ನು ಎದುರಿಸಲು ಸಿದ್ಧರಾಗಿ’’ ಎಂಬ ನೀತಿಪಾಠವನ್ನು ನಮಗೆ ಬೋಧಿಸುತ್ತಿದ್ದರು.
ನಮ್ಮದು ಬೃಹತ್ ರಾಷ್ಟ್ರ, ನಾವೆಲ್ಲರೂ ದೇಶ ಸೇವೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಅಳಿಲು ಸೇವೆ ಮಾಡಿದರೂ ಸಾಕು, ಭಾರತ ಉಜ್ವಲವಾಗಿ ಬೆಳಗಲಿದೆ. ನನ್ನ ಪಕ್ಕದಲ್ಲೇ ಕುಳಿತು ನನ್ನೆಲ್ಲಾ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತಿದ್ದೀರೆಂದು ಭಾವಿಸಿ, ಪತ್ರದ ಮೂಲಕ ನನ್ನೆಲ್ಲಾ ಪ್ರೀತಿಯನ್ನು ಅರುಹುತ್ತಿದ್ದೇನೆ. ನಾನು ಹೇಳಬೇಕೆಂದು ಬಯಸಿದ್ದಕ್ಕಿಂತ ಹೆಚ್ಚು ವಿಷಯಗಳನ್ನೇ ಈ ಪತ್ರದಲ್ಲಿ ತುರುಕಿದ್ದೇನೆ.
ಪ್ರೀತಿಯಿಂದ,
ಜವಾಹರ ಲಾಲ್ ನೆಹರೂ
ಕೃಪೆ: ಬಾಲವನ