ವಾಟ್ಸಾಪ್ ‘ಡಿಲಿಟ್ ಫಾರ್ ಎವೆರಿವನ್’:ಅಳಿಸಿದ ಸಂದೇಶಗಳನ್ನು ಓದುವುದು ಹೇಗೆ ಎನ್ನುವುದು ಗೊತ್ತೇ?

Update: 2017-11-18 11:01 GMT

ವಾಟ್ಸಾಪ್‌ನಲ್ಲಿ ಬಹು ನಿರೀಕ್ಷಿತ ‘ಡಿಲಿಟ್ ಫಾರ್ ಎವೆರಿವನ್’ ಫೀಚರ್ ಇತ್ತೀಚಿಗಷ್ಟೇ ಅಸ್ತಿತ್ವಕ್ಕೆ ಬಂದಿದೆ. ಆದರೆ ಈ ಫೀಚರ್ ದೋಷಮುಕ್ತವಾಗಿರುವಂತೆ ಕಂಡು ಬರುತ್ತಿಲ್ಲ. ರವಾನಿಸಿದ ವಾಟ್ಸಾಪ್ ಬಳಕೆದಾರ ಸಂದೇಶವನ್ನು ಅಳಿಸಿದ್ದರೂ ಅದನ್ನು ಮತ್ತೆ ಓದಲು ಸಾಧ್ಯ ಎಂದು ಸ್ಪೇನಿನ ಟೆಕ್ ಬ್ಲಾಗ್‌ವೊಂದು ಹೇಳಿದೆ.

ವಾಟ್ಸಾಪ್ ಚಾಟ್‌ನಲ್ಲಿ ಬೇರೊಬ್ಬ ವ್ಯಕ್ತಿಯು ಡಿಲಿಟ್ ಮಾಡಿದ ಸಂದೇಶಗಳನ್ನು ಮತ್ತೆ ನೋಡಲು ವಿಧಾನವನ್ನು ಈ ಬ್ಲಾಗ್ ಕಂಡುಕೊಂಡಿದೆ. ಅದು ಹೇಳುವಂತೆ ಒಳಬರುವ ಸಂದೇಶಕ್ಕೆ ಸಂಬಂಧಿಸಿದಂತೆ ಫೋನ್‌ನಲ್ಲಿ ನೋಟಿಫಿಕೇಷನ್ ಮೂಡಿದ್ದಿದ್ದರೆ ಆ್ಯಂಡ್ರಾಯ್ಡಾ ಹ್ಯಾಂಡ್ ಸೆಟ್‌ನ ನೋಟಿಫಿಕೇಷನ್ ಲಾಗ್‌ನಿಂದ ಸಂದೇಶವನ್ನು ಮರಳಿ ಪಡೆಯಬಹುದಾಗಿದೆ. ಆದರೆ ನೋಟಿಫಿಕೇಷನ್ ಮೂಡಿ ಬಂದಿರದಿದ್ದರೆ, ಅಂದರೆ ಸಂದೇಶವು ಬಂದಾಗ ನೀವು ಚಾಟ್ ಅನ್ನು ಓಪನ್ ಅಥವಾ ಆ್ಯಕ್ಟಿವ್ ಆಗಿ ಇಟ್ಟಿದ್ದರೆ ಈ ವಿಧಾನವು ಉಪಯೋಗಕ್ಕೆ ಬರುವುದಿಲ್ಲ.

ಡಿಲಿಟ್ ಆದ ಸಂದೇಶಗಳನ್ನು ನೋಡಲು 2-3 ಮಾರ್ಗಗಳಿವೆ ಎನ್ನುತ್ತದೆ ಈ ಬ್ಲಾಗ್. ಮೊದಲನೆಯದು, ನೋಟಿಫಿಕೇಷನ್ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಿಕೊಂಡ ಬಳಿಕ ಅದನ್ನು ಓಪನ್ ಮಾಡಿ ವಾಟ್ಸಾಪ್ ಐಕನ್‌ಗಾಗಿ ಹುಡುಕಿದರೆ ಡಿಲಿಟ್ ಆದ ಎಲ್ಲ ಸಂದೇಶಗಳನ್ನು ಓದಬಹುದಾಗಿದೆ.

 ಮ್ಯಾನ್ಯುವಲ್ ಆಗಿ ನೋಟಿಫಿಕೇಷನ್ ಲಾಗ್‌ನ್ನು ಪ್ರವೇಶಿಸುವದು ಎರಡನೇ ಮಾರ್ಗವಾಗಿದೆ. ನಿಮ್ಮ ಮೊಬೈಲ್‌ನ ಹೋಮ್‌ಸ್ಕ್ರೀನ್‌ನ್ನು ಸುದೀರ್ಘವಾಗಿ ಒತ್ತಿ ವಿಜೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಸೆಟಿಂಗ್ಸ್ ವಿಜೆಟ್ ಸಿಗುವವರೆಗೂ ಸ್ಕ್ರೋಲ್ ಮಾಡಿ ಅದನ್ನು ನಿಮ್ಮ ಹೋಮ್ ಸ್ಕ್ರೀನ್ ಮೇಲೆ ಎಳೆಯಿರಿ. ಆಯ್ಕೆ ಮಾಡಿಕೊಳ್ಳಲು ಹಲವಾರು ಪರ್ಯಾಯಗಳಿರುವ ಹೊಸದೊಂದು ಆಪ್ಶನ್ ತೆರೆದುಕೊಳ್ಳುತ್ತದೆ ಮತ್ತು ಇದರಲ್ಲಿ ನೋಟಿಫಿಕೇಷನ್ ಲಾಗ್‌ನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿಂದ ಈ ಸೆಟಿಂಗ್ಸ್ ವಿಜೆಟ್ ನಿಮ್ಮನ್ನು ನೇರವಾಗಿ ನೋಟಿಫಿಕೇಷನ್ ಹಿಸ್ಟರಿಗೆ ಕರೆದೊಯ್ಯುತ್ತದೆ. ನೋಟಿಫಿಕೇಷನ್ ಲಾಗ್‌ನ್ನು ಓಪನ್ ಮಾಡಿದರೆ ಎಲ್ಲ ನೋಟಿಫಿಕೇಷನ್‌ಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ನೋಟಿಫಿಕೇಷನ್ ಓಪನ್ ಮಾಡಿದರೆ ಅದು ಕೇವಲ ಟೆಕ್ಸ್ಟ್ ಮಾತ್ರವಲ್ಲ, ನಿರ್ದಿಷ್ಟ ನೋಟಿಫಿಕೇಷನ್‌ನ ಎಲ್ಲ ಪ್ರಮುಖ ವಿವರಗಳನ್ನೂ ಲೋಡ್ ಮಾಡುತ್ತದೆ ಎನ್ನುವುದು ಗಮನದಲ್ಲಿರಲಿ.

 ಮೋಟೊ ಮತ್ತು ಪಿಕ್ಸೆಲ್‌ನಂತಹ ‘ಪ್ಯೂರ್’ ಆ್ಯಂಡ್ರಾಯ್ಡಾ ಫೋನ್‌ಗಳಲ್ಲಿ ಸೆಟಿಂಗ್ಸ್ ವಿಜೆಟ್ ಮೊದಲೇ ಹೋಮ್ ಸ್ಕ್ರೀನ್‌ಗೆ ಸೇರ್ಪಡೆಯಾಗಿರುತ್ತದೆ ಮತ್ತು ಅಲ್ಲಿ ನೋಟಿಫಿಕೇಷನ್ ರಿಜಿಸ್ಟ್ರಿಯನ್ನು ಕಾಣಬಹುದು. ಈ ಎಲ್ಲ ವಿಧಾನಗಳು ಆ್ಯಂಡ್ರಾಯ್ಡಾ 6(ಮಾರ್ಷ್‌ಮೆಲೋ) ಮತ್ತು ಹೆಚ್ಚಿನ ಆವೃತ್ತಿಗಳಲ್ಲಿ ಮಾತ್ರ ಕೆಲಸ ಮಾಡುತ್ತವೆ ಎನ್ನಲಾಗಿದೆ.

ಮಿತಿಗಳು

* ಸಂದೇಶದ ಮೊದಲ 100 ಅಕ್ಷರಗಳನ್ನು ಮಾತ್ರ ಕಾಣಬಹುದಾಗಿದೆ.

* ನೋಟಿಫಿಕೇಷನ್ ಲಾಗ್ ಕೆಲವೇ ಗಂಟೆಗಳ ಅವಧಿಗೆ ಸಂದೇಶವನ್ನು ಸೇವ್ ಮಾಡಿರುತ್ತದೆ. ಹೀಗಾಗಿ ಸುದೀರ್ಘ ಅವಧಿಯ ಬಳಿಕ ಡಿಲಿಟ್ ಆದ ಸಂದೇಶಗಳನ್ನು ಮತ್ತೆ ಪಡೆಯಲು ಸಾಧ್ಯವಾಗದಿರಬಹುದು.

* ಕ್ಲೀನರ್ ಬಳಸಿ ನೋಟಿಫಿಕೇಷನ್ ಲಾಗ್ ಅನ್ನು ಅಳಿಸಿದರೆ ಸಂದೇಶವನ್ನು ಮತ್ತೆ ನೋಡಲು ಸಾಧ್ಯವಾಗುವುದಿಲ್ಲ. ನೀವು ಫೋನ್‌ನ್ನು ರಿಸ್ಟಾರ್ಟ್ ಮಾಡಿದರೂ ಸಂದೇಶಗಳನ್ನು ಮತ್ತೆ ನೋಡಲಾಗುವುದಿಲ್ಲ.

* ಟೆಕ್ಸ್ಟ್ ಮೆಸೇಜ್‌ಗಳನ್ನು ಮಾತ್ರ ಮರಳಿ ಪಡೆಯಬಹುದು. ರವಾನಿಸಿದ್ದ ವ್ಯಕ್ತಿಯು ಚಿತ್ರ ಅಥವಾ ವೀಡಿಯೊ ಸಂದೇಶಗಳನ್ನು ಡಿಲಿಟ್ ಮಾಡಿದ್ದರೆ ‘ದಿಸ್ ಮೆಸೇಜ್ ವಾಸ್ ಡಿಲಿಟೆಡ್’ ಎಂಬ ಮಾಮೂಲು ಸಂದೇಶವು ಕಾಣಿಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News