ಮದ್ದು ಹಾಕುವ ಹಿಂದಿದೆ ಮನೋವೆಜ್ಞಾನಿಕ ಕಾರಣ!

Update: 2017-11-18 11:44 GMT

ಭಾಗ 20

ಹೌದು, ಮನೋ ವೈಕಲ್ಯ ಅಥವಾ ಮಾನಸಿಕ ಕಾಯಿಲೆಯೂ ಈ ‘ಮದ್ದು’ ಹಾಕಲಾಗಿದೆ ಎಂದು ನಂಬುವ ಹಿಂದಿರುವ ಸತ್ಯ. ಮನಸ್ಸು ಕಾಯಿಲೆಗೆ ತುತ್ತಾದಾಗ ಯಾರಿಂದಲೋ ತಮಗೆ ಅನ್ಯಾಯ ವಾಗಿದೆ ಎಂಬ ಆಲೋಚನೆಯೇ ಪ್ರಮುಖವಾಗಿಬಿಡುತ್ತದೆ. ಅಂತಹವರಿಗೆ ಅದನ್ನು ತೆಗೆಯುವ ನಟನೆ ಮಾನಸಿಕವಾಗಿ ನೆಮ್ಮದಿ ನೀಡುತ್ತದೆ. ಕೆಲವೊಮ್ಮೆ ಕೊಳಕಾದ ಮತ್ತು ಇಷ್ಟವಿಲ್ಲದ ಸ್ಥಳಗಳಲ್ಲಿ ಅನಿವಾರ್ಯವಾಗಿ ಆಹಾರ ಸೇವಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೊಟ್ಟೆ ಕೆಡುವ ಸಂದರ್ಭಗಳಿರುತ್ತವೆ. ಇದಕ್ಕೆ ಮದ್ದು ಹಾಕಿದ್ದೇ ಕಾರಣವೆಂಬ ನೆಪವು ಅದನ್ನು ತೆಗೆಸಲು ನಕಲಿ ಜ್ಯೋತಿಷಿಗಳು, ಬಾಬಾಗಳತ್ತ ಸೆಳೆಯುತ್ತವೆ. ಮದ್ದು ತೆಗೆಸುವವರು ತಮಗೆಲ್ಲಾ ತಿಳಿದಂತೆ ಮಾನಸಿಕ ವಾಗಿ ನೊಂದವರೆದುರು ಫೋಸು ಕೊಡುತ್ತಾರೆ. ವಿಭಿನ್ನ ರೀತಿಯ ಪ್ರಕ್ರಿಯೆಗಳ ಮೂಲಕ ರೋಗಿಗಳನ್ನು ಕಂಗೆಡಿಸುತ್ತಾರೆ. ಅದ್ಯಾವುದೋ ರೀತಿಯ ದ್ರಾವಣ ವನ್ನು ಔಷಧಿಯ ಹೆಸರಿನಲ್ಲಿ ನೀಡಿದಾಗ ವಾಂತಿ ಮಾಡಿ ರೋಗಿ ತನ್ನ ಎದುರಿನವ ಹೇಳಿದ್ದನ್ನೆಲ್ಲಾ ನಂಬಿ ಬಿಡುತ್ತಾನೆ. ಮತ್ತೊಂದು ವಿಶೇಷ ಹಾಗೂ ಗಮನಿಸಬೇಕಾದ ಸಂಗತಿಯೆಂದರೆ, ನಾವು ವಾಂತಿ ಮಾಡುವ ಸಂದರ್ಭ ಕಣ್ಣು ಮುಚ್ಚಿರುತ್ತೇವೆ. ಆಗ ಮದ್ದು ತೆಗೆಯುವರು ಕೈಚಳಕದ ಮೂಲಕ ಗಿಮಿಕ್ ಮಾಡುತ್ತಾರೆ. ಆದರೆ ಏನೂ ಅರಿಯದ ವ್ಯಕ್ತಿ ಮಾತ್ರ ತಾನು ವಾಂತಿ ಮಾಡಿದ್ದನ್ನು ಕಂಡು ಮದ್ದು ತೆಗೆಸುವವನ ಮಾತು ನಿಜವೆಂದೇ ನಂಬುತ್ತಾನೆ. ಇದು ಕೇವಲ ವಾಂತಿ ಮಾಡುವ ಮೂಲಕ ಮಾತ್ರವಲ್ಲ, ಹೊಟ್ಟೆಯ ಚರ್ಮದ ಮೂಲಕವೂ ಮದ್ದು ತೆಗೆಯುವವರಿದ್ದಾರೆ!

ಹೊಟ್ಟೆಯ ಮೇಲೆ ಉರಿಯುವ ಬೆಂಕಿಯನ್ನಿಟ್ಟು ಅವರು ಈ ಪ್ರಯೋಗ ಮಾಡುತ್ತಾರೆ. ಚರ್ಮದ ಮೇಲೆ ಉರಿಯುವ ಬೆಂಕಿ ಇಟ್ಟು ಮುಚ್ಚಿದಾಗ ಬೆಂಕಿ ಆರಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ಗಾಳಿಯ ಒತ್ತಡ ಕಡಿಮೆಯಾಗಿ ಪಾತ್ರೆ ಅಂಟಿ ಕೊಳ್ಳುತ್ತದೆ. ಇದಲ್ಲದೆ ಈ ಸಂದರ್ಭ ಚರ್ಮ ವನ್ನು ಎಳೆದ ಹಾಗೆ ಭಾಸವಾಗುತ್ತದೆ. ಮದ್ದು ತೆಗೆಸಿಕೊಳ್ಳುವ ವ್ಯಕ್ತಿಗೆ ತನ್ನ ಹೊಟ್ಟೆಯಲ್ಲಿದ್ದ ಮದ್ದು ಹೊರಬಂದಿದೆ ಎಂಬ ಭ್ರಮೆ ಕಾಡುತ್ತದೆ. ಮಾತ್ರವಲ್ಲದೆ ಮಾನಸಿಕ ತೊಳಲಾಟದಲ್ಲಿದ್ದ ಆತ ತನಗಿದ್ದ ಯಾವುದೋ ರೋಗ ಗುಣವಾಗಿದೆ. ಯಾರೋ ಮಾಡಿಸಿದ ಮಾಟ, ಹಾಕಿದ ಮದ್ದು ಹೊರ ಬಂತು ಎಂದುಕೊಳ್ಳುತ್ತಾನೆ.

ಹಣ ಮಾಯವಾಗುವುದರ ಹಿಂದಿನ ಕರಾಮತ್ತು!

ನಮ್ಮ ಹಲವಾರು ಪ್ರಗತಿಪರ ಹೋರಾಟಗಳಲ್ಲಿ ಭಾಗಿಯಾಗಿದ್ದ ಯಶೋದಾ ಅವರು ಒಮ್ಮೆ ನನ್ನಲ್ಲಿಗೆ ಸಮಸ್ಯೆಯೊಂದನ್ನು ತಂದಿದ್ದರು. ಅದು ಅವರ ಸಹಪಾಠಿಗೆ ಸಂಬಂಧಿಸಿ ದ್ದಾಗಿತ್ತು. ಆ ಮನೆಯಲ್ಲಿ ವಯಸ್ಸಾದ ತಂದೆ- ತಾಯಿ ಮತ್ತವರ ಎರಡು ಹೆಣ್ಣು ಮಕ್ಕಳು ಮತ್ತು ಮೂವರು ಗಂಡು ಮಕ್ಕಳು. ಅವರಲ್ಲಿ ಹಿರಿಯಾಕೆ ಯಶೋದಾರ ಸಹೋದ್ಯೋಗಿ. ಎರಡನೆಯವರು ಮನೆ ಯಲ್ಲೇ ಇದ್ದರು. ಇಬ್ಬರು ಗಂಡು ಮಕ್ಕಳು ಸ್ವಂಉದ್ಯೋಗದಲ್ಲಿ ಸ್ಥಿತಿವಂತ ರಾಗಿದ್ದರು. ಕೊನೆಯವ ಕಾಲೇಜು ವಿದ್ಯಾರ್ಥಿ.

ಇವರ ಮನೆಯಲ್ಲಿ ಇಟ್ಟ ಹಣ ಮಾಯವಾಗುತ್ತಿತ್ತು. ಇದೇ ಈ ಮನೆಯ ಸಮಸ್ಯೆ. ಜೇಬು ಮಾತ್ರವಲ್ಲದೆ, ಪೆಟ್ಟಿಗೆ, ಬೀಗ ಹಾಕಿಟ್ಟ ಕಪಾಟಿನಿಂದಲೂ ಮಾಯವಾಗುತ್ತಿತ್ತು. ಇವರು ಹಲವಾರು ಜ್ಯೋತಿಷಿಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕೇಳಿಕೊಂಡಿದ್ದರು. ಆದರೆ ಯಾವುದೇ ಪ್ರಯೋಜನ ಆಗದ ಕಾರಣ ನನ್ನ ಸಹಾಯಕ್ಕೆ ಮುಂದಾಗಿದ್ದರು. ನನ್ನ ಬಳಿ ಅವರ ಹಿರಿಯ ಮಗಳು ಮತ್ತು ತಮ್ಮ ಬಂದಿದ್ದರು. ಅವರಲ್ಲಿ ಮಾತನಾಡಿ ವಿಷಯ ಸಂಗ್ರಹಿಸಿದಾಗ ಮನೆಯಲ್ಲಿ ಹಣ ಹೇಗೆ ಮಾಯವಾಗುತ್ತಿತ್ತು ಎಂಬುದು ನನಗೆ ಅರಿವಾಗಿತ್ತು. ಇದನ್ನು ಅವರಿಗೆ ತಿಳಿಸಿದರೆ ಅವರು ಮಾತ್ರ ಅದನ್ನು ಒಪ್ಪಲು ತಯಾರಿರಲಿಲ್ಲ.

ಅದಕ್ಕಾಗಿ ಅವರಿಗೆ ರಾಸಾಯನಿಕ ಪರೀಕ್ಷೆಗೆ ಒಪ್ಪಿಸಿದೆ. ಬಿಳಿ ಹುಡಿ ಯೊಂದನ್ನು ಅವರಿಗೆ ಕೊಟ್ಟು ನೋಟುಗಳಿಗೆ ಹಚ್ಚಿಡಲು ತಿಳಿಸಿದೆ. ನೋಟು ಗಳು ಮಾಯವಾದಾಗ ಎಲ್ಲರ ಕೈಗಳನ್ನೂ ನೀರಿನಲ್ಲಿ ಮುಳುಗಿಸಿ ಆ ನೀರನ್ನು ರಾಸಾಯನಿಕ ಪರೀಕ್ಷೆಗೆ ನನ್ನ ಬಳಿ ತರಬೇಕೆಂದು ತಿಳಿಸಿದೆ. ಅವರ ಮನೆಯ ಲ್ಲಿದ್ದಷ್ಟು ಜನರ ಸಂಖ್ಯೆಗೆ ಸರಿಯಾಗುವ ನೀರಿದ್ದ ಪ್ಲಾಸ್ಟಿಕ್ ಬಾಟಲುಗಳನ್ನು ಕೊಟ್ಟು, ಅವುಗಳಿಗೆ ನಂಬರ್ ಹಚ್ಚಿದೆ. ಯಾರ ನಂಬರ್‌ನ ಬಾಟಲಿಯಲ್ಲಿ ಯಾರ ಕೈ ಮುಳುಗಿಸಿದ್ದಾರೆಂಬ ಪಟ್ಟಿಯನ್ನೂ ತರಲು ಹೇಳಿದೆ. ಎರಡೂ ಕೈಗಳನ್ನು ಮುಳುಗಿಸುವಂತೆಯೂ ಸೂಚನೆ ನೀಡಿದ್ದೆ.

ಬಾಟಲಿ ತೆಗೆದುಕೊಂಡು ಹೋಗಿದ್ದ ಅಕ್ಕ, ತಮ್ಮ ಕೆಲ ತಿಂಗಳಾದರೂ ನನ್ನ ಬಳಿ ಬರಲಿಲ್ಲ. ಅದೊಂದು ದಿನ ಬೇರೆ ಯಾವುದೋ ಕೆಲಸಕ್ಕಾಗಿ ಆ ತಮ್ಮ ನಮ್ಮಲ್ಲಿಗೆ ಬಂದಿದ್ದ. ಆಗ ನಾನು ನಿಮ್ಮ ಮನೆಯಲ್ಲಿ ಹಣ ಮಾಯವಾ ಗುವುದು ನಿಂತಿದೆಯೇ ಎಂದು ಪ್ರಶ್ನಿಸಿದೆ. ಆತ ಕೊಟ್ಟ ಉತ್ತರದಿಂದ ನಾನೇ ಆಶ್ಚರ್ಯ ಪಡುವಂತಾಗಿತ್ತು!

ನನ್ನಲ್ಲಿಗೆ ಬಂದ ಬಳಿಕ ಆತ ಮನೆಗೆ ಹೋಗಿ ಎಲ್ಲರಿಗೂ ತಾವು ಹೋಗಿದ್ದ ವಿಚಾರವನ್ನು ತಿಳಿಸಿದ್ದನಂತೆ. ಅದಲ್ಲದೆ ಯಾರು ಹಣ ಕದಿಯುತ್ತಿ ದ್ದಾರೆಂದು ತಿಳಿಯಲು ನಾನು ವಿಧಾನವೊಂದನ್ನು ತಿಳಿಸಿರುವುದಾಗಿಯೂ ಆತ ಹೇಳಿದ್ದನಂತೆ. ಆ ದಿನದಿಂದ ಅವರ ಮನೆಯಲ್ಲಿ ಒಂದು ನೋಟೂ ಮಾಯವಾಗಿಲ್ಲವಂತೆ. ಅಂತೂ ಭೂತದ ಚೇಷ್ಟೆ ಸಂಪೂರ್ಣವಾಗಿ ನಿಂತಿತ್ತು. ಭೂತಗಳೂ ರಾಸಾನಿಯಕ ಪ್ರಯೋಗಗಳಿಗೆ ಹೆದರುತ್ತವೆ ಎಂದಾಯಿತು!

ಆ ಮನೆಯಲ್ಲೊಂದು ಹಸಿವಿನ ಭೂತ! ಇದೇನಪ್ಪಾ ವಿಚಿತ್ರ ಎಂದು ನೀವು ಅಂದುಕೊಂಡರೆ ತಪ್ಪೇನಿಲ್ಲ ಬಿಡಿ., ಆ ಭೂತವೇ ಅಂಥದ್ದು!

 ಬೆಳ್ತಂಗಡಿ ಸಮೀಪದ ಗ್ರಾಮವೊಂದರಿಂದ ನಮಗೆ ಭೂತದ ತೊಂದರೆ ಬಗ್ಗೆ ದೂರು ಬಂದಿತ್ತು. ಆ ಮನೆಯಲ್ಲಿ ಗಂಡ ಹೆಂಡತಿ ಮತ್ತು ಅವರ ಚಿಕ್ಕ ಮಗು. ಆ ಮನೆಯಲ್ಲಿ ಒಮ್ಮಿಂದೊಮ್ಮೆಗೆ ಭೂತದ ಕಾಟ ಆರಂಭ ವಾಯಿತು. ಅಲ್ಲಲ್ಲಿ ವಸ್ತುಗಳು ಹಾರಾಡುವುದು, ಬಾಗಿಲು ಮುಚ್ಚಿಕೊಳ್ಳು ವುದು, ತೆರೆಯುವುದು, ವಿದ್ಯುತ್ ಬಲ್ಬ್‌ಗಳು ಒಡೆಯುವುದು ಮೊದ ಲಾದ ಅವಾಂತರಗಳು. ಹಲವಾರು ತಿಂಗಳ ಈ ಭೂತದ ಚೇಷ್ಟೆಯಿಂದ ಆ ಮನೆ ಮಂದಿಯೆಲ್ಲಾ ಹೈರಾಣಾಗಿದ್ದರು. ನಮ್ಮಿಂದ ತರಬೇತಿ ಪಡೆದ ಕೆಲ ಕಾರ್ಯಕರ್ತರು ಆ ಮನೆಗೆ ಭೇಟಿ ನೀಡಿ ಬಂದು ನಾನು ತನಿಖೆ ನಡೆಸುವಂತೆ ಕೋರಿಕೊಂಡಿದ್ದರು.

ಆ ಮನೆಗೆ ಯಾರಾದರೂ ಹೊಸಬರು ಬಂದಿದ್ದಾರಾ ಎಂದು ನಾನು ಪ್ರಶ್ನಿಸಿದೆ. ಮನೆಯಾಕೆಯ ಅಣ್ಣನ ಮಗನೊಬ್ಬ ಓದಲು ಆ ಮನೆಗೆ ಬಂದಿರುವುದು ಗೊತ್ತಾಯಿತು. ತನ್ನ ಮನೆಯಲ್ಲಿ ಓದಲು ಕಷ್ಟ ಎಂದು ಆತನನ್ನು ಇಲ್ಲಿಗೆ ಕಳುಹಿಸಿದ್ದರಂತೆ. ನಾನು ಆತನನ್ನು ನನ್ನ ಬಳಿ ಕರೆ ತರುವಂತೆ ತಿಳಿಸಿದೆ.

ಆ ಹುಡುಗನ ತಂದೆ ಬೇಸಾಯ ಮಾಡುತ್ತಿದ್ದರು. ತಾಯಿ ವಿದೇಶದಲ್ಲಿ ಅಡುಗೆ ಕೆಲಸದಾಕೆ. ಆ ಹುಡುಗ ತಂದೆಯೊಂದಿಗೆ ಇದ್ದ. ಮನೆಯಲ್ಲಿ ಸರಳವಾದ ಹಾಗೂ ಎಲ್ಲರಿಗೂ ಬೇಕಾದಷ್ಟು ಊಟ ಸಿಗುತ್ತಿತ್ತು. ಹತ್ತನೆ ತರಗತಿಯಲ್ಲಿ ಓದುತ್ತಿದ್ದ ಈ ಹುಡುಗನಿಗೆ ಕಡಿಮೆ ಅಂಕಗಳು ದೊರೆತ ಕಾರಣ ಇವನಿಗೆ ಹತ್ತಿರದ ಕಾಲೇಜಿನಲ್ಲಿ ಸೀಟು ಸಿಕ್ಕಿರಲಿಲ್ಲ. ಹಾಗಾಗಿ ಈತನನ್ನು ದೂರದ ಕಾಲೇಜಿಗೆ ಸೇರಿಸಿದ್ದರು. ದಿನಾ ಬಂದು ಹೋಗಲು ಕಷ್ಟವಾದ ಕಾರಣ ಸಂಬಂಧಿಕರ ಮನೆಯಲ್ಲಿ ಆತನನ್ನು ಬಿಡಲಾಗಿತ್ತು. ಆ ಮನೆಯಲ್ಲಿ ಈ ಹುಡುಗನ ಅತ್ತೆ ಗೃಹಿಣಿ. ಆಕೆಯ ಗಂಡ ಇಲೆಕ್ಟ್ರಿಶಿಯನ್.ಆತನಿಗೆ ಸರಿಯಾಗಿ ಕೆಲಸವಿರಲಿಲ್ಲ. ಸಂಪಾದನೆಯೂ ಹೆಚ್ಚಿರಲಿಲ್ಲ. ಜತೆಗೆ ಈ ಹುಡುಗನ ಜವಾಬ್ದಾರಿಯನ್ನೂ ಇವರು ಹೊರಬೇಕಾಗಿತ್ತು. ತಲೆಬಿಸಿಯಾಗಿ ಆತ ದಿನವೂ ಕುಡಿದು ಬಂದು ಪತ್ನಿಗೆ ಬಯ್ಯುತ್ತಿದ್ದ. ಇದನ್ನು ಕಂಡ ಹುಡುಗ ತನ್ನ ಸುಪ್ತ ಮನಸ್ಸಿನ ಪ್ರತಿಕ್ರಿಯೆಯಿಂದ ಭೂತದ ಚೇಷ್ಟೆ ಆರಂಭಿಸಿದ್ದ. ಈತನಿಗೆ ತನ್ನ ಮನೆಗೆ ಹೋಗಬೇಕೆಂಬ ಆಸೆಯಿದ್ದರೂ ತಂದೆಯ ಭಯ. ಇಲ್ಲಿ ಸರಿಯಾಗಿ ಹೊಟ್ಟೆಗೂ ಸಿಗುತ್ತಿರಲಿಲ್ಲ. ಕಾಲೇಜಿನಲ್ಲಿ ಏನಾದರೂ ತಿನ್ನಲು ಹಣವೂ ಸಿಗುತ್ತಿರಲಿಲ್ಲ. ಇದು ಆ ಭೂತ ಚೇಷ್ಟೆಗೆ ಪ್ರಮುಖ ಕಾರಣವಾಗಿತ್ತು.

ವಿಷಯವನ್ನೆಲ್ಲಾ ತಿಳಿದುಕೊಂಡು ನಾನು ಆತನನ್ನು ಕರೆದುಕೊಂಡು ಬಂದ ವ್ಯಕ್ತಿಗೆ ನಿಜ ವಿಷಯ ತಿಳಸಿದೆ. ಮಾತ್ರವಲ್ಲದೆ, ಹುಡುಗನನ್ನು ಆತನ ತಂದೆಯ ಬಳಿ ಕಳುಹಿಸುವ ವ್ಯವಸ್ಥೆ ಮಾಡುವಂತೆ ಹೇಳಿದೆ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News