ನಾಡು ನುಡಿಗೆ ಸಂಬಂಧಿಸಿದ ಮಹತ್ವದ ವರದಿಗಳ ಸಂಗ್ರಹ
‘ಕನ-್ನಡ-ಕನ್ನಡಿಗ ಕರ್ನಾಟಕ’ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರ ತಂದಿರುವ ನಾಡು ನುಡಿಗೆ ಸಂಬಂಧಿಸಿದ ಮಹತ್ವದ ವರದಿಗಳ ಸಂಗ್ರಹ. ಸಾಧಾರಣವಾಗಿ ನಾಡು ನುಡಿಗೆ ಸಂಬಂಧಿಸಿದಂತೆ ಸರಕಾರ ವರದಿಗಳನ್ನು ತರಿಸಿಕೊಳ್ಳುತ್ತದೆ. ಆದರೆ ಬಳಿಕ ಅದು ಫೈಲುಗಳಡಿಯಲ್ಲಿ ಧೂಳು ತಿನ್ನುತ್ತಾ ಬಿದ್ದುಕೊಳ್ಳುತ್ತವೆ. ಅನುಷ್ಠಾನದ ಮಾತಿರಲಿ, ಕನಿಷ್ಠ ಅದನ್ನು ಸರಕಾರವೇ ಓದಿರುವುದಿಲ್ಲ. ಜನಪ್ರತಿನಿಧಿಗಳಿಗೆ ಅದರೊಳಗೆ ಏನಿದೆ ಎನ್ನುವುದೇ ಗೊತ್ತಿರುವುದಿಲ್ಲ. ಜನರಿಗೆ ಆ ವರದಿಯನ್ನು ತಲುಪಿಸುವ ಪ್ರಯತ್ನವೇ ನಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ, ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಸರಕಾರಕ್ಕೆ ಸಲ್ಲಿಸಿರುವ ಪ್ರಮುಖ ವರದಿಗಳನ್ನು ಸಂಗ್ರಹಿಸಿ ಪ್ರಾಧಿಕಾರವು ಅದಕ್ಕೆ ಪುಸ್ತಕ ರೂಪ ನೀಡಿರುವುದು ನಿಜಕ್ಕೂ ಅಭಿನಂದನೀಯ. ಇಲ್ಲಿ ಸುಮಾರು 30 ಅಂತಹ ವರದಿಗಳು ಮತ್ತು ಶಿಫಾರಸುಗಳಿವೆ. ಭಾಷಾ ಸಮಿತಿಯ ವರದಿ, ಎಚ್. ನರಸಿಂಹಯ್ಯ ವರದಿ, ಶಿಕ್ಷಣ ತಜ್ಞರ ಸಲಹಾ ಸಮಿತಿ ವರದಿ, ಬೋರಲಿಂಗಯ್ಯ ಸಮಿತಿ ವರದಿ, ಕನ್ನಡ ಶಾಸ್ತ್ರೀಯ ಭಾಷಾ ವರದಿ, ಕನ್ನಡ ತಂತ್ರಾಂಶ ವರದಿ, ಸರೋಜಿನಿ ಮಹಿಷಿ ವರದಿ, ಕಸ್ತೂರಿ ರಂಗನ್ ವರದಿ, ನಾಡು ನುಡಿ ಅಧ್ಯಯನ ವರದಿ, ಪರಮಶಿವಯ್ಯ ವರದಿ, ಕಾವೇರಿ ನ್ಯಾಯಾಧಿಕರಣ ತೀರ್ಪು ಹೀಗೆ ಹತ್ತು ಹಲವು ವಿವಾದಗಳು, ಸಮಸ್ಯೆಗಳು, ಪರಿಹಾರಗಳನ್ನು ಒಳಗೊಂಡ ಮಹತ್ವದ ವರದಿಗಳು ಇಲ್ಲಿವೆ.
ಗೋಕಾಕ್ ವರದಿ, ಮಹಿಷಿ ವರದಿ, ಮಹಾಜನ್ ವರದಿ, ನಂಜುಂಡಪ್ಪ ವರದಿ ಮೊದಲಾದವುಗಳು ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ, ವಿಧಾನಸಭೆಯಲ್ಲಿ ಚರ್ಚೆಯಾಗುತ್ತವೆ. ಆದರೆ ಅದರೊಳಗೆ ಏನಿದೆ ಎನ್ನುವ ಸಂಪೂರ್ಣ ಮಾಹಿತಿ ಜನರಿಗೆ ತಿಳಿದಿರುವುದಿಲ್ಲ. ಈ ವರದಿಗಳು ಸುಲಭವಾಗಿ ಆಸಕ್ತರಿಗೆ ಸಿಗುವುದೂ ಇಲ್ಲ. ವರದಿ ಜಾರಿಗೆ ಒತ್ತಾಯಿಸುವವರಿಗೆ ಸಂಪೂರ್ಣ ವಿವರಗಳು ಗೊತ್ತಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಪ್ರಯತ್ನ ಶ್ಲಾಘನಾರ್ಹವಾಗಿದೆ. ಇದರಿಂದ ಕನ್ನಡ ನಾಡು ನುಡಿಯ ಕುರಿತಂತೆ ಜನರಿಗೆ ಹೆಚ್ಚಿನ ಮಾಹಿತಿ ದೊರಕುವುದಲ್ಲದೆ, ಅದರ ಅನುಷ್ಠಾನಕ್ಕೆ ಹೋರಾಡಲು ದಾರಿಯೂ ತೆರೆದುಕೊಳ್ಳತೊಡಗುತ್ತದೆ. ಡಾ. ಎಲ್. ಹನುಮಂತಯ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಈ ಕೃತಿ ಹೊರಗೆ ಬಂದಿದೆ. ರಾ.ನಂ. ಚಂದ್ರಶೇಖರ, ಡಾ. ಕೆ. ಮುರಳೀಧರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. 600 ಪುಟಗಳ ಈ ಬೃಹತ್ ಕೃತಿಯ ಮುಖಬೆಲೆ 100 ರೂಪಾಯಿ.