ಕಲ್ಲು ಬಿಸಾಡುವ ಭೂತ!

Update: 2017-11-25 12:44 GMT

ಭಾಗ-21

ಹೌದು ಇದೊಂದು ವಿಚಿತ್ರ ಘಟನೆ. ದಲಿತ ವರ್ಗದವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ದಲಿತ ಸಂಘರ್ಷ ಸಮಿತಿಯ ನನ್ನ ಸ್ನೇಹಿತ ಮಿತ್ರರೊಬ್ಬರು ನನ್ನ ಬಳಿ ಸಮಸ್ಯೆಯೊಂದನ್ನು ತಂದಿದ್ದರು. ಸೂಟರ್ ಪೇಟೆ ಸಮೀಪದ ಪೌರ ಕಾರ್ಮಿಕರೊಬ್ಬರ ಮನೆಯಲ್ಲಿ ಕಲ್ಲು ಬಿಸಾಕುವ ಭೂತದ ಉಪದ್ರವದ ಕುರಿತು. ಈ ಬಗ್ಗೆ ಸಂಘಟನೆಯ ಸದಸ್ಯರೊಬ್ಬರು ನನ್ನ ಸ್ನೇಹಿತರಿಗೆ ದೂರು ನೀಡಿದ್ದರು. ಆದರೆ ಅವರು ಅಲ್ಲಿ ಹೋಗಿ ಸ್ಥಳ ಪರಿಶೀಲನೆ ಮಾಡಿದ ಮೇಲೆ ಅವರಿಗೆ ಏನು ತೋಚದೆ ನನ್ನ ಬಳಿ ಸಮಸ್ಯೆ ತಂದಿದ್ದರು.

ನಾನು ಅವರ ಜತೆ ಆ ಸ್ಥಳಕ್ಕೆ ಹೊರಟೆ. ಅದೊಂದು ಚಿಕ್ಕ ಮನೆ. ತಂದೆ, ತಾಯಿ ಹಾಗೂ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಒಬ್ಬಳು ಪಿಯುಸಿ ಓದುತ್ತಿದ್ದರೆ ಮತ್ತೊಬ್ಬಳು ಒಂಬತ್ತನೆ ತರಗತಿ ಓದುತ್ತಿದ್ದರು. ಕೊನೆಯ ಹುಡುಗ ಐದನೆ ತರಗತಿ. ಇವರ ತಂದೆ ಮರದಿಂದ ಬಿದ್ದು ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ತಾಯಿ ಮಂಗಳೂರು ಮಹಾನಗರ ಪಾಲಿಕೆ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಾನು ಅಲ್ಲಿಗೆ ಹೋದಾಗ ತಾಯಿ ಇರಲಿಲ್ಲ. ಎಲ್ಲಿ ಎಂದು ಕೇಳಿದರೆ, ಭೂತ ಬಿಡಿಸಲು ವಾಮಂಜೂರಿಗೆ ಹೋಗಿದ್ದಾರೆಂಬ ಮಾಹಿತಿ ದೊರೆಯಿತು.

ಮನೆಯ ಅಂಗಳದಲ್ಲಿ ಕಲ್ಲು ಬೀಳುವುದು ನಡೆಯುತ್ತಿದೆ ಎಂಬ ಮಾಹಿತಿ ನನಗೆ ಲಭ್ಯವಾಗಿತ್ತು. ಅವುಗಳನ್ನು ತೋರಿಸಲು ಆ ಕಲ್ಲುಗಳನ್ನು ಅಲ್ಲೇ ಬಿಟ್ಟಿದ್ದರು. ಮನೆಯೊಳಗೆ ಪ್ರವೇಶಿಸಿದಾಗ ಅಲ್ಲಿಯೂ ಕಲ್ಲು ಹೇಗೆ ಬೀಳುತ್ತದೆ ಎಂಬುದನ್ನು ನನಗೆ ವಿವರಿಸಿದರು. ವಿಶೇಷವೆಂದರೆ ಆ ಕಲ್ಲುಗಳು ಮುಸ್ಸಂಜೆಗೆ ಮಾತ್ರ ಬೀಳುತ್ತಿದ್ದವು. ಮುಖ್ಯವಾಗಿ ಅಕ್ಕ ತಂಗಿಯರಲ್ಲಿ ಅಕ್ಕ ಮನೆಯಲ್ಲಿ ಇರುವಾಗ ಮಾತ್ರ ಕಲ್ಲುಗಳು ಗಾಳಿಯಲ್ಲಿ ಹಾರಿ ಬರುತ್ತಿದ್ದವು!

ಈ ಬಗ್ಗೆ ಸ್ವಲ್ಪ ಆಳವಾದ ತನಿಖೆಯ ಅಗತ್ಯ ಎಂದು ನನಗನ್ನಿಸಿತು. ಆ ವೇಳೆಗಾಗಲೇ ಅಲ್ಲಿ ಯುವತಿಯರ ತಾಯಿಯೂ ಬಂದರು. ಅವರನ್ನು ಮಾತನಾಡಿಸಲು ಕಚೇರಿಗೆ ಕರೆದುಕೊಂಡು ಹೋದೆವು. ನಾನು ಒಬ್ಬನೇ ಕುಳಿತು ಒಬ್ಬೊಬ್ಬರನ್ನೇ ಕರೆಸಿ ಮಾತನಾಡಿಸಿದೆ. ತಾಯಿಯ ಪ್ರಕಾರ ಆ ಕಲ್ಲುಗಳು ಸಾಯಂ ಕಾಲ ಮಾತ್ರ ಬಂದು ಬೀಳುತ್ತಿದ್ದವು. ಅವುಗಳು ಎಲ್ಲೆಲ್ಲಿ ತಾಗುತ್ತ್ತಿತ್ತು ಎಂಬುದನ್ನು ಆಕೆ ವಿವರಿಸಿದ್ದರು. ಬಳಿಕ ಹಿರಿಯ ಮಗಳನ್ನು ಮಾತನಾಡಿಸಿದಾಗಲೂ ಆಕೆಯೂ ಈ ಮಾತನ್ನೇ ವಿವರಿಸಿದಳು. ಇದನ್ನು ಯಾರು ಮಾಡುತ್ತಿರಬಹುದು ಎಂದು ಕೇಳಿದರೆ ಅದು ಭೂತದ ತೊಂದರೆ ಎಂಬುದು ಆಕೆಯ ಉತ್ತರವಾಗಿತ್ತು. ಮತ್ತೆ ಸ್ವಲ್ಪ ದಬಾಯಿಸಿ ಕೇಳಿದರೆ, ಪಕ್ಕದ ಮನೆಯ ಗುರುವಪ್ಪನೆಂಬ ಯುವಕ ಕಲ್ಲು ಬಿಸಾಡುತ್ತಿದ್ದಿರಬಹುದು ಎಂದಳು. ಯಾಕೆ ಎಂದರೆ ನನಗೆ ಗೊತ್ತಿಲ್ಲ ಎಂಬ ಉತ್ತರ ಆಕೆಯದ್ದಾಗಿತ್ತು.

ಬಳಿಕ ತಂಗಿಯನ್ನು ಕರೆದು ಮಾತನಾಡಿಸಿದೆ. ಆಕೆ ಕೂಡಾ ತಾಯಿ ಹಾಗೂ ಅಕ್ಕ ಹೇಳಿದ ಮಾತನ್ನೇ ಪುನರಾವರ್ತಿಸಿದ್ದಳು. ಆದರೆ ಆ ಕಲ್ಲುಗಳು ಅಕ್ಕನಿಗೆ ಮಾತ್ರ ತಾಗುತ್ತವೆ. ಆಕೆ ಒಬ್ಬಳೇ ಇದ್ದಾಗ ಮಾತ್ರ ಬೀಳುತ್ತವೆ ಎಂದಳು. ಕಲ್ಲುಗಳನ್ನು ಗುರುವಪ್ಪ ಬಿಸಾಡುತ್ತಿದ್ದಾನಂತೆ ಎಂದು ಆಕೆಯನ್ನು ಪ್ರಶ್ನಿಸಿದಾಗ, ಆತ ಒಳ್ಳೆಯವ ಆತ ಇಂತಹ ಕೆಲಸ ಮಾಡಲು ಸಾಧ್ಯ ಇಲ್ಲ ಎಂದು ದಿಟ್ಟ ಉತ್ತರ ನೀಡಿದಳು. ಆತನ ಬಗ್ಗೆ ನಿನಗೆ ಹೇಗೆ ಅಷ್ಟೊಂದು ಗೊತ್ತು ಎಂದಾಗ ಆಕೆ ನಾಚಿದ್ದಳು. ಅಂತೂ ನನಗೆ ಆ ವೇಳೆಗೆ ಕಲ್ಲು ಬಿಸಾಕುವ ಭೂತದ ವಿಚಾರ ಸ್ಪಷ್ಟವಾಗಿತ್ತು!

ಗುರುವಪ್ಪ ಆ ಮನೆಯ ಹಿರಿಯ ಮಗಳನ್ನು ಇಷ್ಟಪಟ್ಟಿದ್ದ. ಆದರೆ ಆಕೆ ಸಣಕಲು ದೇಹವನ್ನು ಹೊಂದಿದ್ದು, ಮುಖದ ತುಂಬಾ ಮೊಡವೆ ತುಂಬಿತ್ತು. ತಂಗಿ ದಷ್ಟಪುಷ್ಟವಾಗಿದ್ದಳು. ಮೊದಲು ಅಕ್ಕನನ್ನು ಇಷ್ಟ ಪಡುತ್ತಿದ್ದ ಯುವಕ ಕೊನೆಗೆ ತಂಗಿಯ ಸೌಂದರ್ಯ ಕಂಡು ಆಕೆಯತ್ತ ಆಕರ್ಷಿತನಾಗಿದ್ದ. ಇದರಿಂದ ಅಸಮಾಧಾನಗೊಂಡ ಅಕ್ಕ ಕಲ್ಲು ಬಿಸಾಡುವ ನಾಟಕವಾಡಿ ಅದನ್ನು ಗುರುವಪ್ಪನ ತಲೆಗೆ ಕಟ್ಟಲು ಪ್ರಯತ್ನಿಸಿದ್ದಳು. ನನಗೆ ವಿಷಯ ಸ್ಪಷ್ಟವಾದ ಮೇಲೆ ಈ ಭೂತದ ಕಾಟವನ್ನು ಹೇಗೆ ನಿಲ್ಲಿಸುವುದೆಂಬುದು ನನ್ನ ಮುಂದಿನ ಪ್ರಶ್ನೆಯಾಗಿತ್ತು. ಅದಕ್ಕಾಗಿ ಒಂದು ಯೋಜನೆ ರೂಪಿಸಿ ಮನೆ ಮಂದಿಯನ್ನು ಒಟ್ಟಿಗೆ ಕರೆಸಿದೆ. ಈಗ ಪೊಲೀಸ್‌ನವರು ಹೊಸ ನಾಯಿ ತಂದಿದ್ದಾರೆ. ಅದನ್ನು ನೀವೆಲ್ಲಾ ನೋಡಿರಬಹುದು. ದಿನಕ್ಕೆ ಒಂದೂವರೆ ಕಿಲೋ ಮಾಂಸ ನೀಡುತ್ತಾರೆ. ಅದು ವಾಸನೆ ಹಿಡಿಯಲು ಬಲು ಚುರುಕು. ಇನ್ನು ಮೇಲೆ ಕಲ್ಲು ಬಿದ್ದರೆ ಅದನ್ನು ವಸ್ತ್ರದಿಂದ ಹಿಡಿದು ಪ್ಲಾಸ್ಟಿಕ್ ಪೊಟ್ಟಣದಲ್ಲಿಡಿ. ನಾಯಿ ತಂದು ಆ ಕಲ್ಲಿನ ವಾಸನೆ ತೋರಿಸಿ ಅದಕ್ಕೆ ಹಿಡಿಯಲು ಹೇಳಿದರೆ ಅದು ಸೀದಾ ಹೋಗಿ ಕಲ್ಲು ಬಿಸಾಡಿದವರನ್ನು ಪತ್ತೆ ಹಚ್ಚಿ ಕಚ್ಚುತ್ತದೆ ಎಂದೆ. ಅದಕ್ಕೆ ವಾಸನೆ ಹಿಡಿಸುವ ಮೊದಲು ಒಂದು ದಿನ ಖಾಲಿ ಹೊಟ್ಟೆಯಲ್ಲಿ ಇರಿಸುತ್ತಾರೆ. ಆದ್ದರಿಂದ ಕಚ್ಚಿದರೆ ಅಪಾಯ ಎಂಬ ಭಯವನ್ನು ಕೂಡಾ ಹುಟ್ಟಿಸಿದೆ.

ಒಟ್ಟು ನಾಯಿಯ ಭಯವೋ, ಅಥವಾ ಇನ್ಯಾವುದೋ ಕಾರಣವೋ ಆ ಮನೆಯಲ್ಲಿ ಕಲ್ಲು ಬಿಸಾಡುವ ಭೂತದ ಕಾಟ ಮಾತ್ರ ನಿಂತು ಹೋಯಿತು.

ಬೇಂದ್ರ ತೀರ್ಥದ ಕುಟ್ಟಿಚ್ಚಾತ್ತನ್!

ಬೇಂದ್ರತೀರ್ಥದ ಜತ್ತ ಪೂಜಾರಿಯವರಿಂದ ನನಗೊಂದು ಪತ್ರ ಬಂದಿತ್ತು. ಸಂತಸದಿಂದಿದ್ದ ಅವರ ಸಂಸಾರದಲ್ಲಿ ಹುಳಿ ಹಿಂಡಲು ಭೂತವೊಂದು ಪ್ರಯತ್ನಿಸುತ್ತಿತ್ತು. ಅವರ ಮನೆಯಲ್ಲಿದ್ದ ವಸ್ತುಗಳೆಲ್ಲಾ ಮಾಯವಾಗುವುದು. ಬಟ್ಟೆಗಳು ಹರಿಯುವುದು, ಅದೇನೋ ತುಂಬಿದ ಬಾಟಲಿಗಳು ಮನೆಯಲ್ಲಿ ಪ್ರತ್ಯಕ್ಷವಾಗುವುದು. ಅಷ್ಟೇ ಅಲ್ಲ. ತೊಟ್ಟಿಲಲ್ಲಿ ಮಲಗಿದ್ದ ಮಗು ನೆಲದಲ್ಲಿಯೂ ಇರುತ್ತಿತ್ತು!

ಹಲವು ಮಂತ್ರವಾದಿಗಳ ಮೊರೆ ಹೋಗಿ ತೊಂದರೆ ನಿವಾರಣೆಗೆ ಪ್ರಯತ್ನಿಸಿದ್ದರೂ ಭೂತದ ಕಾಟ ಮಾತ್ರ ನಿಂತಿರಲಿಲ್ಲ.

ನಾನು ತಪಾಸಣೆಗಾಗಿ ಅವರ ಮನೆಗೆ ತೆರಳಿದೆ. ಜತ್ತ ಪೂಜಾರಿ ಯವರಿಗೆ ಕುಟುಂಬ ಯೋಜನೆಯಲ್ಲಿ ನಂಬಿಕೆ ಇರಲಿಲ್ಲ. ಮೂರು ಹುಡುಗರು ನಂತರ ಹದಿನಾರು ವಯಸ್ಸಿನ ಒಬ್ಬಳು ಮಗಳು. ನಂತರ ಇಬ್ಬರು ಗಂಡು ಮಕ್ಕಳು. ಕೊನೆಗೆ ಒಂದು ವರ್ಷದ ಹೆಣ್ಣು ಮಗು ಇವರ ಸಂಸಾರ.

ದೂರದ ಮರದಡಿ ಕುಳಿತು ಒಬ್ಬೊಬ್ಬರನ್ನೇ ಪ್ರಶ್ನಿಸಿದೆ. ಮೊದಲು ಬಂದ ಜತ್ತ ಪೂಜಾರಿಯವರು ಈ ಉಪದ್ರವ ಭೂತದ್ದೇ ಎಂದು ಹೇಳಿದರು. ಇದಕ್ಕೆ ಪುರಾವೆಯಾಗಿ ಮನೆಯ ಎದುರು ಜರಿದು ಬಿದ್ದ ಭೂತದ ಗುಡಿಯನ್ನು ತೋರಿಸಿದರು. ಅದರ ಪಾಯದೊಳಗೆ ಭೂತಾರಾಧನೆಯ ಸಾಮಗ್ರಿಗಳಿತ್ತು. ಅದನ್ನು ಸರಿಯಾಗಿ ಮನೆಯೊಳಗಿಡಿ ಎಂದಾಗ, ಅದನ್ನು ಮುಟ್ಟಲು ತಮಗೂ ತಮ್ಮ ಮನೆಯವರಿಗೂ ಧೈರ್ಯವಿಲ್ಲ ಎಂದರು.

ಹೀಗೆ ಒಬ್ಬೊಬ್ಬರನ್ನೇ ಪ್ರಶ್ನಿಸಿದ ಮೇಲೆ ಭೂತ ಚೇಷ್ಟೆಯ ಹಿಂದಿರು ವವರ ಬಗ್ಗೆ ನನಗೆ ಸ್ಪಷ್ಟವಾಗಿತ್ತು. ಆ ಬಾಲಕಿ ನನ್ನ ಬಳಿ ಬಂದಾಗ ‘‘ಮಗೂ ನೀನು ಈ ಭೂತದ ಆಟ ಯಾಕೆ ಆಡುತ್ತೀ?’’ ಎಂದು ಪ್ರಶ್ನಿಸಿದೆ. ಆಕೆಯ ಮುಖದಲ್ಲಿ ಗಾಬರಿ. ಆಕೆಯನ್ನು ನಿಧಾನವಾಗಿ ಮಾತಿಗೆಳೆದು ಆಕೆಯಿಂದ ಸತ್ಯಾಂಶವನ್ನು ಹೊರಹಾಕಿದ್ದೆ.

ಆಕೆಯ ತಾಯಿಗೆ ಈಗಿನ ಪುಟ್ಟ ಮಗು ಹುಟ್ಟಿದ ಬಳಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ದರಿಂದ ಮಗುವಿನ ಆರೈಕೆ ಮಾಡಲು ಈ ಬಾಲಕಿಯನ್ನು ಶಾಲೆ ಬಿಡಿಸಿ ಮನೆಯಲ್ಲಿ ಇರಿಸಲಾಗಿತ್ತು. ಇದಕ್ಕಾಗಿ ಆಕೆ ಭೂತ ಚೇಷ್ಟೆ ಆರಂಭಿಸಿದ್ದಳು.

ಈ ರೀತಿ ಮಾಡದಂತೆ ಆಕೆಗೆ ತಿಳಿ ಹೇಳಿ ಉಳಿದವರನ್ನೂ ಮಾತನಾ ಡಿಸಿದೆ. ಎಲ್ಲಾ ಮುಗಿದ ಬಳಿಕ ನಿಮ್ಮ ಮನೆಯಿಂದ ಭೂತ ಹೊರ ಹೋಗಿದೆ. ಇನ್ನು ಮೇಲೆ ಏನೂ ತೊಂದರೆ ಆಗುವುದಿಲ್ಲ ಎಂದೆ. ಜತ್ತ ಪೂಜಾರಿ ಯವರಿಗೆ ಸಂತಸವಾಗಿತ್ತು. ಭೂತದ ಸಾಮಾನುಗಳನ್ನು ಕೊಂಡೊ ಯ್ಯುವಂತೆ ನನ್ನಲ್ಲಿ ಹಠ ಹಿಡಿದರು. ನಾನು ಬೇಡವೆಂದರೂ ಒತ್ತಾಯ ಪೂರ್ವಕವಾಗಿ ಸಾಗಹಾಕಿದರು. ನಾನು ನನ್ನ ದ್ವಿಚಕ್ರ ವಾಹನದಲ್ಲಿ ಹಿಡಿಸುವಷ್ಟು ವಸ್ತುಗಳನ್ನು ಮನೆಗೆ ತಂದು ಮತ್ತೆ ಕೆಲದಿನಗಳ ಬಳಿಕ ತೆರಳಿ ಜೀಪಿನಲ್ಲಿ ಅದನ್ನು ತಂದೆವು.

ಒಟ್ಟಿನಲ್ಲಿ ಶಾಲೆ ಬಿಡಿಸಿದ ಹತಾಶೆಯಿಂದ ಹೆಣ್ಣು ಮಗಳು ಮನಸ್ಸಿನ ತುಮುಲದಿಂದ ಭೂತ ಚೇಷ್ಟೆಯನ್ನು ಮಾಡುತ್ತಿದ್ದಳು. ಇದಾಗಿ ಕೆಲ ಸಮಯದ ಬಳಿಕ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಜತ್ತ ಪೂಜಾರಿಯವರು ಭೇಟಿಯಾಗಿದ್ದರು. ಭೂತದ ತೊಂದರೆ ನಿಂತಿದೆ ಎಂದರು. ಹಾಗಿದ್ದರೂ ನಾವು ಹೋದ ಬಳಿಕ ಮನೆಯಲ್ಲಿ ಹೋಮ ಮಾಡಿಸಿದ್ದರಂತೆ!

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News