ಮಾಯವಾದ ಎರಡು ಹೊಟೇಲ್‌ಗಳು
ಅಂದು ಮಾಡರ್ನ್ ಹಿಂದೂ ಹೊಟೇಲ್‌ಗೆ ಬರುವುದೆಂದರೆ ನಮ್ಮದೇ ಇನ್ನೊಂದು ಮನೆಗೆ ಬಂದಂತೆ. ಅದು ನಮ್ಮದೇ ಮನೆಯ ವಿಸ್ತರಣೆಯಾಗಿತ್ತೆಂದರೆ ಅತಿಶಯೋಕ್ತಿಯಾಗಲಾರದು. ಅಲ್ಲಿ ಮಾಲಕರಿಂದ ಹಿಡಿದು ನೌಕರವರ್ಗದವರು ನಮಗೆ ತೋರುತ್ತಿದ್ದ ಪ್ರೀತಿವಿಶ್ವಾಸಗಳು, ಭಯರಹಿತ ವಾತಾವರಣ ಅಂತಹದಾಗಿತ್ತು.
ಹೊಟೇಲ್‌ಗಳು ಮಾಯವಾಗುವುದೆಂದರೇನು? ಯಾವುದಾದರೂ ಹೊಟೇಲ್ ನಷ್ಟ ಅನುಭವಿಸಿ ಅಥವಾಇನ್ನಿತರ ಕಾರಣಗಳಿಂದ ಮುಚ್ಚಿ ಹೋದರೆ ಅವು ಹೋಯಿತೆಂದೇ ಲೆಕ್ಕ. ವಸ್ತುಸ್ಥಿತಿ ಹೀಗಿರುವಾಗ ನಾನು ಹೇಳುವ ಹೊಟೇಲ್ ಮಾಯವಾಗುವು ದೆಂದರೆ ನಮ್ಮ ಒಂದು ಪರಂಪರೆ, ಜೀವಂತ ಸಂಸ್ಕೃತಿ ಮಾಯವಾದಂತೆ. ಇದನ್ನು ವಿಶದಗೊಳಿಸಬೇಕಾದರೆ ನನ್ನ ಚಿಕ್ಕಂದಿನಿಂದ 60-70ರ ದಶಕ ಗಳವರೆಗೆ, ತಮ್ಮದೇ ಮನೆಯಂತೆ ಅಲ್ಲಿಗೆ ಬರುತ್ತಿದ್ದ ಗ್ರಾಹಕರು ಭಾವಿ ಸುತ್ತಿದ್ದ ಎರಡು ಹೊಟೇಲ್‌ಗಳ ಬಗ್ಗೆ ಹೇಳಲು ಸಂತೋಷ, ವಿಷಾದಗಳು ನನ್ನಲ್ಲಿ ತುಂಬಿಕೊಂಡಿವೆ.
ಬೆಂಗಳೂರಿನ ಹೃದಯ ಭಾಗವಾದ ಸಿಟಿಯ ಆನಂದರಾವ್ ಸರ್ಕಲ್ ನಲ್ಲಿ ದಿ.ಶ್ರೀ ಅಪ್ಪಣ್ಣನವರಿಂದ ನಡೆಸಲ್ಪಡುತ್ತಿದ್ದ ಮಾಡರ್ನ್ ಹಿಂದೂ ಹೊಟೇಲ್ ಸಿಟಿ ರೈಲ್ಪೆ ಸ್ಟೇಷನ್, ಗಾಂಧಿನಗರ, ಮೆಜೆಸ್ಟಿಕ್ಕಿನ ಚಿತ್ರಮಂದಿರ ಗಳು, ಮಹಾರಾಣಿ ಕಾಲೇಜು, ಜೈಲು! ರೇಸ್‌ಕೋರ್ಸ್! ಅನೇಕ ಆಫೀಸು ಗಳು ಎಲ್ಲಕ್ಕೂ ಅತ್ಯಂತ ಸಮೀಪದಲ್ಲಿದ್ದು ಹೊರಗಿನಿಂದ ಬರುವವರು ಉಳಿಯಲು ಆಯಕಟ್ಟಿನ ಜಾಗದಲ್ಲಿತ್ತು ಈ ಹೊಟೇಲ್. ನಮ್ಮೂರಿಂದ ರೈಲಿನಲ್ಲಿ ಬೆಂಗಳೂರಿಗೆ ನನ್ನ ತಂದೆ ತಾಯಿಯರೊಡನೆ ಬಂದು, ಸ್ಟೇಷನ್ ನಿಂದ ಒಂದು ಜಟಕಾ ಹತ್ತಿ ಮಾಡರ್ನ್ ಹಿಂದೂ ಹೊಟೇಲ್‌ಗೆ ದಾಖಲಾಗಿ ಬಿಟ್ಟರೆ ಸಾಕು. ನಮ್ಮ ಬಗೆ ಬಗೆಯ ಆಸೆ ಆಮಿಷಗಳಿಗೆ ದಾರಿ ಕಂಡು ಕೊಳ್ಳುತ್ತಿದ್ದೆವು. ಅಂದು ಮಾಡರ್ನ್ ಹಿಂದೂ ಹೊಟೇಲ್‌ಗೆ ಬರುವುದೆಂದರೆ ನಮ್ಮದೇ ಇನ್ನೊಂದು ಮನೆಗೆ ಬಂದಂತೆ. ಅದು ನಮ್ಮದೇ ಮನೆಯ ವಿಸ್ತರಣೆಯಾ ಗಿತ್ತೆಂದರೆ ಅತಿಶಯೋಕ್ತಿಯಾಗಲಾರದು. ಅಲ್ಲಿ ಮಾಲಕರಿಂದ ಹಿಡಿದು ನೌಕರವರ್ಗದವರು ನಮಗೆ ತೋರುತ್ತಿದ್ದ ಪ್ರೀತಿವಿಶ್ವಾಸಗಳು, ಭಯರಹಿತ ವಾತಾವರಣ ಅಂತಹದಾಗಿತ್ತು.
ವಿಶಾಲವಾದ ಕಾಂಪೌಂಡ್‌ನ ಮಧ್ಯೆ ಇದ್ದ ದೊಡ್ಡ ಕಟ್ಟಡವೇ ಮಾಡರ್ನ್‌ಹಿಂದೂ ಹೊಟೇಲ್. ಹೊಟೇಲ್‌ನ ಮುಂಭಾಗದಲ್ಲಿ ಅಂದಿನ ಕಾಲಮಾನ ಕ್ಕೆ ತಕ್ಕಂತೆ ವಿನ್ಯಾಸಗೊಳಿಸಿದ್ದ ಹೂವಿನ ತೋಟ. ಸುತ್ತಲೂ ಸಂಪಿಗೆ, ನೇರಳೆ, ಬುಡದಿಂದಲೇ ಕವಲೊಡೆದಿದ್ದ ಮಾವಿನ ಮರಗಳು ಹೊಟೇಲ್‌ನ ಮುಂಭಾ ಗದ ಪ್ರವೇಶದ್ವಾರದಲ್ಲಿದ್ದ ದೊಡ್ಡ ರೂಮ್‌ಗಳಿಗೆ ಮಾತ್ರ ಸೋಫಾಸೆಟ್ ಇತ್ಯಾದಿ. ಅಲ್ಲಿಂದ ಮುಂದಕ್ಕೆ ಹೋಗಿ ಒಳಕ್ಕೆ ಕಾಲಿಟ್ಟರೆ ವಿಶಾಲವಾದ ಲೌಂಜ್. ಅಲ್ಲಿ ಹೊಟೇಲ್‌ಗೆ ಖಾಯಂ ಆಗಿ ಬರುವವರು ಕುಳಿತು ಹರಟೆ ಹೊಡೆಯಲು ಬೆತ್ತದ ಕುರ್ಚಿಗಳು ಮತ್ತು ಬಗೆಬಗೆಯ ಬಣ್ಣಬಣ್ಣದ ಚನ್ನಪಟ್ಟಣದ ಕಲಾಕೃತಿಗಳು, ಸೋಪುಗಳಿಂದ ಕೂಡಿದ ಆಕರ್ಷಕ ಶೋಕೇಸ್‌ಗಳು ಲೌಂಜ್‌ನ ಒಂದು ಕಡೆ ಕಾಫಿ ತಯಾರಿಸಲು ಮೀಸಲಾದ ಜಾಗದಲ್ಲಿ ಫಿಲ್ಟರ್ ಕಾಫಿ ತಯಾರಿಕೆಯ ಎಕ್ಸ್‌ಪರ್ಟ್ ರಾಮುಡು ಮತ್ತು ಸೂರಿ. ಮತ್ತೊಂದು ಭಾಗದಲ್ಲಿ ಆಫೀಸ್ ಕೌಂಟರ್, ಕಬ್ಬಿಣದ ಪೆಟ್ಟಿಗೆ ಮೇಲೆ ವಿರಾಜಮಾನನಾಗಿರುವ ಗಣಪತಿ, ಕೌಂಟರ್ ಹಿಂದೆ ಒಂದು ರೂಮು. ಈ ಕೊಠಡಿ ಪ್ರತೀವರ್ಷ ಬರುತ್ತಿದ್ದ ಒಬ್ಬ ವಿಶಿಷ್ಟ ವ್ಯಕ್ತಿಗೆ ಮೀಸಲು. ಈ ವ್ಯಕ್ತಿ ಬಗ್ಗೆ ಮುಂದೆ ಬರಲಿದೆ. ಈ ಕೊಠಡಿಯ ಎದುರಿಗೆ ವಿಶಾಲವಾದ ಮಹಡಿಗೆ ಮೆಟ್ಟಿಲುಗಳ ದಾರಿ. ಮಹಡಿಯಲ್ಲಿ ಅಟಾಚ್ ಬಾತ್ ರೂಮಿ ಲ್ಲದ ಸಿಂಗಲ್ ರೂಮ್‌ಗಳು. ಇಲ್ಲಿ ಉಳಿಯುವವರಿಗೆ ಕಾಮನ್ ಟಾಯ್ಲೆಟ್ ಮತ್ತು ಸ್ನಾನದ ಮನೆಗಳು. ಇದೇ ರೀತಿ ಲೌಂಜ್‌ನಿಂದ ಮುಂದಕ್ಕಿದ್ದ ಡೈನಿಂಗ್ ಹಾಲ್ ಸುತ್ತಲೂ ಬಾತ್‌ರೂಮ್‌ಗಳಿದ್ದ ನಾಲ್ಕು ರೂಮುಗಳು. ಅಲ್ಲಿಂದ ಮುಂದೆ ಅಡುಗೆಯವರ ಸಾಮ್ರಾಜ್ಯ ಪುನಃ ಮತ್ತೊಂದು ಸ್ನಾನದ ಮನೆಗಳು, ಟಾಯ್ಲೆಟ್‌ಗಳ ಸಾಲು. ಬಿಸಿನೀರು ಕಾಯಿಸುವ ಒಲೆಗಳು ಇತ್ಯಾದಿ ಇಷ್ಟಲ್ಲದೆ ಹೊರಗಡೆ ಕಾಂಪೌಂಡ್‌ನಲ್ಲಿ ಮೂರು ಕಾಟೇಜುಗಳು!
ಬೆಂಗಳೂರಿನ ಸಿಟಿ ಮಧ್ಯೆ ವಿಶಾಲವಾದ ಈ ಹೊಟೇಲ್‌ಗೆ ಪ್ಲಾನ್ ಹಾಕಿದವರು ಸರ್.ಎಂ.ವಿಶ್ವೇಶ್ವರಯ್ಯನವರು. ಇದನ್ನು ನಡೆಸುತ್ತಿದ್ದವರು ಶ್ರೀ ಅಪ್ಪಣ್ಣನವರು ಮತ್ತು ಮಕ್ಕಳು 1958ರಲ್ಲಿ ಮಾಡರ್ನ್ ಹೊಟೇಲ್ ಡೈಮಂಡ್ ಜ್ಯೂಬಿಲಿ ಆಚರಿಸಿಕೊಂಡ ಸಂದರ್ಭದಲ್ಲಿ ಅಪ್ಪಣ್ಣನವರಿಗೆ ಹತ್ತಿರದವರಾಗಿದ್ದ ಪ್ರಸಿದ್ಧ ಬರಹಗಾರರಾಗಿದ್ದ ಡಿ.ವಿ.ಜಿ. ಮತ್ತು ಸರ್.ಎಂ.ವಿಶ್ವೇಶ್ವಯ್ಯನವರು ಉಪಸ್ಥಿತರಿದ್ದರು.
ಈ ಹೊಟೇಲ್ ಅನ್ನು ನೆನೆದಾಗ ನನ್ನ ಜ್ಞಾಪಕ ಚಿತ್ರಶಾಲೆಯಿಂದ ಮೂಡಿ ಬರುವ ಅಂದು ಅಲ್ಲಿದ್ದವರೆಲ್ಲಾ ಜೀವಂತರಾಗುತ್ತಾರೆ. ನನ್ನ ಮನಸ್ಸು ಆರ್ದ್ರವಾಗುತ್ತದೆ. ಮಾಡರ್ನ್ ಹೊಟೇಲ್‌ಗೆ ಸಾಮಾನ್ಯವಾಗಿ ಖಾಯಂ ಗಿರಾಕಿಗಳೇ ಬರುತ್ತಿದ್ದವರು. ಇಲ್ಲಿ ಅನೇಕ ಪ್ರತಿಷ್ಠಿತರನ್ನು ಕಾಣುವ ಸದಾವಕಾಶ ನನ್ನದಾಯಿತು. ಅಲ್ಲಿಗೆ ಬರುತ್ತಿದ್ದ ಕಲಾವಿದರು. ದಿಗ್ದರ್ಶಕರು ಶ್ರೀಮಂತರುಗಳಲ್ಲದೆ ನಿತ್ಯ ಬಂದು ಹೋಗುವ ಸಾಮಾನ್ಯ ಜನರು ಜ್ಯೋತಿಷಿಗಳು, ಗಂಧದಕಡ್ಡಿ ಮಾರುವವರೂ ಇದ್ದರು. ಮುಂಭಾಗದ ಲೌಂಜ್‌ನಲ್ಲಿ ಅಂದಿನ ಪ್ರತಿಷ್ಠಿತ ಜನ ಸೇರಿ ಕುಶಲ ಸಂಭಾಷಣೆ ವಿನಿಮಯಮಾಡಿಕೊಳ್ಳುತ್ತಿದ್ದರು. ಅದು ಊಟ ಮಾಡಿ, ದುಡ್ಡು ಕೊಟ್ಟು ಹೋಗುವ ಮಾಮೂಲಿ ವಸತಿಗೃಹವಾಗಿರಲಿಲ್ಲ, ಕರ್ನಾಟಕದ ವಿವಿಧ ಭಾಗಗಳ ಸದ್ಗಹಸ್ಥರು, ಗಣ್ಯರಿಗೆ ಬೆಂಗಳೂರಿನಲ್ಲಿ ಒಂದು ಆತ್ಮೀಯವಾದ ತಂಗು ದಾಣವಾಗಿತ್ತು. ಅಲ್ಲಿ ನನ್ನ ಬಾಲ್ಯದಿಂದ ನೋಡಿದ ಅನೇಕ ಗಣ್ಯರು ನೆನಪಿ ನಾಳದಿಂದ ಮೂಡಿ ಬರುತ್ತಿದ್ದಾರೆ. ಇಲ್ಲಿ ಪಿಟೀಲು ಚೌಡಯ್ಯನವರು, ಕರ್ನಾಟಕದ ಹೆಸರಾಂತ ಚಲನಚಿತ್ರ ದಿಗ್ದರ್ಶಕರಾಗಿದ್ದ ಎಚ್.ಎಲ್.ಎಲ್.ಸಿಂಹ, ಬಿ.ಆರ್.ಪಂತುಲು, ಚಿಕ್ಕಮಗಳೂರು, ಶಿವಮೊಗ್ಗದ ಅನೇಕ ಗಣ್ಯವ್ಯಕ್ತಿಗಳನ್ನು ಅನೇಕ ಬಾರಿ ಈ ಹೊಟೇಲ್‌ನಲ್ಲಿ ನೋಡಿದ್ದಿದೆ. ಪ್ರಜಾವಾಣಿ ಪತ್ರಿಕೆಯ ಪಾಲುದಾರರಲ್ಲಿ ಒಬ್ಬರಾಗಿದ್ದ ಹಿಂದೂಪುರದ ಬುಡಾನ್‌ಸಾಬ್‌ರವರ ಫ್ಯಾಮಿಲಿ ಬಂದರೆ ಅವರಿಗೆ ಎರಡು ಕಾಟೇಜುಗಳು ಬೇಕಾಗುತ್ತಿದ್ದವು! ಹೀಗೊಮ್ಮೆ ನಮ್ಮ ತಂದೆಯವರು ಮತ್ತು ನಾನು ಸಂಜೆ ಹೊರಗೆ ಹೋಗಿದ್ದವರು ಹೊಟೇಲ್‌ಗೆ ಮರಳಿ ಬಂದಾಗ ಲೌಂಜಿನಲ್ಲಿ ತಂದೆಯವರಿಗಿಂತ ಹಿರಿಯರಾದ ಒಬ್ಬ ವ್ಯಕ್ತಿ ಆಗ ತಾನೆ ಚಾಲ್ತಿಗೆ ಬಂದಿದ್ದ ಪಾಕೆಟ್ ರೇಡಿಯೊ ಅಥವಾ ಟ್ರಾನ್ಸಿಸ್ಟರ್ ಹಿಡಿದು ಕುಳಿತಿದ್ದರು.
ಲೌಂಜನ್ನು ದಾಟಿದ ಮೇಲೆ ತಂದೆಯವರು ಮೆಲ್ಲಗೆ ‘‘ಅಲ್ಲಿ ನೋಡು, ಅವರೇ ಪಿಟೀಲು ಚೌಡಯ್ಯನವರು. ಅವರನ್ನ ಮಾತನಾಡಿಸಿ ಬರುತ್ತೇನೆ, ನೀನು ರೂಮಿನಲ್ಲಿರು’’ ಎಂದು ಚೌಡಯ್ಯನವರಲ್ಲಿಗೆ ಹೋದರು. ಚೌಡಯ್ಯನವರ ಗುರುಗಳಾದ ಬಿಡಾರಂ ಕೃಷ್ಣಪ್ಪನವರು ನಮ್ಮ ತಂದೆ ಮತ್ತು ತಾತನವರಿಗೆ ಸ್ನೇಹಿತರೂ ಮತ್ತು ಗುರುಗಳಾಗಿದ್ದವರು. ಇಂಥ ಗುರುಗಳ ಅಪ್ರತಿಮ ಶಿಷ್ಯ ಚೌಡಯ್ಯನವರು ಅರಸೀಕೆರೆಯ ಗಣೇಶ ಉತ್ಸವದ ಕಚೇರಿಗೆ ಬಂದಾಗ, ಕಚೇರಿಗೆ ಮೊದಲು ನಮ್ಮ ತಾತನವರ ಪ್ರೋತ್ಸಾಹವನ್ನು ನೆನಸಿ ಕಚೇರಿ ಪ್ರಾರಂಭಿಸುತ್ತಿದ್ದರು! ಇಂತಹ ಉದಾತ್ತ ವ್ಯಕ್ತಿ ಪುಟ್ಟ ಹುಡುಗನಂತೆ ಟ್ರಾನ್ಸಿಸ್ಟರ್‌ನಲ್ಲಿ ತಮ್ಮ ಸಂಗೀತವನ್ನು ತಾವೇ ಕೇಳುತ್ತಿದ್ದುದನ್ನು ನೋಡುವ ಅಪೂರ್ವ ಅವಕಾಶ ನನ್ನದಾಗಿತ್ತು. ಇನ್ನು ಬಿ.ಆರ್.ಪಂತಲು ಅವರು ನಮ್ಮ ಹೊಟೇಲ್‌ಗೆ ಬಂದರೆ ನಮ್ಮ ಕಾರು ಅವರ ಓಡಾಟಕ್ಕೇ ಮೀಸಲಾಗುತ್ತಿತ್ತು. ನಾನು ಇಲ್ಲಿ ಕಂಡ ಮತ್ತು ನನ್ನನ್ನು ಪ್ರಭಾವಿಸಿದ ಒಬ್ಬ ಮಹಿಳೆ ಶ್ರೀಮತಿ ಬಿ.ಎಲ್,ಸುಬ್ಬಮ್ಮನವರು. ಚಿಕ್ಕಮಗಳೂರಿನ ಶ್ರೀಮತಿ ಸುಬ್ಬಮ್ಮನ ವರು ಆಗ ಶಾಸಕರಾಗಿದ್ದರು. ಸಾಧಾರಣ ಉಡುಗೆ ತೊಡುಗೆಯ ಇವರಿಗೂ ನಮ್ಮ ಹೊಟೇಲ್ಲೇ ಬೆಂಗಳೂರಿನಲ್ಲಿ ತಂಗುದಾಣ. ನನ್ನನ್ನು ಕಂಡಾಗ ‘‘ಏನೇಹೇಗೆ ಓದುತ್ತಿದ್ದೀಯಾ?’’ ಎಂದು ವಿಚಾರಿಸುತ್ತಿದ್ದರು. ಎಷ್ಟೋ ವೇಳೆ ಸಿಂಗಲ್ ರೂಮಿನಲ್ಲೇ ಉಳಿದುಕೊಂಡು,
ಯಾವ ಪೋಸ್ ಕೊಡದೆ ಕಾಮನ್ ಟಾಯ್ಲೆಟ್, ಸ್ನಾನದ ಮನೆ ಉಪಯೋಗಿಸುತ್ತಿದ್ದರು. ಅಂದಿನ ಮತ್ತು ಇಂದಿನ ರಾಜಕಾರಣಿಗಳ ನಡವಳಿಕೆಯಲ್ಲಿ ಎಂತಹ ಕಂದಕ! ಕುದುರೆ ರೇಸಿಗೂ ನಮ್ಮ ಈ ಮಾಡರ್ನ್ ಹೊಟೇಲ್‌ಗೂ ಒಂದು ನಂಟು ಇತ್ತು. ಹೊಟೇಲ್ ರೇಸ್‌ಕೋರ್ಸ್‌ಗೆ ಅತ್ಯಂತ ಸಮೀಪದ ಲ್ಲಿದ್ದು ದರಿಂದ ರೇಸಿಗೆ ಸಂಬಂಧಪಟ್ಟ ಎಷ್ಟೋ ಜನ ಇಲ್ಲಿ ಉಳಿಯು ತ್ತಿದ್ದರು. ರೇಸ್ ಸೀಸನ್‌ನಲ್ಲಿ ರೇಸ್‌ಕುದುರೆಗಳನ್ನು ಓಡಿಸುತ್ತಿದ್ದ ಕಾಡೆ ಮತ್ತು ಜಗದೀಶ್ ಎಂಬ ಜಾಕಿಗಳ ವಾಸ ಮೇಲ್ಮಹಡಿಯ ಸಿಂಗಲ್ ರೂಮ್‌ಗಳಲ್ಲಿ! ಬೆಳಗ್ಗೆ ರೇಸ್‌ಕೋರ್ಸ್‌ಗೆ ಹೋಗಿ ಕುದುರೆ ಓಡಿಸುವ ಪ್ರಾಕ್ಟೀಸ್ ಮಾಡಿ, ಕೈಯಲ್ಲೊಂದು ಚಾಟಿ ಹಿಡಿದು ಟಕಟಕನೆ ಸ್ಟೈಲಾಗಿ ಬರುತ್ತಿದ್ದ ಈ ಜಾಕಿಗಳನ್ನು ನೋಡುವುದೇ ನನ್ನ ಎಳೆಯ ಕಂಗಳಿಗೆ ಒಂದು ಬೆರಗು! ಆಗಿನ ದಿನಗಳಲ್ಲಿ ಜೂನ್.ಜುಲೈ ತಿಂಗಳುಗಳ ಶನಿವಾರ, ರವಿವಾರ ರೇಸ್ ನಡೆಯುತ್ತಿತ್ತು. ಆ ಸಂದರ್ಭ ದಲ್ಲಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಒಂದು ಜಾಹೀರಾತು- ಹ್ಯಾಟ್ ಧರಿಸಿ, ಬೈನಾಕುಲರ್ ಮೂಲಕ ನೋಡುತ್ತಿರುವ ವ್ಯಕ್ತಿಯ ಚಿತ್ರ ಈತ "WONDER MAN OF THE TURF'' ಅಂತೆ. ಯಾವಕುದುರೆ ಗೆಲ್ಲುವುದೆಂದು ಟಿಪ್ಸ್ ಕೊಡುವನಂತೆ. ಮಧ್ಯ ವಯಸ್ಸು ದಾಟಿದ ‘ಹಾಜಿ’ ಎಂಬ ಈ ವ್ಯಕ್ತಿ ರೇಸ್ ಸಮಯದಲ್ಲಿ ಮುಂಬೈ ಯಿಂದ ಬಂದು ಆಫೀಸ್ ಕೌಂಟರ್ ಪಕ್ಕದ ಕೋಣೆಯಲ್ಲಿ ಪ್ರತಿಷ್ಠಾಪಿ ತನಾಗಿರುತ್ತಿದ್ದ. ಬೇಕಾದವರು ಕುದುರೆಗಳ ಗೆಲುವಿನ ಬಗ್ಗೆ ಆತನಿಂದ ಟಿಪ್ಸ್ ಪಡೆಯಬಹುದಿತ್ತು. ಬೆಳಿಗ್ಗೆ ಹಾಜಿ ಸಹ ಕುದುರೆಗಳ ತಾಲೀಮು ನೋಡಲು ಹೋಗುತ್ತಿದ್ದರು. ನನ್ನ ತಂದೆಯವರು ಆಗೀಗ ಆತನನ್ನು ಭೇಟಿ ಮಾಡುತ್ತಿದ್ದರು. ಸಹೃದಯಿ ಹಾಜಿಯೊಡನೆ ನಮ್ಮ ಮಾತುಕತೆಯೂ ನಡೆಯುತ್ತಿತ್ತು. ಒಮ್ಮಿಮ್ಮೆ ದುಡ್ಡಿಗೆ ತಾಪತ್ರ ಯವಾದಾಗ 20 ರೂ. TMO ಮಾಡಿ, save me from this calamity ಎಂದು ನಮ್ಮೂರಿಗೆ ಈ ಹಾಜಿಯಿಂದ S.O.S
ಬರುತ್ತಿತ್ತು. ತಂದೆಯವರು ಕಾಗದ ಓದಿ ಗೊಣಗಿಕೊಂಡು ಅತ್ತ ಹಾಕುತ್ತಿದ್ದರು. ಆದರೆ ಹಣ ಕಳುಹಿಸುತ್ತಿದ್ದರು!
ಇನ್ನು ಹೊಟೇಲ್ ಮಾಲಕರು ಬಡ ವಿದ್ಯಾರ್ಥಿಗಳಿಗೆ ನಿತ್ಯ ಊಟ ಹಾಕುತ್ತಿದ್ದ ದಾಸೋಹಿ. ಇಲ್ಲಿ ನಾನು ಕಂಡ ಮಾಧವನ್, ಕೇಶವನ್, ಚಂದ್ರಶೇಖರ್, ಅಕ್ರೂರ ಮುಂತಾದ ಮಾಣಿಗಳು ಅತ್ಯಂತ ಸಹೃದಯಿಗಳು. ನನ್ನ ತಾಯಿಯನ್ನು ತಮ್ಮ ತಾಯಿಯಂ ತೆಯೇ ಭಾವಿಸಿದ್ದವರು. ಹೊಟೇಲ್‌ನಲ್ಲಿ ಅಡುಗೆ ಮಾಡುತ್ತಿದ್ದವರು ಬ್ರಾಹ್ಮಣರು, ಬಡಿಸುತ್ತಿದ್ದವರು ಕೇರಳಿಗರು. ಈ ಕೇರಳದ ಮಾಣಿ ಗಳು ಮಧ್ಯಾಹ್ನದ ಅಲ್ಪ ಬಿಡುವಿನಲ್ಲಿ ಡೈನಿಂಗ್ ಹಾಲ್‌ನ ಗೋಡೆಗೆ ಒರಗಿ ನೆಲದ ಮೇಲೆ ಕುಳಿತು ಮಲಯಾಳಂ ಪತ್ರಿಕೆಗಳನ್ನು ಓದು ತ್ತಿದ್ದರು. ಇದಲ್ಲವೇ ಭಾಷಾಪ್ರೇಮ? ಹಾಟ್‌ವಾಟರ್, ಕೋಲ್ಡ್ ವಾಟರ್ ನಳ್ಳಿಗಳಿವೆಯೆಂದೇ ತಿಳಿಯದ ಆ ಕಾಲದಲ್ಲಿ ಪ್ರತೀ ರೂಮಿಗೆ ಬಿಸಿನೀರು ಸರಬರಾಜು ಮಾಡುತ್ತಿದ್ದವರು ವೆಂಕ್ಟ ಮತ್ತು ತಿಮ್ಮ. ಇವರಲ್ಲಿ ದಢೂತಿ ತಿಮ್ಮನಿಗೆ ಮಾತಿನಲ್ಲಿ ಏನೊ ಒಂದು ಗತ್ತು! ಮಾತೆತ್ತಿದ್ದರೆ ‘ಇಂಡಿಯನ್ ಬಗರ್’! ಎನ್ನುತ್ತಿದ್ದ ಕಾರನ್ನು ‘ಎಡಕ್ಕೆ ಅಥವಾ ಬಲಕ್ಕೆ ಮುರ್ಕಳಿ’ ಎನ್ನುತ್ತಿದ್ದ ವೆಂಕ್ಟ, ಡೈನಿಂಗ್ ಹಾಲ್ ಮೂಲೆಯಲ್ಲಿ ಸಂಧ್ಯಾವಂದನೆ ಮಾಡಿಕೊಳ್ಳುತ್ತಿದ್ದ ಬ್ರಾಹ್ಮಣ ಗಿರಾಕಿ, ಹಣೆಗೆ ಕುಂಕುಮ ಇಟ್ಟುಕೊ ಎಂದು ಅವರೇ ನನ್ನ ಹಣೆಗೆ ಕುಂಕುಮ ಹಚ್ಚಿಬಿಡುತ್ತಿದ್ದ ಬೇಗೂರ್‌ರವರು, ನಾವು ಬೆಂಗಳೂರಿಗೆ ಬಂದಾಗ ಹಾಜರಾಗಿ ಬಿಡುತ್ತಿದ್ದ ತಂದೆಯವರಿಗೆ ತುಂಬಾ ಆಪ್ತರಾಗಿದ್ದ ಶೇಷಾದ್ರಿ, ರಝಾಕ್ ಸಾಬ್,ನಂಜಪ್ಪನವರು! ರಝಾಕ್ ಮತ್ತು ನಂಜಪ್ಪನವರು ಏಕೈಕ ಫಿಲ್ಮ್ ಬಾಕ್ಸ್‌ಗಳ ಮಾಲಕರು ! ಶೇಷಾದ್ರಿಯವರು ಗಾಂಧಿನಗರದ ಪುಟ್ಟ ರೂಮಿನ ‘ಗ್ರೇಟ್ ಇಂಡಿಯಾ ಫಿಲಂಸ್’ನ ಮಾಲಕನ ಬಗ್ಗೆ, ಮೂವಿಲ್ಯಾಂಡ್ ಥಿಯೇಟರ್ ಏಕೆ ಮುಚ್ಚಿದೆ? ಎಂದು ಫಿಲ್ಮ್‌ವರ್ಲ್ಡ್‌ನ ಕನಸಿನಕಟ್ಟೆ ಗಾಂಧಿನಗರದ ಪ್ರತೀ ಕಟ್ಟಡದ ಇತ್ಯೋಪರಿಯನ್ನು ವಿವರವಾಗಿ ಹೇಳುತ್ತಿದ್ದರು. ಹೀಗೆ ಬರು ವವರು, ಇರುವವರು ಎಲ್ಲಾ ಸೇರಿ ಮಾಡರ್ನ್ ಹೊಟೇಲ್ ಒಂದು ಬೃಹತ್ ಸಂಸಾರವಾಗಿತ್ತು.
ಅದು ವಿವಿಧ ಜನಗಳು ಬರುವ ತಾಣವಾಗಿದ್ದರೂ, ಮಾಲಕರ ನೇತೃತ್ವದಲ್ಲಿ ಗಣೇಶನ ಹಬ್ಬದಲ್ಲಿ ಲೌಂಜಿನಲ್ಲಿ ಗಣಪತಿ ಪ್ರತಿಷ್ಠಾಪಿತನಾಗುತ್ತಿದ್ದ. ಸಂಗೀತ ಕಛೇರಿಗಳೂ ನಡೆಯುತ್ತಿದ್ದವು. ನಾವೇನು ಕಮ್ಮಿ ಎಂಬಂತೆ ಹೊಟೇಲ್ ಕೆಲಸಗಾರರು ಚಂದಾ ಎತ್ತಿ, ರಾಮ ನವಮಿಯಲ್ಲಿ ಹೊಟೇಲ್ ಕಾಂಪೌಂಡ್ ಅಂಚಿನಲ್ಲಿ ದೊಡ್ಡ ಹಂಡೆಗಳಲ್ಲಿ ಪಾನಕ, ನೀರು ಮಜ್ಜಿಗೆ ಇಟ್ಟುಕೊಂಡು ದಾರಿ ಹೋಕರಿಗೆ ಕೊಡುತ್ತಿದ್ದರು.
ಮೇಲೆ ಹೇಳಿದ ಎಲ್ಲ ವೈಭವಗಳು ಕ್ರಮೇಣ ಕ್ಷೀಣಿಸುತ್ತ ಬರುತ್ತ 70ರ ದಶಕದವರೆಗೆ ಸಾಗಿ ಕಡೆಗೊಂದು ದಿನ ಹೊಟೇಲ್ ಇದ್ದ ಜಾಗ ಬೇರೆಯವರದಾದ್ದರಿಂದ ಬಿಟ್ಟುಕೊಡಬೇಕಾಯಿತು. ಮೂರು ಗಂಟೆಗಳು ಕಳೆದ ನಂತರ ಚಿತ್ರ ಮುಗಿದು, ಚಿತ್ರದ ನಟನಟಿಯರು, ಪ್ರೇಕ್ಷಕರೂ ಖಾಲಿಯಾಗುವಂತೆ ಒಂದು ಸಂಸ್ಕೃತಿ, ಕಾಲಘಟ್ಟದ ಪ್ರತೀಕ ವಾಗಿದ್ದ ಮಾಡರ್ನ್ ಹಿಂದೂ ಹೊಟೇಲ್ ಕಣ್ಮರೆಯಾಯಿತು.
* * * * *
ನಮ್ಮ ಮಗ ಒಂದು ದಿನ “An iconic building comes down owing to litigation'' ಎಂಬ ಪತ್ರಿಕಾ ವಾರ್ತೆಯನ್ನು ತೋರಿಸಿ ‘ಇದಕ್ಕೆ ಪ್ರತಿಕ್ರಿಯಿಸುತ್ತೀಯಾ ಅಮ್ಮಾ?’ ಎಂದು ಕೇಳಿದ. ಅದು ನಾನು ನನ್ನ ತಂದೆ ತಾಯಿಯರೊಡನೆ ಮತ್ತು ಇತ್ತೀಚಿನ ವರ್ಷಗಳಲ್ಲಿ ನನ್ನ ಸಂಸಾರದೊಡನೆ ಸಂದರ್ಶಿಸುತ್ತಿದ್ದ ಚೆನ್ನೈನ ದಾಸಪ್ರಕಾಶ್ ಹೊಟೇಲ್ ಬಗ್ಗೆಯೇ ಆಗಿತ್ತು.
ಮೈಸೂರು, ಊಟಿ, ಚೆನ್ನೈಗಳಲ್ಲಿ ಒಬ್ಬ ಕನ್ನಡಿಗನ ಶ್ರಮ, ಧೈರ್ಯ, ಸಾಧನೆಗಳ ಪ್ರತೀಕವಾದ ದಾಸಪ್ರಕಾಶ್ ಹೊಟೇಲ್ ಸರಣಿ ನೆನಪಿಗೆ ಬಂದವು. ಇವುಗಳಲ್ಲಿ ಚೆನ್ನೈನ ದಾಸಪ್ರಕಾಶ್ ಮುಚ್ಚಿ ಹೋಗಿದ್ದು ಅಲ್ಲಿನ ಆಟೊ ಚಾಲಕರಿಗೂ ಸಹ ವಿಷಾದಕರ ಸಂಗತಿಯಾಗಿತ್ತು. ಅದೃಷ್ಟ ವಶಾತ್ ಮೈಸೂರು, ಊಟಿಗಳ ಈ ಗುಂಪಿನ ಹೊಟೇಲ್‌ಗಳು ಇನ್ನೂಇವೆ. ಚಿನ್ನೈನ ಸೆಂಟ್ರಲ್ ರೈಲ್ಪೆಸ್ಟೇಷನ್‌ಗೆ ಅತ್ಯಂತ ಸಮೀಪದಲ್ಲಿದ್ದ ದಾಸಪ್ರಕಾಶ್ ಹೊಟೇಲ್ ಇದ್ದ ಜಾಗಕ್ಕೆ ದಾಸ್‌ಪ್ರಕಾಶ್ ಸ್ಟಾಪ್ ಎಂದೇ ಹೆಸರಿತ್ತು. ಸಿಟಿ ಬಸ್ಸುಗಳು ಅಲ್ಲಿ ನಿಲ್ಲುತ್ತಿದ್ದವು. ಮೇಲೆ ಹೇಳಿದ ಮೂರು ದಾಸಪ್ರಕಾಶ್ ಹೊಟೇಲ್‌ಗಳನ್ನು ಕಟ್ಟಿಬೆಳೆಸಿದ್ದು ಸೀತಾರಾಮರಾವ್ ಎಂಬ ಕನ್ನಡಿಗರು. ಇವರು ರೇಸ್ ಕುದುರೆಗಳ ಮಾಲಕರೂ ಆಗಿದ್ದರು. ಊಹಿಸಲಸಾಧ್ಯವಾದ ವಿಶಾಲ ವಾದ ಜಾಗದಲ್ಲಿ, ಭವ್ಯವಾದ ನಾಲ್ಕು ಕಟ್ಟಡಗಳು. ಇವುಗಳ ಮಧ್ಯೆ ಹೊಟೇಲ್‌ಗೆ ಬರುವ ಮಕ್ಕಳಿಗೆ ಆಟವಾಡಲು ಜಾರುಗುಪ್ಪೆ, ಉಯ್ಯೆಲೆ, ಸುತ್ತಲೂ ಹೂವಿನ ಗಿಡಗಳು ಇನ್ನೊಂದು ಕಟ್ಟಡದಲ್ಲಿ ಡೈನಿಂಗ್ ಹಾಲ್‌ಗೆ ಹೋಗುವ ದಾರಿಯಲ್ಲಿ ಒಂದು ಪುಟ್ಟ ದೇವರ ಮನೆ. ಇಷ್ಟವಿದ್ದರೂ ಒಳಗೆ ಹೋಗಿ ಕುಂಕುಮ ಹಚ್ಚಿಕೊಂಡು ಬರಬ ಹುದಿತ್ತು. ಇನ್ನು ಅಲ್ಲಿನ ಊಟ, ತಿಂಡಿಗಳ ರುಚಿ ಅತ್ಯುತ್ತಮ. ಒಮ್ಮೆ ಮದರಾಸಿನ ದಾಸಪ್ರಕಾಶದಲ್ಲಿ ಆ ರಾತ್ರಿ ಮೂನ್‌ಲೈಟ್ ಡಿನ್ನರ್ ಇದೆ. ಆಸಕ್ತರು ಭಾಗವಹಿಸಬಹುದು. ತಲಾ ಇಂತಿಷ್ಟು ಶುಲ್ಕ ಎಂದು ಬೋರ್ಡ್‌ನಲ್ಲಿ ಬರೆದು ಇಟ್ಟಿದ್ದರು. ಕುತೂಹಲದಿಂದ ತಂದೆಯವರು ನಮ್ಮಿಬ್ಬರಿಗೂ ಜಾಗ ಕಾಯ್ದಿರಿಸಿದ್ದರು.ಸಂಜೆ 7:30ಕ್ಕೆ ಎಲ್ಲರೂ ಹೊಟೇಲ್ ಟೆರೇಸ್ ಮೇಲೆ ಸೇರಿದೆವು. ನಮ್ಮಿಬ್ಬರಿಗೂ ಕಾಯ್ದಿರಿಸಿದ ಟೇಬಲ್‌ನಲ್ಲಿ ನಾವು ಕುಳಿತೆವು. ಹೀಗೆ ಬೇಕಾದಷ್ಟು ಅತಿಥಿಗಳು ಸೇರಿದರು. ಮುಂದೆ ಯಾವುದೋ ಭಾಷಣಕ್ಕೆ ಸಜ್ಜಾದಂತೆ ಒಂದು ಉದ್ದನೆಯ ಟೇಬಲ್, ಕುರ್ಚಿಗಳಲ್ಲಿ ಮಾಲಕರಾದ ಸೀತಾರಾಮರಾವ್‌ರವರು, ಅಂದಿನ ಮುಖ್ಯ ಅತಿಥಿಯಾಗಿ ಅಮೆರಿಕನ್ ಕಾನ್ಸುಲೇಟಿನ ಒಬ್ಬ ವರಿಷ್ಠರು, ಇನ್ನು ಕೆಲವು ಗಣ್ಯರು ಕುಳಿತಿದ್ದರು. ಗಣ್ಯರ ಚಿಕ್ಕ ಚೊಕ್ಕ ಭಾಷಣಗಳಾದ ಮೇಲೆ ಡಿನ್ನರ್ ಪ್ರಾರಂಭವಾಯ್ತು. ಮೊದಲು ಟೊಮೆಟೊ ಸೂಪ್, ಆನಂತರ ವೆಜಿಟಬಲ್ ಕಟ್ಲೆಟ್ ಹೀಗೆ ಒಂದಾದ ಮೇಲೊಂದು ಉಣಿಸುಗಳು ಬಂದು ಕೊನೆಗೆ ಮೊಸರನ್ನ, ಐಸ್‌ಕ್ರೀಮ್ ಮತ್ತು ಫ್ರೂಟ್ ಸಲಾಡ್. ಎಲ್ಲವೂ ಸಸ್ಯಾಹಾರ! ಬಡಿಸಿದ್ದು ಇಂಗ್ಲಿಷ್ ಶೈಲಿ! ಇದೆಲ್ಲಕ್ಕೂ ಮಕುಟಪ್ರಾಯವಾಗಿ ಹೊಟೇಲ್‌ನಲ್ಲೇ ಇದ್ದ ಒಂದು ಚಿಕ್ಕ ಥಿಯೇಟರ್‌ನಲ್ಲಿ ‘ಟನೆಲ್ ಆಫ್ ಲವ್’ ಎಂಬ ಸಿನೆಮಾ ವೀಕ್ಷಣೆ! ಎಲ್ಲಾ ಮುಗಿಸಿ ರೂಮಿಗೆ ಬಂದು ನಿದ್ದೆಗೆ ಜಾರಿದೆವು.
ಕಾಲದ ಉರುಳಿನಲ್ಲಿ ಈಜಿಪ್ಟ್, ಇಂಕಾ, ಹರಪ್ಪ್ಪ, ಗ್ರೀಕ್ ಮುಂತಾದ ನಾಗರಿಕತೆಗಳು ಅಳಿಸಿಹೋದವು. ಅತ್ಪಲ್ಪ ಅವಧಿಯ ಈ ಕಟ್ಟಡಗಳ ನೆನಪು ಕಾಲದ ಹೊಟ್ಟೆಯಲ್ಲಿ ಜೀರ್ಣವಾಗಿ ಹೋಗಿದ್ದರಲ್ಲಿ ಆಶ್ಚರ್ಯವೇನು?