ಲೈಂಗಿಕ ಶಿಕ್ಷಣ

Update: 2017-11-25 18:04 GMT

ಭಾಗ 2

ಲೈಂಗಿಕ ವಿಜ್ಞಾನಕ್ಕೂ ಮತ್ತು ರತಿ ವಿಜ್ಞಾನಕ್ಕೂ ವ್ಯತ್ಯಾಸ ತಿಳಿಯದೇ ಇರುವ ಭಾರತದಂತಹ ದೇಶಗಳಲ್ಲಿ ಲೈಂಗಿಕ ಶಿಕ್ಷಣ ಕೊಡುವುದಕ್ಕೆ ಹಿಂಜರಿಯುತ್ತಾರೆ, ಅದಕ್ಕೆ ಹಲವಾರು ಕಾರಣಗಳು. ಶೀಲ ಅಶ್ಲೀಲದ ಕಲ್ಪನೆ, ಶೀಲದ ರಕ್ಷಣೆಯ ಪರಿಕಲ್ಪನೆ, ಅಸಹಜ ವಯಸ್ಸಿನಲ್ಲಿ ಸಂಭೋಗ ಮತ್ತು ಗರ್ಭ ಧರಿಸುವ ಭಯ, ಗರ್ಭಪಾತ, ಮುಕ್ತ ಕಾಮುಕತೆ, ಕುಲ ಗೌರವ, ಧಾರ್ಮಿಕತೆ ಮತ್ತು ಸಂಸ್ಕೃತಿ ಇತ್ಯಾದಿ. ಆದರೆ ನಿಜ ಹೇಳಬೇಕೆಂದರೆ ಲೈಂಗಿಕ ಶಿಕ್ಷಣ ಕೊಡದಿದ್ದರೆ ಈ ಎಲ್ಲಾ ವಿಷಯಗಳಲ್ಲಿ ಎಡವಟ್ಟುಗಳಾಗುವುದು. ಅದೇ ಸಮಾಜಕ್ಕೆ ಗೊತ್ತಾಗುತ್ತಿಲ್ಲ.

ಲೈಂಗಿಕ ಶಿಕ್ಷಣ ಏಕೆ ಮತ್ತು ಹೇಗೆ?

ಸರಿಯಾದ ಲೈಂಗಿಕ ಶಿಕ್ಷಣವು ಮಕ್ಕಳಲ್ಲಿ ವ್ಯಕ್ತಿಗತವಾದ ವೌಲ್ಯಗಳನ್ನು ರೂಪಿಸುವುದಲ್ಲದೇ, ಎಂಥದ್ದೋ ವಿಚಿತ್ರ ಭಾವ, ರಹಸ್ಯ ಕಾಪಾಡುವಂತಹ ಮನಸ್ಥಿತಿ ಮತ್ತುಕೆಟ್ಟ ಕುತೂಹಲವನ್ನು ಮಕ್ಕಳಲ್ಲಿ ಬೆಳೆಯುವುದಿಲ್ಲ. ಇದನ್ನು ನಾವು ಚೆನ್ನಾಗಿ ನೆನಪಿನಲ್ಲಿಡಬೇಕು. ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ನೀಡುವಂತಹ ಮನೆಯ ಹಿರಿಯರಾಗಲಿ, ಪೋಷಕರಾಗಲಿ, ಶಿಕ್ಷಕರಾಗಲಿ ಅಥವಾ ಸಮಾಲೋಚಕರಾಗಲಿ ಈ ಸೂಕ್ಷ್ಮವಾದಂತಹ ವಿಷಯವನ್ನು ಮಕ್ಕಳ ಅರಿವಿಗೆ ಒದಗಿಸುವಾಗ ಬಹಳ ಎಚ್ಚರಿಕೆಯಿಂದ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ತಪ್ಪು ವಿವರಣೆ ಅಥವಾ ಅಡ್ಡ ವಿಶ್ಲೇಷಣೆ ಲೈಂಗಿಕತೆಯ ಬಗ್ಗೆ ಮಕ್ಕಳ ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ.

ಸರಿಯಾದ ಲೈಂಗಿಕ ಶಿಕ್ಷಣವನ್ನು ಕೊಟ್ಟಿದ್ದೇ ಆದರೆ, ಮಕ್ಕಳಲ್ಲಿ ಮೊದಲು ತಾವು ಯಾರೆಂಬುದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಕಿಶೋರಾವಸ್ಥೆಯ ಮೊದಲ ಹಂತದ ಸ್ಥಿತಿಯಲ್ಲಿರುವ ಮಕ್ಕಳಿಗಂತೂ ತಮ್ಮಲ್ಲಿ ಉಂಟಾಗುವ ಕ್ಷಿಪ್ರ ಬದಲಾವಣೆ ಮತ್ತು ಬೆಳವಣಿಗೆಯ ಬಗ್ಗೆ ನಾಟಕೀಯ ಹಾಗೂ ತೀವ್ರ ಪತ್ತೇದಾರಿ ಮನಸ್ಥಿತಿಯ ಬದಲಾಗಿ ತಮ್ಮನ್ನೇ ಗಮನಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನು ಹೆಣ್ಣುಮಕ್ಕಳಂತೂ ಅವರ ಪುಷ್ಪವತಿಯರಾಗುವ ಸಮಯದಲ್ಲಿ ಉಂಟಾಗುವ ತೊಳಲಾಟ ಅಥವಾ ಗಾಬರಿ ಇಲ್ಲವಾಗುತ್ತದೆ. ಅವರಿಗೆ ತಮ್ಮ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ. ತಾವು ಹಾದು ಹೋಗುವ ಬದಲಾವಣೆಯ ಘಟ್ಟಗಳಲ್ಲಿ ಮುಜುಗರ ಪಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.

ಅದೇ ರೀತಿ ಸರಿಯಾದ ಲೈಂಗಿಕ ಶಿಕ್ಷಣ ದೊರೆತ ಮಕ್ಕಳಿಗೆ ಯಾವುದು ಲೈಂಗಿಕತೆ ಮತ್ತು ಯಾವುದು ಲೈಂಗಿಕತೆ ಅಲ್ಲ ಎನ್ನುವ ಪ್ರಾಥಮಿಕ ತಿಳುವಳಿಕೆ ದೊರೆಯುತ್ತದೆ. ಲೈಂಗಿಕತೆ ಮತ್ತು ಕಾಮುಕತೆಗೆ ವ್ಯತ್ಯಾಸವನ್ನು ತಿಳಿಯುವ ಅಗತ್ಯ ಹದಿಹರೆಯದ ಮಕ್ಕಳಿಗೆ ತೀರಾ ಅಗತ್ಯ.

ಲೈಂಗಿಕತೆಯ ಬಗ್ಗೆ ತೀರಾ ರಹಸ್ಯಮಯವಾದ ಕುತೂಹಲವನ್ನು ಹೊಂದಿದ್ದೇ ಆದರೆ, ತಮ್ಮ ದೇಹದ ಮೇಲೆ ಆಗುವಂತಹ ಕಾಮುಕ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಮಕ್ಕಳು ಲೈಂಗಿಕತೆ ಮತ್ತು ಕಾಮುಕತೆಯ ಬಗ್ಗೆ ತಿಳುವಳಿಕೆಯನ್ನು ಹೊಂದದೇ ಹೋಗುತ್ತಾರೆ. ಆಗಲೇ ಅವರು ಈ ವಿಷಯದಲ್ಲಿ ಅನಾರೋಗ್ಯಕರ ಕುತೂಹಲವನ್ನು ಹೊಂದಿ ದಾರಿ ತಪ್ಪುವುದು. ದೇಹದಲ್ಲಿ ಹಾರ್ಮೋನುಗಳ ವ್ಯತ್ಯಾಸವಾಗುವಾಗ, ಆ ವ್ಯತ್ಯಾಸಗಳಿಗನುಗುಣವಾಗಿ ತಮ್ಮ ದೇಹವನ್ನು ಶೋಧಿಸತೊಡಗುವ ಮಕ್ಕಳು ತಮ್ಮ ಗ್ರಹಿಕೆಯನ್ನು ಹೊಂದುತ್ತಾರೆ. ಅದಕ್ಕೆ ಅವರ ಕೌಟುಂಬಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳು ಪೂರಕವಾಗಿರಬಹುದು ಅಥವಾ ಮಾರಕವಾಗಿರಬಹುದು. ಇದೇ ಸಮಯದಲ್ಲಿ ಅವರ ಕುಟುಂಬ, ಶಾಲೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಎಷ್ಟರಮಟ್ಟಿಗೆ ಲೈಂಗಿಕತೆಯ ವಿಷಯದಲ್ಲಿ ಆರೋಗ್ಯಪೂರ್ಣವಾಗಿರುವ ಮುಕ್ತಭಾವವನ್ನು ಹೊಂದಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಅದೇನಾದರೂ ಅಸ್ಪಷ್ಟವಾಗಿದ್ದರೆ, ಅಪರಾಧಭಾವವನ್ನು ಹೊಂದಿದ್ದರೆ, ಮುಕ್ತವಾದ ಸಂವಾದಕ್ಕೆ ಕಾರಣವಾಗದೇ ಇದ್ದರೆ, ಮಕ್ಕಳಿಗೆ ಲೈಂಗಿಕತೆಯ ಎಲ್ಲೆಗಳನ್ನು ಗುರುತಿಸಲು ಸಾಧ್ಯವಾಗದೇ ಹೋಗುವುದು. ಲೈಂಗಿಕತೆ ಮತ್ತು ಕಾಮುಕತೆ ಈ ಎರಡೂ ತಮ್ಮ ನಡುವಿನ ಗೆರೆಯನ್ನುಅಳಿಸಿಕೊಂಡುಬಿಡುವುವು.

ಲೈಂಗಿಕ ಶಿಕ್ಷಣದ ಬಹಳ ಪ್ರಧಾನವಾದ ಅಂಶವೆಂದರೆ ಸುರಕ್ಷತೆ. ಲೈಂಗಿಕತೆಯು ಕಾಮುಕತೆಯನ್ನು ಪ್ರೋತ್ಸಾಹಿಸದಂತಹ ರೀತಿಯಲ್ಲಿ ಮಾಹಿತಿಗಳನ್ನು ನೀಡುವಲ್ಲಿ ಸಶಕ್ತವಾಗಿರಬೇಕು. ಅದರಲ್ಲೂ ಹದಿಹರೆಯದ ಹುಡುಗರಿಗೆ. ಆಗ ಅವರು ಮುಂದೆ ತಾವು ಲೈಂಗಿಕ ಕ್ರಿಯೆಗೆ ತೊಡಗುವ ಹಂತಕ್ಕೆ ಅಥವಾ ಮಟ್ಟಕ್ಕೆ ಬಂದಾಗ ಅದನ್ನು ನಿರ್ವಹಿಸುವ ಬಗೆಯೂ ಕೂಡ ಆರೋಗ್ಯಕರವಾಗಿಯೇ ಇರುತ್ತದೆ.

ಈಗಿರುವ ಹದಿಹರೆಯದ ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ದೊರೆಯದೇ ಇರುವ ಕಾರಣದಿಂದ ಅವರು ಕಾಮುಕತೆಯ ದೃಷ್ಟಿಯಲ್ಲಿಯೇ ಲೈಂಗಿಕತೆಯನ್ನು ನೋಡುವ ಬಹಳ ಆತಂಕಕಾರಿ ಪರಿಸ್ಥಿತಿ ಇದೆ. ಲೈಂಗಿಕತೆಯ ಬಗ್ಗೆ ಸ್ಟಿರಿಯೋಟೈಪ್ ಅಥವಾ ಏಕರೂಪವಾದಂತಹ ರಹಸ್ಯವಾದಂತಹ ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳನ್ನು ನೋಡಿ ನೋಡಿ, ಮಕ್ಕಳು ತಮ್ಮ ಉದ್ವೇಗ, ಉನ್ಮತ್ತತೆ ಮತ್ತು ಭಾವುಕತೆಗೆ ತಕ್ಕಂತೆ ಗ್ರಹಿಸುತ್ತಾ ಕಾಮುಕತೆಯ ಕಳೆಯಲ್ಲಿ ಲೈಂಗಿಕತೆಯ ಬೆಳೆ ಸಫಲವಾಗುವುದಿಲ್ಲ. ಈ ಸ್ಟಿರಿಯೋ ಟೈಪ್ ಲೈಂಗಿಕ ಅಭಿವ್ಯಕ್ತಿಗಳನ್ನು ಅವರು ಸಿನೆಮಾ ಅಥವಾ ಅಂತ ರ್ಜಾಲಗಳಲ್ಲಿ ಚರ್ವಿತಾಚರ್ವಣವಾಗಿ ಒಂದೇ ಬಗೆಯಲ್ಲಿ ಗ್ರಹಿಸುತ್ತಿರು ತ್ತಾರೆ. ಅದರ ಫಲವೇ ಅನಪೇಕ್ಷಿತ ಮತ್ತು ಅನಿರೀಕ್ಷಿತ ಗರ್ಭಧಾರಣೆಗಳಾಗು ವುದು ಮತ್ತು ಜೀವನವನ್ನೂ ಕೂಡ ಅಪಾಯಕ್ಕೆ ಒಡ್ಡುವಂತಹುದ್ದೇ ಆಗಿರುತ್ತದೆ.

ನಿಜಕ್ಕೂ ಸರಿಯಾಗಿ ಕೊಡಲ್ಪಡುವ ಲೈಂಗಿಕ ಶಿಕ್ಷಣವು ಹದಿಹರೆಯದ ಮಕ್ಕಳ ಭವಿಷ್ಯವನ್ನು ಗೋಜಲು ಗೊಂದಲಗಳಿಲ್ಲದಿರಿಸುತ್ತದೆ. ತಮ್ಮ ದೇಹ ದಲ್ಲಿ ಆಗುವಂತಹ ಬದಲಾವಣೆಗಳನ್ನು ತಾವೇ ಗಮನಿಸಿಕೊಂಡು, ತಿಳಿದು ಕೊಳ್ಳಲು ಸಶಕ್ತರಾಗುತ್ತಾರೆ. ಅಷ್ಟಾದರೆ ಲೈಂಗಿಕ ಶಿಕ್ಷಣವು ಸಫಲವಾದಂತೆ.

ಈ ವಿಷಯವನ್ನು ಕಾರ್ಯಗತ ಮಾಡಲು ಪೋಷಕರದೇ ಮೊದಲ ಹೆಜ್ಜೆ. ಮುಕ್ತವಾದ ಸಂವಾದ ಮತ್ತು ಮಾತುಕತೆ ಮಕ್ಕಳೊಂದಿಗೆ ನಡೆಸದ ಪೋಷಕರು ತಮ್ಮ ಮಕ್ಕಳಿಗೆ ಕೊಡುವ ಮೊದಲ ಕೊಡುಗೆಯೇ ಲೈಂಗಿಕತೆ ಮತ್ತು ಕಾಮುಕತೆಯ ಬಗ್ಗೆ ಗೊಂದಲ. ಮಕ್ಕಳು ಕೇಳದಿದ್ದರೂ, ತಮ್ಮ ಸುತ್ತಮುತ್ತಲೂ ಕಾಮುಕತೆಯ ಮತ್ತು ಲೈಂಗಿಕತೆಯ ವಿಷಯಗಳನ್ನು ನೋಡುತ್ತಲೇ ಇರುತ್ತಾರೆ. ಅವರಿಗೆ ಅವೆರಡರ ನಡುವೆ ಸ್ಪಷ್ಟವಾಗಿ ಗೆರೆಯನ್ನು ಎಳೆಯಲು ಬಾರದಿದ್ದರೆ ಮುಂದಿ ನದೆಲ್ಲಾ ಪ್ರಮಾದವೇ. ಕಾಮುಕತೆಯನ್ನು ಲೈಂಗಿಕತೆ ಎಂದುಕೊಳ್ಳುತ್ತಾರೆ, ಲೈಂಗಿಕತೆಯನ್ನು ಕಾಮುಕತೆ ಎಂದುಕೊಳ್ಳುತ್ತಾರೆ.

ಲೈಂಗಿಕವಿಜ್ಞಾನ ವರ್ಸಸ್ ರತಿವಿಜ್ಞಾನ

ಈ ಲೇಖನದ ಉದ್ದೇಶವೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಡುವಾಗ ಲೈಂಗಿಕತೆ ಮತ್ತು ಕಾಮುಕತೆಯ ನಡುವಿನ ಗೆರೆಯನ್ನು ನಿಚ್ಚಳಗೊಳಿಸಿ ಕೊಳ್ಳುವುದು. ಈ ಕಾಲಘಟ್ಟದಲ್ಲಂತೂ ಇದರ ಸ್ಪಷ್ಟತೆ ಬಹಳ ಅಗತ್ಯವಿದೆ.ಭಾರತವೇ ಮೊದಲ್ಗೊಂಡಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವೆನ್ನುವುದು ಬರಿಯ ಕಾಗದದ ಮೇಲೆ ಮಾತ್ರವೇ ಅಚ್ಚೊತ್ತಿ ಕೊಂಡು ಕುಳಿತಿವೆ. ಅದರಲ್ಲೂ ಭಾರತದಲ್ಲಂತೂ ಬಹಳ ಹಿಂದಿನಿಂದಲೂ ಕಾಮುಕತೆ ಮತ್ತು ಲೈಂಗಿಕತೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟಗೊಳಿಸಿ ಕೊಂಡೇ ಇಲ್ಲ. ಭಾರತದ ಸಮೃದ್ಧ ಸಾಹಿತ್ಯಗಳು ಲೈಂಗಿಕ ಶಿಕ್ಷಣಕ್ಕಿಂತ ಕಾಮುಕತೆಯ ಬಗ್ಗೆಯೇ ಹೆಚ್ಚು ಒಲವನ್ನೂ ಮತ್ತು ವಿವರಣೆಯನ್ನೂ ಹೊಂದಿರುವುದು. ಇನ್ನು ಭಾರತದ ಹೆಮ್ಮೆ ಎಂಬಂತೆ ಬಿಂಬಿಸುವ ವಾತ್ಸಾಯನನ ಕಾಮಸೂತ್ರವೂ ಗಿರಿಕಿ ಹೊಡೆಯುವುದು ಕಾಮುಕತೆಯ ಸುತ್ತಲೂ ಹೊರತು ಅದರಲ್ಲಿ ಲೈಂಗಿಕ ಶಿಕ್ಷಣವನ್ನೇನೂ ನೀಡಿಲ್ಲ. ನಮ್ಮ ಭಾರತದ ಸನಾತನ ಕೃತಿಗಳಲ್ಲಿ ಮುಕ್ತವಾಗಿರುವುದು ಮುಕ್ತಕಾಮವೇ ಹೊರತು ಲೈಂಗಿಕ ಶಿಕ್ಷಣವಲ್ಲ. ಕಾಮದ ವಿಷಯವು ಲೈಂಗಿಕ ಶಿಕ್ಷಣದ ಒಂದು ಸಣ್ಣ ಭಾಗವಾಗಿರಬೇಕಾಗಿತ್ತು. ಆದರೆ ಕಾಮಸೂತ್ರ ಗಳಲ್ಲಿ ಇರುವಂತಹ ವಿಷಯಗಳು ಲೈಂಗಿಕ ಶಿಕ್ಷಣಕ್ಕೆ ಅತ್ಯಂತ ಕಡಿಮೆ ಮಹತ್ವಕೊಟ್ಟಿದ್ದು, ಅದರ ಬದಲು ಕಾಮ ಸುಖದ ಉದ್ದೀಪನದ ಬಗ್ಗೆ ಮತ್ತು ಕಾಮೋತ್ತೇಜನದ ಬಗ್ಗೆಯೇ ಅತ್ಯಂತ ಹೆಚ್ಚಿನ ಗಮನ ನೀಡಿರುವುದು. ಹಾಗಾಗಿಯೇ ನಿಜವಾದ ಮುಕ್ತ ಲೈಂಗಿಕ ಶಿಕ್ಷಣವು ಮುಕ್ತ ಕಾಮಾಭಿಲಾಷೆಯ ವಾತಾವರಣದಲ್ಲಿ ಮಸುಕಾಗಿಬಿಟ್ಟದ್ದು ಮಾತ್ರವಲ್ಲದೇ ಲೈಂಗಿಕತೆ ಮತ್ತು ಕಾಮುಕತೆಯ ಮಧ್ಯೆ ಇರುವ ಗೆರೆ ಅಳಿಸಿಹೋಗುವಂತಹ ದೊಡ್ಡ ಪ್ರಮಾದ ಉಂಟಾಗಿದ್ದು. ವಾತ್ಸಾಯನನ ಕಾಮಸೂತ್ರವು ನಿಜಕ್ಕೂ ಯಾವ ರೀತಿಯಲ್ಲಿಯೂ ಬೋಧನಾಪ್ರದವಾಗಿಲ್ಲ. ಮುಕ್ತ ಮನಸ್ಸುಗಳಿಗೆ ಅದನ್ನೂ ಸಮ್ಮತಿಸುವಷ್ಟು ಔದಾರ್ಯವಿದ್ದುದರಿಂದ ಅದನ್ನು ಉಲ್ಲೇಖಿಸುವಂತಾಯಿತೇ ಹೊರತು ಮನುಷ್ಯರ ಮನಸ್ಸುಗಳನ್ನು ಲೈಂಗಿಕತೆಯ ವಿಷಯದಲ್ಲಿ ಅರಿವನ್ನು ಉಂಟುಮಾಡುವಂತಹದ್ದೇನೂ ಕೊಡುಗೆಗಳನ್ನು ಕೊಡುವುದಿಲ್ಲ. ಇನ್ನು ದೇವಾಲಯಗಳ ಮೇಲಿರುವ ಲೈಂಗಿಕ ಶಿಲ್ಪಗಳೂ ಕೂಡ ತಿಳುವಳಿಕೆ ಕೊಡುವುದೇನಾಗಿಲ್ಲ. ಬದಲಾಗಿ ಮುಕ್ತ ಕಾಮುಕ ಪ್ರವೃತ್ತಿಗಳ ಅಭಿವ್ಯಕ್ತಿಯಷ್ಟೇ ಆಗಿವೆ. ಈಗ ನಾವು ತಿಳಿಯ ಬೇಕಾಗಿರುವುದು ನಾವು ಮಕ್ಕಳಿಗೆ ಕೊಡಬೇಕಾಗಿರುವುದು ಲೈಂಗಿಕ ಶಿಕ್ಷಣವೇ ಹೊರತು ಕಾಮುಕ ಪ್ರವೃತ್ತಿಗಳ ಬಗೆಗಿನ ಕುತೂಹಲವೇನಲ್ಲ. ಈ ಸ್ಪಷ್ಟತೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ಇರಬೇಕು. ಇನ್ನುಕಣ್ಣಿಗೆ ರಾಚುವ ಕಾಮುಕ ಪ್ರವೃತ್ತಿಗಳು ಲೈಂಗಿಕ ಶಿಕ್ಷಣದ ದಾರಿಯಲ್ಲಿ ಸುಳಿದಾಡುತ್ತಿರುವಾಗ ಅದರ ಬಗ್ಗೆ ಉದಾಸೀನ ತೋರುವಂತಹ ಉದಾಹರಣೆಗಳು ಮಕ್ಕಳಿಗೆ ಒಂದು ಉತ್ತಮ ಮಾದರಿಯಾಗುವುದು. ಕಾಮುಕತೆಯ ನಿದರ್ಶನಗಳು ಎದುರಾದಾಗ ಅದನ್ನು ಖಂಡಿಸಿದರೂ ಮಕ್ಕಳು ಆಕರ್ಷಿತರಾಗುತ್ತಾರೆ, ಒಪ್ಪಿದರೂ ಆಕರ್ಷಿತರಾಗುತ್ತಾರೆ. ಹಾಗಾಗಿ ಅದನ್ನು ಗಮನೀಯವಾಗಿ ದೃಷ್ಟಿಸುವಂತಹ ಕೆಲಸವನ್ನೇ ಮಾಡಲು ಹೋಗಬಾರದು.

ವಾತ್ಸಾಯನನ ರಚನೆ ಒಂದು ಶೃಂಗಾರ ಕೃತಿಗಳ ಸಾಲಿಗೆ ಸೇರುವಂತಹ ರಸಿಕೋನ್ಮತ್ತತೆಯ ಶಾಸ್ತ್ರವೇ ಹೊರತು ಹೆಮ್ಮೆಪಟ್ಟುಕೊಳ್ಳುವಂತಹ ಬೋಧನಾ ಕೃತಿಯಲ್ಲ. ಪ್ರಕೃತಿಯಲ್ಲಿ ಸಹಜವಾಗಿರುವಂತಹ ಮತ್ತು ಅವರವರ ಭಾವ ಮತ್ತು ದೇಹಗಳಿಗೆ ಅನುಗುಣವಾಗಿರುವಂತಹ ಮಿಥುನಗಳನ್ನು ಭಂಗಿಗಳಲ್ಲಿ ವಿವರಿಸುವಂತಹ ಅಗತ್ಯವೇನೂ ಇಲ್ಲ. ಅಲ್ಲದೇ ಕಾಮುಕಾಭಿಲಾಷೆಯು ಆಯಾ ವ್ಯಕ್ತಿಯ ರುಚಿ ಮತ್ತು ಅಭಿರುಚಿಗಳ ಮೇಲೆ ಅವಲಂಬಿತವಾಗಿರುತ್ತವೆ, ಅದನ್ನೇನೂ ಶಿಕ್ಷಣದಂತೆ ವಿವರಿಸುವ ಅಗತ್ಯವಿಲ್ಲ. ವಿವರಣೆ ಇರಬೇಕಾಗಿರುವುದು ಲೈಂಗಿಕ ವಿಜ್ಞಾನಕ್ಕೆ, ರತಿ ವಿಜ್ಞಾನಕ್ಕೆ ಅಲ್ಲ. ಲೈಂಗಿಕ ವಿಜ್ಞಾನವೆಂದೇ ಬಿಂಬಿಸುತ್ತಾ ರತಿ ವಿಜ್ಞಾನವನ್ನು ಬೋಧಿಸುವ ಬಗ್ಗೆ ಎಚ್ಚರಿಕೆ ಖಂಡಿತ ಇರಬೇಕು.

ಮಕ್ಕಳ ಲೈಂಗಿಕ ಶಿಕ್ಷಣದಲ್ಲಿ ಇರಬೇಕಾದ್ದು

ಲೈಂಗಿಕ ಶಿಕ್ಷಣ ಆರೋಗ್ಯ ಮತ್ತು ಜೀವಶಾಸ್ತ್ರದ ಒಂದು ಭಾಗವಾಗಿರಬೇಕೇ ಹೊರತು ಪ್ರತ್ಯೇಕವಾಗಿ ಅಲ್ಲ.

ಪ್ರಾರಂಭಿಕ ಅಂದರೆ ಪ್ರಾಥಮಿಕ ಶಿಕ್ಷಣವಾಗಿ ವಿಸರ್ಜನಾಂಗಗಳು, ಅವುಗಳ ಹೆಸರುಗಳು ಮತ್ತು ಅವುಗಳ ಕೆಲಸಗಳ ಬಗ್ಗೆ ಪರಿಚಯ. ನಂತರ ಅವುಗಳ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಿಂದ ತಿಳುವಳಿಕೆ. ನಂತರ ಕಿಶೋರಾವಸ್ಥೆಯಿಂದ ಪ್ರೌಢಾವಸ್ಥೆಗೆ ಹೋಗುವ ಮಕ್ಕಳಿಗೆ ಹಾರ್ಮೋನುಗಳ ಬದಲಾವಣೆ ಮತ್ತು ಹೆಣ್ಣು ಮಕ್ಕಳ ಋತುಚಕ್ರದ ಬಗ್ಗೆ ಅರಿವು. ಪ್ರೌಢಶಾಲೆಯ ಹಂತಕ್ಕೆ ಸಂತಾನೋತ್ಪತ್ತಿಯ ವೈಜ್ಞಾನಿಕ ವಿವರಣೆ. ಇವಿಷ್ಟೂ ಹಂತಹಂತವಾಗಿ ಶೈಕ್ಷಣಿಕವಾಗಿ ವಿಕಾಸ ಹೊಂದುತ್ತಾ ಬರಬೇಕು. ಅದರಲ್ಲೂ ಮಕ್ಕಳಲ್ಲಿ ತಮ್ಮನ್ನುತಾವು ರಕ್ಷಣೆ ಮಾಡಿಕೊಳ್ಳುವ ಕಲೆಯನ್ನು ಹೇಳಿಕೊಡುವ ಹಾಗೆ ಬೆಂಕಿಯಿಂದ, ನೀರಿನಿಂದ, ರಸ್ತೆಯ ನಿಯಮಗಳು, ಇತ್ಯಾದಿಗಳ ಸಾಲಿಗೆ ತಮ್ಮ ಮೇಲೆ ನಡೆಯಬಹುದಾದ ಲೈಂಗಿಕ ದೌರ್ಜನ್ಯವನ್ನು ಗುರುತಿಸುವಂತಹ, ಅದಕ್ಕೆ ಹೊಂಚು ಹಾಕುವಂಥವರನ್ನು ಗುರುತಿಸುವಂತಹ ಗುಡ್ ಟಚ್ ಮತ್ತು ಬ್ಯಾಡ್ ಟಚ್‌ಗಳ ಬಗ್ಗೆ ಅರಿವನ್ನು ಮೂಡಿಸಬೇಕು.

ಲೈಂಗಿಕ ವಿಜ್ಞಾನಕ್ಕೂ ಮತ್ತು ರತಿ ವಿಜ್ಞಾನಕ್ಕೂ ವ್ಯತ್ಯಾಸ ತಿಳಿಯದೇ ಇರುವಂತಹ ಭಾರತದಂತಹ ದೇಶಗಳಲ್ಲಿ ಲೈಂಗಿಕ ಶಿಕ್ಷಣ ಕೊಡುವುದಕ್ಕೆ ಹಿಂಜರಿಯುತ್ತಾರೆ, ಅದಕ್ಕೆ ಹಲವಾರು ಕಾರಣಗಳು. ಶೀಲ ಅಶ್ಲೀಲದ ಕಲ್ಪನೆ, ಶೀಲದ ರಕ್ಷಣೆಯ ಪರಿಕಲ್ಪನೆ, ಅಸಹಜ ವಯಸ್ಸಿನಲ್ಲಿ ಸಂಭೋಗ ಮತ್ತು ಗರ್ಭ ಧರಿಸುವ ಭಯ, ಗರ್ಭಪಾತ, ಮುಕ್ತ ಕಾಮುಕತೆ, ಕುಲ ಗೌರವ, ಧಾರ್ಮಿಕತೆ ಮತ್ತು ಸಂಸ್ಕೃತಿ ಇತ್ಯಾದಿ. ಆದರೆ ನಿಜ ಹೇಳಬೇ ಕೆಂದರೆ ಲೈಂಗಿಕ ಶಿಕ್ಷಣ ಕೊಡದಿದ್ದರೆ ಈ ಎಲ್ಲಾ ವಿಷಯಗಳಲ್ಲಿ ಎಡವಟ್ಟು ಗಳಾಗುವುದು. ಅದೇ ಸಮಾಜಕ್ಕೆ ಗೊತ್ತಾಗುತ್ತಿಲ್ಲ.

ಶಿಕ್ಷಿತ ಮತ್ತು ಅಶಿಕ್ಷಿತ ಮಕ್ಕಳು

ಲೈಂಗಿಕ ಶಿಕ್ಷಣ ಪಡೆದಿರುವಂತಹ ಹದಿಹರೆಯದವರಿಗಿಂತ ಅಶಿಕ್ಷಿತ ಮಕ್ಕಳು ಹೆಚ್ಚು ದಾರಿ ತಪ್ಪುತ್ತಾರೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

ಈ ವಿಷಯದಲ್ಲಿ ಪೋಷಕರು ಮೊದಲ ಹೆಜ್ಜೆ ತೆಗೆದುಕೊಳ್ಳಬೇಕೆಂಬು ದರಲ್ಲಿ ಸಂಶಯವೇ ಇಲ್ಲ. ಆದರೆ, ಶಾಲೆಗಳಲ್ಲಿ ಲೈಂಗಿಕ ವಿಷಯಗಳೂ ಸೇರಿದಂತೆ ಇತರ ಎಲ್ಲಾ ವರ್ತನೆಯ ಸಮಸ್ಯೆ, ಮಾನಸಿಕ ಸಮಸ್ಯೆ, ಭಾವನಾತ್ಮಕ ಸಂಘರ್ಷಗಳೆಲ್ಲದರ ಸಮಗ್ರ ಸಮಾಲೋಚನೆಯ ವ್ಯವಸ್ಥೆಯನ್ನು ಹೊಂದಿರಬೇಕು. ಮಾನಸಿಕ ಸಮಸ್ಯೆಗಳನ್ನೂ ಮತ್ತು ಲೈಂಗಿಕ ವಿಚಾರಗಳನ್ನೂ ಗುರಿ ಮಾಡಿಕೊಂಡು ಸಮಾಲೋಚನೆಗಳನ್ನು ನಡೆಸಬೇಕು. ಆಗ ಲೈಂಗಿಕ ದೌರ್ಜನ್ಯದ ಸುಳುಹುಗಳನ್ನು, ತನ್ನ ಲಿಂಗದ ಗುಣ ಲಕ್ಷಣ ಹಾಗೂ ಕಾರ್ಯಗಳನ್ನು, ಲಿಂಗಾಧಾರಿತವಾದ ಪಾತ್ರಗಳ ನಿರ್ವಹಣೆಯನ್ನು, ಕಾಮುಕತೆಗೂ ಮತ್ತು ಲೈಂಗಿಕತೆಗೂ ಇರುವ ವ್ಯತ್ಯಾಸ ಗಳನ್ನು ಅರಿಯಲು ಸಹಾಯವಾಗುತ್ತದೆ. ಕಾಮೋತ್ತೇಜಕ ಅಂತರ್ಜಾಲ ತಾಣಗಳ ಸೆಳವು ಅವರನ್ನು ಬಾಧಿಸುವುದಿಲ್ಲ. ಹಾಗೂ ಸಹವಾಸದಿಂದಲೋ,ಕುತೂಹಲದಿಂದಲೋ ಅವುಗಳನ್ನು ನೋಡುವಂತಾದರೂ ಅಂತಹ ತಾಣಗ ಳಲ್ಲಿರುವವರ ಅಸಹಜ ಮತ್ತು ಅನೈಸರ್ಗಿಕ ವರ್ತನೆಗಳನ್ನು ಗುರುತಿಸಿ ಅವುಗಳನ್ನು ನಿರ್ಲಕ್ಷಿಸುವಂತಹ ಅಥವಾ ನಿರಾಕರಿಸುವಂತಹ ಮನಸ್ಥಿತಿ ಯನ್ನು ಬೆಳೆಸಿಕೊಳ್ಳುತ್ತಾರೆ. ಇದು ಹದಿಹರೆಯದ ಮಕ್ಕಳೇ ತೆಗೆದುಕೊಳ್ಳುವ ನಿರ್ಧಾರವಾಗಬೇಕಾಗುತ್ತದೆ. ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತಹ ಲೈಂಗಿಕ ಶಿಕ್ಷಣದ ಪದ್ಧತಿಯನ್ನು ರೂಪಿಸಬೇಕಾಗುತ್ತದೆ.

ಮುಗ್ಧತೆಯ ನಟನೆಯ ಬಗ್ಗೆ ಎಚ್ಚರವಿರಲಿ

ಹದಿಹರೆಯದ ಮಕ್ಕಳು ತಮ್ಮ ಸುತ್ತಮುತ್ತಲೂ ಲೈಂಗಿಕತೆಯನ್ನು ಮತ್ತು ಕಾಮುಕತೆಯನ್ನೂ ಗುರುತಿಸುತ್ತಲೇ ಇರುತ್ತಾರೆ. ಅವರು ಏನನ್ನು ಗುರುತಿಸುತ್ತಾರೋ, ಏನನ್ನು ಗ್ರಹಿಸುತ್ತಾರೋ ಅದನ್ನು ಪೋಷಕರ ಬಳಿ ವ್ಯಕ್ತಪಡಿಸಲೇ ಬೇಕು. ಅದಕ್ಕೆ ಅವರಿಗೊಂದು ಸ್ಪಷ್ಟವಾಗಿ ಅಥವಾಸಂಪೂರ್ಣ ವಿವರಣಾತ್ಮಕವಾಗಿ ಅಲ್ಲದಿದ್ದರೂ ಕುತೂಹಲ ತಣಿಯು ವಂತಹ ಅಥವಾ ಅದರ ಬಗ್ಗೆ ತಾವೇ ಸಂಶೋಧನೆ ನಡೆಸಲು ಇನ್ನಾವುದೋ ದಾರಿ ಹುಡುಕುವಂತಹ ಅವಕಾಶವನ್ನು ಕೊಡಬಾರದು. ಮಕ್ಕಳು ತಮ್ಮ ಸುತ್ತಮುತ್ತ ತೃತೀಯ ಲಿಂಗಿಗಳನ್ನು ನೋಡುತ್ತಿರುತ್ತಾರೆ. ಸಲಿಂಗಕಾಮದ ಕುರುಹುಗಳನ್ನು ಕಾಣುತ್ತಿರುತ್ತಾರೆ. ಮಾಧ್ಯಮಗಳಲ್ಲಿ ಲೈಂಗಿಕ ಶೋಷಣೆ, ಲೈಂಗಿಕ ಹಗರಣ, ಅತ್ಯಾಚಾರಗಳ ವರದಿಗಳನ್ನು ಕಾಣುತ್ತಿರುತ್ತಾರೆ. ಅವರು ಅವುಗಳ ಬಗ್ಗೆ ಏನನ್ನೂ ಕೇಳಲೇ ಇಲ್ಲವೆಂದರೆ, ನೀವೂ ಏನನ್ನೂ ಹೇಳುವಂತಹ ಅವಕಾಶವನ್ನು ಪಡೆಯಲೇ ಇಲ್ಲವೆಂದರೆ ಅವರೇನೋ ಗ್ರಹಿಸಿದ್ದಾರೆಂದೇ ಅರ್ಥ. ಇನ್ನೂ ಮುಖ್ಯವಾಗಿ ನಾವು ಗಮನಿಸಬೇಕಾಗಿರುವುದೇನೆಂದರೆ ಈ ಬಗೆಯ ಯಾವುದೇ ವಿಷಯವನ್ನು ತಾವು ಅರಿಯದವರಂತೆ, ಗಮನಕ್ಕೆ ತಂದುಕೊಳ್ಳದವರಂತೆ ಮಕ್ಕಳು ನಟಿಸುತ್ತಿದ್ದಾರೆಂದರೆ, ಮುಗಿಯಿತು. ಅವರಿಗೆ ತಪ್ಪು ಶಿಕ್ಷಣ ದೊರಕಿದೆ ಎಂದೇ ಅರ್ಥ. ಯಾವುದೇ ವಿಷಯ ಮಕ್ಕಳ ಗಮನಕ್ಕೆ ಬಂದಿದೆ ಎಂದರೆ ಅವರು ಏನು ಗ್ರಹಿಸಿದ್ದಾರೆ ಎಂದು ನಾವು ತಿಳಿದುಕೊಳ್ಳಬೇಕು. ನಂತರ ಅವರಿಗೆ ಅದರ ಬಗ್ಗೆ ತಿಳುವಳಿಕೆ ನೀಡಬೇಕು. ಲೈಂಗಿಕ ಶಿಕ್ಷಣದ ಫಲವೇನು?

ಹುಡುಗ ಮತ್ತು ಹುಡುಗಿ; ಈ ಇಬ್ಬರಲ್ಲೂ ನಡೆಯುವಂತಹ ಜೈವಿಕ ಬದಲಾವಣೆಗಳ ಬಗ್ಗೆತಿಳಿಸುವಂತೆ, ತಮ್ಮದೇ ಬಗ್ಗೆ ಮಾಹಿತಿ ನೀಡುವುದನ್ನೂ ಕೂಡ ಪೋಷಕರು ಮತ್ತು ಶಿಕ್ಷಕರು ಕಲಿಸಬೇಕು.

ಈ ಕಂಪ್ಯೂಟರ್ ಯುಗದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಸಮರ್ಥವಾಗಿ ಪೋಷಕರು ಮತ್ತು ಶಿಕ್ಷಕರು ಸರಿಯಾಗಿ ಕೊಡುವುದರಲ್ಲಿ ವಿಫಲರಾದರೆ ಅವರ ಕುತೂಹಲವು ಲೈಂಗಿಕತೆಯಿಂದ ಕಾಮುಕತೆಗೆ ತಿರುಗಿಬಿಡುತ್ತದೆ ಎಂಬುದೇ ಮೊದಲನೇ ಭಯ ಮತ್ತು ಕಾಳಜಿ. ಸರಿಯಾದ ಲೈಂಗಿಕ ಶಿಕ್ಷಣದಿಂದಾಗಿ ಮಕ್ಕಳ ಮನಸ್ಸಿನಲ್ಲಿ ತಮ್ಮದೇ ಲಿಂಗಗಳ ಮತ್ತು ಅವುಗಳ ಔಚಿತ್ಯಗಳ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಮನುಷ್ಯರ ಮತ್ತು ಅವರ ಉಗಮ ಹಾಗೂ ವಿಕಾಸಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ. ಸಂತಾನೋತ್ಪತ್ತಿಯ ಹಕ್ಕು ಮತ್ತು ಅವನ್ನು ಯಾವ ಕಾಲದಲ್ಲಿ ಹಾಗೂ ಯಾವ ಹಂತದಲ್ಲಿ ತಮ್ಮದಾಗಿಸಿಕೊಳ್ಳಬೇಕೆಂಬ ಅರಿವು ಉಂಟಾಗುತ್ತದೆ. ತಮ್ಮ ಜೈವಿಕ ಮತ್ತು ಲೈಂಗಿಕದ ಅರಿವು ದಾರಿ ತಪ್ಪದಂತೆ ಜವಾಬ್ದಾರಿಯನ್ನುನೀಡುತ್ತದೆ. ಲೈಂಗಿಕ ರೋಗಗಳ ಬಗ್ಗೆ ನೀಡುವಂತಹ ಶಿಕ್ಷಣ ಅವರಿಗೆ ತಮ್ಮ ಕಲಿಕೆಯ ಅವಧಿಯಲ್ಲಿ ಮತ್ತು ಮುಂದೂ ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸುವುದರ ಬಗ್ಗೆ ದೃಷ್ಟಿಯನ್ನು ಹೊಂದುತ್ತಾರೆ.

ಲೈಂಗಿಕ ರೋಗಗಳ ಬಗ್ಗೆ ಅರಿವೂ ಮತ್ತು ಲೈಂಗಿಕ ಕ್ರಿಯೆಗಳ ಬಗ್ಗೆ ಇರು ವಂತಹ ಮಿಥ್ಯಾ ನಂಬಿಕೆಗಳನ್ನು ಒಡೆಯುವಂತಹ ತಿಳುವಳಿಕೆಗಳೆರಡೂ ಹದಿಹರೆಯದ ಮಕ್ಕಳು ಅಪರಾಧ ಮಾಡದಿರುವಂತೆಯೂ ಮತ್ತು ತಮ್ಮಲ್ಲಿ ಸಹಜವಾಗಿ ನಡೆಯುವ ಲೈಂಗಿಕತೆಯ ಪ್ರಭಾವಗಳಿಂದ ಅಪರಾಧ ಪ್ರಜ್ಞೆಯನ್ನು ಹೊಂದದೇ ಇರುವಂತೆಯೂ ನೋಡಿಕೊಳ್ಳುತ್ತದೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News