ಕಾಯ್ದೆ, ತಗಾದೆ ಮತ್ತು ರಮೇಶ್‌ಕುಮಾರ್

Update: 2017-11-25 18:37 GMT

‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ತಿದ್ದುಪಡಿ) ಮಸೂದೆ ಜಾರಿ ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯ. ಖಾಸಗಿ ಆಸ್ಪತ್ರೆಗಳಿಂದ ಜನಸಾಮಾನ್ಯರಿಗೆ ಆಗುತ್ತಿದ್ದ ಶೋಷಣೆ ಇನ್ನುಮುಂದೆ ಇರುವುದಿಲ್ಲ. ಜನರ ಹಿತಕ್ಕೆ ಧಕ್ಕೆಯಾಗದಂತೆ ಕಾಯ್ದೆ ಅನುಷ್ಠಾನಗೊಳ್ಳಲಿದೆ. ಇಷ್ಟು ವರ್ಷಗಳ ರಾಜಕೀಯ ಸೇವೆಯಲ್ಲಿ ಏನೂ ಮಾಡಲಾಗಲಿಲ್ಲ ಎಂಬ ಕೊರಗಿತ್ತು. ಇದೊಂದು ಸಾಕು, ನಾನು ನಾಳೆಯೇ ಸತ್ತರೂ ಚಿಂತೆ ಯಿಲ್ಲ’ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಹೇಳಿದ್ದಾರೆ.

ಹೀಗೆ ಹೇಳುವ ಮೂಲಕ, ಒಬ್ಬ ರಾಜಕಾರಣಿಗಿರಬೇಕಾದ ಬದ್ಧತೆ, ದಕ್ಷತೆ ಮತ್ತು ಇಚ್ಛಾಶಕ್ತಿಯನ್ನು ರಮೇಶ್‌ಕುಮಾರ್ ಪ್ರದರ್ಶಿ ಸಿದ್ದಾರೆ. ಹಾಗೆಯೇ ಮರೆತು ಮೆರೆಯುತ್ತಿರುವ ರಾಜ ಕಾರಣಿಗಳಿಗೆ ‘ಬದ್ಧತೆ’ಯ ಪಾಠ ಮಾಡಿದ್ದಾರೆ. ಜನಸಾಮಾನ್ಯರ ಪರವಾಗಿ ಅಧಿಕಾರಸ್ಥ ರಾಜಕಾರಣಿಗಳು ನಿಲ್ಲುತ್ತಾರೆ ಎನ್ನುವುದೇ ನಗೆಪಾ ಟಲಿಗೀಡಾಗುವ ಇಂದಿನ ಸಂದರ್ಭದಲ್ಲಿ, ರಮೇಶ್‌ಕುಮಾರ್ ಬಡವರ ಪರವಾಗಿ ನಿಂತು ರಾಜಕಾರಣಕ್ಕೆ, ರಾಜಕಾರಣಿಗಳಿಗೆ ಬೆಲೆ ಬರುವಂತೆ ನಡೆದುಕೊಂಡಿದ್ದಾರೆ.

ಹಾಗೆ ನೋಡಿದರೆ ರಮೇಶ್‌ಕುಮಾರ್ ಎಲ್ಲ ರಾಜಕಾರಣಿ ಗಳಂತಲ್ಲ. ಅವರು ಬೆಳೆದುಬಂದ ಹಾದಿಯನ್ನೊಮ್ಮೆ ಅವಲೋ ಕಿಸಿದರೆ ಅದು ಅರ್ಥವಾಗುತ್ತದೆ. ‘ಎಕ್ಸ್‌ಪೋ- 70’ ಎಂಬ ಅಧಿಕಾರಸ್ಥರ ವಿರುದ್ಧದ ಹೋರಾಟದಿಂದ ಹೊರ ಹೊಮ್ಮಿದ ರಮೇಶ್‌ಕುಮಾರ್, 1970ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗಲೇ ಬೆಂಗಳೂರು ಕಾರ್ಪೊ ರೇಷನ್ ಚುನಾವಣೆಗೆ ಅಭ್ಯರ್ಥಿಯಾದರು. ಜಾತಿಬಲವಿಲ್ಲ, ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲ, ಹಣ-ಅನುಭವವಂತೂ ಇಲ್ಲವೇ ಇಲ್ಲ. ಇಂತಹ ಹುಡುಗನನ್ನು ಚುನಾವಣಾ ಕಣಕ್ಕಿಳಿಸಿದ್ದವರು ದೇವರಾಜ ಅರಸು.

ಅರಸು ಅವರಿಂದ ರಾಜಕಾರಣದ ದೀಕ್ಷೆ ಪಡೆದ ರಮೇಶ್ ಕುಮಾರ್, ಅವರ ತತ್ವ ಸಿದ್ಧಾಂತಗಳನ್ನು ಅರಿತು ಅರಗಿಸಿ ಕೊಂಡವರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವುಗಳನ್ನು ಪಾಲಿಸಿಕೊಂಡು ಬಂದವರು. ರಾಜಕಾರಣದಲ್ಲಿ ಅಪರೂಪ ವೆನ್ನಿಸುವ ಖಚಿತ ಮಾತು, ದಿಟ್ಟ ನಿಲುವು, ದೂರದರ್ಶಿತ್ವವನ್ನು ಮೈಗೂಡಿಸಿಕೊಂಡವರು. ಆಳವಾದ ಅಧ್ಯಯನದಿಂದ ರಾಜನೀತಿ, ಸಮಾಜಶಾಸ್ತ್ರ, ಸಂವಿಧಾನವನ್ನಷ್ಟೇ ಅಲ್ಲ; ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಬಗ್ಗೆಯೂ ತರ್ಕಬದ್ಧವಾಗಿ ಮಾತನಾಡಬಲ್ಲ ಬುದ್ಧಿವಂತರು.

ಅಷ್ಟೇ ಸರಳವಾಗಿ ಕೋಲಾರದ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಲೇ ಜನಸಾಮಾನ್ಯರೊಡನೆ ಬೆರೆಯುವ ಸಜ್ಜನಿಕೆಯ ರಮೇಶ್‌ಕುಮಾರ್, 1978ರಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದು ಗೆದ್ದು ವಿಧಾನಸೌಧ ಪ್ರವೇಶಿಸಿದರು. ಗುಂಡೂರಾವ್ ಸಚಿವ ಸಂಪುಟದ ಸದಸ್ಯರಾದ ಮಾಣಿಕ್‌ರಾವ್ ಸಿಮೆಂಟ್ ಹಗರಣ ಮತ್ತು ಸಿ.ಎಂ.ಇಬ್ರಾಹೀಂ ಕೃಷ್ಣ ಮಿಲ್ ಹಗರಣಗಳನ್ನು ಬಯಲಿಗೆಳೆದು ನೇರ, ನಿಷ್ಠುರ ರಾಜಕಾರಣಿ ಎಂದು ಹೆಸರಾದರು.

ಅರಸು ನಿಧನಾನಂತರ ಜನತಾಪಕ್ಷ ಸೇರಿ, ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್. ಪಟೇಲ್‌ರಂತಹ ಹಿರಿಯ ನಾಯಕರ ಸಂಪರ್ಕಕ್ಕೆ ಬಂದರು. ಅವರ ರಾಜಕೀಯ ರೀತಿ-ನೀತಿಗಳನ್ನು ನೋಡುತ್ತಲೇ ಬೆಳೆದರು. 1983ರಿಂದ 2013ರವರೆಗೆ, ಗೆದ್ದು-ಸೋತು ರಾಜಕಾರಣದ ಏರಿಳಿತಗಳನ್ನು ಸಮನಾಗಿ ಸ್ವೀಕರಿಸಿ, ಸಮಚಿತ್ತದ ರಾಜಕಾರಣಿ ಎನಿಸಿಕೊಂಡರು. 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಯಾದಾಗ, 43ನೆ ವಯಸ್ಸಿನಲ್ಲಿಯೇ ಪ್ರತಿಷ್ಠಿತ ವಿಧಾನಸಭಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದರು. ಅರಸು ಅವರಿಂದ ಕಲಿತ ತತ್ವನಿಷ್ಠ ರಾಜಕಾರಣವನ್ನು ಪ್ರಯೋಗಕ್ಕಿಳಿಸಿ, ಸ್ಪೀಕರ್ ಸ್ಥಾನಕ್ಕೆ ಘನತೆ ಗೌರವವನ್ನು ತಂದರು. ಸದನವನ್ನು ಸರಿದೂಗಿಸಿಕೊಂಡು ಹೋದ ಹಿರಿಮೆಗೆ ಪಾತ್ರರಾಗಿ, ರಾಜಕೀಯ ಪಂಡಿತರಿಂದ ಪ್ರಶಂಸೆಗೊಳಗಾದರು.

ಇಂತಹ ರಮೇಶ್‌ಕುಮಾರ್ ದೇವೇಗೌಡರೊಂದಿಗೆ ಮುನಿಸಿಕೊಂಡು ಜನತಾ ಪಾಳೆಯ ತೊರೆದು, 2004ರಲ್ಲಿ ಕಾಂಗ್ರೆಸ್ ಸೇರಿ, ಗೆದ್ದು ಶಾಸಕರಾದರು. 2013ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಾಗ ಮಂತ್ರಿಯಾಗ ಬೇಕಾದವರ ಪಟ್ಟಿಯಲ್ಲಿ ಮೊದಲಿಗರಾಗಿದ್ದರು. ಆದರೆ ಬ್ರಾಹ್ಮಣರ ಕೋಟಾದಲ್ಲಿ ಮೂಲ ಕಾಂಗ್ರೆಸ್ಸಿಗ ದಿನೇಶ್ ಗುಂಡೂರಾವ್ ಮಂತ್ರಿಯಾಗುವ ಮೂಲಕ ಅವಕಾಶ ತಪ್ಪಿಸಿದ್ದರು. ರಮೇಶ್‌ಕುಮಾರ್ ಮಂತ್ರಿಯಾಗಲಿಲ್ಲವೆಂದು ಕೊರಗಲಿಲ್ಲ. ಹಾಗಂತ ಸರಕಾರದ ತಪ್ಪು ನಡೆಗಳ ಬಗ್ಗೆ ಮಾತನಾಡುವುದನ್ನೂ ನಿಲ್ಲಿಸಲಿಲ್ಲ. ‘ಮಂತ್ರಿ ಸ್ಥಾನ ಎನ್ನುವುದು ಒಂದು ಅವಕಾಶ. ಅದಾಗಿ ಬಂದರೆ ಬರಲಿ, ನಾನಾಗಿಯೇ ಹೋಗಿ ಕೇಳುವುದಿಲ್ಲ’ ಎಂದಿದ್ದರು. 2016ರಲ್ಲಿ ಆರೋಗ್ಯ ಸಚಿವರಾದಾಗ, ‘ಇಷ್ಟು ವರ್ಷಗಳ ರಾಜಕೀಯ ಸೇವೆಯಲ್ಲಿ ಏನೂ ಮಾಡಲಾಗಲಿಲ್ಲವೆಂಬ ಕೊರಗಿದೆ. ಈಗ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು, ಕೆಪಿಎಂಇ ಕಾಯ್ದೆಯನ್ನು ಜಾರಿಗೆ ತಂದೇ ತೀರುವೆ’ ಎಂದು ಆಪ್ತರೊಂದಿಗೆ ಹಂಚಿ ಕೊಂಡಿದ್ದರು. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಗೂ ಮುಂದಾದರು. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರಬಲ ಲಾಬಿಗೆ ಮಣಿಯದೆ, ವೈದ್ಯರ ಮುಷ್ಕರಕ್ಕೆ ಜಗ್ಗದೆ, ಕಾಯ್ದೆಯ ಅನುಷ್ಠಾನದಲ್ಲಿ ರಮೇಶ್‌ಕುಮಾರ್ ಬೆನ್ನಿಗೆ ನಿಂತರು.

ಅಂತೂ ಸಿದ್ದರಾಮಯ್ಯ ಮತ್ತು ರಮೇಶ್‌ಕುಮಾರ್ ಜೋಡಿ 70ರ ದಶಕದ ದೇವರಾಜ ಅರಸರ ಆ ದಿನಗಳನ್ನು ನೆನಪಿಗೆ ತರುತ್ತಿದೆ. ಅರಸು, ಬಡ ಗೇಣಿದಾರರ ಪರವಾದ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವಾಗ ಎದುರಾದ ಪ್ರಬಲ ಜಾತಿ ಜನಗಳ ವಿರೋಧವನ್ನು ಲೆಕ್ಕಿಸದೆ ರಾಜಕೀಯ ಬದ್ಧತೆ ಮೆರೆದರು. ಇದರಿಂದ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ವಲಯದಲ್ಲಾದ ಕ್ರಾಂತಿಯನ್ನು ಕಣ್ಣಾರೆ ಕಂಡವರು, ಇವತ್ತಿನ ಕೆಪಿಎಂಇ ಕಾಯ್ದೆಯಿಂದಾಗಬಹುದಾದ ಬದಲಾವಣೆಗಳನ್ನು ಅರಿತು ಬೆಂಬಲಿಸಬೇಕಾಗಿದೆ. ಇಂದು ಆರೋಗ್ಯ ಸೇವೆಗಳು ಹದ್ದು ಮೀರಿ ವ್ಯಾಪಾರೀಕರಣ ವಾಗಿ ವ್ಯಾಪಿಸಿಕೊಳ್ಳುತ್ತಿವೆೆ. ಇದನ್ನು ನಿಯಂತ್ರಿಸುವಲ್ಲಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸರಕಾರ ಇಟ್ಟ ಹೆಜ್ಜೆ ದಿಟ್ಟತನದಿಂದ ಕೂಡಿದೆ. ಸಾಮಾನ್ಯರ ದೃಷ್ಟಿಯಿಂದ ಸಮರ್ಥನೀಯವಾಗಿದೆ. ಖಾಸಗಿ ಆರೋಗ್ಯ ವಲಯದ ನಿಯಂತ್ರಣ ಸೂಕ್ತ ಮತ್ತು ಸಕಾಲಿಕವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಉತ್ತರದಾಯಿತ್ವವನ್ನು ಹೆಚ್ಚಿಸುವುದು ಕೆಪಿಎಂಇ ಕಾಯ್ದೆಯ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೆಪಿಎಂಇ ಕಾಯ್ದೆಯ ಸಮರ್ಥ ಅನುಷ್ಠಾನಕ್ಕಾಗಿ ಪ್ರಾಧಿಕಾರ ರಚನೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿ ಹಕ್ಕುಗಳ ಸಂರಕ್ಷಣೆ, ರೋಗಿ ದೂರುಗಳು ಮತ್ತು ಹಕ್ಕುಗಳ ಉಲ್ಲಂಘನೆಗೆ ಪ್ರತ್ಯೇಕ ನ್ಯಾಯಾಧಿಕರಣ, ಬೆಲೆ ನಿಯಂತ್ರಣ, ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಪಕವಾಗಿರುವ ಕಮಿಷನ್ ಹಾಗೂ ಟಾರ್ಗೆಟ್ ನಿಷೇಧ ಇವೆಲ್ಲವನ್ನು ಒಳಪಡಿಸಿರುವುದು ಮೆಚ್ಚತಕ್ಕ ಅಂಶವಾಗಿದೆ.

ಇಂತಹ ಜನಪರ ಕಾಯ್ದೆಯನ್ನು ಇವತ್ತಿನ ಸಂದರ್ಭದಲ್ಲಿ ಜಾರಿ ಮಾಡುವುದು ಸರಕಾರಕ್ಕೆ ಸವಾಲಿನ ಕೆಲಸವೇ ಸರಿ. ಏಕೆಂದರೆ, ರಾಜಕಾರಣವೆನ್ನುವುದು, ಸಾವಿಲ್ಲದ ಮನೆಯ ಸಾಸಿವೆ ಕಾಳಿನ ರೂಪಕದಂತೆ ನಮ್ಮ ಜನಜೀವನದೊಂದಿಗೆ ಬೆರೆತುಹೋಗಿದೆ. ಪ್ರತಿಯೊಂದು ಕ್ಷೇತ್ರವೂ ರಾಜಕೀಕರಣವಾಗಿದೆ. ಅದರಲ್ಲೂ ಭಾರೀ ವಹಿವಾಟಿರುವ, ದಿಢೀರ್ ದುಡ್ಡು ಮಾಡುವ ಕ್ಷೇತ್ರಗಳಾದ ಲಿಕ್ಕರ್, ಗಣಿ, ರಿಯಲ್ ಎಸ್ಟೇಟ್, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಂತೂ- ಹಾಲಿನಲ್ಲಿ ನೀರು ಬೆರೆತಂತೆ- ರಾಜಕಾರಣಿಗಳನ್ನು ಬಿಟ್ಟು ಮಾಡುವಂತೆಯೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಇಂದು ಗಣಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಕ್ಕಿಂತಲೂ ವೈದ್ಯಕೀಯ ಕ್ಷೇತ್ರ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ, ಭಾರೀ ಬೇಡಿಕೆ ಗಳಿಸುತ್ತಿರುವ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಈ ಕ್ಷೇತ್ರದ ಮೇಲೆ ಬಂಡವಾಳ ಹೂಡುವುದು ರಿಸ್ಕ್ ಇಲ್ಲದ, ಹೆಚ್ಚು ಗೌರವ ಮತ್ತು ಹಣ ತರುವ ವ್ಯವಹಾರದಂತೆ ಕಾಣತೊಡಗಿದೆ. ಅದಕ್ಕೆ ಪೂರಕವಾಗಿ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ಹಾಗಾಗಿ ಇವತ್ತು ಆರೋಗ್ಯಕ್ಕೆ ಒಳ್ಳೆಯ ಮಾರ್ಕೆಟ್ ಇದೆ. ಇದನ್ನು ಕಂಡುಕೊಂಡಿರುವ ಶ್ರೀಮಂತ ಉದ್ಯಮಿಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸುವಾಗ, ಸರಕಾರದ ಮಟ್ಟದಲ್ಲಿ ತಮ್ಮ ಕೆಲಸಗಳು ಸರಾಗವಾಗಿ ಆಗಲು ಅಧಿಕಾರಸ್ಥ ರಾಜಕಾರಣಿಗಳನ್ನು ಅವಲಂಬಿಸುತ್ತಾರೆ. ಕೆಲವು ರಾಜಕಾರಣಿಗಳು ನೇರವಾಗಿ ಭಾಗಿಯಾಗಿ ಕಾಲೇಜು ಮತ್ತು ಆಸ್ಪತ್ರೆಗಳ ಒಡೆತನವನ್ನು ಬಹಿರಂಗವಾಗಿಯೇ ಘೋಷಿಸಿಕೊಂಡಿದ್ದರೆ, ಇನ್ನು ಕೆಲವರು ಪಾಲುದಾರರಾಗಿದ್ದಾರೆ. ಹಲವರು ಪರೋಕ್ಷವಾಗಿ ಬೆಂಬಲಿಸಿ ಸಣ್ಣಪುಟ್ಟ ಲಾಭಕ್ಕಷ್ಟೇ ಸೀಮಿತವಾಗಿದ್ದಾರೆ.

ಈ ಕಾರಣದಿಂದಾಗಿಯೇ ಕಾಯ್ದೆ ತರಲು ಮುಂದಾದಾಗ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರಿಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಶಾಸಕರಿಂದಲೇ ಮೊದಲ ವಿರೋಧ ವ್ಯಕ್ತವಾಯಿತು. ವಿರೋಧ ಪಕ್ಷಗಳಂತೂ ಖಾಸಗಿ ವೈದ್ಯಕೀಯ ಸಂಸ್ಥೆಗಳೊಂದಿಗೆ ಶಾಮೀಲಾದವು. ಜೊತೆಗೆ ಜನಪರವಾಗಿರಬೇಕಿದ್ದ ಸುದ್ದಿ ಮಾಧ್ಯಮಗಳು ಕೂಡ ಸತ್ಯವನ್ನು ಮರೆಮಾಚಿ ಜನರನ್ನು ಗೊಂದಲಗೊಳಿಸಿದವು. ಆಗ ರಮೇಶ್‌ಕುಮಾರ್, ‘ಇದು ವೈದ್ಯರ ವಿರುದ್ಧದ ಕಾಯ್ದೆ ಅಲ್ಲ, ಖಾಸಗಿ ಆಸ್ಪತ್ರೆಗಳಲ್ಲಿನ ಅಕ್ರಮಗಳ ಬಗ್ಗೆ, ಮಾಧ್ಯಮಗಳು ತೋರಿಸದೆ ಜನರಿಗೆ ಮೋಸ ಮಾಡುತ್ತಿವೆ’ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು. ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಕೊಂಚ ನಿರಾಸಕ್ತಿ ತೋರಿದ್ದರು. ಆದರೆ ಬೆಳಗಾವಿಗೆ ಬಂದ ವೈದ್ಯರು, ಕಾಯ್ದೆಯ ವಿರುದ್ಧ ಧರಣಿಗೆ ಕೂತಾಗ, 50ಕ್ಕೂ ಹೆಚ್ಚು ಅಮಾಯಕರು ಸಾವಿಗೀ ಡಾದಾಗ ಸಿದ್ದರಾಮಯ್ಯನವರಿಗೆ ಖಾಸಗಿ ವೈದ್ಯ ಸಂಸ್ಥೆಗಳ ಪ್ರಭಾವ ಮತ್ತು ಲಾಬಿಯ ಅರಿವಾಯಿತು. ಅದಕ್ಕೆ ತಕ್ಕಂತೆ ರಮೇಶ್ ಕುಮಾರ್ ಈ ಕಾಯ್ದೆ ಆಗಲೇಬೇಕೆಂದು ಹಟಕ್ಕೆ ಬಿದ್ದರು. ಕೊನೆಗೆ ಎದುರಾದ ಅಡೆತಡೆಗಳನ್ನು ನಿವಾರಿಸಿಕೊಂಡು ವಿಧಾನ ಮಂಡಲದಲ್ಲಿ ಕೆಪಿಎಂಇ ತಿದ್ದುಪಡಿ ವಿಧೇಯಕ-2017 ರನ್ನು ಮಂಡನೆ ಮಾಡಿದರು. ವಿರೋಧಿಸಿದರೆ ಜನವಿರೋಧಿ ಗಳಾಗಬಹುದೆಂಬ ಭಯಕ್ಕೆ ಬಿದ್ದ ವಿರೋಧ ಪಕ್ಷಗಳೂ ಒಪ್ಪಿದವು. ಕೊನೆಗೂ ಸರಕಾರ ಅಂದುಕೊಂಡಂತೆ ಕಾಯ್ದೆ ಅಂಗೀಕಾರ ಪಡೆಯಿತು.

ಸದ್ಯಕ್ಕೆ ಸರಕಾರದ ಕೈ ಮೇಲಾಗಿದೆ. ಆದರೆ ಈ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಡಕುಗಳು ಎದುರಾಗಲಿವೆ ಎಂಬುದು ಸ್ಪಷ್ಟವಾಗಿ ಗೋಚರಿಸತೊಡಗಿವೆ. ಏಕೆಂದರೆ ಖಾಸಗಿ ವೈದ್ಯರು ಜೈಲು ಶಿಕ್ಷೆಯಿಂದ ಮತ್ತು ಆಸ್ಪತ್ರೆಗಳು ದರ ಪಟ್ಟಿ ನಿಗದಿಗೊಳಿಸುವುದರಿಂದ ಕೊಂಚ ರಿಯಾಯಿತಿ ಪಡೆದಿರಬಹುದು. ಆದರೆ ಇವರು ಪ್ರಭಾವಿಗಳು, ಹಣವಂತರು ಮತ್ತು ಸೋಲನ್ನು ಸುಲಭಕ್ಕೆ ಒಪ್ಪದವರು ಎನ್ನುವುದನ್ನು ಅರಿಯಬೇಕು. ಕಾನೂನು ಕಾಯ್ದೆಗಳ ಮೂಲಕವೇ ಸರಕಾರದ ಕೀಲು ಮುರಿದು ಮೂಲೆಗೆ ಕೂರಿಸಬಲ್ಲವರೆಂಬುದನ್ನು ತಿಳಿಯಬೇಕು. ಹಾಗೆಯೇ ಆರೋಗ್ಯ ಸಚಿವ ರಮೇಶ್‌ಕುಮಾರ್ ಕೂಡ, ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತಮ್ಮ ರಾಜಕೀಯ ಗುರು ದೇವರಾಜ ಅರಸರ ಕ್ರಮವನ್ನು ಅನುಸರಿಸುವ ಮೂಲಕ ಮುತ್ಸದ್ದಿತನ ತೋರಬೇಕು. ಜೊತೆಗೆ ತಮ್ಮ ವ್ಯಂಗ್ಯ, ಉಡಾಫೆ ಮತ್ತು ಫ್ಯೂಡಲ್ ಗುಣವನ್ನು ಬದಿಗಿಟ್ಟು, ಕೈ ಬಾಯಿ ಶುದ್ಧವಾಗಿಟ್ಟುಕೊಳ್ಳಬೇಕು. ಅದೆಲ್ಲದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸಬೇಕು. ಜನ ಅದನ್ನು ನಮ್ಮದೆಂದು ಭಾವಿಸಿ ಬಳಸುವಂತಾಗಬೇಕು.

Writer - - ಬಸು ಮೇಗಲಕೇರಿ

contributor

Editor - - ಬಸು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ