ಬಹುಜನ: ತಳಸ್ತರದ ಮುಂದಿರುವ ಸವಾಲುಗಳನ್ನು ಎತ್ತಿ ತೋರಿಸುವ ಕಾದಂಬರಿ
ಡಾ.ಶರಣಕುಮಾರ ಲಿಂಬಾಳೆ ಅವರು ತಮ್ಮ ‘ಅಕ್ರಮ ಸಂತಾನ’ ಆತ್ಮಕತೆಯ ಮೂಲಕ, ಕನ್ನಡಿಗರಿಗೆ ಚಿರಪರಿಚಿತ. ಮಹಾರಾಷ್ಟ್ರದ ಈ ಸಾಹಿತಿಗಳು ಕನ್ನಡದ ದಲಿತ ಸಾಹಿತಿಗಳಿಗೆ, ಲೇಖಕರಿಗೆ ಬರೆವಣಿಗೆ ಹೊಸ ಮಾರ್ಗವನ್ನು ತೆರೆದುಕೊಟ್ಟವರು. ಇವರ ಸ್ಫೂರ್ತಿಯಿಂದ ಕನ್ನಡದಲ್ಲೂ ಹಲವು ದಲಿತ ಲೇಖಕರು ತಮ್ಮ ಆತ್ಮಕತೆಗಳನ್ನು ಬರೆದರು. ಇಲ್ಲಿ ಶರಣಕುಮಾರ ಲಿಂಬಾಳೆ ಅವರ ‘ಬಹುಜನ’ ಕಾದಂಬರಿಯಿದೆ. ಒಬ್ಬ ದಲಿತನ ಎಲ್ಲ ಕಾದಂಬರಿಗಳು ಒಂದಲ್ಲ ಒಂದು ರೀತಿ ಆತನ ಆತ್ಮಕತೆಯೇ ಆಗಿರುತ್ತದೆ. ಆದುದರಿಂದಲೇ ಬಹುಜನ, ಈ ನೆಲದ ತಳಸ್ತರದ ಬದುಕಿನ ಕತೆಯಾಗಿ ನಮ್ಮನ್ನು ಸೆಳೆಯುತ್ತದೆ. ಅಸ್ಪಶ್ಯ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಇಕ್ಕಟ್ಟು, ಬಿಕ್ಕಟ್ಟುಗಳನ್ನು ರಾಜಕೀಯ ನೆಲೆಯಲ್ಲಿ ಶೋಧಿಸುವ ಕೃತಿಯೂ ಇದಾಗಿದೆ. ಅನುವಾದಕರು ಹೇಳುವಂತೆ, ಹಿಂದುತ್ವದ ಗಟ್ಟಿ ತಳಹದಿಯಲ್ಲಿ ನಿಂತ ಹಿಂದುತ್ವವಾದಿ ಶಕ್ತಿಗಳು ಹಾಗೂ ಹಿಂದೂಧರ್ಮದ ಆಧ್ಯಾತ್ಮಿಕ ನೇತೃತ್ವವನ್ನು ವಹಿಸಿರುವ ಸಾಧುಸನ್ಯಾಸಿಗಳಲ್ಲಿರುವ ಅಸಂಗತಗಳು, ಮಂದಿರ ಮಠಗಳಲ್ಲಿರುವ ಸಾಧು ಸನ್ಯಾಸಿಗಳ ರಾಜಕೀಯ ಅಪರಿಪಕ್ವತೆ ಹಾಗೂ ಹಿಂದೂಗಳು ಯಾವ ಧರ್ಮವನ್ನು ಅನುಸರಿಸುತ್ತಾರೋ ಆ ಧರ್ಮದ ಜಾತಿ ವ್ಯವಸ್ಥೆಯ ಪೊಳ್ಳುತನ, ದಲಿತ ಚಳವಳಿಯ ವೈಫಲ್ಯ, ಅಧಿಕಾರ ಮತ್ತು ಸ್ವಾರ್ಥಕಾರಣದ ಟೊಳ್ಳುತನ, ರಾಜಕೀಯ ಅಪರಾಧ, ಭ್ರಷ್ಟಾಚಾರ, ಸಂಪತ್ತಿನ ದುರ್ವ್ಯಯ ಇತ್ಯಾದಿ ವಿಚಾರಗಳನ್ನು ಈ ಕೃತಿ ದಾಖಲಿಸುತ್ತದೆ. ಈ ಕಾದಂಬರಿಗೆ ಒಂದು ರಾಜಕೀಯ ಉದ್ದೇಶವಿದೆ ಎನ್ನುವುದನ್ನು ಕಾದಂಬರಿಯ ಹೆಸರಿನಿಂದಲೇ ನಮ್ಮದಾಗಿಸಿಕೊಳ್ಳಬಹುದು. ಭಾವನೆ, ಶ್ರದ್ಧೆ, ಮೂಲಭೂತ ಅಧಿಕಾರ, ಹಕ್ಕುಗಳು ಮತ್ತು ಸುರಕ್ಷತೆಗೆ ಮನುಷ್ಯ ಎಷ್ಟು ಮಹತ್ವವನ್ನು ನೀಡುತ್ತಾನೆಂಬುದು ಈ ಕಾದಂಬರಿಯಲ್ಲಿ ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿದೆ. ಕಲಾ ಮಾಧ್ಯಮದ ಮೂಲಕ ಕಲೆಗೆ ಹೊರತಾದ ವಿಚಾರಗಳನ್ನು ಸಮಾಲೋಚಿಸುವುದು ಎಷ್ಟು ಸರಿ ? ಎನ್ನುವ ಪ್ರಜ್ಞೆಯನ್ನು ಇಟ್ಟುಕೊಂಡೇ ಕಾದಂಬರಿಯನ್ನು ಬರೆದಿರುವ ಲೇಖಕರು, ಸಮಾಜದ ಮೇಲಿನ ಖಂಡವನ್ನು ಕೆಳಗೂ, ಕೆಳಗಿನದನ್ನು ಮೇಲೂ ಸಾಗಿಸಲು ಕಲಾರೂಪಿ ನೌಕೆಯನ್ನು ಉಪಯೋಗಿಸುವ ಅಗತ್ಯವಿದೆ ಎಂದು ಮುನ್ನುಡಿಯಲ್ಲಿ ಅಭಿಪ್ರಾಯಪಡುತ್ತಾರೆ. ಮರಾಠಿಯಲ್ಲಿ ಈ ಕಾದಂಬರಿಯನ್ನು ಬರೆಯಲಾಗಿದೆಯಾದರೂ, ಹಿಂದಿ ಅನುವಾದದಿಂದ ಕನ್ನಡಕ್ಕಿಳಿಸಲಾಗಿದೆ. ಡಾ. ಪ್ರಮೀಳಾ ಮಾಧವ್ ಕೃತಿಯನ್ನು ಅನುವಾದಿಸಿದ್ದಾರೆ.