ಮಧುರ ಕವಿ ಕುರ್ಕಾಲರು ಕಣ್ಮರೆ
ಮುಂಬೈ ಶಹರದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಚಿಂತಕ, ಸಾಹಿತಿ ರವಿ ರಾ. ಅಂಚನ್ ಅವರ ನಿಧನದ ಕೆಲವೇ ದಿನಗಳ ಅಂತರದಲ್ಲಿ ನವೆಂಬರ್ 12ರಂದು ಮತ್ತೊಬ್ಬ ಹಿರಿಯ ಕವಿ, ಸಾಹಿತಿಯನ್ನು ನಗರ ಕಳಕೊಂಡಿತು. ಅವರೇ ಹಾಡುವ ಕವಿ, ಶಿಕ್ಷಕ ಬಿ.ಎಸ್. ಕುರ್ಕಾಲರು. ವಯಸ್ಸು 85. ‘ನನ್ನ ನಿನ್ನ ಅಂತರಂಗ’ದಿಂದ ಹಿಡಿದು ಇತ್ತೀಚಿನ ‘ಗಿರಿಯ ಗಾನ’ದ ತನಕ ಅರ್ಧ ಡಜನ್ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಚಿಲಿಪಿಲಿ’ ಅವರ ಶಿಶುಕಾವ್ಯ ಸಂಕಲನ. ಮಾಸ್ತಿಯವರ ‘ಕಾಕನ ಕೋಟೆ’, ಗೊರೂರರ ‘ಭೂತಯ್ಯನ ಮಗ ಅಯ್ಯು’ ಅಮರ ಚಿತ್ರಕತಾ ಮಾಲಿಕೆಗೆ ಸಿದ್ಧಪಡಿಸಿ ಕೊಟ್ಟವರು. ವಡಾಲದ ಎನ್.ಕೆ.ಇ.ಎಸ್. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೈದು ನಿವೃತ್ತರಾದವರು. ಕುರ್ಕಾಲರು ಪಂಜೆಯವರ ದಾರಿಯಲ್ಲಿ ನಡೆದು ಮಕ್ಕಳಿಗಾಗಿ ಪದ್ಯವನ್ನೂ ರಚಿಸಿದವರು. ಕುರ್ಕಾಲರನ್ನು ಭಾವಗೀತೆಗಳ ಕವಿ, ಮಧುರ ಕವಿ, ಹಾಡುವ ಕವಿ.... ಎಂದೆಲ್ಲಾ ಕರೆಯುತ್ತಿದ್ದರು. ಈ ವರ್ಷದ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಕುರ್ಕಾಲರು ಪಡೆದಿರುವುದು ಅವರ ಕೊನೆಯ ಪ್ರಶಸ್ತಿ ಸ್ವೀಕಾರವಾಯಿತು. ಅವರಿಗೆ ಈ ಹಿಂದೆ ವಸುದೇವ ಭೂಪಾಲಂ ಪ್ರಶಸ್ತಿ ಕೂಡಾ ದೊರಕಿತ್ತು. ದಕ್ಷಿಣ ಕನ್ನಡದ ಶತಮಾನದ ಕಾವ್ಯ (1900-2000) ಬೃಹತ್ ಗ್ರಂಥವನ್ನು ಕನ್ನಡ ಸಂಘ, ಕಾಂತಾವರ, ಪ್ರಸಿದ್ಧ ವಿಮರ್ಶಕ ಡಾ. ಬಿ.ಜನಾದರ್ನ ಭಟ್ ಅವರಿಗೆ ಸಂಪಾದಿಸಲು ಜವಾಬ್ದಾರಿ ವಹಿಸಿದ ದಿನಗಳಲ್ಲಿ (2001) ನಾನು ಮಂಗಳೂರಲ್ಲಿ ವಾಸ್ತವ್ಯವಿದ್ದೆ. ಈ ಗ್ರಂಥಕ್ಕಾಗಿ ಮುಂಬೈಯವರ ಕವನ ಸಂಗ್ರಹಗಳನ್ನು ಪರಿಶೀಲನೆಗಾಗಿ ಜನಾರ್ದನ ಭಟ್ ಅವರಿಗೆ ಒದಗಿಸಿದ್ದೆ. ದಕ್ಷಿಣ ಕನ್ನಡದ ಮುಂಬೈ ಕವಿಗಳು ಬಿಟ್ಟು ಹೋಗಬಾರದು ಎಂದು ನನ್ನಲ್ಲಿದ್ದ ಮುಂಬೈ ಕವಿಗಳ ಕವನ ಸಂಕಲನಗಳನ್ನು ನೀಡಿದ್ದೆ. ಅದರಲ್ಲಿ ಒಬ್ಬರು ಕುರ್ಕಾಲರೂ ಇದ್ದರು. ಅವರ ‘ಮುನ್ನಡೆಸು ದೇವಾ’ ಪುಟ್ಟ ಕವಿತೆಯನ್ನು ಆಯ್ಕೆ ಮಾಡಿದ್ದರು ಸಂಪಾದಕರು.
1993ರ ಕಾಲ. ನಾವು ಗೆಳೆಯರು ಕರ್ನಾಟಕ ಮಲ್ಲ ದೈನಿಕದಲ್ಲಿ ಕೆಲವು ಜವಾಬ್ದಾರಿಗಳನ್ನು ಹೊತ್ತಿದ್ದೆವು. ಸಾಹಿತ್ಯ ಕಾರ್ಯಕ್ರಮಗಳ ವರದಿ ಇದ್ದರೆ ನಾನೇ ಮಾಡುತ್ತಿದ್ದೆ. ಅಂದು ಕುರ್ಕಾಲರು ಬಿ.ಎಸ್.ಕೆ.ಬಿ.ಯಲ್ಲಿ ಸಾಹಿತ್ಯ ಬಳಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿದ್ದರು. ಅವರು ತಮ್ಮ ಭಾಷಣದಲ್ಲಿ ‘‘ಗೋಲ್ಡನ್ ಗ್ಯಾಂಗ್, ಸಿಲ್ವರ್ ಗ್ಯಾಂಗ್ ಮುಂತಾದುವುಗಳ ಚರ್ಚೆಯ ಬದಲು ನಾವು ಕಲೆ-ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ಕೂಟಗಳಿಗೆ ಒತ್ತು ನೀಡೋಣ’’ ಎಂದು ಹೇಳಿದ್ದನ್ನು ನಾನು ಹಾಗೆಯೇ ಬರೆದಿದ್ದೆ. ಅದನ್ನೇ ಶೀರ್ಷಿಕೆಯಾಗಿಯೂ ಕೊಟ್ಟಿದ್ದೆ. ಆದರೆ ನನ್ನ ಹೆಸರಿರಲಿಲ್ಲ. ಒಮ್ಮೆ ಕುರ್ಕಾಲರು ಭೇಟಿಯಾದಾಗ ‘‘ಆ ವರದಿಯನ್ನು ನೀವೇ ಬರೆದಿರುವಿರಿ ಅಂತ ಗೊತ್ತು. ಅ ಗ್ಯಾಂಗ್‌ಗಳ ಕುರಿತು ಹೈಲೈಟ್ ಮಾಡಿ ಶೀರ್ಷಿಕೆ ಕೊಡುವುದಿದ್ದರೆ ನಿಮ್ಮದೇ ಕೆಲಸ ಆಗಿದೆ’’ ಎಂದು ನಕ್ಕು ಹೇಳಿದ್ದಿದೆ.
ಕನ್ನಡ ವಿಭಾಗ ಮುಂಬೈ ವಿ.ವಿ. ಸಾಹಿತ್ಯ ಮತ್ತು ಪತ್ರಿಕೋದ್ಯಮ ಬಾಂಧವ್ಯ ವಿಚಾರ ಸಂಕಿರಣ (ಹಲವು ವರ್ಷಗಳ ಹಿಂದೆ) ಆಯೋಜಿಸಿದ್ದರು. ಅಲ್ಲಿ ಪ್ರಧಾನ ಉಪನ್ಯಾಸ ನಾನು ಮತ್ತು ಕುರ್ಕಾಲರು ಮಾಡಿದ್ದೆವು. ಯಾವತ್ತೂ ಪತ್ರಿಕೆಗಳು ಉದಯೋನ್ಮುಖರಿಗೆ ಪ್ರೋತ್ಸಾಹ ಕೊಡತಕ್ಕದ್ದು. ಅವರ ಬರಹಗಳನ್ನು ಪ್ರಕಟಿಸಲೇಬೇಕು ಎಂಬಂತೆ ಕುರ್ಕಾಲರು ಮಾತನಾಡಿದ್ದರು. ಹೊಸ ಬರಹಗಾರರಿಗೆ ಪತ್ರಿಕೆಗಳು ನಿಷ್ಠುರವಾಗಿ ವರ್ತಿಸಬಾರದು ಎಂದಿದ್ದರು. ಆ ಕ್ಷಣ ನನಗೆ ಸ್ವಲ್ಪ ಗೊಂದಲವಾದದ್ದೂ ಇದೆ. ಉದಯೋನ್ಮುಖರ ಬರಹಗಳನ್ನೆಲ್ಲಾ ಪರಿಶೀಲಿಸದೆ ಪ್ರಕಟಿಸುತ್ತಾ ಹೋದರೆ ಅವರೆಲ್ಲ ಬೆಳೆಯುವುದಾದರೂ ಹೇಗೆ? ಅವರ ತಪ್ಪನ್ನು ಹೇಳುವವರು ಯಾರು? ಹೊರಗೆ ನಿಂತು ಪತ್ರಿಕೆಗಳು ಪ್ರೋತ್ಸಾಹಿಸಬೇಕು ಎಂದು ಯಾರೂ ಹೇಳಬಹುದು. ಆದರೆ ಒಳಗಿನವರಾದ ನನ್ನಂತಹವರು ಅದನ್ನು ಒಪ್ಪಲಸಾಧ್ಯ. ಉದಯೋನ್ಮುಖ ಬರಹಗಾರರೆಂದು ಅವರು ಬರೆದು ಕಳಿಸಿದ್ದನ್ನೆಲ್ಲಾ ಪ್ರಕಟಿಸುವುದಾದರೆ ನಮ್ಮಂತಹ ಉಪಸಂಪಾದಕರ ಅಗತ್ಯವೇನಿದೆ ಸರ್? ಈ ರೀತಿ ನಾನು ಅವರಲ್ಲಿ ಚರ್ಚಿಸಿದ್ದೆ.
ಬಿ.ಎಸ್. ಕುರ್ಕಾಲರು ‘ಪತ್ರಪುಷ್ಪ’ಮಾಸಿಕದ ಸಂಪಾದಕರಾಗಿದ್ದವರು. ಆ ಸಂದರ್ಭದಲ್ಲಿ ಅನೇಕರ ಬರಹಗಳಿಗೆ ಬೆಂಬಲಿಸಿದವರು. ಅದು ಜಾತಿಸಂಘದ ಪತ್ರಿಕೆ ಇರುವುದರಿಂದ ಬರಹಗಳ ಆಯ್ಕೆಯಲ್ಲಿ ಹೆಚ್ಚಿನ ಒತ್ತಡ ಸಂಪಾದಕರಿಗೆ ಇರಲಿಲ್ಲ. ಅವರ ಸಂಪಾದಕೀಯಗಳು ಆನಂತರ ‘ಪತ್ರ ಪುಷ್ಪ’ ಎನ್ನುವ ಕೃತಿಯಲ್ಲಿ ಬಂದಿತ್ತು. ಕುರ್ಕಾಲರು ಇತ್ತೀಚಿನ ದಿನಗಳಲ್ಲಿ ಛಾಯಾಕಿರಣ ಪತ್ರಿಕೆಯ ಗೌರವ ಸಂಪಾದಕರಾಗಿದ್ದರು. ಎರಡು ವರ್ಷದ ಹಿಂದೆ ಅದರಲ್ಲಿ ಮುಂಬೈ ಕನ್ನಡ ಕಾವ್ಯಧಾರೆ ಎನ್ನುವ ವಿಶೇಷ ಲೇಖನವನ್ನು ಬರೆದಿದ್ದು ಅದು ಮುಂಬೈಯ ಕಾವ್ಯಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಹಣ್ಣೆಲೆಗಳು ಉದುರುತ್ತಾ ಹೋಗುವಾಗ ಹೊಸ ಚಿಗುರುಗಳು ಸಹಜವಾಗಿ ಮೂಡಿ ಬರುತ್ತವೆ. ಹಾಗೆ ಮುಂಬೈಯ ಕಾವ್ಯಕ್ಷೇತ್ರಕ್ಕೂ ಯುವ ಜನಾಂಗ ಪ್ರವೇಶಿಸುತ್ತಲೇ ಇರುತ್ತದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದಿದ್ದರು ಕುರ್ಕಾಲರು.
ಕುರ್ಕಾಲರಿಗೆ ಕಿರಿಯರ ಬಗ್ಗೆ ಅಪಾರ ಅಭಿಮಾನವಿತ್ತು. ಕವಿ ಸಮ್ಮೇಳನದಲ್ಲಿ ಯಾವ ಕಿರಿಯ ಕವಿ ಅಧ್ಯಕ್ಷರಿದ್ದರೂ ಇವರು ಕಾವ್ಯವಾಚನಕ್ಕೆ ಬನ್ನಿ ಅಂದರೆ ಬರುತ್ತಿದ್ದರು. ಇವರ ಕವಿತೆಗಳಲ್ಲಿ ದೇಶಭಕ್ತಿ, ಪ್ರಕೃತಿಪ್ರೇಮ, ಧರ್ಮಪ್ರೇಮ, ಮಾನವೀಯತೆ.... ಎಲ್ಲವನ್ನೂ ಕಾಣಬಹುದು. ಅವರು ಮಕ್ಕಳಿಗಾಗಿ ‘ಮೇವಾಡದ ಭಾಗ್ಯಲಕ್ಷ್ಮೀ’ ನಾಟಕ ಕೂಡಾ ಬರೆದಿದ್ದರು. ಕುರ್ಕಾಲರಿಗೆ 77 ವರ್ಷವಾದಾಗ ಅವರಿಗೆ ಗಿರಿಜಾತ ಎನ್ನುವ ಅಭಿನಂದನಾ ಗ್ರಂಥವೂ ಬಂದಿತ್ತು. ‘ಗಿರಿಕುಂಜರ’ ಇವರ ಬಗ್ಗೆ ದಿನೇಶ್ ರೆಂಜಾಳರು ಬರೆದ ಎಂ.ಫಿಲ್. ಸಂಪ್ರಬಂಧವಾಗಿದೆ. ಇತ್ತೀಚೆಗೆ ಕುರ್ಕಾಲರ ಕುರಿತಂತೆ ವಿವಿಧ ಕವಿಗಳು ಬರೆದಿರುವ ಕಾವ್ಯಕೃತಿಯೂ ಬಿಡುಗಡೆಗೊಂಡಿತ್ತು.
‘ಬಿ.ಎಸ್. ಕುರ್ಕಾಲ್- 77’ ಅಭಿನಂದನಾ ಸಮಾರಂಭವು ಕುರ್ಕಾಲ್ ಸಾಹಿತ್ಯ ಉತ್ಸವ ಕಾರ್ಯಕ್ರಮವಾಗಿತ್ತು. ಕುರ್ಕಾಲರು ಗುರುಶಿಷ್ಯ ಸಂಬಂಧವನ್ನು ಉಳಿಸಿಕೊಂಡ ಶಿಕ್ಷಕರು. ಆದರ್ಶ ಶಿಕ್ಷಕರಾಗಿ ಮುಂಬೈಗೆ ಕಾಲಿಟ್ಟ ಕುರ್ಕಾಲರು ವಿದ್ಯಾರ್ಥಿ ಶಕ್ತಿ - ಸಾಹಿತ್ಯ ಶಕ್ತಿಯನ್ನು ಜನರಲ್ಲಿ ಪ್ರಚೋದಿಸಿದ ಅಪರೂಪದ ವ್ಯಕ್ತಿತ್ವ. ಜಗತ್ತನ್ನು ಶುಚಿತ್ವದ ಕಡೆಗೆ ಒಯ್ಯುವುದು ಸಾಹಿತ್ಯ, ಸದ್ವಿಚಾರ, ಸತ್‌ಚಿಂತನೆಗಳು ಎಂದು ಆಗ ವೇದಿಕೆಯ ಗಣ್ಯರು ಕುರ್ಕಾಲ್‌ರನ್ನು ಮುಂದಿಟ್ಟು ಹೇಳಿದ್ದರು. ಜಾತಿ ಪಂಥ ಮೀರಿದ ಶಿಷ್ಯವರ್ಗ ಅವರಿಗಿತ್ತು.
ಕುರ್ಕಾಲರಿಗೆ ತಮ್ಮ ಪತ್ನಿಯ ಬಗ್ಗೆ ಅಪಾರ ಗೌರವ-ಪ್ರೀತಿ ಇತ್ತು. ಪತ್ನಿಯ ನಿಧನದ ನಂತರ ಸ್ವಲ್ಪಕಾಲ ಮೌನವೇ ಇದ್ದರು. ಆನಂತರ ಜಯಂತಿ ಕುರ್ಕಾಲ್ ಸಾಹಿತ್ಯ ಪ್ರಶಸ್ತಿಯನ್ನು ತಮ್ಮ ಲಕ್ಷ್ಮೀಛಾಯಾ ವಿಚಾರ ವೇದಿಕೆ ಮೂಲಕ ಪ್ರತೀವರ್ಷ ನೀಡುತ್ತಾ ಬಂದಿದ್ದಾರೆ. ‘ತಾಯಿನುಡಿ’ಯ ಸಂಪಾದಕ ಡಿ.ಕೆ.ಮೆಂಡನ್‌ರು ಬದುಕಿದ್ದಾಗ ಒಂದು ಬಾರಿ ಅವರ ಮನೆಗೆ ಹೋಗಿ ಲಕ್ಷ್ಮೀಛಾಯಾ ವಿಚಾರ ವೇದಿಕೆಯ ಮೂಲಕ ಸನ್ಮಾನ ಮಾಡಿದಾಗ ನನ್ನನ್ನೂ ಕರೆದೊಯ್ದಿದ್ದರು.
ಮುಂಬೈ ವಿ.ವಿ. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್.ಉಪಾಧ್ಯರು ಹೇಳುವಂತೆ ‘‘ನಿವೃತ್ತಿಯ ಜಾಡ್ಯದಲ್ಲಿ ಕುರ್ಕಾಲರು ಮುಳುಗಿ ಹೋದವರಲ್ಲ. ಮುಂಬೈನ ಧಾವಂತದ, ನಾಗಾಲೋಟದ, ನರಕ ಸದೃಶ ಬದುಕಿನಲ್ಲೂ ಅವರು ತಮ್ಮ ಎಂದಿನ ಕ್ರಿಯಾಶೀಲತೆಯನ್ನೂ, ಜೀವನೋತ್ಸಾಹವನ್ನೂ ಉಳಿಸಿಕೊಂಡವರು.’’ ಇದು ಬಿ.ಎಸ್. ಕುರ್ಕಾಲರಿಗೆ ಶ್ರದ್ಧಾಂಜಲಿ ಬರಹ.
* * *
ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗೆ ಪುರುಷನಾಗುವ ಇಚ್ಛೆ
ಮಹಾರಾಷ್ಟ್ರದ ಮಹಿಳಾ ಪೊಲೀಸರೊಬ್ಬರು ತಮ್ಮ ಸೀನಿಯರ್ ಆಫೀಸರ್‌ಗೆ ಪತ್ರ ಬರೆದು ತಮ್ಮ ಲಿಂಗ ಬದಲಿಸಿ ಪುರುಷನಾಗುವುದಕ್ಕೆ ಸರ್ಜರಿ ನಡೆಸಲು ಅನುಮತಿ ಬೇಡಿದ್ದರು. ಆದರೆ ಡಿಪಾರ್ಟ್‌ಮೆಂಟ್ ಇದು ನಿಯಮದ ವಿರುದ್ಧವಿದೆ ಎಂದು ತಳ್ಳಿ ಹಾಕಿತ್ತು.
ಮೊನ್ನೆ ಗುರುವಾರ ಈ ಮಹಿಳಾ ಪೊಲೀಸ್ ಬಾಂಬೆ ಹೈಕೋರ್ಟ್ ನಲ್ಲಿ ಒಂದು ಅರ್ಜಿ ಸಲ್ಲಿಸಿ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ವಿನಂತಿಸಿದರು. ಈ ಮಹಿಳಾ ಕಾನ್‌ಸ್ಟೇಬಲ್‌ರ ದಿಟ್ಟ ನಿರ್ಧಾರವು ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಇಂತಹ ಕೆಲವು ಸಂಗತಿಗಳು ಹಲವು ವರ್ಷಗಳಿಂದ ಪೊಲೀಸ್ ವಲಯದಲ್ಲಿ ಕೇಳಿ ಬಂದಿದೆ. ಈ ಮಹಿಳಾ ಪೊಲೀಸ್ ಬೀಡ್ ಜಿಲ್ಲೆಯ ಮಜಾಲ್‌ಗಾಂವ್‌ನಲ್ಲಿರುವವರು. ಹೆಸರು ಲಲಿತಾ ಸಾಲ್ವಿ. ಪೊಲೀಸ್ ಇಲಾಖೆಗೆ ಸೇರಿದ್ದು 2009ರಲ್ಲಿ. ಎರಡು ತಿಂಗಳ ಹಿಂದೆ ಲಲಿತಾ ಅವರು ಬೀಡ್ ಜಿಲ್ಲೆಯ ಎಸ್.ಪಿ.ಜಿ. ಶ್ರೀಧರ್ ಅವರಿಗೆ ಪತ್ರ ಬರೆದು ತನ್ನ ಪುರುಷನಾಗುವ ಇಚ್ಛೆ ವ್ಯಕ್ತ ಪಡಿಸಿದ್ದರು. ತನ್ನ ಶರೀರದ ಒಳಗೆ ಪುರುಷನ ಭಾವನೆಗಳು ಬರುತ್ತಿವೆ. ಹಾಗಾಗಿ ತಾನು ಸರ್ಜರಿ ಮೂಲಕ ಪುರುಷನಾಗುವುದಕ್ಕೆ ಅನುಮತಿ ಕೊಡುವಂತೆ ಕೇಳಿದ್ದರು. ಅವರು ಈ ಅರ್ಜಿಯನ್ನು ಡಿ.ಜಿ.ಪಿ. ಮಾಥುರ್ ಅವರಿಗೆ ಕಳುಹಿಸಿದರು. ಲಲಿತಾ ಅವರು ಡಿ.ಜಿ.ಪಿ. ಮಾಥುರ್ ಬಳಿ ಆಪರೇಷನ್‌ಗಾಗಿ ಒಂದು ತಿಂಗಳ ರಜೆ ಕೂಡಾ ಕೇಳಿದ್ದರು. ಆದರೆ ಇದು ನಿಯಮದ ವಿರುದ್ಧ ಎಂದು ಹೇಳಿ ಮಾಥುರ್ ಅರ್ಜಿ ತಿರಸ್ಕರಿಸಿದ್ದರು. ಆನಂತರ ಲಲಿತಾ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಳಿ ತನ್ನ ಪುರುಷ ಸಂವಹನೆಯ ಮಾತುಗಳನ್ನು ಹೇಳಿ ಒಪ್ಪಿಗೆ ನೀಡುವಂತೆ ವಿನಂತಿಸಿದ್ದಾರೆ.
* * *
ಮನಪಾದಲ್ಲಿ ಹೊಸ ನೌಕರರ ಭರ್ತಿ: ವರ್ಷದ ವೇತನ ಅರ್ಜಿಶುಲ್ಕದಲ್ಲೇ ವಸೂಲಿ!
ಮುಂಬೈ ಮಹಾನಗರ ಪಾಲಿಕೆಯಲ್ಲಿ ನೌಕರಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅರ್ಜಿಗಳ ಜೊತೆ ಬರುವ ಪ್ರವೇಶ ಶುಲ್ಕ ಮನಪಾಕ್ಕೆ ಭಾರೀ ಆದಾಯ ತರಲಿದೆ. ಮನಪಾದಲ್ಲಿ 1,388 ಹೊಸ ನೌಕರರನ್ನು ಭರ್ತಿಗೊಳಿಸಲಾಗುವುದು. ಜಲ ವಿಭಾಗ, ಆಸ್ಪತ್ರೆ, ಸ್ವಚ್ಛತಾ ವಿಭಾಗ, ಸ್ಮಶಾನ ಭೂಮಿ... ಸಹಿತ ವಿವಿಧ ವಿಭಾಗಗಳಿಗೆ ಭರ್ತಿ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕಾಗಿ 4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಹಾಕುತ್ತಿದ್ದಾರೆ. ಇದರಿಂದ ಮನಪಾಕ್ಕೆ 24 ಕೋಟಿ ರೂ. ಜಮಾ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭರ್ತಿಗೊಳ್ಳಲಿರುವ 1,388 ನೌಕರರಿಗೆ ಮನಪಾ 2.22 ಕೋಟಿ ರೂ. ವೇತನದ ರೂಪದಲ್ಲಿ ನೀಡಲಿದೆ. ಹೀಗಾಗಿ ಒಂದು ವರ್ಷದ ವೇತನ ಈ ಪ್ರವೇಶ ಶುಲ್ಕದಲ್ಲೇ ವಸೂಲಿ ಆಗಲಿದೆ. ಮನಪಾ ಈ ಬಾರಿ ಭರ್ತಿಪ್ರಕ್ರಿಯೆ ಆನ್‌ಲೈನ್ ಮಾಡಿರುತ್ತದೆ. 2009ರಲ್ಲಿ ಭರ್ತಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದೂವರೆ ವರ್ಷ ಹಿಡಿದಿತ್ತು. ಹೀಗಾಗಿ ಈಬಾರಿ ಆನ್‌ಲೈನ್ ಭರ್ತಿ ಪ್ರಕ್ರಿಯೆ ಆರಂಭಿಸಲು ನಿರ್ಣಯಿಸಲಾಯಿತು.
* * *
ಹೂಡಿಕೆಯಲ್ಲಿ ಮಹಾರಾಷ್ಟ್ರ ಜಾರುತ್ತಿದೆ!
ಹೂಡಿಕೆಯಲ್ಲಿ ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ ಇದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಗಾಗ ಹೇಳುತ್ತಿರುತ್ತಾರೆ - ಆದರೆ ಕೇಂದ್ರೀಯ ವಾಣಿಜ್ಯ ಮತ್ತು ಉದ್ಯೋಗ ಮಂತ್ರಾಲಯದ ಡಿಪಾರ್ಟ್ ಮೆಂಟ್ ಆಫ್ ಇಂಡಸ್ಟ್ರಿಯಲ್ ಪಾಲಿಸಿ ಆ್ಯಂಡ್ ಪ್ರಮೋಶನ್‌ನ ವರದಿ ಗಮನಿಸಿದರೆ ಮಹಾರಾಷ್ಟ್ರ ಮೂರನೇ ಸ್ಥಾನಕ್ಕೆ ಇಳಿದಿದೆ. ಹೀಗಾಗಿ ಮೋದಿ ಸರಕಾರದ ಅಂಕಿಅಂಶ ನಂಬುವುದೋ - ಫಡ್ನವೀಸ್‌ರ ಮಾತು ನಂಬುವುದೋ? ಇದು ಕಾಂಗ್ರೆಸ್‌ನ ಪ್ರಶ್ನೆ. ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ, ಸಚಿನ್ ಸಾವಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತಿದು.
2015ರಲ್ಲಿ ಗುಜರಾತ್‌ನಲ್ಲಿ 63,823 ಕೋಟಿ ರೂ., ಛತ್ತೀಸ್ ಗಡದಲ್ಲಿ 36,511 ಕೋಟಿ ರೂ., ಕರ್ನಾಟಕದಲ್ಲಿ 31,544 ಕೋಟಿ ರೂ., ಮಹಾರಾಷ್ಟ್ರದಲ್ಲಿ 32,919 ಕೋಟಿ ರೂ. ಹೂಡಿಕೆಯ ಪ್ರಸ್ತಾವ ಬಂದಿತ್ತು. ಆದರೆ 2016ರಲ್ಲಿ ಕರ್ನಾಟಕದಲ್ಲಿ 1,54,131 ಕೋಟಿ ರೂ., ಗುಜರಾತ್‌ನಲ್ಲಿ 53,621 ಕೋಟಿ ರೂ., ಮಹಾರಾಷ್ಟ್ರದಲ್ಲಿ 38,084 ಕೋಟಿ ರೂ. ಹೂಡಿಕೆ ಪ್ರಸ್ತಾವ ಬಂದಿದೆ.
ಈ ವರ್ಷ 2017ರಲ್ಲಿ 9 ತಿಂಗಳಲ್ಲಿ ಕರ್ನಾಟಕದಲ್ಲಿ 1,47,625 ಕೋಟಿ ರೂ., ಗುಜರಾತ್‌ನಲ್ಲಿ 65,741 ಕೋಟಿ ರೂ., ಮಹಾರಾಷ್ಟ್ರದಲ್ಲಿ 25,018 ಕೋಟಿ ರೂ. ಹೂಡಿಕೆಯ ಪ್ರಸ್ತಾವ ಬಂದಿದೆ. ಹಾಗಿರುವಾಗ ಮಹಾರಾಷ್ಟ್ರ ಹೂಡಿಕೆ ವಿಷಯದಲ್ಲಿ ತೃತೀಯ ಸ್ಥಾನದಲ್ಲಿದೆ.