ವಾನಪ್ರಸ್ಥ: ನಗರ-ಕಾಡುಗಳ ನಡುವಿನ ತಿಕ್ಕಾಟ

Update: 2017-11-28 18:41 GMT

ಪುರಾತನ ಭಾರತೀಯ ಜೀವನ ವ್ಯವಸ್ಥೆಯಲ್ಲಿ ‘ವಾನಪ್ರಸ್ಥ’ ಆಶ್ರಮ ಮಹತ್ವದ್ದಾಗಿದೆ. ಬದುಕಿನ ಎಲ್ಲ ಹಂತಗಳನ್ನು ಅನುಭವಿಸಿ, ದಂಪತಿಗಳು ಕಾಡು ಸೇರಿ ಅಲ್ಲಿನ ನಿಸರ್ಗದತ್ತ ಜೀವನವನ್ನು ಅನುಭವಿಸುವುದನ್ನು ನಾವು ವಾನಪ್ರಸ್ಥ ವ್ಯವಸ್ಥೆಯಲ್ಲಿ ಕಾಣುತ್ತೇವೆ. ಬಹುಶಃ ಸದ್ಯದ ಜೀವನದಲ್ಲಿ, ವೃದ್ಧರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವುದು ಆ ಸ್ಥಾನವನ್ನು ತುಂಬಿದೆ. ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳು, ಪುಣ್ಯ ಕ್ಷೇತ್ರಗಳು ಎನ್ನುವುದು ಇರಲಿಲ್ಲ. ನದಿ ಮೂಲಗಳು, ಕಾಡು ಮೊದಲಾದ ಸ್ಥಳಗಳೇ ಪುಣ್ಯ ಸ್ಥಳಗಳು. ಡಾ. ಗಣೇಶ್ ದೇವಿ ತಮ್ಮ ‘ವಾನಪ್ರಸ್ಥ’ ಬದುಕನ್ನು ಇಲ್ಲಿ ವಿಭಿನ್ನವಾಗಿ ಮಂಡಿಸಿದ್ದಾರೆ. ಈ ಆಚರಣೆಗೆ ಒಂದು ಅರ್ಥಪೂರ್ಣ ವ್ಯಾಖ್ಯಾನವನ್ನು ಈ ಕೃತಿಯಲ್ಲಿ ನೀಡಿದ್ದಾರೆ.
ಗಣೇಶ್ ದೇವಿ ಬರೋಡೆಯ ಸನಿಹದಲ್ಲಿರುವ ತೇಜಗಡ ಎಂಬ ಆದಿವಾಸಿ ಹಾಡಿಯಲ್ಲಿ ತಮ್ಮ ವಾನಪ್ರಸ್ಥವನ್ನು ಆರಂಭಿಸಿದರು. ಆದಿವಾಸಿಗಳ ಅಸ್ಮಿತೆಯ ವಿಕಾಸವೇ ಈಗ ದೇವಿಯವರ ಉಳಿದ ಬದುಕಿನ ಆಯುಷ್ಯವಾಗಿದೆ. ಆಧುನಿಕ ಮತ್ತು ಪ್ರಾಚೀನತೆಯ ನಡುವಿನ ಸಮನ್ವಯ, ಬಿಕ್ಕಟ್ಟು, ಸಂಘರ್ಷ ಇವೆಲ್ಲವನ್ನೂ ಅವರ ವಾನಪ್ರಸ್ಥದಲ್ಲಿ ನಾವು ಕಾಣಬಹುದು. ಸಂಶೋಧನೆ ಮತ್ತು ಸೃಜನಶೀಲತೆಯ ಒಂದು ಅಪೂರ್ವ ರಸಾಯನವು ಓದುಗನನ್ನು ಪುಲಕಿತಗೊಳಿಸುತ್ತದೆ. ಉಪಭಾಷೆ, ಗುಜರಾತ್ ದಂಗೆ, ಕಾಡಿನ ನಾಶ ಇವೆಲ್ಲವನ್ನು ಒಂದಕ್ಕೊಂದು ಜೋಡಿಸುತ್ತಾ ಹೋಗುವ ಅವರ ನಿರೂಪಣೆಯ ಕ್ರಮ ಕುತೂಹಲಕಾರಿಯಾದುದು.
 ಈ ಕೃತಿಯಲ್ಲಿ ಮೂರು ಅಧ್ಯಾಯಗಳಿವೆ. ಕಾಡು ಅವರ ಮನದೊಳಗಿನ ಅಭಿವ್ಯಕ್ತಿಯಾಗಿ ಸಹಜ ರೀತಿಯಲ್ಲಿ ಹೊರಹೊಮ್ಮುತ್ತದೆ. ಪರಂಪರೆ, ಆಧುನಿಕತೆ, ನಿಸರ್ಗ, ನಗರ ಇವುಗಳ ನಡುವಿನ ತಿಕ್ಕಾಟಗಳನ್ನು ಅವರ ವಾನಪ್ರಸ್ಥ ತೆರೆದಿಡುತ್ತದೆ. ಆಧುನಿಕ ಆರ್ಥಿಕ ಗುಲಾಮಗಿರಿಗೆ ಸಿಕ್ಕಿ ಹಾಕಿಕೊಂಡ ಮನುಷ್ಯ ಹೇಗೆ ಕಾಡು ಮತ್ತು ಅದನ್ನು ಆಧರಿಸಿಕೊಂಡ ಜೀವವೈವಿಧ್ಯಗಳಿಗೆ ಕಾರಣನಾಗುತ್ತಾನೆ ಎನ್ನುವುದನ್ನೂ ಕೃತಿ ತೆರೆದಿಡುತ್ತದೆ. ಕಿಕ್ಯಾರಿಯಾ ಎನ್ನುವ ಶಬ್ದವನ್ನು, ಸ್ವರವನ್ನು ಇಟ್ಟುಕೊಂಡು ಅವರು ಗುಜರಾತ್‌ದಂಗೆಯನ್ನು ವಿಶ್ಲೇಷಿಸುವ ಪರಿ ನಮ್ಮನ್ನು ತಲ್ಲಣಿಸುವಂತೆ ಮಾಡುತ್ತದೆ. ಇದು ಸಂಶೋಧನಾತ್ಮಕ ಕೃತಿಯೂ ಹೌದು. ಸೃಜನಶೀಲ ಕೃತಿಯೂ ಹೌದು. ಅಥವಾ ಲೇಖಕರೇ ಹೇಳುವಂತೆ ಇದೊಂದು ಆತ್ಮಾನುಭೂತಿ. ಈ ಕೃತಿಯನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ತಂದಿದ್ದಾರೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 160 ರೂಪಾಯಿ.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News