ಉಳಿತಾಯ ಖಾತೆಯಲ್ಲಿ ಮಾಸಿಕ ಸರಾಸರಿ ಬ್ಯಾಲನ್ಸ್ ಕಾಯ್ದುಕೊಳ್ಳುವುದು ಹೇಗೆ....?
ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಮಂಥ್ಲಿ ಆ್ಯವರೇಜ್ ಬ್ಯಾಲನ್ಸ್(ಎಂಎಬಿ) ಅಥವಾ ಮಾಸಿಕ ಸರಾಸರಿ ಶಿಲ್ಕು ಹಲವರಲ್ಲಿ ಗೊಂದಲವನ್ನುಂಟು ಮಾಡುತ್ತದೆ. ಆದರೆ ಬ್ಯಾಂಕುಗಳು ಈ ಎಂಎಬಿಯನ್ನು ಹೇಗೆ ಲೆಕ್ಕ ಹಾಕುತ್ತವೆ ಎನ್ನುವುದನ್ನು ತಿಳಿದುಕೊಂಡರೆ ನಮ್ಮ ಖಾತೆಗಳಲ್ಲಿಯ ಹಣದ ನಿರ್ವಹಣೆ ಸುಲಭವಾಗುತ್ತದೆ.
ಎಂಎಬಿ ಹೆಚ್ಚಿನ ಖಾತೆದಾರರನ್ನು ಗೊಂದಲಕ್ಕೆ ತಳ್ಳುತ್ತಿದೆ ಮತ್ತು ಅವರು ಮಾಸಿಕ ಸರಾಸರಿ ಶಿಲ್ಕು ಎಂದರೆ ತಮ್ಮ ಉಳಿತಾಯ ಖಾತೆಯಲ್ಲಿ ತಿಂಗಳಿಡೀ ನಿರ್ದಿಷ್ಟ ಮೊತ್ತವಿರುವಂತೆ ನೋಡಿಕೊಳ್ಳುವುದು ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ವಾಸ್ತವದಲ್ಲಿ ನಿಮ್ಮ ಖಾತೆಯಲ್ಲಿನ ಎಲ್ಲ ದಿನದಂತ್ಯದ ಶಿಲ್ಕುಗಳನ್ನು ತಿಂಗಳ ಕೊನೆಯ ದಿನದಂದು ಕೂಡಿಸಿ ಅದನ್ನು ಆ ತಿಂಗಳಿನಲ್ಲಿಯ ದಿನಗಳ ಸಂಖ್ಯೆಯಿಂದ ವಿಭಾಗಿಸಿ ಎಂಎಬಿಯನ್ನು ಲೆಕ್ಕ ಹಾಕಲಾಗುತ್ತದೆ. ಎಂಎಬಿಯನ್ನು ಲೆಕ್ಕ ಹಾಕುವಾಗ ಆ ನಿರ್ದಿಷ್ಟ ತಿಂಗಳಿನಲ್ಲಿಯ ಎಲ್ಲ ಬ್ಯಾಂಕ್ ರಜೆಗಳು ಮತ್ತು ಕೆಲಸದ ದಿನಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಉದಾಹರಣೆಗೆ ‘ಎ’ ಎಂಬ ವ್ಯಕ್ತಿಯು ಉಳಿತಾಯ ಖಾತೆಯನ್ನು ಹೊಂದಿದ್ದು, ಬ್ಯಾಂಕಿನ ನಿಯಮದಂತೆ 10,000 ರೂ.ಗಳ ಎಂಎಬಿ ಅಗತ್ಯವಾಗಿದೆ ಎಂದಿಟ್ಟುಕೊಳ್ಳೋಣ. ಇದರರ್ಥ ಆತ ಪ್ರತೀ ದಿನದ ಕೊನೆಯಲ್ಲಿ ತನ್ನ ಖಾತೆಯಲ್ಲಿ 10,000 ರೂ. ಶಿಲ್ಕು ಇಡಲೇಬೇಕು ಎಂದಲ್ಲ. ಆತನ ಖಾತೆಯಲ್ಲಿ ಒಂದೇ ದಿನದ ಮಟ್ಟಿಗೆ 3 ಲ.ರೂ.ಇಒಡಿ ಅಥವಾ ದಿನದಂತ್ಯದ ಶಿಲ್ಕು (ಎಂಎಬಿ 10,000 ರೂ.x30) ಇದ್ದರೂ ಆತ ಆ ತಿಂಗಳಿಡೀ ತನ್ನ ಖಾತೆಯಲ್ಲಿ ಮಾಸಿಕ ಸರಾಸರಿ ಶಿಲ್ಕನ್ನು ಕಾಯ್ದುಕೊಂಡಂತಾಗುತ್ತದೆ. ಆ ತಿಂಗಳಿನ ಉಳಿದ ದಿನಗಳಲ್ಲಿ ಆತನ ಖಾತೆಯಲ್ಲಿ ಹಣವಿಲ್ಲದಿದ್ದರೂ ನಡೆಯುತ್ತದೆ.
ಪರ್ಯಾಯವಾಗಿ ‘ಎ’ ತನ್ನ ಉಳಿತಾಯ ಖಾತೆಯಲ್ಲಿ ರಜಾದಿನಗಳು ಸೇರಿದಂತೆ ತಿಂಗಳ ಎಲ್ಲ ದಿನಗಳ ಅಂತ್ಯದಲ್ಲಿಯೂ 10,000 ರೂ. ಶಿಲ್ಕನ್ನು ಕಾಯ್ದುಕೊಳ್ಳಬಹುದಾಗಿದೆ.
ಉಳಿತಾಯ ಖಾತೆಗಳ ಎಂಎಬಿ ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತದೆ ಮತ್ತು ಬ್ಯಾಂಕಿನ ಶಾಖೆಯಿರುವ ಸ್ಥಳವನ್ನೂ ಅವಲಂಬಿಸಿರುತ್ತದೆ.
ಬ್ಯಾಂಕುಗಳೇಕೆ ಎಂಎಬಿ ನಿಯಮವನ್ನು ಹೇರಿವೆ?
ಬ್ಯಾಂಕುಗಳಿಗೆ ತಮ್ಮ ವಿವಿಧ ವ್ಯವಹಾರ ಚಟುವಟಿಕೆಗಳಿಗಾಗಿ ಹಣದ ಅಗತ್ಯವಿದೆ ಮತ್ತು ಉಳಿತಾಯ ಖಾತೆಗಳಲ್ಲಿ ಬಿದ್ದುಕೊಂಡಿರುವ ಹಣ ಅವುಗಳಿಗೆ ಇದರ ಪ್ರಮುಖ ಮೂಲವಾಗಿದೆ. ಹೀಗಾಗಿಯೇ ಗ್ರಾಹಕರು ತಮ್ಮ ಖಾತೆಗಳಲ್ಲಿ ಎಂಎಬಿ ಕಾಯ್ದುಕೊಳ್ಳುವಂತಾಗಲು ಅವು ದಂಡವನ್ನು ಜಾರಿಗೊಳಿಸಿವೆ. ಗ್ರಾಹಕರು ಎಂಎಬಿಯನ್ನು ಕಾಯ್ದಕೊಳ್ಳುವಲ್ಲಿ ವಿಫಲರಾದರೆ ಅವರಿಗೆ ದಂಡವನ್ನು ವಿಧಿಸಲಾಗುತ್ತದೆ.
ಎಂಎಬಿಯನ್ನು ಕಾಯ್ದುಕೊಳ್ಳುವುದು ಹೇಗೆ?
ಬೇರೆ ಬೇರೆ ಬ್ಯಾಂಕುಗಳಲ್ಲಿ ಹಲವಾರು ಉಳಿತಾಯ ಖಾತೆಗಳನ್ನು ತೆರೆಯದಿರುವುದು ಇದಕ್ಕೆ ಸುಲಭದ ಉಪಾಯವಾಗಿದೆ. ಬಹು ಖಾತೆಗಳು ನಿಮ್ಮ ಹಣವನ್ನು ತಡೆಹಿಡಿಯುವ ಜೊತೆಗೆ ವಿವಿಧ ಬ್ಯಾಂಕುಗಳು ಬೇರೆ ಬೇರೆ ಎಂಎಬಿಗಳನ್ನು ನಿಗದಿಗೊಳಿಸಿರುವುದರಿಂದ ಪ್ರತೀ ಖಾತೆಯಲ್ಲಿಯೂ ಎಂಎಬಿಯನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ.
ಸಾಮಾನ್ಯವಾಗಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಎಂಎಬಿ ಖಾಸಗಿ ಬ್ಯಾಂಕುಗಳಿಗಿಂತ ಕಡಿಮೆಯಾಗಿರುತ್ತದೆ. ಅಲ್ಲದೆ ಎಂಎಬಿಯನ್ನು ಕಾಯ್ದುಕೊಳ್ಳದಿದ್ದರೆ ವಿಧಿಸಲಾಗುವ ದಂಡದ ಪ್ರಮಾಣ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೋಲಿಸಿದರೆ ಖಾಸಗಿ ಬ್ಯಾಂಕುಗಳಲ್ಲಿ ತುಂಬಾ ಹೆಚ್ಚಾಗಿದೆ.
ಉಳಿತಾಯ ಖಾತೆಯಲ್ಲಿನ ಶಿಲ್ಕನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದರೆ ಮಾಸಿಕ ಸರಾಸರಿ ಶಿಲ್ಕಿನ ಕೊರತೆಯುಂಟಾಗುವ ಸಾಧ್ಯತೆ ಕಂಡು ಬಂದರೆ ಅದನ್ನು ಸರಿದೂಗಿಸುವ ಮೂಲಕ ದಂಡದಿಂದ ಪಾರಾಗಲು ಸಾಧ್ಯವಾಗುತ್ತದೆ.
ಮಾಸಿಕ ಸರಾಸರಿ ಶಿಲ್ಕನ್ನು ಲೆಕ್ಕ ಹಾಕಲು ನಿಮ್ಮ ಬ್ಯಾಂಕು ಯಾವ ಎರಡು ದಿನಾಂಕಗಳನ್ನು ಪರಿಗಣಿಸುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ. ಬ್ಯಾಂಕುಗಳು ಎಂಎಬಿ ಲೆಕ್ಕಾಚಾರಕ್ಕಾಗಿ ಸಾಮಾನ್ಯವಾಗಿ ಪ್ರತೀ ತಿಂಗಳ ಮೊದಲ ಮತ್ತು ಕೊನೆಯ ದಿನಾಂಕಗಳನ್ನು ಮಾನದಂಡವಾಗಿ ಇಟ್ಟುಕೊಂಡಿರುತ್ತವೆ. ಕೆಲವು ಬ್ಯಾಂಕುಗಳು ಬೇರೆ ದಿನಾಂಕಗಳನ್ನು, ಉದಾಹರಣೆಗೆ ಈ ತಿಂಗಳ 10ನೇ ತಾರೀಕಿನಿಂದ ಮುಂದಿನ ತಿಂಗಳ 9ರವರೆಗಿನ ಅವಧಿಯನ್ನು ಪರಿಗಣಿಸಬಹುದು. ಹೀಗಾಗಿ ಇದನ್ನು ಸರಿಯಾಗಿ ತಿಳಿದುಕೊಂಡರೆ ಅನಗತ್ಯ ಗೊಂದಲಗಳಿಂದ ಪಾರಾಗಬಹುದು.
ಅಂದ ಹಾಗೆ ನಿಮ್ಮ ಉಳಿತಾಯ ಖಾತೆಯಲ್ಲಿ ಎಂಎಬಿ ಕಾಯ್ದುಕೊಳ್ಳುವುದರಿಂದ ಲಾಭವೂ ಇದೆ. ಅದು ಬಡ್ಡಿಯನ್ನು ಗಳಿಸುತ್ತದೆ ಮತ್ತು ಈ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಕಲಂ 80 ಟಿಟಿಎ ಅಡಿ 10,000 ರೂ.ವರೆಗೆ ತೆರಿಗೆ ಕಡಿತಕ್ಕೂ ಅರ್ಹವಾಗಿದೆ. ಇದು ಕಲಂ 80 ಸಿ ಅಡಿ ದೊರೆಯುವ ಕಡಿತಕ್ಕೆ ಅತಿರಿಕ್ತವಾಗಿದೆ ಮತ್ತು ಇಂತಹ ಬಡ್ಡಿ ಗಳಿಕೆಯ ಮೇಲೆ ಮೂಲದಲ್ಲಿಯೇ ತೆರಿಗೆ ಕಡಿತವಾಗುವುದಿಲ್ಲ. 10,000 ರೂ.ಗೆ ಮೇಲ್ಪಟ್ಟ ಬಡ್ಡಿಗೆ ಅನ್ವಯ ದರದಲ್ಲಿ ತೆರಿಗೆಯನ್ನು ವಿಧಿಸಲಾಗುತ್ತದೆ.