ಲೈಂಗಿಕ ಶಿಕ್ಷಣ

Update: 2017-12-02 13:49 GMT

ಭಾಗ 3

ಇಷ್ಟಾದರೂ ಲೈಂಗಿಕ ಶಿಕ್ಷಣದಿಂದ ಲೈಂಗಿಕಾಸಕ್ತಿಯ ವ್ಯಸನ, ಗೀಳು ಮತ್ತು ವಿಕೃತ ಪೂರೈಕೆಯು ಹೊರಟು ಹೋಗುತ್ತದೆ ಎಂಬುದಕ್ಕೇನೂ ಖಾತ್ರಿಯಿಲ್ಲ. ಆದರೆ ಸಹಜವಾದ ಮನಸ್ಕರು ದಾರಿತಪ್ಪದಂತೆ ಒಂದಷ್ಟು ಎಚ್ಚರಿಕೆಯನ್ನು ಹೊಂದಬಹುದು ಅಷ್ಟೇ. ಏಕೆಂದರೆ, ವ್ಯಸನ, ಗೀಳು ಮತ್ತು ವಿಕೃತಿ ಎಂಬುದು ಬರಿಯ ಲೈಂಗಿಕತೆಯಲ್ಲಿ ಮಾತ್ರವಲ್ಲ ಇರುವುದು. ಎಷ್ಟೋ ವಿಷಯಗಳಲ್ಲಿಯೂ ಇವುಗಳು ಢಾಳಾಗಿವೆ.

ಹದಿಹರೆಯದ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ

ಮುಂದುವರಿದಂತಹ ರಾಷ್ಟ್ರಗಳಲ್ಲಿ ಲೈಂಗಿಕತೆಯ ಬಗ್ಗೆ ನೀಡುವ ಪಾಠವು ಬಹಳ ಮುಖ್ಯವಾದ ಅಂಶವಾಗಿರುತ್ತದೆ. ಏಕೆಂದರೆ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಇದು ಎಚ್ಚರಿಕೆಯ ಪಾಠವೂ ಹೌದು. ಏಳನೆಯ ಮತ್ತು ಎಂಟನೆಯ ತರಗತಿಗಳಿಗೆ ಹೋಗುತ್ತಿರುವ ಗಂಡು ಮಕ್ಕಳಲ್ಲಿ ಮತ್ತು ಹೆಣ್ಣು ಮಕ್ಕಳಲ್ಲಿ ಹಾರ್ಮೋನುಗಳ ಬೆಳವಣಿಗೆ ಮತ್ತು ಜೈವಿಕ ವಿಕಾಸವಾಗುವ ಕಾರಣದಿಂದ ಅವರಲ್ಲಿ ಸಹಜವಾದಂತಹ ಭಾವಗಳು ಮತ್ತು ಆಲೋಚನೆಗಳು ಲೈಂಗಿಕವಾಗಿ ಉಂಟಾಗುತ್ತಿರುತ್ತವೆ. ಸಮಾಜದ ಮತ್ತು ಸಂಸ್ಕೃತಿಯ ಯಾವುದೇ ಕಟ್ಟುಪಾಡುಗಳಿದ್ದರೂ ವ್ಯಕ್ತಿಗತವಾಗಿ ಅವರಿಗೆ ಅವುಗಳೆಲ್ಲವನ್ನೂ ಮೀರುವಂತಹ ಸಾಧ್ಯತೆಗಳ ಜೊತೆಗೆ ಸೆಳೆತವೂ ಇರುತ್ತದೆ. ಆದ್ದರಿಂದ ಎಷ್ಟೆಷ್ಟೋ ಮುಂದುವರಿದ ರಾಷ್ಟ್ರಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳು ಗರ್ಭಧರಿಸುವಂತಹ ಸಂದರ್ಭಗಳು ಒದಗುವುದರಿಂದ ಮಕ್ಕಳಿಗೆ ಆಗಿಂದ್ದಾಗ್ಗೆ ಮುಕ್ತ ಸಮಾಲೋಚನೆಗಳನ್ನು ಏರ್ಪಡಿಸುತ್ತಾರೆ. ಹಾಗೆಯೇ ವ್ಯಕ್ತಿಗತವಾದ ಲೈಂಗಿಕ ಸೆಳೆತಗಳನ್ನು ಗಮನಿಸುವ ಶಿಕ್ಷಕರು ಅವರನ್ನು ಪ್ರತ್ಯೇಕವಾಗಿ ಗುಪ್ತ ಸಮಾಲೋಚನೆಗಳನ್ನೂ ಮಾಡಿ ಅವರು ಯಾವ ಹಂತಕ್ಕೆ ಮುಂದುವರಿದಿದ್ದಾರೆ ಅಥವಾ ಯಾವ ರೀತಿಯಲ್ಲಿ ತಮ್ಮ ಕಾಮನೆ ಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗುರುತಿಸುತ್ತಾರೆ. ಇದರಿಂದ ಮಕ್ಕಳು ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರುತ್ತಾರೆ. ಇದರ ಜೊತೆಗೆ ಶಿಕ್ಷಕರು ಸುರಕ್ಷಿತ ಲೈಂಗಿಕ ಕ್ರಿಯೆಗಳ ಬಗ್ಗೆಯೂ ಕೂಡ ಅರಿವನ್ನು ನೀಡುವ ಪರಿಪಾಠವಿದೆ. ಶೀಲ ಅಶ್ಲೀಲ ಅಥವಾ ಕನ್ಯತ್ವದ ಬಗ್ಗೆ ಮಡಿವಂತಿಕೆ ಇಲ್ಲದಿರುವಂತಹ ಆ ಪಾಶ್ಚಾತ್ಯ ದೇಶಗಳಲ್ಲಿ ಒಂದು ವೇಳೆ ವಿದ್ಯಾರ್ಥಿಗಳು ಲೈಂಗಿಕ ಕ್ರಿಯೆ ನಡೆಸಿದರೂ ಪ್ರಮಾದಗಳಿಗೆ ಒಳಗಾಗದಿರಲೆಂಬುದು ಒಂದು ಮುನ್ನೆಚ್ಚರಿಕೆ.

ಇದರ ಜೊತೆ ಜೊತೆಗೇ ಅಸುರಕ್ಷಿತವಾದ ಲೈಂಗಿಕ ಸಂಪರ್ಕಗಳಿಂದ ಉಂಟಾಗುವಂತಹ ರೋಗಗಳ ಬಗ್ಗೆಯೂ ಕೂಡಾ ಪಾಠಗಳನ್ನು ಮಾಡುತ್ತಾರೆ. ಲೈಂಗಿಕ ರೋಗಗಳು ಅಥವಾ ಗುಹ್ಯ ಕಾಯಿಲೆಗಳು ಉಂಟಾಗುವ ಕಾರಣಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಲೈಂಗಿಕ ಕ್ರಿಯೆಗೆತೊಡಗದೇ ಇರುವಂತೆ ನೋಡಿಕೊಳ್ಳುವ ಒಂದು ಎಚ್ಚರಿಕೆಯ ಕ್ರಮವಾಗಿದೆ. ಅದೇ ರೀತಿ ಲೈಂಗಿಕ ಕಾಯಿಲೆಗಳ ಪರಿಣಾಮಗಳು ಮತ್ತು ತೀವ್ರ ತರವಾದಂತಹ ದೈಹಿಕ ಅನನುಕೂಲಗಳ ಬಗ್ಗೆಯೂ ಹದಿಹರೆಯದ ವಿದ್ಯಾರ್ಥಿಗಳಿಗೆ ಬೋಧಿಸುವುದರಿಂದ ಅವರು ದಾರಿ ತಪ್ಪದೇ ಇರುವ ಹಾಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದು.

ಭಾರತೀಯ ಸಮಾಜದಲ್ಲಿ ಅಪ್ರಾಪ್ತ ವಯಸ್ಸಿನ ಲೈಂಗಿಕತೆ:

ನಮ್ಮಲ್ಲಿಯೂ ಹದಿಹರೆಯದ ಮಕ್ಕಳು ಲೈಂಗಿಕ ಕ್ರಿಯೆ ನಡೆಸಿ ಅಭಾಸಗಳನ್ನು ಮಾಡಿಕೊಂಡಿರುವ ವರದಿಗಳಿವೆ. ಆದರೆ ಬೆಳಕಿಗೆ ಬರದಿರುವಂತೆ ಪೋಷಕರು ಯತ್ನಿಸುತ್ತಾರೆ. ಇತ್ತೀಚೆಗೆ ಬೀದರ್‌ನಲ್ಲಿ ನಡೆದ ಅಪ್ರಾಪ್ತ ವಯಸ್ಕ ಮಕ್ಕಳಲ್ಲಿ ನಡೆದ ಲೈಂಗಿಕ ಕ್ರಿಯೆಯಿಂದಾಗಿ ವಿದ್ಯಾರ್ಥಿನಿ ಗರ್ಭ ಧರಿಸಿದಳು. ಅದರಿಂದಾಗಿ ಶಾಲೆಯಲ್ಲಿ ಆಕೆಯನ್ನು ಹೊರಗೆ ಕಳುಹಿಸಿದರು. ತಮ್ಮ ಶಾಲೆಗೆ ಕೆಟ್ಟ ಹೆಸರೆಂದು ಅವರ ಅಂಬೋಣ. ಈಗ ಆ ಹೆಣ್ಣು ಮಗು ಸರಕಾರದ ಬಾಲಿಕೆಯರ ಆಶ್ರಮದಲ್ಲಿದ್ದು ಹೆತ್ತಿದ್ದಾಳೆ ಮತ್ತು ತಾನು ಓದನ್ನು ಮುಂದುವರಿಸಬೇಕೆಂದು ಪರಿತಪಿಸುತ್ತಿದ್ದಾಳೆ.

ಪ್ರೌಢಶಾಲೆಯ ಮಕ್ಕಳಲ್ಲಿ ಇಷ್ಟೆಲ್ಲಾ ಲೈಂಗಿಕ ಕ್ರಿಯೆ ನಡೆಯ ಬಹುದೇನೋ ಎಂಬ ಅನುಮಾನವನ್ನು ಹೊಂದುವುದೇ ಪಾಪವೆಂದು ಆಲೋಚಿಸುವ ಭಾರತದಂತಹ ದೇಶದಲ್ಲಿ ಯಾವಾಗಲೂ ಮಕ್ಕಳು ಮಕ್ಕಳೇ ಎಂಬಂತಹ ಧೋರಣೆಯಲ್ಲಿ ಅದರಿಂದ ಹೊರತಾಗಿಯೇ ದೃಷ್ಟಿಸುವ ಪರಿಪಾಠ ನಮ್ಮ ಪೋಷಕರು ಮತ್ತು ಶಿಕ್ಷಕರಲ್ಲಿದೆ. ಬೇರೆ ಯಾರೋ ಮಕ್ಕಳು ಇಂತಹ ಲೈಂಗಿಕತೆಯ ಆಸಕ್ತಿಯ ಅತಿರೇಕಕ್ಕೆ ಹೋಗಬಹುದೇ ಹೊರತು ನಮ್ಮ ಮನೆಯ ಮಕ್ಕಳು ಬಹಳ ಸಭ್ಯರು ಅವರು ಎಂದಿಗೂ ಹಾಗೆ ಮಾಡಲಾರರು ಎಂಬಂತಹ ಆಲೋಚನೆಗಳನ್ನೇ ಮಾಡಿಕೊಂಡು, ಅಂತಹ ನಂಬಿಕೆಗೆ ನೀರೆರೆದುಕೊಂಡು, ಅದನ್ನು ಗಟ್ಟಿಗೊಳಿಸಿಕೊಳ್ಳುತ್ತಿರುತ್ತಾರೆ. ಆದರೆ, ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪೋಷಕರು ತಿಳಿಯದಂತೆ ಅನೇಕ ರೀತಿಗಳಲ್ಲಿ ತಮ್ಮ ಲೈಂಗಿಕ ಆಸಕ್ತಿಗಳನ್ನು ಈಡೇರಿಸಿಕೊಳ್ಳುತ್ತಿರುವ ಮತ್ತು ಈಡೇರಿಸಿಕೊಂಡಿರುವ ಅನೇಕಾನೇಕ ಉದಾಹರಣೆಗಳಿವೆ.

ಲೈಂಗಿಕತೆ ಜೈವಿಕ ಮಾತ್ರವಲ್ಲ, ಮಾನಸಿಕ ಕೂಡ:

ಲೈಂಗಿಕತೆ ಎಂಬುದು ಬರಿಯ ಜೈವಿಕ ಮತ್ತು ದೈಹಿಕ ಮಾತ್ರವಲ್ಲದೇ ಮಾನಸಿಕ ಮತ್ತು ಭಾವನಾತ್ಮಕವಾದ ವಿಷಯವೂ ಕೂಡ ಆಗಿರುವುದು. ಆದ್ದರಿಂದ ಬರಿಯ ತಿಳುವಳಿಕೆಯನ್ನು ನೀಡುವಂತಹ ಪಾಠಗಳನ್ನು ಮಾಡಿದರೆ ಸಾಲದು. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿರುವ ಅನೇಕ ಸಮಸ್ಯಾತ್ಮಕ ಅಂಶಗಳನ್ನು ಮಕ್ಕಳಲ್ಲಿ ಗುರುತಿಸುವ ಹೊಣೆಗಾರಿಕೆ ಪೋಷಕರದು ಮತ್ತು ಶಿಕ್ಷಕರದ್ದಾಗಿರುತ್ತದೆ. ಸಂತಾನೋತ್ಪತ್ತಿಯ ಪಾಠಗಳನ್ನು ತಿಳಿಯುವ ಮಕ್ಕಳಿಗೆ ಅದಕ್ಕಿಂತ ಮಿಗಿಲಾಗಿ ಲೈಂಗಿಕ ಶಿಕ್ಷಣವು ಸುಖಪ್ರಧಾನ ಲೈಂಗಿಕ ಚಟುವಟಿಕೆಗಳು ತಮ್ಮ ಮಾನಸಿಕ ಮತ್ತು ಭಾವನಾತ್ಮಕ ವಿಷಯಗಳಲ್ಲಿ ಎಷ್ಟರ ಮಟ್ಟಿಗೆ ಪಾತ್ರವನ್ನು ವಹಿಸಿ ತಮ್ಮ ಇತರ ಚಟುವಟಿಕೆಗಳಿಗೆ ತೊಡಕಾಗುತ್ತದೆ ಎಂಬ ಎಚ್ಚರಿಕೆಯ ಪಾಠ ಮುಖ್ಯವಾಗಿ ಬೇಕಾಗುತ್ತದೆ.

ಬೆಂಗಳೂರು, ಮುಂಬೈ, ದಿಲ್ಲಿ, ಚೆನ್ನೈ, ಹೈದರಾಬಾದ್‌ಗಳಂತಹ ಮಹಾನಗರಗಳಲ್ಲಿ ಮತ್ತು ಇತರ ಸಣ್ಣ ಪಟ್ಟಣಗಳಲ್ಲಿಯೂ ಕೂಡ ಇತ್ತೀಚೆಗೆ ಗಮನಿಸಬಹುದಾದಂತೆ ಪ್ರೌಢಶಾಲೆಯ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಿಚ್ಛೆಯಿಂದ ಈ ಬಗೆಯ ಲೈಂಗಿಕ ಸೆಳೆತಗಳಿಗೆ ಒಳಗಾಗುತ್ತಿರುವುದು. ಇನ್ನು ಕಿರಿಯ ವಿದ್ಯಾರ್ಥಿನಿಯರು ದೌರ್ಜನ್ಯಕ್ಕೆ ಒಳಗಾಗುವರು. ವಿದ್ಯಾರ್ಥಿನಿಯರು ತಮ್ಮತಮ್ಮಲ್ಲಿ ಮಾಡಿಕೊಳ್ಳುವ ಒಪ್ಪಂದಗಳಿಂದಾಗಿ ಒಬ್ಬರ ಗುಟ್ಟನ್ನು ಒಬ್ಬರು ಬಿಟ್ಟುಕೊಡುವುದಿಲ್ಲ. ಹಾಗೆ ಬಿಟ್ಟುಕೊಡುವುದು ದ್ರೋಹವೆಂದು ಬಗೆಯುತ್ತಾರೆ. ಆದ್ದರಿಂದ ತಮ್ಮ ಸ್ನೇಹಿತೆಯರಿಗೆ ಪ್ರೋತ್ಸಾಹಿಸುತ್ತಾರೆ. ಒಂದು ವೇಳೆ ಪ್ರೋತ್ಸಾಹಿಸದೇ ಹೋದರೂ ಭಾವನಾತ್ಮಕವಾದಂತಹ ವಿಶ್ವಾಸದ ಬದ್ಧತೆಯಿಂದ ಗುಟ್ಟುಗಳನ್ನು ಮುಚ್ಚಿಡುತ್ತಾರೆ. ಹಾಗೆಯೇ ತಮ್ಮ ಗೆಳತಿ ಮತ್ತು ಅವಳ ಪ್ರಿಯಕರನ ನಡುವೆ ಸಂದೇಶವಾಹಕರಾಗಿ ಕೆಲಸ ಮಾಡುತ್ತಾರೆ. ಅವರು ಪ್ರೇಮದ ಹೆಸರಿನಲ್ಲಿ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಿದ್ದರೆ ಅದನ್ನು ಮರೆಮಾಚುವ ಕೆಲಸವನ್ನು ಬಹಳ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುತ್ತಾರೆ.

ಈ ರೀತಿಯಲ್ಲಿ ಕೆಲವು ವಿಷಯಗಳು ತಲೆದೋರಿ ಸ್ನೇಹಿತೆಯರು ಒಟ್ಟೊಟ್ಟಿಗೆ ಆತ್ಮಹತ್ಯೆಗಳನ್ನು ಮಾಡಿಕೊಂಡಿರುವಂತಹ ಸುದ್ದಿಗಳು ಪದೇ ಪದೇ ಬರುತ್ತಿರುತ್ತವೆ. ಹಾಗಾಗಿ ಭಾರತದಂತಹ ದೇಶದಲ್ಲಿ ಲೈಂಗಿಕ ಶಿಕ್ಷಣವನ್ನು ನೀಡುವುದರಲ್ಲಿ ಇನೂ ್ನತಡ ಮಾಡಿದರೆ ಹಲವು ಯುವ ಸಂಪನ್ಮೂಲಗಳು ವ್ಯರ್ಥವಾಗಿ ಬಿಡುತ್ತವೆ. ಇನ್ನು ಹುಡುಗರದ್ದೂ ಕೂಡ ಇದೇ ಕತೆ. ಆದರೆ ಅವರು ಗರ್ಭಧರಿಸುವಂತಹ ತೊಂದರೆಗೆ ಒಳಗಾಗುವುದಿಲ್ಲವಾದ್ದರಿಂದ ಆತ್ಮಹತ್ಯೆಯಂತಹ ವಿಕೋಪಗಳಿಗೆ ಮುಖ ಮಾಡುವುದಿಲ್ಲ. ಆದರೆ ಅವರಲ್ಲಿಯೂ ಪರಸ್ಪರ ಲೈಂಗಿಕಾಸಕ್ತಿಯ ಗುಟ್ಟುಗಳನ್ನು ಕಾಯ್ದುಕೊಳ್ಳುವಂತಹ ಒಡಂಬಡಿಕೆಗಳು ಕಡಿಮೆಯೇನಲ್ಲ. ಅದರಲ್ಲಿಯೂ ತಾನು ಯಾವುದೋ ಹುಡುಗಿಯ ಜೊತೆಗೆ ಲೈಂಗಿಕವಾಗಿ ವರ್ತಿಸಿದೆ ಎಂದು ಬಂದು ಹೇಳಿಕೊಳ್ಳುವುದರಲ್ಲಿ ವಿಶೇಷವಾದ ಜಂಭ ಮತ್ತು ಆನಂದವಿರುತ್ತದೆ. ಎಷ್ಟೋ ಬಾರಿ ಅದು ಕಲ್ಪನೆಯದ್ದಾಗಿರುತ್ತದೆ. ಅಥವಾ ಸಣ್ಣ ಪ್ರಮಾಣದ ಮುಟ್ಟುವಿಕೆಯನ್ನು ಕೂಡಾ ಬಹುದೊಡ್ಡದಾಗಿ ಏನೇನೋ ನಡೆಸಿಯೇ ಬಿಟ್ಟೆನೆಂದು ಬಡಾಯಿ ಕೊಚ್ಚಿಕೊಂಡು ತನ್ನ ಸಹಪಾಠಿ ಅಸೂಯೆಯಿಂದ ಕರಬುವಂತೆ ಮಾಡುತ್ತಾರೆ. ಇದನ್ನು ನಿಜವೆಂದೇ ನಂಬಿದ ಕೇಳುಗ ಮಿತ್ರ ತಾನೂ ಅಂತಹದ್ದೇ ಅವಕಾಶಕ್ಕಾಗಿ ಹಪಹಪಿಸುವುದು, ಪರಿತಪಿಸುವುದು, ಯತ್ನಿಸುವುದು; ಇವೆಲ್ಲಾ ಹೊಸತೇನೂ ಅಲ್ಲ. ಅಪರೂಪವೂ ಅಲ್ಲ. ಈ ಎಲ್ಲಾ ಕಾರಣಗಳಿಂದಲೇ ಲೈಂಗಿಕ ಶಿಕ್ಷಣ ಮಹತ್ವದ್ದು ಎನ್ನುವುದು. ಲೈಂಗಿಕ ಶಿಕ್ಷಣವು ಎಳೆಯ ವಯಸ್ಸಿಂದಲೇ ಹಂತಹಂತವಾಗಿ ನೀಡಿದ್ದೇ ಆಗಿದ್ದರೆ ಮಕ್ಕಳು ಅದನ್ನೊಂದು ವಿಶೇಷ ಕೌತುಕವಾಗಿ ನೋಡುವುದಿಲ್ಲ. ಹಾಗೆ ನೋಡದಿರುವಂತೆ ಮತ್ತು ಆಸಕ್ತಿಯನ್ನು ತಪ್ಪಾಗಿ ಈಡೇರಿಸಿಕೊಳ್ಳದಿರುವಂತೆ ನೋಡಿಕೊಳ್ಳುವುದೇ ಲೈಂಗಿಕ ಶಿಕ್ಷಣದ ಒಂದು ಮುಖ್ಯ ಗುರಿಯೂ ಆಗಿರುತ್ತದೆ.

ಸಾಮಾಜಿಕ ಧೋರಣೆಗಳ ಸಮಸ್ಯೆ:

ಲೈಂಗಿಕ ಶಿಕ್ಷಣದ ಅಗತ್ಯದ ಬಗ್ಗೆ ಅದೆಷ್ಟೇ ದೊಡ್ಡ ದನಿಯಲ್ಲಿ ಚರ್ಚೆಗಳಾದರೂ ಭಾರತದಂತಹ ದೇಶದಲ್ಲಿ ಅನುಷ್ಠಾನಕ್ಕೆ ತರಲು ಇರುವ ದೊಡ್ಡತೊಡಕೆಂದರೆ ಪೋಷಕರು ಮತ್ತು ಶಿಕ್ಷಕರ ಪೂರ್ವಾಗ್ರಹ ಧೋರಣೆಗಳು. ಎಷ್ಟೆಷ್ಟೋ ಅವೈಜ್ಞಾನಿಕವಾದಂತಹ ಮತ್ತು ಅವೈಚಾರಿಕವಾದಂತಹ ನಿಲುವುಗಳನ್ನು ಈ ಲೈಂಗಿಕತೆಯ ಬಗ್ಗೆ ಹೊಂದಿರುವುದು. ಸಮಾಜದ ಮುಂದೆ ಪ್ರಕಟಗೊಳಿಸುವಾಗ ಪಾವಿತ್ರತೆಯನ್ನು ಬಯಸುವ ಬಹು ಸಂಖ್ಯೆಯ ವಯಸ್ಕರು ತಮ್ಮ ವ್ಯಕ್ತಿಗತ ಜೀವನದಲ್ಲಿ ಅದೇ ಪಾವಿತ್ರತೆಯ ಬಗ್ಗೆ ಪ್ರಾಮಾಣಿಕವಾದಂತಹ ಧೋರಣೆಯನ್ನು ಹೊಂದಿರದೇ ಇದ್ದು, ತಮ್ಮ ಸುಖಕ್ಕೆ ಅವಕಾಶವಾದಿಗಳಾಗಿರುತ್ತಾರೆ. ಇಂತಹ ತಮ್ಮದೇ ಧೋರಣೆಗಳಿಂದ ಅಪರಾಧ ಪ್ರಜ್ಞೆ ಕೂಡಾ ಅವರಿಗೆ ಲೈಂಗಿಕತೆಯ ಬಗ್ಗೆ ಮುಕ್ತ ಧೋರಣೆ ಮತ್ತು ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಾನು ಕಳ್ಳ ಪರರ ನಂಬದಂತಹ ಸ್ಥಿತಿ ಅವರದು. ತಾನು ಬಹಿರಂಗವಾಗಿ ಲೈಂಗಿಕತೆಯ ಬಗ್ಗೆ ಮುಕ್ತವಾಗಿಬಿಟ್ಟರೆ ತಮ್ಮ ಕುಟುಂಬದ ಸದಸ್ಯರೂ ಕೂಡ ಲೈಂಗಿಕವಾಗಿ ಇತರರೊಂದಿಗೆ ಮುಕ್ತವಾಗಿಟ್ಟರೆ ಎಂಬ ಭಯದ ಧೋರಣೆ ಬಹುಪಾಲು. ಅಲ್ಲದೇ ತಮ್ಮ ಮನೆಯವರ ಸಂಬಂಧ ಮತ್ತು ಲೈಂಗಿಕ ಪಾವಿತ್ರ್ಯತೆಗಳ ಬಗ್ಗೆ ಇತರರು ಅನುಮಾನಿಸಬಹುದೆಂಬ ಭಯವೂ ಕೂಡ ಹೌದು. ಹೀಗಾಗಿ ಲೈಂಗಿಕಾಸಕ್ತಿಯು ಆಸೆ ಮತ್ತು ಭಯಗಳ ನಡುವೆ ಅದರ ನೈಸರ್ಗಿಕ ಸ್ವರೂಪವು ಅಸಹಜವಾಗಿಬಿಟ್ಟಿದೆ. ಮಕ್ಕಳು ಇಂತಹ ಅಸಹಜತೆಗಳಿಂದ ಬಿಡುಗಡೆಗೊಳ್ಳುವುದಕ್ಕೆ ಒಂದೇ ದಾರಿ ಎಂದರೆ ಶಾಲೆಗೆ ಹೋಗುವ ಮುನ್ನದ ವಯಸ್ಸಿನಿಂದಲೇ ಲೈಂಗಿಕತೆಯು ಒಂದು ಮುಕ್ತ ತಿಳುವಳಿಕೆಯಾಗುವುದು. ಲೈಂಗಿಕಾಸಕ್ತಿಯು ಎಷ್ಟು ಜೈವಿಕವೋ ಅದಕ್ಕಿಂತ ಬಹುಪಾಲು ಮಾನಸಿಕವೇ ಆಗಿರುತ್ತದೆ. ಮಾನಸಿಕವಾದಂತಹ ಆಲೋಚನೆಗಳು ಭಾವನೆಗಳಾಗಿಯೂ ಮಾರ್ಪಟ್ಟು ನಂತರ ಅದು ವ್ಯಕ್ತಿತ್ವದಲ್ಲಿಯೇ ಗುಪ್ತಗಾಮಿನಿಯಾಗಿ ಒಂದು ಸ್ವಭಾವವಾಗಿಯೇ ಪ್ರವಹಿಸುತ್ತಿರುತ್ತದೆ. ಹಾಗಾಗಿ ಲೈಂಗಿಕತೆಯು ಸ್ವಭಾವವೂ ಕೂಡ. ಲೈಂಗಿಕ ಶಿಕ್ಷಣದಲ್ಲಿನ ಮುಖ್ಯ ತೊಡಕಾಗಿರುವುದೇ ಹಿರಿಯರ ಮತ್ತು ಸಮಾಜದ ಸಾಂಸ್ಕೃತಿಕ ಧೋರಣೆ.

ಲೈಂಗಿಕಾಸಕ್ತಿಯ ವ್ಯಸನದ ಗುಪ್ತಗಾಮಿನಿ

ಮಕ್ಕಳಲ್ಲಿ ಮೂಡುವ ಲೈಂಗಿಕಾಸಕ್ತಿಗಳನ್ನು ಗಮನಿಸದೇ ಹೋದಲ್ಲಿ ಅದು ವಯಸ್ಕರಾಗುತ್ತಿದ್ದಂತೆ ಗೀಳಾಗಿ ಪರಿಣಮಿಸುವುದು. ಇದರ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಅತ್ಯಂತ ಎಚ್ಚರವಹಿಸಬೇಕು. ಯಾರೋ ಒಬ್ಬ ವ್ಯಕ್ತಿ ಯಾರದೋ ಮನೆಯಲ್ಲಿ ಒಣಗಿ ಹಾಕಿರುವಂತಹ ಒಳ ಉಡುಪುಗಳನ್ನು ಮೂಸುವಂತಹ, ಅವುಗಳನ್ನು ಕದಿಯುವಂತಹ, ಪಾರ್ಕ್‌ಗಳಲ್ಲಿ ನಡೆಯುವ ಯಾರದೋ ಲೈಂಗಿಕ ಪ್ರಚೋದಕ ಸಲ್ಲಾಪಗಳನ್ನು ನೋಡುತ್ತಾ, ಅವುಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಾ, ಅವುಗಳನ್ನು ಹಂಚಿಕೊಳ್ಳುತ್ತಾ, ಪದೇ ಪದೇ ಲೈಂಗಿಕ ಕ್ರಿಯೆಯ ಕೇಂದ್ರಿತವಾದಂತಹ ಪದಗಳಲ್ಲಿ ಬೈಯುವುದು, ನಿಂದಿಸುವುದು, ಅಂತಹ ವಿಷಯಗಳನ್ನು ಚರ್ಚೆ ಮಾಡುತ್ತಲೇ ಇರುವಂತಹ ವಯಸ್ಕರ ಇಂದಿನ ನಡವಳಿಕೆಗಳು ಅವರ ಬಾಲ್ಯದಲ್ಲಿ ಮತ್ತು ಕಿಶೋರಾವಸ್ಥೆಯಲ್ಲಿ ಮೂಡಿರುವಂತಹ ಲೈಂಗಿಕಾಸಕ್ತಿಯ ಒತ್ತಡ ಅಥವಾ ಸಾಕ್ಷ್ಯಗಳೇ ಆಗಿರುತ್ತವೆ. ಅವುಗಳು ವಯಸ್ಕರಾದಾಗ ಒಮ್ಮಿಂದೊಮ್ಮೆಲೇ ಬಂದು ಬಿಡುವುದಿಲ್ಲ. ಅತ್ಯಾಚಾರಿಯಾಗಲಿ, ವಿಕೃತಕಾಮಿಯಾಗಲಿ ಒಮ್ಮಿಂದೊಮ್ಮೆಲೇ ಆಗಿಬಿಡುವುದಿಲ್ಲ. ಅದು ಅವರಲ್ಲಿಯೇ ಎಷ್ಟೋ ಕಾಲದಿಂದ ಗುಪ್ತವಾಗಿ ಪೋಷಿತವಾಗಿರುವಂತ ಅಂಶಗಳೇ ಆಗಿರುತ್ತವೆ. ನಿರಂತರ ಪ್ರಕ್ರಿಯೆಯ ಪ್ರತಿಫಲ ಎಂದೋ ಒಂದು ದಿನ ಕಾಣಿಸಿಕೊಳ್ಳುತ್ತದೆ ಅಷ್ಟೇ.

ಒಟ್ಟಾರೆ ನೇರವಾಗಿ ಇಲ್ಲಿ ಹೇಳಲಿರುವುದೇನೆಂದರೆ, ನಮ್ಮ ಮುಂದಿನ ಪೀಳಿಗೆಯ ಸಮಾಜವು ಅತ್ಯಾಚಾರಿ, ವಿಕೃತಕಾಮಿ, ಲೈಂಗಿಕವ್ಯಸನಿಗಳನ್ನು ನೋಡಬಾರದೆಂದರೆ, ಲೈಂಗಿಕತೆ ಎಂಬುದು ಒಂದು ಸಹಜವಾದ ತಿಳುವಳಿಕೆಯಾಗಿ ಮಕ್ಕಳಿಗೆ ಈಗಿಂದಲೇ ಶಿಕ್ಷಣದ ರೂಪದಲ್ಲಿ ದೊರಕಬೇಕು. ಅದು ಮನೆಯಲ್ಲಿ ಪರೋಕ್ಷವಾಗಿಯೂ, ಶಾಲೆಯಲ್ಲಿ ಪ್ರತ್ಯಕ್ಷವಾಗಿಯೂ ವಿವಿಧ ಹಂತಗಳಲ್ಲಿ ರೂಪುಗೊಳ್ಳಬೇಕು. ಸುರಕ್ಷಿತ ಲೈಂಗಿಕತೆಯ ಬಗ್ಗೆ ತಿಳುವಳಿಕೆ ಬಂತೆಂದರೆ ಮಕ್ಕಳು ಸುರಕ್ಷಿತವಾಗಿ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿರುತ್ತದೆ. ಆದ್ದರಿಂದಲೇ ಲೈಂಗಿಕತೆ, ಸಂತಾನೋತ್ಪತ್ತಿ ವಿಷಯಕ್ಕೂ ಆಚೆಗೆ ಅರಿವನ್ನು ವಿಸ್ತರಿಸಬೇಕಾಗುತ್ತದೆ. ಸರಳಗೊಳಿಸಬೇಕಾಗುತ್ತದೆ.

ಲೈಂಗಿಕ ಶಿಕ್ಷಣ ಅಂತಿಮ ಪರಿಹಾರವಲ್ಲ

ಇಷ್ಟಾದರೂ ಲೈಂಗಿಕ ಶಿಕ್ಷಣದಿಂದ ಲೈಂಗಿಕಾಸಕ್ತಿಯ ವ್ಯಸನ, ಗೀಳು ಮತ್ತು ವಿಕೃತ ಪೂರೈಕೆಯು ಹೊರಟು ಹೋಗುತ್ತದೆ ಎಂಬುದಕ್ಕೇನೂ ಖಾತ್ರಿಯಿಲ್ಲ. ಆದರೆ ಸಹಜವಾದ ಮನಸ್ಕರು ದಾರಿತಪ್ಪದಂತೆ ಒಂದಷ್ಟು ಎಚ್ಚರಿಕೆಯನ್ನು ಹೊಂದಬಹುದು ಅಷ್ಟೇ. ಏಕೆಂದರೆ, ವ್ಯಸನ, ಗೀಳು ಮತ್ತು ವಿಕೃತಿ ಎಂಬುದು ಬರಿಯ ಲೈಂಗಿಕತೆಯಲ್ಲಿ ಮಾತ್ರವಲ್ಲ ಇರುವುದು. ಎಷ್ಟೋ ವಿಷಯಗಳಲ್ಲಿಯೂ ಇವುಗಳು ಢಾಳಾಗಿವೆ. ಮೂಲ ಸ್ವಭಾವದಲ್ಲಿಯೇ ವಿಕೃತವಲ್ಲದ ಪ್ರಜ್ಞೆಯನ್ನು ಹೊಂದಿದ್ದೇ ಆದರೆ ಅದು ಇತರ ವರ್ತನೆ ಮತ್ತು ಸ್ವಭಾವಗಳಲ್ಲಿ ಪ್ರತಿಫಲಿಸುವಂತೆ ಲೈಂಗಿಕತೆಯಲ್ಲಿಯೂ ಪ್ರತಿಫಲಿಸುತ್ತದೆ. ಹಾಗೆಯೇ ಮುಕ್ತ ಲೈಂಗಿಕತೆಗೂ ಮತ್ತು ವಿಕೃತವಾದ ಲೈಂಗಿಕತೆಗೂ ಬಹಳ ವ್ಯತ್ಯಾಸವಿದೆ. ಒಟ್ಟಾರೆ ಮಗುವಿನ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಎಚ್ಚರಿಕೆಯನ್ನು ತೆಗೆದುಕೊಳ್ಳುವಾಗ ಲೈಂಗಿಕ ಶಿಕ್ಷಣದ ಬಗ್ಗೆಯೂ ಒಂದು ಹಂತದ ಗಮನವನ್ನು ಪ್ರಾಮಾಣಿಕವಾಗಿ ನೀಡಿದ್ದೇ ಆದರೆ ಅವರನ್ನು ತಪ್ಪುದಾರಿಗೆಳೆಯುವ ಸೆಳೆತಗಳಿಂದ ರಕ್ಷಿಸಬಹುದು ಅಷ್ಟೇ.

ಕಲಿಯುವ ವಿಷಯಗಳಲ್ಲಿ ಮಕ್ಕಳು ಹೇಗೆ ಒಂದೇ ರೀತಿಯಲ್ಲಿ ಇರುವುದಿಲ್ಲವೋ ಹಾಗೆಯೇ ಲೈಂಗಿಕ ಮನೋಭಾವ ಹೊಂದಿರುವ ವಿಷಯದಲ್ಲಿಯೂ ಎಲ್ಲಾ ಮಕ್ಕಳೂ ಏಕ ಪ್ರಕಾರವಾಗೇನೂ ಇರುವುದಿಲ್ಲ. ಆದ್ದರಿಂದ ಪೋಷಕರುತಮ್ಮ ಮಗುವಿನ ಒಲವು, ನಿಲುವು ಮತ್ತು ಧೋರಣೆಗಳನ್ನು ಹತ್ತಿರದಿಂದ ಮತ್ತು ಆಪ್ತವಾಗಿ ಗಮನಿಸಿಕೊಂಡು ವ್ಯಕ್ತಿಗತವಾದ ಸಮಾಲೋಚನೆಗಳಿಗೆ ದಾರಿ ಮಾಡಿಕೊಡಬೇಕು. ಲೈಂಗಿಕಾಸಕ್ತಿಯು ವ್ಯಕ್ತಿಯ ವ್ಯಕ್ತಿಗತವಾದ ಮಾನಸಿಕ ಸ್ಥಿತಿಯನ್ನೇ ನೇರವಾಗಿ ಅವಲಂಬಿಸಿರುವುದು.

ಒಟ್ಟಾರೆ ಮಕ್ಕಳ ದೇಹದ ಅಂಗಗಳ ಬಗ್ಗೆ ರಹಸ್ಯ ಎಂಬಂತೆ ವರ್ತಿಸದ ಪೋಷಕರು ಮಕ್ಕಳ ಲೈಂಗಿಕ ವಿಷಯಗಳನ್ನೂ ಕೂಡ ಗಮನಿಸಬಲ್ಲವರಾಗಿರುತ್ತಾರೆ. ರಹಸ್ಯಎಂಬುದೇ ಲೈಂಗಿಕ ಅವಘಡಗಳಿಗೆ ಕಾರಣ. ತಮ್ಮ ಅಂಗಗಳ ವಿಷಯಗಳನ್ನು ಗುಪ್ತವಾಗಿಸಿದಷ್ಟೂ ಅದರ ಬಗ್ಗೆ ಮಾತಾಡಲು ಭಯಪಡಿಸಿದಷ್ಟೂ ಆ ವಿಷಯಗಳು ಬೇರೆಲ್ಲೋ ಹೊರ ಬರಲು ಹಾತೊರೆಯುತ್ತಿರುತ್ತವೆ.

ಹಲವಾರು ಶಿಕ್ಷಣ ತಜ್ಞರು ಬೆಳೆಯುತ್ತಿರುವ ಮಕ್ಕಳಿಗೆ ಲೈಂಗಿಕತೆಯ ಯಾವ ಪಾಠಗಳನ್ನು ಹೇಗೆ ಮಾಡಬೇಕೆಂದು ರೂಪಿಸಿದ್ದಾರೆ. ಅದರ ಗಮ್ಯವೇನೆಂದರೆ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು, ಲೈಂಗಿಕಾಸಕ್ತಿಯ ವ್ಯಸನಗಳಿಗೆ ಬಲಿಯಾಗದಿರುವುದು, ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿರುವಂತೆ ನೋಡಿಕೊಳ್ಳುವುದು, ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ ಅಥವಾ ಲೈಂಗಿಕ ರೋಗಕ್ಕೆ ತುತ್ತಾಗದಿರುವುದು, ಸಹಜ ಹಾಗೂ ನೈಸರ್ಗಿಕ ಲೈಂಗಿಕ ಕ್ರಿಯೆಗಳು ವಿಕೃತವಾಗಿ ಮನೋರೋಗಿಯಾಗದಿರುವಂತೆ ನೋಡಿಕೊಳ್ಳುವುದು ಮತ್ತು ಕೊನೆಗೆ ವಯಸ್ಕರಾದಾಗ ಆರೋಗ್ಯಕರವಾದ ಹಾಗೂ ಸುರಕ್ಷಿತವಾದಂತಹ ಲೈಂಗಿಕತೆಯನ್ನು ಹೊಂದುವುದು. ಇದಕ್ಕೆ ಅವರು ರೂಪಿಸಿರುವ ಅಂಶಗಳನ್ನು ನಾವು ಖಂಡಿತವಾಗಿ ತಿಳಿದುಕೊಳ್ಳಲೇ ಬೇಕಿದೆ. ಅದರೊಂದಿಗೆ ಮುಂದಿನ ವಾರ ಲೈಂಗಿಕ ಶಿಕ್ಷಣದ ಲೇಖನ ಮುಗಿಯುವುದು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News