ಚಿಲ್ಲರೆ ಪವಾಡಗಳ ಮೂಲಕ ವಂಚನೆ ಜಾಲ!

Update: 2017-12-02 17:44 GMT

ಭಾಗ 22

ಇಂತಹದೊಂದು ಜಾಲ ಒಂದು ಕಾಲದಲ್ಲಿ ಹಲವು ಕಡೆಗಳಲ್ಲಿ ಬೀಡು ಬಿಟ್ಟಿತ್ತು. ಉತ್ತರ ಕರ್ನಾಟಕದ ಬಿಜಾಪುರ, ಬೆಳಗಾವಿಯಲ್ಲಿ ಸುಣ್ಣವನ್ನು ಕೈಗೆ ಹಚ್ಚಿ ಕೆಂಪು ಬಣ್ಣ ಬರಿಸಿ ಅದು ಭೂತ ಹಿಡಿದ ಪುರಾವೆ ಎಂದು ಜನರನ್ನು ವಂಚಿಸುತ್ತಿದ್ದ ಪ್ರಸಂಗಗಳ ಬಗ್ಗೆ ನನಗೆ ದೂರುಗಳು ಬಂದಿದ್ದವು.

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ನೌಕರರ ತರಬೇತಿ ಸಂಸ್ಥೆ ಒಂದು ಕಾರ್ಯಕ್ರಮದಲ್ಲಿ ಈ ಬಗ್ಗೆ ನಾನು ವಿವರಿ ಸುತ್ತಿದ್ದಾಗ, ಎದುರು ಸಾಲಿನಲ್ಲಿ ಕುಳಿತಿದ್ದ ಯುವತಿ ಯೊಬ್ಬಳು ಜೋರಾಗಿ ನಗಲು ಆರಂಭಿಸಿದಳು. ಕಾರಣ ಕೇಳಿದರೆ ಆಕೆ ತನ್ನ ನಗುವನ್ನಷ್ಟೇ ಮುಂದುವರಿಸಿದಳು. ಸ್ವಲ್ಪ ಸಮಯದ ಬಳಿಕ ಆಕೆಯನ್ನು ವಿಚಾರಿಸಿದರೆ, ಆಕೆ ವಿಚಿತ್ರವಾದ ಸಂಗತಿಯನ್ನು ನನ್ನೆದುರು ಇರಿಸಿದ್ದಳು. ಆಕೆಯ ಮನೆಗೆ ಬೈರಾಗಿಯೊಬ್ಬ ಬಂದಿದ್ದ. ಕೈ ಲಕ್ಷಣ ನೋಡುತ್ತೇನೆಂದು ಹೇಳಿ ಆಕೆಯ ಕೈ ರೇಖೆಗಳನ್ನು ಪರಿಶೀಲಿಸಿ ನಿನ್ನ ಗಂಡನಿಗೆ ಆಪತ್ತಿದೆ ಎಂದು ಹೇಳಿ ಬಿಟ್ಟನಂತೆ. ಈ ಮಾತು ಕೇಳಿ ಆಕೆಗೆ ಗಾಬರಿಯಾದರೂ ಆಕೆ ಮಾತ್ರ ನಂಬಲಿಲ್ಲ.

ಯುವತಿಯ ಮುಖವನ್ನು ಗಮನಿಸಿದ ಆತ ನಿನಗೆ ನಂಬಿಕೆ ಯಾಗದಿದ್ದರೆ ನಾನು ನಂಬಿಸುತ್ತೇನೆ ಎಂದು ಹೇಳಿ ಕೈಗೆ ಸುಣ್ಣ ಹಚ್ಚು ಎಂದನಂತೆ. ಅವಳು ತನ್ನ ಕೈಗಳಿಗೆ ಸುಣ್ಣ ಹಚ್ಚಿದಾಗ ಅದು ಕೆಂಪು ಬಣ್ಣಕ್ಕೆ ತಿರುಗಿತ್ತು! ಆಗ ನಿಜವಾಗಿಯೂ ಆಕೆ ಬೈರಾಗಿ ಮಾತು ನಂಬಿದಳು. ಕೇವಲ ನಂಬಿದರೆ ಸಾಕೆ, ಬಂದಿರುವ ಆಪತ್ತು ತಪ್ಪಿಸಲು ಪರಿಹಾರವನ್ನೂ ಕೇಳಿಬಿಟ್ಟಳು. ಬೈರಾಗಿ 500 ರೂ. ನೀಡಿದರೆ, ಶನಿ ದೇವರಿಗೆ ಪೂಜೆ ಮಾಡಿಸಿ ಆಪತ್ತನ್ನು ತಡೆಯುವುದಾಗಿ ಹೇಳಿದ. ಆಕೆ ಅದಕ್ಕೊಪ್ಪಿ ಹಣ ಕೊಟ್ಟು ಪೂಜೆಯನ್ನೂ ಮಾಡಿಸಿದ್ದಳು. ಈ ವಿಚಾರವನ್ನು ಆಕೆ ಹೇಳಿಕೊಂಡಾಗ, ಬೈರಾಗಿ ಮಾಡಿದ ಪ್ರಯೋಗದ ಬಗ್ಗೆ ಆಕೆಗೆ ವಿವರಿಸಿದೆ. ಆಕೆಗೆ ಆಶ್ಚರ್ಯ ಮಾತ್ರವಲ್ಲದೇ ಕಣ್ಣಲ್ಲಿ ನೀರೇ ಬಂದು ಬಿಟ್ಟಿತ್ತು.

ಆ ಬೈರಾಗಿ ತನ್ನ ಬೆರಳಿಗೆ ಫಿನೋಪ್ಪಲಿನ್ ಎಂಬ ರಾಸಾಯನಿಕ ಹುಡಿ ಹಚ್ಚಿಕೊಂಡಿದ್ದ. ಈ ರಾಸಾಯನಿಕ ಮಾರುಕಟ್ಟೆಯಲ್ಲಿ ಚಿಲ್ಲರೆ ಹಣ ದಲ್ಲಿ ಸಿಗುವಂಥದ್ದು. ಈ ರಾಸಾಯನಿಕ ಭೇದಿ ಮಾತ್ರೆಗಳಲ್ಲೂ ಇರುತ್ತದೆ. ಆತ ಇಂತಹ ದೊಂದು ಮಾತ್ರೆಯನ್ನು ಪುಡಿ ಮಾಡಿ ತನ್ನ ಕೈ ಬೆರಳುಗಳಿಗೆ ಹಚ್ಚಿಕೊಂಡಿದ್ದ. ಆಕೆಯ ಕೈ ಲಕ್ಷಣ ನೋಡುವ ಸಂದರ್ಭ ಆ ಹುಡಿ ಆಕೆಯ ಕೈಯನ್ನು ತಾಗಿತ್ತು. ಅದಕ್ಕೆ ಸುಣ್ಣ ತಾಗಿದಾಗ ರಾಸಾಯನಿಕ ಪ್ರಕ್ರಿಯೆ ಮೂಲಕ ಬಣ್ಣ ಬದಲಾಗಿ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಯುವತಿಯ ವಿಷಯದಲ್ಲಿ ಆಗಿದ್ದು ಇಷ್ಟೇ. ಬಹುತೇಕವಾಗಿ ಯುವತಿಯರಿಗೆ ತಮಗೇನಾದರೂ ದೋಷ ಇದೆ ಎಂದಾಗ ಅವರಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಪತಿ ಅಥವಾ ಮನೆಯವರಿಗೆ ದೋಷದ ಬಗ್ಗೆ ಹೇಳಿದರೆ ಅವರು ಆತಂಕಕ್ಕೀಡಾಗುತ್ತಾರೆ. ಇಂತಹ ನಕಲಿ ಬೈರಾಗಿಗಳು, ವಂಚನೆ ಮಾಡುವವರು ಮಾಡುವುದು ಇದನ್ನೇ.

ನಾಣ್ಯಗಳಿಂದಲೂ ಸೃಷ್ಟಿಯಾಗುತ್ತೆ ವಿಭೂತಿ!

ಇದೊಂದು ಇನ್ನೊಂದು ರೀತಿಯ ವಿಚಿತ್ರ. ನನ್ನಲ್ಲಿ ತರಬೇತಿ ಪಡೆಯಲು ಬಂದಿದ್ದ ಯುವಕನೊಬ್ಬ ತನಗೆ ಆದ ಮೋಸವನ್ನು ವಿವರಿಸ್ದಿ. ಕೆಲ ವರ್ಷಗಳ ಹಿಂದೆ ಆತ ನಿರುದ್ಯೋಗಿಯಾಗಿದ್ದ ವೇಳೆ ಆತನ ಮಿತ್ರನೊಬ್ಬ ಬಾಬಾನೊಬ್ಬನ ಬಳಿ ಆತನನ್ನು ಕರೆದೊಯ್ದಿದ್ದ. ಬಾಬಾನನ್ನು ಭಕ್ತಿಯಿಂದ ಪೂಜಿಸಿದರೆ, ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಎಂದು ಆತ ಹೇಳಿದ್ದ. ಮಿತ್ರನ ಮಾತು ಕೇಳಿ ಈ ಯುವಕ ಬಾಬಾನ ಬಳಿ ಹೋಗಿದ್ದ. ಆತ ಇವನಲ್ಲಿ ಒಂದು ನಾಣ್ಯ ಕೇಳಿದನಂತೆ. 50 ಪೈಸೆಯ ನಾಣ್ಯವನ್ನು ಬಾಬಾನಿಗೆ ಕೊಟ್ಟರೆ ಅದನ್ನು ಬೇಡವೆಂದ ಬಾಬಾ, ತನಗೆ 10 ಅಥವಾ 20 ಪೈಸೆ ನಾಣ್ಯವೇ ಬೇಕೆಂದು ಕೇಳಿ ಪಡೆದ. ಆ ಬಾಬಾ ನಾಣ್ಯವನ್ನು ತನ್ನ ಕೈಯಲ್ಲಿ ಹಿಡಿದು ಮಂತ್ರ ಪಠಿಸಿದ. ನಂತರ ಅದನ್ನು ನೀರಿನಲ್ಲಿ ತೊಳದೆಉ ಟವಲಿನಿಂದ ಒರಸಿ, ಆತ ಕೈಯ್ಯಲ್ಲಿ ಕೊಟ್ಟು ಇದನ್ನು ಹಿಡಿದು ಹತ್ತಿರದ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಿ ಬರು ವಂತೆ ಬಾಬಾ ಸೂಚಿಸಿದನಂತೆ. ಆತ ಪ್ರದಕ್ಷಿಣೆ ಮುಗಿಸಿ ಕೈ ಬಿಡಿಸುವಂತೆ ಬಾಬಾ ಹೇಳಿದಾಗ, ಕೈಯ್ಯಲ್ಲಿ ನಾಣ್ಯದ ಬದಲು ವಿಭೂತಿ ಸೃಷ್ಟಿಯಾಗಿತ್ತು!

ನಿನ್ನ ಆಸೆಗಳು ಎಲ್ಲವೂ ಈಡೇರುತ್ತದೆ ಹೋಗಿ ಬಾ ಎಂದು ಬಾಬಾ ಹೇಳಿದಾಗ ಯುವಕ ಸಂತಸದಿಂದ 50 ರೂ. ದಕ್ಷಿಣೆ ನೀಡಿ ಹಿಂದೆ ಬಂದಿದ್ದ. ಅಸಲಿನಲ್ಲಿ ಅಲ್ಲಿ ನಡೆದಿರುವುದು ರಾಸಾಯನಿಕ ಪ್ರಕ್ರಿಯೆ ಎಂಬುದು ಮಾತ್ರ ಈ ಯುವಕನಿಗೆ ತಿಳಿದಿದ್ದು ನಾನು ವಿವರಿಸಿದ ಮೇಲೆ.

ನಾನು ಆತನಿಂದ ನಾಣ್ಯವ್ನನು ಕೇಳಿ ತೆಗೆದು ವಿಭೂತಿಯನ್ನು ಸೃಷ್ಟಿಸಿ ತೋರಿಸಿದಾಗ ಆತ ಆಶ್ಚರ್ಯಚಕಿತನಾಗಿದ್ದ. ಅಲ್ಯುಮಿನಿಯಂ ಮರ್ಕ್ಯೂರಿಯ ಲವಣವನ್ನು ತಾಗಿಸಿದರೆ ಅಲುಮಿನಿಯಂ ಲೋಹ ಗಾಳಿಯ ಆಮ್ಲಜನಕದೊಂದಿಗೆ ಸಂಯೋಜನೆಯಾಗಿ ಅದರಲ್ಲಿ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಅದು ಲಘುವಾದ ಕಾರಣ ಪ್ರಮಾಣ ಹೆಚ್ಚಾಗಿ ವಿಭೂತಿ ರೀತಿಯಲ್ಲಿ ಗೋಚರಿಸುತ್ತದೆ.

ಇಂತಹ ಚಿಲ್ಲರೆ ವಿಷಯಗಳನ್ನೂ ಪವಾಡವೆಂದಾಗ ಆಶ್ಚರ್ಯ ವಾಗುವುದು ಸಹಜ. ಅಲುಮಿನಿಯಂ ನಾಣ್ಯಗಳಿಗೆ ಯಾರಾದರೂ ಮರ್ಕ್ಯೂರಿಕ್ ಕ್ಲೋರೈಡ್ ದ್ರಾವಣ ತಾಗಿಸಿ ಪ್ರಯೋಗ ಮಾಡಬಹುದು. ದ್ರಾವಣ ತಾಗಿಸಿದ ಬಳಿಕ ನೀರಿನಲ್ಲಿ ತೊಳೆದು ಒಣಗಿಸಿ, ಕೆಲವೇ ನಿಮಿಷಗಳಲ್ಲಿ ವಿಭೂತಿ ಹೊರಬರುತ್ತದೆ!

ಹಾವು ಕಚ್ಚಿಸಿಕೊಳ್ಳಲು ಬಂದಿತ್ತು ನನಗೆ ಸವಾಲು!

ಮಂಗಳೂರಿನ ಸಂಜೆ ಪತ್ರಿಕೆಯೊಂದರಲ್ಲಿ ನರೇಂದ್ರ ನಾಯಕರಿಗೆ ಸವಾಲು ಎಂಬ ಶಿರೋನಾಮೆಯಡಿ ಸಾಗರದ ವ್ಯಕ್ತಿಯಿಂದ ಹೇಳಿಕೆಯೊಂದು ಪ್ರಕಟವಾಗಿತ್ತು. ಆ ವ್ಯಕ್ತಿ ನನ್ನ ವಿರುದ್ಧ ವೈಯಕ್ತಿಕ ಆಪಾದನೆ ಮಾಡಿದ್ದಲ್ಲದೆ, ನನಗೆ ಸವಾಲನ್ನೂ ಹಾಕಿದ್ದ. ಮಾಟ ಮಂತ್ರಗಳ ಬಗ್ಗೆ ನನಗೆ ನಂಬಿಕೆ ತರಿಸಲು ಆತ ನನಗೆ ವಿಚಿತ್ರವಾದ ಪ್ರಯೋಗಕ್ಕೆ ಮುಂದಾಗಿದ್ದ. ನನಗೆ ಹಾವಿನಿಂದ ಕಚ್ಚಿಸಿ, ನಂತರ ಅದ ವಿಷದಿಂದ ನನ್ನನ್ನು ಬದುಕಿಸಲು ಮಂತ್ರದ ಪ್ರಯೋಗ ಮಾಡುವುದಾಗಿ ಆತ ಹೇಳಿಕೊಂಡಿದ್ದ. ಮಂತ್ರದ ಮೇಲೆ ನಂಬಿಕೆ ಇಲ್ಲದಿದ್ದರೆ ವಿಷ ನಿರೋಧಕ ಚುಚ್ಚುಮದ್ದು ಪಡೆಯಲು ವೈದ್ಯರ ಬಳಿ ಹೋಗಬಹುದು ಎಂದೂ ಆತ ಸಲಹೆ ನೀಡಿದ್ದ.

ಇದಕ್ಕೆ ಉತ್ತರವಾಗಿ ನಾನು, ಆತನಿಗೆ ಪತ್ರ ಬರೆದು, ಹಾವಿನಿಂದ ಕಚ್ಚಿಸಿಕೊಳ್ಳಲು ನಾನು ಹುಚ್ಚನಲ್ಲ. ಬೇಕಾದರೆ ಯಾವುದಾದರೂ ಪ್ರಾಣಿಗೆ ಹಾವಿನಿಂದ ಕಚ್ಚಿಸಿ ಅದನ್ನು ಬದುಕಿಸಲು ಪ್ರಯತ್ನಿಸು ಎಂದಿದ್ದೆ. ಈ ಮಧ್ಯೆ ಉಪ್ಪಿನಂಗಡಿಯ ಒಬ್ಬರು ನನ್ನ ಬದಲಿಗೆ ಹಾವಿನಿಂದ ಕಚ್ಚಿಸಿಕೊಳ್ಳಲು ಸಿದ್ಧನಿರುವುದಾಗಿ ತಿಳಿಸಿದರು. ಇದಕ್ಕೆ ಆ ವ್ಯಕ್ತಿಯಿಂದ ಬಂದ ಪ್ರತಿಕ್ರಿಯೆ. ನಾನು ಪಲಾಯನವಾದಿ ಎಂದು. ಅದಕ್ಕೆ ನಾನು ಪ್ರತ್ಯುತ್ತರವಾಗಿ ಸವಾಲು ಹಾಕಿದಾತನೇ ಹಾವಿನಿಂದ ಕಚ್ಚಿಸಿಕೊಂಡು ಬದುಕಿಕೊಳ್ಳಲಿ ಎಂದು ತಿಳಿಸಿದ್ದೆ.

ಈ ವಿಷಯ ಅಲ್ಲಿಗೆ ಮುಗಿಯಲಿಲ್ಲ. ಈ ಘಟನೆ ನಡೆದ ಸುಮಾರು ಐದು ವರ್ಷಗಳ ಬಳಿಕ ನನ್ನನ್ನೊಬ್ಬ ಹುಡುಕಿಕೊಂಡು ಬಂದಿದ್ದ. ಆತ ಬಂದ ವಿಚಾರ ಕೇಳಿದಾಗ, ತಾನು ಸಾಗರದ ಶಾನುಬಾಗ್ ಎಂದು ತಿಳಿಸಿದ. ಕೆಲವು ವರ್ಷಗಳ ಹಿಂದೆ ಹಾವು ಕಚ್ಚಿಸಿಕೊಳ್ಳಲು ಸವಾಲು ಎಸೆದಾತ ತಾನೇ ಎಂದು ಹೇಳಿದ. ಈಗ ಏನಾಗಬೇಕು ಎಂದು ವಿಚಾರಿಸಿ ದಾಗ, ನಾನೇ ಹಾವಿನಿಂದ ಕಚ್ಚಿಸಿಕೊಳ್ಳಲು ಸಿದ್ಧನಿದ್ದೇನೆ. ಅದರ ನಂತರ ಹಾವು ಕಚ್ಚಿದಾಗ ಮಂತ್ರ ಹೇಳುವವರು ಸಾಮಾನ್ಯರಲ್ಲ. ಅವರು ಬ್ಯಾಂಕ್ ಮ್ಯಾನೇಜರ್ ಎಂದ. ಹಾಗಾದರೆ ಯಾವುದಾದರೂ ಒಂದು ಪ್ರಾಣಿಗೆ ಹಾವು ಕಚ್ಚಿಸೋಣ ಎಂದೆ. ಆದರೆ ಆತ ತನ್ನನ್ನೇ ಹಾವಿನಿಂದ ಕಚ್ಚಿಸಿಕೊಳ್ಳಲು ನ್ಯಾಯಾಲಯದಿಂದ ಅನುಮತಿ ಪಡೆದು ಬರುವುದಾಗಿ ತಿಳಿಸಿ ಹೋದವ ಇನ್ನೂ ಪತ್ತೆಯಾಗಿಲ್ಲ!

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News