ಜಾತಿಗಳ ಹುಟ್ಟಿಗೆ ಅನುಕರಣೆಯ ಸೋಂಕು ಕಾರಣ: ಡಾ. ಅಂಬೇಡ್ಕರ್

Update: 2017-12-03 18:50 GMT

ಜಾತಿ ವಿನಾಶವೆಂಬ ಮಹಾಕ್ರಾಂತಿ

(Annihilation of Caste) ಅಂಬೇಡ್ಕರರು ಜಾತಿ ವಿನಾಶ ಎಂಬ ಕೃತಿಯನ್ನು 1936ರಲ್ಲೇ ಪ್ರಕಟಿಸಿದರು. ಅಂದಿನಿಂದ ಇಂದಿನವರೆಗೂ ಜಾತಿ ವಿನಾಶ ಕುರಿತ ಚರ್ಚೆಗಳು, ವಿಚಾರಸಂಕಿರಣಗಳು ಜರುಗುತ್ತಲೇ ಇವೆ. ಫಲಿತಾಂಶ ಅಷ್ಟಕ್ಕಷ್ಟೇ. ಕೆಳಜಾತಿಗಳು, ತಳ ಸಮುದಾಯಗಳವರು ಜಾತಿ ವಿನಾಶ ಎಂದು ಕರೆಕೊಟ್ಟರೆ ಜಾತಿ ತೊಲಗದು. ಜಾತಿಯೆಂಬ ವಿಷದ ಪೊರೆಯನ್ನು ಮೇಲಿನಿಂದ ಕೆಳಕ್ಕೆ ಕಳಚುತ್ತಾ ಬರಬೇಕು. ಸವರ್ಣೀಯರೆನಿಸಿಕೊಂಡವರು ತಮ್ಮೆಲ್ಲಾ ಆಚಾರ-ವಿಚಾರಗಳಲ್ಲಿ ಜಾತಿಯನ್ನು ಬಿಟ್ಟುಬಿಟ್ಟರೆ ಅದು ಜಗತ್ತಿನ ಯಾವುದೇ ಮಹಾಕ್ರಾಂತಿಗೂ ಮಿಗಿಲಾದದ್ದು. ಅದಾಗಲಿ ಎಂಬ ಆಶಯವು ಮಾನವೀಯತೆಯಿಂದ ಕೂಡಿದ್ದಾಗಿದೆ.

ಭಾರತದಲ್ಲಿ ಜಾತಿಗಳು ವಿಷಯ ಕುರಿತು ಡಾ. ಅಂಬೇಡ್ಕರರು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮೇ 9, 1916 ರಂದು ನಡೆದ ಮಾನವ ಶಾಸ್ತ್ರದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು. ಭಾರತದಲ್ಲಿ ಜಾತಿಗಳ ಉಗಮವನ್ನು ಅಂಬೇಡ್ಕರರು ಸರಳವಾಗಿ ವಿಶ್ಲೇಷಿಸಿದ್ದಾರೆ. ಜಾತಿ ವ್ಯವಸ್ಥೆಯಿಂದಾಗಿ ಮಾನವ ಸಹಜ ವಿವಾಹಗಳು ವಿರಳವಾಗಿವೆ. ಜಾತಿಗಳು ತಮ್ಮನ್ನು ತಾವು ಒಂದು ಚೌಕಟ್ಟಿನಲ್ಲಿ ಬಂಧಿಸಿಕೊಂಡಿವೆ. ಜಾತೀಯತೆಯಿಂದಾಗಿ ವಿಧವೆೆಯು ವಿಧವೆಯಾಗಿಯೇ ಉಳಿಯುತ್ತಾಳೆ. ವಿಧುರನು ಸನ್ಯಾಸಿಯಾಗುತ್ತಾನೆ. ಎಂಡೋಗ್ಯಾಮಿ ವಿವಾಹ ಪದ್ಧತಿ ಅರ್ಥಾತ್ ಕುಲದೊಳಗೇ ವಿವಾಹವಾಗುವ ಪದ್ಧತಿಯು ಜಾತಿಗಳ ಉಗಮ ಮತ್ತು ಬೆಳವಣಿಗೆಗೆ ಕಾರಣವಾಗಿವೆ ಎಂದು ಡಾ. ಅಂಬೇಡ್ಕರರು ವ್ಯಾಖ್ಯಾನಿಸಿದ್ದಾರೆ.
ಜಾತಿಯೆನ್ನುವುದು ನೈಸರ್ಗಿಕವಲ್ಲದ ಸಂಸ್ಥೆ. ಚಾತುರ್ವರ್ಣ ಪದ್ಧ್ದತಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಿದ್ದವು. ಮೊದಲನೆಯ ಪುರೋಹಿತ ವರ್ಣವಾದ ಬ್ರಾಹ್ಮಣರು ತಾವೊಂದು ಜಾತಿ ಎಂದು ಘೋಷಿಸಿಕೊಂಡರು.

ಕ್ಷತ್ರಿಯರು, ವೈಶ್ಯ ಮತ್ತು ಶೂದ್ರ ವರ್ಣಗಳು ಬ್ರಾಹ್ಮಣರನ್ನು ಅನುಕರಣೆ ಮಾಡಿ ಕಸುಬು ಆಧಾರಿತ ಹಲವಾರು ಜಾತಿಗಳನ್ನು ಸೃಷ್ಟಿಸಿಕೊಂಡರು. ಅವರೆಲ್ಲಾ ತಮ್ಮ ತಮ್ಮ ಜಾತಿಯೊಳಗೇ ಮದುವೆಯಾಗುವ ಪದ್ಧತಿಯನ್ನು ಒಪ್ಪಿಕೊಂಡು, ಚೌಕಟ್ಟನ್ನು ಕಟ್ಟಿಕೊಂಡರು. ಅಂಬೇಡ್ಕರರು ಇದನ್ನು ‘‘ಅನುಕರಣೆಯ ಸೋಂಕು’’ ಎಂದು ಕರೆದರು. ಡಾ. ಅಂಬೇಡ್ಕರರು ತಮ್ಮ ಉಪನ್ಯಾಸದಲ್ಲಿ ಅನುಕರಣೆಯ ಸೋಂಕಿಗೆ ವಾಲ್ಟರ್ ಬಾಗೇಹಾಟ್ ಅಭಿಪ್ರಾಯವನ್ನು ಬಳಸಿಕೊಂಡರು. ಬಾಗೇಹಾಟ್ (1826 -1877)ರವರು ಬ್ರಿಟನ್ನಿನ ಪತ್ರಕರ್ತರು, ನೀತಿಶಾಸ್ತ್ರದಲ್ಲಿ ಮಾಸ್ಟರ್ ಪದವೀಧರರು. ಬಾಗೇಹಾಟ್‌ರವರ ಅನಿಸಿಕೆಯಂತೆ ಮನುಷ್ಯನ ಮೆದುಳಿನ ಅಗೋಚರ ಭಾಗದಲ್ಲಿ ಅನುಕರಣೆಯ ಕೇಂದ್ರ ನೆಲೆಗೊಂಡಿದೆ.
ಡಾ. ಅಂಬೇಡ್ಕರರು ಮಂಡಿಸಿದ ಜಾತಿಗಳ ಉಗಮದ ಸಿದ್ಧಾಂತದ ಸಮರ್ಥನೆಗಾಗಿ ಗೇಬ್ರಿಯಲ್ ಟಾರ್ಡೆಯವರ ಸಿದ್ಧಾಂತವನ್ನೂ ಉಲ್ಲೇಖಿಸಿದ್ದಾರೆ. ಗೇಬ್ರಿಯಲ್ ಟಾರ್ಡೆ (1843-1904) ಫ್ರಾನ್ಸಿನ ಸಾಮಾಜಿಕ ಮನೋವಿಜ್ಞಾನಿ. ‘ಜನರು ಅವರ ನಾಯಕರನ್ನು, ರಾಜರನ್ನು, ಚಕ್ರವರ್ತಿಗಳನ್ನು ಅನುಕರಣೆ ಮಾಡುವ ಗುಣ ಹೊಂದಿದ್ದಾರೆ’ ಎಂದವರು ಗೇಬ್ರಿಯಲ್ ಟಾರ್ಡೆ. ಅದರಂತೆ, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರ ಎಂಬ ಮೂರು ವರ್ಣಗಳು ಬ್ರಾಹ್ಮಣರನ್ನು ಅನುಕರಣೆ ಮಾಡಿ ವಿವಿಧ ಕಸುಬುಗಳವರು ಹಲವಾರು ಜಾತಿಗಳನ್ನು ಕಟ್ಟಿಕೊಂಡರು ಎಂದು ಅಂಬೇಡ್ಕರರು ತಮ್ಮ ಉಪನ್ಯಾಸವನ್ನು ಮಂಡಿಸಿದರು.
ಜಾತಿಗಳ ಉಗಮ ಸಿದ್ಧಾಂತವನ್ನು ಪ್ರಬಲವಾಗಿ ಮಂಡಿಸಿರುವ ಡಾ. ಅಂಬೇಡ್ಕರರು ನನ್ನ ಸಿದ್ಧಾಂತವು ಸಮರ್ಥನೀಯವಲ್ಲ ಎಂದು ಯಾರಾದರೂ ನಿರೂಪಿಸಿದರೆ ನನ್ನ ಸಿದ್ಧಾಂತವನ್ನು ನಾನು ಬಿಟ್ಟುಕೊಡುತ್ತೇನೆ ಎಂದು ಸವಾಲೆಸೆದರು. ಬಾಬಾಸಾಹೇಬರಿಗೆ ಆಗಿನ್ನೂ 25 ವರ್ಷ ವಯಸ್ಸು. ಅವರು ಉಪನ್ಯಾಸದ ಮೂಲಕ ಸವಾಲೆಸೆದು 101 ವರ್ಷಗಳಾಗಿವೆ. ಅವರ ಸವಾಲಿಗೆ ಸಮರ್ಥವಾಗಿ ಉತ್ತರಿಸುವ ಛಾತಿಯನ್ನು ಯಾವ ಸಂಶೋಧಕನೂ, ತತ್ವಶಾಸ್ತ್ರಜ್ಞನೂ ಇಲ್ಲಿಯವರೆಗೆ ಸ್ವೀಕರಿಸಿಲ್ಲ.

ಮೆದುಳಿನ ಅನುಕರಣಾ ಕೇಂದ್ರ

ಈ ಲೇಖನದ ಉದ್ದೇಶವೆಂದರೆ, ತಮ್ಮ ಉಪನ್ಯಾಸದಲ್ಲಿ ಅಂಬೇಡ್ಕರರು ಹೇಳಿದ ಅಸಂಖ್ಯಾತ ಜಾತಿಗಳ ಉಗಮಕ್ಕೆ ಮೆದುಳಿನ ಅಗೋಚರ ಭಾಗದಲ್ಲಿರುವ ಅನುಕರಣಾ ಕೇಂದ್ರ ಕಾರಣ ಎಂಬ ವಾದವನ್ನು ಆಧುನಿಕ ವಿಜ್ಞಾನದ ಆವಿಷ್ಕಾರಗಳ ಜ್ಞಾನದೊಂದಿಗೆ ಇನ್ನಷ್ಟು ಪುಷ್ಟಿಗೊಳಿಸುವ ಒಂದು ಪುಟ್ಟ ಪ್ರಯತ್ನ.
ಶರೀರ ಕ್ರಿಯಾ ವಿಜ್ಞಾನ ಹಾಗೂ ನರವಿಜ್ಞಾನದ ತಿಳುವಳಿಕೆಯಂತೆ, ಮೆದುಳಿನಲ್ಲಿ ದೇಹಕ್ರಿಯೆಗಳನ್ನು ನಿಗ್ರಹ ಮಾಡುವ ಹಲವಾರು ಕೇಂದ್ರಗಳಿವೆ. ಅವೆಂದರೆ, ಮೆಡುಲ್ಲಾ ಅಬ್ಲಾಂಗೇಟಾದಲ್ಲಿರುವ ಹೃದಯಕ್ರಿಯಾ ನಿಗ್ರಹ ಕೇಂದ್ರ, ಆಹಾರ ನುಂಗುವ ಕೇಂದ್ರ, ರಕ್ತಸಂಚಾರ ನಿಗ್ರಹ ಕೇಂದ್ರ, ಮೆಡುಲ್ಲಾ ಅಬ್ಲಾಂಗೇಟಾ ಮತ್ತು ಪಾನ್ಸ್‌ನಲ್ಲಿರುವ ಉಸಿರಾಟ ನಿಗ್ರಹ ಕೇಂದ್ರ, ಹೈಪೋಥಲಾಮಸ್‌ನಲ್ಲಿರುವ ದೇಹದ ಉಷ್ಣತೆಯ ನಿಗ್ರಹ ಕೇಂದ್ರ, ಆಹಾರಸೇವನೆಯ ಕೇಂದ್ರ, ನೀರು ಸೇವನೆಯ ನಿಗ್ರಹ ಕೇಂದ್ರ, ಲೈಂಗಿಕಾಸಕ್ತಿಯ ಕೇಂದ್ರ, ಮಹಾಮಸ್ತಿಷ್ಕ (ದೊಡ್ಡ ಮೆದುಳು) ದಲ್ಲಿರುವ ಬ್ರೋಕಾನ ಮಾತಿನ ಕೇಂದ್ರ, ವರ್ನಿಕ್ಕನ ಅರಿವು ಕೇಂದ್ರ, ಸ್ಮರಣೆಯ ವಿಶಾಲ ಜಾಗ... ಹೀಗೆ ಮೆದುಳಿನ ಇನ್ನೂ ಅನೇಕ ಕೇಂದ್ರಗಳು.
ಡಾ. ಅಂಬೇಡ್ಕರರು ಉಪನ್ಯಾಸ ಕೊಟ್ಟ 1916ರ ಕಾಲಕ್ಕೆ ಇಲ್ಲಿ ಪಟ್ಟಿ ಮಾಡಲಾದ ಅನೇಕ ನರವಿಜ್ಞಾನ ಕೇಂದ್ರಗಳನ್ನು ವಿಜ್ಞಾನಿಗಳು ಕಂಡುಹಿಡಿದಿರಲಿಲ್ಲ. ಈ ನಿಟ್ಟಿನಲ್ಲಿ ಬಹಳಷ್ಟು ಆವಿಷ್ಕಾರಗಳನ್ನು 1920 ರಿಂದ 1990ರವರೆಗೆ ಮಾಡಲಾಯಿತು.
ವಾಲ್ಟರ್ ಬಾಗೇಹಾಟ್‌ರವರು ತಮ್ಮ ಕಲ್ಪನೆಯ ಮೂಸೆಯಲ್ಲಿ ಚರ್ಚಿಸಿದ್ದ ಮೆದುಳಿನ ಆ ಅನುಕರಣಾ ಕೇಂದ್ರ (Imitation Center)(frontal cortex) Mirror Neuron) ವನ್ನು ಇಟಲಿಯ ನರವಿಜ್ಞಾನಿ ಗಿಯಾಕೋಮೋ ರಿಜ್ಜಾಲಟ್ಟಿ ಅವರು 1992ರಲ್ಲಿ ಗುರುತಿಸಿದ್ದಾರೆ. ತದನಂತರ, ಫ್ರಾನ್ಸಿನ ಜಾನ್ ಡಿಸೆಟಿ ಮತ್ತು ಅಮೆರಿಕದ ಆಂಡ್ರೂ ಮೆಲ್ಟ್ ಜಾಪ್ ಸಾಕಷ್ಟು ಸಂಶೋಧನೆಗಳ ನಂತರ 2002ರಲ್ಲಿ ಮೆದುಳಿನ ಅನುಕರಣಾ ಕೇಂದ್ರವನ್ನು ಖಚಿತಪಡಿಸಿದ್ದಾರೆ. ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ (ಮಹಾಮಸ್ತಿಷ್ಕ) ನ ಮುಂದಿನ ಭಾಗದಲ್ಲಿ ಅನುಕರಣೆಯ ಕೇಂದ್ರವಿದೆ. ಅಲ್ಲಿ ಕನ್ನಡಿ ನರಕೋಶ (ಮಿರರ್ ನ್ಯೂರಾನ್, ಗಳಿವೆ. ಕನ್ನಡಿ ನರಕೋಶಗಳು ಅನುಕರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಾನವ ತಾನು ಕಲಿಯುವ ಹಲವಾರು ಗುಣಾವಗುಣಗಳಲ್ಲಿ ಆ ಅನುಕರಣೆ ಕೇಂದ್ರದ ಪಾತ್ರವಿದೆ. ಅಷ್ಟೇ ಅಲ್ಲ. ಎಲ್ಲಾ ಪ್ರಾಣಿಗಳಲ್ಲೂ ಈ ಅನುಕರಣೆಯ ಕೇಂದ್ರವಿದೆ. ಮಾನವರನ್ನು ಹಾಗೂ ಮಂಗಗಳನ್ನು ಅನುಕರಣೆಯ ಕೇಂದ್ರದ ಪತ್ತೆಹಚ್ಚುವಿಕೆಯ ಸಂಶೋಧನೆಯಲ್ಲಿ ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ಮಗುವೊಂದು ತನ್ನ ತಾಯಿಯಿಂದ ಹಲವಾರು ಹಾವಭಾವಗಳನ್ನು ಕಲಿಯಲು ಅನುಕರಣಾ ಕೇಂದ್ರವೇ ಪ್ರೇರಣೆ. ಶಿಷ್ಯರು ಗುರುಗಳಿಂದ ಉತ್ತಮವಾದದ್ದನ್ನು ಕಲಿಯಲು ಅನುಕರಣಾ ಕೇಂದ್ರ ಬೇಕು. ರಾಜಕಾರಣಿಗಳಿಗೂ ಇದರ ಅಗತ್ಯತೆಯಿದೆ. ಸಿನೆಮಾ ನಟರಿಗೂ ಒಮ್ಮ್ಮಾಮ್ಮೆ ಅನುಕರಿಸುವ ನಟನೆಗೆ ಅನುಕರಣೆಯ ಕೇಂದ್ರದ ಚಟುವಟಿಕೆ ಚುರುಕಾಗಿರಲೇಬೇಕು.
ಇಂತಹ ಮಾನವರ ಒಳಿತಿಗೆ ಬಳಸಬಹುದಾದ ಅನುಕರಣೆಯ ಕೇಂದ್ರವನ್ನು ಹಿಂದೂ ಧರ್ಮವು ಬಳಸಿದ್ದಾದರೂ ಯಾವುದಕ್ಕೆ? ಅಂಬೇಡ್ಕರರು ಚರ್ಚಿಸಿದಂತೆ, ಜಾತಿಗಳ ಉಗಮಕ್ಕೆ, ಮನುಷ್ಯರ ಮಧ್ಯೆ ಬೃಹತ್ತಾದ ಅಡ್ಡಗೋಡೆಗಳನ್ನು ನಿರ್ಮಿಸುವುದಕ್ಕೆ, ಮನುಷ್ಯರನ್ನು ಮನುಷ್ಯರಂತೆ ಕಾಣದೆ ದೂರ ತಳ್ಳುವುದಕ್ಕೆ, ಅಸ್ಪಶ್ಯತೆಯ ಆಚರಣೆಗೆ, ತಾರತಮ್ಯ ನೀತಿಗೆ, ತಮ್ಮ ಸಿರಿವಂತಿಕೆಯ ರಕ್ಷಣೆಗೆ, ಗೊಡ್ಡು ಸಂಪ್ರದಾಯಗಳ ಮುಂದುವರಿಕೆಗೆ, ಒಡೆದು ಆಳುವ ನೀತಿಗೆ, ದೌರ್ಜನ್ಯ ದಬ್ಬಾಳಿಕೆಗೆ, ಇನ್ನಿತರ ಅಮಾನುಷ ವರ್ತನೆಗಳಿಗೆ.
ಭಾರತದಲ್ಲಿ ಕಸುಬು ಆಧಾರಿತ ಜಾತಿಗಳು ಹುಟ್ಟಿಕೊಂಡವು. ಇದೇ ತರಹದ ಕಸುಬುಗಳು ಪ್ರಪಂಚದ ಎಲ್ಲಾ ದೇಶಗಳಲ್ಲಿವೆ. ಅಲ್ಲಿ ಯಾಕೆ ಕಸುಬು ಆಧಾರಿತ ಜಾತಿಗಳು ಹುಟ್ಟಿಕೊಳ್ಳಲಿಲ್ಲ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರರು ಪ್ರಶ್ನಿಸುತ್ತಾರೆ. ಇನ್ನು ಪುರೋಹಿತ ವರ್ಗವು ತಾನು ಬ್ರಾಹ್ಮಣ ಜಾತಿಯೆಂದು ಘೋಷಿಸಿಕೊಂಡು, ತನ್ನನ್ನು ತಾನು ಒಂದು ಡಬ್ಬಿಯಲ್ಲಿ ಮುಚ್ಚಳ ಹಾಕಿ ಮುಚ್ಚಿಟ್ಟುಕೊಳ್ಳುತ್ತಿದ್ದಂತೆ, ಅಂಬೇಡ್ಕರರು ವಿಶ್ಲೇಷಿಸಿದಂತೆ ‘ಜಾತಿಗಳು ಪಾರ್ಸೆಲ್ಲಿಂಗ್’ ಆಗುತ್ತಿದ್ದಂತೆ, ಉಳಿದ ಕಸುಬುದಾರರೂ ಕೂಡ ಅವರವರ ಕಸುಬುಗಳಿಗೆ ಒಂದೊಂದು ಜಾತಿಗಳನ್ನು ನಿರ್ಮಿಸಿಕೊಂಡರು.
ಒಂದು ಅಂದಾಜಿನಂತೆ, ಭಾರತದಲ್ಲಿ ಕನಿಷ್ಠ 3,600ಕ್ಕೂ ಹೆಚ್ಚು ಜಾತಿಗಳಿವೆ. 25,000 ಉಪಜಾತಿಗಳಿವೆ! ರಾಷ್ಟ್ರಮಟ್ಟದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯ ಒಟ್ಟು ಜಾತಿಗಳು 1,091, ಪರಿಶಿಷ್ಟ ಪಂಗಡದ ಒಟ್ಟು ಜಾತಿಗಳು 586, ಮಂಡಲ್ ಆಯೋಗ ಗುರುತಿಸಿದ ಹಿಂದುಳಿದ ಜಾತಿಗಳು 2,200. ಅವೆಲ್ಲವೂ ‘ಪಾರ್ಸೆಲ್ಲಿಂಗ್’ ಆಗಿವೆ. ಒಂದು ಚೌಕಟ್ಟಿನಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡಿವೆ. ಅವೆಲ್ಲವೂ ಅವೈಜ್ಞಾನಿಕ ಹಾಗೂ ನಿಸರ್ಗವಿರೋಧಿ ಜಾತಿಬಣಗಳು. ಕಸುಬು ಆಧಾರಿತ ಜಾತಿಗಳತ್ತ ಒಮ್ಮೆ ಗಮನಹರಿಸುವುದಾದರೆ, ಮಡಿಕೆ ಮಾಡುವವರದು ಕುಂಬಾರ ಜಾತಿ, ಕುರಿ ಸಾಕುವವರದು ಕುರುಬ ಜಾತಿ, ಕ್ಷೌರ ಮಾಡುವವರದು ಸವಿತಾ ಸಮಾಜ, ಮೀನು ಹಿಡಿಯುವವರದು ಬೆಸ್ತ ಜಾತಿ, ದನ ಸಾಕುವವರದು ಗೊಲ್ಲ ಜಾತಿ, ಮಣ್ಣಿನ ಕೆಲಸ ಮಾಡುವವರದು ಬೋವಿ ಜಾತಿ, ಚರ್ಮದ ಕೆಲಸ ಮಾಡುವವರದು ಚಮ್ಮಾರ ಜಾತಿ, ಬಂಗಾರದ ಒಡವೆ ಮಾಡುವವರದು ಅಕ್ಕಸಾಲಿಗ ಜಾತಿ. ಹೀಗೆ ಇನ್ನೂ ಅಸಂಖ್ಯ ಜಾತಿಗಳು. ಪಟ್ಟಿಯಂತೂ ಅತಿ ಸುದೀರ್ಘದ್ದು.
ಜಗತ್ತಿನ ಯಾವುದೇ ಧರ್ಮದಲ್ಲಿ ಇಷ್ಟೊಂದು ವಿಭಜನೆಗಳಿಲ್ಲ. ಹಿಂದೂ ಧರ್ಮದ ವಿಭಜನೆ ಅಮಾನುಷವಾದದ್ದು. ಎರಡು ಸಾವಿರ ವರ್ಷಗಳಿಂದ ಶುರುವಾದ ಜಾತಿ ಆಧಾರಿದ ಶೋಷಣೆಯು ಇಂಡಿಯಾದಲ್ಲಿ ಇಂದಿಗೂ ಆಧುನಿಕ ರೂಪದಲ್ಲಿ ಎಲ್ಲ ಹಂತಗಳಲ್ಲಿ ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ.

ಬಿಕ್ಕಿ ಬಿಕ್ಕಿ ಅತ್ತ ಅಂಬೇಡ್ಕರ್

ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಪೂರೈಸಿದ ನಂತರ ಭಾರತಕ್ಕೆ ಬಂದ ಡಾ. ಬಾಬಾಸಾಹೇಬ್ ಅಂಬೇಡ್ಕರರು ಜಾತಿಯ ದಬ್ಬಾಳಿಕೆಗೆ, ಅಸ್ಪಶ್ಯತೆಯ ಆಚರಣೆಗೆ ನಲುಗಿ ಹೋಗಿ ಹೀಗೆ ನೊಂದು ನುಡಿಯುತ್ತಾರೆ - ‘‘ಯೂರೋಪ್ ಮತ್ತು ಅಮೆರಿಕದ ನನ್ನ ಐದು ವರ್ಷಗಳ ವಾಸವು ನನ್ನ ಮನಸ್ಸಿನಲ್ಲಿ ನಾನೊಬ್ಬ ಅಸ್ಪಶ್ಯನಲ್ಲ ಎಂಬುದನ್ನು ಖಾತ್ರಿಗೊಳಿಸಿತು. ಆದರೆ, ನಾನು ಭಾರತದಲ್ಲಿ ಓಡಾಡುವಾಗ ಅಸ್ಪಶ್ಯತೆಯ ಅನುಭವವು ನನಗೂ ಇತರರಿಗೂ ಆಗುತ್ತಲೇ ಇದೆ. ಹೀಗಾದಾಗ ನನ್ನ ಮನಸ್ಸು ಇನ್ನಷ್ಟು ತಳಮಳಕ್ಕೀಡಾಗುತ್ತದೆ. ನನ್ನಲ್ಲಿ ಪ್ರಶ್ನೆಗಳ ಅಲೆಗಳನ್ನೆಬ್ಬಿಸುತ್ತದೆ. ನಾನು ಎಲ್ಲಿಗೆ ಹೋಗಬೇಕು? ನನ್ನನ್ನು ಯಾರು ಬರಮಾಡಿಕೊಳ್ಳುತ್ತಾರೆ?’’ ಅವರೊಬ್ಬರೇ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಾರೆ.
ಹೀಗೆ, ಅನುಕರಣೆಯ ಮೂಲಕ ಹುಟ್ಟಿಕೊಂಡ ಹಿಂದೂ ಧರ್ಮದ ಜಾತಿಗಳು ಮಾನವನ ವಿಕಸನಕ್ಕೆ ತೊಡಕಾಗಿವೆ. ದೇಶದ ಪ್ರಗತಿಗೆ ಅಡ್ಡಿಯಾಗಿವೆ. ಜಾತಿ ಸೂಚಕಗಳನ್ನು ತಮ್ಮ ಹೆಸರುಗಳ ಜತೆಗೆ ಅಂಟಿಸಿಕೊಳ್ಳುತ್ತಿರುವ ಪ್ರಕ್ರಿಯೆಯು ಇದೀಗ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಹೆಸರಿನೊಂದಿಗೆ ಜಾತಿಯೂ ತಳಕು ಹಾಕಿಕೊಂಡಿರುತ್ತದೆ. ಅನುಕರಣೆಯೆಂಬ ಜಾಡ್ಯ ಮೇಲುಗೈ ಪಡೆದಿದೆ. ಸ್ವಂತ ಆಲೋಚನೆಯು ಗಾವುದ ಗಾವುದ ದೂರ ಉಳಿದಿದೆ. ಜಾತಿಯ ವಿಷಯದಲ್ಲಿ ಅನುಕರಣೆಯನ್ನು ಅಗಸೆ ಬಾಗಿಲಿಗೆ ಕಟ್ಟಿ ಸ್ವಂತಿಕೆಯನ್ನು ರೂಢಿಸಿಕೊಳ್ಳುವುದು ಹೆಚ್ಚು ಪ್ರಸ್ತುತ. 

Writer - ಪ್ರೊ. ಎಂ. ನಾರಾಯಣ ಸ್ವಾಮಿ

contributor

Editor - ಪ್ರೊ. ಎಂ. ನಾರಾಯಣ ಸ್ವಾಮಿ

contributor

Similar News

ಜಗದಗಲ
ಜಗ ದಗಲ