ಹೆಣ್ಣಿನ ದೇಹ ರಚನೆ ಅಪರೂಪದ ಆರೋಗ್ಯ ಮಾಹಿತಿ

Update: 2017-12-03 18:53 GMT

ಹೆಣ್ಣಿನ ದೇಹ ಅತ್ಯಂತ ಸೂಕ್ಷ್ಮವಾದುದು. ಕಾಲ ಕಾಲಕ್ಕೆ ಹೇಗೆ ಪ್ರಕೃತಿಯಲ್ಲಿ ಪರಿವರ್ತನೆಗಳಾಗುತ್ತದೆಯೋ ಅಂತೆಯೇ ಹೆಣ್ಣಿನ ದೇಹದಲ್ಲೂ ಬದಲಾವಣೆಗಳು ಘಟಿಸುತ್ತಿರುತ್ತವೆ. ಭಾವನೆಗಳಿಗೂ, ದೇಹಕ್ಕೂ ಅವಿನಾಭಾವ ನಂಟಿದೆ. ಹೀಗಿರುವಾಗ, ಹೆಣ್ಣು ಮಕ್ಕಳು ಬೆಳೆಯುತ್ತಾ ಹೋಗುತ್ತಿದ್ದಂತೆಯೇ ಆಗುವ ಬದಲಾವಣೆಗಳನ್ನು ತಿಳಿಸಿಕೊಡುವ ವೈದ್ಯಕೀಯ ಬರಹಗಳು ಹೆಚ್ಚು ಹೆಚ್ಚು ಬರಬೇಕಾಗಿದೆ. ದುರದೃಷ್ಟವಶತ್ ಇಂತಹ ಬರಹಗಳು ಮಹಿಳೆಯರಿಂದ ಬರುವ ಬದಲು ಪುರುಷ ಲೇಖಕರು, ವೈದ್ಯರಿಂದಲೇ ಬರುತ್ತಿರುವುದು. ಮಹಿಳಾ ಲೇಖಕಿ ಹೆಣ್ಣಿನ ದೇಹ, ಆರೋಗ್ಯಗಳ ಕುರಿತಂತೆ ಪುರುಷನಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಹೇಳಬಲ್ಲಳು. ಯಾಕೆಂದರೆ ಆಕೆ ಸ್ವತಃ ಸ್ತ್ರೀಯಾಗಿ ದೇಹದ ಬದಲಾವಣೆಗಳನ್ನು, ರಚನೆಗಳನ್ನು ಅನುಭವಿಸಿದವಳು. ಸ್ವತಃ ಅನುಭವಿಸಿ ಅದನ್ನು ಬರೆಯುವ ಬರಹ ಮಹಿಳೆಯ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಪರಿಹಾರವನ್ನು ನೀಡಬಲ್ಲುದು. ಈ ನಿಟ್ಟಿನಲ್ಲಿ ಡಾ. ಎಚ್. ಗಿರಿಜಮ್ಮ ಅವರು ಬರೆದಿರುವ ‘ಸ್ತ್ರೀ ದೇಹ’ ಅತ್ಯಂತ ಮುಖ್ಯ ಕೃತಿಯಾಗಿದೆ. ಡಾ. ಎಚ್. ಗಿರಿಜಮ್ಮ ಖ್ಯಾತ ಪ್ರಸೂತಿ ವೈದ್ಯರು. ಹಾಗೆಯೇ ಮಹಿಳೆಯರ ಆರೋಗ್ಯದ ಕುರಿತಂತೆ ಬಹಳಷ್ಟು ಲೇಖನಗಳನ್ನು ಬರೆದವರು. ಈ ಕೃತಿಯಲ್ಲಿ, ಮಹಿಳೆಯ ದೇಹ, ಅದರ ರಚನೆ ಹಾಗೂ ನಮಗರಿವಿಲ್ಲದೆಯೇ ದೇಹದೊಳಗೆ ನಡೆಯುವ ಆಂತರಿಕ ಕಾರ್ಯ ಚಟುವಟಿಕೆಗಳ ಬಗ್ಗೆ ನಮಗೆ ಅರಿವು ಮೂಡಿಸುವ ಪ್ರಯತ್ನವಿದೆ. ದೇಹದ ಪರಿಚಯದೊಂದಿಗೆ ನಮ್ಮ ಅಂಗಾಂಗಗಳು ವಿವಿಧ ಕಾಯಿಲೆಗಳಿಗೆ ತುತ್ತಾಗುವ ಕಾರಣಗಳು ಹಾಗೂ ಮುಂಜಾಗೃತೆಯಿಂದ ರೋಗಗಳನ್ನು ದೂರವಿಡುವ ಬಗೆಗೂ ಮಾಹಿತಿ ಇದೆ. ಸ್ತ್ರೀ ಹಾಗೂ ಪುರುಷ ದೇಹ ರಚನೆಯಲ್ಲಿನ ವ್ಯತ್ಯಾಸ, ವಿವಿಧ ಗ್ರಂಥಿಗಳು ಸ್ರವಿಸುವ ಹಾರ್ಮೋನ್‌ಗಳಿಂದ ಭಾವನೆಗಳ ನಿಯಂತ್ರಣ, ಜೀರ್ಣಾಂಗ ವ್ಯೆಹದ ಕಾರ್ಯ ತತ್ಪರತೆ, ಅದ್ಭುತ ಮಿದುಳಿನ ಕಾರ್ಯ ವೈಖರಿ, ಸ್ನಾಯು ನರಮಂಡಲ ವ್ಯವಸ್ಥೆ ಇವೆಲ್ಲದರ ಪರಿಚಯವಿದೆ.
ಒಂದು ಕಾರ್ಖಾನೆ ಅಥವಾ ಯಂತ್ರದಂತಿರುವ ನಮ್ಮ ಶರೀರದ ಅಂಗಾಂಗಗಳನ್ನು ಸಚಿತ್ರವಾಗಿ ವಿವರಿಸಲಾಗಿದೆ. ಜೊತೆಗೆ ಯೋಗ ವ್ಯಾಯಾಮಗಳಿಂದ ಶರೀರವನ್ನು ಸುಸ್ಥಿತಿಯಲ್ಲಿ ಇಡುವುದನ್ನು ಕೊನೆಯ ಅಧ್ಯಾಯದಲ್ಲಿ ಹೇಳಲಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 160. ಮುಖಬೆಲೆ 140 ರೂಪಾಯಿ. ಆಸಕ್ತರು 080-22161900 ದೂರವಾಣಿಯನ್ನು ಸಂಪರ್ಕಿಸಬಹುದು. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News