ದಾಖಲೆ ಬರೆಯಲು ಬರುತ್ತಿದ್ದಾನೆ 'ಸಹಿಷ್ಣು'
ಪ್ರಪ್ರಥಮ ಬಾರಿಗೆ ಐಫೋನ್ ನಲ್ಲಿ ಸತತ ಎರಡು ಗಂಟೆ ಹದಿನೆಂಟು ಸೆಕೆಂಡುಗಳಲ್ಲಿ ಚಿತ್ರೀಕರಿಸಿದ ಸಿನಿಮಾ ಎಂಬ ಕೀರ್ತಿ ಕನ್ನಡ " ಸಹಿಷ್ಣು" ಚಿತ್ರದ ಪಾಲಾಗಲಿದೆ ಎನ್ನುತ್ತಾರೆ ನಿರ್ದೇಶಕ ಸಂಪತ್.
ಐಫೋನ್ ನಲ್ಲಿ ವಿಶ್ವದಾದ್ಯಂತ ಹಲವಾರು ಸಿನಿಮಾಗಳು ತಯಾರಾಗಿವೆ. ಆದರೆ ಇದೇ ಮೊದಲಬಾರಿಗೆ 'ಸಿಲ್ವರ್ ಸ್ಕ್ರೀನ್ ಸಿನಿಮಾಸ್ ' ಬ್ಯಾನರ್ ನಲ್ಲಿ ತಾವು ನಿರ್ಮಿಸಿ ನಿರ್ದೇಶಿಸಿರುವ ' ಸಹಿಷ್ಣು' ಚಿತ್ರ ಸಂಪೂರ್ಣವಾಗಿ ಒಂದೇ ಶಾಟ್ ನಲ್ಲಿ ನಿರ್ಮಾಣಗೊಂಡಿದೆ. ಇದು ಭಾರತದಲ್ಲೇ ಅಲ್ಲ ವಿಶ್ವದಲ್ಲೇ ಆಪೆಲ್ ಫೋನ್ ನಲ್ಲಿ ಅನ್ ಕಟ್ ಲಾಂಗೆಸ್ಟ್ ಸಿಂಗಲ್ ಶಾಟ್ ಸಿನಿಮಾವಾಗಿ ಗುರುತಿಸಲ್ಪಡಲಿದೆ ಎಂದು ಸಂಪತ್ ಹೇಳಿದರು.
"ಇದು ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ನೀಡುತ್ತಿರುವ ಕೊಡುಗೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈಗಾಗಲೇ ಆ್ಯಪಲ್ ಐಫೋನ್ ಕಂಪೆನಿಯವರ ಗಮನಕ್ಕೆ ತರಲಾಗಿದೆ. ಅವರು ಕೂಡ ಸಕರಾತ್ಮಕವಾಗಿ ಸ್ಪಂದಿಸಿ ಅಭಿನಂದಿಸಿದ್ದಾರೆ ಹಾಗೆ ನಮ್ಮ ಚಿತ್ರ ವಿಶ್ವದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ ಗಿನ್ನಿಸ್ ದಾಖಲೆಗೂ ನಾವು ಚಿತ್ರ ನಿರ್ಮಾಣ ಹಾಗೂ ಎಲ್ಲಾ ವಿವರಗಳನ್ನು ಸಲ್ಲಿಸಿದ್ದೇವೆ. ಗಿನ್ನಿಸ್ ರೆಕಾರ್ಡ್ ಸದಸ್ಯರ ಉತ್ತರಕ್ಕಾಗಿ ಕಾಯುತ್ತಿದ್ದೇವೆ" ಎಂದು ನಿರ್ಮಾಪಕ, ನಿರ್ದೇಶಕ, ನಾಯಕನ ಜತೆಗೆ ಕತೆ, ಸಂಭಾಷಣೆಯ ಹೊಣೆ ವಹಿಸಿರುವ ಸಂಪತ್ ಹೇಳುತ್ತಾರೆ.
ಗೌರಿ ಲಂಕೇಶ್ ಅವರ ಕೊಲೆಯ ಬಳಿಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂಸೆಯಿಂದ ತುಳಿಯುವುದನ್ನು ಕಂಡು ಎಲ್ಲರೂ ಬೆಚ್ಚಿದ್ದೇವೆ. ಕೊಲೆಗಾರರಿಗೆ ತಾವು ಕೊಲ್ಲುವ ವ್ಯಕ್ತಿಯ ಮಹತ್ವ ತಿಳಿದಿರುವುದಿಲ್ಲ. ಒಂದು ವೇಳೆ ಕೊಲೆಗಾರರೊಂದಿಗೆ ಚರ್ಚೆಗೆ ನಿಂತರೆ ಅವರು ಹೇಗೆ ಪರಿವರ್ತಿತರಾಗಬಲ್ಲರು ಎನ್ನುವುದೇ ಚಿತ್ರದ ಸಂದೇಶ ಎಂದು ಸಂಪತ್ ಹೇಳುತ್ತಾರೆ.
ಛಾಯಾಗ್ರಾಹಕರಾಗಿ ಅನಂತಯ್ಯ ಕೆಲಸ ಮಾಡಿದ್ದಾರೆ. ನಟರಾಗಿ ಪುಟ್ಟಣ್ಣ ಕಣಗಾಲ್ ರ ಶಿಷ್ಯ ಹಾಗೂ ಡಾ.ರಾಜ್ ಕುಮಾರ್ ರೊಂದಿಗೆ ಖಳನಾಯಕರಾಗಿ ನಟಿಸಿರುವ ಮತ್ತು ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ಬಹುಭಾಷ ಕಲಾವಿದರೆನಿಸಿಕೊಂಡಿರುವ ಮತ್ತು 'ಜಿತೇಂದ್ರ' ಸಿನಿಮಾದ ನಿರ್ದೇಶಕರು ಆಗಿರುವ ವಿಶ್ವನಾಥ್ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ಇನ್ನೊಬ್ಬ ಯುವ ನಟ ಅಶೋಕ್ ನಟಿಸಿದ್ದಾರೆ.
ಚಿತ್ರದ ಸಂಪೂರ್ಣ ಚಿತ್ರೀಕರಣ ಮಡಿಕೇರಿಯ ಪರಿಸರದ ಮಧ್ಯೆ ಚಿತ್ರೀಕರಿಸಲಾಗಿದೆ. ಅಂದಹಾಗೆ ಚಿತ್ರಕ್ಕೆ ಛಾಯಾಗ್ರಾಹಕರು ವಿ ಅನಂತ್. ಈ ಸಂದರ್ಭದಲ್ಲಿ ಚಿತ್ರದ ಮೇಕಿಂಗ್ ವಿಡಿಯೋ ಪ್ರದರ್ಶಿಸಲಾಯಿತು.