ಹಾವಿನ ಭಯವೇಕೆ ಗೊತ್ತೇ?

Update: 2017-12-09 10:47 GMT

ಕಳೆದ ಸಂಚಿಕೆಯಲ್ಲಿ ಹಾವಿನಿಂದ ಕಚ್ಚಿಸಿಕೊಳ್ಳಲು ನನಗೆ ಬಂದ ಸವಾಲಿನ ಬಗ್ಗೆ ವಿವರಿಸಿದ್ದೆ. ಅಂದ ಹಾಗೆ ಹಾವಿನ ಬಗ್ಗೆ ಮನುಷ್ಯನಿಗೆ ಭಯ ಸಾಮಾನ್ಯ. ಇದೇನು ಇಂದು ನಿನ್ನೆಯದಲ್ಲ. ಜೀವ ವಿಕಾಸದ ಮಿಲಿಯಗಟ್ಟಲೆ ವರ್ಷಗಳಿಂದಲೂ ಈ ಭಯ ಸಾಗಿ ಬಂದಿದೆ. ಜೀವ ವಿಕಾಸದಲ್ಲಿ ಹಾವು ಮನುಷ್ಯನಿಗಿಂತ ತೀರಾ ಕೆಳಮಟ್ಟದಲ್ಲಿದೆ. ಇದರ ನಡುವೆ ಮೊಟ್ಟೆ ಇಡುವ ಪ್ರಾಣಿಗಳೂ ಇವೆ. ಹಾವುಗಳು ಕೂಡಾ ಮೊಟ್ಟೆ ಇಡುತ್ತವೆ. ಮರಿ ಮಾಡಲು ಇಟ್ಟ ತಮ್ಮ ಮೊಟ್ಟೆಗಳನ್ನು ತಾವೇ ತಿನ್ನುತ್ತಿದ್ದವು. ಆ ಕಾರಣದಿಂದಾಗಿಯೇ ಹಾವುಗಳ ಭಯ ಆರಂಭವಾಯಿತು. ಅದೇ ಭಯವು ಈಗ ಜೀವ ವಿಕಾಸದ ಮಿಲಿಯಗಟ್ಟಲೆ ವರ್ಷಗಳ ಬಳಿಕವೂ ಮಾನವನ ಮನದೊಳಗೆ ಸುಪ್ತವಾಗಿದೆ.

ಭಯ ಪಡುವ ವಸ್ತುವನ್ನು ಪೂಜಿಸುವುದು ಸಹಜ. ಈ ಕಾರಣದಿಂದಲೇ ನಾಗಪೂಜೆ. ಮಾತ್ರವಲ್ಲ ಹಾವುಗಳಿಗೆ ‘ದೇವರ ಆಭರಣ’ ಎಂಬ ಬಿರುದೂ ಇದೆ. ಹಾವುಗಳಲ್ಲಿ ಅತ್ಯಂತ ವಿಷಕಾರಿ ಹಾಗೂ ಭಯ ಹುಟ್ಟಿಸುವುದು ನಾಗರ ಹಾವು. ಆದ ಕಾರಣ ಅದರ ಪೂಜೆಗೆ ವಿಶೇಷ ಪ್ರಾಶಸ್ತ್ಯವಿದೆ. ನಾಗಬನಗಳು, ನಾಗರಕಲ್ಲು, ನಾಗಪ್ರತಿಷ್ಠೆ ಇವೆಲ್ಲವೂ ಇದಕ್ಕೆ ಸಾಕ್ಷಿ. ಹಾವಿನ ಮೆದುಳು ಅವರೇಕಾಳಿನಷ್ಟು ದೊಡ್ಡದು. ಅದಕ್ಕೆ ಸ್ಮರಣ ಶಕ್ತಿ ಇಲ್ಲ. ಹಾಗಿದ್ದರೂ ಹಾವಿನ ದ್ವೇಷ ಹನ್ನೆರಡು ವರ್ಷ. ತೊಂದರೆ ನೀಡಿದವರಿಗೆ ಅಟ್ಟಾಡಿಸಿಕೊಂಡು ಹಾವುಗಳು ಕಚ್ಚುತ್ತವೆ ಎಂಬ ಪ್ರತೀತಿಯೂ ಇದೆ. ಆದರೆ ಇವೆಲ್ಲವೂ ಕಟ್ಟುಕತೆ ಅಷ್ಟೆ.

ಸೋಲೇ ಅರಿಯದ ಇಸ್ಪಿಟ್ ರಾಜ ಹನುಮಂತರಾಯಪ್ಪ!

ಈ ಶೀರ್ಷಿಕೆಯಡಿ ಕರ್ನಾಟಕದ ಎಲ್ಲಾ ಪತ್ರಿಕೆಗಳಲ್ಲೂ ತುಮಕೂರಿನ ದೇವಲಾಪುರವೆಂಬ ಊರಿನ ಹನುಮಂತರಾಯಪ್ಪ ಎಂಬವರ ಕುರಿತು ಬರಹಗಳು ಪ್ರಕಟಗೊಂಡಿತ್ತು. ಹನುಮಂತರಾಯಪ್ಪ ನಾಲ್ಕು ದಶಕಗಳಿಂದ ತುಮಕೂರು ಜಿಲ್ಲೆಯ ಸೋಲರಿಯದ ಇಸ್ಪಿಟ್ ರಾಜ ಎಂಬ ಹೆಸರು ಪಡೆದಿದ್ದರಂತೆ. ಇವರು ಶನಿದೇವರ ಶಕ್ತಿಯಿಂದ ಇಸ್ಪಿಟ್ ಎಲೆಗಳನ್ನು ಅವುಗಳ ಹಿಂಭಾಗದಿಂದಲೇ ಗುರುತಿಸುತ್ತಿದ್ದರಂತೆ. ಇವರ ಕೀರ್ತಿ ಎಲ್ಲಿಯವರೆಗೆ ಹಬ್ಬಿತ್ತೆಂದರೆ ಇತರರು ಇವರನ್ನು ಪಂಚತಾರಾ ಹೊಟೇಲುಗಳಿಗೆ ಕರೆಯಿಸಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು!

ಇವರ ಇಸ್ಪಿಟ್ ಗುರು ಸಾಗರದ ಬಳಿಯಿರುವ ಜೋಗ್ ಸಿಂಗ್ ಎಂಬವರು. ಇವರ ಮೂಲಕ ಈ ವಿದ್ಯೆಯನ್ನು ಹನುಮಂತರಾಯಪ್ಪ ಕಲಿತುಕೊಂಡಿದ್ದರಂತೆ.

ನನಗೆ ಇದನ್ನು ಕೇಳಿದಾಗ ಅಚ್ಚರಿ. ಆದ್ದರಿಂದ ಈ ಶಕ್ತಿಯನ್ನು ಪರೀಕ್ಷಿಸುವ ಕುತೂಹಲ ಹುಟ್ಟಿತು. ನಾನು ಹತ್ತು ಎಲೆಗಳನ್ನು ಅವರಿಗೆ ಹಂಚುತ್ತೇನೆ. ಅದರಲ್ಲಿ ಒಂಬತ್ತನ್ನು ಸರಿಯಾಗಿ ಗುರುತಿಸಿದರೆ ಹತ್ತು ಸಾವಿರ ರೂಪಾಯಿಗಳನ್ನು ಕೊಡುತ್ತೇನೆಂದು ಪತ್ರಿಕಾ ಹೇಳಿಕೆ ನೀಡಿದೆ. ಕೆಲವು ಪತ್ರಿಕೆಗಳಲ್ಲಿ ಈ ವಿಚಾರ ಪ್ರಕಟವಾಯಿತು. ಇದಾದ ಒಂದು ವಾರದ ನಂತರ ಆಗ ಕೋಲ್ಕತಾದಿಂದ ಪ್ರಕಟವಾಗುತ್ತಿದ್ದ ‘ಸಂಡೇ’ ಎಂಬ ನಿಯತಕಾಲಿಕದ ವರದಿಗಾರ್ತಿಯಾಗಿದ್ದ ಗೌರಿ ಲಂಕೇಶ್ ಅವರಿಂದ ನನಗೊಂದು ಫೋನ್ ಬಂತು. ನಾನು ಹನುಮಂತರಾಯಪ್ಪನ ಶಕ್ತಿಯನ್ನು ಪರೀಕ್ಷಿಸಿದ್ದೇನೆ. ಆತನಿಗೆ ಇಸ್ಪಿಟ್ ಎಲೆಗಳನ್ನು ಹಿಂಭಾಗದಿಂದ ಗುರುತಿಸುವ ಶಕ್ತಿ ಇದೆ. ಆದರೂ ನನ್ನ ಸವಾಲನ್ನು ಕಾರ್ಯರೂಪಕ್ಕಿಳಿಸಬೇಕೆಂದು ಅವರು ಕೇಳಿಕೊಂಡರು. ಎರಡು ದಿನಗಳ ನಂತರ ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಡಾ. ಎಚ್. ನರಸಿಂಹಯ್ಯ ಅವರ ಸಮ್ಮುಖದಲ್ಲಿ ಈ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು.

ನಿಗದಿತ ದಿನದಂದು ನಾನು ಬೆಂಗಳೂರಿಗೆ ಹೋದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನಿಂದ ಡಾ. ಪ್ರಕಾಶ್ ಸಿ. ರಾವ್ ಮತ್ತು ಡಾ. ನಿರಂಜನಾರಾಧ್ಯ, ಗೌರಿ ಲಂಕೇಶ್, ನನ್ನ ಅತ್ತ್ತಿಗೆ ಶ್ರೀಮತಿ ಗೀತಾ ಮತ್ತು ಡಾ. ನರಸಿಂಹಯ್ಯ ಅವರ ಸಮ್ಮುಖದಲ್ಲಿ ಶನಿದೇವರ ಶಕ್ತಿಯನ್ನು ಪರೀಕ್ಷಿಸಿದೆ. ಹನುಮಂತರಾಯಪ್ಪನವರು ಹೊಸ ಇಸ್ಪಿಟ್ ಪೆಟ್ಟಿಗೆಗಳನ್ನು ತೆರೆದು ನಮ್ಮ ಎದುರಿಗೆ ತೆರೆದು ಕಲಸಿ ನನ್ನ ಕೈಗೆ ಕೊಟ್ಟರು. ನಾನು ಕೊಟ್ಟ ಎಲೆಗಳನ್ನು ಹಿಂಭಾಗದಿಂದಲೇ ಗುರುತಿಸತೊಡಗಿದರು. ನಾಲ್ಕಾರು ಎಲೆಗಳನ್ನು ಸರಿಯಾಗಿ ಗುರುತಿಸಿ ಹೇಳಿದರು. ಆದರೆ ಅವರು ಆ ಎಲೆಯು ಯಾವುದೆಂದು ಹೇಳುತ್ತಿದ್ದರೇ ಹೊರತು ಅದು ಯಾವ ರಂಗಿನದೆಂದು (ಬಣ್ಣ) ಹೇಳುತ್ತಿರಲಿಲ್ಲ. ಉದಾಹರಣೆಗೆ ಅದು ನಾಲ್ಕೋ, ಐದೋ, ಗುಲಾಮನೋ, ರಾಣಿಯೋ ಎಂದು ಮಾತ್ರ ಹೇಳುತ್ತಿದ್ದರು. ಆದರೆ ಅದು ಇಸ್ಪೀಟೋ, ಡೈಮಂಡೋ ಅಥವಾ ಕಳಾವರೋ ಎಂದು ಹೇಳುತ್ತಿರಲಿಲ್ಲ. ಡಾ. ನರಸಿಂಹಯ್ಯನವರು ಇದನ್ನು ನೋಡಿ ಅಚ್ಚರಿಗೊಂಡರು. ಒಡನೆಯೇ ನಿಮ್ಹಾನ್ಸ್ ಗೆ ಕರೆ ಮಾಡಿ ಅಲ್ಲಿ ಖ್ಯಾತ ಮನೋರೋಗ ವೈದ್ಯರಾಗಿದ್ದ ಡಾ. ಸಿ.ಆರ್. ಚಂದ್ರಶೇಖರ್‌ಗೆ ಕರೆ ಮಾಡಿ, ಇಲ್ಲೊಬ್ಬ ಅತೀಂದ್ರಿಯ ಶಕ್ತಿ ತೋರಿಸುತ್ತಿದ್ದಾನೆ ಎಂದರು. ಆದರೆ ಅಷ್ಟರಲ್ಲಿ ನಾನು ಆ ಶನಿದೇವರ ಶಕ್ತಿಯನ್ನು ಗ್ರಹಿಸಿದ್ದೆ. ‘ಬೇಡ ಸಾರ್, ಅದು ಹೇಗೆಂದು ಗೊತ್ತಾಯ್ತು’ ಎಂದೆ.

ನನ್ನಲ್ಲಿದ್ದ ಇಸ್ಪಿಟ್ ಎಲೆಗಳನ್ನು ಹನುಮಂತರಾಯಪ್ಪನವರ ಕೈಗೆ ಕೊಟ್ಟು ಎಲೆಗಳನ್ನು ನನಗೆ ಹಂಚಿ ಎಂದೆ. ಅವರು ಒಂದೊಂದಾಗಿ ಎಲೆಗಳನ್ನು ನನಗೆ ಹಂಚಿದರು. ಅವರು ಹಂಚಿದೊಡನೆ ನಾನು ಅದನ್ನು ಗುರುತಿಸಿ ಹೇಳತೊಡಗಿದೆ. ನನ್ನ ಉತ್ತರವೂ ಸರಿಯಾಗಿತ್ತು. ಅದು ಯಾವುದು, ಅದರ ಬಣ್ಣ ಯಾವುದು ಎಂಬುದನ್ನೂ ಹೇಳಿದೆ. ಇದನ್ನು ಕಂಡ ಹನುಮಂತರಾಯಪ್ಪನವರಿಗೆ ಅಚ್ಚರಿ. ಮೇಜಿನ ಈ ಕಡೆ ಬಂದು ನಮಸ್ಕರಿಸಿದರು. ‘ನೀವು ನನ್ನ ಗುರು’ ಎಂದು ಹೇಳಿದರು. ವಯಸ್ಸಿನಲ್ಲಿ ಚಿಕ್ಕವನಾದರೂ ನೀವು ನನಗಿಂತ ಎಷ್ಟೋ ಮುಂದಿದ್ದೀರಿ. ನನಗೆ ನಿಮ್ಮ ವಿದ್ಯೆ ಕಲಿಸಿ ಎಂದರು!

ಅವರು ಎಲೆಗಳು ಬರೀ ಯಾವುದೆಂದು ಮಾತ್ರ ಹೇಳಿದರೆ ನಾನು ಅವುಗಳ ಬಣ್ಣವನ್ನು ಕೂಡಾ ಹೇಳಿದ್ದೆ!

ನಂತರ ಇದರ ಬಗ್ಗೆ ಹೇಳಿ ಎಂದೆ. ಅದಕ್ಕೆ ಅವರು, ನಿಮ್ಮ ಬಳಿ ಏನು ಮುಚ್ಚುಮರೆ, ತಾನು ಹೇಗೆ ಎಲೆಗಳ ಮೇಲಿರುವ ಸೂಕ್ಷ್ಮವಾದ ಗುರುತುಗಳಿಂದ ಅವುಗಳನ್ನು ಗುರುತಿಸುತ್ತಿದ್ದೆ ಎಂಬುದನ್ನು ಹೇಳಿದರು. ತನ್ನ ಬಗ್ಗೆ ಪತ್ರಿಕೆಗಳು ಸುಳ್ಳು ಬರೆದಿವೆ. ನಾನು ಹೊಲಗದ್ದೆ- ಮನೆ ಮಾಡಿಕೊಂಡಿದ್ದೇನೆಯೇ ಹೊರತು ಕೋಟಿಗಟ್ಟಲೆ ಹಣ ಸಂಪಾದಿಸಿಲ್ಲ ಎಂದರು. ನಂತರ ತಾನು ಈ ಪವಾಡ ಮಾಡಲು ಕಲಿತದ್ದು ಹೇಗೆಂತ ಹೇಳಿದರು. ಸುಮಾರು ಐದು ದಶಕಗಳ ಹಿಂದೆ ಇವರು ಆಂಗ್ಲ ಸಿನೆಮಾವೊಂದರ ನಾಯಕ ಈ ರೀತಿ ಎಲೆಗಳ ಗುರುತು ಹಿಡಿದು ಹಣ ಮಾಡುವುದನ್ನು ನೋಡಿದ್ದರಂತೆ. ನಂತರ ಇವರು ಇಸ್ಪಿಟ್ ಎಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರಂತೆ. ಹಿಂಭಾಗದಿಂದಲೇ ಅವುಗಳನ್ನು ಗುರುತಿಸಲು ಸಾಧ್ಯವೆಂದು ತಿಳಿದ ಬಳಿಕ ಈ ಇಸ್ಪಿಟ್ ಆಟಕ್ಕೆ ಇಳಿದಿದ್ದರಂತೆ!

ರಮ್ಮಿ ಆಟದಲ್ಲಿ, ಅಂದರ್- ಬಾಹರ್ ಹಾಗೂ ಮೂರೆಲೆ ಆಟದಲ್ಲಿ ಅವರು ಈ ತಿಳುವಳಿಕೆಯಿಂದ ಹಣ ಸಂಪಾದಿಸಿದ್ದರಂತೆ. ಇವರ ಈ ಪರಿಣಿತಿ ಸುದ್ದಿ ತುಮಕೂರು ಜಿಲ್ಲೆಯಲ್ಲಿ ಹಬ್ಬಿ ಅವರು ಇಸ್ಪಿಟಾಡುವ ಕ್ಲಬ್ಬುಗಳಿಗೆ ಹೋದರೆ ಕ್ಲಬ್ಬಿನವರು ಇಲ್ಲಿ ಆಟಬೇಡವೆಂದು ಹೇಳಿ ಅವರಿಗೆ ಕಾಫಿ, ತಿಂಡಿ, ಕೊಡಿಸಿ ಕೈಗೆ ದಕ್ಷಿಣೆ ಕೊಟ್ಟು ಕಳುಹಿಸುತ್ತಿದ್ದರು. ನಾವು ಈ ಬಗ್ಗೆ ಬೆಂಗಳೂರಿನ ಕಚೇರಿಗಳಿಗೆ ಪವಾಡದ ಒಳಗುಟ್ಟು ಬಯಲು ಮಾಡಿದ ಬಗ್ಗೆ ತಿಳಿಸಿದೆವು. ಹಲವರು ಈ ಸುದ್ದಿಗೆ ಪ್ರತಿಕ್ರಿಯೆ ಕೂಡಾ ನೀಡಿದ್ದರು. ಹೀಗೆ ಹನುಮಂತರಾಯಪ್ಪನ ಪವಾಡದಿಂದ ಹಣ ಕಳೆದುಕೊಂಡ ಬಗ್ಗೆಯೂ ವಿಷಾದಿಸಿದ್ದರು. ಅಂತೂ ನಮ್ಮ ರಹಸ್ಯ ಬಯಲಿನಿಂದಾಗಿ ಹನುಮಂತರಾಯಪ್ಪನವರ ಶನಿದೇವರ ಪವಾಡ ನಿಂತೇ ಹೋಯಿತು. ಈ ಪವಾಡ, ಮೂಢನಂಬಿಕೆಗಳೆಂಬುದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಮಾತ್ರವಲ್ಲದೆ, ಜಾತಿ, ಲಿಂಗ, ವಯಸ್ಸಿಗೂ ಇದು ಅನ್ವಯಿಸುವುದಿಲ್ಲ ಎಂಬುದು ಸತ್ಯ. ಮಾತ್ರವಲ್ಲದೆ ಈ ಅತಿಮಾನುಷ ಶಕ್ತಿಯೆಂಬ ಮೋಸಕ್ಕೆ, ಮೂಢನಂಬಿಕೆಯ ಜಾಲಕ್ಕೆ ಬಲಿಯಾಗುವುದು ಅನಕ್ಷರಸ್ಥರು ಎಂಬುದೂ ತಪ್ಪು. ಅಕ್ಷರಸ್ಥರೂ ಇದರ ಪಾಲುದಾರ ಉದಾಹರಣೆಗಳು ನಮ್ಮ ಸುತ್ತಮುತ್ತ ನೋಡಿರಬಹುದು.

 ನರೇಂದ್ರ ನಾಯಕ್

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News