ಕಥನ ಪ್ರೀತಿಯನ್ನು ಹೆಚ್ಚಿಸುವ ‘ಇಹದ ಪರಿಮಳ’

Update: 2017-12-09 18:30 GMT

ಜಗದ ಮೋಹವನ್ನು ಹಲವು ಕತೆಗಾರರು ಬರೆದಿದ್ದಾರೆ. ಆದರೆ ಕಂನಾಡಿಗಾ ನಾರಾಯಣ ಅವರು ‘ಇಹದ ಪರಿಮಳ’ವನ್ನು ತಮ್ಮ ಕತೆಗಳಲ್ಲಿ ಹೊತ್ತು ತಂದಿದ್ದಾರೆ. ಬೆನ್ನುಡಿಯಲ್ಲಿ ಹೇಳುವಂತೆ ಈ ಸಂಕಲನದಲ್ಲಿರುವ ಪ್ರತಿ ಕತೆಗಳೂ ಪರಿಮಳವನ್ನು ಅರಸುತ್ತಾ ಸಾಗುತ್ತವೆ. ಸಾಧಾರಣವಾಗಿ ಬದುಕಿನ ‘ವಾಸನೆ’ಗಳ ಕುರಿತಂತೆ ಬರೆದವರಿದ್ದಾರೆ. ಕಾಮ, ಪ್ರೇಮ, ಲೋಲುಪತೆ, ಬೆವರು ಇವುಗಳನ್ನು ನವ್ಯ ಸಾಹಿತ್ಯ ದಟ್ಟವಾಗಿ ಕಟ್ಟಿಕೊಟ್ಟಿದೆ. ಆದರೆ ಕಂನಾಡಿಗರದು ಪರಿಮಳದ ಸೆಳೆತವನ್ನು ಮನುಷ್ಯನೊಳಗೆ ಮಾನವೀಯ ನೆಲೆಯಲ್ಲಿ ಕಾಣುತ್ತಾರೆ. ಈ ಸಂಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ. ಆ ಪರಿಮಳವನ್ನು ದೂರದಿಂದ ಆಸ್ವಾದಿಸುವುದೇನೋ ಚೆನ್ನಾಗಿಯೇ ಇರುತ್ತದೆ. ಆದರೆ ಆ ಪರಿಮಳಕ್ಕಾಗಿ ತೆರಬೇಕಾದ ಭೌತಿಕ ಬದುಕನ್ನು ಮೀರುವುದು ಕಷ್ಟ. ಇದು ಕಥಾನಾಯಕ ಅಮೋಘವರ್ಷನ ಒಳಗಿನ ಸಂಘರ್ಷ. ಒಬ್ಬ ನಟ ಬದುಕಿನ ವೌಲ್ಯಗಳನ್ನು ಅದ್ಭುತವಾಗಿ ನಟಿಸಬಲ್ಲ. ಆದರೆ ಅದನ್ನು ತನ್ನ ಬದುಕಾಗಿಸುವ ಸಂದರ್ಭದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ‘ಗಂಧದ ಬಾಗಿಲು’ ಇನ್ನೊಂದು ರೀತಿಯಲ್ಲಿ ಮನುಷ್ಯನೊಳಗಿನ ಒಳ ಹೊರಗಿನ ವಾಸನೆಯನ್ನು ತಿಳಿಸುತ್ತದೆ. ಒಂದು ದ್ವೇಷ, ಅಸೂಯೆಯಿಂದ ಕರಟಿದ ಪರಿಮಳ. ಇದೇ ಸಂದರ್ಭದಲ್ಲಿ ಅದರ ಬಾಗಿಲು ಮಾತ್ರ ಗಂಧದ ಪರಿಮಳ ಸೂಸುತ್ತದೆ. ಹೀಗೆ ಭಂಗಿಗಿರಿ, ಮಳೆ ಬೇರೆ ಬೇರೆ ರೀತಿಯಲ್ಲಿ ಇಹದ ವಾಸನೆಗಳ ವೈವಿಧ್ಯಗಳ ಸುತ್ತ ಸುತ್ತುತ್ತವೆ. ಉಳಿದಂತೆ ಕತೆಗಳು ಮನುಷ್ಯನೊಳಗಿನ ನೀಚತನ ಮತ್ತು ಒಳ್ಳೆಯತನಗಳ ತಿಕ್ಕಾಟಗಳನ್ನು ಹೇಳುತ್ತವೆ.

ಕಂನಾಡಿಗಾ ಅವರ ಕತೆ ಹೇಳುವ ರೀತಿ, ಪರಿಮಳ ವನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ. ಮುನ್ನುಡಿಯಲ್ಲಿ ರಘುನಾಥ ಚ.ಹ. ಅವರು ಹೇಳು ವಂತೆ ಕಂನಾಡಿಗಾ ಅವರು ಕಥೆಯೊಂದನ್ನು ನಿರೂ ಪಿಸುವ ಹೊತ್ತಿಗೆ ಅದರಾಚೆಗಿನ ಬೇರೊಂದು ಕಥನವನ್ನು ಕಾಣಿಸುವ ಮೂಲಕ ಬೆರಗು ಮೂಡಿ ಸುತ್ತಾರೆ. ನಾವು ಕಂಡ ಬದುಕನ್ನು ಮತ್ತೊಂದು ಕೋನ ದಲ್ಲಿ ನೋಡಲು ಒತ್ತಾಯಿಸುತ್ತಾರೆ. ಕಂನಾಡಿಗಾ ಅವರ ರಚನೆಗಳು ಕಥನ ಪ್ರೀತಿಯನ್ನು ಓದುಗನಲ್ಲಿ ಹೆಚ್ಚಿಸುವಂತಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 100 ರುಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News