ವರ್ಗ, ವರ್ಣ ಸಂಘರ್ಷವನ್ನು ತೆರೆದಿಡುವ ‘ನರವಾನರ’
ತಮ್ಮ ‘ಅಕ್ರಮ ಸಂತಾನ’ ಆತ್ಮಕತೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು ಡಾ. ಶರಣ ಕುಮಾರ ಲಿಂಬಾಳೆ. ತಳಸ್ತರದ ಕ್ರೌರ್ಯವನ್ನು ಅಷ್ಟರ ಮಟ್ಟಿಗೆ ಹಸಿಯಾಗಿ ತೆರೆದುಕೊಂಡ ಇನ್ನೊಂದು ಆತ್ಮಕತೆ ಬರದೇ ಇದ್ದ ಸಂದರ್ಭದಲ್ಲಿ ಇವರ ಅಕ್ಕರ ಮಾಶಿ ಸುದ್ದಿ ಮಾಡಿತು. ಇದಾದ ಬಳಿಕ ಲಕ್ಷ್ಮಣ್ ಅವರ ‘ಉಚಲ್ಯಾ’ ಕೂಡ ಅಷ್ಟೇ ತೀವ್ರವಾಗಿ ಜನರನ್ನು ತಲುಪಿತು. ಇದು ಕೇವಲ ಒಬ್ಬ ವ್ಯಕ್ತಿಯ ಕಥನವಾಗದೆ ಒಂದು ಸಮುದಾಯದ ಬರ್ಬರ ಬದುಕನ್ನು ತೆರೆದಿಟ್ಟಿತು. ಅಕ್ರಮ ಸಂತಾನ ಅಥವಾ ಅಕ್ಕರ ಮಾಶಿಯ ಬಳಿಕ ಲಿಂಬಾಳೆ ಅವರು ತಮ್ಮ ಕಾದಂಬರಿಗಳ ಮೂಲಕ ಸುದ್ದಿಯಾಗತೊಡಗಿದರು. ಇವರ ಕಾದಂಬರಿ ಆತ್ಮಕತೆ ಹೇಳದೇ ಉಳಿದ ಭಾಗದಂತೆ, ಅವರದೇ ಬದುಕಿನ ಬೇರೆ ಬೇರೆ ಮಗ್ಗುಲುಗಳನ್ನು ಪರಿಚಯಿಸತೊಡಗಿತು. ಅಂತಹ ಒಂದು ಪ್ರಮುಖ ಕಾದಂಬರಿಗಳಲ್ಲಿ ‘ನರವಾನರ’ ಒಂದು. ಡಾ. ಪ್ರಮೀಳ ಮಾಧವ್ ಇದನ್ನು ಕನ್ನಡಕ್ಕೆ ತಂದಿದ್ದಾರೆ. ದಲಿತ ಸಂವೇದನೆಗಳನ್ನು ಪ್ರತಿಮಿಸುವ ರಾಜಕೀಯ ವಿದ್ಯಮಾನಗಳನ್ನು ಒಳಗೊಂಡ ಈ ಕಾದಂಬರಿಯಲ್ಲಿ ಮೇಲುವರ್ಗ ಮತ್ತು ಕೆಳವರ್ಗದ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷದ ವಿವಿಧ ಮಗ್ಗುಲುಗಳೂ ಮಾನವೀಯ ಮುಖಗಳೂ ಅನಾವರಣಗೊಂಡಿವೆ. ವ್ಯಕ್ತಿ ಮತ್ತು ವ್ಯವಸ್ಥೆಯ ಸಂಘರ್ಷ ಕಾದಂಬರಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ವರ್ಣ ಸಂಘರ್ಷವನ್ನು ಮುಖ್ಯವಸ್ತುವಾಗಿಸಿಕೊಂಡು ಅಸ್ಪಶ್ಯ ಸಮುದಾಯದ ತವಕ ತಲ್ಲಣಗಳನ್ನು ರಾಜಕೀಯ ನೆಲೆಯಲ್ಲಿ ಅನಾವರಣಗೊಳಿಸುವ ಇಲ್ಲಿನ ಅನುಭವಗಳು ಮತ್ತು ಸನ್ನಿವೇಶಗಳು ನಮ್ಮ ಸುತ್ತಮುತ್ತಲಿನ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕಠೋರ ಸತ್ಯಗಳನ್ನು ದಾಖಲಿಸುತ್ತವೆ.
1956ರಿಂದ 1996ರವರೆಗಿನ ನಾಲ್ಕು ದಶಕಗಳನ್ನು ಆಧರಿಸಿದ ಈ ಕಾದಂಬರಿ ಆತ್ಮಚಿಂತನೆಯ ಫಲಶ್ರುತಿ ಎಂದು ಲೇಖಕರು ಹೇಳಿಕೊಳ್ಳುತ್ತಾರೆ. ಇಲ್ಲಿ ಜಾತಿ ಮತ್ತು ಅದರ ತಳಹದಿಯಲ್ಲಿ ನಿಂತಿರುವ ಬಡತನ ಮತ್ತು ಶೋಷಣೆಯನ್ನು ಹೃದಯಕ್ಕೆ ಮುಟ್ಟುವಂತೆ ಕಟ್ಟಿಕೊಡಲಾಗಿದೆ. ಇದಕ್ಕೆ ಸಂಬಂಧಪಟ್ಟ ರಾಜಕೀಯ ನೆಲೆಗಳನ್ನು ಕಾದಂಬರಿಯಲ್ಲಿ ಚರ್ಚೆಗೆತ್ತಿಕೊಳ್ಳಲಾಗಿದೆ. ಮರಾಠಿಯಲ್ಲಿ ಈ ಕೃತಿಯ ಹೆಸರು ಉಪಲ್ಯಾ. 192 ಪುಟಗಳ ಈ ಕೃತಿಯ ಮುಖಬೆಲೆ 165 ರೂಪಾಯಿ. ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.