ಜಿಮ್ ಉಪಕರಣಗಳ ಬಗ್ಗೆ ಎಚ್ಚರಿಕೆಯಿರಲಿ

Update: 2017-12-11 18:38 GMT

ಜಿಮ್‌ನಲ್ಲಿ ಬ್ಯಾಕ್ಟೀರಿಯಾ? ಅಚ್ಚರಿ ಪಡಬೇಡಿ....ಇದು ನಿಜಕ್ಕೂ ಗಂಭೀರ ವಿಷಯ. ಜಿಮ್‌ಗಳಲ್ಲಿ ನೀವು ಬಳಸುವ ಕೆಲವು ಉಪಕರಣಗಳು ನಿಮ್ಮ ಟಾಯ್ಲೆಟ್‌ನಲ್ಲಿಯ ಬ್ಯಾಕ್ಟೀರಿಯಾಗಳಿಗಿಂತ ಹೆಚ್ಚು ಅಪಾಯಕಾರಿ ಬ್ಯಾಕ್ಟೀರಿಯಾಗಳ ಆವಾಸ ತಾಣಗಳಾಗಿರಬಹುದು ಎನ್ನುವುದನ್ನು ನೂತನ ಅಧ್ಯಯನವೊಂದು ಬೆಳಕಿಗೆ ತಂದಿದೆ.

ಸಂಶೋಧಕರು ಮೂರು ಬೃಹತ್ ಜಿಮ್‌ಗಳಲ್ಲಿಯ 27 ವಿವಿಧ ಉಪಕರಣಗಳನ್ನು ತಮ್ಮ ಅಧ್ಯಯನಕ್ಕೊಳಪಡಿಸಿದ್ದರು.

ಬ್ಯಾಕ್ಟೀರಿಯಾಗಳಿರುವ ಯಾವುದೇ ವಸ್ತುವಿನ ಮೇಲ್ಮೈಯನ್ನು ಸ್ಪರ್ಶಿಸುವುದರಿಂಂದ ಯಾವುದೇ ಅಪಾಯವಾಗುವುದಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದರೆ ಅಧ್ಯಯನದ ವೇಳೆ ಪರೀಕ್ಷೆಗೊಳಪಡಿಸಲಾದ ಜಿಮ್ ಉಪಕರಣಗಳಲ್ಲಿಯ ಬ್ಯಾಕ್ಟೀರಿಯಾಗಳು ಅತ್ಯಂತ ಹಾನಿಕಾರಕವಾಗಿದ್ದು ಕಂಡುಬಂದಿದೆ.

ಹಾಗಾದರೆ ಜಿಮ್ ಉಪಕರಣಗಳಲ್ಲಿಯ ಬ್ಯಾಕ್ಟೀರಿ ಯಾಗಳ ದುಷ್ಪರಿಣಾಮಗಳಿಂದ ಪಾರಾಗುವುದು ಹೇಗೆ? ನೀವು ಈ ಉಪಕರಣಗಳನ್ನು ಬಳಸುವ ಮೊದಲು ಅವುಗಳನ್ನು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸು ವುದು ಇದಕ್ಕೆ ಅತ್ಯುತ್ತಮ ಮಾರ್ಗವಾಗಿದೆ. ಜೊತೆಗೆ ವ್ಯಾಯಾಮ ಮುಗಿದ ಬಳಿಕ ಏನನ್ನಾದರೂ ತಿನ್ನುವ ಅಥವಾ ನಿಮ್ಮ ಮುಖವನ್ನು ಮುಟ್ಟಿಕೊಳ್ಳುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ. ಸೋಂಕನ್ನುಂಟು ಮಾಡುವ ಕೆಲವು ಜಿಮ್ ಉಪಕರಣಗಳ ಕುರಿತು ಮಾಹಿತಿಗಳು ಇಲ್ಲಿವೆ,ಓದಿಕೊಳ್ಳಿ..........

► ಟ್ರೆಡ್‌ಮಿಲ್

ಟ್ರೆಡ್‌ಮಿಲ್ ಮೇಲೆ ತುಂಬ ಸಮಯ ಓಡುವುದು ನಿಮ್ಮನ್ನು ಬೆವರುವಂತೆ ಮಾಡುತ್ತದೆ ಮತ್ತು ಈ ಬೆವರು ಯಂತ್ರದ ಮೇಲೆ ಎಲ್ಲ ಕಡೆಗಳಲ್ಲಿ ಹನಿ ಹನಿಯಾಗಿ ಬೀಳುತ್ತಿರುತ್ತದೆ. ಹೆಚ್ಚಿನ ಜನರು ಬೆವರೊರೆಸಿಕೊಳ್ಳಲು ತಮ್ಮ ಟವೆಲ್‌ಗಳನ್ನು ಯಂತ್ರದ ಸೈಡ್ ಬಾರ್‌ನ ಮೇಲಿಟ್ಟಿರುತ್ತಾರೆ. ಇದು ಅತ್ಯಂತ ಅನಾರೋಗ್ಯಕರವಾಗಿದೆ. ಟ್ರೆಡ್‌ಮಿಲ್ ಬ್ಯಾಕ್ಟೀರಿಯಾಗಳ ಆಶ್ರಯ ತಾಣವಾಗಿದ್ದು, ಚರ್ಮದ ಸೋಂಕುಗಳು ಮತ್ತು ನ್ಯುಮೋನಿಯಾಕ್ಕೆ ಈ ಬ್ಯಾಕ್ಟೀರಿಯಾಗಳು ಕಾರಣವಾಗಬಹುದು.

► ಡಂಬೆಲ್
 ಡಂಬೆಲ್ ಸಂಭಾವ್ಯ ಬ್ಯಾಕ್ಟೀರಿಯಾ ವಾಹಕವಾಗಿ ರುವ ಇನ್ನೊಂದು ಜಿಮ್ ಸಾಧನವಾಗಿದೆ. ವ್ಯಾಯಾಮದ ಸಂದರ್ಭದಲ್ಲಿ ಡಂಬೆಲ್‌ಗಳನ್ನು ಎತ್ತಿದಾಗ ಕೈ ಮತ್ತು ಶರೀರದ ಮೇಲಿನ ಬೆವರು ಅದರ ಸುತ್ತ ಹರಡುತ್ತದೆ ಮತ್ತು ಇದು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ನೆರವಾಗುತ್ತದೆ.

► ಕ್ರಾಸ್ ಟ್ರೇನರ್
ಕ್ರಾಸ್ ಟ್ರೇನರ್‌ಗಳಲ್ಲಿ ವರ್ಕ್ ಔಟ್ ಮಾಡುವಾಗ ನಮ್ಮ ಕೈಗಳು ಬೆವರುತ್ತಿರುತ್ತವೆ. ಕ್ರಾಸ್ ಟ್ರೇನರ್‌ನ ಹಿಡಿಕೆಗಳ ಸುತ್ತ ಬೆವರು ಹರಡುವುದನ್ನು ನೀವು ಗಮನಿಸಬಹುದು ಮತ್ತು ಇದೇ ಕಾರಣದಿಂದ ಇತರರ ಬೆವರಿನಿಂದ ಬ್ಯಾಕ್ಟೀರಿಯಾ ಸೋಂಕಿಗೆ ನೀವು ತುತ್ತಾಗಬಹುದು.

► ಎಬಿ/ಹೈಪರ್ ಬೆಂಚ್

ಜನರು ಸಾಮಾನ್ಯವಾಗಿ ಇತರ ಸಾಧನ ಗಳಲ್ಲಿ ಸಾಕಷ್ಟು ಕಸರತ್ತುಗಳನ್ನು ಮಾಡಿದ ನಂತರ ಈ ಬೆಂಚ್ ಬಳಿ ಬರುತ್ತಾರೆ. ಇದನ್ನು ಬಳಸಲು ಆರಂಭಿಸಿದ ಬೆನ್ನಿಗೇ ಅವರು ಬೆವರತೊಡಗುತ್ತಾರೆ ಮತ್ತು ಬೆಂಚ್‌ಗೆ ಈ ಬೆವರು ಅಂಟಿಕೊಳ್ಳಲಾರಂಭಿಸುತ್ತದೆ. ಹೀಗಾಗಿ ಈ ಬೆಂಚ್ ಬ್ಯಾಕ್ಟೀರಿಯಾಗಳು ಬೆಳೆಯಲು ಹೇಳಿ ಮಾಡಿಸಿದಂತಿದೆ. ಈ ಬೆಂಚ್‌ನ್ನು ಬಳಸುವವರು ಖಂಡಿತವಾಗಿಯೂ ಬ್ಯಾಕ್ಟೀರಿಯಾ ಸೋಂಕುಗಳಿಗೆ ತೆರೆದುಕೊಳ್ಳುತ್ತಾರೆ.

► ಪುಲ್-ಅಪ್ ಬಾರ್

ಪುಲ್-ಅಪ್ ಬಾರ್ ಬ್ಯಾಕ್ಟೀರಿಯಾಗಳನ್ನು ಪೋಷಿಸುವ ಇನ್ನೊಂದು ಜಿಮ್ ಸಾಧನವಾಗಿದೆ. ಕಸರತ್ತು ಮಾಡುವ ವ್ಯಕ್ತಿಯ ಕೈಗಳಲ್ಲಿಯ ಬೆವರು ಬ್ಯಾಕ್ಟೀರಿಯಾಗಳು ವೃದ್ಧಿಗೊಳ್ಳಲು ಬೆಚ್ಚನೆಯ ಉಷ್ಣತೆಯನ್ನೊದಗಿಸುತ್ತದೆ ಮತ್ತು ಈ ಬ್ಯಾಕ್ಟೀರಿಯಾ ಗಳು ಸಾಧನವನ್ನು ಬಳಸುವವರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ.
 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ