ಭಾರತದ ಬಹುಭಾಷಿಕ ಪರಿಸರದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ

Update: 2017-12-11 18:40 GMT

ಬಹುಭಾಷೆ ಭಾರತದ ಹೆಗ್ಗಳಿಕೆಯಾಗಿದೆ. ಒಂದು ಭಾಷೆಯ ಹಿಂದೆ ಒಂದು ಜನಜೀವನವಿದೆ. ಇಂತಹ ನೂರಾರು ವೈವಿಧ್ಯಮಯ ಸಂಸ್ಕೃತಿಯ ಮೂಲಕ ರೂಪುಗೊಂಡ ನೂರಾರು ಭಾಷೆಗಳಲ್ಲಿ ನಮ್ಮ ಭಾರತೀಯತೆ ಬೆಸೆದುಕೊಂಡಿದೆ. ಇತ್ತೀಚೆಗೆ ದೇಶವನ್ನು ಒಂದು ಭಾಷೆಯ ಮೂಲಕ ಜೋಡಿಸುವ ಕೆಟ್ಟ ಪ್ರಯತ್ನ ನಡೆಯುತ್ತಿರುವುದನ್ನು, ಪ್ರಾದೇಶಿಕ ಭಾಷೆಗಳು ಇದರ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಡಾ. ಎಸ್. ಸಿರಾಜ್ ಅಹಮದ್ ಅವರ ಸಂಪಾದಕತ್ವದಲ್ಲಿ ‘ಭಾರತದ ಬಹು ಭಾಷಿಕ ಪರಿಸರ ಮತ್ತು ಅನುವಾದ’ ಕೃತಿಯನ್ನು ಹೊರತಂದಿದೆ. ಅನುವಾದ ಹೇಗೆ ಬಹುಭಾಷೆಯನ್ನು ಜೋಡಿಸುವ ಕೊಂಡಿಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವ ಹಿನ್ನೆೆಯಲ್ಲಿ ರೂಪುಗೊಂಡ ಕೃತಿ ಇದಾಗಿದೆ.

ಬಹುಭಾಷಿಕ ಪರಿಸರದಲ್ಲಿ ಅನುವಾದವೆಂಬುದು ಔಪಚಾರಿಕ ಮತ್ತು ಅನೌಪಚಾರಿಕ ನೆಲೆಗಳಲ್ಲಿ ಕಾರ್ಯಪ್ರವೃತ್ತವಾಗಿರುವ ಪ್ರಕ್ರಿಯೆಯಾಗಿದೆ. ಅನುವಾದವೆಂಬುದು ಬಹುಭಾಷಿಕ ಪರಿಸರದಲ್ಲಿ ನಿರ್ವಹಿಸುತ್ತಿರುವ ಹೊಣೆಗಳು ಮತ್ತು ನಿರ್ವಹಿಸಬಹುದಾದ ಹೊಣೆಗಳನ್ನು ಈ ಕೃತಿ ಚರ್ಚಿಸುತ್ತದೆ. ಪ್ರಾಧಿಕಾರ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿವಿಧ ಚಿಂತಕರು ಮಂಡಿಸಿದ ಪ್ರಬಂಧವನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಅನುವಾದಗಳನ್ನು ಮಾಡುವುದಲ್ಲದೆ, ಅನುವಾದಕ್ಕೆ ಹಿನ್ನೆಲೆಯಾಗಿರುವ ಸಾಂಸ್ಕೃತಿಕ ಸಂದರ್ಭ, ಚಿಂತನೆಗಳನ್ನು ವಿವರವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ಶಿಕ್ಷಣದಲ್ಲಿ ಭಾಷಾ ಆದ್ಯತೆಗಳು, ವಿಜ್ಞಾನದ ಯಾಜಮಾನ್ಯ ಭಾಷೆಯ ಮೇಲೆ ಬೀರಿದ ಪರಿಣಾಮ, ಸಾಹಿತ್ಯಕ ಭಾಷಾಂತರದ ರಾಜಕಾರಣ, ಬಹುಭಾಷಿಕತೆಗೆ, ಬಹುಸಂಸ್ಕೃತಿಗೆ ದಖನಿ ಭಾಷೆಯ ಕೊಡುಗೆ, ರಾಷ್ಟ್ರೀಯತೆ ಹಾಗೂ ಸಂಸ್ಕೃತಿಗಳ ಮರು ನಿರೂಪಣೆ ಹೀಗೆ ಬೇರೆ ಬೇರೆ ನೆಲೆಗಳಲ್ಲಿ ಬಹುಭಾಷಿಕ ಸನ್ನಿವೇಶಗಳನ್ನು ಇಲ್ಲಿ ಬೇರೆ ಬೇರೆ ಲೇಖಕರು ಚರ್ಚಿಸಿದ್ದಾರೆ. ರಾಷ್ಟ್ರಮಟ್ಟದ 14 ಲೇಖಕರು ಇಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿದ್ದು, ಬೇರೆ ಬೇರೆ ಭಾಷೆಗಳು ಬಹುಸಂಸ್ಕೃತಿಗೆ ನೀಡಿರುವ ಕೊಡುಗೆಗಳನ್ನು ಚರ್ಚಿಸಿದ್ದಾರೆ. ಭಾರತದ ಮಟ್ಟಿಗೆ ಅನುವಾದವೆನ್ನುವುದು ಎಷ್ಟು ಗಂಭೀರವಾದ ವಿಷಯ ಎನ್ನುವುದನ್ನು ಈ ಕೃತಿಯಿಂದ ನಮ್ಮದಾಗಿಸಿಕೊಳ್ಳಬಹುದು. 276 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News