ಮುಂಬೈ ದೊಂಬಿಗಳ ಮಕ್ಕಳ ಸಾಮರಸ್ಯ ಮತ್ತು ಆತಂಕದ ಕಥೆಗಳು

Update: 2017-12-14 06:18 GMT

ಭಾಗ-2

ಶಾನುಲ್ ಸೈಯದ್ (36)

ಇಂಟೀರಿಯರ್ ಡೆಕೊರೇಟರ್ ಮತ್ತು ಆಲ್ ಇಂಡಿಯಾ ಮಜ್ಲಿಸೇ ಇತ್ತೆಹಾದುಲ್ ಮುಸ್ಲಿಮೀನ್ ಸದಸ್ಯ, ಸಾಂತಾಕ್ರೂಸ್

ದೊಂಬಿಗಳು ಆರಂಭವಾಗುವ ಮೊದಲು, ಹನ್ನೊಂದರ ಹರೆಯದ ಶಾನುಲ್ ಸೈಯದ್ ಸಾಂತಾಕ್ರೂಸ್‌ನ ಪಶ್ಚಿಮ ಉಪನಗರದಲ್ಲಿನ ತಮ್ಮ ಕಾಲನಿಯ ಸಮೀಪ ಪ್ರತಿದಿನ ಸಂಜೆ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡ್ರಿಲ್‌ಗಳಿಗೆ ತನ್ನ ಗೆಳೆಯರ ಜೊತೆಗೆ ಹೋಗುತ್ತಿದ್ದ. ಆದರೆ ದೊಂಬಿಯ ಹಿಂಸೆಯ ಬಳಿಕ, ತಾನು ಇತರರಿಗಿಂತ ಭಿನ್ನ ಎಂದು ‘‘ಬಲಾತ್ಕಾರಪೂರ್ವಕ ವಾಗಿ ಮನಗಾಣುವಂತೆ ಮಾಡಲಾಯಿತು’’ ಎನ್ನುತ್ತಾರೆ ಸೈಯದ್.

ಅವರ ಕಾಲನಿಯ ಸಮೀಪ ಇರುವ, ಪ್ರಧಾನವಾಗಿ ಹಿಂದೂ ಕಾಲನಿಯಲ್ಲಿದ್ದ, ಮುಸ್ಲಿಮರ ಮನೆಗಳನ್ನು ಹಿಂದೂಗಳಿಗೆ ಮಾರಲಾಯಿತು ಮತ್ತು ಅವರ ಮುಸ್ಲಿಂ ಕಾಲನಿಯಲ್ಲಿದ್ದ ಹಿಂದೂಗಳು ಅಲ್ಲಿಂದ ಹೊರಟು ಹೋದರು. ‘‘ಪರಸ್ಪರ ಮನೆಗಳಿಗೆ ನೀಡುತ್ತಿದ್ದ ನಮ್ಮ ದೈನಂದಿನ ಭೇಟಿಗಳು ವಾರದ ಭೇಟಿಗಳಾದವು’’ ಎಂದು ಆತ ಜ್ಞಾಪಿಸಿಕೊಳ್ಳುತ್ತಾರೆ.

ಅವರ ಮನೆಯಲ್ಲಿ ಕೋಮುವಾದದ ವಿರುದ್ಧದ ಹೋರಾಟದ ಇತಿಹಾಸವೇ ಇತ್ತು. ಆತನ ದೊಡ್ಡಪ್ಪ ವೌಲಾನಾ ಹಝ್ರತ್ ಮೊಹಾನಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಓರ್ವ ನಾಯಕರಾಗಿದ್ದರು ಮತ್ತು ಓರ್ವ ಕಾಂಗ್ರೆಸ್ಸಿಗರಾದ ಅವರ ತಂದೆ ಹಿಂದೂ-ಮುಸ್ಲಿಂ ಐಕ್ಯತೆಯಲ್ಲಿ ದೃಢವಾದ ನಂಬಿಕೆಯಿಟ್ಟಿದ್ದರು.

ಸೈಯದ್ ತನ್ನ ಮಕ್ಕಳನ್ನು ಒಂದು ಇಸ್ಲಾಮಿಕ್ ಶಾಲೆಗೆ ಕಳುಹಿಸುತ್ತಾರಾದರೂ, ತನ್ನ ಮಕ್ಕಳ ಅತ್ಯುತ್ತಮ ಗೆಳೆಯರು ಹಿಂದೂಗಳು ಎಂಬ ಬಗ್ಗೆ ಅವರಿಗೆ ಸಂತೋಷವಿದೆ. ಜನರು ವಾಸಿಸುವ ಪ್ರದೇಶಗಳಲ್ಲಿ ಎಲ್ಲಾ ಧಾರ್ಮಿಕ ಗುಂಪುಗಳ ಜನರಿರಬೇಕು; ಇದು ಪ್ರತಿಯೊಂದು ಸಮುದಾಯಕ್ಕೂ ಇತರರ ಸಂಸ್ಕೃತಿಗಳ ಬಗ್ಗೆ ಕಲಿಯಲು ಅವಕಾಶ ಸಿಗುತ್ತದೆ ಎಂಬ ನಿಲುವು ಅವರದ್ದು. ಕೋಮು ಪ್ರಚಾರಕ್ಕೆ ಬಲಿಯಾಗುವ ಸಾವಿರಾರು ಮಿನಿ ಭಾರತಗಳು ಮತ್ತು ಪಾಕಿಸ್ತಾನಗಳು ಇರುವುದಕ್ಕಿಂತ ಮುಂಬೈಯಲ್ಲಿ ಮಿಶ್ರ ನೆರೆಕರೆಗಳಿರುವುದು ತೀರಾ ಅಗತ್ಯ ಎನುತ್ತಾರೆ ಅವರು.

ಮಹೇಶ್ ಪಡುವಾಳ್ (39)

ಉದ್ಯಮಿ ಮತ್ತು ಜೋಗೇಶ್ವರಿಯ ಶಿವಸೇನಾ ಬಳಕೆದಾರರ ವೇದಿಕೆಯ ಉಪಾಧ್ಯಕ್ಷ

ತಾನು ಎಂಟನೇ ತರಗತಿಯಲ್ಲಿದ್ದಾಗಿನಿಂದ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನಾ ನಾಯಕ ಬಾಳಾ ಠಾಕ್ರೆಯ ಭಾಷಣವನ್ನು ಕೇಳಲು ಯಾವತ್ತೂ ತಪ್ಪಿದ್ದಿಲ್ಲ ಎಂಬ ಬಗ್ಗೆ ಮಹೇಶ್ ಪಡುವಾಳ್ ಹೆಮ್ಮೆ ಪಡುತ್ತಾರೆ. ದೊಂಬಿಗಳು ನಡೆಯುವಾಗ ಆತ 14ರ ಹರೆಯದ ಹುಡುಗ. ಜೋಗೇಶ್ವರಿಯ ರಾಧಾಬಾಯಿ ಚಾಳ್‌ನ ಘಟನೆ ನಡೆದ ಆನಂತರ ಪಲಾಯನ ಮಾಡಿದವರಲ್ಲಿ ಆತನ ಜೀವದ ಗೆಳೆಯ ಕೂಡಾ ಒಬ್ಬ. ಆ ಗೆಳೆಯ ಮತ್ತೆಂದೂ ಮರಳಿ ಬರಲಿಲ್ಲ.

ಶಿವಸೇನೆಯ ಓರ್ವ ನಿಷ್ಠಾವಂತ ಸದಸ್ಯನಾಗಿ, ಶಿವಸೇನೆಯ ದೊಂಬಿಗಳಲ್ಲಿ ವಹಿಸಿದ ಪಾತ್ರಗಳನ್ನು ‘‘ರಕ್ಷಣಾತ್ಮಕ’’ ಎನ್ನುವ ಆತ, ಸ್ವಲ್ಪ ಯೋಚಿಸಿದ ಬಳಿಕ, ಮುಂಬೈಯ ಮುಸ್ಲಿಂ ಸಮುದಾಯದ ವಿರುದ್ಧ ‘‘ಪ್ರತೀಕಾರ’’ ಮಾಡುವುದರಲ್ಲಿ ಶಿವಸೇನೆ ‘‘ಅತಿರೇಕಕ್ಕೆ ಹೋಯಿತು’’ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಈಗ ಶಿವಸೇನೆಯ ಮನೋಧರ್ಮ ಬದಲಾಗಿದೆ ಎನ್ನುತ್ತಾರೆ ಆತ.

ಜೋಗೇಶ್ವರಿಯ 40 ಮಂದಿ ಶಿವಸೇನಾ ವಾರ್ಡ್ ಮುಖ್ಯಸ್ಥರಲ್ಲಿ 28 ಮಂದಿ ಮುಸ್ಲಿಮರು. ಕಳೆದ ಮುನ್ಸಿಪಲ್ ಚುನಾವಣೆಯಲ್ಲಿ ಅಲ್ಲಿಯ ಶಿವಸೇನಾ ಅಭ್ಯರ್ಥಿ ಕೂಡ ಓರ್ವ ಮುಸ್ಲಿಂ.

ಶಿವಸೇನೆಗೆ ಪಡುವಾಳ್ ಹೊಂದಿರುವ ನಿಷ್ಠೆ ಆತನ ಮುಸ್ಲಿಂ ನೆರೆಕರೆಯವರೊಂದಿಗಿನ ಸಂಬಂಧವನ್ನು ಹಾಳುಗೆಡವಲಿಲ್ಲ. ಪ್ರತೀ ವರ್ಷ ಆತನ ನೆರೆಕರೆಯ ಮುಸ್ಲಿಮರೊಬ್ಬರು ಅವರ ಕೈಗೆ ರಾಖಿ ಕಟ್ಟುತ್ತಾರೆ.

‘‘ಬಕ್ರೀದ್ ದಿನ ನನ್ನ ನೆರೆಮನೆಯಾತ ಖುರ್ಬಾನಿ ಮಾಡುವಾಗ ನಾನು ಆಡನ್ನು ಅಲ್ಲಾಡದಂತೆ ಹಿಡಿದುಕೊಳ್ಳುತ್ತೇನೆ’’ ಎನ್ನುತ್ತಾರೆ ಮಹೇಶ್ ಪಡುವಾಳ್.

ಜೋಗೇಶ್ವರಿಯ ಕೋಮು ವಾತಾವರಣದ ಬದಲಾವಣೆಗೆ ಶಿಕ್ಷಣವೇ ಕಾರಣ ಎನ್ನುವ ಆತ ‘‘ಇವತ್ತು ನಮ್ಮ ಮಕ್ಕಳು ಒಂದೇ ಶಾಲೆಗೆ ಹೋಗುತ್ತಾರೆ. ಈದ್ ದಿನ ನನ್ನ ಮಕ್ಕಳು ಶಾಲೆಗೆ ಶೀರ್‌ಕೂರ್ಮಾ ಕೊಂಡುಹೋಗುತ್ತಾರೆ ಮತ್ತು ಕೃಷ್ಣ ಜನ್ಮಾಷ್ಟಮಿಯಂದು ಮುಸ್ಲಿಂ ಮಕ್ಕಳು ಕೃಷ್ಣನ ವೇಷ ಧರಿಸಿ ಶಾಲೆಗೆ ಬರುತ್ತಾರೆ.’’ ಎನ್ನುತ್ತಾರೆ.

1992-93ರ ಕೋಮು ಹಿಂಸೆ ಮತ್ತೊಮ್ಮೆ ಮರುಕಳಿಸುವುದಿಲ್ಲ ಎನ್ನುವ ದೃಢವಾದ ನಂಬಿಕೆ ಅವರಿಗಿದೆ. ‘‘ನಮ್ಮ ಮಕ್ಕಳೇ ನಮಗೆ ದೊಂಬಿ ಮಾಡಲು ಬಿಡುವುದಿಲ್ಲ. ಎನ್ನುತ್ತಾರೆ ಮಹೇಶ್ ಪಡುವಾಳ್.

ಅಬ್ದುಲ್ ಖಾಸಿಂ (37)

ಶಿಕ್ಷಕ, ಇಸ್ಲಾಮಿಕ್ ಸ್ಕೂಲ್, ಬೈಕುಲಾ

ಮುಂಬೈಯ ಮುಸ್ಲಿಂ ಪ್ರದೇಶವಾಗಿರುವ ಬೆಂಡಿ ಬರಝಾರ್‌ನ ಮದ್ರಸಾದ 12ನೇ ಹರೆಯದ ವಿದ್ಯಾರ್ಥಿಯಾಗಿದ್ದ ಅಬ್ದುಲ್ ಖಾಸಿಂ, 1993ರ ಜನವರಿ 9ರಂದು ಬಾಗಿಲು ಮುರಿದು ಒಳಗೆ ನುಗ್ಗಿದ ಪೊಲೀಸರು ತನ್ನ ಸಹಪಾಠಿಗಳು ಮತ್ತು ಓರ್ವ ಶಿಕ್ಷಕರನ್ನು ಥಳಿಸುವುದನ್ನು ನೋಡಿದರು. ಪಕ್ಕದಲ್ಲಿದ್ದ ಸುಲೈಮಾನ್ ಉಸ್ಮಾನ್ ಬೇಕರಿಯ ಟೆರೆಸ್ ಮೇಲಿನಿಂದ ಪೊಲೀಸರತ್ತ ಗುಂಡು ಹಾರಿಸಿದ್ದ ಭಯೋತ್ಪಾದಕರನ್ನು ಹುಡುಕುತ್ತಾ ಆ ಪೊಲೀಸರು ಮದ್ರಸಾಕ್ಕೆ ನುಗ್ಗಿದ್ದರು. ಖಾಸಿಂ ತರಗತಿಯ ಹೊರಗಿನಿಂದ ಕೇಳಿ ಬರುತ್ತಿದ್ದ ಗುಂಡಿನ ಸದ್ದನ್ನು ಕೇಳಿಸಿಕೊಂಡಿದ್ದರು. ಆ ಮದ್ರಸಾದಲ್ಲಿ ಶಿಕ್ಷಕರಾಗಿದ್ದ ಅವರ ತಂದೆ ಗುಂಡು ಹಾರಾಟದಲ್ಲಿ ಹತ್ಯೆಯಾಗಿದ್ದರು ಎಂದು ಅವರಿಗೆ ತಿಳಿದಿರಲಿಲ್ಲ. ಖಾಸಿಂ ತನ್ನ ತಂದೆಯ ಶವವನ್ನು ನೋಡಿದ್ದು ಕೆಲವು ದಿನಗಳ ಬಳಿಕ...

‘‘ನಾನು ತಂದೆಯಿಲ್ಲದೆ ಬೆಳೆದೆ. ತಂದೆಯ ಸಾವಿನ ಸುದ್ದಿ ಕೇಳಿದ ನನ್ನ ಅಜ್ಜ ಪಾರ್ಶ್ವವಾಯು ಪೀಡಿತರಾದರು. ಎಂಟು ವರ್ಷಗಳ ಬಳಿಕ ಸಾಯುವ ತನಕ ಅವರು ಹಾಸಿಗೆಯಿಂದ ಏಳಲೇ ಇಲ್ಲ’’ ಎನ್ನುವ ಖಾಸಿಂ ಇಸ್ಲಾಮಿಕ್ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದಾರೆ. 2001ರಲ್ಲಿ ತನ್ನ ತಂದೆ ಮತ್ತು ಇತರ ಏಳು ಮಂದಿ ಮುಸ್ಲಿಮರನ್ನು ಕೊಂದಿದ್ದ ಆಪಾದನೆಗೆ ಗುರಿಯಾಗಿದ್ದ ಪೊಲೀಸರಿಗೆ ಜಾಮೀನು ನೀಡುವುದನ್ನು ವಿರೋಧಿಸಿ ಖಾಸಿಂ ನ್ಯಾಯಾಲಯದಲ್ಲಿ ಮಧ್ಯಪ್ರವೇಶಿಸಿದ್ದರು. ಆದರೆ ಆ ದಾವೆಯಲ್ಲಿ ಅವರು ಸೋತರು.

ತನ್ನ ತಂದೆ ತೀರಿಕೊಂಡಾಗ ತನ್ನ ನೆರೆಕರೆಯ ಕೆಲವು ಹಿಂದೂಗಳು ‘ಚಾಂಗ್ಲಾ ಮಾನುಷ್’ (ಒಬ್ಬ ಒಳ್ಳೆಯ ಮನುಷ್ಯ)ನ ಸಾವಿಗಾಗಿ ಶೋಕವ್ಯಕ್ತಪಡಿಸಿದ್ದರೆಂದು ಖಾಸಿಂ ಜ್ಞಾಪಿಸಿಕೊಂಡಿದ್ದಾರೆ. ಆದರೂ ಕೂಡಾ ಅವರ ಮಕ್ಕಳು ಗಡ್ಡವಿರುವ ತನ್ನಂತಹವರನ್ನು ಅನುಮಾನದಿಂದ ನೋಡುತ್ತಾರೆಂದೂ ಅವರು ಹೇಳುತ್ತಾರೆ. ಒಮ್ಮೆ ತಾನು ಅವರೊಡನೆ ತನ್ನ ಮನೆಯ ಕೆಲವು ಸಾಮಾನುಗಳನ್ನು ಅವರ ಮನೆಯಲ್ಲಿ ಇಡಬಹುದೇ ಎಂದು ಕೇಳಿದಾಗ ಅವರು ಕೇಳಿದ ಪ್ರಶ್ನೆ: ‘‘ನಮ್ಮ ಮನೆಯ ಒಳಗೆ ಖಂಡಿತವಾಗಿಯೂ ಬಾಂಬ್ ಇಲ್ಲವಲ್ಲ? ನೀವು ಸಾಮಾನುಗಳನ್ನು ಅಲ್ಲಿ ಇಡಬಹುದು’’

ತನ್ನ ತಂದೆ ಕೊಲ್ಲಲ್ಪಟ್ಟ ರೀತಿಯ ಬಗ್ಗೆ ಖಾಸಿಂಗೆ ಇನ್ನೂ ಕೋಪವಿದೆ. ಆದರೆ ಇಸ್ಲಾಂ ಧರ್ಮ ತನಗೆ ತಾಳ್ಮೆಯನ್ನು ಕಲಿಸಿದೆ ಎನ್ನುತ್ತಾರೆ ಅವರು. ‘‘ನಾವೆಲ್ಲ ಒಬ್ಬನೇ ಸೃಷ್ಟಿಕರ್ತನಿಂದ ಸೃಷ್ಟಿಸಲ್ಪಟ್ಟವರು. ಎಂದು ಇಸ್ಲಾಂ ನಮಗೆ ಹೇಳುತ್ತದೆ. ಎಲ್ಲ ಮುಸ್ಲಿಮರು ಭಯೋತ್ಪಾದಕರು ಎಂದು ತಿಳಿಯುವ ಹಾಗೆ (ನನ್ನ ತಂದೆಯನ್ನು ಕೊಂದ) ಆ ಪೊಲೀಸರನ್ನು ಬ್ರೈನ್‌ವಾಶ್ ಮಾಡಲಾಗಿತ್ತು. ಪ್ರಾಯಶಃ ನಾವು ಮುಸ್ಲಿಮರು ಎಲ್ಲೋ ಎಡವಿದ್ದೇವೆ.’’ ಎನ್ನುತ್ತಾರೆ.

ಕೃಪೆ: scroll.in

Writer - ಜ್ಯೋತಿ ಪುನ್‌ವಾನಿ

contributor

Editor - ಜ್ಯೋತಿ ಪುನ್‌ವಾನಿ

contributor

Similar News

ಜಗದಗಲ
ಜಗ ದಗಲ