ಮನುಷ್ಯನ ಹತಾಶೆಗಳನ್ನು ಹೇಳುವ ಒಂಟಿ ತೆಪ್ಪ‘
ಒಂಟಿ ತೆಪ್ಪ’ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ಕಥಾ ಸಂಕಲನ. ಇದು ಇವರ ಐದನೇ ಕಥಾ ಸಂಕಲನ. ಅರಣ್ಯ ಇಲಾಖೆಯಲ್ಲಿ ಅಧೀಕ್ಷಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಇವರು ಸಾಹಿತ್ಯ ಕೃಷ್ಟಿಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ. ಅಂತರಂಗದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಮಾನವೀಯತೆಯ ಗುಣ ಇವರ ಕತೆಗಳಲ್ಲಿ ಮಡುಗಟ್ಟಿವೆ. ಹೆಚ್ಚಿನ ಕತೆಗಳು ಇಂತಹ ಮಾನವೀಯ ಕಾರಣಗಳಿಗಾಗಿ ಇಷ್ಟವಾಗುತ್ತವೆ. ಇಲ್ಲಿ ಒಟ್ಟು 16 ಕತೆಗಳಿವೆ. ತಾನು ಕಳೆದುಕೊಂಡದ್ದನ್ನು ಮರಳಿ ಪಡೆಯುವ ಹವಣಿಕೆಯಲ್ಲಿ ವಿಫಲನಾಗುವ ಮನುಷ್ಯನ ಒಳ ಹೊರಗಿನ ದುರಂತವನ್ನು ‘ಕಳಕೊಂಡವನು’ ಹೇಳುತ್ತದೆ. ವೃಂದಾಳ ಒಡೆದ ಕನಸನ್ನು ಹೇಳುವ ‘ಕನಸುಗಳಿಗೆ ದಡಗಳಿರುವುದಿಲ್ಲ’ ಕತೆ, ರಾಜಕಾರಣಿಗಳ ಸಮಯ ಸಾಧಕತನಕ್ಕೆ ಬಲಿಯಾಗುವ ಪ್ರತಿಭಾವಂತ ಯುವಕರ ದುರಂತವನ್ನು ಹೇಳುವ ‘ನಿರಾಳ’ ಕತೆ ಒಂದು ರೀತಿಯ ವಿಷಾದವನ್ನು ಬಿತ್ತುತ್ತವೆ. ವರ್ತಮಾನದ ಆಸೆ ಮತ್ತು ಅದು ವಿಫಲವಾದಾಗ ಎದುರಾಗುವ ಆಘಾತಗಳನ್ನು ತೆರೆದಿಡುತ್ತದೆ. ‘ಒಂದು ಹಿಡಿ ಪ್ರೀತಿ’ ಇಂದಿನ ಕಾಲದ ಕೌಟುಂಬಿಕ ದುರಂತಗಳನ್ನು ಹೇಳುತ್ತದೆ. ವಿದೇಶದಲ್ಲಿರುವ ಮಗ ಸೊಸೆ. ಅವರನ್ನು ನೋಡಬೇಕೆನ್ನುವ ಪಾಲಕರ ತುಡಿತ, ಆದರೆ ಎದುರಾಗುವ ನಿರಾಶೆಯನ್ನು ಈ ಕತೆ ಕಟ್ಟಿಕೊಡುತ್ತದೆ. ತನ್ನ ಮೊಮ್ಮಗನನ್ನು ನೋಡಲಾಗದ ವೃದ್ಧ ದಂಪತಿ, ಬಾಡಿಗೆ ಮನೆಯಲ್ಲಿರುವಾತನ ಮಗುವಿನಲ್ಲಿ ಮೊಮ್ಮಗನನ್ನು ಕಾಣುವಲ್ಲಿ ಕತೆ ಮುಗಿಯುತ್ತದೆ. ಇದೊಂದು ರೀತಿ, ಬಾಂಧವ್ಯವೆನ್ನುವುದು ಹೇಗೆ ರಕ್ತ ಸಂಬಂಧಕ್ಕೂ ಆಚೆಗಿನದು ಎನ್ನುವುದನ್ನು ಹೇಳುತ್ತದೆ.
ಇಲ್ಲಿರುವ ಹೆಚ್ಚಿನ ಕತೆಗಳೂ ಕೌಟುಂಬಿಕ ನೆಲೆಯಿಂದ ಮೂಡಿ ಬಂದಿರುವುದು. ಜನಪ್ರಿಯ ಮಾದರಿಯನ್ನು ಕತೆ ಹೇಳುವ ತಂತ್ರವನ್ನಾಗಿಸಿದ್ದಾರೆ. ಅನಿರೀಕ್ಷಿತ ಅಂತ್ಯ ಕತೆಯ ಹೆಗ್ಗಳಿಕೆ. ಸರಳ ನಿರೂಪಣೆ ಕತೆಯನ್ನು ಆತ್ಮೀಯವಾಗಿಸುತ್ತದೆ. ವಿಜಯಲಕ್ಷ್ಮೀ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 120 ರೂ. ಆಸಕ್ತರು 98453 25356 ೂರವಾಣಿಯನ್ನು ಸಂಪರ್ಕಿಸಬಹುದು.