ಕಲಬುರಗಿಯ ದರ್ಗಾಕ್ಕೆ ಆಧುನಿಕತೆಯ ಸ್ಪರ್ಶ
ಕಲಬುರಗಿಯ ಖ್ವಾಜಾ ಬಂದೇನವಾಝ್ ದರ್ಗಾದ ಸಜ್ಜಾದಾನಾಶಿನ್ (ಪಾಲಕ) ಡಾ. ಸೈಯದ್ ಶಾ ಖುಸ್ರೋ ಹುಸೈನಿ ಅವರು ಈ ಇತಿಹಾಸ ಪ್ರಸಿದ್ಧ ದರ್ಗಾದ ಕಾರ್ಯ ನಿರ್ವಹಣೆಯಲ್ಲಿ ಅಕ್ಷರಶಃ ಕ್ರಾಂತಿಯನ್ನು ತಂದಿದ್ದಾರೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ದಕ್ಷತೆಯೊಂದಿಗೆ ನಡೆಸುವ ಜೊತೆಗೆ ಇಡೀ ದರ್ಗಾದ ಆಡಳಿತ ಹಾಗೂ ಮೂಲಸೌಕರ್ಯಗಳಿಗೆ ಅತ್ಯಂತ ಅಲ್ಪಸಮಯದಲ್ಲೇ ಅಧುನಿಕತೆಯ ಸ್ಪರ್ಶ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ದರ್ಗಾಗಳು ಶ್ರದ್ಧಾ ಭಕ್ತಿಯ ಕೇಂದ್ರಗಳಾಗಿವೆ. ಸಂತರು ಹಾಗೂ ಸೂಫಿಗಳ ಪ್ರೀತಿಯ ಸಂದೇಶದಿಂದ ಆಕರ್ಷಿತರಾಗಿ ಅವರ ಸಮಾಧಿಗಳನ್ನು ಸಂದರ್ಶಿಸುವ ಭಕ್ತರ ಮೇಲೆ ದರ್ಗಾಗಳು ಗಾಢವಾದ ಪ್ರಭಾವವನ್ನು ಬೀರುತ್ತವೆ. ತಮ್ಮ ದುಃಖ ತಪ್ತ ಬದುಕಿನಲ್ಲಿ ಶಾಂತಿಯನ್ನು ಅರಸಿ ಬರುವ ಭಕ್ತರು ಅಲ್ಲಿ ಸಾಂತ್ವನವನ್ನು ಪಡೆಯುತ್ತಾರೆ. ಭಾರತೀಯ ಉಪಖಂಡದ ನಕಾಶೆಯಲ್ಲಿ ಇಂತಹ ನೂರಾರು ದರ್ಗಾಗಳು ಸ್ಥಾನವನ್ನು ಪಡೆದಿವೆ. ಆದರೆ ಕಲಬುರಗಿ (ಹಿಂದಿನ ಗುಲ್ಬರ್ಗ)ಯಲ್ಲಿನ ಹಝ್ರತ್ ಖ್ವಾಜಾ ಬಂದೇನವಾಝ್ ದರ್ಗಾ ವಿಶಿಷ್ಟವಾದುದಾಗಿದೆ. ಸಂತ ಹಝ್ರತ್ ಖ್ವಾಜಾ ಬಂದೇನವಾಝ್ ಅವರ ಬೋಧನೆಗಳು ಹೃದಯಗಳಿಗೆ ಸಮಾಧಾನ ತುಂಬಿದರೆ, ದರ್ಗಾದ ಹಾಲಿ ಪಾಲಕರು, ಯುವಜನತೆಗೆ ಜ್ಞಾನ, ಕುಶಲತೆ, ಸಾಧನಗಳೊಂದಿಗೆ ಸುಸಜ್ಜಿತರನ್ನಾಗಿಸುವ ಮೂಲಕ ನಮ್ಮ ಪ್ರಸಕ್ತ ಕಾಲಘಟ್ಟದ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಎದುರಿಸಲು ಶಕ್ತರಾಗುವಂತೆ ಮಾಡುತ್ತಿದ್ದಾರೆ. ಸಾಮಾಜಿಕ ಪರಿವರ್ತನೆಯಲ್ಲಿ ಈ ದರ್ಗಾವು ಒಂದು ಪ್ರೇರಕಶಕ್ತಿಯಾಗಿ ರೂಪುಗೊಂಡಿದೆ. ವಿಶಾಲವಾದ ಸಮುದಾಯಕ್ಕೆ ಪ್ರಯೋಜನಗಳನ್ನು ಒದಗಿಸುವುದಕ್ಕೆ ಈ ದರ್ಗಾವು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ.
ಕಲಬುರಗಿಯ ದರ್ಗಾ ಆಡಳಿತ ನಿರ್ವಹಣಾ ಸಮಿತಿಯು ವೈದ್ಯಕೀಯ ಹಾಗೂ ಇಂಜಿನಿ ಯರಿಂಗ್, ಕಾನೂನು ಕಾಲೇಜ್, ನರ್ಸಿಂಗ್ ಕಾಲೇಜ್ ಮತ್ತು ಎರಡು ಡಝನ್‌ಗೂ ಅಧಿಕ ಶಾಲೆಗಳು ಮತ್ತು ಕಾಲೇಜ್‌ಗಳು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಆದರೆ ವಿಶೇಷವಾದುದೇನೆಂದರೆ, ಇತ್ತೀಚಿನ ವರ್ಷಗಳಲ್ಲಿ ದರ್ಗಾವನ್ನು ಸಂದರ್ಶಿಸುವ ಶ್ರದ್ಧಾಳುಗಳಿಗೆ ಸಾಧ್ಯವಿರುವಷ್ಟು ಮಟ್ಟಿಗೆ ಆಧುನೀಕೃತ ಹಾಗೂ ಸ್ವಯಂಚಾಲಿತವಾದ ಸೇವೆಗಳನ್ನು ಒದಗಿಸುವ ಮೂಲಕ ದರ್ಗಾವು ವ್ಯಾಪಕವಾದ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ದರ್ಗಾದ ಪರಿಸರವನ್ನು ಸಜ್ಜುಗೊಳಿಸಲಾಗಿದೆ. ಇದರ ಶ್ರೇಯಸ್ಸು ದರ್ಗಾದ ಹಾಲಿ ಪಾಲಕರಾದ ಡಾ. ಸೈಯದ್ ಶಾ ಖುಸ್ರೊ ಹುಸೈನಿ ಅವರಿಗೆ ಸಲ್ಲಬೇಕಾಗಿದೆ. ದೂರದರ್ಶಿತ್ವವುಳ್ಳವರಾದ ಡಾ.ಸೈಯದ್ ಶಾ, ಅವರು ತನ್ನಂತೆಯೇ ದಕ್ಷತೆಯುಳ್ಳವರಾಗಿದ್ದ ತನ್ನ ತಂದೆ ಸೈಯದ್ ಶಾ ಮುಹಮ್ಮದ್ ಅಲ್ ಹುಸೈನಿ 2007ರಲ್ಲಿ ವಿಧಿವಶರಾದ ಬಳಿಕ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ಸಾಮಾನ್ಯವಾಗಿ ದರ್ಗಾಗಳ ಆಡಳಿತ ನಿರ್ವಹಿಸುವ ವ್ಯಕ್ತಿಗಳ ಸಾಲಿನಲ್ಲಿ ಡಾ. ಖುಸ್ರೋ ಅವರಂತಹವರು ಖಂಡಿತವಾಗಿಯೂ ತೀರಾ ಅಪರೂಪವೆನ್ನಬಹುದು. ಯಾಕೆಂದರೆ ಅವರಿಗೆ ಅತ್ಯುತ್ತಮವಾದ ಸಾರ್ವಜನಿಕ ಶಿಕ್ಷಣಸಂಸ್ಥೆಗಳಲ್ಲಿ ಅಧ್ಯಯನ ನಡೆಸುವ ಅವಕಾಶ ದೊರೆತಿತ್ತು ಹಾಗೂ ಕೆನಡಾದ ಪ್ರಸಿದ್ಧ ಮ್ಯಾಕ್‌ಗಿಲ್ ವಿವಿಯಲ್ಲಿ ಉನ್ನತ ಪದವಿಯನ್ನು ಅವರು ಪಡೆದಿದ್ದಾರೆ. ಸಂಪ್ರದಾಯಗಳು ಹಾಗೂ ಆಚರಣೆಗಳ ಕಟ್ಟುನಿಟ್ಟಿನ ಅನುಸರಣೆಯನ್ನು ಆಗ್ರಹಿಸುವ ಹಳೆಯ ಸೂಫಿ ಪಂಥದ ಬೋಧನೆಗಳು ಹಾಗೂ ತರ್ಕ ಹಾಗೂ ವೈಚಾರಿಕತೆಯ ಮೇಲೆ ಗಮನಸೆಳೆಯುವ ಆಧುನಿಕ ಶಿಕ್ಷಣ, ಇವೆರಡನ್ನೂ ಅವರು ಪರಸ್ಪರ ಸಮರ್ಪಕವಾಗಿ ಬೆಸೆಯುವಲ್ಲಿ ಸಫಲರಾಗಿದ್ದಾರೆ.
ಈಗಿನ ಆಧುನಿಕ ದಿನಗಳಲ್ಲಿ ಸಂದರ್ಶಕನೊಬ್ಬ ನಿರೀಕ್ಷಿಸಿಸುವಂತಹ ಎಲ್ಲ ಸೌಲಭ್ಯಗಳಿಂದ ದರ್ಗಾವು ಸುಸಜ್ಜಿತವಾಗಿದೆ. ಕಂಪ್ಯೂಟರೀಕೃತ ಪ್ರವೇಶದ್ವಾರದ ಮೂಲಕ ಗಾಜಿನ ಕಿಯೊಸ್ಕ್‌ನಿಂದ ಆವೃತವಾದ ಸ್ವಾಗತ ಡೆಸ್ಕ್ (ಇಸ್ತಿಖ್‌ಬಾಲಿಯಾ)ನಲ್ಲಿರುವ ಸಿಬ್ಬಂದಿ, ಮಾಹಿತಿಯನ್ನು ಬಯಸುವ ಸಂದರ್ಶಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಸ್ವಯಂಚಾಲಿತವಾಗಿ (ಆಟೊಮೇಟೆಡ್) ಉತ್ತರಿಸುವ ಯಂತ್ರಗಳು ಇಪಿಎಬಿಎಕ್ಸ್ ವ್ಯವಸ್ಥೆಯ ಮೂಲಕ ದೂರವಾಣಿ ಕರೆಗಳನ್ನು ನಿರ್ವಹಿ ಸುತ್ತವೆ ಹಾಗೂ ಕರೆದಾರರಿಗೆ ಸಂಕೀರ್ಣದೊಳಗಿರುವ ಸಮರ್ಪಕ ವಿಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಶ್ರೀಸಾಮಾನ್ಯರು, ವಿಐಪಿಗಳು ಹಾಗೂ ಅತಿಥಿಗಳಿಗಾಗಿ 90ಕ್ಕೂ ಅಧಿಕ ಕೊಠಡಿಗಳು ಸಂಕೀರ್ಣದುದ್ದಕ್ಕೂ ಹರಡಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತವೆ. ಹೆಚ್ಚುಕಮ್ಮಿ ಅವೆಲ್ಲವೂ ಬಯೋಮೆಟ್ರಿಕ್ ಎಂಟ್ರಿಯನ್ನು ಹೊಂದಿವೆ. ಸಿಸಿಟಿವಿ ಕ್ಯಾಮರಾಗಳು ಅಳವಡಿಸಲ್ಪಟ್ಟಿದ್ದು, ಸೌರಶಕ್ತಿ ಚಾಲಿತ ಬಿಸಿ ನೀರಿನ ಪೂರೈಕೆ ವ್ಯವಸ್ಥೆಯೂ ಇದೆ. ವಿದ್ಯುತ್ ಬ್ಯಾಕ್-ಅಪ್ ಹಾಗೂ ಹವಾನಿಯಂತ್ರಕಗಳು ಗ್ರಾಹಕರ ಸೇವೆಗಿದೆ. ಸಂಕೀರ್ಣದೊಳಗೆ ಹವಾನಿಯಂತ್ರಕಗಳು ಅಳವಡಿಸಲ್ಪಟ್ಟಿದ್ದು, ಇಡೀ ಸಂಕೀರ್ಣದ ನೆಲಗಳಿಗೆ ಕಾರ್ಪೆಟ್ ಹಾಸಲಾಗಿದೆ.
ನಿಯಂತ್ರಿತ ಪ್ರವೇಶ
ದರ್ಗಾದ ಆವರಣದೊಳಗೆ ವಾಹನಗಳ ಪ್ರವೇಶವನ್ನು ಸಮವಸ್ತ್ರದಲ್ಲಿರುವ ಪುರುಷ ಸಿಬ್ಬಂದಿ ನಿಯಂತ್ರಿಸುತ್ತಾರೆ ಹಾಗೂ ತಡೆಗೋಲು(boom barricade) ಗಳ ಮೂಲಕ ವಾಹನಗಳ ಪ್ರವೇಶವನ್ನು ನಿಯಂತ್ರಿಸಲಾಗುತ್ತಿದೆ. ಮೋಟಾರುಚಾಲಿತ ಹಾಗೂ ಶಬ್ದರಹಿತ ಬಗ್ಗಿ ವಾಹನ(buggy) ವು ಅಂಗವಿಕಲ ಹಾಗೂ ಭಿನ್ನ ಸಾಮರ್ಥ್ಯದ ಸಂದರ್ಶಕರನ್ನು ಸಂಕೀರ್ಣದೊಳಗೆ ಕೊಂಡೊಯ್ಯುತ್ತದೆ. ನೆಲ ಒರೆಸುವ ಹಾಗೂ ಗುಡಿಸುವ ಯಂತ್ರಗಳಿಂದ ಹಿಡಿದು ವ್ಯಾಕ್ಯೂಮ್ ಕ್ಲೀನರ್‌ಗಳವರೆಗೆ ಪರಿಸರ ವನ್ನು ಸ್ವಚ್ಛಗೊಳಿಸುವ ಹಾಗೂ ಎಸೆಯಲಾದ ಘನ ತ್ಯಾಜ್ಯವನ್ನು ಹೆಕ್ಕುವ ಹಲವು ಯಂತ್ರಗಳು ಇಲ್ಲಿವೆ.
ಸ್ಮಾರಕದ ಪುನರ್‌ನಿರ್ಮಾಣ
ದರ್ಗಾದ ಪಾಲಕರ (ಸಜ್ಜಾದಾನಾಶಿನ್) ಹಿಂದಿನ ನಿವಾಸ ವಾದ ಸದರ್ ಸೊರ್ಫಾದ ನವೀಕರಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಇನ್ನೊಂದು ಉಲ್ಲೇಖನೀಯ ವಿಷಯವಾಗಿದೆ. ತದನಂತರ ಅದನ್ನು ಮೆಹಫಿಲೆ ಕವ್ವಾಲಿ ಮತ್ತಿತರ ಸಾಂಸ್ಕೃತಿಕ ಚಟುವಟಿಕೆ ಗಳ ತಾಣವಾಗಿ ಬಳಸಿಕೊಳ್ಳಲಾಯಿತು. ಹುಸೈನಿ ಮಹಲ್ ಎಂದೇ ಹೆಸರಾದ ಈ ಕಟ್ಟಡವು ಒಂದು ಶತಮಾನ ದಿಂದಲೂ ಅತಿಯಾದ ನಿರ್ಲಕ್ಷಕ್ಕೆ ತುತ್ತಾಗಿತ್ತು ಹಾಗೂ ಹೆಚ್ಚುಕಮ್ಮಿ ಇದರ ಇಡೀ ಛಾವಣಿ ಯು ಶಿಥಿಲಗೊಂಡಿತ್ತು. ಈ ವಿಶಾಲ ಕಟ್ಟಡದ ಗೋಡೆ ಗಳಲ್ಲಿ ಮೂಡಿರುವ ಬಿರುಕುಗಳಲ್ಲಿ ಗಿಡಗಳು ಹಾಗೂ ಮರಗಳು ಬೇರುಬಿಟ್ಟಿವೆ. ಛಾವಣಿಯ ಸಂದುಗಳು, ಕಂಬಗಳು ಹಾಗೂ ತೊಲೆಯಲ್ಲಿ ಗೆದ್ದಲುಕಟ್ಟಿದ್ದವು.
ಈ ಪುರಾತನ ಕಟ್ಟಡದ ಜೀರ್ಣೋದ್ಧಾರ ಕಾಮಗಾ ರಿಯ ಕಾರ್ಯವನ್ನು, ಪಾರಂಪರಿಕ ಕಟ್ಟಡಗಳ ಪುನಃಸ್ಥಾಪನೆಯ ಕೆಲಸದಲ್ಲಿ ಪರಿಣಿತಿ ಪಡೆದಿರುವ ‘ಜೀರ್ಣೋದ್ಧಾರ್ ಕನ್ಸರ್ವೇಟರ್ಸ್’ ಸಂಸ್ಥೆಗೆ ವಹಿಸಲಾಯಿತು. ಕಟ್ಟಡದ ಜೀರ್ಣೋದ್ಧಾರದ ವೇಳೆ ಕಾಂಕ್ರಿಟ್ ಬಳಸದಂತೆ ತನ್ನ ತಂಡವು ಎಚ್ಚರಿಕೆ ವಹಿಸಿತ್ತು ಹಾಗೂ ಆದರ ಮೂಲ ಸ್ವರೂಪವನ್ನು ಉಳಿಸಲು ಸೀಮೆಸುಣ್ಣದ ಪ್ಲಾಸ್ಟರನ್ನು ಬಳಸಿಕೊಳ್ಳಲಾಯಿತು ಎಂದು ಈ ಸಂಸ್ಥೆಯ ವಾಸ್ತುಶಿಲ್ಪತಜ್ಞರಾದ ನೀಲೇಶ್ ಠಾಕೂರ್ ಹೇಳುತ್ತಾರೆ. ಸುಮಾರು ಶೇ.80ರಷ್ಟು ಛಾವಣಿಯ ಕಮಾನುಗಳನ್ನು ಬದಲಾಯಿಸಲಾಗಿದೆ. ಎದುರು ಭಾಗದ ಕಮಾನಿನಲ್ಲಿ ಈ ಹಿಂದೆ ಬಿದಿರಿನಿಂದ ನಿರ್ಮಿತವಾದ ಪರದೆಗಳಿದ್ದ ಜಾಗದಲ್ಲಿ ಗಾಜಿನ ಫಲಕಗಳನ್ನು ಸ್ಥಾಪಿಸಲಾಗಿದೆ. ಬರೋಬ್ಬರಿ 3 ಸಾವಿರ ಚದರ ಅಡಿ ವಿಸ್ತೀರ್ಣದ ಈ ಐತಿಹಾಸಿಕ ಕಟ್ಟಡವು, ವೀಕ್ಷಕರನ್ನು ಬೆರಗುಗೊಳಿಸುವಂತಹ ಭವ್ಯವಾದ ಭವನವಾಗಿ ಮಾರ್ಪಾಡುಗೊಂಡಿದೆ. ಮುಹರ್ರಂ ಹಬ್ಬದ ಸಮಯದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ‘ಆಲಂ’ಗಳ ವರ್ಣರಂಜಿತ ಬಟ್ಟೆಗಳನ್ನು ಅಲ್ಲಿ ತೂಗುಹಾಕಿರುವುದು ಭವನದ ಸೌಂದರ್ಯಕ್ಕೆ ಕುಂದಣವಿಟ್ಟಂತಿದೆ.
ಚಲನಶೀಲತೆ
ಇವೆಲ್ಲದರ ಜೊತೆಗೆ ದರ್ಗಾದ ಆಡಳಿತ ಸಮಿತಿಯ ಕಚೇರಿ ಕೂಡಾ ಹೊಸ ರೂಪವನ್ನು ಧರಿಸಿಕೊಂಡಿದೆ. ಹಣಕಾಸಿರಲಿ, ಲೆಕ್ಕಪತ್ರವಿರಲಿ, ಸಿಬ್ಬಂದಿ ನಿರ್ವಹಣೆ ಯಿರಲಿ ಅಥವಾ ಶೈಕ್ಷಣಿಕ ಸಂಸ್ಥೆಗಳಿರಲಿ, ಕೇವಲ ವೃತ್ತಿಪರರನ್ನು ಹಾಗೂ ನೂತನ ತಂತ್ರಜ್ಞಾನಗಳನ್ನು ಕಲಿಯುವ ಉತ್ಕಟ ಹಂಬಲವಿರುವವರನ್ನು ನೇಮಕ ಗೊಳಿಸುವ ಮೂಲಕ ಡಾ. ಸೈಯದ್ ಖುಸ್ರೊ ಹುಸೈನಿ ಅವರು ಸೂಕ್ಷ್ಮಗ್ರಾಹಿತ್ವವನ್ನು ಪ್ರದರ್ಶಿಸಿದ್ದಾರೆ. ಪ್ರತಿಯೊಂದು ವಿಷಯವನ್ನು ಕೂಲಂಕಷವಾಗಿ ಅರಿತುಕೊಳ್ಳುವ ಹಾಗೂ ಪರಿಷ್ಕರಣೆ ಮತ್ತು ಕಲಾವಂತಿಕೆ ಯ ಬಗ್ಗೆ ಗಾಢವಾದ ಆಸಕ್ತಿಯನ್ನು ಹೊಂದಿರುವ ಡಾ. ಖುಸ್ರೊ ಅವರು ಆಧ್ಯಾತ್ಮಿಕ ಶಕ್ತಿಯಿಂದ ಶೋಭಿಸುತ್ತಿರುವ ಒಂದು ಸಂಸ್ಥೆಗೆ ಚೈತನ್ಯಶೀಲತೆಯನ್ನು ತುಂಬಿದ್ದಾರೆ.
ಡಿಜಿಟಲ್ ಮ್ಯಾಪಿಂಗ್
ದರ್ಗಾದ ಸಜ್ಜದಾನಾಶಿನ್ ಪೀಠವನ್ನು ಏರಿದ ಬಳಿಕ ಡಾ. ಖುಸ್ರೋ ಹುಸೈನಿ, ದರ್ಗಾದ ಮೂಲಭೂತ ಸೌಕರ್ಯಗಳಲ್ಲಿ ವ್ಯಾಪಕ ಸುಧಾರಣೆಯನ್ನು ತಂದರು. ವಕ್ಫ್ ಆಸ್ತಿಯನ್ನು ಭದ್ರಪಡಿಸಲು ಇಡೀ ಪ್ರದೇಶವನ್ನು ಅವರು ಡಿಜಿಟಲ್ ಮ್ಯಾಪಿಂಗ್ ವ್ಯವಸ್ಥೆಗೊಳಪಡಿಸಿದರು. ದರ್ಗಾದ ಪಾರಂಪರಿಕ ಸೊತ್ತುಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರು. 260 ಮೀಟರ್ ವಿಸ್ತೀರ್ಣ ಸೌರ ಬೇಲಿ ವ್ಯವಸ್ಥೆಯ ನಿರ್ಮಾಣದ ಹೊಣೆಯನ್ನು ನೆದರ್‌ಲ್ಯಾಂಡ್‌ನ ಐಬೆಕ್ಸ್ ಗಲ್ಲಾಗಾರ್ ಕಂಪೆನಿಗೆ ವಹಿಸಲಾಯಿತು.
ನೆರಳು ಹಾಗೂ ಸೌಕರ್ಯ
ಬೇಸಿಗೆಯಲ್ಲಿ ಕಾದ ಕೆಂಡದಂತಾಗುವ ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಾಮಾನ್ಯವಾಗಿದೆ. ಆದರೆ ದರ್ಗಾದ ಆವರಣದೊಳಗಿರುವ ಹಲವಾರು ಛತ್ರಗಳು ಸಂದರ್ಶಕರಿಗೆ ತಂಪಾದ ನೆರಳಿನ ಆಶ್ರಯವನ್ನು ನೀಡುತ್ತವೆ. ಇಲ್ಲಿರುವ ಛತ್ರವೊಂದು 45x45 ಅಡಿ ವಿಸ್ತೀರ್ಣವನ್ನು ಹೊಂದಿದೆ ಹಾಗೂ ದೇಹಶುದ್ಧೀಕರಿಸುವ ಕೆರೆಯ ಆವರಣವನ್ನು ವ್ಯಾಪಿಸಿದೆ. ಈ ಕೆರೆಯ ನೀರನ್ನು ಶುದ್ಧಗೊಳಿಸಲು ಸ್ವಯಂಚಾಲಿತ ಫಿಲ್ಟರಿಂಗ್ ಯಂತ್ರಗಳನ್ನು ಕೂಡಾ ಅಳವಡಿಸಲಾಗಿದೆ. ತಂಪನ್ನು ನೀಡುವ ಬೃಹತ್ ಛತ್ರಗಳು ಹಾಗೂ ದಕ್ಷವಾದ ರೀತಿಯ ಶುದ್ಧೀಕರಣ ವ್ಯವಸ್ಥೆಯು ಹಲವಾರು ಸಮಾಧಿಗಳಿಂದ ಆವೃತಗೊಂಡ ಪ್ರಧಾನ ದರ್ಗಾಕ್ಕೆ ಆಹ್ಲಾದಕರ ವಾತಾವರಣವನ್ನು ತಂದುಕೊಟ್ಟಿದೆ.
ಖ್ವಾಜಾ ಬಂದೇನವಾಝ್ ಅವರ ಸಮಾಧಿಯು, ಅತ್ಯಂತ ದೊಡ್ಡ ಗಾತ್ರದ ಭವ್ಯ ಗೋಪುರವನ್ನು ಹೊಂದಿದೆ. ಕಲಬುರಗಿ ನಗರದಲ್ಲಿ ಇದೊಂದು ಭವ್ಯವಾದ ಸ್ಮಾರಕವಾಗಿದೆ. ಈ ಪುರಾತನ ಗೋಪುರದ ಮೇಲ್ಛಾವಣಿಯನ್ನು ರಿಪೇರಿ ಮಾಡಲಾಗಿದೆ ಹಾಗೂ ನವೀಕರಿಸಲಾಗಿದೆ ಮತ್ತು 1980ರ ದಶಕದ ಬಣ್ಣಬಣ್ಣದ ಕನ್ನಡಿಗಳಿಂದ ಅಲಂಕರಿಸಲಾಗಿದೆ. ಉತ್ಖನನ ಶಾಸ್ತ್ರಜ್ಞರು ಈ ಗೋಪುರದ ಪುನರುಜ್ಜೀವನಕ್ಕೆ ಅನುಮೋದನೆ ನೀಡದಿದ್ದರೂ, ತಜ್ಞರು ಪರಿಶೀಲನೆ ನಡೆಸಿದ ಬಳಿಕ ನವೀಕರಣ ಕಾಮಗಾರಿ ಅನಿವಾರ್ಯವೆನಿಸಿತು. ಅದೇನೆ ಇದ್ದರೂ, ದರ್ಗಾದ ಒಳಾಂಗಣವು ಮನಸೂರೆಗೊಳ್ಳುವಂತಹ ವೈಭವಯುತ ಅಲಂಕಾರವನ್ನು ಹೊಂದಿದೆ. ಆದಾಗ್ಯೂ, ಗೋಪುರದ ಹೊರಮೈ ಮೇಲೆ ನಡೆಸಲಾದ ನವೀಕರಣ ಕಾಮಗಾರಿಯ ಸಂದರ್ಭದಲ್ಲಿ ಹಿಂದೆಯೇ ಇದ್ದಂತಹ ಬಿಳಿ ಬಣ್ಣವನ್ನು ಉಳಿಸಿಕೊಳ್ಳಲಾಗಿದೆ. ವಾರ್ಷಿಕ ಉರೂಸ್ ಸಂದರ್ಭದಲ್ಲಿ ಯಾತ್ರಿಕರ ದಟ್ಟಣೆ ಯಿದ್ದರೂ 76 ಟನ್ ಭಾರದ ಏರ್‌ಕಂಡೀಶನರ್ ತಂಪಾದ ಅನುಭವವನ್ನು ನೀಡುತ್ತದೆ (15ನೇ ಶತಮಾನದ ಈ ಕಟ್ಟಡದಲ್ಲಿ ಯಾವುದೇ ಜೋಡಣೆಗೆ ಅವಕಾಶವಿಲ್ಲ. ಹೀಗಾಗಿ ವಾತಾವರಣದ ಬಿಸಿಯನ್ನು ಉಕ್ಕಿನ ಫ್ರೇಮ್‌ಗಳಿಂದ ಹೊರಬಿಡಲಾಗುತ್ತದೆ). ದೈನಂದಿನ ಸಂದರ್ಶಕರ ವಿಶ್ರಾಂತಿ ಸ್ಥಳವಾಗಿರುವ ಬೃಹತ್ ಛತ್ರದಡಿ ಅಳವಡಿಸಲಾದ ಕೂಲಿಂಗ್ ಸಿಸ್ಟಮ್, ಒಳಾಂಗಣ ತಾಪಮಾನವನ್ನು ಆರರಿಂದ ಎಂಟು ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಖ್ವಾಜಾ ಬಝಾರ್
ಸ್ವಚ್ಛತೆ ಹಾಗೂ ನಿರ್ಮಲೀಕರಣದ ಬಗ್ಗೆ ಇಲ್ಲಿ ಅತ್ಯಂತ ಕಾಳಜಿ ವಹಿಸಲಾಗಿದೆ. ಸಂದರ್ಶಕರ ಆವಶ್ಯಕತೆಗಳಿಗಾಗಿ ಸುಮಾರು 200 ವಾಶ್‌ರೂಂಗಳಿರುವ ಶೌಚಗೃಹ ಸಂಕೀರ್ಣವೂ ಇದೆ. ಖ್ವಾಜಾ ಬಝಾರ್ ಎಂದೇ ಹೆಸರಾದ ಸಾಂಪ್ರದಾಯಿಕ ಕರಕುಶಕಲಾವಸ್ತುಗಳ ಮಾರುಕಟ್ಟೆಯನ್ನು ಈಗ ಸುಸಂಘಟಿತಗೊಳಿಸಲಾಗಿದ್ದು, ಹಳೆಯ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಿ ಅವುಗಳ ಜಾಗದಲ್ಲಿ ಸ್ಥಿರವಾದ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಲೈಬ್ರರಿಯ ಡಿಜಿಟಲೀಕರಣ
ಅತ್ಯಂತ ಅಪರೂಪದ ಹಸ್ತಪ್ರತಿಗಳನ್ನು ಕಾಪಾಡಿಡಲಾಗಿರುವ ದರ್ಗಾ ಸಂಕೀರ್ಣದಲ್ಲಿರುವ ಪುರಾತನ ಗ್ರಂಥಾಲಯದಲ್ಲಿಯೂ ಇಂದು ಬದಲಾವಣೆಯ ಗಾಳಿ ಬೀಸುತ್ತಿದೆ. ಗ್ರಂಥಾಲಯವು ಅತ್ಯಾಧುನಿಕ ಅಖಿಲ ಭಾರತ ಸಯ್ಯದ್ ಮುಹಮ್ಮದ್ ಗಿಸುದಾರಾಝ್ ಸಂಶೋಧನಾ ಅಕಾಡಮಿಯ ಅಧುನಿಕ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದೆ. ಅಮೂಲ್ಯ ಹಸ್ತಪ್ರತಿಗಳು ಹಾಗೂ ಗ್ರಂಥಗಳ ಸಂರಕ್ಷಣೆಗೆ ಅರೇಬಿಕ್ ಹಾಗೂ ಪರ್ಷಿಯನ್ ವಿದ್ವಾಂಸ ಡಾ. ಮುಹಮ್ಮದ್ ಕಮರುದ್ದೀನ್ ಅವರ ಸೇವೆಯನ್ನೂ ಪಡೆದುಕೊಳ್ಳಲಾಗಿದೆ. ತಫ್‌ಸೀರ್ (ಕುರ್‌ಆನ್ ಕುರಿತ ವ್ಯಾಖ್ಯಾನ), ಫಿಖ್ಹ್ (ನ್ಯಾಯಶಾಸ್ತ್ರ), ಇಲ್‌ಮುಲ್ ಕಲಾಂ (ಪ್ರವಚನ ವಿಜ್ಞಾನ), ಇತಿಹಾಸ, ಸಾಹಿತ್ಯ ಹಾಗೂ ಹಸ್ತಲಿಖಿತ ಕುರ್‌ಆನ್‌ಗೆ ಸಂಬಂಧಿಸಿದ ಕೆಲವು ಅಪರೂಪದ ಕೃತಿಗಳು ಇಲ್ಲಿವೆ. ಪಾಶ್ಚಾತ್ಯ ದೇಶಗಳ ಚಿಂತನಾಶಾಸ್ತ್ರಗಳ ವಿದ್ವಾಂಸರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿರುವ ಕೆಲವು ಹಸ್ತಪ್ರತಿಗಳನ್ನು ದುಬೈ ಮೂಲದ ಸಂಸ್ಥೆಯೊಂದು ಈಗಾಗಲೇ ಡಿವಿಡಿಗೆ ವರ್ಗಾಯಿಸಿದೆ.