ಕಂಪ್ಯೂಟರ್ ಕನ್ನಡ ಅನುಷ್ಠಾನದ ಹಾದಿ "ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೆಜ್ಜೆಗಳು"
ಸರಕಾರದ ಇಲಾಖೆಗಳ ಕಂಪ್ಯೂಟರುಗಳಲ್ಲಿ ಕನ್ನಡ ಬಳಕೆ ಹೆಚ್ಚಿಸುವ ಕ್ರಮಗಳನ್ನು ಗುರುತಿಸಿ ಸೂಕ್ತ ಶಿಫಾರಸುಗಳನ್ನು ಮಾಡುವುದೂ ಸಹ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ್ಯಗಳಲ್ಲಿ ಒಂದು. ಪ್ರಾಧಿಕಾರದ ಹಲವು ಅಧ್ಯಕ್ಷರು ತಮ್ಮತಮ್ಮ ಅಧಿಕಾರಾವಧಿಯಲ್ಲಿ ಕಂಪ್ಯೂಟರ್‌ನಲ್ಲಿ ಕನ್ನಡ ಅನುಷ್ಠಾನಗೊಳಿಸುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.
ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಕುರಿತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ 1993ರ ಕನ್ನಡ ಜಾಗೃತಿ ವರ್ಷಾಚರಣೆಯ ಸಂದರ್ಭದಿಂದ ಆರಂಭಿಸಿತು. ಡಾ. ಎಚ್. ನರಸಿಂಹಯ್ಯನವರ ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು 1995ರಲ್ಲಿ ತನ್ನ ‘ಕನ್ನಡ ಜಾಗೃತಿ’ ದ್ವೈಮಾಸಿಕದ ಕಂಪ್ಯೂಟರ್ ವಿಶೇಷ ಸಂಚಿಕೆಯನ್ನು ಪ್ರಕಟಿಸಿದೆ. ಇದರಲ್ಲಿ ವಿವಿಧ ಉದ್ದೇಶಕ್ಕಾಗಿ ಕಂಪ್ಯೂಟರ್‌ನಲ್ಲಿ ಕನ್ನಡ ಬಳಸಲು ಲಭ್ಯವಿರುವ ತಂತ್ರಾಂಶಗಳ ವಿವರಗಳನ್ನು ನೀಡಲಾಗಿದೆ.
1999ರಲ್ಲಿ ಪ್ರೊ.ಚಂದ್ರಶೇಖರ ಪಾಟೀಲರ (ಚಂಪಾ) ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮಾಡಿದ ಶಿಫಾರಸಿನ ಅನುಸಾರ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡಕ್ಕೆ ಒಂದು ಏಕರೂಪದ ಶಿಷ್ಟ ಕೀಲಿಮಣೆ ವಿನ್ಯಾಸವನ್ನು ಮತ್ತು ಕನ್ನಡ ಅಕ್ಷರಗಳಿಗೆ ಏಕರೂಪದ ಕಂಪ್ಯೂಟರ್ ಅಕ್ಷರಭಾಗಗಳು (ಗ್ಲಿಫ್‌ಗಳು) ಮತ್ತು ಅವುಗಳ ಸಂಕೇತ ಸಂಖ್ಯೆಗಳನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿತು. ಇದರ ಅನುಷ್ಠಾನದಿಂದ ಮಾಹಿತಿ ವಿನಿಮಯದ ಸಮಸ್ಯೆಗಳು ಪರಿಹಾರಗೊಂಡವು. 2000ದಲ್ಲಿ ಕನ್ನಡದ ಉಚಿತ ತಂತ್ರಾಂಶವಾದ ‘ಕಲಿತ’ (ಕನ್ನಡ ಲಿಪಿ ತಂತ್ರಾಂಶ) ಹೆಸರಿನ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ತು ಸಿದ್ಧಪಡಿಸಿ ಸಾರ್ವಜನಿಕ ಮತ್ತು ಸರಕಾರದ ಉಚಿತ ಬಳಕೆಗೆ ಬಿಡುಗಡೆ ಮಾಡಿತು. ಪ್ರೊ. ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತನ್ನ ‘‘ಕಂಪ್ಯೂಟರ್ ಕನ್ನಡೀಕರಣ ಕ್ರಿಯಾ ಯೋಜನೆ’’ಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ವಿತರಿಸಿದೆ. ಕಂಪ್ಯೂಟರ್‌ನಲ್ಲಿ ಕನ್ನಡ ಸಂವಹನವು ಸಾಧ್ಯವಾಗುವಂತೆ ಮಾಡಲು ಖಾಸಗಿಯವರು ಸಿದ್ಧಪಡಿಸಿದ ಕನ್ನಡ ತಂತ್ರಾಂಶಗಳನ್ನು ಪ್ರಮಾಣೀಕರಿಸುವ ಆವಶ್ಯಕತೆ ಇತ್ತು.
ಅದಕ್ಕಾಗಿ ಸರಕಾರವೇ ಒಂದು ‘‘ಮಾನಕ ಕನ್ನಡ ಲಿಪಿ ತಂತ್ರಾಂಶ’’ವನ್ನು ಸಿದ್ಧಪಡಿಸಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈಗಾಗಲೇ ಇಂಗ್ಲಿಷ್‌ನಲ್ಲಿ ಲಭ್ಯವಿದ್ದು, ಕಚೆೇರಿಗಳಲ್ಲಿ ದಿನನಿತ್ಯದ ಬಳಕೆಗೆ ಅಗತ್ಯವಿರುವ ಕೆಲವು ತಂತ್ರಾಂಶಗಳನ್ನು ಕನ್ನಡದಲ್ಲಿ ರೂಪಿಸುವುದು; ನಿರ್ದಿಷ್ಟ ಬಳಕೆಗೆ ಹೊಸ ಕನ್ನಡದ ತಂತ್ರಾಂಶಗಳನ್ನು ಸಿದ್ಧಪಡಿಸುವುದು; ಬಳಕೆದಾರರ ಅಗತ್ಯಕ್ಕೆ ತಕ್ಕಹಾಗೆ ಹುಡುಕಿಕೊಳ್ಳಲು ಡೇಟಾ ಬ್ಯಾಂಕ್ ರೂಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಸಮಾನ ಕನ್ನಡದ ಲಿಪಿತಂತ್ರಾಂಶ; ಪರಿವರ್ತಕ ತಂತ್ರಾಂಶಗಳು; ಅಕ್ಷರಶೈಲಿಗಳು (ಫಾಂಟ್ಸ್); ಕನ್ನಡ ಲಿಪಿತಂತ್ರಾಂಶದ ಯುನಿಕೋಡ್ ಆವೃತ್ತಿ (ವಿಂಡೋಸ್ ಮತ್ತು ಲೈನೆಕ್ಸ್); ಅಕಾರಾದಿ ವಿಂಗಡಣೆ (ಸಾರ್ಟಿಂಗ್); ಸೂಚೀಕರಣ (ಇಂಡೆಕ್ಸಿಂಗ್) ಸೌಲಭ್ಯಗಳು; ಪದಪರೀಕ್ಷೆ ಮತ್ತು ವ್ಯಾಕರಣ ಪರೀಕ್ಷೆ (ಸ್ಪೆಲ್ ಚೆಕ್ ಮತ್ತು ಗ್ರಾಮರ್ ಚೆಕ್) ಸೌಲಭ್ಯಗಳು; ಲೋಗೋ ತಂತ್ರಾಂಶ; ಕೈಬರಹ ಮತ್ತು ಮುದ್ರಿತ ಪಠ್ಯವನ್ನು ಕಂಪ್ಯೂಟರ್ ಲಿಪಿಯನ್ನಾಗಿಸುವ ತಂತ್ರಾಂಶ; ಕನ್ನಡದಲ್ಲಿ ಮೈಕ್ರೋಸಾಫ್ಟ್ ಆಫೀಸ್ - ಇವುಗಳನ್ನು ಸಿದ್ಧಪಡಿಸಲು ಸದರಿ ಕ್ರಿಯಾಯೋಜನೆಯಲ್ಲಿ ಉದ್ದೇಶಿಸಲಾಗಿತ್ತು. ಅಷ್ಟೇಅಲ್ಲದೆ, ಸಾಮಾನ್ಯ ಆಡಳಿತ ತಂತ್ರಾಂಶ; ಗ್ರಂಥಾಲಯ ತಂತ್ರಾಂಶ; ವಾಣಿಜ್ಯ ವ್ಯವಹಾರ ತಂತ್ರಾಂಶ; ಶಾಲಾ-ಕಾಲೇಜುಗಳ ಆಡಳಿತ ನಿರ್ವಹಣೆ ತಂತ್ರಾಂಶ; ಅನುವಾದ ತಂತ್ರಾಂಶ ಮುಂತಾದ ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ತಯಾರಿಸಲು ಉದ್ದೇಶಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಸಮಾನ ಲಿಪಿತಂತ್ರಾಂಶ, ಲೋಗೋ ತಂತ್ರಾಂಶ (ಶಾಲಾಮಕ್ಕಳು ಕನ್ನಡದಲ್ಲಿಯೇ ಪ್ರೋಗ್ರಮಿಂಗ್ ಕಲಿಯಲು ಉಪಯುಕ್ತವಾದ ತಂತ್ರಾಂಶ) ಕೆಲವು ಯುನಿಕೋಡ್ ಫಾಂಟ್‌ಗಳು ಮತ್ತು ತಂತ್ರಾಂಶ ಪರಿವರ್ತಕಗಳನ್ನು ಹೊರತುಪಡಿಸಿ ಬೇರೆ ಬಹುತೇಕ ಕೆಲಸಗಳು ಅನುಷ್ಠಾನಗೊಂಡಿಲ್ಲ.
ಪ್ರೊ.ಚಂಪಾ ಕಾಲದಲ್ಲಿ ಸಿದ್ಧಗೊಂಡ ‘ಕಲಿತ’ ಹೆಸರಿನ ಕನ್ನಡ ತಂತ್ರಾಂಶಕ್ಕೆ ‘ನುಡಿ’ ಎಂಬ ಹೆಸರನ್ನು ನಾಮಕರಣ ಮಾಡಿದವರು ಪ್ರೊ.ಬರಗೂರು ರಾಮಚಂದ್ರಪ್ಪ. ಅಂದಿನಿಂದ ನುಡಿಯ ಹಲವು ಆವೃತ್ತಿಗಳು ಹೊರಬಂದಿವೆ. ಪ್ರಸ್ತುತ, ನುಡಿ 5.0 ಆವೃತ್ತಿಯು ಬಳಕೆಯಲ್ಲಿದೆ. ಬರಗೂರು ರಾಮಚಂದ್ರಪ್ಪನವರ ಅವಧಿಯಲ್ಲಿ ಪ್ರಾಧಿಕಾರವು ‘ಕಂಪ್ಯೂಟರ್ ಪದವಿವರಣ ಕೋಶ’ವನ್ನು ಪ್ರಕಟಿಸಿದೆ. 2006ರಲ್ಲಿ ಡಾ. ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತನ್ನ ಅಧಿಕೃತ ಜಾಲತಾಣವನ್ನು ಆರಂಭಿಸಿತು. ಸರಕಾರದ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಎಲ್ಲ ಆದೇಶಗಳ ಪ್ರತಿಗಳನ್ನು ಜಾಲತಾಣದಲ್ಲಿ ಅಳವಡಿಸಲಾಯಿತು. ಆದರೂ ಸಹ ಇಂದಿಗೂ ಸರಕಾರದ ಜಾಲತಾಣಗಳಲ್ಲಿ ಇಂಗ್ಲಿಷ್ ರಾರಾಜಿಸುತ್ತಿದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ‘ನುಡಿ’ ಫಾಂಟನ್ನು ಬಳಸಿ ಪೂರ್ಣಪ್ರಮಾಣದಲ್ಲಿ ತನ್ನ ಜಾಲತಾಣವನ್ನು ಮೊದಲಿಗೆ ಕನ್ನಡದಲ್ಲಿ ರೂಪಿಸಿತು. ಸಂಪೂರ್ಣ ಕನ್ನಡಮಯವಾದ ಜಾಲತಾಣಗಳು ಹಿಂದೆ ಅಪರೂಪವಾಗಿದ್ದವು. ಯುನಿಕೋಡ್ ಫಾಂಟುಗಳು ಬಳಕೆಗೆ ಬಂದ ನಂತರ ಕನ್ನಡದ ಜಾಲತಾಣಗಳ ಸಂಖ್ಯೆ ಹೆಚ್ಚಾಗಿದೆ.
ಪ್ರಸ್ತುತ, ಪ್ರೊ.ಎಸ್.ಜಿ. ಸಿದ್ದರಾಮಯ್ಯನವರ ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರಕಾರದ ಜಾಲತಾಣಗಳನ್ನು ಕನ್ನಡೀಕರಣಗೊಳಿಸಲು ಮತ್ತು ಶಿಷ್ಟತೆಗಳನ್ನು ಅಳವಡಿಸಲು ಬೇಳೂರು ಸುದರ್ಶನ ವರದಿಯನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ. ಅಲ್ಲದೆ, ಕಂಪ್ಯೂಟರ್ ತಂತ್ರಜ್ಞಾನದ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಪದವಿವರಣ ಕೋಶವೊಂದನ್ನು ಪ್ರಾಧಿಕಾರವು ಪ್ರಕಟಿಸಿದೆ. ಇದರ ವಿದ್ಯುನ್ಮಾನ ಆವೃತ್ತಿಯೂ ಸಹ ‘ಇ-ಪದ (
ಕನ್ನಡ ಗಣಕ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮನವಿಯ ಮೇರೆಗೆ ಅಭಿವೃದ್ಧಿ ಪ್ರಾಧಿಕಾರವು ಕನ್ನಡಕ್ಕೆ ಒಂದು ಪ್ರತ್ಯೇಕ ‘‘ಗಣಕ ಸಲಹಾ ಸ್ಥಾಯೀ ಸಮಿತಿ’’ಯನ್ನು ರಚಿಸಬೇಕೆಂದು 1998ರಲ್ಲಿ ಮೊದಲಿಗೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಕಂಪ್ಯೂಟರ್‌ನಲ್ಲಿ ಕನ್ನಡದ ಸಮಗ್ರ ಬಳಕೆಯನ್ನು ಸರಕಾರದ ಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ಇರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸರಕಾರಕ್ಕೆ ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನು ನೀಡುವ ಉದ್ದೇಶದಿಂದ ಈ ಸಲಹಾ ಸಮಿತಿಯ ರಚನೆಯ ಮನವಿಯನ್ನು ಸರಕಾರಕ್ಕೆ ಮಾಡಲಾಗಿತ್ತು. 2004ರಲ್ಲಿ ಅಂದಿನ ವಿಧಾನಪರಿಷತ್ ಸದಸ್ಯರು ಹಾಗೂ ಖ್ಯಾತ ಸಾಹಿತಿಗಳೂ ಆದ ಡಾ. ಚಂದ್ರಶೇಖರ ಕಂಬಾರರು ಇಂಥದೇ ಮನವಿಯನ್ನು ಸರಕಾರಕ್ಕೆ ಸಲ್ಲಿಸಿದರು. ಹಲವು ವರ್ಷಗಳ ಕಾಲವಿಳಂಬದ ನಂತರ ‘‘ಕನ್ನಡ ಗಣಕ ಸಲಹಾ ಸ್ಥಾಯೀ ಸಮಿತಿ’’ಯು ಡಾ. ಚಿದಾನಂದ ಗೌಡರವರ ಅಧ್ಯಕ್ಷತೆಯಲ್ಲಿ ರಚನೆಯಾಯಿತು. ಕಂಪ್ಯೂಟರಿನಲ್ಲಿ ಕನ್ನಡದ ಸಮಗ್ರ ಬಳಕೆಗಾಗಿ ಸಮಿತಿಯು ತನ್ನ ಶಿಫಾರಸುಗಳ ಸಹಿತ ಮೊದಲ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಆ ವರದಿಯ ಒಂದೆರಡು ಶಿಫಾರಸುಗಳ ಹೊರತಾಗಿ ಬಹುತೇಕ ಶಿಫಾರಸುಗಳು ಇಂದಿಗೂ ಜಾರಿಗೊಂಡಿಲ್ಲ.