ಕ್ರೀಡಾಲೋಕದ ಮಿನುಗು ತಾರೆ ದೀಪಾ ಕರ್ಮಾಕರ್

Update: 2017-12-16 18:52 GMT

ಭಾರತದ ಕ್ರೀಡಾಕ್ಷೇತ್ರದಲ್ಲಿ ಜಿಮ್ನಾಸ್ಟಿಕ್ ಅಪರೂಪದ ಕ್ರೀಡೆ. ಸಾಕಷ್ಟು ಜಿಮ್ನಾಸ್ಟ್‌ಗಳು ಭಾರತದಲ್ಲಿ ಸದ್ದಿಲ್ಲದೇ ಹೆಸರು ಮಾಡಿದ್ದರೂ, ಭಾರತದ ಹೆಸರನ್ನು ಜಿಮ್ನಾಸ್ಟಿಕ್ ಕ್ಷೇತ್ರದ ಮೂಲಕ ವಿಶ್ವದ ಉದ್ದಗಲಕ್ಕೆ ಪಸರಿಸಿದವರು ಭಾರತದ ಕ್ರೀಡಾಲೋಕದ ಮಿನುಗು ತಾರೆ ದೀಪಾ ಕರ್ಮಾಕರ್.

2016ರಲ್ಲಿ ಬ್ರೆಝಿಲ್‌ನ ರಿಯೋ ಡಿ ಜಿನೈರೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ನಲ್ಲಿ ನಾಲ್ಕನೆ ಸ್ಥಾನ ಪಡೆಯುವುದರೊಂದಿಗೆ ಜಿಮ್ನಾಸ್ಟಿಕ ವಿಭಾಗದಲ್ಲಿ ಭಾರತದ ಹಿರಿಮೆಯನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡಲು ಸಾಧ್ಯವಾಯಿತು. 52 ವರ್ಷಗಳ ಒಲಿಪಿಂಕ್ಸ್ ಇತಿಹಾಸದಲ್ಲಿ ಭಾರತವನ್ನು ಜಿಮ್ನಾಸ್ಟಿಕ್ ವಿಭಾಗದಲ್ಲಿ ಪ್ರತಿನಿಧಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೀಪಾ, ತ್ರಿಪುರಾದ ಅಗರ್ತಲಾದಲ್ಲಿನ ಪುಟ್ಟ ಗ್ರಾಮದವರು. ತನ್ನ ಕ್ರೀಡಾ ಸಾಧನೆಗಾಗಿ 2016ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್ ರತ್ನ ಹಾಗೂ 2017ರಲ್ಲಿ ದೇಶದ ನಾಲ್ಕನೆ ಅತ್ಯುನ್ನತ ಶ್ರೇಷ್ಠ ನಾಗರಿಕ ಸನ್ಮಾನವಾದ ಪದ್ಮಶ್ರೀ ಪ್ರಶಸ್ತಿಗೆ ದೀಪಾ ಕರ್ಮಾಕರ್ ಪಾತ್ರರಾಗಿದ್ದಾರೆ.

ರಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್‌ನಲ್ಲಿ ಚಿನ್ನ ಗೆದ್ದ ಸಿಮೋನ್ ಬೈಲ್ಸ್ ಕೂಡಾ ತಾನು ಇಂತಹ ಪ್ರದರ್ಶನವನ್ನು ನೋಡಿರಲಿಲ್ಲ ಎಂದು ದೀಪಾರ ಜಿಮ್ನಾಸ್ಟಿಕ್ ಸ್ಟೈಲ್‌ಗೆ ಫಿದಾ ಆಗಿ ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಇಷ್ಟೆಲ್ಲಾ ಗೌರವ, ಸನ್ಮಾನ, ಹೆಗ್ಗಳಿಕೆಗಳೊಂದಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ದೀಪಾ ಕರ್ಮಾಕರ್ ತನ್ನ ಕೋಚ್, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಿಸ್ವೇಸ್ವರ್ ನಂದಿ ಅವರ ಜತೆ ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ‘ವಾರ್ತಾಭಾರತಿ’ ಜತೆ ತಮ್ಮ ಸಾಧನೆಯ ಹಾದಿಯ ಕುರಿತಂತೆ ಮನಬಿಚ್ಚಿ ಮಾತನಾಡಿದರು.

► ಮಂಗಳೂರಿಗೆ ಪ್ರಥಮ ಬಾರಿಗೆ ಭೇಟಿ ನೀಡಿದ್ದೀರಿ? ಹೇಗನ್ನಿಸುತ್ತಿದೆ?

♦ ದೀಪಾ: ಮಂಗಳೂರಿಗೆ ನನ್ನ ಪ್ರಥಮ ಭೇಟಿ ತುಂಬಾ ಖುಷಿ ನೀಡಿದೆ. ಕಣಚೂರು ಮೆಡಿಕಲ್ ಸಯನ್ಸ್‌ನವರು ನನ್ನನ್ನು ಇಲ್ಲಿಗೆ ಕರೆದು ಆದರದ ಸತ್ಕಾರ ನೀಡಿದ್ದಾರೆ. ಅವರಿಗೆ ನಾನು ಆಭಾರಿ.

►ಒಲಿಂಪಿಕ್ಸ್‌ವರೆಗಿನ ಸಾಧನೆಯ ಹಿಂದಿನ ಹಾದಿ ಬಗ್ಗೆ ತಿಳಿಸುವಿರಾ?
♦ ದೀಪಾ: 2016ರ ಒಲಿಂಪಿಕ್ಸ್ ಜಿಮ್ನಾಸ್ಟಿಕ್‌ನಲ್ಲಿ ನಾಲ್ಕನೇ ಸ್ಥಾನ ದೊರಕಿತ್ತು.ಅದರ ಹಿಂದಿನ ಹಾದಿ ತುಂಬಾ ಕ್ಲಿಷ್ಟಕರವಾತ್ತು. ತ್ರಿಪುರಾದಂತಹ ಸಣ್ಣ ರಾಜ್ಯದ ಅಗರ್ತಲಾದವಳು ನಾನು. ನನ್ನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಜಿಮ್ನಾಸ್ಟಿಕ್ ಮೂಲಕ ನಾನು ಒಲಿಂಪಿಕ್ಸ್‌ವರೆಗೆ ಸಾಗಿ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ.

► ನಿಮ್ಮ ಬಾಲ್ಯದ ಬಗ್ಗೆ ಸ್ವಲ್ಪ ಹೇಳುವಿರಾ?
♦ ದೀಪಾ: ತ್ರಿಪುರಾದ ಅಗರ್ತಲಾದಲ್ಲೇ ನಾನು ಪ್ರೈಮರಿ, ಹೈಸ್ಕೂಲ್ ಹಾಗೂ ಪದವಿ ಮುಗಿಸಿದ್ದೇನೆ. ಇದೀಗ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದೇನೆ. ಅಲ್ಲೇ ಸಹಾಯಕ ನಿರ್ದೇಶಕಿಯಾಗಿಯೂ ಉದ್ಯೋಗದಲ್ಲಿದ್ದೇನೆ.

► ಜಿಮ್ನಾಸ್ಟಿಕ್‌ನಲ್ಲಿ ನಿಮಗೆ ತರಬೇತಿ ನೀಡಿದವರು?

♦ ದೀಪಾ: ನಾನು ಬಾಲ್ಯದಲ್ಲೇ ಜಿಮ್ನಾಸ್ಟಿಕ್ ಕಲಿಯಲು ಆರಂಭಿಸಿದ್ದೆ. ಆರಂಭದಲ್ಲಿ ಒಂದೆರಡು ವರ್ಷ ಶಿವಾನಂದಿ ಮೇಡಂ ನನಗೆ ಜಿಮ್ನಾಸ್ಟಿಕ್ ಗುರುವಾಗಿದ್ದರು. ಬಳಿಕ ಸುಮಾರು ಏಳರ ಹರೆಯದಿಂದಲೇ ನನಗೆ ೋಚ್ ಆದವರು ಬಿಸ್ವೇಸ್ವರ್ ನಂದಿ.

► ಜಿಮ್ನಾಸ್ಟಿಕ್ ಆಯ್ಕೆ ಯಾಕೆ?

♦ ದೀಪಾ: ನಿಜ ಹೇಳಬೇಕೆಂದರೆ ಜಿಮ್ನಾಸ್ಟಿಕ್ ನನ್ನ ತಂದೆಯ ಆಯ್ಕೆ. ಆ ಕ್ರೀಡೆಯಲ್ಲಿ ನಾನೇನಾದರೂ ಸಾಧಿಸಬಲ್ಲೆ ಎಂಬ ವಿಶ್ವಾಸವಿದ್ದ ಕಾರಣ ಅವರು ನನಗೆ ಜಿಮ್ನಾಸ್ಟಿಕ್‌ನಲ್ಲಿ ಆಸಕ್ತಿ ಮೂಡಿಸಿದರು. ನನಗೆ ಕಲಿಯಲು ಪ್ರೇರಣೆ ನೀಡಿದರು.

► ನಿಮ್ಮ ಮುಂದಿನ ಗುರಿ?

♦ ದೀಪಾ: ಖಚಿತವಾಗಿಯೂ ನನ್ನ ಮುಂದಿನ ಗುರಿ 2020ರ ಒಲಿಂಪಿಕ್ಸ್. ಅದರ ಜತೆಯಲ್ಲೇ ಕಾಮನ್‌ವೆಲ್ತ್ ಏಷ್ಯನ್ಸ್ ಗೇಮ್ಸ್‌ನ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸುವ ಇರಾದೆ ಇದೆ.

►ನಿಮ್ಮ ಕೋಚ್ ಬಿಸ್ವೇಸ್ವರ್ ನಂದಿ ಬಗ್ಗೆ ನಿಮ್ಮ ಅನಿಸಿಕೆ?
♦ ದೀಪಾ: 
ಅವರು ಒಬ್ಬ ಅಂತಾರಾಷ್ಟ್ರೀಯ ಜಿಮ್ನಾಸ್ಟ್. ನಾನು ಇಂದು ಈ ಎತ್ತರಕ್ಕೆ ಏರಲು ಪ್ರಮುಖ ಕಾರಣಕರ್ತರು ಅವರು. ಬಾಲ್ಯದಲ್ಲಿ ನನಗವರು ಇಷ್ಟ ಆಗುತ್ತಿರಲಿಲ್ಲ. ತುಂಬಾ ಹಠಮಾರಿಯಾಗಿದ್ದ ನನಗೆ ಅವರೇನೋ ಅತಿಯಾದ ಶಿಸ್ತು ಪ್ರದರ್ಶಿಸುತ್ತಾರೆಂಬ ತಪ್ಪು ಅಭಿಪ್ರಾಯವಿತ್ತು. ಆದರೆ, ಕಲಿಯುತ್ತಾ ಹೋದಂತೆ ಅವರೇ ನನ್ನ ಗುರು ಎಂಬುದು ದೃಢವಾಯಿತು. ಅವರು ನಮಗೆ ತರಬೇತಿ ನೀಡುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ತನ್ನ ಕುಟುಂಬವನ್ನು ಬಿಟ್ಟು ನಮ್ಮ ಜತೆ ಶಿಬಿರಗಳಲ್ಲಿ ತಂಗಿ ನಮಗೆ ತರಬೇತಿ ನೀಡುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಸಮಾಜದಲ್ಲಿ ಭಾರತೀಯ ಹೆಣ್ಣು ಮಕ್ಕಳಿಗೆ ಜಿಮ್ನಾಸ್ಟಿಕ್ ಕ್ರೀಡೆ ಒಗ್ಗುವಂತಹದ್ದಲ್ಲ. ಅದು ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂಬ ಭಾವನೆಯೂ ಇದ್ದ ಸಂದರ್ಭದಲ್ಲಿ ನನಗೆ ಧೈರ್ಯ ತುಂಬಿದವರು ನಮ್ಮ ಕೋಚ್. ಅಂತಹ ಮಾತುಗಳಿಗೆ ಕಿವಿ ಕೊಡದಂತೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ ಬಿಸ್ವೇಸ್ವರ್ ಸರ್, ನಮ್ಮಿಂದ ಸಾಧನೆ ಸಾಧ್ಯ ಎಂಬ ವಿಶ್ವಾಸ ತೋರಿಸಿದ್ದರಿಂದಲೇ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ಟ್‌ಗೆ ಭಾರತದ ಹೆಣ್ಣು ಮಗಳೊಬ್ಬಳು ಪ್ರವೇಶ ಪಡೆಯಲು ಸಾಧ್ಯವಾಯಿತು. ಮಾತ್ರವಲ್ಲ, ನಾಲ್ಕನೆ ಸ್ಥಾನ ಪಡೆಯುವಂತಾಯಿತು. ಸಾಧನೆಯ ಹಸಿವನ್ನು ನನಗೆ ತೋರಿಸಿದವರು ಅವರು.

► ನಿಮ್ಮ ಫಿಸಿಯೋಥೆರಪಿಸ್ಟ್ ಯಾರು?

♦ ದೀಪಾ: ನಾನು ದೈಹಿಕವಾಗಿ ಸದೃಢ ಹಾಗೂ ಕ್ಷಮತೆಯನ್ನು ಹೊಂದಿರಬೇಕಾದರೆ ನನಗೆ ತಜ್ಞ ಫಿಸಿಯೋಥೆರಪಿಸ್ಟ್ ಅಗತ್ಯವಾಗಿತ್ತು. ನನಗೆ ಮಂಗಳೂರಿನ ಎಂ.ವಿ.ಶೆಟ್ಟಿ ವೈದ್ಯಕೀಯ ಕಾಲೇಜಿನ ಡಾ.ಇಫ್ತಿಕಾರ್ ಅಲಿ ಅವರ ಶಿಷ್ಯ ಡಾ. ಸಜ್ಜಾದ್ ಮೀರ್ ನನ್ನ ಫಿಸಿಯೋಥೆರಪಿಸ್ಟ್. ನಾನು ಒಲಿಪಿಂಕ್ಸ್‌ಗೆ ತೆರಳುವ ಸಂದರ್ಭವೂ ನನ್ನ ಜತೆ ಫಿಸಿಯೋಥೆರಪಿಸ್ಟ್ ಬೇಕು ಎಂಬ ಮನವಿ ಮಾಡಿಕೊಂಡಿದ್ದೆ. ಆದರೆ ಅದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ನಾನು ಒಲಿಂಪಿಕ್ಸ್‌ನಲ್ಲಿ ಅಂತಿಮ ಹಂತಕ್ಕೆ ತಲುಪುವ ವೇಳೆ ತುರ್ತಾಗಿ ಅವರನ್ನು ಕರೆಸಿಕೊಳ್ಳಲಾಯಿತು.

► ಸಾಧನೆಯ ಹಾದಿಯಲ್ಲಿ ನೀವು ಎದುರಿಸಿದ ಸವಾಲುಗಳು, ಕಠಿಣ ಪರಿಸ್ಥಿತಿಗಳು?
♦ ದೀಪಾ: ಬಹಳಷ್ಟು ಸಮಸ್ಯೆಗಳು, ಕಠಿಣ ಪರಿಸ್ಥಿತಿಗಳನ್ನು ನಾನೂ ಎದುರಿಸಬೇಕಾಯಿತು. ಹೇಳಿ ಕೇಳಿ ತ್ರಿಪುರಾ ಸಣ್ಣ ರಾಜ್ಯ. ಅಲ್ಲಿನ ಆ ಅಗರ್ತಲಾದಲ್ಲಿ ಅಂತಾರಾಷ್ಟ್ರೀಯ ಕ್ರೀಡೆಯಾಗಿರುವ ಜಿಮ್ನಾಸ್ಟಿಕ್‌ಗೆ ಬೇಕಾದ ಸೌಲಭ್ಯಗಳಿರಲಿಲ್ಲ. ಅಂತಾರಾಷ್ಟ್ರೀಯ ಗುಣಮಟ್ಟದ ಉಪಕರಣಗಳಿರಲಿಲ್ಲ. ಅದರಿಂದಾಗಿ ತರಬೇತಿಯ ವೇಳೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಈ ಸಂದರ್ಭ ನಮಗೆ ನೆರವಾಗಿದ್ದು ಭಾರತದ ಕ್ರೀಡಾ ಪ್ರಾಧಿಕಾರ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಸುಮಾರು 78 ಲಕ್ಷ ರೂ. ವೌಲ್ಯದ ಜಿಮ್ನಾಸ್ಟಿಕ್ ಉಪಕರಣಗಳನ್ನು ಒದಗಿಸಿ ತರಬೇತಿಗೆ ವ್ಯವಸ್ಥೆ ಕಲ್ಪಿಸಿದರು. ಜತೆಗೆ ಭಾರತ ಸರಕಾರ ಹಾಗೂ ರಾಜ್ಯ ಸರಕಾರವೂ ಬೆಂಬಲ ನೀಡಿದವು.

► ಕುಟುಂಬದಿಂದ ಹೇಗೆ ಪ್ರೋತ್ಸಾಹ ದೊರೆಯಿತು?
♦ ದೀಪಾ: ನಮ್ಮ ಕುಟುಂಬ ಕ್ರೀಡಾ ಹಿನ್ನೆಲೆ ಹೊಂದಿರುವಂತಹದ್ದು. ನನ್ನ ತಂದೆ ಓರ್ವ ದೇಹದಾರ್ಢ್ಯ ಪಟು. ಅವರು ಖುದ್ದು ಕೋಚ್ ಕೂಡಾ ಆಗಿದ್ದ ಕಾರಣ ನನಗೆ ಸಾಕಷ್ಟು ಪ್ರೋತ್ಸಾಹ ದೊರೆಯಿತು. ಇದರಿಂದಾಗಿ ಕೌಟುಂಬಿಕವಾಗಿ ನಾನು ಯಾವುದೇ ರೀತಿಯ ಸುಸ್ಯೆ ಎದುರಿಸುವ ಪರಿಸ್ಥಿತಿ ಇರಲಿಲ್ಲ.

► ಶಿಕ್ಷಣ ಮತ್ತು ಜಿಮ್ನಾಸ್ಟಿಕ್ ನಡುವೆ ಹೊಂದಾಣಿಕೆ ಹೇಗೆ?

♦ ದೀಪಾ: ಶಾಲಾ ಸಮಯದಲ್ಲಿ ರಜೆ ಅವಧಿಯಲ್ಲಿ ತರಬೇತಿ ಪಡೆಯುತ್ತಿದ್ದೆ. ಬಳಿಕ ಜಿಮ್ನಾಸ್ಟಿಕ್ ತರಬೇತಿಗಾಗಿ ಹೆಚ್ಚಿನ ಸಮಯ ನೀಡಬೇಕಾಗಿತ್ತು. ಆದರೆ ಕ್ರೀಡಾಪಟುಗಳು ಕಲಿಕೆಯಲ್ಲೂ ಮುಂದಿರುತ್ತಾರೆ. ಕಡಿಮೆ ಸಮಯದಲ್ಲೂ ಹೆಚ್ಚಿನ ಜ್ಞಾನಾರ್ಜನೆ ಸಾಧ್ಯ. ಹಾಗಾಗಿ ಜೀವನದಲ್ಲಿ ಒಂದನ್ನು ಪಡೆಯಬೇಕಾದರೆ ಮತ್ತೊಂದರ ಬಗ್ಗೆ ಸ್ವಲ್ಪ ಮೃದುಧೋರಣೆ ಅಗತ್ಯ. ಹಾಗಾಗಿ ನಾನು ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗಿದೆ.

► ಒಲಿಂಪಿಕ್ಸ್‌ನ ನಿಮ್ಮ ಸಾಧನೆ ನಿಮ್ಮ ಜೀವನದಲ್ಲಿ ಮಾಡಿದ ಪರಿವರ್ತನೆ?

♦ದೀಪಾ: ಬಹಳಷ್ಟು ಪರಿವರ್ತನೆಯಾಗಿದೆ. ಜಿಮ್ನಾಸ್ಟ್ ಏನೆಂದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಈ ಕ್ರೀಡೆಯ ಬಗ್ಗೆ ಹೆಚ್ಚು ಹೆಚ್ಚಾಗಿ ತಿಳಿಯಲು, ಅರಿಯಲು ಸಾಧ್ಯವಾಗಿದೆ. ತ್ರಿಪುರಾದ ಅಗರ್ತಲಾ ಬಗ್ಗೆ ಅರಿಯುವಂತಾಯಿತು. ದೀಪಾ ಬಗ್ಗೆ ತಿಳಿಯುವಂತಾಯಿತು. ಪ್ರಸ್ತುತ ನಮ್ಮ ಊರಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಮಾತ್ರವಲ್ಲ, ನಾನು ಹೋದಲ್ಲೆಲ್ಲಾ ಜಿಮ್ನಾಸ್ಟಿಕ್ ಬಗ್ಗೆ ಜನ ಮಾತನಾಡುವಾಗ ನನಗೆ ಹೆಮ್ಮೆ ಅನ್ನಿಸುತ್ತದೆ. ಧನ್ಯತೆಯ ಭಾವನೆ ಮೂಡುತ್ತದೆ.

ದೀಪಾ ಕರ್ಮಾಕರ್ ಬಗ್ಗೆ ಕೋಚ್ ಬಿಸ್ವೇಸ್ವರ್ ನಂದಿ ಮಾತು...

ಗೆಲ್ಲುವ ಹಠ ಆಕೆಯಲ್ಲಿ ಯಥೇಚ್ಛವಾಗಿತ್ತು. ಒಂದು ರೀತಿಯ ಹಠಮಾರಿ ಧೋರಣೆ ಆಕೆಯದ್ದಾಗಿದ್ದರೂ ಅದನ್ನು ನಾನು ಆಕೆಯ ತರಬೇತಾಗಿ ಪರಿವರ್ತಿಸಿದೆ. ಸಾಧಿಸುವ ಛಲದ ಜತೆಗೆ ಆಕೆ ಸಾಕಷ್ಟು ಪರಿಶ್ರಮಿ ಕೂಡಾ ಆಗಿದ್ದ ಕಾರಣ ನಾನು ಹೇಳಿದ್ದನ್ನು ಕೇಳಿಸಿಕೊಳ್ಳಲು, ಕಲಿತುಕೊಳ್ಳಲು ಆಕೆಯಿಂದ ಸಾಧ್ಯವಾಗುತ್ತಿತ್ತು. ಈಗಾಗಲೇ ದೀಪಾ ಜಿಮ್ನಾಸ್ಟ್‌ನ ಪ್ರೊಡೊನೊವಾ ವೋಲ್ಟ್‌ನ ವಿಭಿನ್ನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆಕೆಗೀಗ ದೇಹವನ್ನು 540ಡಿಗ್ರಿ ಬಾಗಿಸುವಂತಹ ವಿಶೇಷ ಟೆಕ್ನಿಕ್ ಬಗ್ಗೆ ತರಬೇತಿ ನೀಡುತ್ತಿದ್ದೇನೆ. ಆಕೆಯಿಂದ ಸಾಕಷ್ಟು ನಿರೀಕ್ಷೆ ಇದೆ, ಅದನ್ನು ಆಕೆ ಈಡೇರಿಸುವ ವಿಶ್ವಾಸವೂ ಇದೆ ಎಂದು ತಮ್ಮ ಶಿಷ್ಯೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ದೀಪಾ ಕರ್ಮಾಕರ್‌ರವರ ಕೋಚ್ ಬಿಸ್ವೇಸ್ವರ್ ನಂದಿ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News

ಜಗದಗಲ
ಜಗ ದಗಲ