ಲಿಂಗಾಯತವೇ ಸತ್ಯ

Update: 2017-12-18 18:52 GMT

‘‘ನಾನು ಶೈವನಿದ್ದೆ ವೀರಶೈವನಾದೆ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ ಅವರ ವಚನಗಳಲ್ಲಿ ಎಲ್ಲಿಯೂ ಲಿಂಗಾಯತ ಪದ ಬಳಕೆಯಾಗಿಲ್ಲ’’ ಎಂದು ಪಂಚಾಚಾರ್ಯರು ಮತ್ತು ಚಿಮೂ ಅಂಥವರು ಹೇಳುತ್ತಲೇ ಇದ್ದಾರೆ. ಇದರಿಂದಾಗಿ ಜನರಲ್ಲಿ ಸಹಜವಾಗಿಯೆ ಗೊಂದಲ ಸೃಷ್ಟಿಯಾಗುತ್ತಿದೆ.

12ನೇ ಶತಮಾನ ‘ವಚನಯುಗ’ ಎನಿಸಿದರೆ 15ನೇ ಶತಮಾನ ‘ವಚನಸಂಕಲನ ಯುಗ’ ಎನಿಸಿತು. ಈ ಸಂದರ್ಭದಲ್ಲಿ ಬಸವಣ್ಣ, ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನವರ ವಚನಗಳನ್ನು ಷಟ್‌ಸ್ಥಲಗಳಲ್ಲಿ ವಿಂಗಡಿಸಿ ಹಸ್ತಪ್ರತಿಗಳನ್ನು ಸಿದ್ಧಪಡಿಸಲಾಯಿತು. ಈ ಮೂವರ ವಚನಕಟ್ಟುಗಳು ಮಠಮಾನ್ಯಗಳಲ್ಲಿ, ವಿದ್ವಜ್ಜನರ ಮತ್ತು ಶ್ರೀಮಂತರ ಮನೆಗಳಲ್ಲಿ ವಿಜೃಂಭಿಸಿದವು. ಇದೇ ಕಾರಣದಿಂದ ಈ ಷಟ್‌ಸ್ಥಲ ವಚನಕಟ್ಟುಗಳಲ್ಲಿನ ವಚನಗಳನ್ನು ತಮ್ಮ ಇಚ್ಛೆಗನುಸಾರವಾಗಿ ತಿದ್ದುವ ಸಾಹಸವನ್ನು ಪ್ರತಿಗಾಮಿ ಶಕ್ತಿಗಳು ಮಾಡಲಿಲ್ಲ. ಹೀಗಾಗಿ ಈ ಮೂವರ ಷಟ್‌ಸ್ಥಲ ವಚನಗಳಲ್ಲಿ ಎಲ್ಲಿಯೂ ‘ವೀರಶೈವ’ ಪದ ಬಳಕೆಯಾಗಿಲ್ಲ.

ಶರಣಪ್ರಿಯ ಸಾಹಿತಿಗಳಾದ 13ನೇ ಶತಮಾನದ ಹರಿಹರ, ರಾಘವಾಂಕ ಮತ್ತು ಕೆರೆಯಪದ್ಮರಸರ ಕೃತಿಗಳಲ್ಲಿ ಕೂಡ ‘ವೀರಶೈವ’ ಪದ ಬಳಕೆಯಾಗಿಲ್ಲ. ಬಸವಣ್ಣನವರ ಸಮಕಾಲೀನರಾದ ಪಂಡಿತಾರಾಧ್ಯರ ‘ಶಿವತತ್ತ್ವಸಾರಮು’ ತೆಲುಗು ಕೃತಿಯಲ್ಲಿ ಕೂಡ ಈ ಪದ ಬಳಕೆಯಾಗಿಲ್ಲ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣದಲ್ಲಿಯೂ ವೀರಶೈವ ಪದದ ಬಳಕೆಯಾಗಿಲ್ಲ! ಈ ಕೃತಿಯ ಆಧಾರದ ಮೇಲೆ ಭೀಮಕವಿಯ ‘ಬಸವಪುರಾಣ’ ಕ್ರಿಸ್ತಶಕ 1368ರಲ್ಲಿ ರಚನೆಯಾಗಿದೆ.

ಪಾಲ್ಕುರಿಕೆ ಸೋಮನಾಥ ಬಳಸಿದ ‘ವೀರಮಾಹೇಶ್ವರ’ ಪದದ ಬದಲಿಗೆ ಭೀಮಕವಿ ‘ವೀರಶೈವ’ ಪದ ಪ್ರಯೋಗ ಮಾಡಿದ. ಷಟ್‌ಸ್ಥಲ ವಚನ ಸಂಪುಟಗಳಲ್ಲಿ ಒಂದು ಕಡೆ ಕೂಡ ಸಿಗದ ವೀರಶೈವ ಪದ ಅದು ಹೇಗೆ ಹೆಚ್ಚಿನ ವಚನಗಳಲ್ಲಿ ಸೇರ್ಪಡೆಯಾಯಿತು. ಎಂಬುದರ ಕುರಿತು ಚಿಂತಿಸುವುದು ಅವಶ್ಯವಾಗಿದೆ. ಷಟ್‌ಸ್ಥಲ ವಚನಕಟ್ಟುಗಳು ಸಿದ್ಧವಾಗುವ ಸಂದರ್ಭದಲ್ಲಿ ‘ವೀರಶೈವ’ ಶಬ್ದಕ್ಕೆ ವಚನ ಸಾಹಿತ್ಯದಲ್ಲಿ ಮಹತ್ವವಿರಲಿಲ್ಲ. ಆಗ ‘ವೀರಶೈವವ್ರತ’ ಎಂಬುದು ಪ್ರಚಾರದಲ್ಲಿತ್ತು. ಅದು ಆಗ ಶೈವಧರ್ಮದ ಒಂದು ಶಾಖೆ ಕೂಡ ಆಗಿರದೆ ಕೇವಲ ಒಂದು ವ್ರತವಾಗಿತ್ತು. ಈ ವ್ರತದ ಬಗ್ಗೆ ಶರಣರಿಗೆ ತಿರಸ್ಕಾರವಿತ್ತು. ಅಂತೆಯೆ ಬಸವಣ್ಣನವರ ಸಮಕಾಲೀನ ವಚನಕಾರ್ತಿ ಅಮುಗೆ ರಾಯಮ್ಮ:
‘‘ಸರ್ವಾಗಮ ಶ್ರುತಿ ಸ್ಮತಿ ಪುರಾಣ ಪಾಠಕನಾದಡೇನು?
ಸರ್ವಮಂತ್ರ ತಂತ್ರ ಸಿದ್ಧಿ ಮರ್ಮವರಿತಡೇನು?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ.
ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ.
ಇದೇತರ ವೀರಶೈವವ್ರತ ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೆ?’’
ಎಂದು ವೀರಶೈವ ವ್ರತವನ್ನು ತಿರಸ್ಕರಿಸಿದ್ದಾಳೆ.

ಈ ವೀರಶೈವ ವ್ರತವನ್ನು ಆಚರಿಸುವವರಿಗೆ ‘ವೀರವ್ರತಿ’ ಎಂದು ಕರೆಯುತ್ತಿದ್ದರು. ಬಸವಣ್ಣನವರು ಈ ವೀರವ್ರತಿಗಳನ್ನು ಸೂಚ್ಯವಾಗಿ ಟೀಕಿಸಿದ್ದಾರೆ. ‘‘ವೀರವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯಾ; ವೀರನಾದಡೆ ವೈರಿಗಳು ಮೆಚ್ಚಬೇಕು, ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು. ಭಕ್ತನಾದಡೆ ಜಂಗಮವೇ ಮೆಚ್ಚಬೇಕು’’ ಎಂದಿದ್ದಾರೆ.

ಬಸವಣ್ಣನವರು ಈ ವಚನದ ಮೂಲಕ ‘‘ವೀರವ್ರತಿ ಎನ್ನಿಸಿಕೊಳ್ಳುವ ಭಕ್ತನು ವೀರನೂ ಅಲ್ಲ, ವ್ರತಿಯೂ ಅಲ್ಲ ಮತ್ತು ಭಕ್ತನೂ ಅಲ್ಲ’’ ಎಂಬುದನ್ನು ಸೂಚಿಸಿದ್ದಾರೆ. ಶರಣರು ವೀರಶೈವವ್ರತವನ್ನು ಮತ್ತು ವೀರವ್ರತಿಗಳನ್ನು ತಿರಸ್ಕರಿಸಿದ್ದರು ಎಂಬುದಕ್ಕೆ ಈ ವಚನಗಳು ಸಾಕ್ಷಿಯಾಗಿವೆ.

ಶರಣರು ಸ್ಥಾಪಿಸಿದ ಕ್ರಾಂತಿಕಾರಿ ವಚನೋಕ್ತ ಲಿಂಗಾಯತ ಧರ್ಮವನ್ನು ವೀರಶೈವವಾದಿಗಳು ಬದಿಗೊತ್ತಿ ತಮ್ಮದೇ ಆದ ಆಗಮೋಕ್ತ ವೀರಶೈವ ಧರ್ಮವನ್ನು 15ನೇ ಶತಮಾನದ ಹೊತ್ತಿಗೆ ಎತ್ತಿ ಹಿಡಿದರು. ಅದೇ ವೇಳೆ ಅವರ ಧರ್ಮಗ್ರಂಥವಾದ ‘ಸಿದ್ಧಾಂಥ ಶಿಖಾಮಣಿ’ಯ ರಚನೆಯಾಯಿತು. ಈ ಸಂದರ್ಭದಲ್ಲಿ ವೀರಶೈವ ಪದ ಹೆಚ್ಚು ಬಳಕೆಯಾಗತೊಡಗಿತು. ಇದಾದ ನಂತರ ಶರಣರ ಹೆಚ್ಚಿನ ವಚನಗಳಲ್ಲಿ ಮಾತ್ರ ಸಾಧ್ಯವಾದ ಕಡೆಗಳಲ್ಲೆಲ್ಲ ಲಿಂಗಾಯತ ಮತ್ತು ಲಿಂಗವಂತ ಪದಗಳ ಬದಲಿಗೆ ವೀರಶೈವ ಪದಗಳನ್ನು ಸೇರಿಸಿ ವಚನಗಳ ಹಸ್ತಪ್ರತಿಗಳನ್ನು ಸಿದ್ಧಪಡಿಸಲಾಯಿತು. ಆದರೆ ಅವರಿಗೆ ಬಹುಪ್ರಚಾರದಲ್ಲಿದ್ದ ಷಟ್‌ಸ್ಥಲ ವಚನಕಟ್ಟುಗಳಲ್ಲಿ ಒಂದು ಕಡೆಯೂ ವೀರಶೈವ ಪದ ಸೇರಿಸಲಿಕ್ಕಾಗಲಿಲ್ಲ ಎಂಬುದು ಗಮನಾರ್ಹವಾಗಿದೆ.

ವಚನಗಳಲ್ಲಿ ಲಿಂಗಾಯತಕ್ಕಿಂತ ಲಿಂಗವಂತ ಪದವೇ ಹೆಚ್ಚಾಗಿ ಬಳಕೆಯಾಗಿದೆ. ಏಕೆಂದರೆ ಲಿಂಗವು ಅಂಗಕ್ಕೆ ಬರುವಂಥದ್ದು ಲಿಂಗಾಯತ. ಇದು ಮೊದಲ ಘಟ್ಟ. ಎರಡನೇ ಘಟ್ಟ ಲಿಂಗಸ್ವಾಯತ. ಮೂರನೇ ಘಟ್ಟ ಲಿಂಗಸನ್ನಿಹಿತ. ಈ ಮೂರೂ ಘಟ್ಟಗಳನ್ನು ತಲುಪಿದಾತ ಲಿಂಗವಂತ. ಲಿಂಗಾಯತದಿಂದ ಆರಂಭವಾಗಿ ಲಿಂಗವಂತದಲ್ಲಿ ಕೊನೆ ಮುಟ್ಟುವುದರಿಂದ ವಚನಗಳಲ್ಲಿ ಲಿಂಗವಂತ ಪದ ಹೆಚ್ಚಾಗಿ ಬಳಕೆಯಾಗಿದೆ. ಲಿಂಗವಂತದ ಮೂಲ ಲಿಂಗಾಯತದಲ್ಲಿದೆ. ಆದ್ದರಿಂದ ‘ಲಿಂಗಾಯತರು’ ಎಂಬ ಪದವೇ ಜನಮನದಲ್ಲಿ ಅಚ್ಚೊತ್ತಿದೆ.

ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಮಾಡುವ ಪೂರ್ವದಲ್ಲಿ ಸ್ಥಾವರಲಿಂಗಗಳು ಮತ್ತು ಅವುಗಳ ಚಿಕ್ಕ ಮಾದರಿಗಳಾದ ಚರಲಿಂಗಗಳು ಬಳಕೆಯಲ್ಲಿದ್ದವು. ಬಸವಣ್ಣನವರು ಚಳವಳಿ ರೂಪದ ಜಾತ್ಯತೀತ ಲಿಂಗಾಯತ ಧರ್ಮ ಸ್ಥಾಪನೆ ಜೊತೆ ಇಷ್ಟಲಿಂಗವನ್ನೂ ಸೃಷ್ಟಿಸಿದರು. ಅಂತೆಯೆ ‘‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’’ ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ. ‘‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ’’ ಎಂದು ಬಸವಣ್ಣನವರೇ ಇಷ್ಟಲಿಂಗವನ್ನು ಉದ್ದೇಶಿಸಿ ಹೇಳಿದ್ದಾರೆ.

‘‘...ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು, ನಿಜವೀರಶೈವಾಚಾರವನರುಹಿ ತೋರಿ....’’ ಎಂದು ಚೆನ್ನಬಸವಣ್ಣನವರ ಕುರಿತ ಬಸವಣ್ಣನವರ ವಚನವೊಂದು ಅವರ ಹೆಚ್ಚಿನ ವಚನಗಳಲ್ಲಿ ಇದೆ. ಇದನ್ನೇ ಹಿಡಿದು ಪಂಚಾಚಾರ್ಯರು ಮತ್ತು ಇತರ ವೀರಶೈವವಾದಿಗಳು ನಿರಂತರ ವಾದ ಮಾಡುತ್ತಿದ್ದಾರೆ. ಆದರೆ ಈ ಸಾಲುಗಳು ಶೈವಮಾರ್ಗಗಳಿಗೆ ವಿರುದ್ಧವಾಗಿವೆ.

ವೀರಶೈವವು 28 ಆಗಮಗಳ ಮೂಲದಿಂದ ಸೃಷ್ಟಿಯಾದ ಸಪ್ತಶೈವಗಳಲ್ಲಿನ ಒಂದು ಉಪಶಾಖೆಯಾಗಿದೆ. ಅನಾದಿಶೈವ, ಆದಿಶೈವ, ಮಹಾಶೈವ, ಅನುಶೈವ, ಅಂತರಶೈವ, ಪ್ರವರಶೈವ ಮತ್ತು ಅಂತ್ಯಶೈವ ಎಂಬ ಏಳು ಪ್ರಭೇದಗಳಿವೆ. ಹೀಗೆ ಸಪ್ತಶೈವಗಳ ಮೂಲಕ ಸಾಮಾನ್ಯಶೈವ, ಮಿಶ್ರಶೈವ, ಶುದ್ಧಶೈವ ಮತ್ತು ವೀರಶೈವ ಎಂಬ ನಾಲ್ಕು ಪಂಗಡಗಳು ಹೊರಹೊಮ್ಮಿವೆ. ವೀರಶೈವದಲ್ಲಿ ಸಾಮಾನ್ಯ ವೀರಶೈವ, ವಿಶೇಷ ವೀರಶೈವ, ನಿರಾಬಾರಿ ವೀರಶೈವ ಎಂಬ ಮೂರು ಪ್ರಕಾರದ ವೀರಶೈವಗಳಿವೆ. ಆಗಮೋಕ್ತ ಶೈವ ಪಂಗಡಗಳಿಗೂ ಲಿಂಗಾಯತಕ್ಕೂ ಸಂಬಂಧವಿಲ್ಲ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಬಸವಾದಿ ಶರಣರ ವಚನರೂಪಿ ಹೊಸನುಡಿಯ ಧರ್ಮವಾಗಿದೆ. ಲಿಂಗಾಯತವು ಶರಣರ ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳಿಂದ ಮೂಡಿ ಬಂದಿದೆ. ಆದರೆ ಅನೇಕರು ಲಿಂಗಾಯತಕ್ಕೆ ವೀರಶೈವವನ್ನು ಸಮಾನಾರ್ಥದಲ್ಲಿ ಬಳಸಿ ಗೊಂದಲ ಸೃಷ್ಟಿಸಿದ್ದಾರೆ.

‘‘ವೇದಕ್ಕೆ ಒರೆಯ ಕಟ್ಟುವೆ’’ (ವೇದಗಳನ್ನು ಗಂಟುಕಟ್ಟಿ ಇಡುವೆ) ಎಂದು ಹೇಳುವ ಮೂಲಕ ಬಸವಣ್ಣನವರು ವೇದೋಕ್ತ ವೈದಿಕ ಧರ್ಮವನ್ನು ತಿರಸ್ಕರಿಸಿದ್ದಾರೆ. ‘‘ಆಗಮದ ಮೂಗ ಕೊಯಿವೆ’’ ಎಂದು ಹೇಳುವ ಮೂಲಕ ಆಗಮೋಕ್ತ ಶೈವಧರ್ಮವನ್ನೂ ತಿರಸ್ಕರಿಸಿದ್ದಾರೆ. ವೇದ ಮತ್ತು ಆಗಮಗಳನ್ನು ನಂಬುವ ವೀರಶೈವವನ್ನು ಬಸವಣ್ಣನವರು ಒಪ್ಪಿಕೊಳ್ಳಲು ಸಾಧ್ಯವೇ?

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News