ಅಂಜನಿಪುತ್ರ ಅಭಿಮಾನಿಗಳಿಗೆ ಮಾತ್ರ

Update: 2017-12-24 12:58 GMT

ಅಂಜನಿಪುತ್ರ ಎನ್ನುವ ಹೆಸರೇ ಸೂಚಿಸುವಂತೆ ಇದು ಅಂಜನಿ ಮತ್ತು ಪುತ್ರನ ಕತೆ. ಆದರೆ ಇಬ್ಬರಿಗೂ ಹೇಳಿಕೊಳ್ಳುವಂತಹ ಕತೆ ಏನೂ ಇಲ್ಲ ಎನ್ನುವುದೇ ಚಿತ್ರದ ವ್ಯಥೆ.

 ಚಿತ್ರದ ನಾಯಕ ಬಜಾರ್ ನಲ್ಲಿ ಬಡ್ಡಿ ವ್ಯಾಪಾರ ನಡೆಸುವ ರಾಜ್. ಆದರೆ ಆತ ನಿಜಕ್ಕೂ ರಾಜ್ ಗ್ರೂಪ್ ಆಫ್ ಕಂಪೆನಿಯ ಏಕೈಕ ವಾರಿಸುದಾರ ವಿರಾಜ್ ಎಂಬ ಸತ್ಯ ಆನಂತರ ಹೇಳಲಾಗುತ್ತದೆ. ಗ್ರಾಮದಲ್ಲಿ ತುಂಬು ಕುಟುಂಬದಲ್ಲಿದ್ದ ವಿರಾಜ್‌ನ ಮೇಲೆ ಉಂಟಾದ ಸುಳ್ಳು ಆಪಾದನೆಯೊಂದು ತಾಯಿಯೇ ಆತನನ್ನು ಮನೆಯಿಂದ ಹೊರಗೆ ಹಾಕುವ ಸಂದರ್ಭ ಸೃಷ್ಟಿ ಮಾಡುತ್ತದೆ. ಆದರೆ ಸತ್ಯ ಅರಿತೊಡನೆ ತಾಯಿ ಮಗನಿಗೆ ಫೋನ್ ಮಾಡಿ ಮತ್ತೆ ಮನೆಗೆ ಕರೆಸಿಕೊಳ್ಳುತ್ತಾಳೆ. ಅದೇ ವೇಳೆ ಮನೆ ಮಂದಿಗೆ ಶತ್ರು ಕಾಟ ಕೂಡ ಇರುವುದನ್ನು ಮನಗಂಡು ತಕ್ಷಣ ಮನೆಗೆ ಹೊರಡುತ್ತಾನೆ ನಾಯಕ. ಮುಂದಿನದ್ದೆಲ್ಲ ನಿರೀಕ್ಷಿತ. ಮೂಲ ಚಿತ್ರ ತಮಿಳಿನ ಪೂಜೈ ನೋಡಿದವರಿಗೆ ಈ ಕತೆ ಕೂಡ ಹೊಸತಲ್ಲ. ಆದರೆ ಪುನೀತ್ ರಾಜಕುಮಾರ್ ಮತ್ತು ಹರ್ಷ ಜತೆಯಾದಾಗ ಬರಬೇಕಾದಂಥ ಚಿತ್ರವಂತೂ ಇದಲ್ಲ.

ವಿರಾಜ್ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಎಂದಿನಂತೆ ವಿರಾಜಮಾನವಾಗಿದ್ದಾರೆ. ಆದರೆ ಈಗಾಗಲೇ ತಮ್ಮ ನಟನಾ ವೈಭವವನ್ನು ಮನದಟ್ಟು ಮಾಡಿರುವ ಅವರಿಂದ ಯಾವ ವಿಶೇಷತೆಯೂ ಇರದ ಈ ಪಾತ್ರ ಮಾಡಿಸಿರುವುದು ಸರ್ಕಸ್‌ನ ಆನೆ ತರಿಸಿ ನಡೆದಾಡಿಸಿ ಕಳಿಸಿದಂತಿದೆ. ಹಾಗಂತ ಬಿಲ್ಡಪ್ ಡೈಲಾಗ್ ಗಳು, ಸಿನಿಮೀಯ ಇಂಟ್ರಡಕ್ಷನ್‌ಗೆ ಕೊರತೆಯಿಲ್ಲ. ಆದರೆ ಅದು ಮೊದಲೆರಡು ದಿನ ಚಿತ್ರ ನೋಡುವ ಅಭಿಮಾನಿಗಳಿಗೆ ಇಷ್ಟವಾದೀತೇ ಹೊರತು, ಹೊಸ ಅಭಿಮಾನಿಗಳನ್ನು ಸೃಷ್ಟಿಸದು.

ನಾಯಕಿಯಾಗಿ ರಶ್ಮಿಕಾ ಮಂದಣ್ಣ ಓಂ ಪ್ರಕಾಶ್ ರಾವ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ರಕ್ಷಿತಾರನ್ನು ನೆನಪಿಸುತ್ತಾರೆ! ಹಾಗಂತ ತುಂಡು ಬಟ್ಟೆಗಳಲ್ಲಿ ಕಾಣಿಸಿಲ್ಲವಾದರೂ, ನಾಯಕನ ಹಿಂದೆ ಬೀಳುವ, ಆತನ ಬಗ್ಗೆ ಅಚ್ಚರಿಗೊಳ್ಳುವ ಮತ್ತು ಹಾಡಲ್ಲಿ ಜತೆಗೆ ಕುಣಿಯುವುದಕ್ಕಷ್ಟೇ ಸೀಮಿತವಾಗಿದ್ದಾರೆ. ವಿರಾಜ್‌ನ ತಾಯಿ ಅಂಜನಿಯಾಗಿ ರಮ್ಯಕೃಷ್ಣ ಚಿತ್ರ ಪೂರ್ತಿ ಅದುರಿ ಬಿದ್ದವರಂತೆ ಕಾಣಿಸುತ್ತಾರೆ. ಅವರು ಯಾಕೆ ಅಷ್ಟು ಗಂಭೀರವಾಗಿದ್ದಾರೆ ಎನ್ನುವುದು ಚಿತ್ರಮುಗಿದ ಮೇಲೆಯೂ ಗೊತ್ತಾಗುವುದಿಲ್ಲ. ಬಹುಶಃ ಬಾಹುಬಲಿಯ ಶಿವಗಾಮಿ ಇನ್ನೂ ಅವರನ್ನು ಬಿಟ್ಟುಹೋಗದಂತೆ ಮಾಡುವಲ್ಲಿ ನಮ್ಮ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅದಕ್ಕೆ ಪೂರಕವಾದ ಅಂಥದೇ ಹಿನ್ನೆಲೆ ಸಂಗೀತವೂ ಮೊಳಗುತ್ತದೆ.
ರವಿ ಬಸ್ರೂರು ಸಂಗೀತದಲ್ಲಿ ‘ಚೆಂದ ಚೆಂದ ಚೆಂದ ಚೆಂದ ನನ್ಹೆಂಡ್ತಿ’ ಹಾಡು ಈಗಾಗಲೇ ಜನಪ್ರಿಯವಾಗಿದೆ. ಹಾಡಿನಲ್ಲಿ ಕುಂದಗನ್ನಡ ಭಾಷೆ ಬಳಸಿರುವುದು ವಿಶೇಷ. ಆದರೆ ಅದರ ಪಲ್ಲವಿ ಕೇಳುತ್ತಲೇ ಲೂಸಿಯಾ ಚಿತ್ರದ ‘ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ..’ ಎಂಬ ಹಾಡು ನೆನಪಾಗುತ್ತದೆ. ಚಿತ್ರದ ಆರು ಹಾಡುಗಳಲ್ಲಿ ಆರೂ ಕೂಡ ಈಗಾಗಲೇ ಕೇಳಿರುವ ಹಾಡಿನ ಚರಣ, ಬಿಜಿಎಮ್ ಗಳನ್ನು ನೆನಪಿಸುವಂತೆ ಮಾಡುವ ಕಾರಣ ಎಲ್ಲಿಯೂ ಹೊಸತನದ ಆಕರ್ಷಣೆ ಮೂಡುವುದಿಲ್ಲ. ಚಿತ್ರದಲ್ಲಿ ನಾಯಕನ ಸ್ನೇಹಿತನ ಪಾತ್ರದಲ್ಲಿರುವ ಚಿಕ್ಕಣ್ಣ ತನ್ನ ಜತೆಗೆ ಸಾಧು ಕೋಕಿಲಾ ಇದ್ದರೂ ಅವರನ್ನು ಪಕ್ಕಕ್ಕೆ ಸರಿಸುವ ಮಟ್ಟಿಗೆ ನಗಿಸುತ್ತಾರೆ. ಆದರೆ ಹೆಚ್ಚಿನ ಹಾಸ್ಯ ಸಂಭಾಷಣೆಗಳೆಲ್ಲವೂ ದ್ವಂದ್ವಾರ್ಥವನ್ನೇ ಮೂಡಿಸುವಂತಿರುವುದು ದುರಂತ.

ಖಳನಾಗಿ ಮುಖೇಶ್ ತಿವಾರಿ, ಪೊಲೀಸ್ ಆಗಿ ರವಿಶಂಕರ್ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿದ್ದರೂ, ಸಂಭಾಷಣೆಯ ಮೂಲಕ ಹಿರಿಯ ನಟಿ ರಾಧಾ ರಾಮಚಂದ್ರ ಗಮನ ಸೆಳೆಯುತ್ತಾರೆ. ‘ರಾಜ ವನವಾಸದಲ್ಲಿದ್ದಾನೆ ಎಂದೊಡನೆ ಶಿಖಂಡಿಗಳೆಲ್ಲ ರಾಜನಾಗಲು ನೋಡುತ್ತಾರೆ’ ಎಂಬ ಅವರ ಸಂಭಾಷಣೆಗೆ ಅಭಿಮಾನಿಗಳು ಸಿಳ್ಳೆ ಹೊಡೆಯುತ್ತಾರೆ. ಎಂದಿನಂತೆ ಹರ್ಷ ನಿರ್ದೇಶನದ ಚಿತ್ರಗಳಲ್ಲಿರುವ ದೊಡ್ಡ ತಾರಾಗಣ, ಕಲರ್ ಫುಲ್ ಕಾಸ್ಟ್ಯೂಮ್ಸ್‌ನಹಾಡುಗಳು ಇಲ್ಲಿಯೂ ಇವೆ. ಪುನೀತ್ ಚಿತ್ರದಲ್ಲಿ ನಿರೀಕ್ಷಿಸಬಹುದಾದ ಫೈಟ್ ಮತ್ತು ಡ್ಯಾನ್ಸ್‌ಗೆ ಕೊರತೆಯಿಲ್ಲ. ಒಟ್ಟಿನಲ್ಲಿ ಪವರ್ ಸ್ಟಾರ್‌ನ ಕಟ್ಟಾ ಅಭಿಮಾನಿಗಳಿಗೆ ಮಾತ್ರ ಎಂಬಂತೆ ಮೂಡಿ ಬಂದಿರುವ ಚಿತ್ರ ಉಳಿದವರನ್ನು ನಿರಾಶೆಗೊಳಿಸಿದರೆ ವಿಶೇಷವೇನೂ ಇಲ್ಲ.

ತಾರಾಗಣ: ಪುನೀತ್ ರಾಜಕುಮಾರ್,
  ರಶ್ಮಿಕಾ ಮಂದಣ್ಣ
ನಿರ್ದೇಶಕ: ಎ ಹರ್ಷ
ನಿರ್ಮಾಪಕ: ಎಮ್.ಎನ್ ಕುಮಾರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News