ದಿಲ್ಲಿ ದರ್ಬಾರ್

Update: 2017-12-23 18:54 GMT

ಸೋನಿಯಾ ನಂತರ ಪ್ರಿಯಾಂಕವೇ?

ಕಾಂಗ್ರೆಸ್‌ನ ಅಧ್ಯಕ್ಷ ಗಾದಿಯಿಂದ ಕೆಲದಿನಗಳ ಹಿಂದಷ್ಟೇ ಕೆಳಗಿಳಿದಿರುವ ಸೋನಿಯಾ ಗಾಂಧಿ ರಾಜಕೀಯದಿಂದ ನಿವೃತ್ತಿ ಘೋಷಿಸುವ ಬಗ್ಗೆ ಯೋಚಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಈಗಲೇ ಚರ್ಚೆಗಳು ಆರಂಭವಾಗಿವೆ. ಆರಂಭದಲ್ಲಿ ಸೋನಿಯಾ ಗಾಂಧಿಯ ಮನವೊಲಿಸಲು ಪ್ರಯತ್ನಿಸಿದ ಪಕ್ಷದ ಹಿರಿಯ ನಾಯಕರು ಅದರಲ್ಲಿ ವಿಫಲವಾದಾಗ ಈಗ ಭವಿಷ್ಯದ ಸಾಧ್ಯತೆಗಳ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ಆದರೆ ಸೋನಿಯಾರ ಕಟ್ಟರ್ ಅಭಿಮಾನಿಗಳು ಈಗಲೂ ಬೇಸರಪಟ್ಟುಕೊಳ್ಳಬೇಕಾಗಿಲ್ಲ.

ಕಾಂಗ್ರೆಸ್‌ನ ಅಧಿನಾಯಕಿ ರಾಜಕೀಯದಲ್ಲಿ ಉಳಿದಿರುವ ತಮ್ಮ ಸಮಯವನ್ನು ತಮ್ಮ ಲೋಕಸಭಾ ಕ್ಷೇತ್ರವಾದ ರಾಯ್‌ಬರೇಲಿಯ ಅಭಿವೃದ್ಧಿ ಕಾರ್ಯಗಳಲ್ಲಿ ಕಳೆಯಲು ಮುಂದಾಗಿದ್ದಾರೆ. ಹಾಗಾಗಿ ಕನಿಷ್ಠಪಕ್ಷ ಮುಂದಿನ ಲೋಕಸಭಾ ಚುನಾವಣೆವರೆಗಾದರೂ ಆಕೆ ತನ್ನ ಮಗ, ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರನ್ನು ಕೈಹಿಡಿದು ಮುನ್ನಡೆಸಲು ಲಭ್ಯವಿದ್ದಾರೆ. ರಾಹುಲ್ ಗಾಂಧಿ ರಾಯ್‌ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದ್ದು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅಮೇಠಿಯಿಂದ ತಮ್ಮ ರಾಜಕೀಯ ಜೀವನ ಆರಂಭಿಸುವ ಸಾಧ್ಯತೆಯಿದೆ. ಹಾಗಾದರೆ ಮುಂದಿನ ಚುನಾವಣೆಯಲ್ಲಿ ಸ್ಮತಿ ಇರಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆಯೇ ಅಥವಾ ಆ ವೇಳೆಗೆ ಸ್ಮತಿ ಇರಾನಿ ತಮ್ಮ ಕ್ಷೇತ್ರವನ್ನು ಬದಲಿಸಿ ಅಮೇಠಿಯಲ್ಲಿ ರಾಹುಲ್ ಗಾಂಧಿಗೆ ಸೆಡ್ಡು ಹೊಡೆಯಲಿದ್ದಾರೆಯೇ? ಈ ಬಗ್ಗೆಯೂ ಸಾಕಷ್ಟು ಊಹಾಪೋಹಗಳಿವೆ.


ಸ್ಮತಿ ಇರಾನಿಯ ಪ್ರತೀಕಾರ

ಭಾರತೀಯ ಪ್ರೆಸ್ ಟ್ರಸ್ಟ್ (ಪಿಟಿಐ) ಹಲವು ಸಮಯದಿಂದ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮತಿ ಇರಾನಿಯವರ ಕೋಪಕ್ಕೆ ತುತ್ತಾಗಿದೆ. ದೇಶದ ಎಲ್ಲಾ ಮಾಧ್ಯಮಗಳು ಸರಕಾರ ಕೈಯಡಿಯಲ್ಲಿರಬೇಕು ಎಂದು ಬಯಸುವ ಇರಾನಿಗೆ ವೃತ್ತಿಪರ ವ್ಯವಸ್ಥೆಯ ಅಡಿಯಲ್ಲಿ ಸ್ವತಂತ್ರವಾಗಿ ಸುದ್ದಿಯನ್ನು ಸಂಗ್ರಹಿಸುವ ಮತ್ತು ಪ್ರಸಾರ ಮಾಡುವ ಪಿಟಿಐಯ ಕಾರ್ಯವೈಖರಿ ಅಷ್ಟೇನೂ ಪಥ್ಯವಾಗಿಲ್ಲ.

ಕೆಲವು ಮೂಲಗಳ ಪ್ರಕಾರ ಪಿಟಿಐ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸುವಂತೆ ಇತ್ತೀಚೆಗೆ ಇರಾನಿ ಪ್ರಸಾರ ಭಾರತಿಗೆ ಸೂಚಿಸಿದ್ದರು. ಪಿಟಿಐಯು ದೂರದರ್ಶನಕ್ಕೆ ವಾರ್ಷಿಕ ರೂ. ಆರು ಕೋಟಿ ದರದಲ್ಲಿ ಸುದ್ದಿಗಳನ್ನು ನೀಡುತ್ತಿದೆ. ಹಾಗಾಗಿ ಪ್ರಸಾರ ಭಾರತಿಯು ಪಿಟಿಐ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿತ್ತು. ಆದರೆ ಇತರ ಸುದ್ದಿ ಸಂಸ್ಥೆಗಳು ತಮ್ಮ ಸೇವೆಯನ್ನು ಮುಂದುವರಿಸುವಂತೆ ಸೂಚಿಸಲಾಗಿತ್ತು. ಇದನ್ನು ಸ್ಮತಿ ಇರಾನಿಯವರ ಪ್ರತೀಕಾರದ ನಡೆಯೆಂದೇ ಭಾವಿಸಲಾಗಿದೆ. ಆದರೆ ಆಕೆಗೆ ಪ್ರಧಾನ ಮಂತ್ರಿಯವರ ಬೆಂಬಲವಿರುವುದರಿಂದ ಈ ನಡೆಯ ಬಗ್ಗೆ ಅಸಮಾಧಾನ ಹೊಂದಿರುವ ಮಂತ್ರಿಗಳು ಕೂಡಾ ಏನೂ ಮಾತನಾಡದೆ ವೌನವಹಿಸಿದ್ದಾರೆ.


ಅಮಿತ್‌ಶಾರ ಸ್ವತಂತ್ರ ಅಭ್ಯರ್ಥಿಗಳು

ಎದುರಾಳಿಯ ಮತಗಳನ್ನು ವಿಭಜನೆ ಮಾಡುವ ಯೋಚನೆಯಿಂದ ನಕಲಿ ಅಭ್ಯರ್ಥಿಗಳನ್ನು ಚುನಾವಣೆಗಳಲ್ಲಿ ಕಣಕ್ಕಿಳಿಸುವ ರಾಜಕೀಯ ಷಡ್ಯಂತ್ರವು ಪ್ರತೀ ಚುನಾವಣೆಯ ಜೊತೆಗೆ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಇದು ಪರಾಕಾಷ್ಠೆ ತಲುಪಿತ್ತು. ಅದರಲ್ಲೂ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳು ಈ ಸ್ವತಂತ್ರ ಅಭ್ಯರ್ಥಿಗಳ ಕಾರಣದಿಂದ ಬಹಳ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದರು. ಈ ಬಗ್ಗೆ ಪತ್ರಿಕೆ ಒಂದಕ್ಕೆ ನೀಡಿದ ಹೇಳಿಕೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಯಾರು ಹೇಳಿದ್ದು ಬಿಜೆಪಿ ಮುಸ್ಲಿಂ ವಿರೋಧಿಯೆಂದು? ಗುಜರಾತ್ ಚುನಾವಣೆಯಲ್ಲಿ ಅದು ಅತೀಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದವರು ತಿಳಿಸಿದ್ದರು. ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದ್ದ ಸ್ವತಂತ್ರ ಮುಸ್ಲಿಂ ಅಭ್ಯರ್ಥಿಗಳನ್ನು ಕುರಿತು ಅವರು ಈ ಮಾತು ಹೇಳಿದ್ದರು. ವಿರೋಧ ಪಕ್ಷದ ಮತವನ್ನು ವಿಭಜಿಸುವ ಸಲುವಾಗಿ ಕೇಸರಿ ಪಕ್ಷವು ನಡೆಸಿದ ಪಿತೂರಿ ಇದಾಗಿದೆ ಎಂದು ಅಭಿಪ್ರಾಯಿಸಲಾಗಿದೆ.

ಎಲ್ಲಾ ಸಾಧ್ಯತೆಗಳನ್ನು ನೋಡಿದರೂ ಅಮಿತ್ ಶಾ ಈ ಯೋಜನೆಯಲ್ಲಿ ಸಫಲರಾದರು. ಗುಜರಾತ್ ಚುನಾವಣಾ ಕಣದಲ್ಲಿ ಎಷ್ಟು ಸ್ವತಂತ್ರ ಅಭ್ಯರ್ಥಿಗಳಿದ್ದರೆಂದರೆ ಚುನಾವಣಾ ಆಯೋಗವು ಅವರಿಗೆ ಚಿಹ್ನೆಗಳನ್ನು ನೀಡಲೂ ಕಷ್ಟಪಡಬೇಕಾಯಿತು. ಅಂತಿಮವಾಗಿ ಶಾರ ತಂತ್ರ ಫಲಿಸಿತು ಮತ್ತು ಗಣನೆಗೆ ಬರುವುದು ಅದೊಂದೇ. ಗುಜರಾತ್‌ನಲ್ಲಿ ರಾಹುಲ್ ಗಾಂಧಿ ನಡೆಸಿದ ಅಬ್ಬರದ ಅಭಿಯಾನವು ಪಕ್ಷದ ದಿಲ್ಲಿ ಮುಖ್ಯಕಚೇರಿಯಲ್ಲಿ ಹೊಸ ಹುರುಪು ಮತ್ತು ಚೈತನ್ಯವನ್ನು ಮೂಡಿಸಿದೆ. ಗುಜರಾತ್‌ನಲ್ಲಿ ಯಾವುದೇ ಅಳುಕಿಲ್ಲದೆ ಎದುರಾಳಿಯ ಮೇಲೆ ಮುಗಿಬೀಳುವಂತೆ ರಾಹುಲ್ ಗಾಂಧಿಗೆ ಸ್ಯಾಮ್ ಪಿತ್ರೋಡಾ ಹುರಿದುಂಬಿಸಿದ್ದರು ಎಂದು ಹೇಳಲಾಗುತ್ತಿದೆ. ಗುಜರಾತ್‌ನಲ್ಲಿ ಸಮರ್ಥ ಅಭಿಯಾನವನ್ನು ನಡೆಸಿದರೆ ತಮ್ಮ ಸಾರ್ವಜನಿಕ ವರ್ಚಸ್ಸು ಉತ್ತಮಗೊಳ್ಳುತ್ತದೆ ಎಂದು ರಾಹುಲ್ ಗಾಂಧಿಗೆ ಪಿತ್ರೋಡಾ ಮನವರಿಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ರಾಹುಲ್ ಗಾಂಧಿ ಈ ರೀತಿಯ ತೀವ್ರವಾದ ಅಭಿಯಾನ ನಡೆಸದೆ ಇರುತ್ತಿದ್ದರೆ ಅದರಿಂದ ಅವರಿಗೆ ಮಾತ್ರವಲ್ಲ ಮೂವರು ಉದಯೋನ್ಮುಖ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್‌ಗೂ ಹಿನ್ನಡೆಯಾಗುತ್ತಿತ್ತು. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅನುಭವಿಸಿದ ಕಹಿ ಅನುಭವದ ನಂತರ ಗುಜರಾತ್‌ನಲ್ಲೂ ಕಾಂಗ್ರೆಸ್ ಹೀನಾಯ ಸೋಲುಂಡಿದ್ದರೆ ರಾಹುಲ್ ಜೊತೆ ಮೈತ್ರಿ ಮಾಡಿಕೊಳ್ಳಲು ಹೊಸತಲೆಮಾರಿನ ನಾಯಕರು ಹಿಂದೇಟು ಹಾಕುವ ಸಾಧ್ಯತೆಗಳಿದ್ದವು. ಈಗ ಅದೆಲ್ಲವೂ ಬದಲಾಗಿದೆ. ಗುಜರಾತ್‌ನಲ್ಲಿ ಈಗ ಬಿಜೆಪಿ ಸೋತ ಭಾವನೆ ಹೊಂದಿದ್ದರೆ ರಾಹುಲ್ ಗಾಂಧಿ ಆತ್ಮವಿಶ್ವಾಸ ಹಲವು ಪಟ್ಟು ಹೆಚ್ಚಾಗಿದೆ. ರಾಹುಲ್ ಗಾಂಧಿಗಾಗಿ ಸ್ಯಾಮ್ ಪಿತ್ರೋಡಾ ಇನ್ನಷ್ಟು ಯೋಜನೆಗಳನ್ನು ರೂಪಿಸುತ್ತಿದ್ದು, ಅವೆಲ್ಲವೂ ಯಾವ ರೀತಿ ಉಪಯೋಗವಾಗುತ್ತವೆ ಎಂಬುದನ್ನು ಕಾದು ನೋಡಬೇಕು.


ಮನಮೋಹನ್ ಸಿಂಗ್‌ಗೆ ಬೆಂಬಲ
ಗುಜರಾತ್ ಚುನಾವಣೆಯಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನದ ಜೊತೆ ಸೇರಿಕೊಂಡು ಪಿತೂರಿ ನಡೆಸಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಪ್ರಧಾನಿ ಕ್ಷಮೆ ಕೋರುವಂತೆ ಆಗ್ರಹಿಸಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಮಾಜಿ ಪ್ರಧಾನಿ ಸಿಂಗ್ ಜೊತೆ ನಿಲ್ಲುವಂತೆ ಮತ್ತು ಪ್ರಧಾನಿ ಮೋದಿ ತಮ್ಮ ತಪ್ಪನ್ನು ಒಪ್ಪಿ ಕ್ಷಮೆ ಕೇಳುವವರೆಗೆ ಸುಮ್ಮನಾಗಬಾರದೆಂದು ಪಕ್ಷದ ನಾಯಕರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಸೂಚನೆ ನೀಡಿರಬಹದು. ಪ್ರಧಾನಿಗೆ ಕ್ಷಮೆ ಕೇಳುವುದು ಸಾಧ್ಯವಿಲ್ಲದಿದ್ದರೆ ಗುಜರಾತ್ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ತಾನು ಸುಳ್ಳು ಹೇಳಿರುವುದಾಗಿ ಒಪ್ಪಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಮೋದಿ ಸರಕಾರಕ್ಕೆ ನೀಡಿರುವ ಆಯ್ಕೆ. ಯಾರು ಮೊದಲು ಕಣ್ಣು ಮುಚ್ಚುತ್ತಾರೆ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.

ಸದ್ಯ 2ಜಿ ತೀರ್ಪು ಹೊರಬಿದ್ದಿರುವುದರಿಂದ ಕಾಂಗ್ರೆಸ್ ಮತ್ತಷ್ಟು ಉಲ್ಲಾಸಿತವಾಗಿದ್ದು ಯಾವುದೇ ವಿಷಯದಲ್ಲೂ ಹಿಂದೇಟು ಹಾಕುವ ಸಾಧ್ಯತೆಯಿಲ್ಲ. ಆದರೆ ಒಂದು ಸೌಹಾರ್ದ ಪರಿಹಾರವನ್ನು ಕಂಡುಕೊಳ್ಳುವುದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರ ತಿಳುವಳಿಕೆಗೆ ಬಿಟ್ಟ ವಿಷಯ. ಆದರೆ ಈ ಎಲ್ಲಾ ಗದ್ದಲಗಳ ಮಧ್ಯೆ ಆರೋಪದಿಂದ ತೀವ್ರ ನೋವನುಭವಿಸಿರುವ ಮನಮೋಹನ್ ಸಿಂಗ್ ಬೆಂಬಲಕ್ಕೆ ಬಹುತೇಕ ಎಲ್ಲಾ ಪಕ್ಷಗಳು ನಿಂತಿರುವುದು ಮಾತ್ರ ಸ್ಪಷ್ಟ. ಸದ್ಯ ಚೆಂಡು ಪ್ರಧಾನಿ ಮೋದಿಯವರ ಅಂಗಳದಲ್ಲಿರುವುದು ಕೂಡಾ ಸ್ಪಷ್ಟ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News